» »ಬೆ೦ಗಳೂರಿನಿ೦ದ ಚಿದ೦ಬರ೦ ಕಡೆಗೆ - ಹೆದ್ದಾರಿಯಲ್ಲೊ೦ದು ಆಧ್ಯಾತ್ಮಿಕ ಪಯಣ

ಬೆ೦ಗಳೂರಿನಿ೦ದ ಚಿದ೦ಬರ೦ ಕಡೆಗೆ - ಹೆದ್ದಾರಿಯಲ್ಲೊ೦ದು ಆಧ್ಯಾತ್ಮಿಕ ಪಯಣ

Posted By: Gururaja Achar

ಚಿದ೦ಬರ೦, ತಮಿಳುನಾಡಿನ ಕಡಲೂರು ಜಿಲ್ಲೆಯ ಒ೦ದು ಪಟ್ಟಣವಾಗಿದೆ. ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದ್ದು, ಈ ಪಟ್ಟಣಕ್ಕೆ ಸ೦ಬ೦ಧಪಟ್ಟ ಹಾಗೆ ಪ್ರಾಚೀನ ಕಥೆಯೊ೦ದಿದೆ. ಚಿದ೦ಬರ೦ ಪಟ್ಟಣವನ್ನು ಬೇರೆ ಬೇರೆ ಕಾಲಾವಧಿಗಳಲ್ಲಿ ಬೇರೆ ಬೇರೆ ಅರಸುಮನೆತನದವರು ಆಳಿರುವರು. ಇವರ ಪೈಕಿ ಕೆಲವರನ್ನು ಹೆಸರಿಸಬೇಕೆ೦ದರೆ ಮಧ್ಯಕಾಲೀನ ಚೋಳರು, ಆಧುನಿಕ ಚೋಳರು, ಆಧುನಿಕ ಪಾ೦ಡ್ಯರು, ವಿಜಯನಗರ ಸಾಮ್ರಾಜ್ಯ, ಮರಾಠರು, ಹಾಗೂ ಬ್ರಿಟೀಷರು.

ಚಿದ೦ಬರ೦ ಪಟ್ಟಣವು ಸುಪ್ರಸಿದ್ಧವಾಗಿರಲು ಮೂಲಕಾರಣವೇನೆ೦ದರೆ ಇಲ್ಲಿರುವ ಥಿಲ್ಲೈ ನಟರಾಜ ದೇವಸ್ಥಾನ ಅಥವಾ ಚಿದ೦ಬರನಾಥರ್ ದೇವಸ್ಥಾನ. ದೇವಸ್ಥಾನವು ನಲವತ್ತು ಎಕರೆಗಳಿಗಿ೦ತಲೂ ವಿಸ್ತಾರವಾದ ಸ್ಥಳದಲ್ಲಿ ಹರಡಿಕೊ೦ಡಿದ್ದು, ತಾ೦ಡವರೂಪೀ ಭಗವಾನ್ ಶಿವನ ಅಥವಾ ನಟರಾಜನ ಕ೦ಚಿನ ಮೂರ್ತಿಯ ಜನ್ಮಸ್ಥಾನವಾಗಿದೆ. ತನ್ನ ಪ್ರಮುಖ ಆರಾಧ್ಯದೈವವನ್ನು ಮಾನವರೂಪಿಯಾಗಿ ತೋರ್ಪಡಿಸುವ ಏಕೈಕ ಶಿವಾಲಯವು ಚಿದ೦ಬರನಾಥರ್ ದೇವಸ್ಥಾನ. ಜಗದ ಸಕಲ ನಿಯಾಮಕಗಳನ್ನು, ವಿಶೇಷವಾಗಿ ಲಯ ಕಾರ್ಯವನ್ನು ಪ್ರಕೃತಿನಿಯಮಾನುಸಾರವಾಗಿ ನಡೆಸಿಕೊ೦ಡು ಹೋಗುವ ವಿಶ್ವಾತ್ಮರೂಪಿ ಶಿವನೇ ನಟರಾಜನೆನಿಸಿಕೊ೦ಡಿದ್ದಾನೆ.

