Search
  • Follow NativePlanet
Share
» »ಇವೆ.. ಭಾರತದಲ್ಲಿರುವ ಎತ್ತರದ ಗಿರಿಶಿಖರಗಳು

ಇವೆ.. ಭಾರತದಲ್ಲಿರುವ ಎತ್ತರದ ಗಿರಿಶಿಖರಗಳು

By Vijay

ಜೋರಾಗಿ ಬೀಸುವ ಗಾಳಿಗೆ ಸೆಡ್ಡು ಹೊಡೆದು ನಿಂತು, ಮೋಡಗಳ ಚಲಿಸುವ ದಿಕ್ಕುಗಳನ್ನೆ ಬದಲಿಸುವ ಶಕ್ತಿಯನ್ನು ಹೊಂದಿದ್ದು, ಸೂರ್ಯ, ಚಂದ್ರ ನಕ್ಷತ್ರಗಳನ್ನು ಸ್ಪರ್ಷಿಸುತ್ತಿರುವಂತೆ ಭಾಸ ಮೂಡಿಸುವ ಎತ್ತರದ ಗಿರಿ ಶಿಖರಗಳನ್ನು ನೋಡುವುದೆ ಒಂದು ರೋಮಾಂಚಕಾರಿಯಾದ ಅನುಭವ. ಇಂತಹ ಎತ್ತರದ ಗಂಭೀರತೆಯ ಶಿಖರಗಳನ್ನು ನೋಡಿದಾಗ ಪ್ರಕೃತಿ ಮಾತೆಯ ಅಪರಿಮಿತ ಶಕ್ತಿಯ ಅಭಾಸ ನಮ್ಮಲ್ಲಿ ಮೂಡುವುದು ಖಂಡಿತ. ಅಂತಹ ಅಗಾಧತೆಯ ಮುಂದೆ ಮನುಷ್ಯನು ತೃಣಕ್ಕೆ ಸಮಾನ ಎನ್ನಿಸದೆ ಇರಲಾರದು. ಈ ನಮ್ಮ ಭೂಗೃಹದಲ್ಲಿ ಹಲವಾರು ಪ್ರಕೃತಿ ಸಹಜ ಇಂತಹ ಎತ್ತರದ ಪರ್ವತಗಳನ್ನು ಕಾಣಬಹುದು. ಭಾರತದಲ್ಲೂ ಕೂಡ ಇಂತಹ ಎತ್ತರದ ಗಿರಿಶಿಖರಗಳು ಕಂಡುಬರುತ್ತವೆ. ಅಷ್ಟೆ ಅಲ್ಲ, ಇಲ್ಲಿನ ಕೆಲ ಶಿಖರಗಳು ಜಗತ್ತಿನ ಮೊದಲ ಹತ್ತು ಎತ್ತರದ ಶಿಖರಗಳಲ್ಲೂ ತಮ್ಮ ಸ್ಥಾನವನ್ನು ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿ.

ಈ ಲೇಖನವು ನಮ್ಮಲ್ಲಿ (ಭಾರತದಲ್ಲಿ) ಕಂಡುಬರುವ ಕೆಲವು ಎತ್ತರದ ಶಿಖರಗಳ ಪರಿಚಯ ಮಾಡಿಸಲಿದೆ. ಗಮನದಲ್ಲಿಡ ಬೇಕಾದ ಒಂದು ಸಂಗತಿಯೆಂದರೆ ಭಾರತದ ಎತ್ತರದ ಶಿಖರಗಳಲ್ಲಿ ಬಹುತೇಕವು ಹಿಮಾಲಯ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಹೀಗೆ ಉತ್ತರ ಹಾಗು ಈಶಾನ್ಯ ಭಾರತದಲ್ಲೆ ಕಂಡುಬರುವುದರಿಂದ ಅಲ್ಲಿನ ಕೇವಲ ಕೆಲ ಶಿಖರಗಳನ್ನು ಮಾತ್ರ ಆಯ್ದುಕೊಳ್ಳಲಾಗಿದ್ದು, ದಕ್ಷಿಣ ಭಾರತದ ಕೆಲವು ಶಿಖರಗಳ ಕುರಿತು ತಿಳಿಸಲಾಗಿದೆ. ಕೇವಲ ಎತ್ತರದ ಶಿಖರಗಳ ಪರಿಚಯ ಇಲ್ಲಿದ್ದು ಇವುಗಳನ್ನು ಕ್ರಮಾಂಕಗಳ ಆಧಾರದ ಮೇಲೆ ನೀಡಲಾಗಿಲ್ಲ.

