
ಛತ್ತೀಸಘಡದ ದುರ್ಗ್ ಜಿಲ್ಲೆಯ ವಿಭಜನೆಯ ಫಲವಾಗಿ ಜನವರಿ 26, 1973 ರಲ್ಲಿ ಜನ್ಮತಾಳಿದ ಹೊಸಜಿಲ್ಲೆಯೇ ರಾಜ್ನಾಂದಗಾವ್. ಇಲ್ಲಿನ ನಿವಾಸಿಗಳ ಧರ್ಮ ಸಹಿಷ್ಣುತೆ, ಶಾಂತ ಚಿತ್ತ ಹಾಗು ಹೊಂದಾಣಿಕಾ ಮನೋಭಾವಗಳು ಈ ಸ್ಥಳಕ್ಕೆ ಸಂಸ್ಕಾರಧಾನಿ ಎಂಬ ಇನ್ನೊಂದು ಹೆಸರನ್ನು ತಂದು ಕೊಟ್ಟಿವೆ.

ಮೂಲ ಹೆಸರು ನಂದ್-ಗ್ರಾಮ್
ನದಿ, ಕೆರೆಗಳಿಂದ ತುಂಬಿರುವ ಈ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗಳೇ ಹೆಚ್ಚು. ದುರ್ಗ್ ಮತ್ತು ಬಸ್ತಾರ್ ಜಿಲ್ಲೆಗಳು ಕ್ರಮವಾಗಿ ಪೂರ್ವ ಮತ್ತು ದಕ್ಷಿಣದ ನೆರೆ ಜಿಲ್ಲೆಗಳಾಗಿದ್ದು, ರಾಜಧಾನಿ ರಾಯ್ಪುರದಿಂದ ರಾಜ್ನಾಂದಗಾವ್, ಕೇವಲ 64 ಕಿ.ಮೀ ದೂರದಲ್ಲಿದೆ. ಪ್ರಾಚೀನ ಭಾರತದಲ್ಲಿ ಹಲವಾರು ರಾಜಮನೆತನಗಳಿಂದ ಆಳಿಸಿ ಕೊಂಡ ರಾಜ್ನಾಂದಗಾವಿನ ಮೂಲ ಹೆಸರು ನಂದ್-ಗ್ರಾಮ್. ಸೋಮವಂಶಿ, ಕಲಚೂರಿ, ಮರಾಠಾ ಸಾಮ್ರಾಜ್ಯಗಳು ಅವುಗಳಲ್ಲಿ ಪ್ರಮುಖವಾದವುಗಳು.

ಸಂಸ್ಕೃತಿ ಹಾಗು ಪದ್ಧತಿ
ಇಲ್ಲಿನ ರಾಜಮಹಲುಗಳು, ಅಂದಿನ ಆಡಳಿತಗಾರರು ಹಾಗು ಅಂದಿನ ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತವೆ. ಈ ಅರಮನೆಗಳು ಅಂದಿನ ಸಂಸ್ಕೃತಿ ಹಾಗು ಪದ್ಧತಿಗಳ ಮೇಲೂ ಬೆಳಕು ಚಲ್ಲುತ್ತವೆ. ರಾಜ್ನಾಂದಗಾವನ್ನು ಆಳಿದ ಬಹುತೇಕರು ಹಿಂದೂಗಳಾಗಿದ್ದು ವೈಷ್ಣವ ಮತ್ತು ಗಂದ್-ರಾಜರಾಗಿದ್ದರು. ಅಲ್ಲದೇ ಬ್ರಿಟೀಷರ ಕಾಲದಲ್ಲಿಯೂ ರಾಜ್ನಂದಗಾವ್ ಪ್ರಿನ್ಸ್ಲಿ ರಾಜ್ಯಗಳ ರಾಜಧಾನಿಯಾಗಿತ್ತು. ಪ್ರಿನ್ಸ್ಲಿ ರಾಜಗಳ ಕೊನೇಯ ಆಡಳಿತಾಧಿಕಾರಿಯು ಇಲ್ಲಿರುವ ತನ್ನ ಅರಮನೆಯನ್ನು ಕಾಲೇಜು ನಡೆಸಲು ನೀಡಿದ್ದನು. ಆ ಕಾಲೇಜಿಗೆ ಅವನ ಹೆಸರನ್ನೇ ಇರಿಸಲಾಗಿದೆ. ಹಿಂದಿ ಹಾಗು ಛತ್ತೀಸ್ ಘಡಿ ಭಾಷೆಗಳು ಸ್ಥಳಿಯರ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುತ್ತವೆ.

