Search
  • Follow NativePlanet
Share
» »ಭಾರತದಲ್ಲಿಯೆ ಅತ್ಯಂತ ಪ್ರಸಿದ್ಧ ದೇವಸ್ಥಾನಗಳು

ಭಾರತದಲ್ಲಿಯೆ ಅತ್ಯಂತ ಪ್ರಸಿದ್ಧ ದೇವಸ್ಥಾನಗಳು

By Vijay

ಭಾರತ ದೇಶದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇವಸ್ಥಾನಗಳಿವೆ. ಒಬ್ಬೊಬ್ಬರಿಗೂ ಒಂದೊಂದು ದೇವಸ್ಥಾನಗಳೆಂದರೆ ಬಲು ಅಚ್ಚು ಮೆಚ್ಚು. ಉತ್ತರ ಭಾರತದವರಿಗೆ ಆ ಭಾಗದ ಅತ್ಯಂತ ಜನಪ್ರೀಯ ಹಾಗೂ ಹೆಚ್ಚು ಭೇಟಿ ನೀಡಲ್ಪಡುವ ದೇವಸ್ಥಾನಗಳ ಕುರಿತು ಬಹುತೇಕವಾಗಿ ತಿಳಿದೆ ಇರುತ್ತದಾದರೂ ಅದರ ಕುರಿತು ದಕ್ಷಿಣದವರಿಗೆ ತಿಳಿದಿರುತ್ತದೆ ಎಂದು ಹೇಳುವುದು ಕಷ್ಟ.

ಅದೇ ರೀತಿಯಾಗಿ ದಕ್ಷಿಣದಲ್ಲಿರುವ ಅತ್ಯಂತ ಪ್ರಸಿದ್ಧ ದೇವಸ್ಥಾನಗಳ ಕುರಿತು ಉತ್ತರದ ಎಲ್ಲ ಜನರಿಗೂ ತಿಳಿದಿರುವುದು ಅಸಾಧ್ಯವೆ ಅಂತ ಹೇಳಬಹುದು. ಈ ಒಂದು ಅಂಶವನ್ನು ಗಮನದಲ್ಲಿರಿಸಿಕೊಂಡು ಈ ಲೇಖನವು ಭಾರತದಲ್ಲೆ ಭೇಟಿ ಮಾಡಬಹುದಾದ, ಅಂತಾರಾಷ್ಟ್ರೀಯ ವಲಯದಲ್ಲೂ ಖ್ಯಾತಿಗಳಿಸಿರುವ ಅತ್ಯಂತ ಪ್ರಸಿದ್ಧ ದೇವಸ್ಥಾನಗಳ ಕುರಿತು ತಿಳಿಸುತ್ತದೆ.

ನಿಮಗಿಷ್ಟವಾಗಬಹುದಾದ : ದಕ್ಷಿಣ ಭಾರತದ ಪ್ರಖ್ಯಾತ ದೇವಾಲಯಗಳು

ನಿವು ಧಾರ್ಮಿಕಾಸಕ್ತಿಯುಳ್ಳ ಪ್ರವಾಸಿಗರಾಗಿದ್ದರೂ ಸರಿ ಅಥವಾ ಕೇವಲ ಪ್ರವಾಸಿಗರಾಗಿದ್ದರೂ ಸರಿ, ಇಲ್ಲಿ ಹೇಳಲಾಗಿರುವ ದೇವಸ್ಥಾನಗಳಿಗೊಮ್ಮೆ ಭೇಟಿ ನೀಡಲೇಬೇಕು. ಏಕೆಂದರೆ ಭಾರತದ ನೈಜ, ಸಂಸ್ಕೃತಿ-ಸಂಪ್ರದಾಯ ಹಾಗು ಧಾರ್ಮಿಕ ವೈವಿಧ್ಯತೆ ಕುರಿತು ತಿಳಿಯಲು ಹಾಗೂ ಜನಸಾಗರದ ಮಧ್ಯೆ ರೋಮಾಂಚನಗೊಳ್ಳಲು ಈ ದೇವಸ್ಥಾನಗಳ ಪ್ರವಾಸ ಅತಿ ಸೂಕ್ತವಾಗಿರುತ್ತದೆ.

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ದೆಹಲಿಯಲ್ಲಿರುವ ಅಕ್ಷರಧಾಮ ಅಥವಾ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಭಾರತೀಯ ಸಂಸ್ಕೃತಿ, ಕಲೆ ಹಾಗೂ ಧಾರ್ಮಿಕತ್ವದ ಪ್ರತೀಕವಾಗಿದೆ. ಬೋಚಾಸನವಾಸಿ ಶ್ರೀ ಅಕ್ಷರಾ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸುಮಾರು 5 ವರ್ಷಗಳ ಅವಧಿಯಲ್ಲಿ ಈ ದೇವಾಲಯದ ಕಟ್ಟಡವನ್ನು ನಿರ್ಮಿಸಲಾಗಿದೆ. ಸಾಕಷ್ಟು ವಿಶಾಲವಾಗಿಯೂ ಹಾಗೂ ಸುಂದರವಾಗಿಯೂ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಹಲವಾರು ಆಕರ್ಷಣೆಗಳನ್ನು ಈ ದೇವಾಲಯದಲ್ಲಿ ಕಾಣಬಹುದು. ನೀವು ದೆಹಲಿಗೇನಾದರೂ ಭೇಟಿ ನೀಡಿದರೆ ಈ ದೇವಾಲಯಕ್ಕೆ ಭೇಟಿ ನೀಡಲು ಮರೆಯದಿರಿ.

ಚಿತ್ರಕೃಪೆ: Russ Bowling

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಪಂಜಾಬ್ ರಾಜ್ಯದ ಅಮೃತಸರದಲ್ಲಿರುವ ಸಿಖ್ ಧರ್ಮಿಯರ ಪವಿತ್ರ ದೇವಾಲಯವೆ ಗೋಲ್ಡನ್ ಟೆಂಪಲ್ ಅರ್ಥಾ ಸುವರ್ಣ ಮಂದಿರ. ಇದನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಭಾರತದ ಪ್ರಮುಖ ಸ್ಥಳಗಳ ಪೈಕಿ ಇದೂ ಸಹ ಒಂದು. ಅಮೃತರಸದಲ್ಲಿರುವ ಈ ಹರಿದ್ವಾರವನ್ನು ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ. ಯಾವ ಜಾತಿ, ಧರ್ಮ, ಮತ ಭೇದಗಳಿಲ್ಲದೆ ಪ್ರತಿಯೊಬ್ಬರೂ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಬಹುದು. ಶುದ್ಧ ಚಿನ್ನದ ಪದರಗಳನ್ನು ಹೊಂದಿರುವ ಈ ಗುರುದ್ವಾರದಲ್ಲಿ ಪ್ರತಿ ದಿನ ದಾಸೋಹವು ಅಚುಕಟ್ಟಾಗಿ ನಡೆಯುತ್ತದೆ.

