Search
  • Follow NativePlanet
Share
» »ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!

ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!

By Vijay

ಕಾಣಿಪಾಕಂನ ವರಸಿದ್ಧಿ ವಿನಾಯಕನ ದೇವಾಲಯವು ಆಂಧ್ರಪ್ರದೇಶದಲ್ಲೆ ಸಾಕಷ್ಟು ಪ್ರಸಿದ್ಧಿ ಪಡೆದ ಪರಮ ಪಾವನ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿರುವ ಬೇಡಿದ ವರಗಳನ್ನು ದಯಪಾಲಿಸುವ ವರಸಿದ್ಧಿ ವಿನಾಯಕನ ಮಹಿಮೆ ಅಪಾರ. ಅಂತೆಯೆ ವಿಶೇಷವಾದ ಸ್ಥಾನಮಾನಗಳನ್ನು ಈ ಗಣಪನಿಗೆ ನೀಡಲಾಗಿದೆ.

ಅಷ್ಟೆ ಏಕೆ ಈ ದೇವಾಲಯವಿರುವ ನಗರದ ನ್ಯಯಾಲಯಗಳಲ್ಲೂ ಸಹ ಈ ಗಣೇಶನ ಹೆಸರಿನಲ್ಲಿ ವಿಶೇಷವಾದ ಶಪಥಗಳನ್ನು ನೀಡಲಾಗುತ್ತದೆ. ಸತ್ಯಕ್ಕೆ ಇನ್ನೊಂದು ಹೆಸರೆ ಇಲ್ಲಿನ ವರಸಿ ವಿನಾಯಕ ಎಂದು ಹೇಳಲಾಗುತ್ತದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಐರಲ ತಾಲೂಕಿನಲ್ಲಿರುವ ಕಾಣಿಪಾಕಂ ಗ್ರಾಮದಲ್ಲಿ ಈ ದೇವಾಲಯವಿದೆ.

ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!

ಚಿತ್ರಕೃಪೆ: Murali Reddy

ಕಾಣಿಪಾಕಂ ವಿನಾಯಕ ದೇವಾಲಯ ಎಂದೆ ಕರೆಯಲಾಗುವ ಈ ಕ್ಷೇತ್ರವು ಸಾಕಷ್ಟು ರೋಚಕವಾದ ದಂತಕಥೆಯಿಂದ ಕೂಡಿದೆ. ಒಮ್ಮೆ ಇಲ್ಲಿ ಮೂರು ಜನ ರೈತರಿದ್ದರು. ಆ ಮೂರೂ ಜನ ಅಂಗವಿಕಲರಾಗಿದ್ದರು. ಒಬ್ಬನಿಗೆ ಕಣ್ಣಿರಲಿಲ್ಲ, ಇನ್ನೊಬ್ಬನಿಗೆ ಕಿವಿ ಕೇಳಿಸುತ್ತಿರಲಿಲ್ಲ ಹಾಗೂ ಮತ್ತೊಬ್ಬನು ಮೂಗನಾಗಿದ್ದನು. ಆ ಮೂವರ ಬಳಿಯೂ ಚಿಕ್ಕದಾದ ಹೊಲಗಳಿದ್ದವು. ಅವರು ಒಟ್ಟಿಗೆ ಸೇರಿಕೊಂಡು ಹೊಲದ ಕೆಲಸ ಮಾಡುತ್ತಿದ್ದರು.

