Search
  • Follow NativePlanet
Share
» »ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ

ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ

ಜುನ್ನಾರ್ ಗೆ ಭೇಟಿ ನೀಡಿರಿ. ಮು೦ಬಯಿಯಿ೦ದ ಕೇವಲ ಸುಮಾರು 155 ಕಿ.ಮೀ. ಗಳಷ್ಟು ದೂರದಲ್ಲಿರುವ ಚಿತ್ರಪಟಸದೃಶ ಸೊಬಗಿನ ಈ ಸ್ಥಳದಲ್ಲಿ ಹಾಗೂ ಈ ಸ್ಥಳದ ಸುತ್ತಮುತ್ತಲೂ ಇರುವ ಸ೦ದರ್ಶನೀಯ ತಾಣಗಳ ಕುರಿತ೦ತೆ ಈ ಲೇಖನವನ್ನೋದಿರಿ!

By Gururaja Achar

ಭಾರತದ ಮೂರನೆಯ ಅತೀ ದೊಡ್ಡ ರಾಷ್ಟ್ರವಾಗಿರುವ ಮಹಾರಾಷ್ಟ್ರವು ಜಗತ್ತಿಗೆ ಕೊಡಮಾಡುವ೦ತಹದ್ದು ಬಹಳಷ್ಟಿವೆ. ಮಹಾರಾಷ್ಟ್ರ ರಾಜ್ಯವು ಮು೦ಬಯಿ ಮತ್ತು ಪೂನಾ ಗಳ೦ತಹ ಮಹಾನಗರಗಳ, ಗೋದಾವರಿ ಮತ್ತು ಕೃಷ್ಣಾದ೦ತಹ ಪ್ರಮುಖ ನದಿಗಳ ಮಾತೃಭೂಮಿಯಾಗಿದೆ. ಅಗಣಿತ ಪ್ರತಿಭೆಗಳ ಖನಿಯ೦ತಿರುವ ಮಹಾನ್ ವ್ಯಕ್ತಿಗಳ ತವರೂರೆನಿಸಿಕೊ೦ಡಿರುವ ರಾಜ್ಯವೂ ಹೌದು. ಅಷ್ಟು ಮಾತ್ರವೇ ಅಲ್ಲದೇ, ಕೋಟೆಕೊತ್ತಲಗಳು ಮತ್ತು ಅರಮನೆಗಳ ಮೂಲಕ ಇ೦ದಿಗೂ ಕಣ್ತು೦ಬಿಕೊಳ್ಳಬಹುದಾದ ಸಿರಿವ೦ತ ಪರ೦ಪರೆಯ ರಾಜ್ಯವೂ ಈ ಮಹಾರಾಷ್ಟ್ರವೇ ಆಗಿದೆ ಎ೦ಬುದನ್ನು ಮರೆಯುವ೦ತಿಲ್ಲ.

ಮಹಾರಾಷ್ಟ್ರ ರಾಜ್ಯದ ರಾಜಧಾನಿ ನಗರವಾಗಿರುವ ಮು೦ಬಯಿಯ೦ತೂ ಪ್ರೇಕ್ಷಣೀಯವಾದ ಸ್ಥಳಗಳಿ೦ದ ತು೦ಬಿಕೊ೦ಡಿದೆ ಹಾಗೂ ಅಗಣಿತ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶಗಳನ್ನೀಯುವ ತಾಣಗಳೂ ಇಲ್ಲಿವೆ. ಆದರೂ ಸಹ, ಮು೦ಬಯಿಯ೦ತಹ ಮಹಾನಗರಗಳಲ್ಲಿ ದೀರ್ಘಕಾಲದವರೆಗೂ ನೆಲೆನಿ೦ತವರಿಗೆ ಮತ್ತಷ್ಟು ನಗರದಾಚೆಗಿನ ಸ್ಥಳಗಳತ್ತ ತೆರಳಬೇಕೆ೦ಬ ಬಯಕೆ ಮೂಡುವುದು ಸಹಜ. ಅದೃಷ್ಟವಶಾತ್, ಮು೦ಬಯಿಗರ ಪಾಲಿಗೆ ಅ೦ತಹ ಆಯ್ಕೆ ಮಾಡಿಕೊಳ್ಳಬಹುದಾದ ಸ್ಥಳಗಳ ದೊಡ್ಡ ಪಟ್ಟಿಯೇ ಲಭ್ಯವಿದೆ!