ಚಿತ್ರಕೃಪೆ: Bipin Gupta

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಲೋಟಸ್ ಟೆಂಪಲ್: ನವದೆಹಲಿಯಲ್ಲಿರುವ ಈ ಆಧುನಿಕ ದೇವಾಲಯವು ಭೇಟಿ ನೀಡಲೇಬೇಕಾದ ಪ್ರಾರ್ಥನಾ ಮಂದಿರವಾಗಿದೆ. ಬಾಹಾಯ್ ಅಥವಾ ಲೋಟಸ್ ಟೆಂಪಲ್ ಎಂತಲೂ ಕರೆಯಲ್ಪಡುವ ಈ ಭವನು ಕಮಲದ ಹೂವಿನ ಪಕಳೆಗಳ ಆಕಾರದಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟಿದೆ. ಈ ಜನಪ್ರಿಯ ಮಂದಿರವು ಬಹಾಪುರದಲ್ಲಿದೆ. ಈ ಪ್ರದೇಶವು ದಿಲ್ಲಿಯ ಅತ್ಯಂತ ಜನಪ್ರಿಯ ಹಾಗೂ ಆಕರ್ಷಣೆಯ ಭಾಗವಾಗಿದೆ. ಈ ಮಂದಿರವು ಭಾರತೀಯ ಉಪ ಖಂಡದ ದೇವಾಲಯಗಳ ತಾಯಿ ಅನ್ನಿಸಿದೆ. ಅತ್ಯಾಕರ್ಷಕ ವಾಸ್ತುಶಿಲ್ಪದಿಂದಾಗಿ ಇದು ಪ್ರಸಿದ್ಧಿ ಹೊಂದಿದೆ. ಎಲ್ಲಾ ಧರ್ಮಿಯರಿಗೂ ಇಲ್ಲಿ ಪ್ರವೇಶಾವಕಾಶ ಇದೆ. ನಂಬಿಕೆ ಆಧರಿಸಿ ಪ್ರವೇಶಿಸಬಹುದು. ಇಲ್ಲಿ ಎಲ್ಲಾ ವರ್ಗದ ನಾಗರಿಕರಿಗೂ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ದೊಡ್ಡ ಸಂಖ್ಯೆಯಲ್ಲಿ ಸರ್ವಧರ್ಮೀಯರು ಸೇರುತ್ತಾರೆ ಕೂಡ. ಪ್ರಾರ್ಥನೆ, ಜಪ ಹಾಗೂ ಧರ್ಮಗ್ರಂಥ ಪಠಣವನ್ನು ಆಯಾ ಧರ್ಮೀಯರು ಇಲ್ಲಿ ಮಾಡುತ್ತಾರೆ. ಇಲ್ಲಿ ಧರ್ಮಪ್ರವಚನ ನಡೆಸಲು ಅವಕಾಶ ಇಲ್ಲ. ಧರ್ಮಪ್ರಚಾರವನ್ನು ಕೂಡ ನಿರ್ಬಂಧಿಸಲಾಗಿದೆ.

ಚಿತ್ರಕೃಪೆ: kt.beyondperception

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಕಾಶಿ ವಿಶ್ವನಾಥ ದೇವಾಲಯ : ಭಾರತದಲ್ಲಿರುವ ಪ್ರಮುಖ ದೇವಾಲಯಗಳ ಪೈಕಿ ವರಾಣಸಿ ಅಥವಾ ಕಾಶಿಯ ಈ ಶಿವನಿಗೆ ಮುಡಿಪಾದ ವಿಶ್ವನಾಥ ದೇವಾಲಯವೂ ಸಹ ಒಂದು. ಪವಿತ್ರ ಗಂಗಾ ನದಿಯ ತಟದ ಮೇಲೆ ನೆಲೆಸಿರುವ ಈ ದೇವಾಲಯವು ಮುಘಲ್ ದೊರೆ ಔರಂಜೇಬನಿಂದ ಸಾಕಷ್ಟು ಹಾನಿಗೊಳಗಾಗಿತ್ತು. ನಂತರ ಇದರ ಪ್ರತಿ ರುಪದಂತೆಯೆ ಹೊಸ ವಿಶ್ವನಾಥನ ದೇವಾಲಯವನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿರುವ ಪಂಡಿತ್ ಮದನ್ ಮೋಹನ್ ಮಾಲವಿಯಾ ಅವರು ನಿರ್ಮಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ವಾರಣಾಸಿಯಲ್ಲಿರುವ ಈ ಶಿವಲಿಂಗರೂಪಿ ದೇವಸ್ಥಾನವು ಭಾರತದ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Ramón

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಕೇದಾರನಾಥ ದೇವಾಲಯ : ಕೇದಾರನಾಥ ಪರ್ವತದ ಸಾಲಿನಲ್ಲಿ ಕೇದಾರನಾಥ ದೇವಾಲಯ ಸ್ಥಾಪಿತವಾಗಿದೆ. ಇದೊಂದು ಶಾಶ್ವತ ಧಾರ್ಮಿಕ ಕೇಂದ್ರ ಹಾಗು ಪ್ರಖ್ಯಾತ ಜ್ಯೋತಿರ್ಲಿಂಗ. ಶಿವನ ಪ್ರಮುಖ 12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಮಹತ್ವವುಳ್ಳದ್ದಾಗಿದೆ. ಮಂದಾಕಿನಿ ನದಿ ತಟದಲ್ಲಿರುವ ಈ ದೇವಾಲಯವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಪಾಂಡವರು ನಿರ್ಮಿಸಿದ ಎನ್ನಲಾದ ಪುರಾತನ ದೇಗುಲವೊಂದರ ಪಕ್ಕದಲ್ಲೆ ಈ ದೇವಾಲಯವು ನೆಲೆಗೊಂಡಿದೆ. ಇಲ್ಲಿನ ದೇವಾಲಯದ ಸಮ್ಮೇಳನ ಸಭಾಂಗಣದ ಗೋಡೆ ಮೇಲೆ ಸಾಕಷ್ಟು ದೇವಾನುದೇವತೆಗಳ ಮುದ್ರೆ ಅಚ್ಚೊತ್ತಲ್ಪಟ್ಟಿದೆ. ಇದು ಸುಮಾರು 1000 ವರ್ಷ ಹಳೆಯದೆಂದು ನಂಬಲಾಗಿದೆ. ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ಕೇದಾರ ಪಟ್ಟಣದಲ್ಲಿ ಶಿವನಿಗೆ ಮುಡಿಪಾದ ಅತ್ಯಂತ ಮಹತ್ವವುಳ್ಳ ಈ ದೇವಸ್ಥಾನವಿದೆ.

ಚಿತ್ರಕೃಪೆ: Shaq774

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಬದರಿನಾಥ ದೇವಾಲಯ : ಭಾರತದ ಉತ್ತರಾಖಂಡ್ ರಾಜ್ಯದಲ್ಲಿರುವ ಬದರಿನಾಥವು ನಾಲ್ಕು ಪವಿತ್ರ ಧಾಮಗಳ ಪೈಕಿ ಅತಿ ಪ್ರಮುಖವಾದ ಧಾಮವಾಗಿದೆ. ಬದರಿ ನಾರಾಯಣ ಎಂತಲೂ ಕರೆಯಲ್ಪಡುವ ಬದರಿನಾಥ ದೇವಾಲಯವು ವಿಷ್ಣು ಭಗವಾನನಿಗೆ ಮುಡಿಪಾದ ದೇವಾಲಯವಾಗಿದೆ. ಹಲವು ಪವಿತ್ರವಾದ ಧಾರ್ಮಿಕ ಆಕರ್ಷಣೆಗಳನ್ನು ಇದರ ಸುತ್ತಮುತ್ತಲು ನೋಡಬಹುದಾಗಿದೆ. ಗಂಗೆಯು ಭೂಮಿ ಇಳಿದುಬಂದುದರ ಗೌರವಾರ್ಥವಾಗಿ ಆಚರಿಸಲಾಗುವ "ಮಾತಾ ಮೂರ್ತಿ ಕಾ ಮೇಲಾ" ಇಲ್ಲಿನ ಅತ್ಯಂತ ವಿಜೃಂಭಣೆಯ ಉತ್ಸವವಾಗಿದೆ. ಸ್ಕಂದ ಪುರಾಣ ಹಾಗೂ ವಿಷ್ಣು ಪುರಾನಗಳಲ್ಲಿ ಈ ದೇವಾಲಯದ ಕುರಿತು ಉಲ್ಲೇಖಿಸಲಾಗಿದ್ದು ಮೈಕೊರೆಯುವ ಅತ್ಯಂತ ಚಳಿಯ ನಡುವೆಯೂ ಇದು ಬಿಸಿ ಬಿಸಿ ನೀರಿನ ತಪ್ತ ಕುಂಡವನ್ನು ಹೊಂದಿದೆ.

