Search
  • Follow NativePlanet
Share
» »Pitru Paksha 2022 : ಪಿತೃ ಪಕ್ಷದ ಸಲುವಾಗಿ ಭಾರತದಲ್ಲಿ ಪಿಂಡಪ್ರಧಾನಕ್ಕೆ ಶ್ರೇಷ್ಟವಾಗಿರುವ ಸ್ಥಳಗಳು

Pitru Paksha 2022 : ಪಿತೃ ಪಕ್ಷದ ಸಲುವಾಗಿ ಭಾರತದಲ್ಲಿ ಪಿಂಡಪ್ರಧಾನಕ್ಕೆ ಶ್ರೇಷ್ಟವಾಗಿರುವ ಸ್ಥಳಗಳು

ಭಾರತದ ಈ ಸ್ಥಳಗಳಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿದರೆ ಶ್ರೇಷ್ಠ!

ಹಿಂದೂ ಸಂಸ್ಕೃತಿಯಲ್ಲಿ ಸಾವು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಅತ್ಯಂತ ಪ್ರಸಿದ್ಧವಾದ ಆಚರಣೆಯ ಬಗೆಗಿನ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.

ಪಿತೃ ಪಕ್ಷವೆಂದರೇನು?

ಜನರು ತಮ್ಮ ಜಾತಿ, ಲಿಂಗ, ಅಥವಾ ಧರ್ಮನ್ನು ಲೆಕ್ಕಿಸದೆ ಅರ್ಥ ಮಾಡಿಕೊಳ್ಳುವ ಪ್ರಮುಖ ವಿಷಯವೆಂದರೆ ಅದು ಜೀವನದ ಮಹತ್ವವೆಂದರೆ ತಪ್ಪಾಗಲಾರದು! ಅಷ್ಟೇ ಅಲ್ಲದೆ ಈ ಜೀವ ಜಗತ್ತಿನಲ್ಲಿ ಪ್ರತೀ ಜೀವಂತ ಆತ್ಮವನ್ನು ಒಗ್ಗೂಡಿಸುವ ಒಂದು ಸಾಮಾನ್ಯ ಎಳೆ ಎಂದು ಇದ್ದರೆ ಅದು ಹುಟ್ಟು ಮತ್ತು ಸಾವು ಇದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂತಹ ಸತ್ಯವಾಗಿದೆ. ಅದು ಯಾವುದೇ ಧರ್ಮದವರಲ್ಲಾಗಲಿ ಒಂದೇ ಆಗಿದ್ದು, ಹಿಂದೂ ಧರ್ಮದವರಲ್ಲೂ ಏನೂ ವ್ಯತ್ಯಾಸವಿರುವುದಿಲ್ಲ. ಆದರೆ ಹಿಂದೂ ಧರ್ಮವು ಜೀವನದ ಪಯಣವನ್ನು ಆಚರಿಸುವ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಜೀವನ ಮತ್ತು ಮರಣವನ್ನು ಸಮಾನವಾಗಿ ಪೂಜಿಸಲಾಗುತ್ತದೆ, ಏಕೆಂದರೆ ಲಕ್ಷಾಂತರ ಹಿಂದೂಗಳು ಮರಣವು ಭೌತಿಕ ಪ್ರಪಂಚಕ್ಕೆ ಆತ್ಮವು ವಿದಾಯ ಹೇಳುತ್ತಾ ಆತ್ಮದ ಪ್ರಪಂಚಕ್ಕೆ ಪಯಣ ಮಾಡುವ ಒಂದು ಪಯಣ ಎಂದು ನಂಬುತ್ತಾರೆ. ಇದಕ್ಕಾಗಿ ಹಿಂದುಗಳು ಪೂರ್ವಜರನ್ನು ಪೂಜಿಸಲು ಮತ್ತು ಅವರ ಅಗಲಿದ ಆತ್ಮಗಳಿಗೆ ವಿಮೋಚನೆ ಸಿಗುವುದಕ್ಕೆ ಅನುಕೂಲವಾಗುವಂತೆ "ಪಿಂಡ ದಾನ" ಎನ್ನುವ ಒಂದು ಪ್ರಸಿದ್ದ ಆಚರಣೆಯನ್ನು ಸಾರ್ವತ್ರಿಕವಾಗಿ ಹಿಂದುಗಳಿಂದ ಆಚರಿಸಲ್ಪಡುತ್ತದೆ.

