
ಪೊಲ್ಲಾಚಿ ಎನ್ನುವುದು ತಮಿಳುನಾಡಿನ ಕೊಯಮತ್ತೂರ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಕೊಯಮತ್ತೂರ್‌ನ ದಕ್ಷಿಣ ಭಾಗದಲ್ಲಿರುವ ಪೊಲ್ಲಾಚಿ, ಜಿಲ್ಲೆಯ ಎರಡನೇ ಅತಿದೊಡ್ಡ ನಗರ. ಪಶ್ಚಿಮ ಘಟ್ಟದ ಸಮೀಪದಲ್ಲಿರುವ ಪೊಲ್ಲಾಚಿ ಕೇವಲ ಹಿತಕರ ವಾತಾವರಣ ಕೊಡುವುದು ಮಾತ್ರವಲ್ಲ, ಮನಮೋಹಕ ಸೌಂದರ್ಯದ ಗಣಿಯೂ ಹೌದು. ಹೆಚ್ಚಿನವರಿಗೆ ಪೊಲ್ಲಾಚಿಯ ಬಗ್ಗೆ ಗೊತ್ತಿರಲಿಕ್ಕಿಲ್ಲ. ನೀವು ಕೊಯಮತ್ತೂರಿಗೆ ಯಾವತ್ತಾದರೂ ಭೇಟಿ ನೀಡಿದಾಗ ಈ ಸೌಂದರ್ಯದ ಗಣಿಯನ್ನು ನೋಡುವುದನ್ನು ಮರೆಯದಿರಿ.

ಪೊರುಲ್ ಆಚಿ
ಪೊಲ್ಲಾಚಿಯ ಹಳೆಯ ಹೆಸರು ಪೊರುಲ್ ಆಚಿ ಎಂದಾಗಿತ್ತು. ಇದರರ್ಥ ನೈಸರ್ಗಿಕ ಸಂಪತ್ತು ಮತ್ತು ಉನ್ನತಿಯ ಆಗರ ಎಂಬುದು. ಮೂರನೇ ಕೊಳೋತ್ತುಂಗ ಚೋಳನ ಕಾಲದಲ್ಲಿ ಈ ಪಟ್ಟಣಕ್ಕೆ ಮುದಿ ಕೊಂಡ ಚೋಳ ನಲ್ಲೂರ್ ಎಂಬ ಹೆಸರೂ ಇತ್ತು. ಇಲ್ಲಿರುವ ಸುಬ್ರಮಣ್ಯಾರ್ ದೇವಾಲಯವು ಸುಮಾರು 8 ಶತಮಾನಗಳಷ್ಟು ಹಳೆಯದು. ಐತಿಹಾಸಿಕವಾಗಿ ಈ ಹಿಂದೆ ಈ ದೇವಸ್ಥಾನವು ಶಿವನ ದೇವಸ್ಥಾನವಾಗಿದ್ದಿರಬೇಕು ಎಂದು ಹೇಳಲಾಗುತ್ತದೆ.

ಪೊರುಲ್ ಆಚಿ
ಇತಿಹಾಸ ಪ್ರಸಿದ್ದಿ ಪಡೆದುಕೊಂಡ ಪೊಲ್ಲಾಚಿ ಮಾರುಕಟ್ಟೆಗೆ ಪೊಲ್ಲಾಚಿ ಸಂದೈ ಎಂಬ ಹೆಸರೂ ಇತ್ತು. ಪೊಲ್ಲಾಚಿ ಮಾರುಕಟ್ಟೆಯು ಬೆಲ್ಲ, ಜಾನುವಾರು ಹಾಗೂ ತರಕಾರಿ ಮಾರಾಟಕ್ಕೆ ಪ್ರಸಿದ್ಧಿ ಹೊಂದಿತ್ತು. ಸಿನಿಮಾ ಮಂದಿಗೂ ಪೊಲ್ಲಾಚಿ ಪ್ರಿಯವಾದ ಸ್ಥಳವಾಗಿದ್ದು ಹಲವಾರು ಸಿನಿಮಾ ಚಿತ್ರೀಕರಣ ಹಿಂದಿನ ಕೆಲವು ವರ್ಷಗಳಲ್ಲಿ ಇಲ್ಲಿ ನಡೆದಿದೆ.

ಪೊಲ್ಲಾಚಿ ಅಯ್ಯಪ್ಪನ್ ದೇವಸ್ಥಾನ
ಪೊಲ್ಲಾಚಿ ಅಯ್ಯಪ್ಪನ್ ದೇವಸ್ಥಾನವನ್ನು 1970ರಲ್ಲಿ ಕಟ್ಟಲಾಗಿದ್ದು, ಇದು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹೋಲಿಕೆ ಹೊಂದಿದೆ. ಇಲ್ಲಿನ ಮುಖ್ಯ ದೇವರು ಅಯ್ಯಪ್ಪ ಸ್ವಾಮಿಯಾಗಿದ್ದು, ಇನ್ನಿತರ ದೇವರ ವಿಗ್ರಹಗಳನ್ನೂ ಇಲ್ಲಿ ಕಾಣಬಹುದು. ದಿನನಿತ್ಯದ ಪೂಜೆ ಪುನಸ್ಕಾರ ಸಲ್ಲಿಸಲು ಇಲ್ಲಿಗೆ ಹಲವಾರು ಭಕ್ತರು ಬರುತ್ತಾರೆ.