ಚಿತ್ರಕೃಪೆ: Neilsatyam

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಅಮರನಾಥ ದೇವಾಲಯ : ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ. ಹಿಂದೂ ನಂಬಿಕೆಯ ಪ್ರಕಾರ, ಅಮರನಾಥ ಅತಿ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ. ಈ ಗುಹಾ ದೇವಾಲಯವು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದ್ದು, ಸಮುದ್ರ ಮಟ್ಟದಿಂದ 3,888 ಮೀ (12,756 ಅಡಿಗಳು) ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಈ ಒಂದು ಸ್ಥಳದಲ್ಲಿ ಶಿವನು ತನ್ನ ಪತ್ನಿಯಾದ ಪಾರ್ವತಿ ದೇವಿಗೆ ಜೀವನದ ರಹಸ್ಯ ಹಾಗೂ ಶಾಶ್ವತೆಯ ಕುರಿತು ಸವಿಸ್ತಾರವಾಗಿ ತಿಳಿಸಿದ್ದನಂತೆ. ಧಾರ್ಮಿಕ ನಂಬಿಕೆಯಂತೆ ಅಮರನಾಥ ಶಿವಲಿಂಗವು ಚಂದ್ರನ ಏರೀಳಿತಕ್ಕನುಸಾರವಾಗಿ ಹಿಗ್ಗು, ಕುಗ್ಗು ಗಳನ್ನು ಅನುಭವಸುತ್ತದೆನ್ನಲಾಗುತ್ತದೆ. ಆದರೆ ಇದಕ್ಕೆ ಪೂರಕವಾದ ಯಾವುದೆ ವೈಜ್ಞಾನಿಕ ಆಧಾರಗಳು ಲಭ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಿತವಿರುವ ಅಮರನಾಥವು ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ.

ಚಿತ್ರಕೃಪೆ: Gktambe

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ವೈಷ್ಣೊ ದೇವಿ ದೇವಾಲಯ : ಭಾರತದಲ್ಲಿ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ವೈಷ್ಣೋ ದೇವಿ ದೇವಸ್ಥಾನ, ಜಮ್ಮುವಿನಿಂದ 46 ಕಿ.ಮೀ ದೂರದಲ್ಲಿರುವ ಕತ್ರಾದ ತ್ರಿಕುಟ ಬೆಟ್ಟದ ಮೇಲೆ ಸ್ಥಿತವಿದೆ. ಈ ದೇವಾಲಯದಲ್ಲಿ ಹಿಂದೂ ದೇವತೆ, ವೈಷ್ಣೋ ದೇವಿಯನ್ನು ಪೂಜಿಸಲಾಗುತ್ತಿದ್ದು ಇದೊಂದು ಗುಹಾ ದೇವಾಲಯವಾಗಿದೆ. ಈ ದೇವಾಲಯದ ಮುಖ್ಯ ಆಕರ್ಷಣೆಗಳು ವೈಷ್ಣೋ ದೇವಿಯ ಮೂರು ರೂಪಗಳಾದ ಸಮಯ ಮತ್ತು ಅಂತ್ಯದ ದೇವತೆ ಮಹಾಕಾಳಿ, ವಿದ್ಯಾಧಿದೇವತೆ ಮಹಾಸರಸ್ವತಿ, ಮತ್ತು ಸಂಪತ್ತು ಮತ್ತು ಐಶ್ವರ್ಯದ ದೇವತೆ ಮಹಾಲಕ್ಷ್ಮಿ ವಿಗ್ರಹಗಳು. ವಾರ್ಷಿಕವಾಗಿ, ದೇಶಾದ್ಯಂತ ಸುಮಾರು 8 ಮಿಲಿಯನ್ ಭಕ್ತರು ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ವೈಷ್ಣೊ ದೇವಿ ದೇವಾಲಯದ ಪ್ರವೇಶ ದ್ವಾರ.

ಚಿತ್ರಕೃಪೆ: Abhishek Chandra

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಪುರಿ ಜಗನ್ನಾಥ ದೇವಾಲಯ : ಪುರಿಯ ಕರಾವಳಿ ನಗರದಲ್ಲಿರುವ ಜಗನ್ನಾಥ ಮಂದಿರ ಒಡಿಸ್ಸಾದ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಮಂದಿರ. ಜಗನ್ನಾಥ ಮಂದಿರದಲ್ಲಿನ ಸಾಮಾನ್ಯವಾದ್ಯ ಸ್ವರಮೇಳದಿಂದ ಸಿಗುವ ಸಮಾಧಾನವನ್ನು ಹುಡುಕಿಕೊಂಡು ಲೆಕ್ಕವಿಲ್ಲದಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಗನ್ನಾಥ ದೇವರು(ಹೆಸರೇ ಸೂಚಿಸುವಂತೆ ಜಗದ ಒಡೆಯ), ಬಾಲಭದ್ರ ದೇವರು ಮತ್ತು ಸುಭದ್ರ ದೇವತೆ. ದೇವಸ್ಥಾನವು ತನ್ನ ಭವ್ಯ ಸೆಳವಿನಿಂದ ಪ್ರಾಚೀನ ಯುಗವನ್ನು ನೆನಪಿಸುವಂತಿದೆ. ಜಗನ್ನಾಥ ಮಂದಿರಕ್ಕೆ ವರ್ಷವಿಡೀ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಪ್ರತೀವರ್ಷ ನಡೆಯುವ ರಥಯಾತ್ರೆ ಅಥವಾ ರಥ ಉತ್ಸವ ವೇಳೆ ಜಗನ್ನಾಥ ಮಂದಿರಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ರಥೋತ್ಸವ ವೇಳೆ ಜಗನ್ನಾಥ, ಬಾಲಭದ್ರ ಮತ್ತು ಸುಭದ್ರೆಯ ಮೂರ್ತಿಗಳನ್ನು ಶೃಂಗರಿಸಲ್ಪಟ್ಟ ಭವ್ಯ ರಥದಲ್ಲಿರಿಸಿ ಗುಂಡಿಚಾ ಮಂದಿರಕ್ಕೆ ಮೆರವಣೆಗೆ ಕೊಂಡೊಯ್ಯಲಾಗುತ್ತದೆ ಮತ್ತು ಬಳಿಕ ಜಗನ್ನಾಥ ಮಂದಿರಕ್ಕೆ ವಾಪಸ್ ತರಲಾಗುತ್ತದೆ.