ಅಗಲಿದ ಆತ್ಮದ ಕುಟುಂಬದ ಸದಸ್ಯರು ಅದಕ್ಕೆ ಬೇಕಾದ ವಿಧಿವಿಧಾನಗಳನ್ನು ನಡೆಸದೇ ಇದ್ದ ಪಕ್ಷದಲ್ಲಿ ಅಗಲಿದ ಆತ್ಮವು ನರಕದಲ್ಲಿ ನರಳುತ್ತದೆ ಎಂದು ನಂಬಲಾಗುತ್ತದೆ. ಈ ಪಿಂಡದಾನದ ಮಹತ್ವವೇನೆಂದರೆ ಈ ಆಚರಣೆಯನ್ನು ಮಾಡುವುದರಿಂದ ಆತ್ಮಗಳು ನರಳುತ್ತಿದ್ದ ಪಕ್ಷದಲ್ಲಿ ಈ ಆಚರಣೆಯನ್ನು ಮಾಡಿದಲ್ಲಿ, ಅವುಗಳಿಗೆ ದು:ಖದಿಂದ ಮುಕ್ತಿ ಸಿಗುವಂತೆ ಮಾಡುತ್ತದೆ ಅಥವಾ ಮೋಕ್ಷಪಡೆಯಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಹಿಂದುಗಳಲ್ಲಿದೆ. ಪಿಂಡದಾನ ಪದ್ದತಿಯು ಹಿಂದಿನ ಕಾಲದಿಂದಲೂ ನಡೆಯುತ್ತಾ ಬಂದಿರುವ ಆಚರಣೆಯಾಗಿದ್ದು ಈ ಸಾಂಪ್ರದಾಯಿಕ ಪಿಂಡದಾನ ಆಚರಣೆಯಲ್ಲಿ ಪೂಜೆಗಳು ಮತ್ತು ಮಂತ್ರೋಚ್ಚಾರಣೆಗಳು ಅಥವಾ ಮಂತ್ರಗಳ ಪಠಣವನ್ನು ಒಳಗೊಂಡಿರುತ್ತದೆ, ಹಾಗೂ ರೋಗಿಗಳಿಗೆ ಮತ್ತು ಬಡವರಿಗೆ ದಾನಗಳನ್ನು ನೀಡಲಾಗುತ್ತದೆ.

ಪಿತೃ ಪಕ್ಷ 2022 ರ ಸಮಯದಲ್ಲಿ ಪಿಂಡ್ ದಾನವನ್ನು ನೀಡಲು ನಾವು ನಿಮಗೆ ಕೆಲವು ಪ್ರಮುಖ ಸ್ಥಳಗಳ ಪಟ್ಟಿ ಮಾಡುತ್ತಿದ್ದೇವೆ. ಪಿತೃಪಕ್ಷವು ಸೆಪ್ಟೆಂಬರ್ 11 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 25 ರಂದು ಕೊನೆಗೊಳ್ಳುತ್ತದೆ. ಇದರ ಬಗ್ಗೆ ಮಾಹಿತಿ ಇದೆ ಒಮ್ಮೆ ನೋಡಿ!

