Search
  • Follow NativePlanet
Share
» »ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

By Vijay

ಮನರಂಜನೆ ಎಂಬುದು ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ದಿನವಿಡಿ ಕೆಲಸ, ವಿಶ್ರಾಂತಿ ನಂತರ ನಿದ್ದೆ ಹೀಗೆ ಬದುಕು ಸಾಗಿದರೆ ಒಂದೊಮ್ಮೆ ಹುಚ್ಚು ಹಿಡಿಯುವುದು ಖಂಡಿತ. ಆದ್ದರಿಂದ ಆವಾಗಾವಾಗ ಜೀವನದಲ್ಲಿ ಮನರಂಜನೆ, ನಲಿವು, ಸಂತೋಷಗಳು ಪ್ರವಹಿಸುತ್ತಿರಬೇಕು. ಪ್ರವಾಸ ಹೊರಡುವುದು ನೆಮ್ಮದಿ ಸಂತೋಷಗಳನ್ನು ಕರುಣಿಸಿದರೆ ಚಲನಚಿತ್ರಗಳನ್ನು ನೋಡುವುದು ಖಂಡಿತವಾಗಿಯೂ ಒಂದು ಮನರಂಜನಾತ್ಮಕ ಚಟುವಟಿಕೆಯಾಗಿದೆ.

ಒಮ್ಮೊಮ್ಮೆ ಚಲನಚಿತ್ರಗಳನ್ನು ವೀಕ್ಷಿಸುವಾಗ ಅದರಲ್ಲಿ ಸೆರೆಹಿಡಿಯಲಾದ ಕೆಲವು ತಾಣಗಳು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದು ಬಿಡುತ್ತವೆ ಕಾರಣ ಆ ಸ್ಥಳಗಳ ಸೌಂದರ್ಯ, ಅಲ್ಲಿರುವ ಲವಲವಿಕೆ. ನಂತರ ಆ ಸ್ಥಳಗಳು ಯಾವುವು ಎಂಬುದರ ಸಂಶೋಧನೆಗೆ ನಮ್ಮ ಗಮನ ಹರಿದರೂ ಅಚ್ಚರಿ ಪಡಬೇಕಾಗಿಲ್ಲ. ಒಂದು ರೀತಿಯಲ್ಲಿ ಚಲನಚಿತ್ರಗಳೂ ಸಹ ಪ್ರವಾಸೋದ್ಯಮದ ಅಭಿವೃದ್ಧಿಗೆ ತಮ್ಮದೆ ಆದ ಅಮೂಲ್ಯವಾದಂತಹ ಕೊಡುಗೆಯನ್ನು ನೀಡುತ್ತಿವೆ.

ಪ್ರಸ್ತುತ ಲೇಖನವು ಬಾಲಿವುಡ್ಡಿನ ಆರು ಪ್ರಮುಖ ಚಿತ್ರಗಳು ಎಲ್ಲೇಲ್ಲಿ ಚಿತ್ರೀಕರಣಗೊಂಡಿವೆ ಎಂಬುದರ ಕುರಿತು ತಿಳಿಸುತ್ತದೆ. ಮುಖ್ಯವಾಗಿ ಈ ಚಿತ್ರಗಳು ತಾರಾಮೌಲ್ಯವುಳ್ಳ ಪ್ರಮುಖ ಹಿಂದಿ ಚಲನಚಿತ್ರಗಳಾಗಿದ್ದು ನಮ್ಮ ಕರುನಾಡಿನ ವಿವಿಧೆಡೆಗಳಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ. ನೀವೂ ಕೂಡ ಈ ಚಿತ್ರಗಳ ಹೆಸರುಗಳನ್ನು ಕೇಳಿರಬಹುದು ಆದರೆ ಈ ಚಿತ್ರಗಳು ಚಿತ್ರೀಕರಣಗೊಂಡ ಸ್ಥಳಗಳ ಕುರಿತು ತಿಳಿದಾಗ ನಿಮಗೂ ಸಹ ಅಚ್ಚರಿ ಆಗದೆ ಇರಲಾರದು.

ಚಲನ ಚಿತ್ರಗಳ ಪೋಸ್ಟರ್ ಚಿತ್ರಕೃಪೆ: ವಿಕಿಪೀಡಿಯಾ

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಚಿತ್ರಕೃಪೆ: Lingeswaran Marimuthukum

ಸಾಥ್ ಖೂನ್ ಮಾಫ್ : ಪ್ರಖ್ಯಾತ ತಾರೆ ಅಭಿನಯಿಸಿದ ಈ ಹಿಂದಿ ಚಿತ್ರ 2011 ರಲ್ಲಿ ತೆರೆಕಂಡಿತ್ತು. ನೈಜ ಪ್ರೀತಿಯ ಹುಡುಕಾಟಕ್ಕಾಗಿ ಒಬ್ಬ ಮಹಿಳೆಯು ಒಂದಾದ ಮೇಲೊಂದರಂತೆ ಮದುವೆ ಮಾಡಿಕೊಳ್ಳುತ್ತ ಗಂಡಂದಿರನ್ನು ಕೊಲೆ ಮಾಡುವುದೆ ಕಥಾ ಹಂದರ. ಈ ಚಿತ್ರವು ಕರ್ನಾಟಕದ ಕೊಡಗಿನಲ್ಲಿ ಚಿತ್ರೀಕರಣಗೊಂಡಿರುವುದು ಪ್ರಮುಖ ಅಂಶ. ಕೊಡಗಿನ ಮೈಸಿರಿ, ಉನ್ಮಾದತೆ ಚಿತ್ರಕ್ಕೆ ಹೆಚ್ಚಿನ ಇಂಬನ್ನು ಕರುಣಿಸಿವೆ.

