Search
  • Follow NativePlanet
Share
» »ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

By Vijay

ಗಿರಿಧಾಮಗಳಿಗೆ ಹೊರಡುವುದೆಂದರೆ ಎಂದಿದ್ದರೂ ಎಲ್ಲರಿಗೂ ಫೆವರೆಟ್. ಅದರಲ್ಲೂ ಬೇಸಿಗೆಯ ಸುಡು ಬಿಸಿಲಿಗೆ ಬಳಲಿ ಬೆಂಡಾಗಿರುವ ಮನುಷ್ಯನಿಗೆ ಕೊಂಚ ಸಮಯ ಮಾಡಿ ಕೊಂಡು ಹಿಲ್ಲ್ ಸ್ಟೇಷನ್ ಗಳಿಗೆ ಕುಟುಂಬ ಸಮೇತ ಪ್ರವಾಸ ಹೊರಡುವುದೆಂದರೆ ಆಗುವ ಆನಂದ ಅಷ್ಟಿಷ್ಟಲ್ಲ. ಇದಕ್ಕೆ ಇಂಬು ನೀಡುವಂತೆ ನಮ್ಮ ನಾಡಿನಲ್ಲೂ ಇರುವ ಗಿರಿಧಾಮಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಅದರಲ್ಲೂ ಸಾಕಷ್ಟು ಗಿರಿಧಾಮಗಳು ಅತಿ ಪ್ರಸಿದ್ಧವಾಗಿದ್ದು ಪ್ರವಾಸಿಗರಲ್ಲಿ ಜನಪ್ರಿಯವಾಗಿವೆ.

ಇಂತಹ ಗಿರಿಧಾಮ ಪ್ರದೇಶಗಳಿಗೆ ಪ್ರವಾಸ ಹೊರಡುವವರು ಸಾಮಾನ್ಯವಾಗಿ ಅತಿ ಹೆಸರುವಾಸಿಯಾದ ಅಥವಾ ಜನಪ್ರಿಯವಾದ ಗಿರಿಧಾಮಗಳನ್ನೆ ಆಯ್ದುಕೊಳ್ಳುವುದು ಸಾಮಾನ್ಯ. ಆದರೆ ತಿಳಿದುಕೊಳ್ಳಬೇಕಾದ ಒಂದು ವಿಷಯವೆಂದರೆ ನಮ್ಮ ಭಾರತದಲ್ಲಿ ಸೌಂದರ್ಯದ ಅಪಾರವಾದ ಖಜಾನೆಯನ್ನೆ ಹೊಂದಿರುವ ಆದರೆ ಅಷ್ಟೊಂದಾಗಿ ಗುರುತಿಸಲ್ಪಡದ ಅಥವಾ ಕೇಳರಿಯದ ಹಲವಾರು ಗಿರಿಧಾಮಗಳು ಉತ್ತರ ಹಾಗೂ ದಕ್ಷಿಣ ಭಾರತಗಳೆರಡರಲ್ಲೂ ಕಂಡುಬರುತ್ತದೆ.

ಪ್ರಸ್ತುತ ಲೇಖನವು ಉತ್ತರ ಭಾರತದಲ್ಲಿರುವ, ನೀವು ಅಷ್ಟೊಂದಾಗಿ ಕೇಳರಿಯದ ಕೆಲ ವಿಶಿಷ್ಟ ಗಿರಿಧಾಮಗಳನ್ನು ಕುರಿತು ಪರಿಚಯಿಸುತ್ತದೆ. ನೀವು ಗಿರಿಧಾಮ ಪ್ರವಾಸಿ ಪ್ರಿಯರಾಗಿದ್ದರೆ ಸಮಯ ಸಿಕ್ಕಿದಾಗಲೆಲ್ಲ ಈ ಎಲ್ಲ ಗಿರಿಧಾಮ ಪ್ರದೇಶಗಳಿಗೆ ಭೇಟಿ ನೀಡಿ, ಆಗ ನಿಮಗೆ ಭಾರತದ ಸೌಂದರ್ಯ ಕುರಿತು ಹೆಮ್ಮೆ ಹಾಗೂ ಆನಂದಗಳೆರಡೂ ಆಗುವುದರಲ್ಲಿ ಯಾವುದೆ ಸಂಶಯವಿಲ್ಲ.

