
ಕಾರ್ಕಳದ ಗೋಮ್ಮಟೇಶ್ವರನನ್ನು ನೋಡಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 42ಅಡಿ ಎತ್ತರದ ಭಗವಾನ್ ಬಾಹುಬಲಿ ಏಕಶಿಲ ವಿಗ್ರಹವು ದೇಶದಲ್ಲೇ ಪ್ರಸಿದ್ಧವಾದುದು. ಇದು ಚತುರ್ಮುಖ ತೀರ್ಥಂಕರ ಬಸದಿ, ಹಿರಿಯಂಗಡಿ ನೆಮೀನಾಥ ಬಸದಿ ಮತ್ತುಆನೇಕೆರೆ ಪದ್ಮಾವತಿ ಬಸದಿಯಂತಹ ಕೆಲವು ಆಕರ್ಷಣೆಗಳನ್ನು ಒಳಗೊಂಡಿದೆ. ಇದು ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.

18 ಜೈನ ದೇವಾಲಯಗಳು
ಕರಿಕಲ್ಲು ಎಂಬುದು ಕನ್ನಡದ ಪದವಾಗಿದ್ದು ಕಪ್ಪು ಕಲ್ಲು ಎಂದು ಅರ್ಥೈಸುತ್ತದೆ. ಕಾರ್ಕಳವು ಐತಿಹಾಸಿಕ ಪಟ್ಟಣವೆಂದು ಪರಿಗಣಿಸಲಾಗಿದ್ದು ಜೈನರ ಒಂದು ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಇಲ್ಲಿ ಸುಮಾರು 18 ಜೈನ ದೇವಾಲಯಗಳು (ಬಸದಿಗಳು) ಕಾಣಸಿಗುತ್ತವೆ. ಇಲ್ಲಿ ಕಟ್ಟಲಾದ ಕೆಲವು ಜೈನ ದೇವಾಲಯಗಳಲ್ಲಿ ಚತುರ್ಮುಖ ತೀರ್ಥಂಕರ ಬಸದಿ, ಹಿರಿಯಂಗಡಿ ನೇಮಿನಾಥ ಬಸದಿ ಮತ್ತು ಆನೆಕೆರೆ ಪದ್ಮಾವತಿ ಬಸದಿ ಮುಖ್ಯವಾದುದು.

42 ಅಡಿ ಏಕಶಿಲೆಯ ಪ್ರತಿಮೆ
ಕಾರ್ಕಳದಲ್ಲಿ ಭಗವಾನ್ ಬಾಹುಬಲಿ ಗೋಮಟೇಶ್ವರ ಬೆಟ್ಟದಲ್ಲಿ ಭಗವಾನ್ ಬಾಹುಬಲಿಯ 42 ಅಡಿ ಏಕಶಿಲೆಯ ಪ್ರತಿಮೆ ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಎರಡನೇ ಎತ್ತರವಾದ ವಿಗ್ರಹವೆಂದು ಹೇಳಲಾಗುತ್ತದೆ. ಕಾರ್ಕಳದ ಮಠಾಧೀಶರ ಸೂಚನೆಗಳ ಮೇಲೆ ಫೆಬ್ರವರಿ 13, 1432 ರಂದು ಕಾರ್ಕಳದ ಬಾಹುಬಲಿ ಪ್ರತಿಮೆಯನ್ನು ಸ್ಥಾಪಿಸಲಾಯಿತು.

