ಭೋಪಾಲ್ : ಸರೋವರಗಳು ಮತ್ತು ಹಲವು ಆಕರ್ಷಣೆಗಳ ನಗರ

ಭೋಪಾಲ್ ಭಾರತದ ಒಂದು ಪ್ರಸಿದ್ಧ ನಗರವಾಗಿದ್ದು ಮಧ್ಯಪ್ರದೇಶ ರಾಜ್ಯದ ರಾಜಧಾನಿಯೂ ಆಗಿದೆ. ಇದನ್ನು ಸರೋವರಗಳ ನಗರ ಎಂದೂ ಕರೆಯಲಾಗುತ್ತದೆ ಹಾಗೂ ಹಿಂದೆ ಭೋಪಾಲ್ ರಾಜ್ಯದ ರಾಜಧಾನಿಯಾಗಿತ್ತು. ಸ್ವಚ್ಛ ಮತ್ತು ಸುಂದರ ನಗರ ಭಾರತದ ಹಚ್ಚ ಹಸುರಿನ ನಗರವೂ ಆಗಿದೆ.

ಭೋಪಾಲ್ ತನ್ನ ಹಿಂದೆ ಒಂದು ಭವ್ಯವಾದ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಈ ನಗರವನ್ನು ಸುಮಾರು 1000 - 1055 ರ ನಡುವೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಪರಮಾರ ರಾಜವಂಶದ ಭೋಜ ರಾಜ ನಿರ್ಮಿಸಿದನು. ಈ ನಗರದ ಆಧುನಿಕ ನಿರ್ಮಾತೃ ದೋಸ್ತ್ ಮೊಹಮ್ಮದ್ ಖಾನ್, ಇವನು ಇದನ್ನು ಹದಿನೆಂಟನೇಯ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಿದನು. ಇದನ್ನು ನವಾಬರು ಆಳ್ವಿಕೆ ನಡೆಸಿದ್ದಾರೆ ಮತ್ತು ಹಮೀದುಲ್ಲಾ ಖಾನ್ ಇಲ್ಲಿನ ಕೊನೆಯ ನವಾಬನಾಗಿದ್ದ. ಇಲ್ಲಿನ ಕಲೆ, ವಾಸ್ತುಶಿಲ್ಪ, ಸಂಗೀತ, ಆಹಾರ ಪದ್ಧತಿಗಳಲ್ಲಿ ಮೊಘಲ್ ಮತ್ತು ಅಫ್ಘಾನಿ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಇದು ಭಾರತದೊಂದಿಗೆ 1949 ರಲ್ಲಿ ವಿಲೀನವಾಯಿತು ಹಾಗೂ ಅಂದಿನಿಂದ ಇಂದಿನ ತನಕವೂ ಭಾರತದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ.

ಭೋಪಾಲ್ ನಲ್ಲಿ ಪ್ರವಾಸೋದ್ಯಮ

ಭೋಪಾಲ್ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಪ್ರತಿ ವರ್ಷ ದೇಶದ ಮತ್ತು ಹೊರದೇಶದ ಪ್ರವಾಸಿಗಳು ಸಾವಿರಾರು- ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭವ್ಯವಾದ ಇತಿಹಾಸ ಮತ್ತು ಆಕರ್ಷಕ ನಾವೀನ್ಯತೆ ಈ ನಗರದ ಬಗ್ಗೆ ಹಲವಾರು ಜನರಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದರೊಂದಿಗೆ ಇಲ್ಲಿ ಬಂದಾಗ ಭೇಟಿ ನೀಡಲೇ ಬೇಕಾದ ಕೆಲವು ಪ್ರಮುಖ ಸ್ಥಳಗಳೂ ಇವೆ. ಇಲ್ಲಿನ ಭೌಗೋಳಿಕತೆ ಚಿರತೆಗಳಿಗೆ ಅನುಕೂಲಕರ ಆವಾಸ ಸ್ಥಾನವನ್ನು ಒದಗಿಸಿದ್ದು, ಇವುಗಳನ್ನು ವನ ವಿಹಾರ ಎಂಬ ಹೆಸರಿನ ಅಭಯಾರಣ್ಯದಲ್ಲಿ ಸಂರಕ್ಷಿಸಲಾಗಿದೆ.

ಇಲ್ಲಿನ ಭಾರತ ಭವನ ಮತ್ತು ವಾಸ್ತುಶಿಲ್ಪದ ವಸ್ತುಸಂಗ್ರಹಾಲಯ ಇತಿಹಾಸ ಆಸಕ್ತರಿಗೆ ಪ್ರಮುಖ ಸ್ಥಳಗಳಾಗಿವೆ. ಇನ್ನು ಧಾರ್ಮಿಕ ಸ್ಥಳವೂ ಇಲ್ಲಿವೆ. ಬಿರ್ಲಾ ಮಂದಿರ, ಮೋತಿ ಮಸೀದಿ ಮತ್ತು ಜಾಮಾ ಮಸೀದಿ ಬಹಳ ಪ್ರಖ್ಯಾತವಾಗಿದ್ದು ಬಹು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕಲಾಪ್ರಿಯರು ಇಲ್ಲಿನ ವಾಸ್ತು ಶಿಲ್ಪದ ಸ್ಥಳಗಳಿಗೆ ಖಂಡಿತ ಭೇಟಿ ನೀಡಬೇಕು ಇದಕ್ಕೆಂದೆ ಸಂಗ್ರಹಾಲಯವೂ ಕೂಡ ಇಲ್ಲಿದೆ.