ಝಿರೊ:

ಝಿರೊ:

ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಲೋವರ್ ಸುಬಾನ್ಸಿರಿ ಜಿಲ್ಲೆಯಲ್ಲಿರುವ ಝಿರೊ ಒಂದು ಚಿಕ್ಕ ಹಾಗೂ ಅಷ್ಟೆ ಪ್ರಭಾವಿಯಾದ ಗಿರಿಧಾಮ ಪಟ್ಟಣ. ಕಳೆದ ಕೆಲ ವರ್ಷಗಳಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಕ್ಕೆ ಅತಿ ನೆಚ್ಚಿನ ಪಟ್ಟಣವಾಗಿ ತನ್ನ ಸ್ಥಾನ ಇದು ಕಾಯ್ದುಕೊಂಡಿದೆ. ರಾಜ್ಯದ ರಾಜಧಾನಿ ಇಟಾ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿ ಈ ಗಿರಿಧಾಮವಿದೆ.

ಚಿತ್ರಕೃಪೆ: MUKESH JAIN

ತವಾಂಗ್:

ತವಾಂಗ್:

ಅರುಣಾಚಲ ಪ್ರದೇಶದ ತವಾಂಗ್ ಮತ್ತೊಂದು ಸುಂದರವಾದ ಗಿರಿಧಾಮ ಪಟ್ಟಣ. ದಕ್ಷಿಣ ಟಿಬೆಟ್ ನ ಭಾಗ ಇದೆಂದು ಚೀನಾ ದೇಶದಿಂದ ಒತ್ತಾಸಲ್ಪಡುತ್ತಿದ್ದರೂ ಇದು ಭಾರತದ ಅವಿಭಾಜ್ಯ ಅಂಗವಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 10000 ಅಡಿಗಳಷ್ಟು ಎತ್ತರದಲ್ಲಿ ಸುಂದರವಾಗಿ ನೆಲೆಸಿದೆ. ಪ್ರದೇಶದ ಸೌಂದರ್ಯವು ನೋಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: rajkumar1220

ಚಿರಿಮಿರಿ:

ಚಿರಿಮಿರಿ:

ಛತ್ತೀಸಗಡ್ ರಜ್ಯದ ಕೊರಿಯಾ ಜಿಲ್ಲೆಯ ಚಿರಿಮಿರಿ ಒಂದು ಗಿರಿಧಾಮ ಪ್ರದೇಶವಾಗಿದೆ. ಈ ಸುಂದರವಾದ ಗಿರಿಧಾಮವು ತನ್ನಲ್ಲಿರುವ ಕಲ್ಲಿದ್ದಲು ಗಣಿಗಳಿಂದಾಗಿ ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Vikassahu60

ಪಾವಗಡ:

ಪಾವಗಡ:

ತಪ್ಪಾಗಿ ಭಾವಿಸಬೇಡಿ ಇದು ಕರ್ನಾಟಕದ ಪಾವಗಡವಲ್ಲ...ಬದಲು ಗುಜರಾತ್ ರಾಜ್ಯದ ಪಂಚಮಹಲ್ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ ಪ್ರದೇಶ. ಪಂಚಮಹಲ್ ಜಿಲ್ಲೆಗೆ ಹೆಬ್ಬಾಗಿಲಾಗಿ ಇದು ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: Phso2

ಸಪುತರಾ:

ಸಪುತರಾ:

ಗುಜರಾತ್ ರಾಜ್ಯದ ಡಾಂಗ್ ಜಿಲ್ಲೆಯ ಸಪುತರಾ ಒಂದು ಗಿರಿಧಾಮ ಪಟ್ಟಣವಾಗಿದೆ. ಸಮುದ್ರ ಮಟ್ಟದಿಂದ 1000 ಮೀ. ಎತ್ತರದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಈ ಗಿರಿಧಾಮದ ಹೆಸರಿನ ಅರ್ಥ ಸರ್ಪಗಳ ತಾಣ ಎಂದಾಗುತ್ತದೆ. ಇಲ್ಲಿನ ಆದಿವಾಸಿ ಜನರು ಇಲ್ಲಿರುವ ಸರ್ಪಗಂಗಾ ನದಿ ತಟದಲ್ಲಿರುವ ಸರ್ಪ ಚಿತ್ರವನ್ನು ಅತಿ ಶೃದ್ಧೆಯಿಂದ ಪೂಜಿಸುತ್ತಾರೆ.

ಚಿತ್ರಕೃಪೆ: Mayur.thakare

ವಿಲ್ಸನ್ ಹಿಲ್ಸ್:

ವಿಲ್ಸನ್ ಹಿಲ್ಸ್:

ಗುಜರಾತಿನ ಮತ್ತೊಂದು ಗಿರಿಧಮ ಇದಾಗಿದೆ. ವಲಸಾದ್ ಜಿಲ್ಲೆಯಲ್ಲಿರುವ ಈ ಗಿರಿಧಾಮವು ಗುಜರಾತಿನ ಪ್ರಮುಖ ಪಟ್ಟಣವಾದ ಸೂರತ್ ಗೆ ಹತ್ತಿರದಲ್ಲಿದೆ. ದಟ್ಟವಾದ ಕಾಡಿನಿಂದ ಕೂಡಿದ ಈ ಪ್ರದೇಶವು ಪಂಗರಭರಿ ಅಭಯಾರಣ್ಯಕ್ಕೂ ಹತ್ತಿರವಾಗಿದೆ.

ಚಿತ್ರಕೃಪೆ: Asim Patel

ಬಡೋಗ್:

ಬಡೋಗ್:

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಅತಿ ಪುಟ್ಟ ಗಿರಿಧಾಮ ಇದಾಗಿದೆ. ಇಂದಿಗೂ ಸಹ ನ್ಯಾರೋವ್ ಗೇಜ್ ನಲ್ಲಿ ಚಲಿಸುವ ಕಲ್ಕಾ - ಶಿಮ್ಲಾ ರೈಲು ಸಂಚಾರವು ಲಭ್ಯವಿದ್ದು ಪ್ರವಾಸಿಗರಿಗೆ ಉತ್ಕೃಷ್ಟ ಅನುಭವವನ್ನು ಒದಗಿಸುತ್ತದೆ.

ಚಿತ್ರಕೃಪೆ: Vishmak

ಚಂಬಾ:

ಚಂಬಾ:

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಚಂಬಾ ಗಿರಿಧಾಮವು ಒಂದು ಪುರಾತನ ಪಟ್ಟಣವಾಗಿದೆ. ರಾವಿ ನದಿ ಹರಿದಿರುವ ಈ ಗಿರಿಧಾಮವು ತನ್ನ ಪ್ರಕೃತಿ ಸೌಂದರ್ಯದಿಂದ ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Vjdchauhan

ಚೈಲ್:

ಚೈಲ್:

ಹಿಮಾಚಲ ಪ್ರದೇಶದ ಒಂದು ಸುಂದರ ಗಿರಿಧಾಮ. ಇಲ್ಲಿರುವ ಸಮುದ್ರ ಮಟ್ಟದಿಂದ 2444 ಮೀಟರ್ ಎತ್ತರದಲ್ಲಿರುವ ಚೈಲ್ ಕ್ರಿಕೆಟ್ ಮೈದಾನವು ವಿಶ್ವದ ಅತಿ ಎತ್ತರದ ಕ್ರಿಕೆಟ್ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.

ಚಿತ್ರಕೃಪೆ: Georgian Chail

ಖಜ್ಜೀಯಾರ್:

ಖಜ್ಜೀಯಾರ್:

"ಹಿಮಾಚಲ ಪ್ರದೇಶದ ಸ್ವಿಟ್ಜರ್ ಲ್ಯಾಂಡ್" ಗೆ ಸ್ವಾಗತ. ಹೌದು, ತನ್ನ ಅಗಾಧ ಹಸಿರು ಬಣ್ಣದ ಪ್ರಕೃತಿ ಸೌಂದರ್ಯದಿಂದಾಗಿ ಹಿಮಾಚಲ ಪ್ರದೇಶದ ಈ ಗಿರಿಧಾಮವು ಜನಪ್ರಿಯವಾಗಿ ಹಾಗೆ ಕರೆಯಲ್ಪಡುತ್ತದೆ.

