ನವರಾತ್ರಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ನೀವು ಸಹ ದುರ್ಗಾ ಪೂಜೆಯಲ್ಲಿ ಭಾಗವಹಿಸಲು ಬಯಸಿದರೆ, ಪ್ರವಾಸ ಹೊರಟರೆ ಭಾರತದ ಕೆಲವು ಸ್ಥಳಗಳು ಬೆಸ್ಟ್ ಇವೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಬಾರಿ ನವರಾತ್ರಿ ಆಶ್ವಯುಜ ಮಾಸ ಶುಕ್ಲಪಕ್ಷದ ಪಾಡ್ಯ ತಿಥಿಯ ಅಕ್ಟೋಬರ್ 3 ಗುರುವಾರದಿಂದ ಮಧ್ಯಾಹ್ನ 12.38ರಿಂದ ಆರಂಭವಾಗಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಸ್ಥಳಗಳಲ್ಲಿ ಭವ್ಯವಾದ ಪೆಂಡಾಲ್ ಹಾಕಲಾಗುತ್ತದೆ. ರಾಮಲೀಲಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಮೊದಲೇ ಹೇಳಿದ ಹಾಗೆ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಸಮಯದಲ್ಲಿ ನೀವು ಎಲ್ಲಿಗೆ ಭೇಟಿ ನೀಡಲು ಯೋಜಿಸಬಹುದು ಎಂಬುದನ್ನು ನೋಡೋಣ...

ಮೈಸೂರು
ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿ ದಸರಾ ಹಬ್ಬವನ್ನು ಅಂದರೆ ನವರಾತ್ರಿಯನ್ನು ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಾಡಹಬ್ಬ ಮೈಸೂರು ದಸರಾ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ನವರಾತ್ರಿ ಸಮಯದಲ್ಲಿ ಮೈಸೂರು ಝಗಮಗಿಸುತ್ತದೆ. ದಸರೆಯ ಇತಿಹಾಸವನ್ನು ನೋಡುವುದಾದರೆ 1610ರಲ್ಲಿ ಆರಂಭ ಮಾಡಲಾಯಿತು. ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆ ಎಂಬಲ್ಲಿ ದಸರಕ್ಕೆ ಚಾಲನೆ ನೀಡಲಾಗಿತ್ತು. ಅಂಬಾರಿ ಹೊರುವ ಪದ್ಧತಿಗೆ ಚಾಲನೆ ಸಿಕ್ಕಿದ್ದೂ ಸಹ ಆಗಿನಿಂದಲೇ ಆಗಿದೆ. ಅಂದು ಜಂಬೂ ಸವಾರಿ ಮೂಲಕ ಆನೆ ಮೇಲೆ 750ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ತೆರಳುವುದು ಹೇಗೆ?
ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ದೂರ 142 ಕಿ.ಮೀ. ರಸ್ತೆ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣದ ಸಮಯ 3 ಗಂಟೆ ತೆಗೆದುಕೊಳ್ಳುತ್ತದೆ. ರೈಲಿನಲ್ಲಿ ಪ್ರಯಾಣದ ಸಮಯ 2 ಗಂಟೆ 50 ನಿಮಿಷ.

ಕೋಲ್ಕತ್ತಾ
ನವರಾತ್ರಿ ಸಮಯದಲ್ಲಿ ನೀವು ಕೋಲ್ಕತ್ತಾಗೆ ಹೋಗಬಹುದು. ಇಲ್ಲಿ ನವರಾತ್ರಿಯ ಸಮಯದಲ್ಲಿ ಸಪ್ತಮಿ, ಅಷ್ಟಮಿ, ನವಮಿ ಮತ್ತು ದಶಮಿಗಳನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ನೀವು ಬಾಗ್‌ಬಜಾರ್ ದುರ್ಗಾ ಪಂದಳ, ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ಮತ್ತು ಬಂಡು ಮಹಲ್ ಕ್ಲಬ್ ಮುಂತಾದ ಸ್ಥಳಗಳನ್ನು ನೋಡಬಹುದು. ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ತೆರಳುವುದು ಹೇಗೆ?
