Search
  • Follow NativePlanet
Share
» »ಬೆಂಗಳೂರಿನ ಸುಂದರ ಪಂಚಮುಖ ಗಣಪತಿ!

ಬೆಂಗಳೂರಿನ ಸುಂದರ ಪಂಚಮುಖ ಗಣಪತಿ!

By Vijay

ಪಂಚಮುಖಿ ಆಂಜನೇಯನೆಂದು ಕೇಳಿರಬಹುದು, ಆದರೆ ಏನಿದು ಪಂಚಗಣಪತಿ ಎಂದನಿಸಬಹುದಲ್ಲವೆ? ಹೌದು, ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಗಣಪತಿ ಎಂದು ಕರೆಯಲ್ಪಡುತ್ತಾನೆ.

ಬೆಂಗಳೂರಿನಲ್ಲಿರುವ ಕೆಲವು ಪುರಾತನ ದೇವಾಲಯಗಳು

ದೂರದಿಂದೆಯೆ ಈ ಗಣಪನ ದೇವಾಲಯವು ಸಾಕಷ್ಟು ಆಕರ್ಷಕವಾಗಿ ಕಂಡುಬರುತ್ತದೆ. ಸುವರ್ಣ ಬಣ್ಣ ಲೇಪಿತ ಐದು ಶರೀರವುಳ್ಳ ಈ ಗಣೇಶನು ದೇವಾಲಯದ ಗೋಪುರವಾಗಿಯೆ ಫಳ ಫಳನೆ ಹೊಳೆಯುತ್ತ ಎಲ್ಲರ ಗಮನ ತನ್ನೆಡೆ ಸೆಳೆಯುತ್ತಾನೆ.

ಈ ದೇವಾಲಯ ಸ್ಥಿತವಿರುವ ಪ್ರದೇಶದ ಅಕ್ಕ ಪಕ್ಕಗಳಲ್ಲಿರುವ ರಸ್ತೆಗಳಲ್ಲಿ ಸಾಗುವಾಗ ಯಾರಿಗಾದರೂ ಸರಿ ಒಂದು ಕ್ಷಣ ಕುತೂಹಲ ಹುಟ್ಟಿಸುವಂತೆ ಮಾಡುತ್ತದೆ ಈ ದೇವಾಲಯ ಹಾಗೂ ಇದು ವಿಶಿಷ್ಟವಾಗಿ ನಿರ್ಮಿಸಲ್ಪಟ್ಟಿರುವ ಪರಿ. ಕರ್ನಾಟಕದ ರಾಜಧಾನಿ ನಗರ ಬೆಂಗಳೂರಿನಲ್ಲಿಯೆ ಈ ಸುಂದರ ದೇವಾಲಯವಿದ್ದು ಭಕ್ತರ ಹಾಗೂ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ.

ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಚಿತ್ರಕೃಪೆ: Akshatha Vinayak

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಬೆಂಗಳೂರಿನ ಕೆಂಗೇರಿ ಬಳಿ ಸ್ಥಿತವಿರುವ ಈ ಪಂಚಮುಖ ಹಾಗೂ ಪಂಚ ಶರೀರವುಳ್ಳ ದೇವಾಲಯವು ಕೆಂಗೇರಿ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಮೈಸೂರಿನೆಡೆ ಸಾಗುವ ರಸ್ತೆಯಲ್ಲಿ ಸಾಗುವಾಗ ದೊರೆಯುತ್ತದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ನೈಸ್ ರಸ್ತೆಯ ಬಳಿ ಕೆಂಗೇರಿಯಿಂದ ಮೈಸೂರಿನೆಡೆ ಸಾಗುವಾಗ ಎಡಗಡೆಗೆ ದೊಡ್ಡದಾದ ಸ್ವಾಗತ ಕಮಾನೊಂದಿದ್ದು ಅದೆ ನಿಮಗೆ ಪಂಚಮುಖ ಗಣೇಶನ ದೇವಾಲಯಕ್ಕೆ ಸ್ವಾಗತ ಕೋರುತ್ತದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಪಂಚಮುಖ ದೇವಾಲಯದ ವಿನ್ಯಾಸವೆ ವಿಶಿಷ್ಟವಾಗಿದ್ದು ಇದನ್ನು ನೀವು ನೋಡಿದಾಗಲೆ ತಿಳಿಯುತ್ತದೆ. ಈ ವಿನ್ಯಾಸಕ್ಕೆ ವಿಶೇಷವಾದ ಅರ್ಥವೂ ಇದೆ. ಆ ಪ್ರಕಾರವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಇಲ್ಲಿ ವಿಘ್ನೇಶ್ವರನನ್ನು ಹರಸಿಕೊಂಡು ಬರುವವರ ಬಯಕೆಗಳು ಶೀಘ್ರದಲ್ಲಿ ಈಡೇರಿಸಲ್ಪಡುವಂತೆ ಈ ವಿನ್ಯಾಸ ಸಹಕಾರಿಯಾಗಿದೆ ಎಂದು ನಂಬಲಾಗುತ್ತದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಮೇರು ಯಂತ್ರ ಶ್ರೀಚಕ್ರವು ಒಂದು ದಿವ್ಯ ಶಕ್ತಿಯ ತೇಜಸ್ಸಾಗಿದ್ದು ಧನಾತ್ಮಕತೆಯ ಕಂಪನಗಳನ್ನು ಪಸರಿಸುತ್ತದೆ. ಮೇರು ಚಕ್ರವು ಜಗತ್ತಿನ ಧನಾತ್ಮಕ ಶಕ್ತಿಯನ್ನು ಪ್ರತಿನಿಧಿಸುವ ವಿನ್ಯಾಸವಾಗಿದ್ದು ಪಿರಮಿಡ್ ಆಕಾರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಒಂದು ಶಕ್ತಿ ಕೇಂದ್ರವೆಂದೆ ಹೇಳಬಹುದು. ಸಾಂದರ್ಭಿಕ.

