Search
  • Follow NativePlanet
Share
» »ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

By Vijay

ಉತ್ತರ ಕರ್ನಾಟಕ ಭಾಗದ ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡವು ಖಂಡಿತವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ವೀರ ಮದಕರಿಯ ಜೊತೆಗೆ ಹಲವು ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ ಎಂದರೆ ನೀವೆ ಊಹಿಸಬಹುದು ಈ ಸ್ಥಳದ ಅಂದ ಚೆಂದವನ್ನು. ಗದಗ್ ಪಟ್ಟಣದಿಂದ 54 ಕಿ.ಮೀ ದೂರದಲ್ಲಿರುವ ಗಜೇಂದ್ರಗಡವು ರಾಜಯದ ರಾಜಧಾನಿ ನಗರ ಬೆಂಗಳೂರಿನ ವಾಯವ್ಯ ದಿಕ್ಕಿಗೆ ಸುಮಾರು 411 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಏತಕ್ಕೆ ಈ ಸ್ಥಳ ಇಷ್ಟೊಂದು ಹೆಸರುವಾಸಿ

ಸಹಜ ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ಸ್ಥಳವು ಪ್ರಧಾನವಾಗಿ ತನ್ನಲ್ಲಿರುವ ಕಾಲಕಾಲೇಶ್ವರ ದೇವಾಲಯದಿಂದಾಗಿ ಪ್ರಖ್ಯಾತವಾಗಿದೆ. ಇದನ್ನು ದಕ್ಷಿಣ ಕಾಶಿ ಎಂದೂ ಕೂಡ ಕರೆಯಲಾಗುತ್ತದೆ. ಇದೊಂದು ಬೃಹತ್ ಬೆಟ್ಟದ ಮೇಲೆ ಕೆತ್ತಲಾದ ಸುಂದರ ದೇವಾಲಯವಾಗಿದೆ. ಒಂದು ದಿನದ ಮಟ್ಟಿಗೆ ಸಾರ್ಥಕತೆಯ ಪ್ರವಾಸ ಮಾಡಬಹುದಾದ ಈ ದೇವಾಲಯದ ಎದುರಿಗಿರುವ ಗುಡ್ಡದಲ್ಲಿ ಹಲವು ವಿಂಡ್‍ಮಿಲ್ (ಗಾಳಿ ಶಕ್ತಿಯಿಂದ ನಡೆಯುವ ಬೀಸುಯಂತ್ರ) ಗಳು ಸಾಲು ಸಾಲಾಗಿ ಸ್ಥಿತವಾಗಿದ್ದು, ನೋಡಲು ಮನೋಹರವಾದ ನೋಟವನ್ನು ಒದಗಿಸುತ್ತದೆ.

ಬೆಟ್ಟದ ಮೇಲಿರುವ ಈ ದೇವಾಲಯವನ್ನು ದೊಡ್ಡದಾದ ಮೆಟ್ಟಿಲುಗಳ ಮೂಲಕ ಹತ್ತಬಹುದಾಗಿದ್ದು, ಇಲ್ಲಿ ಪೂಜಿಸಲಾಗುವ ದೇವರು ಉದ್ಭವ ಲಿಂಗ ರೂಪದ ಕಾಲಕಾಲೇಶ್ವರನಾದ ಶಿವ. ಈ ದೇವಾಲಯದ ಆವರಣದಲ್ಲಿ ವೀರಭದ್ರನ ದೇವಾಲಯವೂ ಇದ್ದು ಆಸಕ್ತಿಭರಿತ ಒಂದು ಪುಟ್ಟ ಕೊಳವನ್ನು ಸಹ ಇಲ್ಲಿ ಗಮನಿಸಬಹುದು. ಇದನ್ನು ಅಂತರಗಂಗಾ ಎಂದು ಕರೆಯುತ್ತಾರೆ. ಇದರ ವಿಶೇಷತೆಯೆಂದರೆ ಪಕ್ಕದಲ್ಲಿರುವ ಅರಳಿ ಮರದ ಬೇರಿನಿಂದ ನೀರು ಸದಾ ಈ ಕೊಳದಲ್ಲಿ ಬೀಳುತ್ತಿರುತ್ತದೆ ಹಾಗು ಕಡಿದಾದ ಬೇಸಿಗೆಯಲ್ಲೂ ಈ ಬತ್ತದೆ ಇರುವುದು.