ಮಹಾಮಸ್ತಕಾಭಿಷೇಕ
ಭಗವಾನ್ ಬಾಹುಬಲಿಯವರ ಭವ್ಯವಾದ ಪ್ರತಿಮೆಗೆ ಸ್ನಾನ ಮತ್ತು ಅಭಿಷೇಕದ ಸಮಾರಂಭವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಜಗತ್ತಿನ ಎಲ್ಲಾ ಕಡೆಯಿಂದ ಬರುವ ಭಕ್ತರಿಂದ ಸಾವಿರಾರು ಮಡಿಕೆ ಹಾಲು, ತುಪ್ಪ, ಗಂಧ, ಕೇಸರಿ, ಹೂವುಗಳು ಮುಂತಾದುವುಗಳನ್ನು ಅರ್ಪಿಸುವುದರ ಮೂಲಕ ಗೋಮಟೇಶ್ವರನ ಬೃಹತ್ ಪ್ರತಿಮೆಯನ್ನು ಪೂಜಿಸಲಾಗುತ್ತದೆ. ಕಾರ್ಕಳದಲ್ಲಿ ಕೊನೆಯ ಮಹಾಮಸ್ತಕಾಭಿಷೇಕ ಫೆಬ್ರವರಿ 2002ರಲ್ಲಿ ನಡೆಯಿತು. ಕಾರ್ಕಳದಲ್ಲಿ ಮುಂದಿನ ಮಹಾಮಸ್ತಕಾಭಿಷೇಕ 2014ರಲ್ಲಿ ನಡೆಸಲಾಗುತ್ತದೆ.

ಸಂತ ಲಾರೆನ್ಸ್ ಚರ್ಚ್
PC: youtube
ಕಾರ್ಕಳದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಅತ್ತೂರಿನಲ್ಲಿರುವ ಸಂತ ಲಾರೆನ್ಸ್ ಚರ್ಚ್. ಸೇಂಟ್ ಲಾರೆನ್ಸ್ ಚರ್ಚ್ ಕಾರ್ಕಳ ಬಸ್ ನಿಲ್ದಾಣದ ಪಶ್ಚಿಮಕ್ಕೆ 5 ಕಿಮೀ ದೂರವಿರುವ ಅತ್ತೂರ್ ಎಂಬ ಸಣ್ಣ ಹಳ್ಳಿಯ ಪಾರ್ಪಲೆ ಬೆಟ್ಟದ ಕೆಳಭಾಗದಲ್ಲಿದೆ. ಈ ಚರ್ಚ್ ಗಮನಾರ್ಹವಾದ ಇತಿಹಾಸವನ್ನು ಹೊಂದಿದೆ. ಇಲ್ಲಿ ನಡೆಯುವ ಸಂತ ಲಾರೆನ್ಸ್ ಜಾತ್ರೆಯು ರಾಜ್ಯದಾದ್ಯಂತದ ವಿವಿಧ ಭಾಗಗಳ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ಲಕ್ಷದೀಪೋತ್ಸವ
PC: youtube
ಇಲ್ಲಿಯ ವೆಂಕಟರಮಣ ದೇವಾಲಯದಲ್ಲಿ ನಡೆಯುವ "ಲಕ್ಷದೀಪೋತ್ಸವ" ವು ಒಂದು ನೋಡಲು ಅರ್ಹವಾಗಿರುವಂತಹ ಉತ್ಸವವಾಗಿದೆ. ಇಲ್ಲಿಯ ವೆಂಕಟೇಶ್ವರ ಸ್ವಾಮಿಯ ವಿಗ್ರಹವು ಅದ್ಬುತ ಕಲೆಯಾಗಿದೆ. ವೆಂಕಟರಮಣ ದೇವಾಲಯದ ಎದುರುಗಡೆ ಇರುವ ವೀರಮೂರ್ತಿ ದೇವಾಲಯವು 16 ಅಡಿ ಎತ್ತರವಿರುವ ಏಕ ಶಿಲೆಯ ಹನುಮಂತನ ವಿಗ್ರಹವನ್ನು ಹೊಂದಿದ್ದು ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿರುವ ಇನ್ನೊಂದು ಭೇಟಿ ಕೊಡಲು ಯೋಗ್ಯವಾದ ದೇವಾಲಯವೆಂದರೆ ಅದು ಅನಂತಶಯನ ದೇವಾಲಯ. ಇಲ್ಲಿಯ ವಿಷ್ಣು ದೇವರ ವಿಗ್ರಹವು ತಿರುವನಂತಪುರಂನ ದೇವಾಲಯದ ವಿಗ್ರಹವನ್ನು ಹೋಲುತ್ತದೆ.