ಅವರ ಜಮೀನಿನಲ್ಲಿದ್ದ ಒಂದು ಬಾವಿಯಿಂದ ಇಬ್ಬರೂ ನೀರನ್ನು ಸೇದಿದರೆ ಇನ್ನೊಬ್ಬನು ಹೊಲಕ್ಕೆ ನೀರುಣಿಸುತ್ತಿದ್ದನು. ಒಂದೊಮ್ಮೆ ಬಾವಿಯಲ್ಲಿದ್ದ ನೀರು ತಳಮುಟ್ಟಿತು. ಇದರಿಂದ ಚಿಂತೆಗಿಡಾದ ಅವರು ಕೆಳಗಿಳಿದು ಬಾವಿಯನ್ನು ಮತ್ತಷ್ಟು ತೋಡಲು ಪ್ರಾರಂಭಿಸಿದರು. ಕೆಲ ಸಮಯದ ನಂತರ ಯಾವುದೊ ಕಲ್ಲಿಗೆ ತಾಗಿದಂತಾಗಿ ರಕ್ತ ಚಿಮ್ಮಲಾರಂಭಿಸಿತು. ಕೆಲವೆ ಘಳಿಗೆಯಲ್ಲಿ ಇದ್ದ ನೀರೆಲ್ಲ ರಕ್ತದ ಮಡುವಾಯಿತು.

ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!

ಚಿತ್ರಕೃಪೆ: Adityamadhav83

ಪವಾಡವೆಂಬಂತೆ ಆ ನೀರಿನಲ್ಲಿದ್ದ ಇವರು ತಮ್ಮ ಅಂಗವೈಕಲ್ಯತೆಯಿಂದ ಮುಕ್ತರಾದರು. ಈ ಸುದ್ದಿ ಎಲ್ಲೆಡೆ ಹಬ್ಬಿ ಊರ ಜನರು ಸೇರಿದರು. ನೀರು ಚಿಮ್ಮುತ್ತ ಚಿಮ್ಮುತ್ತ ಚಿಕ್ಕದಾದ ಸ್ವಯಂಭೂ ಗಣಪನ ವಿಗ್ರಹ ಮೇಲೆ ಬಂದಿತು. ಇದು ದೇವರ ಮಹಿಮೆ ಎಂದು ಅಂದುಕೊಂಡು ಅಲ್ಲಿಯೆ ಗಣಪನನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದರು. ಅದೆ ಕಾಣಿಪಾಕಂ ದೇವಾಲಯ.

ಇಂದಿಗೂ ಬಾವಿಯ ಆ ಸ್ಥಳದಲ್ಲೆ ಇಲ್ಲಿ ಗಣೇಶನಿದ್ದಾನೆ. ಭುವಿಯಿಂದ ಉಕ್ಕುವ ನೀರು ಒಮ್ಮೊಮ್ಮೆ ದೇವಾಲಯದಿಂದ ಹೊರಹರಿಯುತ್ತದೆ. ಅದಕ್ಕಿಂತಲೂ ವಿಶಿಷ್ಟವೆಂದರೆ ಈ ಗಣಪ ಬೆಳೆಯುತ್ತಿರುವುದು. ಹೌದು, ಭಕ್ತರು ಹೇಳುವಂತೆ ಈ ಗಣಪ ಬೆಳೆಯುತ್ತಿದ್ದಾನಂತೆ! ಸುಮಾರು 50 ವರ್ಷಗಳ ಹಿಂದೆ ಭಕ್ತರೊಬ್ಬರು ಗಣಪನಿಗೆ ಸರಿ ಹೊಂದುವ ಬೆಳ್ಳಿಯ ಕವಚವೊಂದನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ಆ ಕವಚ ಇಂದು ಬಹಳವೆ ಚಿಕ್ಕದಾಗಿದೆಯಂತೆ!

ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!

ಚಿತ್ರಕೃಪೆ: Dareavii

ಇನ್ನೊಂದು ಕಥೆಯ ಪ್ರಕಾರ, ಹಿಂದೆ ಶಂಖ ಹಾಗೂ ಲಿಖಿತ ಎಂಬಿಬ್ಬರು ಸಹೋದರರು ಈ ಗಣಪನ ದರ್ಶನಕ್ಕೆಂದು ತೀರ್ಥ ಯಾತ್ರೆ ಕೈಗೊಂಡಿದ್ದರು. ಕಾಣಿಪಾಕಂಗೆ ಬಂದಾಗ ಚಿಕ್ಕವನಾದ ಲಿಖಿತನಿಗೆ ಬಹಳ ಹಸಿವಾದ ಕಾರಣ ಅಣ್ಣನ ವಿರೋಧದ ನಡುವೆಯೂ ಮಾವಿನ ಹಣ್ಣೊಂದನ್ನು ಮರದಿಂದ ಕದ್ದು ಮುಚ್ಚಿ ಕಿತ್ತು ತಿಂದ. ಇದು ತಪ್ಪೆಂದು ಬಗೆದ ಅಣ್ಣ ಅಲ್ಲಿನ ಆಡಳಿತಗಾರನಿಗೆ ತಮ್ಮನ ತಪ್ಪು ವಿವರಿಸಿದನಲ್ಲದೆ ಶಿಕ್ಷೆ ನೀಡುವಂತೆ ಆಗ್ರಹಿಸಿದ.

