ಮಧ್ಯ ಪ್ರದೇಶ ಪ್ರವಾಸೋದ್ಯಮ - ಹಾರ್ಟ್ ಆಫ್ ಇಂಡಿಯಾ

ಮುಖಪುಟ » ಸ್ಥಳಗಳು » » ಮುನ್ನೋಟ

'ಹಾರ್ಟ್ ಆಫ್ ಇಂಡಿಯಾ' ಅಥವಾ ಭಾರತದ ಹೃದಯವೆಂದು ಜನಪ್ರಿಯವಾಗಿ ಕರೆಯಲ್ಪಡುತ್ತದೆ ಎರಡನೇಯ ದೊಡ್ಡ ರಾಜ್ಯವಾದ ಮಧ್ಯ ಪ್ರದೇಶ. ರಾಜ್ಯದ ಭೌಗೋಳಿಕ ಹಿನ್ನಿಲೆ, ಶ್ರೀಮಂತ ಇತಿಹಾಸ, ಪ್ರಾಕೃತಿಕ ಸೌಂದರ್ಯ, ಸಂಸ್ಕೃತಿ-ಸಂಪ್ರದಾಯ, ಜನ ಎಲ್ಲವೂ ಒಟ್ಟಿಗೆ ಸೇರಿ ಇದನ್ನು ಒಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವಲ್ಲಿ ಯಶಸ್ವಿಯಾಗಿವೆ. ರಾಜಧಾನಿಯಾದ ಭೋಪಾಲ್ ನಗರವು ಕೆರೆಗಳ ನಗರ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ.

ಮಧ್ಯ ಪ್ರದೇಶ ಪ್ರವಾಸೋದ್ಯಮವು ಪ್ರವಾಸಿಗರಿಗೆ ಅನ್ವೇಷಿಸಲು ಹಾಗು ಆನಂದಿಸಲು ಎಲ್ಲ ಬಗೆಯ ಪ್ರವಾಸಿ ಸೌಲಭ್ಯಗಳನ್ನು ಒದಗಿಸುತ್ತದೆ. ಬಾಂಧವಗಢ್‍ನ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯನ್ನು ವೀಕ್ಷಿಸುವುದರಿಂದ ಹಿಡಿದು, ಖಜುರಾಹೊವಿನ ವಾಸ್ತು ಶಿಲ್ಪ ಅದ್ಭುತಗಳ ದೇವಾಲಯಗಳವರೆಗೆ ಎಲ್ಲ ಬಗೆಯ ಪ್ರವಾಸಿ ಮೋಜುಗಳನ್ನು ಪ್ರವಾಸಿಗರು ಅನುಭವಿಸಬಹುದು. ಇಲ್ಲಿನ ಒಂದು ಪ್ರವಾಸ ನಿಜವಾದ ಭಾರತ ದರ್ಶನ ಎಂದರೂ ತಪ್ಪಾಗಲಾರದು.  

ಮಧ್ಯ ಪ್ರದೇಶದ ಭೂಲಕ್ಷಣ

ಪ್ರಕೃತಿಯಲ್ಲಿನ ವೈವಿಧ್ಯತೆ ಮತ್ತು ದೇಶದ ಎಲ್ಲ ಭಾಗಗಳಿಂದಲೂ ತಲುಪಲು ಅನುಕೂಲವಾಗುವಂತೆ ದೇಶದ ಮಧ್ಯ ಭಾಗದಲ್ಲಿ ನೆಲೆಸಿರುವುದರಿಂದ ಮಧ್ಯ ಪ್ರದೇಶವು ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿದೆ. ಎತ್ತರದ ಗಿರಿ ಶಿಖರಗಳು, ಹಚ್ಚ ಹಸಿರಿನಿಂದ ಕೂಡಿದ ಕಾಡುಗಳು, ಜುಳು ಜುಳು ಹರಿಯುವ ನದಿ ಕೆರೆಗಳು ಪ್ರಕೃತಿಯ ವಿವಿಧ ಅಂಶಗಳನ್ನು ಸಮತೋಲನದಲ್ಲಿಟ್ಟು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಇಲ್ಲಿನ ಎರಡು ಪ್ರಮುಖ ನದಿಗಳಾದ ನರ್ಮದಾ ಮತ್ತು ತಪ್ತಿ ಒಂದಕ್ಕೊಂದು ಸಮಾನಾಂತರವಾಗಿ ವಿಂಧ್ಯ ಹಾಗು ಸಾತ್ಪುರಾ ಪರ್ವತ ಶ್ರೇಣಿಗಳ ಮಧ್ಯ ಭಾಗದಲ್ಲಿ ಹರಿಯುತ್ತವೆ. ಅಲ್ಲದೆ ರಾಜ್ಯದ ಶ್ರೀಮಂತ ಸಸ್ಯ ಹಾಗು ಪ್ರಾಣಿ ಸಂಪತ್ತು, ಅದ್ಭುತವಾದ ಪ್ರಕೃತಿ ಸೌಂದರ್ಯ, ಮಧ್ಯ ಪ್ರದೇಶ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೆರುಗನ್ನು ನೀಡುತ್ತದೆ.