ಕಂಚನಜುಂಗಾ:

ಕಂಚನಜುಂಗಾ:

ಜಗತ್ತಿನ ಮೂರನೆಯ ಹಾಗು ಭಾರತದ ಮೊದಲ ಎತ್ತರದ ಶಿಖರ ಇದಾಗಿದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಈ ಶಿಖರವು ಭಾರತದ ಸಿಕ್ಕಿಂ ಹಾಗು ನೇಪಾಳ ದೇಶದ ಗಡಿಯಲ್ಲಿ ನೆಲೆಸಿದೆ. ಐದು ಪರ್ವತ ಶೃಂಗಗಳನ್ನು ಹೊಂದಿರುವ ಈ ಪರ್ವತದ ಅತ್ಯುನ್ನತ ಗಿರಿ ಶೃಂಗವು 8,586 ಮೀ (28,169 ಅಡಿಗಳು) ಎತ್ತರವನ್ನು ಹೊಂದಿದ್ದು ಸಿಕ್ಕಿಂ ಹಾಗು ದಾರ್ಜೀಲಿಂಗ್ ಪ್ರದೇಶಗಳ ಜನರಿಗೆ ಪವಿತ್ರವಾಗಿದೆ.

ಚಿತ್ರಕೃಪೆ: Ashinpt

ನಂದಾದೇವಿ ಪರ್ವತ:

ನಂದಾದೇವಿ ಪರ್ವತ:

ಉತ್ತರಾಖಂಡ ರಾಜ್ಯದ ಕುಮಾವೂನ್ ಪ್ರದೇಶದಲ್ಲಿದೆ ಭಾರತದ ಎರಡನೆಯ ಅತಿ ಎತ್ತರದ ಈ ಶಿಖರ. ಈ ಪರ್ವತದ ಕೆಳಗಿನ ಪ್ರದೇಶವು ಹಲವು ದೇವದಾರು ಮರಗಳಿಂದ ಸುತ್ತುವರೆದಿದ್ದು ಇದನ್ನು ನಂದಾದೇವಿ ರಾಷ್ಟ್ರೀಯ ಉದ್ಯಾನವನನ್ನಾಗಿ ಘೋಷಿಸಲಾಗಿದೆ. ಈ ಪರ್ವತವು ಎರಡು ಗಿರಿ ಶೃಂಗಗಳನ್ನು ಹೊಂದಿದ್ದು ಇವುಗಳ ಮಧ್ಯದಲ್ಲಿನ ದೂರ 2 ಕಿ.ಮೀ. ಈ ಪರ್ವತವು ಸಮುದ್ರ ಮಟ್ಟದಿಂದ 25,643 ಅಡಿಗಳಷ್ಟು ಎತ್ತರವಿದ್ದು, ಇದರ ಒಟ್ಟಾರೆ ಎತ್ತರವು 10,299 ಅಡಿಗಳು.

ಚಿತ್ರಕೃಪೆ: Anirban c8

ಹಾತಿ ಪರ್ವತ:

ಹಾತಿ ಪರ್ವತ:

ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿದೆ ಈ ಭವ್ಯ ಪರ್ವತ. ಹಿಂದಿಯಲ್ಲಿ ಹಾತಿ ಎಂದರೆ ಆನೆಯಾಗಿದ್ದು ಇದರ ವಿಶಾಲ ಕಾಯವಾದ ಆಕಾರದಿಂದ ಈ ಹೆಸರು ಬಂದಿದೆ. ಈ ಪರ್ವತದ ಮೇಲ್ಮೈ ಮೇಲೆ ಎರಡು ದೊಡ್ಡ ಬಂಡೆಗಳಿದ್ದು, ದಂತಕಥೆಯ ಪ್ರಕಾರ ಅವು ಕಾಗೆ ಹಾಗು ಹದ್ದುಗಳನ್ನು ಸೂಚಿಸುತ್ತವೆ. ಸಮುದ್ರ ಮಟ್ಟದಿಂದ ಇದರ ಎತ್ತರ 22,070 ಅಡಿಗಳು.

ಚಿತ್ರಕೃಪೆ: Alok Prasad

ಬಂದರ್ ಪೂಂಚ್:

ಬಂದರ್ ಪೂಂಚ್:

ಉತ್ತರಾಖಂಡ್ ರಾಜ್ಯದ ಗಡ್ವಾಲ್ ಪ್ರದೇಶದಲ್ಲಿರುವ ಈ ಪರ್ವತವು ಮೂರು ಎತ್ತರವಾದ ಗಿರಿ ಶೃಂಗಗಳನ್ನು ಹೊಂದಿದೆ. ಮೊದಲನೆಯ ಬಂದರ್ ಪೂಂಚ್ 6316 ಮೀ ಹಾಗು ಎರಡನೆಯ ಬಂದರ್ ಪೂಂಚ್ 6102 ಮೀ ಗಳಷ್ಟು ಎತ್ತರವನ್ನು ಹೊಂದಿದೆ. ಮೂರನೆಯ ಶೃಂಗವನ್ನು ಕಾಲಾನಾಗ್ ಎಂದು ಕರೆಯಲಾಗಿದ್ದು 6387 ಮೀ ಎತ್ತರವನ್ನು ಹೊಂದಿದೆ. ಹಿಂದಿಯಲ್ಲಿ ಬಂದರ್ ಪೂಂಚ್ ಎಂದರೆ ಮಂಗನ ಬಾಲ ಎಂಬರ್ಥವಿದ್ದು ಪೌರಾಣಿಕ ಪಾತ್ರವಾದ ಆಂಜನೇಯನ ಬಾಲ ಇದೆಂದು ಭಾವನಾತ್ಮಕವಾಗಿ ನಂಬಲಾಗಿದೆ.

ಚಿತ್ರಕೃಪೆ: Alokprasad

ಚಂದ್ರಶಿಲಾ:

ಚಂದ್ರಶಿಲಾ:

ಉತ್ತರಾಖಂಡ್ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ತುಂಗನಾಥ್ ಎಂಬಲ್ಲಿ ಈ ಪರ್ವತವಿದೆ. ಸಮುದ್ರ ಮಟ್ಟದಿಂದ 4000 ಮೀ ಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಪರ್ವತದ ಶೃಂಗದಿಂದ ನಂದಾ ದೇವಿ ಪರ್ವತ, ಚೌಖಂಬಾ, ಬಂದರ್ ಪೂಂಚ್ ಪರ್ವತಗಳ ಅತ್ಯುತ್ತಮ ನೋಟಗಳನ್ನು ಕಾಣಬಹುದು. ದಂತಕಥೆಯ ಪ್ರಕಾರ, ಶ್ರೀರಾಮನು ರಾವಣನನ್ನು ಸಂಹರಿಸಿದ ನಂತರ ಇಲ್ಲಿ ಧ್ಯಾನಕ್ಕೆ ಕುಳಿತಿದ್ದನಂತೆ. ಮತ್ತೊಂದು ಕಥೆಯ ಪ್ರಕಾರ ಚಂದ್ರನು ಇಲ್ಲಿ ತಪಸ್ಸು ಆಚರಿಸಿದ್ದನಂತೆ. ಇದೊಂದು ಸುಂದರ ಅನುಭವ ನೀಡುವ ಚಾರಣ ತಾಣವೂ ಆಗಿದೆ.

ಚಿತ್ರಕೃಪೆ: Vvnataraj

ಚೌಖಂಬಾ:

ಚೌಖಂಬಾ:

ಉತ್ತರಾಖಂಡ್ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಈ ಪರ್ವತ ಶೃಂಗವನ್ನು ಕಾಣಬಹುದು. ಈ ಪರ್ವತವು 5,230 ಅಡಿಗಳಷ್ಟು ಭೂಮಟ್ಟದಿಂದ ಎತ್ತರವಿದೆ.

ಚಿತ್ರಕೃಪೆ: Vvnataraj

ಗುರುಶಿಖರ:

ಗುರುಶಿಖರ:

ರಾಜಸ್ಥಾನ ರಾಜ್ಯದ ಮೌಂಟ್ ಅಬು ಗಿರಿಧಾಮದಿಂದ 15 ಕಿ.ಮೀ ದೂರದಲ್ಲಿ ಈ ಪರ್ವತವನ್ನು ಕಾಣಬಹುದು. ಅರಾವಳಿ ಪರ್ವತ ಶ್ರೇಣಿಯ ಅತಿ ಎತ್ತರದ ಶೃಂಗವಾಗಿರುವ ಈ ಪರ್ವತದ ಎತ್ತರ (ಸಮುದ್ರ ಮಟ್ಟದಿಂದ) 5676 ಅಡಿಗಳು. ಈ ಪರ್ವತದ ತುದಿಯವರೆಗೂ ಚಲಿಸಲು ರಸ್ತೆಯಿದ್ದು ತುದಿಯಲ್ಲಿ ಗುರು ದತ್ತಾತ್ರೇಯರಿಗೆ ಸಮರ್ಪಿತವಾದ ದೇವಾಲಯವೊಂದನ್ನು ಕಾಣಬಹುದು.

