Search
  • Follow NativePlanet
Share
» »ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು

ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು

By Vijay

ಭಾರತದ ಆರ್ಥಿಕ ರಾಜಧಾನಿ ಎಂದೆ ಮನ್ನಣೆಗಳಿಸಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಅತಿ ಪ್ರಮುಖ ಜಿಲ್ಲೆಗಳ ಪೈಕಿ ಮಂಚೂಣಿಯಲ್ಲಿರುವ ಜಿಲ್ಲೆ. ಅಷ್ಟೆ ಏಕೆ, ಮಾಹಿತಿ ತಂತ್ರಜ್ಞಾನದ ದೃಷ್ಟಿಯಿಂದಲೂ ಸಹ ಪುಣೆ ದೇಶದ ಪ್ರಮುಖ ನಗರಗಳ ಪೈಕಿ ಒಂದಾಗಿದೆ.

ಪುಣೆಗೆ ಮೊದಲಿದ್ದ ಹೆಸರು ಪುಣ್ಯ ನಗರ ಎಂದು. ಅಂದರೆ ಪುಣ್ಯಗಳ ನಗರ ಎಂದು ಖ್ಯಾತಿ ಪಡೆದಿದ್ದ ಪುಣೆಯಲ್ಲಿ ಸಾಕಷ್ಟು ಧಾರ್ಮಿಕ ಆಕರ್ಷಣೆಗಳಿವೆ ಎಂಬುದು ಸಹಜ ಎಂತೆನಿಸಿಬಿಡುತ್ತದೆ. ಇದು ನಿಜವೂ ಕೂಡ. ಈ ಜಿಲ್ಲೆಯಲ್ಲಿ ಕೆಲವು ಅಪರೂಪದ ಧಾರ್ಮಿಕ ಕ್ಷೇತ್ರಗಳು ನೆಲೆಸಿರುವುದು ಇದಕ್ಕೆ ಉದಾಹರಣೆ. ಪುಣೆ ನಗರದ ಪಾಕ್ಷಿಕ ನೋಟ.

ದೇಶೀಯ ವಿಮಾನು ಟಿಕೇಟು ದರಗಳ ಮೇಲೆ 15% ರಿಯಾಯಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Kristina D.C. Hoeppner ಪುಣೆ ನಗರದ ಹೆಚ್ಚಿನ ಚಿತ್ರಗಳು

ಕರ್ನಾಟಕಕ್ಕೆ ಮೈಸೂರು ಹೇಗೆ ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲ್ಪಡುತ್ತದೊ ಅದೇ ರೀತಿಯಲ್ಲಿ ಪುಣೆಯು ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ಸಂಕೇತದ ಜಿಲ್ಲೆಯಾಗಿದೆ. ಮರಾಠಿ ಸಂಸ್ಕೃತಿಯ ಹಲವು ಆಯಾಮಗಳು, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು ಪುಣೆಯಲ್ಲಿ ಬಹುತೇಕವಾಗಿ ಕಂಡು ಬರುತ್ತವೆ.

ಐತಿಹಾಸಿಕವಾಗಿಯೂ ಅನೇಕ ರಾಜರುಗಳು ಹಾಗೂ ಸಾಮ್ರಾಜ್ಯಗಳನ್ನು ಕಂಡಿರುವ ಪುಣೆ ಜಿಲ್ಲೆಯು ವಾಯವ್ಯಕ್ಕೆ ಠಾಣೆ, ಪಶ್ಚಿಮಕ್ಕೆ ರಾಯಗಡ್, ದಕ್ಷಿಣಕ್ಕೆ ಸತಾರಾ, ಆಗ್ನೇಯಕ್ಕೆ ಸೋಲಾಪುರ ಹಾಗೂ ಉತ್ತರಕ್ಕೆ ಅಹ್ಮದ್ ನಗರ ಜಿಲ್ಲೆಗಳಿಂದ ಸುತ್ತುವರೆದಿದೆ. ಜಿಲ್ಲೆಯ ಭೂಭಾಗವು ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಆವರಿಸಿದ್ದು, ಸಮುದ್ರ ಮಟ್ಟದಿಂದ 1863 ಅಡಿಗಳಷ್ಟು ಎತ್ತರವಿದೆ.