ಮಧ್ಯ ಪ್ರದೇಶದ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯ

ಐತಿಹಾಸಿಕವಾಗಿ ಮಧ್ಯ ಪ್ರದೇಶವು ವಿವಿಧ ರಾಜವಂಶಗಳಿಂದ ನಿರ್ವಹಿಸಲ್ಪಟ್ಟಿದೆ. ಪ್ರಾಚೀನ ಕಾಲದ ಮೌರ್ಯರು, ರಾಷ್ಟ್ರಕೂಟರು ಮತ್ತು ಗುಪ್ತರಿಂದ ಹಿಡಿದು ಬುಂದೇಲರು, ಹೋಳ್ಕರರು, ಮುಘಲರು ಮತ್ತು ಸಿಂಧಿಯಾ ವಂಶದ ದೊರೆಗಳು ಈ ರೀತಿಯಾಗಿ ಸುಮಾರು ಹದಿನಾಲ್ಕು ವಂಶಗಳ ರಾಜರುಗಳ ಏಳು ಬೀಳುಗಳನ್ನು ಈ ರಾಜ್ಯವು ಕಂಡಿದೆ. ಆದ್ದರಿಂದ ಸ್ವಾಭಾವಿಕವಾಗಿ ಇಲ್ಲಿ ಹಲವು ರೂಪಗಳ ವಾಸ್ತುಶಿಲ್ಪದ ಶೈಲಿಗಳನ್ನು ಕಾಣಬಹುದು.ಶೃಂಗಾರ ರಸವನ್ನು ಪ್ರಚೋದಿಸುವ ಖಜುರಾಹೊವಿನ ಶಿಲ್ಪ ಕಲಾಕೃತಿಗಳು, ಗಾಂಭೀರ್‍ಯತೆಯನ್ನು ಹೊತ್ತು ನಿಂತ ಗ್ವಾಲಿಯರ್ ಕೋಟೆ, ದೇಗುಲಗಳ ಪವಿತ್ರ ನಗರ ಉಜ್ಜಯಿನಿ ಮತ್ತು ಚಿತ್ರಕೂಟ, ಓರಛಾದ ಛತ್ರಿಗಳು(ಸಮಾಧಿ ಸ್ಮಾರಕಗಳು), ಹೀಗೆ ವಿಸ್ಮಯಭರಿತ ಹಲವು ಕಲಾಕೃತಿಗಳನ್ನು ಇಲ್ಲಿನ ವಿವಿಧ ವಾಸ್ತುಶಿಲ್ಪದ ಉದಾಹರಣೆಯಾಗಿ ಕಾಣಬಹುದು.

ಖಜುರಾಹೊ, ಸಾಂಚಿ ಮತ್ತು ಭೀಮ್‍ಬೆಟ್ಕಾ ತಾಣಗಳು ಯುನೆಸ್ಕೊ (UNESCO) ದಿಂದ ವಿಶ್ವ ಪಾರಂಪರಿಕ ತಾಣಗಳೆಂಬ ಮಾನ್ಯತೆಯನ್ನು ಪಡೆದಿವೆ.ಮಧ್ಯ ಪ್ರದೇಶ ಪ್ರವಾಸೋದ್ಯಮದಲ್ಲಿ, ಮಧ್ಯ ಪ್ರದೇಶ ಬುಡಕಟ್ಟು ಸಂಸ್ಕೃತಿಯು ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಗೊಂಡರು ಮತ್ತು ಭಿಲರು ಪ್ರಸ್ತುತ ವಾಸಿಸುತ್ತಿರುವ ಪ್ರಮುಖ ಬುಡಕಟ್ಟು ಜನಾಂಗ. ಬುಡಕಟ್ಟು ಕಲೆ ಹಾಗು ಕೈಮಗ್ಗದ ಉತ್ಪನ್ನಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಜನಪದ ಸಂಗೀತ ಹಾಗು ನೃತ್ಯವು ಕೂಡ ಪ್ರಮುಖ ಪಾತ್ರವಹಿಸುತ್ತದೆ. ವನ್ಯಜೀವನ -

