Search
  • Follow NativePlanet
Share
» »ಮಧ್ಯಪ್ರದೇಶದ ಏಕೈಕ ಗಿರಿಧಾಮ ‘ಪಚ್ಮರ್ಹಿ’; ಇಲ್ಲಿ ಇವೆಲ್ಲಾ ಇರಲಿವೆ

ಮಧ್ಯಪ್ರದೇಶದ ಏಕೈಕ ಗಿರಿಧಾಮ ‘ಪಚ್ಮರ್ಹಿ’; ಇಲ್ಲಿ ಇವೆಲ್ಲಾ ಇರಲಿವೆ

ಜಲಪಾತಗಳು, ಕಣಿವೆಗಳು, ನೈಸರ್ಗಿಕ ಕೊಳಗಳು, ಸುಂದರವಾದ ವಾಸ್ತುಶಿಲ್ಪ, ಗುಹೆ, ದೇವಾಲಯಗಳಿಂದ ಕೂಡಿದ ಜಾಗ 'ಪಚ್ಮರ್ಹಿ'. ವಾಣಿಜ್ಯೀಕರಣಗೊಂಡ ಗಿರಿಧಾಮವಲ್ಲದ ಕಾರಣ, ವಿಶ್ರಾಂತಿ ಪಡೆಯಲು, ಪ್ರಶಾಂತವಾದ ವಾತವರಣ ಬಯಸುವ ಪ್ರವಾಸಿಗರಿಗೆ ಸೂಕ್ತವಾದ ಸ್ಥಳವಾಗಿದೆ. ಮಧ್ಯಪ್ರದೇಶದ ಅತ್ಯಂತ ರಮಣೀಯ ಮತ್ತು ವಿಶಿಷ್ಟವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಚ್ಮರ್ಹಿಯು ವಾರಾಂತ್ಯದ ಪ್ರವಾಸ ಮತ್ತು ಕುಟುಂಬ ವಿಹಾರಕ್ಕೆ ಸೂಕ್ತವಾಗಿದೆ.

ಅಂದಹಾಗೆ ಪಚ್ಮರ್ಹಿ ಮಧ್ಯಪ್ರದೇಶದ ಏಕೈಕ ಗಿರಿಧಾಮವಾಗಿದೆ. ಪಚ್ಮರ್ಹಿ ಅತ್ಯಂತ ಎತ್ತರದ ಸ್ಥಳವಾಗಿದ್ದು, ಇದನ್ನು 'ಸತ್ಪುರ ಕಿ ರಾಣಿ' ಎಂದೂ ಕರೆಯಲಾಗುತ್ತದೆ. 1,067 ಮೀಟರ್ ಎತ್ತರದಲ್ಲಿರುವ ಈ ಸುಂದರವಾದ ಪಟ್ಟಣವು ಯುನೆಸ್ಕೋ ಬಯೋಸ್ಫಿಯರ್ ರಿಸರ್ವ್‌'ನ ಒಂದು ಭಾಗವಾಗಿದೆ.

ಪಚ್ಮರ್ಹಿಯ ಇತಿಹಾಸ

ಪಚ್ಮರ್ಹಿಯ ಇತಿಹಾಸ

ಪಚ್ಮರ್ಹಿಯ ಬಗ್ಗೆ ಒಂದು ಕುತೂಹಲಕಾರಿ ಕಥೆಯೂ ಇದೆ. ಮಹಾಭಾರತದ ಪ್ರಕಾರ, ಪಾಂಡವರು ಕೌರವರೊಂದಿಗೆ ದಾಳದ ಆಟವಾಡಿ ಎಲ್ಲವನ್ನೂ ಕಳೆದುಕೊಂಡು ವನವಾಸಕ್ಕೆ ಹೊರಟರು. ಪಾಂಡವರು 14 ವರ್ಷಗಳ ಕಾಲ ವನವಾಸ ಮಾಡಬೇಕಾಯಿತು.