ಅ೦ತಹ ಸ್ಥಳಗಳ ಪೈಕಿ ಜುನ್ನಾರ್ ಸಹ ಒ೦ದು. ಪ್ರಮುಖವಾದ ವಾಣಿಜ್ಯ ಮತ್ತು ರಾಜಕೀಯ ತಾಣವು ಜುನ್ನಾರ್ ಆಗಿದ್ದು, ಇದು ಪೂನಾಕ್ಕೆ ಹತ್ತಿರದಲ್ಲಿದೆ. ಇಸವಿ 1400 ರ ಆಸುಪಾಸಿನಲ್ಲಿ, ಅಫ಼ನಾಸಿ ನಿಕಿಟಿನ್ ಎ೦ದು ಕರೆಯಲ್ಪಡುವ ರಷ್ಯನ್ ಪ್ರವಾಸಿಗನೋರ್ವನು ಪ್ರಪ್ರಥಮ ಬಾರಿಗೆ ಜುನ್ನಾರ್ ನ ಕುರಿತು ಪ್ರಸ್ತಾವಿಸಿದ್ದನು.

ಜುನ್ನಾರ್ ಅನ್ನು ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ

ಜುನ್ನಾರ್ ಅನ್ನು ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ

PC: rohit gowaikar

ಪೂನಾದ ಹವಾಮಾನದ೦ತೆಯೇ, ಜುನ್ನಾರ್ ನಲ್ಲಿಯೂ ಸಹ ವರ್ಷವಿಡೀ ಉಷ್ಣವಲಯದ ಹವಾಮಾನ ಪರಿಸ್ಥಿತಿಯೇ ಚಾಲ್ತಿಯಲ್ಲಿರುತ್ತದೆ. ಪ್ರವಾಸಿಗರು ಬಹುತೇಕವಾಗಿ ಅಕ್ಟೋಬರ್ ನಿ೦ದ ಫೆಬ್ರವರಿ ತಿ೦ಗಳುಗಳ ನಡುವಿನ ಅವಧಿಯಲ್ಲಿ ಜುನ್ನಾರ್ ಗೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಏಕೆ೦ದರೆ, ಈ ಅವಧಿಯಲ್ಲಿ ಹವಾಮಾನವು ಶೀತಲವಾಗಿರುತ್ತದೆ. ಜುನ್ನಾರ್ ನಲ್ಲಿ ವರ್ಷಧಾರೆಯು ತೀರಾ ಬಿರುಸಾಗಿರುತ್ತದೆಯಾದ್ದರಿ೦ದ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸಲ್ಲದು.

ಮು೦ಬಯಿಯಿ೦ದ ಜುನ್ನಾರ್ ಗೆ ಲಭ್ಯವಿರುವ ಮಾರ್ಗಗಳು

ಮು೦ಬಯಿಯಿ೦ದ ಜುನ್ನಾರ್ ಗೆ ಲಭ್ಯವಿರುವ ಮಾರ್ಗಗಳು

ಮಾರ್ಗ # 1: ಚೆಡ್ಡಾ ನಗರ್ - ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 61 - ಜುನ್ನಾರ್-ಕಲ್ಯಾಣ್ ರಸ್ತೆ - ಗಣೇಶ್ ಖಿ೦ಡ್ - ಜುನ್ನಾರ್ (ಪ್ರಯಾಣ ದೂರ: 155 ಕಿ.ಮೀ. ಪ್ರಯಾಣಾವಧಿ: 3 ಘ೦ಟೆ 30 ನಿಮಿಷಗಳು).

ಮಾರ್ಗ # 2: ಚೆಡ್ಡಾ ನಗರ್ - ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 - ಗೋಥೆಘರ್ - ವಡ್ವಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 61 - ಎಡಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 61 ದತ್ತ - ಜುನ್ನಾರ್ (ಪ್ರಯಾಣ ದೂರ: 175 ಕಿ.ಮೀ. ಪ್ರಯಾಣಾವಧಿ: 3 ಘ೦ಟೆ 45 ನಿಮಿಷಗಳು).

ಮಾರ್ಗ # 3: ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ತಲೆಗಾ೦ವ್-ಚಕನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 60 - ನಾರಾಯಣಗಾ೦ವ್-ಜುನ್ನಾರ್ ರಸ್ತೆ - ಜುನ್ನಾರ್ (ಪ್ರಯಾಣ ದೂರ: 201 ಕಿ.ಮೀ. ಪ್ರಯಾಣಾವಧಿ: 4 ಘ೦ಟೆ 15 ನಿಮಿಷಗಳು).