ಸುಬ್ರಮಣ್ಯ ಸ್ವಾಮಿ ದೇವಸ್ಥಾನ
ಸುಮಾರು 700 ವರ್ಷಗಳಷ್ಟು ಹಿಂದೆ ಕೊಂಗ ಚೋಳರು ಶಿವನಿಗೆ ಅರ್ಪಿತವಾದ ಸುಬ್ರಮಣ್ಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದರು. ದೇವಸ್ಥಾನಕ್ಕೆ ತಿರುವಹಾತೇಶ್ವರಮುದಾಯರ್ ದೇವಸ್ಥಾನ ಎಂದು ಹೆಸರಿಸಲಾಗಿತ್ತು. ಪುರಾತನ ವಾಸ್ತಶಿಲ್ಪ ಶೈಲಿಯಲ್ಲಿ ಆಸಕ್ತಿ ಉಳ್ಳವರಿಗೆ ಇದು ಭೇಟಿ ನೀಡಲು ಸೂಕ್ತವಾದ ಸ್ಥಳವಾಗಿದೆ. ಇಂದು ಈ ದೇವಸ್ಥಾನ ಸುಬ್ರಮಣ್ಯ ಕೋವಿಲ್ ಎಂದು ಪ್ರಸಿದ್ದಿ ಪಡೆದುಕೊಂಡಿದೆ. ಈ ದೇವಸ್ಥಾನದಲ್ಲಿ ಸುಬ್ರಮಣ್ಯ ದೇವರಿಗೆ ಪೂಜೆ ಸಲ್ಲುತ್ತದೆ.

ಇನ್ನಿತರ ದೇವಸ್ಥಾನಗಳು
ಇಲ್ಲಿನ ಇನ್ನಿತರ ದೇವಸ್ಥಾನಗಳೆಂದರೆ ರಾಮಲಿಂಗ ಸೌದೇಶ್ವರಿ ಅಮ್ಮನ ದೇವಸ್ಥಾನ, ಮಾಸನಿ ಅಮ್ಮನ ತಿರುಕೊಯಲ್, ಅಲಗುನಾಚಿ ಅಮ್ಮನ್ ದೇವಸ್ಥಾನ, ತಿರುಮೂರ್ತಿ ದೇವಸ್ಥಾನ, ಸುಲಕ್ಕಲ್ ಮಾರಿಯಮ್ಮನ್ ತಿರುಕೊಯ್ಲ್, ಶ್ರೀ ವೇಲಾಯುಧ ಸ್ವಾಮಿ ತಿರುಕೊಯ್ಲ್, ಎಚಾನರಿ ವಿನಯಾಗರ್ ತಿರುಕೊಯಿಲ್, ಅಂಬಾರಪಾಳ್ಯಮ್ ದರ್ಗಾ ಮತ್ತು ಅರುಳ್ಮಿಗು ಪ್ರಸಂದ ವಿನಯಾಗರ್ ದೇವಸ್ಥಾನಗಳು ಪ್ರಸಿದ್ದವಾದವು.

ತಿರುಮೂರ್ತಿ ಬೆಟ್ಟ
ತಿರುಮೂರ್ತಿ ಆಣೆಕಟ್ಟಿಗೆ ತಾಗಿಕೊಂಡೇ ತಿರುಮೂರ್ತಿ ಬೆಟ್ಟವಿದ್ದು ಅಲ್ಲಿಯೇ ತಿರುಮೂರ್ತಿ ದೇವಸ್ಥಾನವಿದೆ. ಶ್ರೀ ಅಮರಲಿಂಗೇಶ್ವರ ದೇವಸ್ಥಾನ ಮತ್ತು ತಿರುಮೂರ್ತಿ ಜಲಪಾತಗಳು ಈ ಬೆಟ್ಟ ಪ್ರದೇಶದಲ್ಲಿ ಕಾಣಬಹುದು. ಪುರಾನದ ಪ್ರಕಾರ ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾ ದೇವಿ ಈ ಬೆಟ್ಟದಲ್ಲಿ ವಾಸಿಸಿದ್ದರು ಮತ್ತು ಅವರ ಭಕ್ತಿಯನ್ನು ಪರೀಕ್ಷಿಸಲೊಮ್ಮೆ ಸ್ವತಃ ತ್ರಿಮೂರ್ತಿಗಳೇ ಇಲ್ಲಿಗೆ ಇಳಿದು ಬಂದಿದ್ದರು. ಪರೀಕ್ಷಾರ್ಥವಾಗಿ ತ್ರಿಮೂರ್ತಿಗಳು ಅನುಸೂಯಾ ದೇವಿಯನ್ನು ಕುರಿತು ನಗ್ನವಾಗಿ ತಮ್ಮನ್ನು ಪೂಜಿಸಲು ಹೇಳಿದರು. ಅದಕ್ಕೆ ಒಪ್ಪಿಕೊಂಡ ಅನುಸೂಯಾ ದೇವಿಯು ತನ್ನ ಭಕ್ತಿಯ ಶಕ್ತಿಯಿಂದ ತ್ರಿಮೂರ್ತಿಗಳನ್ನು ಮಗುವಿನ ರೂಪವಾಗಿಸಿ ಪೂಜಿಸುತ್ತಾಳೆ. ಇದರಿಂದ ಸಂತುಷ್ಟಗೊಂಡ ದೇವತೆಗಳು ವರ ನೀಡಿ ತೆರಳುತ್ತಾರೆ. ತದನಂತರ ಈ ಬೆಟ್ಟಕ್ಕೆ ತ್ರಿಮೂರ್ತಿ ಎಂಬ ಹೆಸರು ಬಂದಿತು.

