Search
  • Follow NativePlanet
Share
» »ಗಣೇಶ ಚತುರ್ಥಿ 2022: ಕರ್ನಾಟಕದ ಸುಪ್ರಸಿದ್ಧ ಗಣೇಶ ದೇವಾಲಯಗಳಿವು…

ಗಣೇಶ ಚತುರ್ಥಿ 2022: ಕರ್ನಾಟಕದ ಸುಪ್ರಸಿದ್ಧ ಗಣೇಶ ದೇವಾಲಯಗಳಿವು…

ಗಣೇಶ ದೇವರು ಜ್ಞಾನದ ಪ್ರತೀಕ. ವಿದ್ಯೆ, ಬುದ್ಧಿ, ಸಂಪತ್ತಿನ ಅಧಿದೇವತೆಯೂ ಹೌದು. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ದೇಶಾದ್ಯಂತ ನೀವು ಸರ್ವ ವಿಘ್ನ ನಿವಾರಕ ಗಣೇಶನ ಅನೇಕ ದೇವಾಲಯಗಳನ್ನು ಕಾಣಬಹುದು. ವಿಶೇಷವಾಗಿ ಗಣೇಶ ಹಬ್ಬ ಬಂದಾಗ ಈ ದೇವಾಲಯಗಳು ಜನಸಂದಣಿಯಿಂದ ಕೂಡಿರುತ್ತವೆ. ಕರ್ನಾಟಕದಲ್ಲಿಯೂ ಅನೇಕ ಜನಪ್ರಿಯ ಗಣೇಶ ದೇವಾಲಯಗಳಿವೆ.

ಈ ದೇವಾಲಯಗಳು ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿವೆ. ಈ ಬಾರಿ ಗಣೇಶ ಚತುರ್ಥಿ ಹಬ್ಬವು ಆಗಸ್ಟ್ 30 ರಿಂದ ಪ್ರಾರಂಭವಾಗಲಿದೆ. ಆದ್ದರಿಂದ ಈ ಸಂದರ್ಭದಲ್ಲಿ ನಾವು ಕರ್ನಾಟಕದ ಕೆಲವು ವಿಶಿಷ್ಟ ಗಣೇಶ ದೇವಾಲಯಗಳ ಬಗ್ಗೆ ತಿಳಿಯೋಣ. ಇಲ್ಲಿ ಗಣೇಶ ದೇವಸ್ಥಾನಗಳ ಪ್ರಾಮುಖ್ಯತೆ, ಇತಿಹಾಸ, ಯಾವ ಜಿಲ್ಲೆಯಲ್ಲಿದೆ ಎಂಬ ಮಾಹಿತಿಯನ್ನು ವಿವರವಾಗಿ ಕೊಡಲಾಗಿದೆ ನೋಡಿ...

ಇಡಗುಂಜಿಯಲ್ಲಿರುವ ಗಣಪತಿ ದೇವಾಲಯ

ಇಡಗುಂಜಿಯಲ್ಲಿರುವ ಗಣಪತಿ ದೇವಾಲಯ

ಈ ಗಣಪತಿ ದೇವಾಲಯದ ಇತಿಹಾಸವು 1500 ವರ್ಷಗಳಷ್ಟು ಹಿಂದಿನದು. ಇಲ್ಲಿ ನಿಂತಿರುವ ಭಂಗಿಯಲ್ಲಿ ವಿನಾಯಕನನ್ನು ಕಾಣಬಹುದು. ಗಣಪತಿ ವಿಗ್ರಹವು ಎರಡು ಕೈಗಳನ್ನು ಹೊಂದಿದ್ದು, ಗಣೇಶನು ಒಂದು ಕೈಯಲ್ಲಿ ಮೋದಕ, ಇನ್ನೊಂದು ಕೈನಲ್ಲಿ ಪದ್ಮವನ್ನು (ಕಮಲ) ಹಿಡಿದಿದ್ದಾನೆ. ಹೊನ್ನಾವರದಿಂದ 14 ಕಿಮೀ ದೂರದಲ್ಲಿರುವ ಈ ಗಣಪತಿ ದೇವಸ್ಥಾನವು ಮುರುಡೇಶ್ವರದ ಬಳಿ ಇಡಗುಂಜಿ ಗ್ರಾಮದಲ್ಲಿದೆ. ಇದು ಈ ಪ್ರದೇಶದ ಪ್ರಸಿದ್ಧ ದೇವಾಲಯ, ಮುರುಡೇಶ್ವರದ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಕರ್ನಾಟಕದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ವರ್ಷಕ್ಕೆ 1 ದಶಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಿನಾಯಕ ಚತುರ್ಥಿ ಇಲ್ಲಿನ ಪ್ರಮುಖ ಹಬ್ಬ. ಇಡಗುಂಜಿಗೆ ಹೊನ್ನಾವರ ಅಥವಾ ಮಂಕಿಯಿಂದ ಬಸ್ಸಿನ ಮೂಲಕ ತಲುಪಬಹುದು.

ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ

ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ

ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನವು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿದೆ. ಇದು ಗಣೇಶನಿಗೆ ಸಮರ್ಪಿತವಾದ ಪ್ರಸಿದ್ಧ ಮತ್ತು ಪುರಾತನ ದೇವಾಲಯವಾಗಿದೆ. ಇದು ಭಾರತದ ಏಕೈಕ ಜಲಧಿವಾಸ ಗಣಪತಿ ದೇವಾಲಯವಾಗಿದೆ. ಮೂರು ಅಡಿಯಿರುವ ಗಣೇಶನ ವಿಗ್ರಹವು ಕುಳಿತ ಭಂಗಿಯಲ್ಲಿದೆ. ದೇವಾಲಯವು ಗುಡ್ಡಟ್ಟು ಅಡಿಗರ ಮನೆತನಕ್ಕೆ ಸೇರಿದ್ದು. ಇಲ್ಲಿ ಗಣೇಶ ಚತುರ್ಥಿ ಮತ್ತು ಸಂಕಷ್ಟ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಯುರ್ಕೊಡ ಅಭಿಷೇಕ ಮತ್ತು ಅಕ್ಕಿ ಕಡುಬು ಸೇವೆ ಎಂಬ ಎರಡು ಪ್ರಮುಖ ಆಚರಣೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಗುಡ್ಡಟ್ಟು ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ನೀವು ಬಸ್, ಕ್ಯಾಬ್ ಅಥವಾ ಸ್ವಂತ ವಾಹನಗಳಲ್ಲಿ ಇಲ್ಲಿಗೆ ಬರಬಹುದು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕದಲ್ಲಿರುವ ಪುರಾತನ ಗಣೇಶ ದೇವಾಲಯವಾಗಿದೆ. ದೇವಾಲಯವು ಹಸಿರಿನಿಂದ ಆವೃತವಾಗಿದ್ದು, 24 ಗಂಟೆಗಳ ಕಾಲವೂ ತೆರೆದಿರುತ್ತದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು 35 ಕಿಮೀ ಇದೆ. ಹಾಗೆಯೇ ಧರ್ಮಸ್ಥಳದಿಂದ ಇದು 16 ಕಿಮೀ ದೂರದಲ್ಲಿದೆ. ದೇವಾಲಯದ ಒಳಗೆ ಸಾಕಷ್ಟು ಕೋತಿಗಳನ್ನು ಕಾಣಬಹುದು. ಇಲ್ಲಿ ಎಲ್ಲಾ ಭಕ್ತರಿಗೆ ಪ್ರಸಾದದ ರೂಪದಲ್ಲಿ ಆಹಾರವನ್ನು ನೀಡಲಾಗುತ್ತದೆ.