ಚಿತ್ರಕೃಪೆ: G-u-t

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ದ್ವಾರಕಾಧೀಶ ದೇವಸ್ಥಾನ : ದ್ವಾರಕೆಯ ಈ ಪ್ರಮುಖ ದೇವಾಲಯವನ್ನು ‘ಜಗತ್ಮಂದಿರ' ಎಂದು ಕೂಡ ಕರೆಯುತ್ತಾರೆ. ಐತಿಹ್ಯಗಳ ಪ್ರಕಾರ ಈ ಜಗತ್ಮಂದಿರ ಅಥವ ದ್ವಾರಕಾಧೀಶ ದೇವಾಲಯದ ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು ಮತ್ತು ಇದನ್ನು ಶ್ರೀ ಕೃಷ್ಣನ ಮರಿಮೊಮ್ಮಗನಾದ ವಜ್ರನಾಭನು ನಿರ್ಮಿಸಿದ್ದನು ಎನ್ನುತ್ತದೆ ಸ್ಥಳ ಪುರಾಣ. ಇದನ್ನು ಮಹಾಭಾರತ ಯುದ್ಧಾ ನಂತರ ನೀರಿನಲ್ಲಿ ದ್ವಾರಕೆಯು ಮುಳುಗಿ ಹೋದ ನಂತರ ಮತ್ತೆ ನಗರನ್ನು ಪುನರ್ನಿರ್ಮಿಸುವಾಗ ಕಟ್ಟಲಾಯಿತು ಎಂದು ಕೂಡ ಹೇಳಲಾಗುತ್ತದೆ. ಜಗತ್ಮಂದಿರದ ಸುತ್ತಲಿರುವ ಉಳಿದ ಕಲಾತ್ಮಕ ಮಂದಿರಗಳನ್ನು 16ನೆಯ ಶತಮಾನದಲ್ಲಿ ಕಟ್ಟಲಾಯಿತೆಂದು ಹೇಳಲಾಗುತ್ತದೆ. ಇದೂ ಸಹ ಭಾರತದಲ್ಲಿ ಭೇಟಿ ನೀಡಬಹುದಾದ ಪ್ರಮುಖ ದೇವಾಲಯಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Scalebelow

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಸೋಮನಾಥ ದೇವಸ್ಥಾನ : ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ಪ್ರಭಾಸ ಪಟ್ಟಣದಲ್ಲಿರುವ ಸೋಮನಾಥ ದೇವಾಲಯವು "ಜ್ಯೋತಿರ್ಲಿಂಗ ಗುಡಿ" ಗೆ ಪ್ರಸಿದ್ಧವಾಗಿದ್ದು, ಸಮಸ್ತ ಭಾರತದ ಹಿಂದೂಗಳಿಂದ ಪೂಜಿಸಲ್ಪಡುತ್ತದೆ. ದೇವಸ್ಥಾನದ ಮುಖ್ಯ ಭಾಗದೆದುರುಗಡೆ, ವಿಶಾಲವಾದ ಪ್ರಾಂಗಣವಿದ್ದು, ದೇವಸ್ಥಾನದ ಗೋಪುರಗಳು ಪಿರಮಿಡ್ ಗಳಂತಹ ವಿನ್ಯಾಸವನ್ನು ಹೊಂದಿವೆ. ಅವಜ್ಞೆಯ ಕಾರಣದಿಂದಾಗಿ, ಇವು ದುರಸ್ತಿ ಕಾಣದ ಸ್ಥಿತಿಯಲ್ಲಿದ್ದವು. ಆದರೆ, 1951 ರಲ್ಲಿ ಸರದಾರ ಪಟೇಲರು ಹಳೆಯ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮುಂದಡಿಯಿಟ್ಟರು ಮತ್ತು ಆ ಬಳಿಕವೇ, ಈಗಿರುವ ದೇವಸ್ಥಾನವು ಕಟ್ಟಲ್ಪಟ್ಟಿತು. ಸೋಮನಾಥ ದೇವಾಲಯವು 6 ಬಾರಿ ದಾಳಿಗಳಿಗೊಳಗಾಯಿತು ಮತ್ತು ಈಗಿರುವ ದೇವಸ್ಥಾನವು ಮೂಲ ದೇವಸ್ಥಾನದ 7 ನೆಯ ಪುನರ್ನಿರ್ಮಾಣವಾಗಿದೆ.

ಚಿತ್ರಕೃಪೆ: Anhilwara

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಕೋನಾರ್ಕ್ ಸೂರ್ಯ ದೇವಾಲಯ : ಒಡಿಶಾ ರಾಜ್ಯದ ಕೋನಾರ್ಕ್ ಪಟ್ಟಣದಲ್ಲಿರುವ ಸೂರ್ಯ ದೇವಾಲಯವು ತನ್ನ ಅತ್ಯದ್ಭುತ ಶಿಲ್ಪ ಕಲೆ ಹಾಗೂ ವಿಶಿಷ್ಟ ಸಂಯೋಜನೆಯಿಂದಾಗಿ ಅಂತಾರಾಷ್ಟ್ರೀಯ ವಲಯದಲ್ಲಿ ಖ್ಯಾತಿಗಳಿಸಿದೆ. ಕೇವಲ ದೇಶದಿಂದ ಮಾತ್ರವಲ್ಲದೆ ಅಪಾರ ಸಂಖ್ಯೆಯಲ್ಲಿ ವಿದೇಶಗಳಿಂದಲೂ ಪ್ರವಾಸಿಗರು ಈ ಸುಂದರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾರತದಲ್ಲೆ ನೋಡಬೇಕಾದ ವಿಶಿಷ್ಟ ಹಾಗೂ ಮುಖ್ಯ ದೇವಾಲಯಗಳ ಪೈಕಿ ಈ ಸೂರ್ಯ ದೇವಾಲಯವೂ ಸಹ ಒಂದು. ನೀವು ಈ ದೇವಾಲಯದಲ್ಲಿ ಒಂದು ಬೃಹತ ರಥ, ಏಳು ಕುದುರೆಗಳು, ಇಪ್ಪತ್ನಾಲ್ಕು ಚಕ್ರಗಳ ಒಂದು ಅದ್ಭುತವಾದ ಶಿಲಾಕೃತಿಯನ್ನು ನೋಡಬಹುದು. ಈ ರಥವು ಸೂರ್ಯ ದೇವರು ಸ್ವರ್ಗದಲ್ಲಿ ವಿಹರಿಸುವಾಗ ಅವರ ವಾಹನದಂತೆ ಕಾರ್ಯನಿರ್ವಹಿಸುತ್ತಿರುವಂತೆ ಆಭಾಸ ಮೂಡಿಸುತ್ತದೆ. ಭವ್ಯವಾದ ಕಲ್ಪನೆ ಮತ್ತು ಆಯಾಮದಲ್ಲಿ ಈ ಸ್ಮಾರಕವು ಕೋನಾರ್ಕಿನ ಇತರ ಎಲ್ಲ ಸ್ಮಾರಕಗಳಿಗೆ ಹೋಲಿಸಿದಾಗ ನಿಜವಾಗಿಯೂ ಅತಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಇದೊಂದು ವಿಶ್ವ ಪಾರಂಪರಿಕ ತಾಣವೂ ಹೌದು.