ಬೆಂಗಳೂರಿನಿಂದ ಕೋಲ್ಕತ್ತಾ 1,879 ಕಿ.ಮೀ.ದೂರದಲ್ಲಿದ್ದು, ಇಲ್ಲಿಗೆ ಹೋಗಲು 1 ದಿನ 7 ಗಂಟೆ ಸಮಯ ತೆಗೆದುಕೊಳ್ಳುತ್ತದೆ (ವಿಮಾನದಲ್ಲಿಯಾದರೆ ಎರಡುವರೆ ಗಂ ಟೆ ಸಾಕು). ಇದು ಎರಡನೇ ಅತಿ ದೊಡ್ಡ ನಗರವಾಗಿದ್ದು, ತನ್ನದೇ ಆದ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ರೈಲು ಮತ್ತು ರಸ್ತೆಮಾರ್ಗಗಳ ಮೂಲಕ ಎಲ್ಲ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ನಿಲ್ದಾಣದ ಹೊರಗೆ ಟ್ಯಾಕ್ಸಿಗಳು ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ಸುಲಭವಾಗಿ ಲಭ್ಯವಿವೆ.

ಅಹಮದಾಬಾದ್
ಅಹಮದಾಬಾದ್‌ನ ಅನೇಕ ಸ್ಥಳಗಳಲ್ಲಿ ಗರ್ಭಾವನ್ನು ಆಯೋಜಿಸಲಾಗುತ್ತದೆ. ಗರ್ಭಾದಲ್ಲಿ ಭಾಗವಹಿಸುವ ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ದಿರಿಸು ಧರಿಸಿ ನೃತ್ಯ ಮಾಡುತ್ತಾರೆ. ಒಂಬತ್ತು ದಿನಗಳ ಕಾಲ ಪೆಂಡಾಲ್‌ಗಳಲ್ಲಿ ನೃತ್ಯಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ನೀವು ಅಹಮದಾಬಾದ್‌ನ ಸ್ಟ್ರೀಟ್ ಗರ್ಭಾದಂತಹ ಸ್ಥಳಗಳಿಗೆ ಹೋಗಬಹುದು.
ತೆರಳುವುದು ಹೇಗೆ?
ಬೆಂಗಳೂರಿನಿಂದ ಅಹಮದಾಬಾದ್ 1,498 ಕಿ.ಮೀ. ದೂರವಿದ್ದು, ಇಲ್ಲಿಗೆ ಹೋಗಲು 22 ಗಂಟೆ 18 ನಿಮಿಷಗಳು ತೆಗೆದುಕೊಳ್ಳುತ್ತದೆ (ವಿಮಾನದಲ್ಲಿಯಾದರೆ ಎರಡು ಗಂಟೆ ಸಾಕು). ಅಹಮದಾಬಾದ್ ಸಾಮಾನ್ಯವಾಗಿ ಭಾರತದ ಎಲ್ಲಾ ರಾಜ್ಯಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಆದ್ದರಿಂದ, ಅಹಮದಾಬಾದ್ ತಲುಪಲು ಸಾಕಷ್ಟು ಅನುಕೂಲಕರವಾಗಿದೆ. ವಿಮಾನ, ಬಸ್, ರೈಲು ಮತ್ತು ನಾವೇ ಡ್ರೈವ್ ಮಾಡಿಕೊಂಡು ಅಥವಾ ಟ್ಯಾಕ್ಸಿ ಮೂಲಕ ನಗರವನ್ನು ತಲುಪಬಹುದು. ಮುಂಬೈ, ಉದಯಪುರ ಮತ್ತು ಇಂದೋರ್‌ನಂತಹ ಆರಂಭಿಕ ಸ್ಥಳಗಳಿಂದ ಲಾಂಗ್ ಡ್ರೈವ್ ಕೂಡ ಹೋಗಬಹುದು.
ದೆಹಲಿ
ದೆಹಲಿಯಲ್ಲಿ ದುರ್ಗಾ ಪೂಜೆಯ ಸುಂದರ ದೃಶ್ಯವನ್ನು ನೋಡಬಹುದಾದ ಅನೇಕ ದೇವಾಲಯಗಳಿವೆ. ನೀವು ದೆಹಲಿಯಲ್ಲಿ ರಾಮಲೀಲಾವನ್ನು ನೋಡಿ ಆನಂದಿಸಬಹುದು. ಇದಲ್ಲದೇ ಇಲ್ಲಿ ಗರ್ಭಾದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ನೀವು ಶ್ರೀ ಶೀತಲ ಮಾತಾ ದೇವಸ್ಥಾನ ಮತ್ತು ಛತ್ತರ್‌ಪುರ ದೇವಸ್ಥಾನಕ್ಕೂ ಭೇಟಿ ನೀಡಬಹುದು.