ಅಳಿಯರ್ ಡ್ಯಾಂ
ಆಳಿಯಾರ್ ಡ್ಯಾಂ ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿದೆ. ಆಳಿಯಾರ್ ನದಿಗೆ ಅಡ್ಡಲಾಗಿ 1959 ರಿಂದ 1969 ನಡುವಿನಲ್ಲಿ ನೀರಾವರಿ ಉದ್ದೇಶದಿಂದ ಈ ಡ್ಯಾಂ ಅನ್ನು ನಿರ್ಮಿಸಲಾಯಿತು. ಆಣೆಕಟ್ಟು 81ಮೀಟರ್ ಎತ್ತರವಿದ್ದು, ತಾಂತ್ರಿಕತೆಯ ದೃಷ್ಟಿಯಿಂದ ಉತ್ಕೃಷ್ಟ ಉದಾಹರಣೆಯಾಗಿದೆ. ಇಂದು ಇದೊಂದು ಸಂತೋಷದಿಂದ ಸಮಯ ಕಳೆಯಬಹುದಾದ ಒಂದು ಉತ್ತಮ ಪಿಕ್ನಿಕ್ ತಾಣವೂ ಹೌದು. ಇಲ್ಲಿನ ಇತರ ಪ್ರಸಿದ್ದವಾದ ಕೆಲವು ಡ್ಯಾಂಗಳೆಂದರೆ ನಿರಾರ್ ಡ್ಯಾಂ,ಮೀಂಕಾರಾ ಡ್ಯಾಂ, ಶೋಲಯರ್ ಡ್ಯಾಂ ಮತ್ತು ಪೆರುವರಿ ಪಳ್ಳಂ ಡ್ಯಾಂ.

ತಲುಪುವುದು ಹೇಗೆ?
ಪೊಲ್ಲಾಚಿ ರಾಷ್ಟ್ರೀಯ ಹೆದ್ದಾರಿ 209, ರಾಜ್ಯ ಹೆದ್ದಾರಿ 19, SH 78 ಮತ್ತು SH 78A ಯಿಂದ ಸಂಪರ್ಕ ಹೊಂದಿದೆ. ಕೇಂದ್ರೀಯ ಬಸ್ ನಿಲ್ದಾಣವು ಸರ್ಕಾರಿ-ಚಾಲಿತ ಟಿಎನ್ಎಸ್‌ಟಿಸಿ ಮತ್ತು ಖಾಸಗಿ ನಿರ್ವಾಹಕರು ಬಳಸುವ ಬಸ್ ಸಾರಿಗೆಗೆ ನೆರವು ನೀಡುತ್ತದೆ. ತಮಿಳುನಾಡು ರಾಜ್ಯ ಎಕ್ಸ್ಪ್ರೆಸ್ ಸಾರಿಗೆ ನಿಗಮ ದೀರ್ಘ ಬಸ್‌ಗಳನ್ನು ನಿರ್ವಹಿಸುತ್ತದೆ. ಪೊಲ್ಲಾಚಿ ರೈಲ್ವೆ ಜಂಕ್ಷನ್ ಪಶ್ಚಿಮಕ್ಕೆ ಪಾಲಕ್ಕಾಡ್, ಉತ್ತರಕ್ಕೆ ಕೊಯಂಬತ್ತೂರ್ ಮತ್ತು ಪೂರ್ವಕ್ಕೆ ದಿಂಡುಕ್ಕಲ್ ಅನ್ನು ಸಂಪರ್ಕಿಸುತ್ತದೆ. ಕೊಯಮತ್ತೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪೊಲ್ಲಾಚಿಯಿಂದ 56 ಕಿ.ಮೀ ದೂರದಲ್ಲಿದೆ.