Search
  • Follow NativePlanet
Share
» »‘ಮಾರಿ ಕಣಿವೆ’ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿದೆಯಾ?

‘ಮಾರಿ ಕಣಿವೆ’ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿದೆಯಾ?

ವಾಣಿ ವಿಲಾಸ ಸಾಗರ ಅಣೆಕಟ್ಟು, ವಿವಿ ಡ್ಯಾಂ, ಮಾರಿ ಕಣಿವೆ ಎಂದೂ ಕರೆಯಲ್ಪಡುವ ವಾಣಿ ವಿಲಾಸ ಸಾಗರವು ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಇದು ಸುತ್ತಮುತ್ತಲಿನ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ನೀರನ್ನು ಒದಗಿಸುತ್ತದೆ. ಕರ್ನಾಟಕದ ಅತ್ಯಂತ ಹಳೆಯ ಅಣೆಕಟ್ಟು ಎಂದೂ ಖ್ಯಾತಿ ಗಳಿಸಿರುವ ವಾಣಿ ವಿಲಾಸ ಸಾಗರ ಬೆಂಗಳೂರಿನಿಂದ 160 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿದೆ.

ಅಣೆಕಟ್ಟಿನ ವಾಸ್ತುಶಿಲ್ಪ ಸೊಗಸಾಗಿದ್ದು, ಅದ್ಭುತವಾಗಿದೆ. ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ ತಾರಾ ಚಾಂದ್ ದಲಾಲ್ ಎಂಬ ಇಂಜಿನಿಯರ್ ನೇತೃತ್ವದ ತಂಡವು ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿದರು. ಈ ಕಾಮಗಾರಿಯನ್ನು 1907 ರಲ್ಲಿ ಪೂರ್ಣಗೊಳಿಸಲಾಯಿತು. ವಿಶೇಷವೆಂದರೆ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಿವಿ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.

ಪ್ರಕೃತಿ ಪ್ರಿಯರಿಗೆ ಸೂಕ್ತವಾದ ವಿಹಾರ ತಾಣ

ಪ್ರಕೃತಿ ಪ್ರಿಯರಿಗೆ ಸೂಕ್ತವಾದ ವಿಹಾರ ತಾಣ

ಗದ್ದಲದ ನಗರ ಜೀವನದಿಂದ ದೂರವಿರಬೇಕೆಂದು ಬಯಸುವವರು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಂದರೆ ಪ್ರಶಾಂತವಾಗಿ ಹರಿಯುವ ನೀರು, ಎಲ್ಲೆಡೆ ಹಚ್ಚ ಹಸಿರು, ಬೆಟ್ಟಗುಡ್ಡಗಳ ರುದ್ರ ರಮಣೀಯ ನೋಟವನ್ನು ಕಣ್ತುಂಬಿಕೊಳ್ಳಬಹುದು. ಇದು ಪ್ರಕೃತಿ ಪ್ರಿಯರಿಗೆ ಸೂಕ್ತವಾದ ವಿಹಾರ ತಾಣವಾಗಿದೆ. ಅಂದಹಾಗೆ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಬರೋಬ್ಬರಿ 89 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಡ್ಯಾಂ ಈ ಬಾರಿ (ಸೆ.1) ಕೋಡಿ ಬಿದ್ದಿದೆ. ಅಲ್ಲಿಗೆ ಇದು 1934ರ ದಾಖಲೆಯನ್ನು ಸರಿಗಟ್ಟಿದೆ.