ಚಿತ್ರಕೃಪೆ: CorrectKnowledge

ದೊಡ್ಡಬೆಟ್ಟ:

ದೊಡ್ಡಬೆಟ್ಟ:

ತಮಿಳುನಾಡಿನ ಊಟಿ ಗಿರಿಧಾಮದಿಂದ 9 ಕಿ.ಮೀ ದೂರದಲ್ಲಿ ನೀಲಗಿರಿ ಪ್ರದೇಶದಲ್ಲಿ ಈ ಪರ್ವತವಿದೆ. ಇದೊಂದು ಆಕರ್ಷಕ ಪ್ರವಾಸಿ ತಾಣವಾಗಿದ್ದು ಇದರ ತುದಿಯಿಂದ ಮೈಸೂರು ನಗರದ ಚಾಮುಂಡಿ ಬೆಟ್ಟದ ನೋಟವನ್ನು ಸವಿಯಬಹುದು. ಈ ಪರ್ವತವು ಭೂಮಟ್ಟದಿಂದ 7,402 ಅಡಿಗಳಷ್ಟು ಎತ್ತರವಿದೆ. ಬೆಟ್ಟದ ತುದಿಯಿಂದ ಒಂದು ನೋಟ.

ಚಿತ್ರಕೃಪೆ: Pratheept2000

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿಯು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ನೆಲೆಸಿರುವ ಭವ್ಯ ಪರ್ವತ ಶಿಖರವಾಗಿದೆ. ಕರ್ನಾಟಕ ಸರಕಾರದಿಂದ ಇದನ್ನು ನೈಸರ್ಗಿಕ ತಾಣವೆಂದು ಘೋಷಿಸಲಾಗಿದೆ. ಸಮುದ್ರ ಮಟ್ಟದಿಂದ ಗಿರಿ ಶಿಖರವು 1343 ಮೀ ಗಳಷ್ಟು ಎತ್ತರದಲ್ಲಿದೆ. ಮತ್ತೊಂದು ವಿಶೇಷವೆಂದರೆ ಈ ಬೆಟ್ಟವು ಪ್ರಖ್ಯಾತ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಭವ್ಯ ಹಿನ್ನಿಲೆಯಾಗಿ ಸುಮಧುರ ನೋಟವನ್ನು ಕರುಣಿಸುತ್ತದೆ.

ಚಿತ್ರಕೃಪೆ: Rayabhari

ಕುಮಾರ ಪರ್ವತ:

ಕುಮಾರ ಪರ್ವತ:

ಕುಮಾರ ಪರ್ವತ ಅಥವ ಪುಷ್ಪಗಿರಿಯು ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಪುಷ್ಪಗಿರಿ ಅಭಯಾರಣ್ಯದಲ್ಲಿ5,617 ಅಡಿಗಳಷ್ಟು ಎತ್ತರವನ್ನು ಹೊಂದಿದ್ದು ಅತಿ ಎತ್ತರದ ಗಿರಿಶೃಂಗ ಎನಿಸಿದೆ. ಕೊಡಗು ಜಿಲ್ಲೆಯ ಸೋಮವಾರಪೇಟ್ ತಾಲೂಕಿನಿಂದ ಸುಮಾರು 20 ಕಿ.ಮೀ ದೂರದಲ್ಲಿ ಈ ಶಿಖರವನ್ನು ಕಾಣಬಹುದು.

ಚಿತ್ರಕೃಪೆ: Vivekvaibhavroy

ಆನಮುಡಿ:

ಆನಮುಡಿ:

ಕೇರಳದಲ್ಲಿರುವ ಆನಮುಡಿ ಗಿರಿಶಿಖರವು 8,133 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಕೇವಲ ಪಶ್ಚಿಮ ಘಟ್ಟದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೆ ಅತಿ ಎತ್ತರದ ಶಿಖರವೆನಿಸಿದೆ. ಆನಮುಡಿಯ ಅಕ್ಷರಶಃ ಅರ್ಥ ಆನೆಯ ಹಣೆ ಎಂದಾಗುತ್ತದೆ. ಇದರ ರಚನೆಯು ಆನೆಯ ಹಣೆಯನ್ನು ಹೋಲುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಚಿತ್ರಕೃಪೆ: Arunguy2002

ಮುಳ್ಳಯ್ಯನಗಿರಿ:

ಮುಳ್ಳಯ್ಯನಗಿರಿ:

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ ಬೆತ್ತವನ್ನು ಕಾಣಬಹುದು. ಈ ಪರ್ವತವು ಕರ್ನಾಟಕದ ಅತ್ಯಂತ ಎತ್ತರದ ಪರ್ವತವಾಗಿದೆ. 6,330 ಅಡಿಗಳಷ್ಟು ಎತ್ತರವಿರುವ ಈ ಪರ್ವತವು ಪಶ್ಚಿಮ ಘಟ್ಟಗಳ ಉತ್ತಮ ನೋಟವನ್ನು ಕರುಣಿಸುತ್ತದೆ.

ಚಿತ್ರಕೃಪೆ: Sampigesrini

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X