ಚಿತ್ರಕೃಪೆ: Mukeshforest

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಸಿದ್ಧಿ ವಿನಾಯಕ ದೇವಸ್ಥಾನ : ಹಿಂದೂ ಪದ್ಧತಿಯಲ್ಲಿ ಪ್ರಮುಖ ದೆವರುಗಳಲ್ಲಿ ಒಬ್ಬನಾದ ಗಣೇಶನು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಾಗಿ ಪೂಜಿಸಲ್ಪಡುವ ದೇವ. ಅದರಲ್ಲೂ ವಿಶೇಷವಾಗಿ ಮುಂಬೈನ ಗಣೇಶೋತ್ಸವ ಇಡಿ ದೇಶದಲ್ಲೆ ಅಪಾರ ಖ್ಯಾತಿಗಳಿಸಿದೆ. ಅಲ್ಲದೆ ಗಣಪತಿಗೆ ಮುಡಿಪಾದ ಅನೇಕ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು. ಆದರೂ ಇಲ್ಲಿರುವ ಸಿದ್ಧಿ ವಿನಾಯಕನ ದೇವಾಲಯ ಮುಂಬೈ ನಗರದಲ್ಲೆ ಅತಿ ಹೆಚ್ಚು ಶ್ರೀಮಂತಿಕೆಯಿಂದ ಕೂಡಿರುವ ದೇವಾಲಯ. ಗಣ್ಯಾತಿಗಣ್ಯರು, ಚಿತ್ರತಾರೆಗಳೂ ಸಹ ಹೆಚ್ಚಾಗಿ ಭೇಟಿ ನೀಡುವ ದೇವಾಲಯ ಇದಾಗಿದೆ. ಕೆಲವೆ ಅಡಿ ವಿಸ್ತೀರ್ಣದಲ್ಲ್ ಕೇವಲ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದ್ದ ಈ ದೇವಾಲಯ ಇಂದು ಮುಂಬೈನ ಅತಿ ಪ್ರಮುಖ ಹಾಗೂ ಶ್ರೀಮಂತ ದೇವಾಲಯವಾಗಿ ಬೆಳೆದು ನಿಂತಿದೆ. ವಿಶೇಷ ಸಂದರ್ಭಗಳಲ್ಲಿ ಈ ವಿನಾಯಕನ ದರ್ಶನ ಮಾಡಲು ಇಡಿ ದಿನ ಸರತಿಯಲ್ಲಿ ನಿಂತು ಕಾಯಬೇಕು.

ಚಿತ್ರಕೃಪೆ: Darwininan

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಪಂಢರಪುರ ವಿಠ್ಠಲ ದೇವಸ್ಥಾನ : ಮಹಾರಾಷ್ಟ್ರದ ಶ್ರೀ ವಿಠೋಬ ನೆಲೆಸಿರುವ ತಾಣವೆ ಸೋಲಾಪುರ ಜಿಲ್ಲೆಯ ಪಂಢರಪುರ ಕ್ಷೇತ್ರ. ಭೀಮಾ ನದಿ ತೀರದಲ್ಲಿ ನೆಲೆಸಿರುವ ಈ ಶ್ರೀ ಕ್ಷೇತ್ರವು ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಆಶಾಡ ಮಾಸ (ಜೂನ್,ಜುಲೈ) ದ ಸಮಯದಲ್ಲಿ ಭಕ್ತ ಜನರ ಮಹಾಪೂರವೆ ಈ ಶ್ರೀ ಕ್ಷೇತ್ರಕ್ಕೆ ವಿಠಲನ ದರುಶನ ಕೋರಿ ಹರಿದು ಬರುತ್ತದೆ. ಸೋಲಾಪುರ ಪಟ್ಟಣದಿಂದ ಈ ಕ್ಷೇತ್ರವು ಕೇವಲ 25 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Parag Mahalley

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಶಿರಡಿ ಸಾಯಿಬಾಬಾ ದೇವಸ್ಥಾನ : "ಸಬಕಾ ಮಾಲಿಕ್ ಏಕ್" ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸುತ್ತ, ಮನುಷ್ಯರನ್ನು ಸನ್ಮಾರ್ಗ ಪಥದಲ್ಲಿ ಮುನ್ನಡೆಸುತ್ತ ಕೊನೆಗೆ ಸಮಾಧಿಯನ್ನು ಪಡೆದು ಅಲ್ಲಿಂದಲೂ ಕೂಡ ಕ್ರಿಯಾಶೀಲರಾಗಿ ಭಕ್ತರ ಸಕಲ ಕಷ್ಟಗಳನ್ನು ಅಲಿಸುತ್ತ ಪರಿಹರಿಸುತ್ತಿರುವ ಶ್ರೀ ಸದ್ಗುರು ಸಾಯಿನಾಥರು ನೆಲೆಸಿರುವ ಶ್ರೀಕ್ಷೇತ್ರವೆ ಶಿರಡಿ ಪಟ್ಟಣ. ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯು ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತದೆ. ಅಲ್ಲದೆ ಭಾರತದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿಯೂ ಶಿರಡಿಯ ಸಾಯಿ ದೇವಸ್ಥಾನವು ಒಂದಾಗಿದೆ.

ಚಿತ್ರಕೃಪೆ: Amolthefriend

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ತಿರುಮಲ ದೇವಸ್ಥಾನ : ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಧಾರ್ಮಿಕ ಕೇಂದ್ರ. ಇದು ವೆಂಕಟಾ ತಿರುಮಲ ಗುಡ್ಡದ ಏಳನೆ ತುದಿಯಲ್ಲಿದೆ. ಸ್ವಾಮಿ ಪುಷ್ಕರಣಿ ನದಿಯ ದಕ್ಷಿಣಕ್ಕಿದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ಇಲ್ಲಿ ಎಂಟು ಅಡಿ ಎತ್ತರವಾದ ದೇವ ವೆಂಕಟೇಶ್ವರನ ವಿಗ್ರಹವಿದ್ದು, ಚಿನ್ನದ ಲೇಪನವುಳ್ಳ ಡೋಮ್‌ ('ಆನಂದ ನಿಲಯ ದಿವ್ಯ ವಿಮಾನ' ಎಂದು ಕರೆಯಲಾಗುತ್ತದೆ) ನಿಂದ ಆವೃತವಾಗಿದೆ. ನಂಬಿಕೆಯ ಪ್ರಕಾರ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಭಕ್ತರು ವೆಂಕಟಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕಾಣಿಕೆ ಸಲ್ಲಿಸಬೇಕು.ಈ ಮನಮೋಹಕ ದೇವಸ್ಥಾನವು ಪ್ರಪಂಚದಲ್ಲೆ ಶ್ರೀಮಂತಮಯ ಮತ್ತು ಹೆಚ್ಚು ಪ್ರಖ್ಯಾತಿಯ ಯಾತ್ರಾ ಕ್ಷೇತ್ರಗಳಲ್ಲೊಂದಾಗಿದೆ.

ಚಿತ್ರಕೃಪೆ: Nikhilb239

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಮಂತ್ರಾಲಯ ದೇವಸ್ಥಾನ : ಸುಪ್ರಸಿದ್ಧ ಚಿತ್ರ ತಾರೆಯರಾದ ಡಾ. ರಾಜಕುಮಾರ್, ರಜನಿಕಾಂತ್, ನವರಸ ನಾಯಕ ಜಗ್ಗೇಶ್ ಮುಂತಾದವರ ಇಷ್ಟ ದೇವರಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪವಿತ್ರ ಶ್ರೀ ಕ್ಷೇತ್ರವೆ ಮಂತ್ರಾಲಯ. ಮಂಚಾಲೆ ಎಂತಲೂ ಕರೆಯಲ್ಪಡುವ ಮಂತ್ರಾಲಯವು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ತುಂಗಾ ನದಿ ತಟದ ಮೇಲೆ ನೆಲೆಸಿದೆ. ಗುರು ರಾಘವೇಂದ್ರರ ಬೃಂದಾವನವಿರುವ ಈ ಕ್ಷೇತ್ರವು ಪ್ರತಿ ವರ್ಷವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಶ್ರೀ ಗುರು ರಾಘವೇಂದ್ರರು ದ್ವೈತ ಪಂತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಅನುಯಾಯಿಯಾಗಿದ್ದು, ಅದರ ಪರಿಪಾಲಕರಾಗಿದ್ದರು.

