
ಮನಾಲಿ ಬಸ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿರುವ ನೆಹರು ಕುಂಡ ಮನಾಲಿ-ರೋಹಟಾಂಗ್ ಪಾಸ್ ಹೆದ್ದಾರಿಯಲ್ಲಿದೆ. ಮನಾಲಿಯಲ್ಲಿ ಈ ವಸಂತವು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ.

ಹೆಸರು ಬಂದಿದ್ದು ಹೇಗೆ?
ಭಾರತದ ಪ್ರಥಮ ಪ್ರಧಾನಿಯಾದ ಪಂಡಿತ್ ಜವಾಹರಲಾಲ್ ನೆಹರೂ ಅವರು ಮನಾಲಿಯಲ್ಲಿ ವಾಸವಾಗಿದ್ದಾಗ ಹಾಗೂ ಮನಾಲಿಯ ಈ ಸ್ಥಳಕ್ಕೆ ಭೇಟಿ ನೀಡುತ್ತಾ ಇದ್ದಾಗ ಸ್ಫಟಿಕದಂತಹ ಶುಭ್ರವಾದ ನೀರನ್ನು ಕುಡಿಯುತ್ತಿದ್ದರು. ಆಗಿನಿಂದ ಈ ನೈಸರ್ಗಿಕ ನೀರಿನ ಕುಂಡಕ್ಕೆ ನೆಹರು ಕುಂಡ ಎನ್ನುವ ಹೆಸರನ್ನಿಡಲಾಗಿದೆ. ನೆಹರೂ ಈ ನೀರನ್ನು ದೆಹಲಿಗೂ ತರಿಸುತ್ತಿದ್ದರಂತೆ.

ಭೃಗು ನದಿಯ ಮೂಲ
ಈ ಶುಭ್ರ ನೀರು ಭೃಗು ನದಿಯ ಮೂಲವಾಗಿದೆ. ಈ ನೀರು ಹರಿಯುವ ಸದ್ದು ಕಿವಿಗೆ ಮ್ಯೂಸಿಕ್ ನಂತೆ ಇಂಪಾಗಿ ಕೇಳಿಸುತ್ತದೆ. ಇಲ್ಲಿನ ಸ್ಪಟಿಕದಂತಹ ನೀರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸುಮಾರು 4,300 ಮೀಟರ್ ಎತ್ತರದಲ್ಲಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ
ಪ್ರವಾಸಿಗರು, ಛಾಯಾಚಿತ್ರಗ್ರಾಹಕರು ಮತ್ತು ಪ್ರಕೃತಿ ಪ್ರಿಯರಿಗೆ ಪ್ರಸಿದ್ಧವಾದ ಸ್ಥಳವಾಗಿದೆ. ಕಣಿವೆಯ ಸೊಂಪಾದ ಹಸಿರು ದೃಶ್ಯಾವಳಿಯನ್ನು ನೀಡುತ್ತದೆ. ಮೇ ಯಿಂದ ಅಕ್ಟೋಬರ್ ತಿಂಗಳ ವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ. ಮಳೆಗಾಲದಲ್ಲಿಮಾತ್ರ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ. ಚಳಿಗಾಲದಲ್ಲಿಈ ಸ್ಥಳವು ಹಿಮದಿಂದ ಕೂಡಿರುತ್ತದೆ.

ಸಾಹಸಮಯ ಚಟುವಟಿಕೆ
ನೆಹರು ಕುಂಡ ವಿಶ್ರಾಂತಿ ನೀಡುವ ಒಂದು ಪರಿಪೂರ್ಣ ಸ್ಥಳವಾಗಿದೆ. ನೆಹರೂ ಕುಂಡವು ಪ್ರವಾಸಿಗರಿಗೆ ಛಾಯಾಗ್ರಹಣಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ಉತ್ತಮ ಫೋಟೋ ಶೂಟ್‌ಗಾಗಿ ಪರಿಪೂರ್ಣವಾದ ನೈಸರ್ಗಿಕ ತಾಣವಾಗಿದೆ. ಸಾಹಸಮಯ ಚಟುವಟಿಕೆಗಳೂ ಇವೆ. ಕಯಾಕಿಂಗ್, ರಾಪ್ಟಿಂಗ್ ಅನುಭವವನ್ನೂ ಪಡೆಯಬಹುದು.

ತಲುಪುವುದು ಹೇಗೆ?
ಮನಾಲಿಯಿಂದ ಸುಮಾರು ನಾಲ್ಕು ಐದು ಕಿ.ಮೀ ದೂರದಲ್ಲಿದೆ ಈ ನೆಹರು ಕುಂಡ. ಖಾಸಗಿ ವಾಹನದಲ್ಲಿ ಭೇಟಿ ನೀಡುವುದು ಸೂಕ್ತ. ಅಲ್ಲಿ ಜೀಪ್ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ತಲುಪಬಹುದು.

ಜೋಗಿನಿ ಜಲಪಾತ
ಜೋಗಿನಿ ಜಲಪಾತವು ಹಿಮಾಚಲ ಪ್ರದೇಶದ ವಶಿಷ್ಟ ಹಳ್ಳಿಯ ಬಳಿಯಿರುವ ಸುಂದರ ಜಲಪಾತವಾಗಿದೆ. ಬೀಸ್ ನದಿಯ ರೂಪುಗೊಂಡ ತೊರೆಯಿಂದ ಈ ಜಲಪಾತವು ರೂಪುಗೊಳ್ಳುತ್ತದೆ. ವಶಿಷ್ಠ ದೇವಾಲಯದಿಂದ ಟ್ರೆಕ್ಕಿಂಗ್ ಮೂಲಕ ಜಲಪಾತವನ್ನು ತಲುಪಬಹುದು. ಇದು ಮನಾಲಿಯಲ್ಲಿ ಭೇಟಿ ನೀಡುವ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಈ ಜಲಪಾತವು ಸುಮಾರು 150 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ.

ಹಿಡಿಂಬಿ ದೇವಿ ದೇವಸ್ಥಾನ
ಹಿಡಿಂಬಿ ದೇವಿ ದೇವಸ್ಥಾನವನ್ನು ದುಂಗ್ರಿ ದೇವಾಲಯ ಎಂದೂ ಕರೆಯಲಾಗುತ್ತದೆ. ಇದು ಹಿಡಿಂಬಿ ದೇವಿಗೆ ಸಮರ್ಪಿತವಾದ ಪುರಾತನ ಗುಹಾ ದೇವಾಲಯವಾಗಿದೆ. ದುಂಗ್ರಿ ವ್ಯಾನ್ ವಿಹಾರ್ ಎಂದು ಕರೆಯಲ್ಪಡುವ ದಟ್ಟವಾದ ಕಾಡಿನ ಮಧ್ಯದಲ್ಲಿದೆ. ದೇವಾಲಯವು ಪಗೋಡ ಶೈಲಿಯಲ್ಲಿದೆ. ಈ ದೇವಾಲಯದ ಒಳಗೆ ಯಾವುದೇ ವಿಗ್ರಹವಿಲ್ಲ. ಇದರ ಒಳಗೆ ಕೆಲವು ಹೆಜ್ಜೆ ಗುರುತುಗಳನ್ನು ಕೆತ್ತಲಾಗಿದೆ. ಭಕ್ತರು ಈ ಹೆಜ್ಜೆ ಗುರುತನ್ನೇ ಪೂಜಿಸುತ್ತಾರೆ.