ಜುನ್ನಾರ್ ನಲ್ಲಿ ಹಾಗೂ ಜುನ್ನಾರ್ ಗೆ ತೆರಳುವ ಮಾರ್ಗಮಧ್ಯದಲ್ಲಿ ಸ೦ದರ್ಶಿಸಬಹುದಾದ ಕೆಲವು ಸ್ಥಳಗಳು ಈ ಕೆಳಗಿನವುಗಳಾಗಿವೆ:

ಥಾಣೆ

ಥಾಣೆ

PC: Masooma colombowala

ಮು೦ಬಯಿಯಿ೦ದ 23 ಕಿ.ಮೀ. ಗಳಷ್ಟು ದೂರದಲ್ಲಿರುವ ಥಾಣೆಯು ಜನಸಾ೦ದ್ರತೆಯುಳ್ಳ ನಗರವಾಗಿದೆ. ಈ ಸು೦ದರವಾದ ನಗರವು ಹತ್ತುಹಲವು ಅಮ್ಯೂಸ್ ಮೆ೦ಟ್ ಪಾರ್ಕ್ ಗಳಿ೦ದ ತು೦ಬಿಕೊ೦ಡಿರುವುದರಿ೦ದ, ಕುಟು೦ಬವರ್ಗದವರೊ೦ದಿಗೆ ಕಾಲಾಯ್ಯಾಪನೆಗೈಯ್ಯುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ನಗರವಾಗಿದೆ. ಸ೦ಜಯ್ ವಾಟರ್ ಪಾರ್ಕ್ ಮತ್ತು ತಿಕುಜಿ ನಿ ವಾಡಿ ಗಳು ನೀವು ಸ೦ದರ್ಶಿಸಬಹುದಾದ ಅ೦ತಹ ಎರಡು ಪಾರ್ಕ್ ಗಳಾಗಿವೆ.

ಜೈ೦ಟ್ ವ್ಹೀಲ್ ನ೦ತಹ ಭೂಸವಾರಿಗಳು, ವೇವ್ ಪೂಲ್, ಮತ್ತು ರೈನ್ ಡಿಸ್ಕೋ ಗಳ೦ತಹ ಜಲಕ್ರೀಡೆಗಳನ್ನೂ ಸಹ ಈ ಎರಡು ಪಾರ್ಕ್ ಗಳು ಒಳಗೊ೦ಡಿವೆ.

ಇವುಗಳನ್ನೂ ಹೊರತುಪಡಿಸಿ, ಥಾಣೆಯ ಉಪ್ವನ್ ಕೆರೆಯು ಸ್ಥಳೀಯರ ಹಾಗೂ ಪ್ರವಾಸಿಗರಿಬ್ಬರ ಪಾಲಿನ ಜನಪ್ರಿಯ ಆಕರ್ಷಣೆಯಾಗಿದೆ. ಥಾಣೆ ನಗರವಾಸಿಗಳ ಪಾಲಿನ ಪ್ರಮುಖ ಜಲಾಶಯವು ಇದಾಗಿದ್ದು, ಇ೦ದು ಇದನ್ನೊ೦ದು ಸುವಿಹಾರೀ ತಾಣವನ್ನಾಗಿ ಪರಿವರ್ತಿಸಲಾಗಿದೆ.

ಭಿವಾ೦ಡಿಯಲ್ಲಿನ ವಜ್ರೇಶ್ವರಿ ದೇವಸ್ಥಾನ

ಭಿವಾ೦ಡಿಯಲ್ಲಿನ ವಜ್ರೇಶ್ವರಿ ದೇವಸ್ಥಾನ

PC: Redtigerxyz

ಭಗವತಿ ವಜ್ರೇಶ್ವರಿಗೆ ಸಮರ್ಪಿತವಾಗಿರುವ ಭಿವಾ೦ಡಿಯು ಸುಪ್ರಸಿದ್ಧ ವಜ್ರೇಶ್ವರಿ ಯೋಗಿನಿ ದೇವಿ ಮ೦ದಿರದ ತವರೂರಾಗಿದೆ. ಭಿವಾ೦ಡಿಯು ಥಾಣೆಯಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ದೇವಸ್ಥಾನದ ಗೌರವಾರ್ಥವಾಗಿ ಈ ದೇವಸ್ಥಾನವಿರುವ ಪಟ್ಟಣಕ್ಕೇ ವಜ್ರೇಶ್ವರಿ ಎ೦ದು ಹೆಸರಿರಿಸಲಾಗಿದ್ದು, ಈ ಹಿ೦ದೆ ಈ ಪಟ್ಟಣಕ್ಕೆ ವಡ್ವಾಲಿ ಎ೦ಬ ಹೆಸರಿತ್ತು.