ಚಿತ್ರಕೃಪೆ: Sandeep Brar Jat

ಖಜ್ಜೀಯಾರ್:

ಖಜ್ಜೀಯಾರ್:

ಹಿಮಾಚಲದ ಚಂಬಾ ಜಿಲ್ಲೆಯಲ್ಲಿರುವ ಈ ಗಿರಿಧಾಮ ಪ್ರದೇಶಕ್ಕೆ ತೆರಳಲು ಬಸ್ಸುಗಳು ಸ್ಥಳೀಯ ಬೇಡಿಕೆಗನುಸಾರವಾಗಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ದೊರಕುವುದರಿಂದ ಬಾಡಿಗೆಯ ವಾಹನಗಳ ಮೂಲಕ ತಲುಪುವುದು ಉತ್ತಮ. ಇನ್ನು ತಂಗಲು ಪ್ರವಾಸೋದ್ಯಮ ಇಲಾಖೆಯ ಕಾಟೇಜ್ ಹಾಗೂ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಕೆಲವು ತಂಗುದಾಣಗಳು ದೊರೆಯುತ್ತವೆ. ಅಲ್ಲದೆ ಕೆಲವು ಖಾಸಗಿ ಹೋಟೆಲುಗಳು ಇಲ್ಲಿವೆ.

ಚಿತ್ರಕೃಪೆ: SriniG

ಕುಫ್ರಿ:

ಕುಫ್ರಿ:

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿರುವ ಅತಿ ಪುಟ್ಟ ಗಿರಿಧಾಮವೆ ಕುಫ್ರಿ. ಸ್ಥಳೀಯ ಭಾಷೆಯ ಪ್ರಕಾರ ಕುಫ್ರ್ ಎಂದರೆ ಕೆರೆ ಎಂಬರ್ಥವಿದ್ದು ಅದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ಶಿಮ್ಲಾ ಪಟ್ಟಣದಿಂದ ಕೇವಲ 13 ಕಿ.ಮೀ ದೂರದಲ್ಲಿ ಈ ಗಿರಿಧಾಮವಿದೆ.

ಚಿತ್ರಕೃಪೆ: Shahnoor Habib Munmun

ರೆವಲ್ಸರ್:

ರೆವಲ್ಸರ್:

ಹಿಮಾಚಲ ರಾಜ್ಯದ ರೆವಲ್ಸರ್ ಗಿರಿಧಾಮವು ಮಂಡಿ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 1360 ಮೀ. ಎತ್ತರದಲ್ಲಿ ಸ್ಥಿತವಿದೆ. ಈ ಪ್ರದೇಶದ ಸ್ಥಳೀಯ ಹೆಸರು ತ್ರಿಸಂಗಂ. ಹಿತಕರವಾದ ಬೇಸಿಗೆ ಸಮಯ, ಹೆಪ್ಪುಗಟ್ಟುವ ಚಳಿಗಾಲದ ವಾತಾವರಣವನ್ನು ಹೊಂದಿರುವ ಈ ಗಿರಿಧಾಮವನ್ನು ಮಂಡಿ ಪಟ್ಟಣದಿಂದ ದ್ವಿಚಕ್ರ ದಾರಿಯ ಮೂಲಕ 25 ಕಿ.ಮೀ ಕ್ರಮಿಸಿ ತಲುಪಬಹುದು. ಬೌದ್ಧ, ಹಿಂದೂ ಹಾಗೂ ಸಿಖ್ ಧರ್ಮಗಳನ್ನು ಇಲ್ಲಿ ಪ್ರಮುಖವಾಗಿ ಕಾಣಬಹುದು.