ಪಾಂಡವರು ಹದಿಮೂರನೆಯ ವರ್ಷದಲ್ಲಿ ಪಚ್ಮರ್ಹಿಯ ಮೂಲಕ ಹಾದುಹೋಗುವಾಗ, ತಮ್ಮ ಆಶ್ರಯಕ್ಕಾಗಿ ಮರಳುಗಲ್ಲಿನ ಬೆಟ್ಟಗಳಲ್ಲಿ ಈ ಗುಹೆಗಳನ್ನು ('ಪಂಚ್' ಎಂದರೆ ಐದು ಮತ್ತು 'ಮರ್ಹಿ' ಎಂದರೆ ಗುಹೆಗಳು) ಉತ್ಖನನ ಮಾಡಿದರು. ಈ ಗುಹೆಗಳು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಪಾಂಡವರು ತಮ್ಮ ವನವಾಸದ ಸಮಯದಲ್ಲಿ ತಂಗಿದ್ದ ಸ್ಥಳವೆಂದು ನಂಬಲಾಗಿದೆ.

ಹೀಗೆ ಪಟ್ಟಿ ಮಾಡಿ ತೆರಳಬಹುದು…

ಹೀಗೆ ಪಟ್ಟಿ ಮಾಡಿ ತೆರಳಬಹುದು…

ಮೊದಲನೆಯ ದಿನ ಪಚ್ಮರ್ಹಿ ತಲುಪಿದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಸಂಜೆ, ನೀವು ಅಡ್ಡಾಡಲು ಮುಖ್ಯ ಮಾರುಕಟ್ಟೆಗೆ ಹೋಗಬಹುದು, ವಿಶೇಷವಾಗಿ ನೀವು ಸ್ಥಳೀಯ ಜೇನುತುಪ್ಪ ಮತ್ತು ಆಯುರ್ವೇದ ಔಷಧಿಗಳನ್ನು ಖರೀದಿಸಬಹುದು.

ಎರಡನೇಯ ದಿನ ನೀವು ಬೀ ಫಾಲ್ಸ್‌'ಗೆ ಹೋಗಿ, ಇದು ಟ್ರೆಕ್ಕಿಂಗ್ ಮಾಡುವವರ ಹಾಟ್‌ ಸ್ಪಾಟ್ ಆಗಿದೆ. ಮೂರನೇಯ ದಿನವನ್ನು ಪಚ್ಮರ್ಹಿಯಲ್ಲಿರುವ ಪಾಂಡವರ ಗುಹೆಗಳಿಗೆ ಭೇಟಿ ನೀಡಲು ಕಾಯ್ದಿರಿಸಬಹುದು.

ಹಬ್ಬಗಳಿಗೂ ಹೆಸರುವಾಸಿ

ಹಬ್ಬಗಳಿಗೂ ಹೆಸರುವಾಸಿ

ಪಚ್ಮರ್ಹಿಯು ಭೋಪಾಲ್'ಗೆ ತೆರಳಿದಾಗ ಭೇಟಿ ನೀಡಬೇಕಾದ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಪಚ್ಮರ್ಹಿಯು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಮಾತ್ರವಲ್ಲದೆ, ಹಬ್ಬಗಳಿಗೂ ಹೆಸರುವಾಸಿಯಾಗಿದೆ. ಪಚ್ಮರ್ಹಿ ಉತ್ಸವವು ಇಲ್ಲಿ ಪ್ರತಿ ವರ್ಷ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಡಿಸೆಂಬರ್ 25 ರಿಂದ ಪ್ರಾರಂಭವಾಗುತ್ತದೆ.

ಇದು 6 ದಿನಗಳ ಉತ್ಸವವಾಗಿದ್ದು, ಈ ಸಂದರ್ಭದಲ್ಲಿ ಕರಕುಶಲ ಮೇಳಗಳನ್ನು ಆಯೋಜಿಸಲಾಗುತ್ತದೆ. ಮಹಾಶಿವರಾತ್ರಿಯನ್ನು ಮಹದೇವ್ ಗುಹೆಗಳಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ದೊಡ್ಡ ಜಾತ್ರೆಯನ್ನು ಆಯೋಜಿಸಲಾಗುತ್ತದೆ.

ಏನೆಲ್ಲಾ ನೋಡಬಹುದು?

ಏನೆಲ್ಲಾ ನೋಡಬಹುದು?