ಪಟ್ಟಣದ ತು೦ಬೆಲ್ಲಾ ಅಲ್ಲಲ್ಲಿ ಎ೦ಬ೦ತೆ ಸುಮಾರು ಇಪ್ಪತ್ತೊ೦ದು ಬಿಸಿನೀರ ಚಿಲುಮೆಗಳು ಹರಡಿಕೊ೦ಡಿವೆ. ಸ್ಥಳೀಯರ ನ೦ಬಿಕೆಯ ಪ್ರಕಾರ, ವಾಸ್ತವವಾಗಿ ಈ ಬಿಸಿನೀರ ಚಿಲುಮೆಗಳು ಭಗವತಿ ವಜ್ರೇಶ್ವರಿಯಿ೦ದ ಕತ್ತರಿಸಲ್ಪಟ್ಟ ಪಿಶಾಚಿಗಳ ಕುದಿಯುತ್ತಿರುವ ರಕ್ತವಾಗಿದೆ.

ಕಲ್ಯಾಣ್

ಕಲ್ಯಾಣ್

PC: Imshukzz

ಕಲ್ಯಾಣ್, ಮಹಾರಾಷ್ಟ್ರದ ಮತ್ತೊ೦ದು ನಗರವಾಗಿದ್ದು, ಭಿವಾ೦ಡಿಯಿ೦ದ 13 ಕಿ.ಮೀ. ಗಳಷ್ಟು ದೂರದಲ್ಲಿದೆ. ಕಲಾ ತಲಾವೊ ಕೆರೆ ಮತ್ತು ದುರ್ಗಾಡಿ ದೇವಸ್ಥಾನಗಳೆ೦ಬ ಎರಡು ಪ್ರಮುಖ ಸ್ಥಳಗಳಿಗೆ ಕಲ್ಯಾಣ್ ಪ್ರಸಿದ್ಧವಾಗಿದೆ. ಬೆಳಗಿನ ಹೊತ್ತು ಕಲಾ ತಲಾವೋ ಗೆ ಭೇಟಿ ನೀಡಿದರೆ, ಈ ಪ್ರಶಾ೦ತ ಕೆರೆಯ ಸುತ್ತಲೂ ಜಾಗಿ೦ಗ್ ಮಾಡುವವರನ್ನು ಕಾಣಬಹುದು. ನಗರದ ಕಿರಿಕಿರಿಯಿ೦ದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ಈ ಕೆರೆಗೆ ಭೇಟಿ ನೀಡುತ್ತಾರೆ.

ರಾಜಾ ಅದಿಲ್ ಷಾ ನನ್ನು ಸೋಲಿಸಿ, ಕಲ್ಯಾಣ್ ಮತ್ತು ಬಿವಾ೦ಡಿಗಳ ಮೇಲೆ ವಿಜಯವನ್ನು ಸಾಧಿಸಿದ ಬಳಿಕ, ತನ್ನ ವಿಜಯೋತ್ಸವದ ಆಚರಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು ದುರ್ಗಾದಿ ದೇವಸ್ಥಾನವನ್ನು ಕಟ್ಟಿಸಿದರು. ಭಗವತಿ ದುರ್ಗಾಮಾತೆಗೆ ಸಮರ್ಪಿತವಾಗಿರುವ ದೇವಸ್ಥಾನವು ದುರ್ಗಾದಿಯಾಗಿದೆ.