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಪ್ರಶಾಂತಿ ನಿಲಯಂ, ಪುಟ್ಟ ಪರ್ತಿ : ಸರ್ವಧರ್ಮಪ್ರೀಯರಾಗಿ, ಶಾಂತಿ ದೂತರಾಗಿ, ಪವಿತ್ರ ಪ್ರೀತಿಯ ಗುರುವಾಗಿದ್ದ ಶ್ರಿ ಸತ್ಯ ಸಾಯಿ ನೆಲೆಸಿರುವ ಕ್ಷೇತ್ರವೆ ಪ್ರಶಾಂತಿನಿಲಯಂ. ಇದು ಸರ್ವ ಧರ್ಮದವರ ಪ್ರಾರ್ಥನಾಲಯವಾಗಿದೆ. ಧ್ಯಾನ ಕೇಂದ್ರವಾಗಿದೆ. ಲಕ್ಷಾನುಗಟ್ಟಲೆ ಸಾಯಿಯ ಭಕ್ತರು, ಅವರಿಂದ ಪ್ರಭಾವ ಹೊಂದಿದವರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಇದು ಅಪಾರ ಪ್ರಮಾಣದ ಭಕ್ತರ ಪಾಲಿಗೆ ಧಾರ್ಮಿಕ ಆಕರ್ಷಣೆಯ ಕೇಂದ್ರವಾಗಿದೆ. ಆಂಧ್ರ ಪ್ರದೇಶದ ಅನಂತಪುರದ ಪುಟ್ಟಪರ್ತಿ ಗ್ರಾಮದಲ್ಲಿ ಪ್ರಶಾಂತಿ ನಿಲಯಂ ಸ್ಥಿತವಿದೆ.

ಚಿತ್ರಕೃಪೆ: sathyasai.org

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಮೀನಾಕ್ಷಿ ಅಮ್ಮನವರ ದೇವಸ್ಥಾನ : ತಮಿಳುನಾಡಿನ ಮದುರೈ ಪಟ್ಟಣದಲ್ಲಿರುವ ಪಾರ್ವತಿ ದೇವಿಯ ಅವತಾರವಾದ ಮೀನಾಕ್ಷಿ ಅಮ್ಮನವರಿಗೆ ಮುಡಿಪಾದ ಮೀನಾಕ್ಷಿ ದೇವಸ್ಥಾನವು ಭಾರತದ ಪ್ರಖ್ಯಾತ ದೇವಾಲಯಗಳ ಪೈಕಿ ಒಂದಾಗಿದೆ. 15 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಈ ದೇಗುಲವು ಎಂಟು ಗೋಪುರಗಳು, ಎರಡು ವಿಮಾನಗಳನ್ನು ಹೊಂದಿದ್ದು, ಪೂರ್ವ ಪಶ್ಚಿಮವಾಗಿ 847 ಹಾಗೂ ಉತ್ತರ ದಕ್ಷಿಣವಾಗಿ 792 ಅಡಿಗಳಷ್ಟು ವಿಶಾಲವಾಗಿದೆ. ದೇವಾಲಯವು ಎಂಟು ಗೋಪುರ ಹಾಗೂ ಎರಡು ವಿಮಾನಗಳಿಂದ ಸುತ್ತುವರೆದಿದ್ದು ಅವುಗಳಲ್ಲಿ ಅತಿ ಎತ್ತರದ ಗೋಪುರವು 170 ಅಡಿಗಳಷ್ಟು ಎತ್ತರವಿದೆ. ಗೋಪುರಗಳ ಮನಸೆಳೆವ ಬಣ್ಣ ಬಣ್ಣದ ಕಲಾಕೃತಿಗಳನ್ನು ಕಾಣಬಹುದು.

ಚಿತ್ರಕೃಪೆ: Bernard Gagnon

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಬೃಹದೇಶ್ವರ ದೇವಸ್ಥಾನ : ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಪೈಕಿ ಒಂದಾಗಿ ನಿಲ್ಲುತ್ತದೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಈ ದೇವಸ್ಥಾನವು ಇರುವುದು ದೇವಾಲಯಗಳ ರಾಜ್ಯ ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿ. ಚೋಳ ಸಾಮ್ರಾಜ್ಯದ ದೊರೆ ಒಂದನೇಯ ರಾಜ ರಾಜ ಚೋಳನಿಂದ 1010 ರಲ್ಲಿ ನಿರ್ಮಿಸಲಾದ ಈ ದೇವಾಲಯ 2010 ಕ್ಕೆ ತನ್ನ ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದೆ. ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಸುಮಾರು 16 ನೇಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ. ದೇವಸ್ಥಾನದ ವಿಶೇಷತೆಯೆಂದರೆ ಇದರ ಕಳಶವನ್ನು ಒಂದೆ ಕಲ್ಲಿನಲ್ಲಿ ಕೆತ್ತಲಾಗಿದ್ದು 80 ಟನ್ ಗಳಷ್ಟು ಭಾರ ಹೊಂದಿದೆ. ಇದೊಂದು ಭೇಟಿ ನೀಡಲೇಬೇಕಾದ ದೇವಾಲಯವಾಗಿದೆ.

ಚಿತ್ರಕೃಪೆ: Raj

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ರಾಮೇಶ್ವರಂ ದೇವಸ್ಥಾನ : ಜ್ಯೋತಿರ್ಲಿಂಗ ತಾಣಗಳಲ್ಲಿ ಒಂದಾದ ತಮಿಳುನಾಡಿನ ತೀರ್ಥ ಕ್ಷೇತ್ರ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯವು ದೇಶದ ಪ್ರಮುಖ ದೇವಸ್ಥಾನಗಳ ಪೈಕಿ ಒಂದಾಗಿದೆ. ಈ ದೇವಸ್ಥಾನ ಶಿವನಿಗೆ ಮೀಸಲಾಗಿದ್ದು, ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನವು ಬಹಳ ಹಳೆಯ ಇತಿಹಾಸವನ್ನು ಹೊಂದಿದೆ ಆದರೆ ಇಂದಿನ ವಿನ್ಯಾಸವು ಸುಮಾರು 12 ನೇ ಶತಮಾನದಲ್ಲಿ ಪಾಂಡ್ಯ ರಾಜವಂಶದ ಆಡಳಿತಗಾರರ ಮೂಲಕ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ ಅದ್ಭುತವಾಗಿವೆ. ಆದರೆ, ದೇವಸ್ಥಾನದ ಭಕ್ತರು ಪ್ರತಿ ವರ್ಷ ಲಕ್ಷಾಂತರ ಪ್ರಮಾಣದಲ್ಲಿ ಭೇಟಿ ನೀಡಲು ಮುಖ್ಯ ಕಾರಣ ಹಿಂದೂ ಧರ್ಮದ ಧಾರ್ಮಿಕ ಪ್ರಾಮುಖ್ಯತೆಯ ಕಾರಣದಿಂದ.

ಚಿತ್ರಕೃಪೆ: Ryan

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಪಳನಿ ಮುರುಗ ದೇವಸ್ಥಾನ : ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯ ಪಳನಿಯಲ್ಲಿರುವ ಮುರುಗನ (ಸುಬ್ರಹ್ಮಣ್ಯ) ದೇವಸ್ಥಾನವು ಬಹಳ ಪ್ರಸಿದ್ಧಿ ಪಡೆದ ದೇವಸ್ಥಾನವಾಗಿದೆ. ಬೆಟ್ಟದ ಮೇಲೆ ನೆಲೆಸಿರುವ ಈ ದೇವಾಲಯವು ಪಳನಿಯ ಪ್ರಮುಖ ಧಾರ್ಮಿಕ ಆಕರ್ಷಣೆಯ ಕೇಂದ್ರವಾಗಿದೆ. ಈ ಬೆಟ್ಟಕ್ಕೆ ಬರೋಬ್ಬರಿ 600 ಮೆಟ್ಟಿಲುಗಳಿದ್ದು ಅವುಗಳನ್ನೇರಿ ದೇವಾಲಯ ತಲುಪಬಹುದು. ಇದು ಕಷ್ಟಕರವೆನಿಸಿದರೆ ಕೇಬಲ್ ಕಾರಿನ ಮೂಲಕವು ಈ ದೇವಾಲಯ ತಲುಪಬಹುದಾಗಿದೆ. ಪಳನಿ ಬೆಟ್ಟದ ಮೇಲಿರುವ ಮುರುಗನ ದೇವಸ್ಥಾನ.