ಗೋಕರ್ಣ ಮಹಾಗಣಪತಿ ದೇವಸ್ಥಾನ

ಗೋಕರ್ಣ ಮಹಾಗಣಪತಿ ದೇವಸ್ಥಾನ

ಗೋಕರ್ಣ ಮಹಾಗಣಪತಿ ದೇವಾಲಯವು ಉತ್ತರ ಕನ್ನಡದ, ಗೋಕರ್ಣದ ಮಹಾಬಲೇಶ್ವರ ದೇವಾಲಯದ ಬಳಿ ಇರುವ ಪುರಾತನ ದೇವಾಲಯವಾಗಿದೆ. ದೇಗುಲದ ವಿಗ್ರಹವು 1,500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಪ್ರವೇಶವು ಉಚಿತವಾಗಿದೆ. ಸಾಮಾನ್ಯ ದಿನಗಳಲ್ಲಿ ಭಗವಂತನ ದರ್ಶನ ಪಡೆಯಲು ಗರಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಗರ್ಭಗುಡಿಯೊಳಗಿನ ಮುಖ್ಯ ವಿಗ್ರಹದ ಫೋಟೋ ತೆಗೆದುಕೊಳ್ಳಲು ಕಟ್ಟುನಿಟ್ಟಾಗಿ ಅನುಮತಿಸಲಾಗುವುದಿಲ್ಲ. ದೇವಾಲಯದ ಮುಂಭಾಗದಲ್ಲಿರುವ ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಯಾತ್ರಾರ್ಥಿಗಳು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಆದರೆ, ಇದು ಖಡ್ಡಾಯವಲ್ಲ, ವೈಯಕ್ತಿಕ ಆಯ್ಕೆಯಾಗಿದೆ. ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಭಕ್ತರು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಬೇಕು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಕುಂಬಾಶಿಯ ಆನೆಗುಡ್ಡೆ ಗ್ರಾಮದಲ್ಲಿದೆ. ಗಣಪತಿಯು ಈ ಪ್ರದೇಶದ ಪ್ರಮುಖ ಆರಾಧ್ಯ ದೈವವಾಗಿದೆ. ಆನೆಗುಡ್ಡೆಯನ್ನು ಕುಂಬಾಶಿ ಎಂದೂ ಕರೆಯುತ್ತಾರೆ. ಕುಂಬಾಶಿ ಎಂಬ ಹೆಸರು ರಾಕ್ಷಸ ಕುಂಭಾಸುರನಿಂದ ಬಂದಿದೆ ಎಂದು ಹೇಳಲಾಗುತ್ತದೆ. ಗಣಪತಿಯ ಪ್ರತಿಮೆಯು ಪ್ರತಿ ವರ್ಷವೂ ದೊಡ್ಡದಾಗಿ ಬೆಳೆಯುತ್ತದೆ ಎಂದು ನಂಬಲಾಗಿದೆ. ಉಡುಪಿಯಿಂದ 25 ಕಿಮೀ ದೂರದಲ್ಲಿರುವ ಆನೆಗುಡ್ಡೆ ವಿನಾಯಕ ದೇವಸ್ಥಾನವು ಈ ಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಆನೆಗುಡ್ಡೆ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಮುಖ ಹಬ್ಬ. ಸಂಕಷ್ಟ ಚತುರ್ಥಿಯನ್ನು ಕೂಡ ಇಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದೇವಾಲಯದ ರಥೋತ್ಸವ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುತ್ತದೆ.

ಕುರುಡುಮಲೆ ಶ್ರೀ ಗಣೇಶ ದೇವಸ್ಥಾನ

ಕುರುಡುಮಲೆ ಶ್ರೀ ಗಣೇಶ ದೇವಸ್ಥಾನ

ಕುರುಡುಮಲೆ ಶ್ರೀ ಗಣೇಶ ದೇವಸ್ಥಾನವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿದೆ. ಕುರುಡುಮಲೆಯಲ್ಲಿರುವ ಗಣಪತಿ ದೇವಾಲಯವು ಅತ್ಯಂತ ಶಕ್ತಿಶಾಲಿಯಾಗಿದೆ. ಈ ಸುಂದರವಾದ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿರುವ ಗಣೇಶನ ವಿಗ್ರಹವು 14 ಅಡಿ ಎತ್ತರವಿದೆ. ವಾರಾಂತ್ಯದಲ್ಲಿ ಮತ್ತು ವಿಶೇಷ ಹಬ್ಬಗಳಲ್ಲಿ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಾರೆ. ಗಣೇಶ ಚತುರ್ಥಿ (ಸೆಪ್ಟೆಂಬರ್) ಇಲ್ಲಿ ಆಚರಿಸಲಾಗುವ ಅತ್ಯಂತ ಪ್ರಸಿದ್ಧ ಹಬ್ಬವಾಗಿದೆ. ಸೋಮೇಶ್ವರ ದೇವಸ್ಥಾನವು ಗಣಪತಿ ದೇವಸ್ಥಾನಕ್ಕೆ 200 ಮೀಟರ್ ಮೊದಲು ಇದೆ. ಶಿವನಿಗೆ ಸಮರ್ಪಿತವಾಗಿರುವ ಸೋಮೇಶ್ವರ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಗಣಪತಿ ದೇವಾಲಯಕ್ಕಿಂತಲೂ ಹಳೆಯದು ಎಂದು ನಂಬಲಾಗಿದೆ. ಮುಳಬಾಗಿಲಿನಿಂದ ಕುರುಡುಮಲೆಗೆ ಸಾರ್ವಜನಿಕ ಸಾರಿಗೆ ಲಭ್ಯವಿದೆ.