ಅದ್ದೂರಿಯಾಗಿ ಆಚರಿಸುವ ಹಬ್ಬಗಳು
ಶೈಕ್ಷಣಿಕ ರಂಗದ್ದಲ್ಲೂ ಹೆಸರು ಮಾಡಿರುವ ರಾಜ್ನಾಂದಗಾವ್ ನಲ್ಲಿ ಅನೇಕ ವಿದ್ಯಾಪೀಠಗಳಿವೆ.ದೀಪಾವಳಿ, ಗಣೇಶ ಚತುರ್ಥಿಗಳು ಇಲ್ಲಿಯ ಪ್ರಮುಖ ಹಬ್ಬಗಳು. ಇವುಗಳನ್ನು ಅತ್ಯಂತ ಉತ್ಸಾಹದಿಂದ ಅದ್ದೂರಿಯಾಗಿ ಆಚರಿಸುವರು. ಈ ಹಬ್ಬಗಳ ಸಂದರ್ಭದಲ್ಲಿ "ಮೊಹರಾ ಮೇಲಾ", "ಗೂಳಿ ಓಡಿಸುವ ಸ್ಪರ್ಧೆ" ಮತ್ತು ಮೀನ ಬಜಾರ್ ಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಸೀತ್ಲಾ ಮಂದಿರ
ರಾಜ್ನಾಂದಗಾವಿನ ಒಳ ಮತ್ತು ಹೊರಗಿರುವ ಪ್ರವಾಸೀತಾಣಗಳು ಗಾಯತ್ರಿ ಮಂದಿರ, ಸೀತ್ಲಾ ಮಂದಿರ, ಬರ್ಫಾನಿ ಆಶ್ರಮ ಗಳಂತಹ ದೇವಾಲಯಗಳು ನಿಜಕ್ಕೂ ನೋಡತಕ್ಕವಾಗಿವೆ. ದೊಂಗ್ರಾಘಾಟಂತೂ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ದೊಂಗಾಘಾಟ್ ನ ಬೆಟ್ಟದ ತುದಿಯ ಮೇಲೆ ನೆಲೆಸಿರುವ ಬಂಲೇಶ್ವರಿ ದೇವಿಯ ದೇವಸ್ಥಾನಕ್ಕೆ ಪ್ರತೀ ವರ್ಷ ಹಲವಾರು ಭಕ್ತರು ಬಂದು ಆಶಿರ್ವಾದ ಪಡೆಯುವರು. ಬೆಟ್ಟದ ತುದಿಯ ಮೇಲಿರುವ ಈ ದೇವಾಲಯವು ಬಡೀ ಬಂಲೇಶ್ವರಿ ದೇವಾಲಯ ಎನ್ನುತ್ತಾರೆ. ಛೋಟಿ ಬಂಲೇಶ್ವರಿ ದೇವಾಲಯವು ಬೆಟ್ಟದ ಕೆಳಭಾಗದಲ್ಲಿದೆ. ದಸರಾ ಮತ್ತು ರಾಮನವಮಿ ಹಬ್ಬಗಳಂದು ರಾಜ್ಯಾದ್ಯಂತ ಅನೇಕ ಭಕ್ತರು ಇಲ್ಲಿಗೆ ಬೇಟಿನೀಡುವರು.

ಸೀತಲಾದೇವಿ ಶಕ್ತಿ ಪೀಠ
ಈ ದೇವಾಲಯದ ಆವರಣದಲ್ಲಿ ಜಾತ್ರೆಗಳನ್ನು ಕೂಡ ಸಂಘಟಿಸಲಾಗುವುದು. ಮಾತಾ ಸೀತಲಾದೇವಿ ಶಕ್ತಿ ಪೀಠವು ಇಲ್ಲಿನ ಇನ್ನೊಂದು ಯಾತ್ರಾಸ್ಥಳ. ಇದು ಸುಮಾರು 2200 ವರ್ಷಗಳಷ್ಟು ಪ್ರಾಚೀನವಾದದ್ದು. ಇದು ರೈಲು ನಿಲ್ದಾಣದಿಂದ ಕೇವಲ 1.5ಕಿ.ಮೀ ದೂರದಲ್ಲಿದೆ.

ತಲುಪುವುದು ಹೇಗೆ?
ರಾಷ್ಟ್ರೀಯ ಹೆದ್ದಾರಿ - 6 ( ಗ್ರೇಟ್ ಈಸ್ಟರ್ನ್ ರೋಡ್ ) ಯು ರಾಜ್ನಾಂದಗಾವ್ ಮಾರ್ಗವಾಗಿ ಹೋಗುತ್ತಿದ್ದು, ಇದು ಅನೇಕ ನಗರ ಹಾಗು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಿದೆ. ರಾಜ್ನಾಂದಗಾವ್ ಆಗ್ನೇಯ ರೈಲ್ವೆಯ ಮುಂಬೈ-ಹೌರಾ ಮಾರ್ಗದಲ್ಲಿ ಬರುತ್ತದೆ. ಸ್ಥಳೀಯ ರೈಲುಗಳು ರಾಜ್ನಾಂದಗಾವ್ ದಿಂದ ದೊಂಗರ್ಗಹ, ನಾಗಪುರ್ ಮತ್ತು ರಾಯಪುರ್ ಗಳಿಗೆ ಸಂಪರ್ಕ ಕಲ್ಪಿಸುತ್ತವೆ ಇಲ್ಲಿಂದ ಮುಂಬೈ, ಕೋಲ್ಕತ್ತ, ದೆಹಲಿಗಳಿಗೆ ಎಕ್ಸಪ್ರೆಸ್ ರೈಲುಗಳು ಲಭ್ಯವಿವೆ. 80 ಕಿ.ಮೀ ದೂರದ ರಾಯಪುರ್ ವಾಯುನೆಲೆಯೇ ರಾಜ್ನಾಂದಗಾವ್ ಗೆ ಹತ್ತಿರದ ವಾಯುನೆಲೆಯಾಗಿದೆ.