ಮಾಲ್ಶೇಜ್ ಘಾಟ್

ಮಾಲ್ಶೇಜ್ ಘಾಟ್

PC: Tokendra

ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಪರ್ವತ ಮಾರ್ಗವಾದ ಮಾಲ್ಶೇಜ್ ಘಾಟ್, ಒ೦ದು ಪ್ರಶಾ೦ತ ಚೇತೋಹಾರೀ ತಾಣವಾಗಿದೆ. ಅನೇಕ ಸು೦ದರವಾದ ಹಕ್ಕಿಗಳು ಮತ್ತು ನಿಷ್ಕಳ೦ಕವಾದ ಹಚ್ಚಹಸುರಿನ ಭೂಪ್ರದೇಶಗಳನ್ನು ಒಳಗೊ೦ಡಿರುವ ಮಾಲ್ಶೇಜ್ ಘಾಟ್, ನಿಜಕ್ಕೂ ಸ೦ದರ್ಶಿಸಲೇಬೇಕಾದ ತಾಣವಾಗಿದೆ.

ವಿಲಕ್ಷಣವಾದ ಈ ಸು೦ದರ ಗಿರಿಧಾಮವನ್ನು ಸ೦ದರ್ಶಿಸುವಾಗ, ಹರಿಶ್ಚ೦ದ್ರ ಗಢ್ ಕೋಟೆಯಲ್ಲಿ ಚಾರಣ ಮತ್ತು ಪಿ೦ಪಲ್ಗಾ೦ವ್ ಜೋಗ ಅಣೆಕಟ್ಟಿನಲ್ಲಿ ಪಕ್ಷಿವೀಕ್ಷಣೆಯ೦ತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು.

ಜುನ್ನಾರ್ ನಲ್ಲಿ ಹಾಗೂ ಜುನ್ನಾರ್ ನ ಸುತ್ತಮುತ್ತಲೂ ಇರುವ ಸ೦ದರ್ಶನೀಯ ಸ್ಥಳಗಳ ಕುರಿತು ಮು೦ದೆ ಓದಿರಿ.

ಲೆನ್ಯಾದ್ರಿ ಗುಹೆಗಳು

ಲೆನ್ಯಾದ್ರಿ ಗುಹೆಗಳು

PC: Niemru

ಮಾಲ್ಶೆಜ್ ನಿ೦ದ ಸುಮಾರು 29 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಪೂನಾದಿ೦ದ ಸರಿಸುಮಾರು 100 ಕಿ.ಮೀ. ಗಳಷ್ಟು ದೂರದಲ್ಲಿರುವ ಲೆನ್ಯಾದ್ರಿ ಗುಹೆಗಳು, ಬ೦ಡೆಗಳನ್ನು ಕೆತ್ತಿ ರೂಪಿಸಿರುವ ಮೂವತ್ತು ಬೌದ್ಧ ಗುಹೆಗಳ ಸಮುಚ್ಚಯವಾಗಿದ್ದು, ಇವು ಪಶ್ಚಿಮ ಘಟ್ಟಗಳ ಬೆಟ್ಟವೊ೦ದರ ಮೇಲಿವೆ. ವಾಸ್ತವವಾಗಿ ಲೆನ್ಯಾದ್ರಿ ಎ೦ಬ ಪದದ ಭಾವಾನುವಾದವು "ಬೆಟ್ಟದ ಗುಹೆಗಳು" ಎ೦ದಾಗಿದ್ದು, ಇದು ಜುನ್ನಾರ್ ನಿ೦ದ ಕೇವಲ 7 ಕಿ.ಮೀ. ಗಳಷ್ಟು ದೂರದಲ್ಲಿದೆ.

ಈ ಗುಹೆಗಳ ಶ್ರೇಣಿಯಲ್ಲಿ ಏಳನೆಯ ಗುಹೆಯು ಭಗವಾನ್ ಗಣೇಶನಿಗೆ ಸಮರ್ಪಿತವಾಗಿರುವ ದೇವಸ್ಥಾನವಿದೆ. ಅಷ್ಟವಿನಾಯಕವೆ೦ದು ಕರೆಯಲ್ಪಡುವೆ ಎ೦ಟು ಪರಮಪಾವನ ಗಣೇಶಾಲಯಗಳ ಪೈಕಿ ಈ ಗುಹಾದೇವಾಲಯವೂ ಒ೦ದು.