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ದೇವಾಲಾಯಕ್ಕೆ ಸಂಬಂಧಿಸಿದ ಸ್ವಾರಸ್ಯಕರ ಪವಾಡ!

ಪ್ರತಿ ವರ್ಷ ಬರುವ ಕನ್ನಡಿಗರ ಹೊಸ ವರ್ಷವಾದ ಉಗಾದಿಯ ಹಿಂದಿನ ದಿನ ಒಂದು ವಿಸ್ಮಯಕರವಾದ ಪವಾಡ ಇಲ್ಲಿ ಜರುಗುತ್ತದೆ. ಅದೆನೆಂದರೆ ಉಗಾದಿಯ ಹಿಂದಿನ ದಿನ ದೇವಾಲಯದ ಅರ್ಚಕನು ಸುಣ್ಣವನ್ನು ಕಲಿಸಿ ಎಲ್ಲ ಸಿದ್ಧತೆ ಮಾಡಿ ಒಂದು ಹುಕ್ಕಾ ಸಮೇತ ಅದನ್ನು ದೇವಾಲಯದಲ್ಲಿ ಇಟ್ಟು ಹೋಗುತ್ತಾನೆ. ಮರುದಿನ ನೋಡಿದಾಗ ಪವಾಡವೆಂಬಂತೆ ದೇವಾಲಯಕ್ಕೆ ಸುಣ್ಣ ಹಚ್ಚಲ್ಪಟ್ಟಿರುತ್ತದೆ ಹಾಗು ಇಟ್ಟಿದ್ದ ಹುಕ್ಕಾ ಕೂಡ ಸೇದಲ್ಪಟ್ಟಿರುತ್ತದೆ. ಈ ಪವಾಡದ ಹಿಂದಿನ ರಹಸ್ಯವನ್ನು ಪತ್ತೆ ಹಚ್ಚಲು ಹಿಂದೆ ಈ ಪ್ರದೇಶದ ಕೆಲವು ಜನ ಪ್ರಯತ್ನಪಟ್ಟು ಪ್ರಾಣ ತೊರೆದಿದ್ದಾರಂತೆ.

ಹಿಂದೊಮ್ಮೆ 1970 ರ ಸಮಯದಲ್ಲಿ ಇದಕ್ಕಿದ್ದಂತೆ ಘಂಟೆಯೊಂದು ಆಕಾಶದತ್ತ ಮಾಯವಾಗಿ ಜೋರಾಗಿ ಬಾರಿಸ ತೊಡಗಿತಂತೆ. ನಂತರ ಈ ಊರಿನಲ್ಲಿ ಪ್ಲೇಗ್ ಮಹಾಮಾರಿಯು ಹಬ್ಬಿತು. ಇದೊಂದು ಎಚ್ಚರಿಕೆ ಘಂಟೆಯಾಗಿತ್ತೆಂದು ಇಲ್ಲಿನ ಹಿರಿಯರು ಸ್ಮರಿಸುತ್ತಾರೆ.

ಕಾಡು ಪ್ರಾಣಿಗಳು

ಒಂದೊಮ್ಮೆ ಗಜೇಂದ್ರಗಡದ ಸುತ್ತಮುತ್ತ ಹೈನಾ, ಬೂಧು ಬಣ್ಣದ ತೋಳುಗಳು ಯಥೇಚ್ಚವಾಗಿ ವಾಸಿಸುತ್ತಿದ್ದವು. ಆದರೆ ವಾಣಿಜ್ಯ ಹಾಗು ಕೈಗಾರಿಕಾ ಸಚಿವಾಲಯವು ನಿರ್ಮಿಸಿದ MMTC (ಮಿನರಲ್ ಆಂಡ್ ಮೆಟಲ್ ಟ್ರೇಡಿಂಗ್ ಕಾರ್ಪೋರೇಷನ್) ವಿಂಡ್‍ಮಿಲ್ ಗಳಿಂದಾಗಿ ಶಬ್ದವಲ್ಲದೆ ಮನುಷ್ಯರ ಓಡಾಟವು ಜಾಸ್ತಿ ಆದುದರಿಂದ ಕ್ರಮೇಣ ಈ ಪ್ರದೇಶದ ಜೀವಜಂತುಗಳು ಇಲ್ಲಿಂದ ವಲಸ ಹೋದವು.