ತೆರಳುವುದು ಹೇಗೆ?
ಬೆಂಗಳೂರಿನಿಂದ ದೆಹಲಿ 2,154 ಕಿ.ಮೀ. ದೂರವಿದ್ದು, ದೆಹಲಿಗೆ ಹೋಗಲು 1 ದಿನ 7 ಗಂಟೆ ಸಮಯ ತೆಗೆದುಕೊಳ್ಳುತ್ತದೆ (ವಿಮಾನದಲ್ಲಿಯಾದರೆ ಮೂರು ಗಂಟೆ). ದೇಶದ ರಾಜಧಾನಿಯಾಗಿರುವುದರಿಂದ, ನವದೆಹಲಿಯು ಭಾರತ ಮತ್ತು ಪ್ರಪಂಚದ ಎಲ್ಲಾ ಪ್ರಮುಖ ಭಾಗಗಳಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ದೆಹಲಿ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಸೇವೆ ಸಲ್ಲಿಸುತ್ತದೆ. ಬಸ್ಸುಗಳು ಮತ್ತು ರೈಲುಗಳು ನವದೆಹಲಿಯಿಂದ ನೆರೆಹೊರೆಯ ನಗರಗಳಿಗೆ ಓಡಾಡುತ್ತವೆ.
ಮಹಾರಾಷ್ಟ್ರ
ನೀವು ಮಹಾರಾಷ್ಟ್ರಕ್ಕೆ ಭೇಟಿ ನೀಡಿದರೆ ನಿಜವಾಗಿಯೂ ಇಲ್ಲಿನ ನವರಾತ್ರಿಯ ಸೊಬಗು ನಿಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ. ಜನರು ಮನೆಗೆ ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ವಿವಾಹಿತ ಮಹಿಳೆಯರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಕುಂಕುಮ, ಬಿಂದಿ ಮುಂತಾದ ಮದುವೆಯ ವಸ್ತುಗಳನ್ನು ಧರಿಸುತ್ತಾರೆ. ತೆಂಗಿನಕಾಯಿ ಮತ್ತು ವೀಳ್ಯದೆಲೆಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ನೀವು ದಾಂಡಿಯಾ ನೈಟ್‌ನಲ್ಲೂ ಭಾಗವಹಿಸಬಹುದು.
ತೆರಳುವುದು ಹೇಗೆ?
ಭಾರತದ ಮೂರನೇ ಅತಿದೊಡ್ಡ ರಾಜ್ಯವಾದ ಮಹಾರಾಷ್ಟ್ರದ ವಿಮಾನ ನಿಲ್ದಾಣಗಳು ಭಾರತದ ವಿವಿಧ ಭಾಗಗಳಿಗೆ ಮತ್ತು ವಿದೇಶಗಳಿಗೆ ಸಂಪರ್ಕ ಹೊಂದಿವೆ. ವಿಮಾನದಲ್ಲಿಯಾದರೆ ಒಂದುವರೆ ಗಂಟೆಯಲ್ಲಿ ಹೋಗಬಹುದು. ರಸ್ತೆ ಮಾರ್ಗದಲ್ಲಿ ಹೋಗಲು ಬಯಸುವವರಿಗೆ ರಾಷ್ಟ್ರೀಯ ಹೆದ್ದಾರಿ 6 ಮತ್ತು ರಾಷ್ಟ್ರೀಯ ಹೆದ್ದಾರಿ 17 ಪ್ರಮುಖ ಹೆದ್ದಾರಿಗಳಾಗಿವೆ. ಹಾಗೆಯೇ ಎಲ್ಲಾ ನಗರಗಳನ್ನು ಸಂಪರ್ಕಿಸುವ ಉತ್ತಮ ರೈಲು ಜಾಲವನ್ನೂ ಹೊಂದಿದೆ.


Click it and Unblock the Notifications



















