
ಬೆಂಗಳೂರು ಆವೃತ್ತಿಯಲ್ಲಿ ನೋಡಲು ಅನೇಕ ಸ್ಥಳಗಳಿವೆ. ಕೆಲವರಿಗೆ ಪಾರ್ಕ್‍ಗಳಂತಹ ಸ್ಥಳ ಇಷ್ಟವಾದರೆ, ಇನ್ನು ಕೆಲವರಿಗೆ ದೇಗುಲಕ್ಕೆ ಹೋಗುವುದು ಖುಷಿ ಕೊಡುತ್ತದೆ. ಒಂದೇ ಮನೆಯಲ್ಲಿ ಇರುವವರಿಗೆ ಈ ರೀತಿ ಭಿನ್ನ ಅಭಿರುಚಿಯಿದ್ದರೆ ಪ್ರವಾಸ ಸ್ವಲ್ಪ ಕಷ್ಟವಾಗುತ್ತದೆ. ಅಂತಹವರು ಓಂಕಾರೇಶ್ವರ ಗುಡ್ಡಕ್ಕೆ ಬರಬಹುದು. ರಾಜ ರಾಜೇಶ್ವರಿ ನಗರದ ಆವೃತ್ತಿಯಲ್ಲಿ ಬರುವ ಈ ಗುಡ್ಡ ಬಹಳ ಎತ್ತರದಲ್ಲಿದೆ. ದೇವರ ದರ್ಶನ ಹಾಗೂ ಚಾರಣ ಎರಡೂ ಈಡೇರುವುದರಿಂದ ಒಂದು ದಿನದ ಪ್ರವಾಸವನ್ನು ಚಿಂತೆ ಇಲ್ಲದೆ ಕಳೆಯಬಹುದು. ಬುಲ್ ಟೆಂಪಲ್, ಬೆಂಗಳೂರು

ಇಲ್ಲಿರುವ ದೇಗುಲ
ಶ್ರೀ ಶಿವಪುರಿ ಮಹಾಸ್ವಾಮೀಜಿ 1992ರಲ್ಲಿ ಓಂಕಾರಾಶ್ರಮದ ಸಂಸ್ಥಾನವನ್ನು ಸ್ಥಾಪಿಸಿದರು. ಇಲ್ಲಿ ಗಣಪತಿ, ವನದುರ್ಗ, ದ್ವಾದಶ ಜ್ಯೋತಿರ್ಲಿಂಗ, ಮತ್ಸ ನಾರಾಯಣ, ನಾಗದೇವ, ಮುನೀಶ್ವರ ದೇಗುಲ ಇರುವುದನ್ನು ಕಾಣಬಹುದು. ವೇದಾಗಮನ ಪಾಠ ಶಾಲೆ ಹಾಗೂ ಗೋಶಾಲೆಯಿದೆ.

ಇಲ್ಲಿಯ ಆಕರ್ಷಣೆ
ಇಲ್ಲೊಂದು ಗೋಪುರದ ಗಡಿಯಾರ ಇರುವುದನ್ನು ನೋಡಬಹುದು. ಈ ಗಡಿಯಾರ ಪ್ರತಿ ಒಂದು ಗಂಟೆಗೆ ಶಂಕನಾದವನ್ನು ಮಾಡುತ್ತದೆ. ಇನ್ನೊಂದು ಆಕರ್ಷಣೆ ಎಂದರೆ ಸರ್ವಧರ್ಮ ಸಮನ್ವಯ ಪೀಠ ಇರುವುದು. ಮಧ್ಯದಲ್ಲಿ ಒಂದು ಆಲದಮರ, ಸುತ್ತಲೂ 8 ಸಣ್ಣ ಗುಡಿಗಳಿವೆ. ಇದು ಎಲ್ಲಾ ಧರ್ಮದವರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತದೆ.

ಪರಿಸರದ ಸೌಂದರ್ಯ
ಸಮುದ್ರ ಮಟ್ಟಕ್ಕಿಂತ 2800 ಅಡಿ ಎತ್ತರದಲ್ಲಿರುವುದರಿಂದ, ಇಲ್ಲಿಯ ಪ್ರಕೃತಿ ಸೌಂದರ್ಯ ಬಹಳ ಸುಂದರವಾಗಿ ಕಾಣುವುದು. ಅಲ್ಲದೆ ಗುಡ್ಡದ ಮೇಲೆ ನಿಶ್ಯಬ್ದವಾದ ವಾತಾವರಣ, ಹಕ್ಕಿಗಳ ಕಲರವ ಎಲ್ಲವೂ ಮನವನ್ನು ತಿಳಿಗೊಳಿಸುವವು. ಚಾರಣ ಮಾಡಲು ಇಷ್ಟ ಪಡುವವರು ಮುಂಜಾನೆ ಬೇಗ ಇಲ್ಲಿಗೆ ಬಂದು ಇಬ್ಬನಿಯಲ್ಲಿ ನೆನೆಯುತ್ತ, ಪ್ರಕೃತಿ ಮಡಿಲಲ್ಲಿ ಕಾಲಕಳೆಯಬಹುದು. ಇಲ್ಲಿ ಕಿರುಚುವುದು, ಹಾಗೂ ಎಲ್ಲೆಂದರಲ್ಲಿ ಹೋಗುವಂತಿಲ್ಲ.

ತುರಹಳ್ಳಿ ಕಾಡು
ಹತ್ತಿರದಲ್ಲೇ ತುರಹಳ್ಳಿ ಕಾಡಿದೆ. ಇಲ್ಲಿ ಬೈಕ್ ರೈಡಿಂಗ್ ಮಾಡುವ ಹುಮ್ಮಸ್ಸು ಉಳ್ಳವರು ಹೋಗಬಹುದು. ಚಾರಣದ ಸವಿಯನ್ನು ಸವಿಯಬಹುದು. ಸ್ನೇಹಿತರೊಟ್ಟಿಗೆ ಸಾಕಷ್ಟು ಸಮಯ ಕಳೆಯಲು ಹೇಳಿ ಮಾಡಿಸಿದಂತಹ ಜಾಗ. ಬೆಂಗಳೂರು, ಮೈಸೂರಿನಲ್ಲಿರುವ ಧಾರ್ಮಿಕ ಕ್ಷೇತ್ರಗಳು

ಹತ್ತಿರದ ಆಕರ್ಷಣೆ
ಶೃಂಗಗಿರಿ ಷಣ್ಮುಖ ದೇಗುಲ, ಶ್ರೀಧರ ಗುಡ್ಡ, ಕನ್ನಡ ಚಲನಚಿತ್ರ ನಾಯಕ ನಟರಾಗಿದ್ದ ವಿಷ್ಣುವರ್ಧನ ಅವರ ಸಮಾಧಿಯೂ ಹತ್ತಿರದಲ್ಲೇ ಇದೆ.

ಹೋಗುವುದು ಹೇಗೆ
ಬೆಂಗಳೂರಿನ ಮೈಸೂರು ರಸ್ತೆಯಿಂದ 4-5 ಕಿ.ಮೀ. ದೂರದಲ್ಲಿದೆ. (ಕೆಂಗೇರಿ ಮತ್ತು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಹತ್ತಿರ), ಬಸ್ಸಲ್ಲಿ ಬರುವುದಾದರೆ ಉತ್ತರ ಹಳ್ಳಿ ಅಥವಾ ಕೆಂಗೇರಿ ಬಸ್ಸಿಗೆ ಬಂದರೆ ಈ ದೇವಾಲಯದ ಹತ್ತಿರ ಇಳಿದುಕೊಳ್ಳಬಹುದು.