ಪಚ್ಮರ್ಹಿಯಲ್ಲಿ ನೋಡಲು ಅತ್ಯುತ್ತಮ ಸ್ಥಳಗಳಿದ್ದು, ಸೂರ್ಯಾಸ್ತ, ಸೂರ್ಯೋದಯ ಮತ್ತು ರಾತ್ರಿಯ ಸಮಯದಲ್ಲಿ ಈ ಸ್ಥಳದ ಸೌಂದರ್ಯವು ಪದಗಳಿಗೆ ಮೀರಿದ್ದು. ಐರೀನ್ ಪೂಲ್, ಜಲವತರನ್, ಸುಂದರ್ ಕುಂಡ್, ಮಹದೇವ್ ಹಿಲ್ಸ್, ಚೌರಗರ್ ಶಿಖರ ಮತ್ತು ಚೌರಗರ್ ದೇವಾಲಯ, ಛೋಟಾ ಮಹದೇವ್, ಜಟಾ ಶಂಕರ್ ಗುಹೆ, ಕ್ಯಾಥೋಲಿಕ್ ಚರ್ಚ್, ಕ್ರೈಸ್ಟ್ ಚರ್ಚ್, ಧೂಪ್ ಗರ್, ತ್ರಿಧರ ಅಥವಾ ಪಿಕಾಡಿಲಿ ಸರ್ಕಸ್, ವನಶ್ರೀ ವಿಹಾರ, ರೀಚ್ ಗರ್, ಸಂಗಮ, ಸತ್ಪುರ ರಾಷ್ಟ್ರೀಯ ಉದ್ಯಾನವನ, ಬೈಸನ್ ಲಾಡ್ಜ್, ಕೇವ್ ಶೆಲ್ಟರ್ಸ್ ಸೇರಿದಂತೆ ನೀವು ಪಚ್ಮರ್ಹಿಗೆ ಹೋದಾಗ ಈ ಕೆಳಗಿನ ಸ್ಥಳಗಳಿಗೆ ಮರೆಯದೆ ಭೇಟಿ ಕೊಡಿ...

*ಪ್ರಿಯದರ್ಶಿನಿ ಪಾಯಿಂಟ್'ನಿಂದ ನೀವು ಇಡೀ ಪಚ್ಮರಿ ಕಣಿವೆಯನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯಾಸ್ತವನ್ನು ನೋಡಲು ಪ್ರಿಯದರ್ಶಿನಿ ಪಾಯಿಂಟ್ ಸೂಕ್ತ ಸ್ಥಳವಾಗಿದೆ.

*ಬೀ ಫಾಲ್ಸ್ ಪಚ್ಮರ್ಹಿಯಲ್ಲಿರುವ ಸುಂದರವಾದ ಜಲಪಾತವಾಗಿದೆ. ಇದನ್ನು ಜಮುನಾ ಪ್ರಪತ್ ಎಂದೂ ಕರೆಯುತ್ತಾರೆ.

* ಹಂಡಿ ಖೋಹ್ ಪಚ್ಮರ್ಹಿ ಅರಣ್ಯ ಪ್ರದೇಶದ ಒಳಗಿರುವ ಕಣಿವೆ ಅಥವಾ ಕಂದರವಾಗಿದೆ. ಮಡಕೆಯ ಆಕಾರವನ್ನು ಹೊಂದಿರುವುದರಿಂದ ಇದಕ್ಕೆ ಈ ಹಂಡಿ ಖೋಹ್ ಎಂಬ ಹೆಸರು ಬಂದಿದೆ.

*ಅಪ್ಸರಾ ವಿಹಾರ್ ಒಂದು ಸಣ್ಣ ಜಲಪಾತವಾಗಿದ್ದು, ಇದನ್ನು ಫೇರಿ ಪೂಲ್ ಎಂದೂ ಕರೆಯಲಾಗುತ್ತದೆ. ಇದು ಕುಟುಂಬದೊಂದಿಗೆ ಪಿಕ್ನಿಕ್‌ ತೆರಳಲು ಸೂಕ್ತವಾದ ಸ್ಥಳವಾಗಿದೆ. ಈ ಕೊಳವು ಪಾಂಡವರ ಗುಹೆಗಳ ಬಳಿ ಇದೆ.

*ರಜತ್ ಪ್ರಪತ್ ಪಚ್ಮರ್ಹಿಯ ಅತಿದೊಡ್ಡ ಜಲಪಾತವಾಗಿದೆ. ಇದು ಕುದುರೆ ಬಾಲದ ಆಕಾರವನ್ನು ಹೊಂದಿದ್ದು, ಭಾರತದ 30 ನೇ ಅತಿ ಎತ್ತರದ ಜಲಪಾತವಾಗಿದೆ.