ದೇಶದೆಲ್ಲೆಡೆಯಿಂದ ಪುಣೆ ಜಿಲ್ಲೆಯ ಪುಣೆ ನಗರಕ್ಕೆ ಬಸ್ಸು, ರೈಲು ಹಾಗೂ ವಿಮಾನಗಳಿಂದ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದ್ದು, ಭೇಟಿ ನೀಡಿದಾಗ ಜಿಲ್ಲೆಯ ಧಾರ್ಮಿಕ ಯಾತ್ರಾ ಕ್ಷೇತ್ರಗಳಿಗೆ ಸರಳವಾಗಿ ತೆರಳಬಹುದಾಗಿದೆ. ಹೌದು ಪುಣೆ ಜಿಲ್ಲೆಯು ಕೆಲ ಸುಪ್ರಸಿದ್ಧ ಯಾತ್ರಾ ಕ್ಷೇತ್ರಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಈ ಕೆಳಗೆ ಆ ಪ್ರಸಿದ್ಧ ಕ್ಷೇತ್ರಗಳ ಕುರಿತು ತಿಳಿಯಿರಿ.

ಆಳಂದಿ: ನಮ್ಮ ಕನ್ನಡ ಸಂಸ್ಕೃತಿಯ ಕೂಡಲಸಂಗಮ ಯಾವ ರೀತಿ ಭಕ್ತಿ ಸಂತ ಬಸವಣ್ಣನವರ ಐಕ್ಯ ಸ್ಥಳವಾಗಿ ಇಂದು ಪುಣ್ಯ ಕ್ಷೇತ್ರವಾಗಿ ಕಂಗೊಳಿಸುತ್ತಿದೆಯೊ ಅದೇ ರೀತಿಯಲ್ಲಿ ಮರಾಠಿ ಸಂಸ್ಕೃತಿಯ ಭಕ್ತಿ ಸಂತರಾಗಿದ್ದ ಧ್ಯಾನೇಶ್ವರ ಎಂಬುವರ ಸಮಾಧಿ ಕ್ಷೇತ್ರವಾಗಿ ಪುಣೆ ಜಿಲ್ಲೆಯ ಆಳಂದಿಯು ಇಂದು ಒಂದು ಪುಣ್ಯ ಕ್ಷೇತ್ರವಾಗಿದೆ.

ಚಿತ್ರಕೃಪೆ: Ketaki Pole

ಮಹಾರಾಷ್ಟ್ರ ರಾಜ್ಯದ ಮೂಲೆ ಮೂಲೆಗಳಿಂದಲ್ಲದೆ, ಉತ್ತರ ಕರ್ನಾಟಕದ ಬಹುತೇಕ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಂದ್ರಯಾಣಿ ನದಿ ತಟದಲ್ಲಿ ನೆಲೆಸಿರುವ ಆಳಂದಿ ಶ್ರೀಕ್ಷೇತ್ರವು ಪುಣೆ ನಗರದಿಂದ 25 ಕಿ.ಮೀ ಗಳಷ್ಟು ದೂರದಲ್ಲಿದ್ದು, ಬಸ್ಸುಗಳ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಭೀಮಾಶಂಕರ: ಪುಣೆ ಜಿಲ್ಲೆಯ ಖೇಡ್ ಪಟ್ಟಣದಿಂದ 50 ಕಿ.ಮೀ ದೂರದಲ್ಲಿ ನೆಲೆಸಿರುವ ಭೀಮಾಶಂಕರ ಸ್ಥಳವು ದೇಶದ 12 ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ತಾಣವಾಗಿದೆ. [12 ಪವಿತ್ರ ಜ್ಯೋತಿರ್ಲಿಂಗಗಳು]ಪ್ರತಿ ನಿತ್ಯವು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಈ ತಾಣವು ಶಿವರಾತ್ರಿಯ ಸಂದರ್ಭದಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಪುಣೆ ನಗರದಿಂದ ಇಲ್ಲಿಗೆ ತೆರಳಲು ಬಸ್ಸುಗಳು ಸು;ಅಭವಾಗಿ ದೊರೆಯುತ್ತವೆ.

