ದಕ್ಷಿಣ ಭಾರತವೆಂದರೆ ಪ್ರವಾಸಿಗರಿಗೆ ತುಂಬಾ ಇಷ್ಟ. ಏಕೆಂದರೆ ಭಾರತದ ಈ ದಕ್ಷಿಣ ಭಾಗವು ಸುಂದರವಾದ ಪ್ರವಾಸಿ ಸ್ಥಳಗಳು, ದೇವಾಲಯಗಳು, ಚರ್ಚ್‌ಗಳು, ಕೋಟೆಗಳು ಮತ್ತು ಆಕರ್ಷಕ ಕಡಲತೀರಗಳಿಂದಾಗಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ನೋಡಲು ಏನುಂಟು ಏನಿಲ್ಲ, ಸರೋವರಗಳು, ಜಲಪಾತಗಳು, ನದಿಗಳು, ಕಾಡುಗಳು, ಗಿರಿ ಶಿಖರಗಳು, ತೋಟ ಗದ್ದೆಗಳು ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಸಂಗತಿಗಳಿವೆ. ಹಾಗಾದರೆ ಬನ್ನಿ ದಕ್ಷಿಣ ಭಾರತದ ಈ ಸ್ಥಳಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ...
ಕೊಡಗು
ದಟ್ಟವಾದ ಪರ್ವತಗಳಿಂದ ಆವೃತವಾಗಿರುವ ಕೂರ್ಗ್ ಪ್ರಕೃತಿ ಪ್ರಿಯರಿಗೆ ಸ್ವರ್ಗ. ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಹಾಗೂ ಪರಿಮಳಯುಕ್ತ ಮಸಾಲೆ ಮತ್ತು ಕಾಫಿ ತೋಟಗಳಿಗೆ ಇದು ಹೆಸರುವಾಸಿಯಾಗಿದೆ. ಜಲಪಾತಗಳು ಮತ್ತು ಟ್ರೆಕ್ಕಿಂಗ್ ಮಾರ್ಗಗಳಿಂದ ಕೋಟೆಗಳು ಮತ್ತು ದೇವಾಲಯಗಳವರೆಗೆ ಕೂರ್ಗ್‌ನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಇಲ್ಲಿ ಅನೇಕ ಟಿಬೆಟಿಯನ್ ವಸಾಹತುಗಳನ್ನು ಸಹ ಕಾಣಬಹುದು. ಪ್ರವಾಸಿ ತಾಣಗಳ ಜೊತೆಗೆ ಸಂಸ್ಕೃತಿ, ರುಚಿಕರವಾದ ಆಹಾರ ಇತ್ಯಾದಿಗಳನ್ನು ಸಹ ಆನಂದಿಸಬಹುದು. ಅಕ್ಟೋಬರ್ ನಿಂದ ಮಾರ್ಚ್ ನಡುವೆ ಕೂರ್ಗ್ ಗೆ ಭೇಟಿ ನೀಡಲು ಉತ್ತಮ ಸಮಯ. ಅಬ್ಬೆ ಜಲಪಾತ, ಇರುಪ್ಪು ಜಲಪಾತ, ತಡಿಯಂಡಮೋಲ್ ಶಿಖರ, ನಾಮ್‌ಡ್ರೋಲಿಂಗ್ ಮಠ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಹಂಪಿ
ಹಂಪಿ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ವಿಶ್ವ ಪರಂಪರೆಯ ತಾಣವು ಭೇಟಿ ನೀಡುವವರಿಗೆ ತನ್ನ ಅದ್ಭುತವಾದ ಅವಶೇಷಗಳೊಂದಿಗೆ 15 ಮತ್ತು 16 ನೇ ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ವಿರೂಪಾಕ್ಷ ದೇವಾಲಯ, ಮಾತಂಗ ಬೆಟ್ಟ, ಹೇಮಕೂಟ ಬೆಟ್ಟದ ದೇವಾಲಯ, ವಿಜಯ ವಿಠ್ಠಲ ದೇವಾಲಯ, ವಾಸ್ತುಶಿಲ್ಪದ ಅವಶೇಷಗಳು, ಅಚ್ಯುತರಾಯ ದೇವಾಲಯ, ಕಡಲೆಕಾಳು ಗಣೇಶ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಹಂಪಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಫೆಬ್ರವರಿ.