ಮಂತ್ರಮುಗ್ಧಗೊಳಿಸುವ ಕೊಡಗಿನ ಚಿತ್ರಗಳು

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಚಿತ್ರಕೃಪೆ: Vinu Thomas

ರೌಡಿ ರಾಥೋಡ್: 2012 ರಲ್ಲಿ ತೆರೆಕಂಡ ಅಕ್ಷಯ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ ಈ ಚಿತ್ರ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಚಿತ್ರ. ಈ ಚಿತ್ರದ ಲೋಕಪ್ರೀಯ ಗೀತೆಯಾದ "ಧದಂಗ್ ಧದಂಗ್" ಹಾಡಿನ ಚಿತ್ರೀಕರಣವು ಬೆಂಗಳೂರು ಅರಮನೆಯಲ್ಲಿ ಚಿತ್ರೀಕರಣಗೊಂಡಿದೆ.

ಬೆಂಗಳೂರಿನ ಅಮೋಘ ಚಿತ್ರಗಳು

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಚಿತ್ರಕೃಪೆ: Alende devasia

ಗುರು: ದಕ್ಷಿಣದ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ನಿರ್ದೇಶನದ, ಅಭಿಷೇಕ ಬಚ್ಚನ್ ಹಾಗೂ ಕರಾವಳಿ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಅಭಿನಯದ ಗುರು ಚಿತ್ರದ "ಏಕ್ ಲೋ ಏಕ್ ಮುಫ್ತ್" ಗೀತೆಯ ಚಿತ್ರೀಕರಣವು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಗುಹೆಗಳಲ್ಲಿ ಚಿತ್ರೀಕರಣಗೊಂಡಿದೆ. ಬಾದಾಮಿ ಗುಹೆಗಳು ಪುರಾತನ ಗುಹಾ ರಚನೆಗಳಾಗಿದ್ದು ಸುಂದರ ಕೆತ್ತನೆಗೆ ಹೆಸರುವಾಸಿಯಾಗಿದೆ.

ಎಂದಿಗೂ ಮರೆಯಲಾಗದ ಬಾದಾಮಿ

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಚಿತ್ರಕೃಪೆ: Ravibhalli

ನಾಯಕ್: ಅನೀಲ್ ಕಪೂರ್ ಅಭಿನಯದ ನಾಯಕ್ ಎಂಬ ಯಶಸ್ವಿ ಹಿಂದಿ ಚಿತ್ರವು 2001 ರಲ್ಲಿ ತೆರೆಕಂಡಿತ್ತು. ಚಿತ್ರದ ಕೆಲ ಭಾಗಗಳು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ. ಅಷ್ಟೆ ಅಲ್ಲ ಚೈನಾ ಗೇಟ್, ಅಮಾನತ್ ನಂತಹ ಇತರೆ ಚಿತ್ರಗಳೂ ಸಹ ಈ ಪಟ್ಟಣದಲ್ಲಿ ಚಿತ್ರೀಕರಣಗೊಂಡಿವೆ.

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಚಿತ್ರಕೃಪೆ: Sherwin1995

ಕೂಲಿ: ಸೂಪರ್ ಸ್ಟಾರ್ ಅಮೀತಾಭ್ ಬಚ್ಚನ್ ಅವರ ಅಮೋಘ ಅಭಿನಯದ 1983 ರಲ್ಲಿ ತೆರೆಕಂಡ ಕೂಲಿ ಎಂಬ ಹಿಂದಿ ಚಲನ ಚಿತ್ರದ ಕೆಲ ಭಾಗಗಳು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿವೆ. ಹೌದು, ಇದರಲ್ಲಿ ನಾಯಕ ಒಬ್ಬ ಕೂಲಿ ಕಾರ್ಮಿಕನಾಗಿ ಅಭಿನಯಿಸಿದ್ದು, ಬೆಂಗಳೂರು ರೈಲು ನಿಲ್ದಾಣ ಹಾಗೂ ಕಬ್ಬನ್ ಪಾರ್ಕುಗಳಲ್ಲಿ ಈ ಚಿತ್ರ ಚಿತ್ರೀಕರಣಗೊಂಡಿದೆ.

ಬೆಂಗಳೂರಿನ ಲ್ಯಾಂಡ್ ಮಾರ್ಕ್ ಕಬ್ಬನ್ ಪಾರ್ಕ್

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು

ಚಿತ್ರಕೃಪೆ: muscicapa

ಶೋಲೆ: ತೇರಾ ಕ್ಯಾ ಹೋಗಾ ಕಾಲಿಯಾ? ಕಿತ್ನೆ ಆದ್ಮಿ ಥೆ? ಮುಂತಾದ ಸಂಭಾಷಣೆಗಳು ಯಾರಿಗೆ ತಾನೆ ನೆನಪಿಲ್ಲ. ಹೌದು 1975 ರಲ್ಲಿ ತೆರೆಕಂಡ ಭಾರತದ ಅತ್ಯಂತ ಯಶಸ್ವಿ ಚಿತ್ರಗಳ ಪೈಕಿ ಒಂದಾದ ಶೋಲೆ ಚಿತ್ರದ ಪ್ರಸಿದ್ಧ ಸಂಭಾಷಣೆಗಳಿವು. ಈ ಚಿತ್ರದ ಬಹುತೇಕ ಭಾಗವು ಕರ್ನಾಟಕದ ರೇಷ್ಮೆ ಪಟ್ಟಣ ರಾಮನಗರದಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X