ಹರಿದ್ವಾರ

ಹರಿದ್ವಾರ

ಹರಿದ್ವಾರವು ಗಂಗಾನದಿಯ ದಡದಲ್ಲಿ ನೆಲೆಸಿರುವ ಸುಂದರ ನಗರವಾಗಿದ್ದು, ಇದು ರಾತ್ರಿಯಾಗುತ್ತಿದ್ದಂತೆ ಈ ನಗರಕ್ಕೆ ಇನ್ನಷ್ಟು ಮೆರುಗುಬರುತ್ತದೆ. ಇಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ಶುದ್ಧವಾಗುತ್ತವೆ ಮತ್ತು ಅಗಲಿದವರ ದೇಹವನ್ನು ಇಲ್ಲಿ ಸಂಸ್ಕಾರ ಮಾಡಿದರೆ ಅವನ ಆತ್ಮವು ಮೋಕ್ಷವನ್ನು ಪಡೆಯುತ್ತದೆ ಎಂಬ ಜನಪ್ರಿಯ ಕಲ್ಪನೆಯಿದೆ. ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಪಿಂಡದಾನ ಆಚರಣೆಯನ್ನು ಮಾಡಿದಲ್ಲಿ, ಅಗಲಿದ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷ ಸಿಗುತ್ತದೆ ಎಂಬ ಪ್ರತೀತಿ ಇದ್ದು ಇದರಿಂದ ಅಗಲಿದವರ ಕುಟುಂಬಕ್ಕೆ ಒಳ್ಳೆಯದಾಗುವುದೆಂಬ ನಂಬಿಕೆ ಇದೆ. ಹರಿದ್ವಾರವು ಭಾರತದ ಅತ್ಯಂತ ಪ್ರಮುಖ ದೈವಿಕ ಮಹತ್ವವನ್ನು ಹೊಂದಿರುವ ಯಾತ್ರಾ ಸ್ಥಳವಾಗಿದೆ.

ಮಥುರಾ

ಮಥುರಾ

ಭಾರತದ ಭವ್ಯವಾದ ದೇವಾಲಯಗಳಿಂದ ಅಲಂಕರಿಸಲ್ಪಟ್ಟಿರುವ ಮಥುರಾವು ಭಾರತವು ಅದಮ್ಯ ಪವಿತ್ರ ಸ್ಥಳದ ಶ್ರೇಣಿಯನ್ನು ಹೊಂದಿದೆ. ಈ ಪವಿತ್ರ ಪಟ್ಟಣವು ಅತ್ಯಂತ ಹೆಚ್ಚು ಪಿಂಡದಾನ ಮಾಡಲು ಕೂಡ ಭೇಟಿ ನೀಡಲ್ಪಡುವ ಪಟ್ಟಣಗಳಲ್ಲಿ ಒಂದಾಗಿದೆ. ಇಂತಹ ಸಮಾರಂಭಗಳನ್ನು ಯಮುನಾ ನದಿಯ ತೀರದಲ್ಲಿರುವ ವಿಶ್ರಾಂತಿ ತೀರ್ಥ, ಬೋಧಿನಿ ತೀರ್ಥ ಮತ್ತು ವಾಯು ತೀರ್ಥದಲ್ಲಿ ನಡೆಸಲಾಗುತ್ತದೆ. ಮಥುರಾದಲ್ಲಿ ತರ್ಪಣವನ್ನು ಅರ್ಪಿಸುವ ಮೂಲಕ ಜನರು ತಮ್ಮ ಕಳೆದುಹೋದ ಪೂರ್ವಜರನ್ನು ಸಂತೋಷಪಡಿಸುತ್ತಾರೆ.