ಭೋಪಾಲ್ ನ ವಾಯುಗುಣ ಮತ್ತು ಪ್ರವಾಸ

ಆರ್ದ್ರ ಮತ್ತು ಉಷ್ಣವಲಯದ ವಾಯುಗುಣ ಇಲ್ಲಿನ ಸಾಮಾನ್ಯ ಅಂಶ. ಇದರಿಂದಾಗಿ ಇಲ್ಲಿ ಬೇಸಿಗೆ, ಚಳಿ ಮತ್ತು ಮಳೆಗಾಲದ ಅವಧಿಯಲ್ಲಿ ಭೇಟಿ ನೀಡುವುದು ಕಷ್ಟ ಸಾಧ್ಯ. ಹೀಗಿದ್ದರೂ ಅಕ್ಟೋಬರ್ ನಿಂದ ಡಿಸೆಂಬರ್ ತನಕದ ಅವಧಿ ಇಲ್ಲಿನ ಭೇಟಿಗೆ ಸೂಕ್ತವಾದ ಸಮಯವಾಗಿದೆ. ಇದರ ಜೊತೆಗೆ ಭೋಪಾಲ್ ಹೊರ ಜಗತ್ತಿನೊಂದಿಗೆ ವಾಯು ಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮಾರ್ಗದಲ್ಲಿ ಬಹಳ ಸೂಕ್ತವಾಗಿ ಸಂಪರ್ಕ ಸಾಧಿಸುತ್ತದೆ. ಇದು ಪ್ರವಾಸವನ್ನು ಸುಲಭವನ್ನಾಗಿಸಿದೆ.

ಭೋಪಾಲ್ ನ ಸುತ್ತ ಮುತ್ತ

ಕೇವಲ ಭೋಪಾಲ್ ನಗರದೊಳಗೆ ಅಲ್ಲದೇ ಇಲ್ಲಿ ಸುತ್ತ ಮುತ್ತಲು ಕೆಲವು ಆಕರ್ಷಕ ಸ್ಥಳಗಳಿವೆ. ಕೇವ್ರಾ ಜಲಾಶಯ ಇಲ್ಲಿನ ಹೊರವಲಯದ ಅತ್ಯಂತ ಪ್ರಮುಖವಾದ ಪ್ರವಾಸಿ ತಾಣವಾಗಿದ್ದು ಇದು ಅತ್ಯಂತ ಸುಂದರವಾದ ಪ್ರಕೃತಿಯ ನೋಟವನ್ನು ಒದಗಿಸುತ್ತದೆ. 'ಮನುಭಾನ್ ಕಿ ಟೆಕ್ರಿ' ಇನ್ನೊಂದು ಸುಂದರವಾದ ಸ್ಥಳವಾಗಿದ್ದು ಇದು ಬಹಳ ಎತ್ತರದ ಸ್ಥಳದಲ್ಲಿದೆ ಹೀಗಾಗಿ ಇಲ್ಲಿಂದ ನೀವು ನಗರದ ರಮಣೀಯ ದೃಶ್ಯಗಳನ್ನು ಕಣ್ಣಲ್ಲಿ ಸೆರೆಹಿಡಿಯಬಹುದಾಗಿದೆ. ಇದು ಜೈನರಿಗೆ ಒಂದು ಪವಿತ್ರವಾದ ಸ್ಥಳವೂ ಆಗಿದೆ.

ಶಾಹಪುರಾ ಸರೋವರ ಹೊರವಲಯದ ಇನ್ನೊಂದು ಪ್ರಮುಖ ತಾಣ. ಇದು ಇಲ್ಲಿನ ಸ್ಥಳಿಯರ ಇಷ್ಟದ ಸ್ಥಳ. ಇಲ್ಲಿ ಪ್ರತಿ ಸಂಜೆ ಹಲವಾರು ಸ್ಥಳೀಯರು ಬಂದು ಕಾಲ ಕಳೆಯುವುದನ್ನು ನಾವು ಕಾಣಬಹುದು. ಶಿವನ ಆರಾಧನೆ ನಡೆಯುವ ಗುಫಾ ಮಂದಿರ ನಗರದಿಂದ ಕೇವಲ ಏಳು ಕಿ.ಮೀ ದೂರದಲ್ಲಿದೆ. ಇದರ ಜೊತೆಗೆ ಭೋಪಾಲ್ ನಲ್ಲಿ ಹಲವು ಇತಿಹಾಸ ಪ್ರಸಿದ್ಧ ಕಟ್ಟಡಗಳನ್ನೂ ಕಾಣಬಹುದಾಗಿದೆ. ಇವುಗಳಲ್ಲಿ ಗೊಹಾರ್ ಮಂದಿರ, ಶೌಕತ್ ಮಹಲ್, ಪರ್ಷಿಯಾ ಕಿಲಾ ಮತ್ತು ಸರ್ದಾರ್ ಮಂಜಿಲ್ ಪ್ರಮುಖವಾಗಿವೆ.

Please Wait while comments are loading...