ಶ್ರೀ ಶರವು ಮಹಾಗಣಪತಿ ದೇವಸ್ಥಾನ

ಶ್ರೀ ಶರವು ಮಹಾಗಣಪತಿ ದೇವಸ್ಥಾನ

ಶ್ರೀ ಶರವು ಮಹಾಗಣಪತಿ ದೇವಸ್ಥಾನವು ಮಂಗಳೂರಿನ ಹಂಪನಕಟ್ಟೆಯಲ್ಲಿದೆ. ದೇವಾಲಯವು ಶಿವ ಮತ್ತು ಗಣೇಶನಿಗೆ ಅರ್ಪಿತವಾದ ಪ್ರಸಿದ್ಧ ಪುರಾತನ ದೇವಾಲಯವಾಗಿದೆ. ಮಹಾ ಗಣಪತಿಯ ಗುಡಿಯು ದಕ್ಷಿಣದಲ್ಲಿದೆ ಮತ್ತು ಶಿವನ ದೇವಾಲಯವು ಪಶ್ಚಿಮದಲ್ಲಿದೆ. ಈ ದೇವಾಲಯವು ಸುಮಾರು 800 ವರ್ಷಗಳಷ್ಟು ಹಳೆಯದಾಗಿದೆ. ಸಂಕ್ರಾಂತಿ, ಗಣೇಶ ಚತುರ್ಥಿ ಮತ್ತು ದಸರಾ ಮುಂತಾದ ಹಬ್ಬ ಹರಿದಿನಗಳಲ್ಲಿ ದೇವಸ್ಥಾನವು ಜನಜಂಗುಳಿಯಿಂದ ತುಂಬಿರುತ್ತದೆ. ಮಹಾ ಗಣಪತಿ ದೇವಾಲಯವನ್ನು ತುಳುವ ರಾಜ ವೀರಬಾಹು ನಿರ್ಮಿಸಿದನು.

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ

ದೊಡ್ಡ ಗಣಪತಿ ದೇವಾಲಯ ಅಥವಾ ಬುಲ್ ಟೆಂಪಲ್ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಬಸವನಗುಡಿ ಬುಲ್ ಟೆಂಪಲ್‌ಗೆ ಹೋಗುವ ಮಾರ್ಗದಲ್ಲಿದೆ. ಇದು ಅಂದಾಜು 18 ಅಡಿ ಎತ್ತರ ಮತ್ತು 16 ಅಡಿ ಅಗಲವಿದೆ. ಪ್ರತಿದಿನ ಭಕ್ತರನ್ನು ಆಕರ್ಷಿಸುವ ಈ ದೇವಾಲಯಕ್ಕೆ ಬೆಂಗಳೂರಿನ ನಿವಾಸಿಗಳು ಮಾತ್ರವಲ್ಲದೆ, ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇವಾಲಯದ ನಿರ್ಮಾಣದ ಶ್ರೇಯವು ಬೆಂಗಳೂರಿನ ಸಂಸ್ಥಾಪಕರಾದ ಕೆಂಪೇಗೌಡ ಅವರಿಗೆ ಸಲ್ಲುತ್ತದೆ. ಈ ದೇವಾಲಯದಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಬ್ಬದಲ್ಲಿ ಗಣೇಶನ ವಿಗ್ರಹವನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X