ಚಿತ್ರಕೃಪೆ: Noblevmy

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಶ್ರೀರಂಗಂ ದೇವಸ್ಥಾನ : ಶ್ರೀರಂಗಂ - ಮನಸೂರೆಗೊಳ್ಳುವ ಆಕರ್ಷಕ ದ್ವೀಪವಾಗಿದ್ದು ತಮಿಳುನಾಡು ರಾಜ್ಯದ ತಿರುಚಿರಾಪಳ್ಳಿಯಲ್ಲಿದೆ. ಎರಡು ಪ್ರಸಿದ್ದ ನದಿಗಳಾದ ಕಾವೇರಿ ಮತ್ತು ಕೊಲ್ಲಿಡಂ(ಕಾವೇರಿ ನದಿಯ ಕವಲು) ನಡುವಿನಲ್ಲಿದೆ ಈ ತಾಣ. ಶ್ರೀರಂಗಂನಲ್ಲಿ ಶಿವ ಮತ್ತು ವಿಷ್ಣುವಿನ ಹಲವು ದೇವಸ್ಥಾನಗಳಿರುವುದರಿಂದ ಹಿಂದೂ ಯಾತ್ರಾರ್ಥಿಗಳಿಗೆ ಇದು ಪುಣ್ಯಕ್ಷೇತ್ರ. ಅದರಲ್ಲೂ, ಶ್ರೀರಂಗಂನಲ್ಲಿ ವಿಷ್ಣುವನ್ನು ಪೂಜಿಸುವ ವೈಷ್ಣವರು ಬಹಳ ಸಂಖ್ಯೆಯಲ್ಲಿದ್ದಾರೆ.ಇಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲೊಂದು ಶ್ರೀ ರಂಗನಾಥಸ್ವಾಮಿ ದೇವಸ್ಥಾನ. ವಿಷ್ಣುವಿನ ಕೃಪೆಗೆ ಪಾತ್ರರಾಗಲು ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಡಿ ಪ್ರಪಂಚದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ದೊಡ್ಡ ಹಿಂದೂ ದೇವಾಲಯ ಇದೆಂದು ನಂಬಲಾಗಿದೆ.

ಚಿತ್ರಕೃಪೆ: Ilasun

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಕನ್ಯಾಕುಮಾರಿ ದೇವಸ್ಥಾನ : ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡು ರಾಜ್ಯದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಸ್ಥಿತವಿದೆ. ಇಲ್ಲಿನ ಸಮುದ್ರ ತೀರದಲ್ಲಿರುವ ಕುಮಾರಿ ಅಮ್ಮನ ದೇವಸ್ಥಾನ ಅಥವಾ ಕನ್ಯಾಕುಮಾರಿಯ ದೇವಸ್ಥಾನ ದೇಶದ ಪ್ರಮುಖ ದೇವಸ್ಥಾನಗಲ ಪೈಕಿ ಒಂದಾಗಿದೆ. ಕಥೆಯ ಪ್ರಕಾರ, ಶಿವ ಮತ್ತು ಕನ್ಯಾಕುಮಾರಿಯ ಮದುವೆ ನಡೆಯದ ಕಾರಣ ಕನ್ಯಾಕುಮಾರಿಯು ಕನ್ಯೆಯಾಗಿಯೇ ಇರಲು ತೀರ್ಮಾನಿಸಿದಳು. ಮದುವೆಯ ಔತಣಕೂಟಕ್ಕೆಂದು ತರಲಾಗಿದ್ದ ದವಸ ಧಾನ್ಯಗಳೆಲ್ಲವು ಹಾಗೆ ಉಳಿದಿದ್ದರಿಂದ ಕಲ್ಲುಗಳಾಗಿ ಪರಿವರ್ತಿತವಾದವು ಎಂದು ಹೇಳಲಾಗುತ್ತದೆ. ಇಂದು ಪ್ರವಾಸಿಗರು, ನಡೆಯದೆ ಇರುವ ಆ ಮದುವೆಯ ಸ್ಮರಣಾರ್ಥವಾಗಿ ದವಸ ಧಾನ್ಯಗಳ ರೂಪದಲ್ಲೆ ಸಿಗುವ ಕಲ್ಲುಗಳನ್ನು ಇಲ್ಲಿ ಕೊಂಡುಕೊಳ್ಳಬಹುದು.

ಚಿತ್ರಕೃಪೆ: Varun Bhuvanendran

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಶಬರಿ ಮಲೆ ಅಯ್ಯಪ್ಪ ದೇವಸ್ಥಾನ : ಸ್ವಾಮಿ ಅಯ್ಯಪ್ಪನಿಗೆ ಸಮರ್ಪಿತವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವು ಕೇರಳದಲ್ಲಿ ಕಂಡುಬರುವ ಶಾಸ್ತ ದೇವಾಲಯಗಳ ಪೈಕಿ ಬಹು ಪ್ರಮುಖವಾದ ದೇವಾಲಯವಾಗಿದೆ. ಇದೊಂದು ಪವಿತ್ರವಾದ ವಾರ್ಷಿಕ ಹಿಂದು ಯಾತ್ರಾ ಕ್ಷೇತ್ರವಾಗಿದ್ದು ಜಗತ್ತಿನ ಅತಿ ದೊಡ್ಡ ಯಾತ್ರಾಕ್ಷೇತ್ರಗಳ ಪೈಕಿ ಒಂದಾಗಿದೆ. ಅಯ್ಯಪ್ಪನ ಈ ಪವಿತ್ರ ದೇವಾಲಯವು ಕೇರಳ ರಾಜ್ಯದ ಪಥನಾಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತ್ತಿನ ಶಬರಿ ಬೆಟ್ಟ (ಮಲೈ)ದ ತುದಿಯಲ್ಲಿ ನೆಲೆಸಿದೆ. ವರ್ಷಕ್ಕೊಮ್ಮೆ ಅಂದರೆ ನವಂಬರ್ ನಿಂದ ಹಿಡಿದು ಜನವರಿಯವರೆಗೆ ಲಕ್ಷಾಂತರ ಭಕ್ತಾದಿಗಳು ಈ ಪವಿತ್ರ ದೇವಾಲಯಕ್ಕೆ ಯಾತ್ರೆಗೆಂದು ತೆರಳುತ್ತಾರೆ.

ಚಿತ್ರಕೃಪೆ: Tonynirappathu

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಅನಂತ ಪದ್ಮನಾಭ ದೇವಸ್ಥಾನ : ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂ ನಗರ ಕೇಂದ್ರದ ಹೃದಯ ಭಾಗದಲ್ಲಿ ಸ್ಥಿತವಿರುವ ಶ್ರ್ ಅನಂತ ಪದ್ಮನಾಭಸ್ವಾಮಿಯ ದೇವಾಲಯವು ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿ ಮಂಚೂಣಿಯಲ್ಲಿರುವ ದೇವಸ್ಥಾನವಾಗಿದೆ. ಭಾರತದಲ್ಲಿ ನೋಡಲೇಬೇಕಾದ ಶ್ರೀಮಂತ, ಪ್ರಸಿದ್ಧ ದೇವಸ್ಥಾನಗಳ ಪೈಕಿ ವಿಷ್ಣು ದೇವರಿಗೆ ಮುಡಿಪಾದ ಈ ದೇವಾಲಯವೂ ಸಹ ಒಂದು. ಪದ್ಮನಾಭ ಸ್ವಾಮಿ ದೇವಾಲಯವು 12,000 ಸಾಲಿಗ್ರಾಮಗಳಿಂದ ಮಾಡಲ್ಪಟ್ಟಿದೆ ಹಾಗೂ ಈ ದೇವಾಲಯದಲ್ಲಿ 90,000 ಕೋಟಿ ಬೆಲೆ ಬಾಳುವ ಚಿನ್ನದ ವಿಗ್ರಹಗಳು, ಬಂಗಾರ , ಪ್ರಾಚೀನ ಬೆಳ್ಳಿ, ವಜ್ರ ವೈಢೂರ್ಯಗಳು, ಮುತ್ತು ರತ್ನದ ಹರಳುಗಳು ಇವೆ. ಇಲ್ಲಿ ಎರಡು ಚಿನ್ನದ ತೆಂಗಿನ ಕಾಯಿಗಳಿದ್ದು ಅದರಲ್ಲಿ ಬೆಲೆಬಾಳುವ ಹರಳುಗಳೂ ಇವೆ.