ಚಿತ್ರಕೃಪೆ: ସୁରଥ କୁମାର ପାଢ଼ୀ

ದೇಹು: ಮಹಾರಾಷ್ಟ್ರದಲ್ಲಿ ಆಗಿ ಹೋದ ಪ್ರಮುಖ ಸಂತರುಗಳ ಪೈಕಿ ಸಂತ ತುಕಾರಾಮ ಸಹ ಒಬ್ಬರು. ಇವರು ವಾಸಿಸಿದ್ದ ಸ್ಥಳವೆ ಇಂದಿನ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ದೇಹು. ಸಂತ ತುಕಾರಾಮರು ತಮ್ಮ ಅಭಂಗಗಳಿಗಾಗಿ ಬಹು ಖ್ಯಾತಿ ಪಡೆದವರು. ಅವರ ಅಭಂಗಗಳನ್ನು ಇಂದಿಗೂ ಸಹ ಇಲ್ಲಿರುವ ಘಟ ದೇವಾಲಯದಲ್ಲಿ ಕೆತ್ತಲಾಗಿದೆ. ವಿಠ್ಠಲ ದೇವರ ಭಕ್ತಾದಿಗಳು ಹಾಗೂ ತುಕಾರಾಮರ ಅನುಯಾಯಿಗಳು ಇಂದಿಗೂ ಸಹ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Shrads1984 ದೇಹುವಿನಲ್ಲಿರುವ ಘಟ ದೇವಾಲಯ.

ಜೇಜುರಿ: ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಖಂಡೋಬಾ ದೇವರಿಗೆ ನಡೆದುಕೊಳ್ಳುವವರು ಕಾಣಸಿಗುತ್ತಾರೆ. ಖಂಡೋಬಾ ಮೂಲವಾಗಿ ಶಿವನ ಅವತಾರವಾಗಿದ್ದು ಮೈಲಾರ ಲಿಂಗನೆಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತಾನೆ. ಖಂಡೋಬನ ದೇವಾಲಯಕ್ಕೆ ಖ್ಯಾತಿ ಪಡೆದಿದೆ, ಪುಣೆ ಜಿಲ್ಲೆಯ ಜೇಜುರಿ ಪಟ್ಟಣ. ಸಾಕಷ್ಟು ಜನ ಭಕ್ತಾದಿಗಳು ಶಿವನ ದರುಶನ ಕೋರಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Anant Rohankar ಖಂಡೋಬನ ದೇವಾಲಯ

ಚಿಂತಾಮಣಿ ದೇವಾಲಯ: ಪುಣೆಯಿಂದ 25 ಕಿ.ಮೀ ದೂರದಲ್ಲಿರುವ ಥೇವೂರ್ ಎಂಬಲ್ಲಿ ಈ ಗಣೇಶನ ದೇವಸ್ಥಾನವಿದೆ. ಇಷ್ಟಾರ್ಥಗಳನ್ನು ಪೂರೈಸುವ ಚಿಂತಾಮಣಿ ಎಂಬ ರತ್ನವನ್ನು ಗಣ ಎಂಬ ಕ್ರೂರ ರಾಜನಿಂದ ಯಾವ ರೀತಿ ಗಣೆಶನು ಹಿಂಪಡೆದ ಹಾಗು ತನ್ನ ಭಕ್ತನಾದ ಋಷಿ ಕಪಿಲನಿಗೆ ಪ್ರದಾನಿಸಿದ ಕುರಿತು ವಿಷಯವನ್ನು ಈ ದೇವಾಲಯ ಹೊಂದಿದೆ. ಈ ಗಣಪ ಅಷ್ಟ ವಿನಾಯಕರಲ್ಲಿ ಒಬ್ಬ.

ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು

ಚಿತ್ರಕೃಪೆ: Borayin Maitreya Larios ಚಿಂತಾಮಣಿ ದೇವಾಲಯ

ಅಷ್ಟ ವಿನಾಯಕರೆಂದರೆ ಯಾರು?ಅಷ್ಟ ವಿನಾಯಕರೆಂದರೆ ಯಾರು?

ಗಿರಿಜಾತ್ಮಜ ದೇವಾಲಯ: ಪುಣೆ ನಗರದಿಂದ 94 ಕಿ.ಮೀ ದೂರವಿರುವ ನಾರಾಯಣಗಾಂವ್ ನಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಲೇನ್ಯಾದ್ರಿ ಎಂಬಲ್ಲಿ ಕಂಡುಬರುವ 18 ಬೌದ್ಧ ಗುಹೆಗಳಲ್ಲಿ ಎಂಟನೆಯ ಗುಹೆಯಲ್ಲಿ ಈ ಗಣಪತಿಯ ದೇವಸ್ಥಾನವನ್ನು ಕಾಣಬಹುದು.

ವಿಘ್ನಹರ ಗಣಪತಿ: ಅಷ್ಟವಿನಾಯಕರಲ್ಲಿ ಒಬ್ಬನಾದ ವಿಘ್ನ ವಿನಾಶಕನ ಈ ದೇವಸ್ಥಾನವಿರುವುದು ಒಜರ್ ಎಂಬ ಪ್ರದೇಶದಲ್ಲಿ. ಇದು ಪುಣೆಯಿಂದ 85 ಕಿ.ಮೀ ದೂರವಿದ್ದು ಪುಣೆ-ನಾಶಿಕ್ ರಸ್ತೆಯಲ್ಲಿರುವ ನಾರಾಯಣಗಾಂವ್ ನ ಉತ್ತರಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ.

ಮಹಾಗಣಪತಿ ದೇವಸ್ಥಾನ: ಅಷ್ಟ ವಿನಾಯಕನ ದೇವಸ್ಥಾನಗಳ ಪೈಕಿ ಒಂದಾದ ಈ ಮಹಾಗಣಪತಿ ದೇವಸ್ಥಾನವು ಮಹಾರಾಷ್ಟ್ರದ ರಂಜನಗಾಂವ್ ಎಂಬಲ್ಲಿ ಸ್ಥಿತವಿದೆ. ಇದು ಪುಣೆಯಿಂದ 50 ಕಿ.ಮೀ ದೂರವಿದ್ದು, ಪುಣೆಯಿಂದ ಕೋರೇಗಾಂವ್ ಗೆ ಹೋಗುವ ಹಾದಿಯಲ್ಲಿ ಶಿಕ್ರಾಪುರ್ ಮೂಲಕ ಇದನ್ನು ತಲುಪಬಹುದು.

ಮೋರೇಶ್ವರ ದೇವಾಲಯ: ಪುಣೆ ಜಿಲ್ಲೆಯ ಮೋರ್ಗಾಂವ್ ನಗರದಲ್ಲಿದೆ ಗಣಪತಿಗೆ ಸಮರ್ಪಿತವಾದ ಮೋರೇಶ್ವರ ದೇವಾಲಯ. ಪುಣೆ ನಗರದಿಂದ 80 ಕಿ.ಮೀ ದೂರದಲ್ಲಿರುವ ಮಯೂರೇಶ್ವರ ಎಂತಲೂ ಕರೆಯಲ್ಪಡುವ ಈ ದೇವಾಲಾಯವು ಅಷ್ಟ ವಿನಾಯಕ ದೇವಾಲಯಗಳ ಪೈಕಿ ಒಂದಾಗಿದೆ.

ನಿಮಗಿಷ್ಟವಾಗಬಹುದಾದ ಲೇಖನ:

ಕ್ರಮಬದ್ಧವಾದ ನವಗೃಹಗಳ ಯಾತ್ರೆಕ್ರಮಬದ್ಧವಾದ ನವಗೃಹಗಳ ಯಾತ್ರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X