ಮಹಾಬಲಿಪುರಂ ದೇವಸ್ಥಾನ
ಮಹಾಬಲಿಪುರಂ ಒಂದು ಕಾಲದಲ್ಲಿ ಪ್ರಮುಖ ಬಂದರು. ಈಗ ವಿಶ್ವ ಪರಂಪರೆಯ ತಾಣವಾಗಿದೆ. ಮಹಾಬಲಿಪುರಂ ಅನ್ನು 1984 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲಾಯಿತು. ಚೆನ್ನೈ ಸಮೀಪದಲ್ಲಿರುವವರಿಗೆ ದೀರ್ಘ ವಾರಾಂತ್ಯ ಕಳೆಯಲು ಸೂಕ್ತವಾದ ಸ್ಥಳಗಳಲ್ಲಿ ಒಂದಾಗಿದೆ. ದೇವಾಲಯಗಳು, ಪಂಚ ರಥ, ಸ್ಮಾರಕಗಳ ಗುಂಪು, ಕೃಷ್ಣನ ಬಟರ್‌ಬಾಲ್, ತಿರುಕದಲ್ಮಲೈ, ಮಹಾಬಲಿಪುರಂ ಬೀಚ್ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಮಹಾಬಲಿಪುರಂಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ನಡುವೆ.

ಕೊಚ್ಚಿ
ಕೇರಳ ರಾಜ್ಯದಲ್ಲಿ ದ್ವೀಪಗಳ ದೀರ್ಘ ಸರಪಳಿಯನ್ನು ಕಾಣಬಹುದು. ರಾಜ್ಯದ ಪ್ರಮುಖ ನಗರವಾಗಿರುವ ಕೊಚ್ಚಿ ದಕ್ಷಿಣ ಭಾರತದಲ್ಲಿ ಜನಪ್ರಿಯ ತಾಣವಾಗಿದೆ. ಪ್ರವಾಸಿ ತಾಣಗಳು ಮಾತ್ರವಲ್ಲ, ಕೇರಳದ ರುಚಿಕರವಾದ ತಿನಿಸುಗಳನ್ನು ಖಂಡಿತ ಇಲ್ಲಿ ಸವಿಯಬಹುದು. ಕೊಚ್ಚಿ ಫೋರ್ಟ್, ಚೆರೈ ಬೀಚ್, ಮಟ್ಟಂಚೇರಿ ಅರಮನೆ, ಸೇಂಟ್ ಫ್ರಾನ್ಸಿಸ್ ಸಿಎಸ್‌ಐ ಚರ್ಚ್, ಪರದೇಸಿ ಸಿನಗಾಗ್ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಅಕ್ಟೋಬರ್ ನಿಂದ ಫೆಬ್ರವರಿ ನಡುವೆ ನೀವು ಇಲ್ಲಿಗೆ ಭೇಟಿ ನೀಡಬಹುದು.
ಹೈದರಾಬಾದ್
ಹೈದರಾಬಾದ್‌ನಲ್ಲಿ ನಿಜಾಮರ ಶ್ರೀಮಂತ ಇತಿಹಾಸ ಎದ್ದು ಕಾಣುತ್ತದೆ. ಇಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ. ಹೈದರಾಬಾದ್ ಬಿರಿಯಾನಿ ಮತ್ತು ಚಾರ್ಮಿನಾರ್‌ಗೆ ಕೂಡ ಇದು ಹೆಚ್ಚು ಪ್ರಸಿದ್ಧವಾಗಿದೆ. ಗೋಲ್ಕೊಂಡ ಕೋಟೆ, ಸಾಲಾರ್ ಜಂಗ್ ಮ್ಯೂಸಿಯಂ, ಹುಸೇನ್ ಸಾಗರ್ ಸರೋವರ, ಚೌಮಹಲ್ಲಾ ಅರಮನೆ, ರಾಮೋಜಿ ಫಿಲ್ಮ್ ಸಿಟಿ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಅಕ್ಟೋಬರ್ ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ.