ಚಿತ್ರಕೃಪೆ: Ranjithsiji

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಸಾಮಾನ್ಯವಾಗಿ ಸನಾತನ ಧರ್ಮದಲ್ಲಿ, ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವಂತೆ ಶ್ರೀಚಕ್ರಗಳು ಒಂದೆಡೆ ಶಕ್ತಿಯು ಕ್ರೋಢೀಕರಣಗೊಳ್ಳುವ ಕೇಂದ್ರಗಳು ಅಥವಾ ವಿನ್ಯಾಸಗಳು. ಇವು ಇದ್ದೆಡೆ ಶಕ್ತಿಯ ಪ್ರವಾಹವಿರುತ್ತದೆ. ಹಾಗಾಗಿ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀಚಕ್ರಗಳನ್ನು ಸ್ಥಾಪಿಸಲಾಗಿರುವುದನ್ನು ನೋಡಬಹುದು.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಅದೆ ರೀತಿಯಾಗಿ ಮೇರು ಚಕ್ರವು ಒಂದು ವಿಶೇಷವಾದ ವಿನ್ಯಾಸವಾಗಿದ್ದು ಚೂಪಾದ ಪರ್ವತದ ಹಾಗೆ ಇದು ಕಂಡುಬರುತ್ತದೆ. ಇದೆ ವಿನ್ಯಾಸದಲ್ಲಿ ಈ ದೇವಾಲಯವನ್ನು ರಚಿಸಲಾಗಿರುವುದರಿಂದ ಈ ಗಣಪತಿ ದೇವಾಲಯವು ವಿಶೇಷ ಅನಿಸಿಕೊಂಡಿದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಅಲ್ಲದೆ ದೇವಾಲಯ ನಿರ್ಮಿತವಾದ ಪ್ರದೇಶ ಬೆಂಗಳೂರಿನ ಸದ್ದು ಗದ್ದಲಿನ ಪ್ರದೇಶದಿಂದ ಸಾಕಷ್ಟು ದೂರವಿದ್ದು ಒಂದು ಪ್ರಶಾಂತಮಯವಾದ ವಾತಾವರಣದಲ್ಲಿ ಸ್ಥಿತವಿರುವುದರಿಂದ ಬೆಂಗಳೂರಿಗರಿಗೆ ಈ ದೇವಾಲಯ ಭೇಟಿ ಸಾಕಷ್ಟು ಸಂತಸ ಹಾಗೂ ನೆಮ್ಮದಿ ನೀಡಬಲ್ಲುದು.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಮೇರು ವಿನ್ಯಾಸದಲ್ಲಿ ದೇವಾಲಯವು ರಚಿತವಾಗಿರುವುದರಿಂದ ಇದನ್ನು ಮಹಾಮೇರು ಗಣೇಶ ದೇವಾಲಯ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇಲ್ಲಿ ಗುರುಗಳ ಆಶ್ರಮವೂ ಸಹ ಇದ್ದು ಆಗಾಗ ಭಜನೆಗಳು ಹಾಗೂ ಪ್ರವಚಾನದಿಗಳು ನಡೆಯುತ್ತಿರುತ್ತವೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಭವ್ಯವಾದ ಹಾಗೂ ಆಕರ್ಷಕವಾಗಿ ನಿರ್ಮಿಸಲಾದ ಅಂಗಳವು ನಿಮ್ಮ ಮೈಮನಗಳನ್ನು ಪುಳಕಿತಗೊಳಿಸುತ್ತದೆ. ಸುಂದರವಾದ ಕೊಳ, ಸ್ವಚ್ಛವಾಗಿ ನಿರ್ವಹಿಸಲಾದ ಪಾದಚಾರಿ ಮಾರ್ಗಗಳು ಮನಸಿಗೆ ಮುದ ನೀಡುತ್ತವೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಇನ್ನೂ ದೇವಾಲಯದ ಮುಖ್ಯ ಆವರಣದಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಲಾದ ಪಂಚಮುಖ ಗಣಪನನ್ನು ದರ್ಶಿಸಬಹುದು. ಈ ಗಣಪನ ನಾಲ್ಕು ಮುಖಗಳು ನಾಲ್ಕು ದಿಕ್ಕುಗಳನ್ನು ಸೂಚಿಸಿದರೆ ಐದನೇಯ ಮುಖವು ಆ ನಾಲ್ಕೂ ಮುಖಗಳ ಮೇಲೆ ಸ್ಥಿತವಾಗಿದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ದೇವಾಲಯದ ಅರ್ಚಕರು ಹೇಳುವಂತೆ, ಎಲ್ಲ ದಿಕ್ಕುಗಳಲ್ಲಿಯೂ ಗಣೇಶನ ದರ್ಶನವಾಗಿ ಆ ಎಲ್ಲ ದಿಕ್ಕುಗಳಲ್ಲಿರುವ ಎಲ್ಲರಿಗೂ ಎಲ್ಲ ರೀತಿಯ ಅನುಕೂಲಗಳು ಉಂಟಾಗಲಿ ಎಂಬುದಾಗಿದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಇನ್ನೊಂದು ವಿಶೇಷವೆಂದರೆ ಪಂಚಗಣಪನ ಸುತ್ತಲೂ ಹಲವಾರು ರೂಪಗಳ ಗಣೇಶನ ಪ್ರತಿಮೆಗಳನ್ನು ಕಾಣಬಹುದಾಗಿದೆ. ಇದೇನು ಇಷ್ಟೊಂದು ಗಣಪತಿಗಳು ಎಂದೊಮ್ಮೆ ಆಶ್ಚರ್ಯವಾಗಬಹುದು. ಆದರೆ ಇಲ್ಲಿ ಒಟ್ಟು 32 ಗಣೇಶನ ಪ್ರತಿಮೆಗಳಿದ್ದು ಅವು ಗಣೇಶನ 32 ವಿವಿಧ ಅವತಾರಗಳನ್ನು ರೂಪಗಳನ್ನು ಪ್ರತಿನಿಧಿಸುತ್ತವೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಗಣೇಶನ ವಾಹನ ಹಾಗೂ ಪ್ರೀತಿಯ ಗೆಳೆಯ ಮೂಷಕ ಅಂದರೆ ಇಲಿಯನ್ನೂ ಸಹ ಬಹು ಆಕರ್ಷಕವಾಗಿ ಇಲ್ಲಿ ಕೆತ್ತಲಾಗಿದೆ.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ದೇವಾಲಯದ ವಿಶಾಲವಾದ ಪ್ರಾಂಗಣದಲ್ಲಿ ನೀರಿನ ಕೊಳಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಆಕರ್ಷಕ ಮೀನುಗಳನ್ನು ಕಾಣಬಹುದು.

ಮಹಾಮೇರು ಪಂಚಗಣಪತಿ:

ಮಹಾಮೇರು ಪಂಚಗಣಪತಿ:

ಪ್ರತಿ ವರ್ಷ ಜುಲೈ-ಅಗಸ್ಟ್ ಸಮ್ದರ್ಭದಲ್ಲಿ ಬರುವ ಗುರು ಪೂರ್ಣಿಮೆ ಹಾಗೂ ದೇವಾಲಯ ವಾರ್ಷಿಕ ಉತ್ಸವವನ್ನು ಒಟ್ಟಾರೆಯಾಗಿ ಬಲು ಅದ್ದೂರಿಯಿಂದ ಇಲ್ಲಿ ಆಚರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಸಾಕಷ್ಟು ಸುಂದರವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X