ಚಿತ್ರಕೃಪೆ: John Hill

ಪತ್ನಿಟಾಪ್:

ಪತ್ನಿಟಾಪ್:

ಜಮ್ಮು ಕಾಶ್ಮೀರ ರಾಜ್ಯದ ಉಧಂಪುರ್ ಜಿಲ್ಲೆಯಲ್ಲಿ ಸ್ಥಿತವಿದೆ ಈ ಗಿರಿಧಾಮ. ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳಿಗೆ ಈ ಗಿರಿಧಾಮ ಹೆಚ್ಚು ಪ್ರಖ್ಯಾತಿಯನ್ನು ಪಡೆದಿದೆ.

ಚಿತ್ರಕೃಪೆ: Extremehimalayan

ಅರು:

ಅರು:

ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿರುವ ಅರು ಮತ್ತೊಂದು ಸುಂದರ ಗಿರಿಧಾಮವಾಗಿದೆ. ಪಹಲ್ಗಾಮ್ ನಿಂದ 12 ಕಿ.ಮೀ ದೂರದಲ್ಲಿ ಈ ಗಿರಿಧಾಮ ಸ್ಥಿತವಿದೆ.

ಚಿತ್ರಕೃಪೆ: Cyberhaider

ಮಲೆಮಹದೇಶ್ವರ ಬೆಟ್ಟ:

ಮಲೆಮಹದೇಶ್ವರ ಬೆಟ್ಟ:

ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ (ಎಂ.ಎಂ ಹಿಲ್ಸ್) ಬೆಟ್ಟವು ಧಾರ್ಮಿಕ ತಾಣವಲ್ಲದೆ ಗಿರಿಧಾಮ ಪ್ರದೇಶವೂ ಸಹ ಆಗಿದೆ. ಕೊಳ್ಳೆಗಾಲ ತಾಲೂಕಿನಲ್ಲಿರುವ ಈ ಗಿರಿಧಾಮವು ಮೈಸೂರಿನಿಂದ 150 ಕಿ.ಮೀ ದೂರದಲ್ಲಿದ್ದು, ರಾಜಧಾನಿ ನಗರ ಬೆಂಗಳೂರಿನಿಂದ 210 ಕಿ.ಮೀ ಗಳಷ್ಟು ಅಂತರದಲ್ಲಿದೆ. ಮಹದೇಶ್ವರ ಅರ್ಥಾತ್ ಶಿವನ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Tumkurameen

ಚಿನ್ನಕಣಾಲ್:

ಚಿನ್ನಕಣಾಲ್:

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಚಿನ್ನಕಣಾಲ್ ಒಂದು ಚಿಕ್ಕ ಗಿರಿಧಾಮ ಹಳ್ಳಿಯಾಗಿದೆ. ಇಲ್ಲಿ ಕಂಡುಬರುವ ಜಲಪಾತಗಳನ್ನು ಸಾಮಾನ್ಯವಾಗಿ ಜಲಪಾತ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Augustus Binu

ರಾಣಿಪುರಂ:

ರಾಣಿಪುರಂ:

ಇದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ಇಲ್ಲಿನ ವಾತಾವರಣವು ಮಾಂತ್ರಿಕತೆಯಿಂದ ಕೂಡಿದ್ದು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.

ಚಿತ್ರಕೃಪೆ: Bibu Raj

ಗವಿ:

ಗವಿ:

ಕೇರಳದ ಪಥನಾಂತಿಟ್ಟ ಜಿಲ್ಲೆಯಲ್ಲಿರುವ ಗವಿ ಒಂದು ಸುಂದರವಾದ ಗಿರಿಧಾಮ ಹಳ್ಳಿ. ಕೊಲ್ಲಂ ಹಾಗೂ ತಮಿಳುನಾಡಿನ ಮದುರೈ ಪಟ್ಟಣಗಳನ್ನು ಬೆಸೆಯುವ ರಸ್ತೆಯಲ್ಲಿರುವ ವಂಡಿಪೆರಿಯಾರ್ ಎಂಬ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ಈ ಗಿರಿಧಾಮವು ನೋಡಲು ಮನಮೋಹಕವಾದ ದೃಶ್ಯಾವಳಿಗಳನ್ನು ಒದಗಿಸುತ್ತದೆ.