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಗಜೇಂದ್ರಗಡಕ್ಕೆ ತೆರಳುವ ಬಗೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯಿಂದ ಗಜೇಂದ್ರಗಡಕ್ಕೆ ನೇರವಾಗಿ ಬೆಂಗಳೂರಿನಿಂದ ಬಸ್ಸು ಲಭ್ಯವಿರುತ್ತದೆ. ಇಲ್ಲದಿದ್ದರೆ ಗದಗಿಗೆ ತೆರಳಿ ಅಲ್ಲಿಂದ 54 ಕಿ.ಮೀ ದೂರವಿರುವ ಗಜೇಂದ್ರಗಡವನ್ನು ತಲುಪಬಹುದು. ಅಲ್ಲದೆ ಖಾಸಗಿ ಸಂಸ್ಥೆಯಾದ ವಿ.ಆರ್.ಎಲ್ ನಿಂದಲೂ ಬೆಂಗಳೂರಿನಿಂದ ಗಜೇಂದ್ರಗಡಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಗಜೇಂದ್ರಗಡ ಸುತ್ತಮುತ್ತಲಿನ ಸ್ಥಳಗಳು

ಒಂದೊಮ್ಮೆ ನೀವು ಪ್ರವಾಸ ಯೋಜನೆ ಹಾಕಿದರೆ ಈ ಕೆಳಗಿನ ಪ್ರವಾಸಿ ಆಕರ್ಷಣೆಗಳನ್ನು ನೋಡಲು ಮರೆಯದಿರಿ.

ಸುದಿ : ಗಜೇಂದ್ರಗಡಿನ ಪೂರ್ವಕ್ಕೆ 11 ಕಿ.ಮೀ ದೂರದಲ್ಲಿರುವ ಸುದಿಯು ಎರಡು ಗೋಪುರಗಳುಳ್ಳ ಮಲ್ಲಿಕಾರ್ಜುನ ದೇವಾಲಯಕ್ಕೆ ಪ್ರಸಿದ್ಧವಾಗಿದೆ.

ಇಟಗಿ ಭೀಮಾಂಬಿಕಾ : ಪ್ರಸಿದ್ಧ ಭೀಮಾಂಬಿಕಾ ದೇವಾಲಯವಿರುವ ಇಟಗಿಯು ಗಜೇಂದ್ರಗಡದಿಂದ ಕೇವಲ 13 ಕಿ.ಮೀ ದೂರದಲ್ಲಿದೆ.

ಬದಾಮಿ : ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಬದಾಮಿ ಬನಶಂಕರಿಯು ಗಜೇಂದ್ರಗಡದಿಂದ 42 ಕಿ.ಮೀ ದೂರದಲ್ಲಿ ನೆಲೆಸಿದೆ. ರಾಜ್ಯ ಹೆದ್ದಾರಿ ಸಂಖ್ಯೆ 63 ರ ಮೂಲಕ ಇಲ್ಲಿಗೆ ತೆರಳಬಹುದು.

ಐಹೊಳೆ : ಮತ್ತೊಂದು ಪಾರಂಪರಿಕ ಪ್ರವಾಸಿ ಕ್ಷೇತ್ರವಾದ ಐಹೊಳೆಯು ಗಜೇಂದ್ರಗಡದ ಉತ್ತರಕ್ಕೆ ಸುಮಾರು 40 ಕಿ.ಮೀ ದೂರದಲ್ಲಿ ನೆಲೆಸಿದೆ.

ಪಟ್ಟದಕಲ್ಲು : 43 ಕಿ.ಮೀ ದೂರದಲ್ಲಿ ನೆಲೆಸಿದೆ ಅದ್ಭುತ ವಾಸ್ತುಶಿಲ್ಪದ ಅಚ್ಚರಿ ಪಟ್ಟದಕಲ್ಲು.

ಮಹಾಕೂಟ : ದೇವಾಲಯಗಳ ಸಮೂಹ ನಂದೀಕೇಷ್ವರದ ಮಹಾಕೂಟವು ಗಜೇಂದ್ರಗಡದ ವಾಯವ್ಯಕ್ಕೆ ಸುಮಾರು 50 ಕಿ.ಮೀ ಗಳ ದೂರದಲ್ಲಿ ನೆಲೆಸಿದೆ.

Read more about: temples religious sites
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X