Search
  • Follow NativePlanet
Share
» »ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!

ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!

ಸಾಕಷ್ಟು ಮಹತ್ವ ಪಡೆದಿರುವ ಕಪಿಲ ತೀರ್ಥಂ ಹಾಗೂ ಕಪಿಲೇಶ್ವರ ದೇವಾಲಯವು ಆಂಧ್ರದ ಚಿತ್ತೂರು ಜಿಲ್ಲೆಯ ಪ್ರಖ್ಯಾತ ತಿರುಪತಿ ತಿರುಮಲ ಶ್ರೀಕ್ಷೇತ್ರದಲ್ಲಿ ನೆಲೆಸಿದೆ

By Vijay

ಇದು ಸಾಕಷ್ಟು ಮಹಿಮೆಯುಳ್ಳ ತೀರ್ಥ ಅಥವಾ ಕಲ್ಯಾಣಿಯಾಗಿದೆ. ಶಿವನಿಗೆ ಮುಡಿಪಾದ ದೇವಾಲಯದ ಬಳಿ ಸ್ಥಿತವಿರುವ ತೀರ್ಥವಾಗಿದ್ದು ಸುತ್ತಲೂ ಶೇಷಚಲ ಬೆಟ್ಟಗಳಿಂದ ಅದ್ಭುತವಾಗಿ ಸುತ್ತುವರೆದಿದೆ. ಕಪಿಲ ಮಹರ್ಷಿಗಳು ಇಲ್ಲಿ ಕೆಲ ಕಾಲ ವಾಸ ಮಾಡಿ ಶಿವನನ್ನು ಆರಾಧಿಸಿದ್ದರು.

ಆ ಕಾರಣದಿಂದಾಗಿ ಕಪಿಲ ತೀರ್ಥಂ ಎಂಬ ಹೆಸರನ್ನು ಪಡೆದಿರುವ ಪರಮ ಪಾವನ ತೀರ್ಥ ಇದಾಗಿದೆ. ಅಲ್ಲದೆ ಇಲ್ಲಿರುವ ಶಿವನನ್ನು ಕಪಿಲ ಮುನಿಗಳು ಆರಾಧಿಸಿದ್ದರಿಂದ ಇತನನ್ನು ಕಪಿಲೇಶ್ವರ ಎಂಬ ಹೆಸರಿನಿಂದಲೆ ಪೂಜಿಸಲಾಗುತ್ತದೆ. ಶೈವ ಸಮುದಾಯದವರ ಬಲು ಪವಿತ್ರ ತಾಣ ಇದಾಗಿದೆ.

ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!

ಚಿತ್ರಕೃಪೆ: Agasthyathepirate

ಇನ್ನೂ ವಿಶೇಷವೆಂದರೆ ವೈಷ್ಣವ ಪ್ರಭಾವವಿರುವ ಪವಿತ್ರ ಧಾರ್ಮಿಕ ಕ್ಷೇತ್ರವೊಂದರಲ್ಲಿ ನೆಲೆಸಿರುವ ಶೈವ ಸಮುದಾಯದ ಪುಣ್ಯ ಕ್ಷೇತ್ರವಾಗಿ ಈ ತೀರ್ಥವು ಗಮನಸೆಳೆಯುತ್ತದೆ. ಹೌದು, ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ತಿರುಪತಿಯಲ್ಲಿರುವ ಕಪಿಲ ತೀರ್ಥಂ ಆಗಿದೆ.

ತಿರುಪತಿಯ ಶೇಷಾಚಲ ಬೆಟ್ಟದ ಒಂದು ಭಾಗದಲ್ಲಿರುವ ಗುಹೆಯೊಂದರ ಪ್ರವೇಶ ಸ್ಥಳದ ಬಳಿ ಈ ಕಪಿಲ ತೀರ್ಥವಿದೆ. ಪ್ರತೀತಿಯಂತೆ ಗುಹೆಯೊಳಗಿಂದ ಕಪಿಲ ಮುನಿಗಳು ಇಲ್ಲಿಗೆ ಬಂದು ಶಿವನನ್ನು ಆರಾಧಿಸಿದ್ದರಂತೆ. ಮೊನಚಾದ ಶಿಖರವೊಂದರ ಮೇಲಿನಿಂದ ರೂಪಗೊಳ್ಳುವ ನೀರಿನ ಮೂಲವೊಂದು ಜಲಪಾತದ ರೂಪ ಪಡೆದು ಕಪಿಲ ತೀರ್ಥದಲ್ಲಿ ಬಿಳುತ್ತದೆ. ಇದನ್ನು ಕಪಿಲ ತೀರ್ಥಂ ಜಲಪಾತ ಎಂದೆ ಕರೆಯುತ್ತಾರೆ.

ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!

ಚಿತ್ರಕೃಪೆ: Bhaskaranaidu

ಕಪಿಲ ಮುನಿಗಳು ಈ ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರೆಂಬ ಪ್ರತೀತಿಯಿದೆ. ಅವರ ತಪಸ್ಸಿಗೆ ಮೆಚ್ಚಿದ ಪರಮಾತ್ಮನು ಪಾರ್ವತಿ ಸಮೇತನಾಗಿ ಕಪಿಲ ಮುನಿಗಳಿಗೆ ದರ್ಶನ ನೀಡಿದ್ದನೆಂದು ಹೇಳಲಾಗುತ್ತದೆ. ನಂತರ ಸ್ವಯಂಭೂ ಶಿವಲಿಂಗವೊಂದು ಇಲ್ಲಿ ಉದ್ಭವಗೊಂಡು ಅದನ್ನು ಕಪಿಲ ಮಹರ್ಷಿಗಳು ಇಲ್ಲಿ ಪ್ರತಿಷ್ಠಾಪಿಸಿದರು.