ಉಜ್ಜೈನಿ

ಉಜ್ಜೈನಿ

ಉಜ್ಜೈನಿಯು ಹೆಸರಾಂತ ದೇವಾಲಯ ಪಟ್ಟಣವಾಗಿದ್ದು, ಇದು ಪಿಂಡದಾನ ಆಚರಣೆಗಳನ್ನು ನಡೆಸುವ ಅತ್ಯಂತ ಸೂಕ್ತ ಸ್ಥಳವಾಗಿದೆ. ಇಲ್ಲಿ ಪಿಂಡ ದಾನವು ಶಿಪ್ರ ನದಿ ದಡದಲ್ಲಿ ನಡೆಸಲಾಗುತ್ತದೆ. ಮತ್ತು ಇಲ್ಲಿ ನದಿಯ ದಡದಲ್ಲಿ ಪಿಂಡವನ್ನು ವಿತರಿಸುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಉಜ್ಜಯಿನಿಯ ಅಸಂಖ್ಯಾತ ಯಾತ್ರಾ ಕೇಂದ್ರಗಳು ಮಾತ್ರವಲ್ಲದೆ, ಭರ್ತ್ರಿಹರಿ ಗುಹೆಗಳು ಮತ್ತು ಕಾಳಿದಾಸ ಅಕಾಡೆಮಿಯಂತಹ ಸ್ಥಳಗಳು ಭೇಟಿ ನೀಡಲು ಯೋಗ್ಯವಾಗಿವೆ. ಉಜ್ಜಯಿನಿಯಿಂದ ಪ್ರವಾಸಿಗರು ಮತ್ತು ಪ್ರಯಾಣಿಕರು ಭೋಪಾಲ್, ಓಂಕಾರೇಶ್ವರ, ಬಸ್ವಾರಾ ಮತ್ತು ಚಿತ್ತೋರಗಢ ಸೇರಿದಂತೆ ಹತ್ತಿರದ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಪ್ರಯಾಗರಾಜ್

ಪ್ರಯಾಗರಾಜ್

ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮದಲ್ಲಿರುವ ಅಲಹಾಬಾದ್ ಎಂದು ಕರೆಯಲ್ಪಡುವ ಪ್ರಯಾಗರಾಜ್‌ನಲ್ಲಿ ಪೂರ್ವಜರ ವಿಧಿಗಳನ್ನು ನಡೆಸುವುದರಿಂದ, ಸಾವಿನ ನಂತರ ಆತ್ಮವು ಅನುಭವಿಸುವ ಎಲ್ಲಾ ದುಃಖಗಳು ದೂರವಾಗುತ್ತವೆ ಎಂಬ ಜನಪ್ರಿಯ ನಂಬಿಕೆ ಇದೆ. ಇಲ್ಲಿ ಪಿಂಡದಾನ ಮಾಡುವುದರಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಇಲ್ಲಿಯ ನೀರಿನಿಂದ ಕೇವಲ ಸ್ನಾನ ಮಾತ್ರ ಮಾಡುವುದರಿಂದ ಪಾಪಗಳು ತೊಳೆದು ಹೋಗುತ್ತವೆ ಮತ್ತು ಆತ್ಮವು ಹುಟ್ಟು ಸಾವಿನ ಚಕ್ರದಲ್ಲಿ ವಿಮೋಚನೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲಹಾಬಾದ್ ಪ್ರವಾಸಿಗರೂ ಸಹ ಭೇಟಿಗೆ ಅತ್ಯಂತ ಉತ್ತಮವಾದ ಸ್ಥಳವಾಗಿದೆ. ನೀವು ಈ ಸ್ಥಳವನ್ನು ಚೆನ್ನಾಗಿ ಅನ್ವೇಷಿಸಿದಾಗ, ಲಕ್ನೋ, ವಾರಣಾಸಿ, ಕಾನ್ಪುರ ಮುಂತಾದ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಹಲವು ಆಯ್ಕೆಗಳಿವೆ.