ಡ್ಯಾಂ ನೋಡಲು ಕಾಯುತ್ತಿರುವ ಜನತೆ

ಡ್ಯಾಂ ನೋಡಲು ಕಾಯುತ್ತಿರುವ ಜನತೆ

ಈ ವರ್ಷ ದೇಶದಲ್ಲೇ ಮಳೆಯ ಪ್ರಮಾಣ ಹೆಚ್ಚಿದೆ. ಸತತವಾಗಿ ಸುರಿದ ಮಳೆಯಿಂದಾಗಿ ವಿವಿ ಸಾಗರಕ್ಕೂ ಹೆಚ್ಚಿನ ನೀರಿನ ಹರಿವು ಹರಿದು ಬರುತ್ತಿದೆ. ಇದೀಗ ಡ್ಯಾಂ ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಡ್ಯಾಂ ನೋಡಲು ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಅನೇಕ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಲಾಶಯದಲ್ಲಿ ಇಷ್ಟೊಂದು ನೀರನ್ನು ನೋಡಿದ್ದಾರೆ ಅಲ್ಲಿನ ಜನತೆ. ಡ್ಯಾಂನಲ್ಲಿ ಹೆಚ್ಚು ನೀರು ಶೇಖರಣೆಯಾಗಿರುವುದರಿಂದ ರೈತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಜನಜೀವನದ ಚಿತ್ರಣ

ಗ್ರಾಮೀಣ ಜನಜೀವನದ ಚಿತ್ರಣ

ಹಚ್ಚ ಹಸಿರಿನ ಅರಣ್ಯದಿಂದ ಆವೃತವಾಗಿರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭೇಟಿ ನೀಡುವವರು ಮಾರ್ಗ ಮಧ್ಯೆ ಹಳ್ಳಿಗಳು, ಹೊಲಗಳು ಮತ್ತು ಚಿತ್ರದುರ್ಗದ ಗ್ರಾಮೀಣ ಜನಜೀವನದ ಒಂದು ನೋಟ, ಕಣಿವೆ ಮಾರಮ್ಮ ದೇವಸ್ಥಾನ ನೋಡಬಹುದು. ನೀವು ಅಣೆಕಟ್ಟಿಗೆ ಭೇಟಿ ನೀಡಬೇಕಾದರೆ ಉತ್ತಮ ಪಾರ್ಕಿಂಗ್ ಪ್ರದೇಶವಿದೆ. ಇಲ್ಲಿ ವಾಹನ ನಿಲ್ಲಿಸಿ, ಅಣೆಕಟ್ಟನ್ನು ವೀಕ್ಷಿಸಲು ತೆರಳಬಹುದು. ಜಲಾಶಯದ ಬಳಿಯಿರುವ ಗುಡ್ಡಗಳ ಮೇಲೆ ವೈಂಡ್ ಮಿಲ್ಸ್ ಗಾಳಿಯ ವೇಗಕ್ಕೆ ಚಲಿಸುವುದನ್ನು ನೋಡಲು ಚೆನ್ನ. ವಾಸ್ತುಶಿಲ್ಪದ ಪ್ರಕಾರ ಇದು ಕರ್ನಾಟಕದ ಸುಂದರವಾದ ಅಣೆಕಟ್ಟುಗಳಲ್ಲಿ ಒಂದಾಗಿದೆ.

ಮಾರಿ ಕಣಿವೆ ಎನ್ನಲು ಕಾರಣ

ಮಾರಿ ಕಣಿವೆ ಎನ್ನಲು ಕಾರಣ

ಅಣೆಕಟ್ಟು ಪ್ರವಾಸಿ ಆಕರ್ಷಣೆಯಾಗಿದ್ದು, ಚಿತ್ರದುರ್ಗ ಮತ್ತು ಹೊಸದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಆಗಾಗ್ಗೆ ಮಾರಿ ಕಣಿವೆಗೆ ಭೇಟಿ ನೀಡುತ್ತಾರೆ. ಜಲಾಶಯ ನೋಡಲು ಬರುವ ಪ್ರವಾಸಿಗರು ಸಮೀಪದಲ್ಲಿರುವ ಪಂಚವಟಿ ಉದ್ಯಾನಕ್ಕೆ ಸಹ ಭೇಟಿ ನೀಡಬಹುದು. ಇದು ಅಣೆಕಟ್ಟಿನ ಬಳಿ ಇತ್ತೀಚೆಗೆ ನಿರ್ಮಿಸಲಾದ ಉದ್ಯಾನ. ಪಂಚವಟಿ ಉದ್ಯಾನದಲ್ಲಿ ನೀವು ಔಷಧೀಯ ಗಿಡಮೂಲಿಕೆಗಳನ್ನು ಕಾಣಬಹುದು. ವಾಣಿ ವಿಲಾಸ ಸಾಗರ ಅಣೆಕಟ್ಟಿನ ಕೆಳಭಾಗದಲ್ಲಿ ದೇವಾಲಯವಿದೆ. ಈ ದೇವಾಲಯವು ಕಣಿವೆ ಮಾರಮ್ಮನಿಗೆ ಸಮರ್ಪಿತವಾಗಿದೆ. ಆದ್ದರಿಂದ, ವಾಣಿ ವಿಲಾಸ ಸಾಗರವನ್ನು ಮಾರಿ ಕಣಿವೆ ಎಂದೂ ಕರೆಯುತ್ತಾರೆ.