* ಪಾಂಡವ ಗುಹೆಗಳು ಪಚ್ಮರ್ಹಿಯಲ್ಲಿರುವ, ಒಂದು ಸಣ್ಣ ಬೆಟ್ಟದಲ್ಲಿರುವ ಐದು ಗುಹೆಗಳ ಗುಂಪಾಗಿದೆ. ಇವು ಸುಂದರವಾಗಿ ಕೆತ್ತಿದ ನೈಸರ್ಗಿಕ ಗುಹೆಗಳಾಗಿವೆ.

ಹೋಗುವುದು ಹೇಗೆ?

ಹೋಗುವುದು ಹೇಗೆ?

ಪಚ್ಮರ್ಹಿಯಿಂದ ಸುಮಾರು 205 ಕಿ.ಮೀ. ದೂರದಲ್ಲಿರುವ ಭೋಪಾಲ್‌'ನ ರಾಜಾ ಭೋಜ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪಿಪಾರಿಯಾ ರೈಲು ನಿಲ್ದಾಣವು ಪಚ್ಮರ್ಹಿಯಿಂದ ಸುಮಾರು 51 ಕಿ.ಮೀ ದೂರದಲ್ಲಿರುವ ಹತ್ತಿರದ ರೈಲು ನಿಲ್ದಾಣವಾಗಿದೆ. ಪಚ್ಮರ್ಹಿಯನ್ನು ಬಸ್ ಮೂಲಕ ಕೂಡ ತಲುಪಬಹುದು ಅಥವಾ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು.

ಪಚ್ಮರ್ಹಿ ಬಸ್ ನಿಲ್ದಾಣದಿಂದ ಮಧ್ಯಪ್ರದೇಶದ ಎಲ್ಲಾ ಪ್ರಮುಖ ನಗರಗಳಿಗೂ ತಲುಪಬಹುದು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಐಷಾರಾಮಿ ಬಸ್ಸುಗಳನ್ನು ಪ್ರಾರಂಭಿಸಿದೆ. ಇವು ಪಚ್ಮರ್ಹಿಯನ್ನು ತಲುಪಲು 8 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಇದೊಂದು ಚಿಕ್ಕ ಪಟ್ಟಣವಾಗಿದ್ದು, ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯುವ ಮೂಲಕ ತೆರಳಬಹುದು.

ಪಚ್ಮರ್ಹಿಗೆ ಭೇಟಿ ನೀಡಲು ಸೂಕ್ತ ಸಮಯ

ಪಚ್ಮರ್ಹಿಗೆ ಭೇಟಿ ನೀಡಲು ಸೂಕ್ತ ಸಮಯ

ಪಚ್ಮರ್ಹಿಯಲ್ಲಿ ಎಲ್ಲಾ ರೀತಿಯ ವಸತಿ ಸೌಕರ್ಯವಿದೆ. ಇದು ಪ್ರವಾಸಿಗರಿಗೆ ತಂಗಲು ಮತ್ತು ಹತ್ತಿರದ ಸ್ಥಳಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ವರ್ಷವಿಡೀ ಪಚ್ಮರ್ಹಿಗೆ ಭೇಟಿ ನೀಡಬಹುದಾದರೂ, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ನಿಂದ ಮಾರ್ಚ್. ಬೇಸಿಗೆಯ ತಿಂಗಳು ಹೊರಾಂಗಣವನ್ನು ಅನ್ವೇಷಿಸಲು ಸೂಕ್ತವಾಗಿದೆ. ಮಳೆಗಾಲದಲ್ಲಿ ಪಚ್ಮರ್ಹಿ ಸೌಂದರ್ಯವು ದ್ವಿಗುಣಗೊಳ್ಳುತ್ತದೆ.

ಆದರೆ ಭಾರೀ ಮಳೆಯು ಕೆಲವೊಮ್ಮೆ ಜಲಪಾತವನ್ನು ವೀಕ್ಷಿಸಲು ಅಡ್ಡಿಪಡಿಸಬಹುದು. ಚಳಿಗಾಲವು ಇಲ್ಲಿ ಅಕ್ಟೋಬರ್‌ನಿಂದ ಆರಂಭಗೊಂಡು ಮಾರ್ಚ್‌ವರೆಗೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮೊಂದಿಗೆ ಸಾಕಷ್ಟು ಉಣ್ಣೆ ಬಟ್ಟೆಯನ್ನು ಒಯ್ಯಿರಿ. ಮಂಜಿನ ವಾತಾವರಣವು ಪಚ್ಮರಿಯ ನೈಸರ್ಗಿಕ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X