ಹಾಗಾಗಿ ಶಿವನ ಸ್ವರೂಪಿಯಾದ ಇಲ್ಲಿನ ಶಿವಲಿಂಗವನ್ನು ಕಪಿಲ ಮಹರ್ಷಿಗಳ ಗೌರವಾರ್ಥವಾಗಿ ಕಪಿಲೇಶ್ವರ ಎಂತಲೂ ಹಾಗೂ ಇಲ್ಲಿರುವ ಕಲ್ಯಾಣಿಯನ್ನು ಕಪಿಲ ತೀರ್ಥಂ ಎಂತಲೂ ಕರೆಯಲಾಯಿತು. ಈ ದೇವಾಲಯ ತಾಣಕ್ಕೆ ತಲುಪುತ್ತಿದ್ದಂತೆ ಕಲ್ಲಿನಲ್ಲಿ ಕೆತ್ತಲಾದ ಅದ್ಭುತ ನಂದಿ ವಿಗ್ರಹವು ಮೊದಲು ಪ್ರವಾಸಿಗರನ್ನು ಬರಮಾಡಿಕೊಳ್ಳುವಂತಿದೆ.

ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!

ಚಿತ್ರಕೃಪೆ: Vimalkalyan

ತಿರುಪತಿ ವೆಂಕಟೇಶ್ವರನ ದರ್ಶನ ಕೋರಿ ಬರುವ ಭಕ್ತರು ಸಾಮಾನ್ಯವಾಗಿ ಕಪಿಲೇಶ್ವರ ಸನ್ನಿಧಿಗೂ ಸಹ ಭೇಟಿ ನೀಡುತ್ತಾರೆ. ಶಿವರಾತ್ರಿ ಹಾಗೂ ಇತರೆ ಕಾರ್ತಿಕ ಮಾಸ ಮುಂತಾದ ಉತ್ಸವಗಳನ್ನು ಇಲ್ಲಿ ವಿಶೇಷವಾಗಿ ಹಾಗೂ ಬಲು ಸಡಗರದಿಂದ ಆಚರಿಸಲಾಗುತ್ತದೆ.

ತಿರುಪತಿ ತಿರುಮಲ ದೇವಸ್ಥಾನಗಳ ಆಡಳಿತದ ಅಧೀನದಲ್ಲೆ ಈ ದೇವಾಲಯವಿರುವುದರಿಂದ ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ ಹಾಗೂ ಸಂರಕ್ಷಿಸಲ್ಪಟ್ಟಿದೆ. ಕಾರ್ತಿಕ ಮಾಸದ ಮುಕ್ಕೋಟಿ (ಪೌರ್ಣಮಿ) ದಿನವು ಇಲ್ಲಿ ಬಹಳವೆ ವಿಶೇಷವಾಗಿರುತ್ತದೆ. ಆ ದಿನದಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿ ನರೆಯುತ್ತಾರೆ.

ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!

ಚಿತ್ರಕೃಪೆ: Bhaskaranaidu

ಕಾರಣ ಆ ದಿನದಂದು ಮಧ್ಯಾಹ್ನದ ಹೊತ್ತಿಗೆ ಹತ್ತು ಘಟಿಕಗಳಷ್ಟು ಸಮಯದವರೆಗೆ ಮೂರೂ ಲೋಕದಲ್ಲಿರುವ ಸಕಲ ಪವಿತ್ರ ತೀರ್ಥಗಳು ಈ ಕಪಿಲ ತೀರ್ಥದಲ್ಲಿ ಬಂದು ಸೇರುತ್ತವೆ ಎನ್ನಲಾಗುತ್ತದೆ. ಒಂದು ಘಟಿಕವೆಂದರೆ ಸುಮಾರು 24 ನಿಮಿಷಗಳು. ಅಂದರೆ ಏನಿಲ್ಲವೆಂದರೂ ಸಕಲ ತೀರ್ಥಗಳು ಇಲ್ಲಿ ಎರಡು ಘಂಟೆಗಳಷ್ಟು ಇದರಲ್ಲಿ ಸೇರಿರುತ್ತವೆ.

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಆ ಸಮಯದಲ್ಲಿ ಈ ನೀರಿನಲ್ಲಿ ಯಾರು ಮುಳುಗಿ ಏಳುವರೋ ಅವರಿಗೆ ಆಯಸ್ಸು ಮುಗಿದ ನಂತರ ನೇರವಾಗಿ ಬ್ರಹ್ಮಲೋಕ ದರ್ಶನವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಒಂದು ದಿನವು ಕಪಿಲ ತೀರ್ಥಂಗೆ ತೆರಳಲು ಬಲು ಮಹತ್ವದ್ದಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಕಪಿಲ ತೀರ್ಥವು ತಿರುಪತಿ ಬಸ್ಸು ನಿಲ್ದಾಣದಿಂದ ಮೂರು ಕಿ.ಮೀ ಹಾಗೂ ರೈಲು ನಿಲ್ದಾಣದಿಂದ 4.4 ಕಿ.ಮೀ ದೂರವಿದ್ದು ಅಲ್ಲಿಂದ ಇಲ್ಲಿಗೆ ಬರಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X