ಚಿತ್ರಕೃಪೆ: Arun Suresh

ಪಚಮಡಿ:

ಪಚಮಡಿ:

ಸಾತ್ಪುರಾ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿರುವ ಮಧ್ಯ ಪ್ರದೇಶದ ಈ ಗಿರಿಧಾಮವನ್ನು "ಸಾತ್ಪುರಾ ಕಿ ರಾನಿ" ಅಂದರೆ ಸಾತ್ಪುರಾದ ರಾಣಿ ಎಂದೆ ಕರೆಯಲಾಗುತ್ತದೆ. ಸುಂದರ ಪ್ರಕೃತಿ ಸಿರಿಯನ್ನು ಹೊಂದಿರುವ ಈ ಪ್ರದೇಶವು ತನ್ನಲ್ಲಿರುವ ಗುಹೆಗಳಿಂದಾಗಿಯೂ ಪ್ರಖ್ಯಾತಿಗಳಿಸಿದೆ. ಈ ಗುಹೆಗಳನ್ನು ಪಾಂಡವರು ತಮ್ಮ ವವಾಸವನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ ನಿರ್ಮಿಸಿದರೆಂದು ಇಲ್ಲಿನ ದಂತಕಥೆಯು ಹೇಳುತ್ತದೆ.

ಚಿತ್ರಕೃಪೆ: Abhayashok

ಪಚಮಡಿ:

ಪಚಮಡಿ:

ಪಾಂಡವರಿಂದ ನಿರ್ಮಿತವಾದೆನ್ನಲಾದ ಪಚಮಡಿಯ ಗುಹೆಗಳು.

ಚಿತ್ರಕೃಪೆ: LRBurdak

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಮಾಲ್ಶೇಜ್ ಘಾಟ್ ಒಂದು ಸುಂದರವಾದ ಗಿರಿಧಾಮ ಪ್ರದೇಶವಾಗಿದೆ. ವಿಧ ವಿಧವಾದ ಪಕ್ಷಿಗಳಿಗೆ ಹಾಗೂ ಸಸ್ಯ ಸಂಪತ್ತುಗಳಿಗೆ ಇದು ಮನೆಯಾಗಿದೆ.

ಚಿತ್ರಕೃಪೆ: An@vrin

ಜೊವಾಯಿ:

ಜೊವಾಯಿ:

ಮೇಘಾಲಯ ರಾಜ್ಯದ ಜಯಂತಿಯಾಹಿಲ್ಸ್ ಜಿಲ್ಲೆಯ ಗಿರಿಧಾಮ ಪ್ರದೇಶ ಇದಾಗಿದೆ. ಈ ಪ್ರದೇಶದ ಸುತ್ತಮುತ್ತಲು ಅನೇಕ ಗುರುತರವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Psihrishi

ಚಂಫೈ:

ಚಂಫೈ:

ಈಶಾನ್ಯ ಭಾರತದ ಮಿಜೋರಾಮ್ ರಾಜ್ಯದ ಗಡಿಯಲ್ಲಿರುವ ಸುಂದರ ಪಟ್ಟಣ ಇದಾಗಿದೆ. ಭಾರತ ಹಾಗೂ ಮಯನ್ಮಾರ್ ದೇಶಗಳ ಗಡಿಯಲ್ಲಿ ಈ ಸ್ಥಳವು ನೆಲೆಸಿರುವುದರಿಂದ ಆಡಳಿತಾತ್ಮಕವಾಗಿ ಮಹತ್ವವನ್ನು ಪಡೆದ ಸ್ಥಳ ಇದಾಗಿದೆ.

ಚಿತ್ರಕೃಪೆ: Bogman

ಕೊಹಿಮಾ:

ಕೊಹಿಮಾ:

ಈಶಾನ್ಯ ಭಾರತದ ರಾಜ್ಯವಾದ ನಾಗಾಲ್ಯಾಂಡ್ ನ ರಾಜಧಾನಿ ಪಟ್ಟಣ ಹಾಗೂ ಸುಂದರ ಗಿರಿಧಾಮವೆ ಕೊಹಿಮಾ. ಬರ್ಮಾ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಈ ಗಿರಿಧಾಮವು ರಾಜ್ಯದಲ್ಲಿ ಪುರಸಭೆಗಳನ್ನು ಹೊಂದಿರುವ ಮೂರು ಪಟ್ಟಣಗಳ ಪೈಕಿ ಒಂದಾಗಿದೆ. ಅಂಗಾಮಿ ನಾಗಾ ಎಂಬ ಬುಡಕಟ್ಟು ಜನಾಂಗದ ತವರು ಈ ಗಿರಿಧಾಮ.