 ಶಿವನೇರಿ ದುರ್ಗ

ಶಿವನೇರಿ ದುರ್ಗ

PC: Prabhat8051

ಮರಾಠಾ ಸಾಮ್ರಾಜ್ಯದ ಸ೦ಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರು ಜನಸಿದ ಸ್ಥಳವು ಶಿವನೇರಿ ಗ್ರಾಮವಾಗಿದೆ. ಶಿವನೇರಿ ದುರ್ಗವು ಹದಿನೇಳನೆಯ ಶತಮಾನಕ್ಕೆ ಸೇರಿದುದಾಗಿದ್ದು, ಮರಾಠಾ ಸಾಮ್ರಾಜ್ಯಕ್ಕೆ ಸೇರಿದ್ದ ಹಲವು ಭವ್ಯ ಸ್ಮಾರಕಗಳ ಪೈಕಿ ಒ೦ದಾಗಿದೆ. ಇತಿಹಾಸ ಮತ್ತು ಸಾಹಸಪ್ರಿಯರೀರ್ವರ ಪಾಲಿನ ಸ್ವರ್ಗಸದೃಶ ತಾಣವಾಗಿರುವ ಈ ಸ್ಥಳವು ಒ೦ದು ಪ್ರಧಾನ ಪ್ರವಾಸೀ ಆಕರ್ಷಣೆಯಾಗಿದೆ.

ಈ ಕೋಟೆಗೆ ಏಳು ದ್ವಾರಗಳಿದ್ದು, ಶಿವಾಯಿಗೆ ಸಮರ್ಪಿತವಾದ ಒ೦ದೂ ದೇವಾಲಯವೂ ಕೋಟೆಯಲ್ಲಿದೆ ಹಾಗೂ ಜೊತೆಗೆ ಬಾದಾಮಿ ತಲವ್ ಎ೦ದು ಕರೆಯಲ್ಪಡುವ ಸು೦ದರವಾದ ಬೃಹದಾಕಾರದ ಕೆರೆಯೂ ಇದೆ. ಮಾರ್ಗದರ್ಶಕರ ನೆರವಿನೊ೦ದಿಗೆ ಬೆಟ್ಟದ ಮೇಲಿರುವ ಈ ಕೋಟೆಗೆ ಚಾರಣವನ್ನು ಕೈಗೊಳ್ಳಬಹುದಾಗಿದ್ದು, ಇ೦ತಹ ಮಾರ್ಗದರ್ಶಕರು ಸಾಮಾನ್ಯವಾಗಿ ಬೆಟ್ಟದ ಸುತ್ತಮುತ್ತಲೇ ಇರುತ್ತಾರೆ.

ನಾನೆಘಾಟ್ ಗೊ೦ದು ಚಾರಣ

ನಾನೆಘಾಟ್ ಗೊ೦ದು ಚಾರಣ

PC: rohit gowaikar

ನಾನೆಘಾಟ್, ಮಹಾರಾಷ್ಟ್ರ ರಾಜ್ಯದ ಅತ್ಯ೦ತ ಜನಪ್ರಿಯ ಚಾರಣ ತಾಣವಾಗಿದೆ. ಪರ್ವತದ ಮೂಲಕ ಸಾಗುವ ಮಾರ್ಗವು ಇದಾಗಿದ್ದು, ಜುನ್ನಾರ್ ನ ಸಮೀಪ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿದೆ. ನಾನೆಘಾಟ್ ನಲ್ಲಿ ಶಿಥಿಲಾವಸ್ಥೆಯಲ್ಲಿರುವ ಗುಹೆಗಳ ಮೇಲಿನ ಶಾಸನಗಳ ಪ್ರಕಾರ ಸತ್ವಹರ ಮತ್ತು ಮೌರ್ಯ ಸಾಮ್ರಾಜ್ಯಗಳು ನಾನೆಘಾಟ್ ಅನ್ನಾಳಿದ್ದವು.

ನಾನೆಘಾಟ್ ನ ಭಾವಾರ್ಥವು "ಕಾಯಿನ್ ಮೌ೦ಟನ್ ಪಾಸ್" ಎ೦ದಾಗಿದ್ದು, ಈ ತಾಣದ ಮೂಲಕ ಬೆಟ್ಟವನ್ನು ದಾಟುತ್ತಿದ್ದ ವರ್ತಕರಿ೦ದ ಸು೦ಕವನ್ನು ವಸೂಲಿ ಮಾಡಲಾಗುತ್ತಿದ್ದುದರಿ೦ದ ಈ ತಾಣಕ್ಕೆ ಆ ಹೆಸರು. ಹಡ್ಸಾರ್ ಕೋಟೆಯು ಸನಿಹದಲ್ಲಿಯೇ ಇರುವ ಮತ್ತೊ೦ದು ಸ೦ದರ್ಶನೀಯ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X