ಮಧ್ಯ ಪ್ರದೇಶದ ಮತ್ತೊಂದು ಪ್ರಮುಖ ಅಂಶ

ವಿಂಧ್ಯ ಹಾಗು ಸಾತ್ಪುರಾ ಪರ್ವತ ಶ್ರೇಣಿಗಳಲ್ಲಿ ಬರುವ ಹಚ್ಚ ಹಸಿರಿನ ಕಾಡುಗಳು ವಿವಿಧ ಬಗೆಯ ಪ್ರಾಣಿ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿರುವ ಅಭಯಾರಣ್ಯ ಹಾಗು ರಾಷ್ಟ್ರೀಯ ಉದ್ಯಾನಗಳು ಮಧ್ಯ ಪ್ರದೇಶ ಪ್ರವಾಸೋದ್ಯಮದ ಪ್ರಮುಖ ಅಂಗಗಳು. ಹೆಸರಿಸಬಹುದಾದ ಪ್ರಮುಖ ರಾಷ್ಟ್ರೀಯ ಉದ್ಯಾನಗಳೆಂದರೆ, ಬಾಂಧವಗಢ್ ರಾಷ್ಟ್ರೀಯ ಉದ್ಯಾನ, ಪೆಂಚ್ ರಾಷ್ಟ್ರೀಯ ಉದ್ಯಾನ, ವನ ವಿಹಾರ್ ರಾಷ್ಟ್ರೀಯ ಉದ್ಯಾನ, ಕನ್ಹಾ ರಾಷ್ಟ್ರೀಯ ಉದ್ಯಾನ, ಸಾತ್ಪುರಾ ರಾಷ್ಟ್ರೀಯ ಉದ್ಯಾನ, ಮಾಧವ್ ರಾಷ್ಟ್ರೀಯ ಉದ್ಯಾನ ಮತ್ತು ಪನ್ನಾ ರಾಷ್ಟ್ರೀಯ ಉದ್ಯಾನ. ವಿವಿಧ ಬಗೆಯ ಪ್ರಾಣಿ, ಪಕ್ಷಿ ಹಾಗು ಸಸ್ಯ ಸಂಕುಲಗಳನ್ನು ಇಲ್ಲಿ ಕಾಣಬಹುದು.

ನೀಮಚ್‍ನಲ್ಲಿರುವ ಗಾಂಧಿ ಸಾಗರ್ ಧಾಮವು ಕೂಡ ಭೇಟಿ ನೀಡಬೇಕಾದ ಪ್ರಖ್ಯಾತ ವನ್ಯಜೀವಿ ಧಾಮವಾಗಿದೆ. ಪ್ರಸ್ತುತ ಮಧ್ಯ ಪ್ರದೇಶವು ಒಂದು ಜೈವಿಕ ಪ್ರವಾಸೋದ್ಯಮ ವಲಯವಾಗಿದೆ.

ಮಧ್ಯ ಪ್ರದೇಶದ ಖಾದ್ಯ, ಉತ್ಸವ ಹಾಗು ಆಚರಣೆಗಳು

ಈ ರಾಜ್ಯದಲ್ಲಿ ತಯಾರಿಸಲಾಗುವ ವಿವಿಧ ಬಗೆಯ ಖಾದ್ಯ ಶೈಲಿಗಳು ಮಧ್ಯ ಪ್ರದೇಶ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ಗಮನಾರ್ಹ ಕೊಡುಗೆಯನ್ನು ನೀಡಿವೆ. ರಾಜಸ್ಥಾನಿ ಹಾಗು ಗುಜರಾತಿ ಶೈಲಿಯ ಖಾದ್ಯಗಳು ಹೆಚ್ಚಾಗಿ ಬಳಸಲ್ಪಡುತ್ತವೆ. ರಾಜಧಾನಿ ಭೋಪಾಲ್ ನಗರವು ಸೀಖ್ ಮತ್ತು ಶಮ್ಮಿ ಕಬಾಬ್‍ಗಳಿಗೆ ಪ್ರಖ್ಯಾತವಾಗಿದೆ. ಸಿಹಿ ತಿನಿಸುಗಳಾದ ಜಿಲೇಬಿ ಹಾಗು ಗೋಡಂಬಿಯ ಬರ್ಫಿಗಳು ಮಧ್ಯ ಪ್ರದೇಶದ ಪ್ರತಿ ಸಿಹಿ ತಿನಿಸು ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಆದರೆ ರಾಜ್ಯದ ವಿವಿಧ ಭಾಗಗಳಲ್ಲಿ ಆಹಾರ ಶೈಲಿಯು ಕೂಡ ಬೇರೆ ಬೇರೆಯಾಗಿದೆ.

ಖಜುರಾಹೊವಿನಲ್ಲಿ ಆಯೋಜಿಸಲಾಗುವ ಖಜುರಾಹೊ ನೃತ್ಯ ಉತ್ಸವ ಹಾಗು ಗ್ವಾಲಿಯರ್‌ನಲ್ಲಿ ನಡೆಸಲಾಗುವ ತಾನ್‍ಸೇನ್ ಸಂಗೀತ ಉತ್ಸವಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಬುಡಕಟ್ಟು ಜನಾಂಗದವರಿಂದ ಆಚರಿಸಲ್ಪಡುವ ಮಾದೈ ಉತ್ಸವ ಹಾಗು ಭಾಗೋರಿಯಾ ಉತ್ಸವಗಳು ಕೂಡ ಇಲ್ಲಿ ಜನಪ್ರಿಯ.

Please Wait while comments are loading...