ಆಡಳಿತಗಾರನು ಆಗ ತಮ್ಮನ ಎರಡು ಭುಜಗಳನ್ನು ಕತ್ತರಿಸುವ ಶಿಕ್ಷೆ ವಿಧಿಸಿದ. ಅದರಂತೆ ಅವನ ಬಾಹುಗಳನ್ನು ಕತ್ತರಿಸಲಾಯಿತು. ಆದರೂ ತಮ್ಮನು ಅಣ್ಣನೊಂದಿಗೆ ಸೇರಿ ಗಣಪನ ದರ್ಶನ ಮಾಡಲೆಂದು ಅಲ್ಲಿದ್ದ ನದಿಯೊಂದರಲ್ಲಿ ಸ್ನಾನ ಮಾಡಿದ. ಸ್ನಾನ ಮಾಡುತ್ತಲೆ ಅವನ ಬಾಹುಗಳು ಮತ್ತೆ ತಿರುಗಿ ಬಂದವು. ಈ ಪವಾಡ ನೋಡಿದ ರಾಜನು ಆ ನದಿಗೆ ಬಾಹುದ ನದಿ ಎಂದು ಹೆಸರಿಟ್ಟ.

ಬೆಟ್ಟದ ಮೇಲಿರುವ ಗಣಪನ ದೇವಾಲಯ!

ಇಲ್ಲಿನ ಪ್ರತೀತಿಯಂತೆ ಯಾರೆ ತಪ್ಪು ಮಾಡಿದರೂ ಇಲ್ಲಿನ ತೀರ್ಥದಲ್ಲಿ ಒಮ್ಮೆ ಮುಳುಗಿ ಎದ್ದರೆಂದರೆ ಅವರು ಸ್ವಯಂ ಪರಿವರ್ತನೆಯಾಗಿ ತಪ್ಪನ್ನು ಒಪ್ಪಿಕೊಳ್ಳುತ್ತಾರೆಂದು ಹೇಳಲಾಗುತ್ತದೆ. ಈ ರೀತಿಯ ನೂರಾರು ಪವಾಡಗಳು ಈಗಾಗಲೆ ಇಲ್ಲಿ ನಡೆದಿವೆ. ಹಾಗಾಗಿ ಎಷ್ಟೊ ಜನರ್ ಆಣೆ ಪ್ರಮಾಣ ಮಾಡಿಸಬೇಕೆಂದಿದ್ದಲ್ಲಿ ಕಾಣಿಪಾಕಂನ ವರಸಿದ್ಧಿ ವಿನಾಯಕನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬೆಂಗಳೂರಿನಿಂದ ಕಾಣಿಪಾಕಂ 175 ಕಿ.ಮೀ ದೂರವಿದ್ದು ಬೆಂಗಳೂರಿನಿಂದ ಚಿತ್ತೂರಿಗೆ ತಲುಪಿ ಅಲ್ಲಿಂದ ಕಾಣಿಪಾಕಂಗೆ ಸುಲಭವಾಗಿ ತೆರಳಬಹುದು. ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕಾಣಿಪಾಕಂಗೆ ತೆರಳಲು ಚಿತ್ತೂರಿನಿಂದ ಬಸ್ಸುಗಳು ದೊರೆಯುತ್ತವೆ.

ಬೆಂಗಳೂರಿನ ಸುಂದರ ಪಂಚಮುಖ ಗಣಪತಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more