ಅಯೋಧ್ಯಾ

ಅಯೋಧ್ಯಾ

ರಾಮ ಜನ್ಮಭೂಮಿಯೂ ಸಹ್ ಒಂದು ಯಾತ್ರಾ ಸ್ಥಳವಾಗಿದೆ ಮತ್ತು ಪಿಂಡದಾನ ಸಮಾರಂಭವನ್ನು ನಡೆಸಲು ಅತ್ಯಂತ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ಪವಿತ್ರ ನದಿಯ ಸರಯೂ ದಡದಲ್ಲಿ ಭಟ್ ಕುಂಡ್ ಇದ್ದು, ಅಲ್ಲಿ ಜನರು ಹಿಂದೂ ಬ್ರಾಹ್ಮಣ ಪುರೋಹಿತರ ನೇತೃತ್ವದಲ್ಲಿ ಆಚರಣೆಗಳನ್ನು ಮಾಡುವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಸಂಪ್ರದಾಯದಂತೆ, ಜನರು ತಮ್ಮ ಪೂರ್ವಜರಿಗೆ ಹವನಗಳನ್ನು ಸಹ ಇಲ್ಲಿ ನಡೆಸುತ್ತಾರೆ. ಕುಟುಂಬಗಳು ಮೊದಲು ನದಿಯಲ್ಲಿ ಸ್ನಾನ ಮಾಡಿ ನಂತರ ಧಾರ್ಮಿಕ ಕ್ರಿಯೆಗಳಿಗೆ ಕುಳಿತುಕೊಳ್ಳುತ್ತಾರೆ, ನಂತರ ಅವರು ಬಡವರಿಗೆ ಭಿಕ್ಷೆಯನ್ನು ಅರ್ಪಿಸುತ್ತಾರೆ ಮತ್ತು ನಂತರ ಮನೆಗೆ ಮರಳುತ್ತಾರೆ.ಅಯೋಧ್ಯೆಯಲ್ಲಿ ಪ್ರವಾಸಿಗರು ನೋಡಲು ಸಾಕಷ್ಟು ಸ್ಥಳಗಳಿವೆ, ಅವುಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ ಫೈಜಾಬಾದ್, ಬಿಥೂರ್, ಜೌನ್‌ಪುರ್, ವಾರಣಾಸಿ, ಪ್ರತಾಪ್‌ಗಢ್ ಮತ್ತು ಬಸ್ತಿ ಇವುಗಳಿಗೆ ಭೇಟಿ ನೀಡಲೇಬೇಕು.

ಗಯಾ

ಗಯಾ

ಬಿಹಾರದಲ್ಲಿರುವ ಗಯಾ ಪಿಂಡದಾನ ಮಾಡಲು ಅತ್ಯಂತ ಪ್ರಮುಖ ಸ್ಥಳವಾಗಿದೆ. ಈ ಸಮಾರಂಭವನ್ನು ಸಾಮಾನ್ಯವಾಗಿ ವಿಷ್ಣುವಿನ ಅವತಾರವೆಂದು ಹೇಳಲಾಗುವ ಫಲ್ಗು ನದಿಯ ದಡದಲ್ಲಿ ನಡೆಸಲಾಗುತ್ತದೆ. ಗಯಾ ಆತ್ಮಗಳ ಶುದ್ಧೀಕರಣ ಶಕ್ತಿಗಾಗಿ ಶ್ರಾದ್ಧವನ್ನು ಮಾಡಲು ಸೂಕ್ತವಾದ ಸ್ಥಳವೆಂದು ನಂಬಲಾಗಿದೆ.ಈ ಸ್ಥಳವನ್ನು ರಾಮಾಯಣ ಮತ್ತು ಮಹಾಭಾರತಗಳಲ್ಲಿ ಗಯಾಪುರಿ ಎಂದು ಉಲ್ಲೇಖಿಸಲಾಗಿದೆ. ಪ್ರಸ್ತುತ ಗಯಾದಲ್ಲಿ ಸುಮಾರು 48 ಸ್ಥಳಗಳಲ್ಲಿ ಪಿಂಡ ದಾನವನ್ನು ನಡೆಸಲಾಗುತ್ತದೆ. ಗಯಾದಲ್ಲಿನ ಮಹಾಬೋಧಿ ದೇವಾಲಯ, ಬ್ರಹ್ಮಯೋನಿ ಬೆಟ್ಟ ಮತ್ತು ಇತರ ಸಂಬಂಧಿತ ತಾಣಗಳು ವರ್ಷವಿಡೀ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತವೆ, ನಂತರ ಪ್ರವಾಸಿಗರು ವಾರಣಾಸಿ ಮತ್ತು ಪಾಟ್ನಾಗೆ ತೆರಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X