ಎಲ್ಲೆಡೆ ಕಾಣಸಿಗುವ ವಿಂಡ್ ಮಿಲ್ಸ್

ಎಲ್ಲೆಡೆ ಕಾಣಸಿಗುವ ವಿಂಡ್ ಮಿಲ್ಸ್

ಮುಂಬರುವ ವಾರಾಂತ್ಯವನ್ನು ಹೇಗೆ ಕಳೆಯುವುದು ಎಂದು ಯೋಚಿಸುತ್ತಿದ್ದರೆ, ಒಂದು ದಿನದ ಪ್ರವಾಸಕ್ಕೆ ವಾಣಿ ವಿಲಾಸ ಸಾಗರವನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಇದು ಬೆಸ್ಟ್ ಪ್ಲೇಸ್. ಚಿತ್ರದುರ್ಗದಲ್ಲಿದ್ದಾಗ ನಿಮಗೆ ಎಲ್ಲೆಡೆ ವಿಂಡ್ ಮಿಲ್ ಕಾಣಸಿಗುತ್ತದೆ. ಚಿತ್ರದುರ್ಗ ಪ್ರವಾಸ ಅವಿಸ್ಮರಣೀಯ ಅನಿಸಬೇಕಾದರೆ ಚಿತ್ರದುರ್ಗದ ಕೋಟೆ ನೋಡಿ. ಇದು ಜಲಾಶಯದಿಂದ ಕೇವಲ ಒಂದು ಗಂಟೆ ದೂರದಲ್ಲಿದೆ. ಚಿತ್ರದುರ್ಗ ಪಟ್ಟಣದಲ್ಲಿರುವ ಮುರುಗರಾಜೇಂದ್ರ ಬೃಹನ್ಮಠದಲ್ಲಿ ಸುತ್ತಲೂ ಹಚ್ಚ ಹಸಿರನ್ನು ಕಾಣಬಹುದು. ಮಠದ ಆವರಣದಲ್ಲಿ ಉದ್ಯಾನ ಮತ್ತು ಮೃಗಾಲಯವೂ ಇದ್ದು, ಆಸ್ಟ್ರೇಲಿಯಾದ ಎಮು ಪಕ್ಷಿ ಇಲ್ಲಿನ ಆಕರ್ಷಣೆಯಾಗಿದೆ.

ಈ ಮಾರ್ಗವಾಗಿ ಬನ್ನಿ…

ಈ ಮಾರ್ಗವಾಗಿ ಬನ್ನಿ…

ಅಣೆಕಟ್ಟನ್ನು ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿದ್ದು, ಡ್ಯಾಂ ನೋಡಲು ಬೆಂಗಳೂರು, ತುಮಕೂರಿನಿಂದ ಕಡೆಗೆ ಪ್ರಯಾಣಿಸುತ್ತಿದ್ದರೆ ಪ್ರವಾಸಿಗರು ಹಿರಿಯೂರು ನಗರದ ಮೂಲಕ ಪ್ರವೇಶಿಸಬಹುದು. ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರ ಕ್ರಮಿಸಿದ ನಂತರ ಎಡಭಾಗಕ್ಕೆ ಬಂದರೆ ಜಲಾಶಯ ತಲುಪಬಹುದು. ಹಾಗೆಯೇ ಹುಬ್ಬಳ್ಳಿ, ದಾವಣಗೆರೆ ಭಾಗದವರು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಿ ಡ್ಯಾಂ ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X