ಚಿತ್ರಕೃಪೆ: PP Yoonus

ಕೊಹಿಮಾ:

ಕೊಹಿಮಾ:

ಕೊಹಿಮಾ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ನಿರತ ಸಾಂಪ್ರದಾಯಿಕ ನಾಗಾಲ್ಯಾಂಡ್ ಮಹಿಳೆ. ವಿಶಿಷ್ಟವಾಗಿರುವ ಮೆಣಸಿನಕಾಯಿಗಳು.

ಚಿತ್ರಕೃಪೆ: PP Yoonus

ಕೋರಾಪುಟ್:

ಕೋರಾಪುಟ್:

ಒಡಿಶಾ ರಾಜ್ಯದ ಕೋರಾಪುಟ್ ಒಂದು ಸುಂದರವಾದ ಪಟ್ಟಣವಾಗಿದ್ದು ಜಗನ್ನಾಥ ದೇವಾಲಯದಿಂದಾಗಿ ಪ್ರಖ್ಯಾತವಾಗಿದೆ. ಸಬರ ಸ್ರೀಖೇತ್ರ ಎಂದೆ ಕರೆಯಲ್ಪಡುವ ಇಲ್ಲಿನ ಜಗನ್ನಾಥ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿರುವುದಲ್ಲದೆ ಪುರಿಯ ಜಗನ್ನಾಥ ದೇವಾಲಯದ ಹಾಗೆ ನಿರ್ಮಿತವಾಗಿದೆ. ಆದರೆ ಪ್ರಮುಖ ವ್ಯತ್ಯಾಸವೆಂದರೆ ಈ ದೇಗುಲದಲ್ಲಿ ಸಮಾಜದ ಎಲ್ಲ ವರ್ಗಗಳ ಜನರಿಗು ಪ್ರವೇಶಿಸಲು ಅವಕಾಶವಿದೆ.

ಚಿತ್ರಕೃಪೆ: MKar

ಲಾಚುಂಗ್:

ಲಾಚುಂಗ್:

ಸಿಕ್ಕಿಂ ರಾಜ್ಯದ ಒಂದು ಗಿರಿಧಾಮ ಪಟ್ಟಣವೆ ಲಾಚುಂಗ್. ಸಮುದ್ರ ಮಟ್ಟದಿಂದ 3000 ಮೀ. ಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಗಿರಿಧಾಮವು ಲಾಚೇನ್ ಹಾಗೂ ಲಾಚುಂಗ್ ನದಿಗಳ ಸಂಗಮದ ಸ್ಥಳದಲ್ಲಿ ಸ್ಥಿತವಿದೆ.

ಚಿತ್ರಕೃಪೆ: Jaiprakashsingh

ಸಿರುಮಲೈ:

ಸಿರುಮಲೈ:

ತಮಿಳುನಾಡಿನ ದಿಂಡಿಗುಲ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಸಿರುಮಲೈ ಒಂದು ಗಿರಿಧಾಮವಾಗಿದೆ. ಈ ಗಿರಿಧಾಮದಲ್ಲಿ ಹಲವು ಎತ್ತರದ ಬೆಟ್ಟಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Harish Kumar Murugesan

ಔಲಿ:

ಔಲಿ:

ಉತ್ತರಾಖಂಡ್ ರಾಜ್ಯದ ಹಿಮಾಲಯ ಪ್ರದೇಶದಲ್ಲಿರುವ ಔಲಿ ಹಿಮ ಜಾರು ಬಂಡೆಯನ್ನಾಸ್ವಾದಿಸಬಹುದಾದ ಸುಂದರ ಗಿರಿಧಾಮವಾಗಿದೆ.

ಚಿತ್ರಕೃಪೆ: Mandeep Thander

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X