ಬೆಂಗಳೂರು
ಲೇಕ್‌ಗಳು, ಉದ್ಯಾನಗಳು, ಐಟಿ ಮತ್ತು ಸ್ಟಾರ್ಟ್‌ಅಪ್‌ಗಳ ನಗರವಾದ ಬೆಂಗಳೂರಿನಲ್ಲಿಯೂ ನೋಡಲು ಸಾಕಷ್ಟು ಸ್ಥಳಗಳಿವೆ. ಹಗಲಿನಲ್ಲಿ ನೀವು ಸುಂದರವಾದ ಅರಮನೆ, ಉದ್ಯಾನವನಗಳು ಮತ್ತು ಶಾಪಿಂಗ್‌ಗೆ ಮಾರುಕಟ್ಟೆಗೆ ಭೇಟಿ ನೀಡಬಹುದು. ಹಾಗೆಯೇ ರಾತ್ರಿ ವೇಳೆ ಬಿಯರ್ ಕೆಫೆಗಳು, ರೆಸ್ಟೋರೆಂಟ್‌ಗಳಿಗೆ ಮೋಜು ಮಾಡಲು ಹೋಗಬಹುದು. ಬೆಂಗಳೂರು ಅರಮನೆ, ಕಬ್ಬನ್ ಪಾರ್ಕ್, ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಅಕ್ಟೋಬರ್ ನಿಂದ ಫೆಬ್ರವರಿ ನಡುವೆ ನೀವು ಇಲ್ಲಿಗೆ ಭೇಟಿ ನೀಡಬಹುದು.
ಕೊಯಮತ್ತೂರು
ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ಕೊಯಮತ್ತೂರು ತನ್ನ ಜವಳಿ ಉದ್ಯಮಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ದಕ್ಷಿಣ ಭಾರತದ ಈ ಶಾಂತ ಗಿರಿಧಾಮವು ಊಟಿ ಮತ್ತು ಕೇರಳಕ್ಕೆ ಹೋಗುವ ದಾರಿಯಲ್ಲಿ ಬರುತ್ತದೆ. ಕೊಯಮತ್ತೂರು ಜನರು ವಿಶ್ರಾಂತಿ ಮತ್ತು ಪ್ರಶಾಂತ ಸ್ಥಳವನ್ನು ಹುಡುಕಿಕೊಂಡು ಬರುವ ಸ್ಥಳವಾಗಿದೆ. ಇಲ್ಲಿ ನೀವು ಕೆಲವು ಜನಪ್ರಿಯ ದೇವಾಲಯಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಬಹುದು. ಮರುಧಮಲೈ, ಧ್ಯಾನಲಿಂಗ, ಸಿರುವಣಿ ಜಲಪಾತಗಳು, ಪೇರೂರ್ ಪಟೇಶ್ವರ ದೇವಸ್ಥಾನ, ಅರುಲ್ಮಿಗು ಈಚನಾರಿ ವಿನಯಗರ್ ದೇವಸ್ಥಾನ ಇತ್ಯಾದಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಮೈಸೂರು
ಮೈಸೂರು ಬಹಳ ಆಕರ್ಷಕ ನಗರವಾಗಿದೆ. ಇದು ಭವ್ಯವಾದ ಸ್ಮಾರಕಗಳು ಮತ್ತು ಪ್ರಾಚೀನ ಕಟ್ಟಡಗಳಿಂದ ತುಂಬಿದೆ. ಮೈಸೂರು ಅರಮನೆಯನ್ನು ಭಾರತದ ಎರಡನೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ. ಮೈಸೂರಿನ ಶ್ರೀಮಂತ ಸಂಪ್ರದಾಯಗಳು ಮತ್ತು ಮಾರುಕಟ್ಟೆಗಳು ಭಾರತ ಮತ್ತು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮೈಸೂರು ಅರಮನೆ, ಮೈಸೂರು ಮೃಗಾಲಯ, ಕಿಷ್ಕಿಂಧಾ ಮೂಲಿಕಾ ಬೋನ್ಸಾಯ್ ಗಾರ್ಡನ್, ವೇಣುಗೋಪಾಲ ಸ್ವಾಮಿ ದೇವಸ್ಥಾನ, ಜಗನ್ಮೋಹನ ಅರಮನೆ ಮುಂತಾದವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಜುಲೈನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ.


Click it and Unblock the Notifications


