ಚಿತ್ರಕೃಪೆ: Ebin Sam

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಶ್ರವಣಬೆಳಗೋಳ : ಜೈನ ಧರ್ಮಿಯರಿಗೆ ಪವಿತ್ರ ತೀರ್ಥ ಕ್ಷೇತ್ರವಾಗಿ ಕಾರ್ಯನಿರ್ವಹಿಸುತ್ತದೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೋಳ. ಅದ್ಭುತ ಪ್ರವಾಸಿ ಆಕರ್ಷಣೆಯೂ ಸಹ ಆಗಿರುವ ಈ ದೇವಾಲಯ ಕ್ಷೇತ್ರವು 58 ಅಡಿಗಳಷ್ಟು ಎತ್ತರದ, ಏಕ ಶಿಲೆಯಲ್ಲಿ ಕೆತ್ತಲಾದ, ಕರ್ನಾಟಕದಲ್ಲೆ ಅತಿ ಎತ್ತರದ ಗೊಮ್ಮಟ ಮೂರ್ತಿಯನ್ನು ಒಳಗೊಂಡಿದೆ. ಇಲ್ಲಿರುವ ವಿಂಧ್ಯಗಿರಿ ಬೆಟ್ಟದ ಮೇಲೆ ಈ ದೇವಾಲಯ ಕ್ಷೇತ್ರ ಹಾಗೂ ಗೊಮ್ಮಟ ಮೂರ್ತಿಯಿದ್ದು ಮೆಟ್ಟಿಲುಗಳ ಮೂಲಕ ಹತ್ತಿ ತಲುಪಬಹುದಾಗಿದೆ.

ಚಿತ್ರಕೃಪೆ: romana klee

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಬೇಲೂರು ಚೆನ್ನಕೇಶವ ದೇವಸ್ಥಾನ : ಹಾಸನ ಜಿಲ್ಲೆಯಲ್ಲಿರುವ ಬೇಲೂರು ಹಾಗೂ ಹಳೆಬೀಡು ಕರ್ನಾಟಕದ ಶಿಲ್ಪ ಕಲೆಗಳ ತವರೆಂದೆ ಪ್ರಸಿದ್ಧಿ ಪಡೆದಿವೆ, ಕಾರಣ ಇಲ್ಲಿನ ದೇವಾಲಯಗಳಲ್ಲಿ ಕಂಡುಬರುವ ಅಮೋಘವಾದ ಶಿಲ್ಪಕಲೆಗಳ ಕೆತ್ತನೆ. ಅದರಲ್ಲೂ ವಿಶೇಷವಾಗಿ ಬೇಲೂರಿನ ಚೆನ್ನಕೇಶವನ ದೇವಸ್ಥಾನವು ತನ್ನ ಅತ್ಯಂತ ವೈಭವದಿಂದ ಕೂಡಿದ ಶಿಲ್ಪ ಕಲೆಯಿಂದ ದೇಶದ ಪ್ರಮುಖ ದೇವಸ್ಥಾನಗಳ ಪೈಕಿ ಒಂದಾಗಿದೆ. ಇತಿಹಾಸ ಪ್ರೀಯರಾದಿಯಾಗಿ ಸಾಕಷ್ಟು ವಿದೇಶಿಗರೂ ಸಹ ಈ ಅದ್ಭುತ ಕಲಾತ್ಮಕತೆಯಿಂದ ಕೂಡಿದ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Arian Zwegers

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಮುರುಡೇಶ್ವರ ದೇವಸ್ಥಾನ : ಸಮೃದ್ಧವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಶಿವನ ಮೂರ್ತಿಯಿರುವ ಸ್ಥಳ ಮುರುಡೇಶ್ವರ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಸ್ಥಳವು ರಾಮಾಯಣದ ಮೂಲ ಹೊಂದಿದ್ದು, ಸಮುದ್ರದ ಹಿಮ್ಮುಖವಾಗಿಹ ಧ್ಯಾನಾವಸ್ಥೆಯಲ್ಲಿರುವ ಶಿವನ ಬೃಹತ್ ಮೂರ್ತಿಗೆ ಪ್ರಸಿದ್ಧವಾಗಿದೆ. ಕಂಡುಕಗಿರಿ ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ಎಲ್ಲ ಪ್ರವಾಸಿಗರೂ ನೋಡಲೆ ಬೇಕಾದ ದೇವಾಲಯ ಇದಾಗಿದೆ.

ಚಿತ್ರಕೃಪೆ: ramesh Iyanswamy

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿ ಒಮ್ದಾಗಿದೆ. ನಾಗಗಳ ಅಧಿ ದೇವತೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಮುಡಿಪಾಗಿರುವ ಈ ದೇವಸ್ಥಾನವು ಸರ್ಪ ದೋಷ ನಿವಾರಣಾ ಕೇಂದ್ರವಾಗಿ ದೇಶದಲ್ಲೆ ಸುಪ್ರಸಿದ್ಧಿಯನ್ನು ಪಡೆದಿದೆ.

ಚಿತ್ರಕೃಪೆ: karthick siva

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ : ದೇಶದ ಎಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ತನ್ನತ್ತ ವಿಶೇಷವಾಗಿ ಆಕರ್ಷಿಸುವ ಕೊಲ್ಲೂರು ಕರ್ನಾಟಕದಲ್ಲಿನ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ. ಇಲ್ಲಿರುವ ಮೂಕಾಂಬಿಕಾ ದೇವಾಲಯವು ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅತಿ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಹೀಗಾಗಿ ಭಾರತದಲ್ಲಿ ಭೇಟಿ ಮಾಡಬಹುದಾದ ಪ್ರಮುಖ ದೇವಸ್ಥಾನಗಳ ಪೈಕಿ ಮೂಕಾಂಬಿಕಾ ದೇವಸ್ಥಾನವೂ ಸಹ ಒಂದು.

ಚಿತ್ರಕೃಪೆ: syam

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಭಾರತದ ಪ್ರಸಿದ್ಧ ದೇವಸ್ಥಾನಗಳು:

ಶ್ರೀಕೃಷ್ಣ ದೇವಸ್ಥಾನ, ಉಡುಪಿ : ಕರ್ನಾಟಕದಲ್ಲಿರುವ ಉಡುಪಿ ಪಟ್ಟಣವು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಆಕರ್ಷಣೆಯ ಕೇಂದ್ರ. ಇಲ್ಲಿರುವ ಕೃಷ್ಣ ಮಠವು ದೇಶದಲ್ಲೆ ಜನಪ್ರೀಯ.

ಚಿತ್ರಕೃಪೆ: Ashok Prabhakaran

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X