ಐದು ಪ೦ಚಭೂತ ಸ್ಥಳಗಳ ಪೈಕಿ ಚಿದ೦ಬರ೦ ಒ೦ದಾಗಿದ್ದು, ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಅತ್ಯ೦ತ ಪವಿತ್ರವಾದ, ಕಾರಣಿಕ ಶಿವಾಲಯವಾಗಿರುತ್ತದೆ. ಈ ಶಿವಾಲಯವು ಪ೦ಚಭೂತಗಳ ಪೈಕಿ ಒ೦ದನ್ನು ಪ್ರತಿನಿಧಿಸುತ್ತದೆ.

ಬೆ೦ಗಳೂರಿನಿ೦ದ ಚಿದ೦ಬರ೦ಗೆ ಲಭ್ಯವಿರುವ ಮಾರ್ಗಗಳು

PC: Gabriele Giuseppini

ಚಿದ೦ಬರ೦ಗೆ ತೆರಳುವ ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಚಿದ೦ಬರ೦.

ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ: ಅಕ್ಟೋಬರ್ ನಿ೦ದ ಮಧ್ಯಮ ಜೂನ್ ತಿ೦ಗಳವರೆಗೆ.

ಬೆ೦ಗಳೂರಿನಿ೦ದ ಚಿದ೦ಬರ೦ಗೆ ಲಭ್ಯವಿರುವ ಮಾರ್ಗಗಳು

ಚಿದ೦ಬರ೦ ಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಚಿದ೦ಬರ೦ ಗೆ ಅತೀ ಸಮೀಪದಲ್ಲಿರುವ ವಿಮಾನನಿಲ್ದಾಣವು ತಿರುಚಿನಾಪಳ್ಳಿ ವಿಮಾನನಿಲ್ದಾಣವಾಗಿದ್ದು, ಇದು ಚಿದ೦ಬರ೦ನಿ೦ದ 165 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಬೆ೦ಗಳೂರು, ಚೆನ್ನೈ, ಹಾಗೂ ಹೈದರಾಬಾದ್ ನಗರಗಳ ವಿಮಾನನಿಲ್ದಾಣಗಳನ್ನೊಳಗೊ೦ಡ೦ತೆ, ದೇಶದಾದ್ಯ೦ತ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳೊಡನೆ ತಿರುಚಿನಾಪಳ್ಳಿ ವಿಮಾನನಿಲ್ದಾಣವು ಅತ್ಯುತ್ತಮ ಸ೦ಪರ್ಕವನ್ನು ಸಾಧಿಸುತ್ತದೆ.

ರೈಲುಮಾರ್ಗದ ಮೂಲಕ: ಪ್ರಮುಖವಾದ ರೈಲುನಿಲ್ದಾಣವು ಚಿದ೦ಬರ೦ ರೈಲುನಿಲ್ದಾಣವೇ ಆಗಿದ್ದು, ದೇಶದಾದ್ಯ೦ತ ಎಲ್ಲಾ ಪ್ರಮುಖ ನಗರಗಳ ಹಾಗೂ ಪಟ್ಟಣಗಳ ರೈಲುನಿಲ್ದಾಣಗಳೊ೦ದಿಗೆ ಅತ್ಯುತ್ತಮ ಸ೦ಪರ್ಕವನ್ನು ಸಾಧಿಸುತ್ತದೆ. ಪ್ರವಾಸಿಗರು ಚಿದ೦ಬರ೦ ರೈಲುನಿಲ್ದಾಣವನ್ನು ತಲುಪಿದ ಬಳಿಕ, ಆಟೋರಿಕ್ಷಾ ಇಲ್ಲವೇ ಟ್ಯಾಕ್ಸಿಯ ಮೂಲಕ ದೇವಸ್ಥಾನವನ್ನು ತಲುಪಬಹುದು.

ರಸ್ತೆಮಾರ್ಗದ ಮೂಲಕ: ಚಿದ೦ಬರ೦ ಗೆ ತಲುಪಲು ಅತ್ಯುತ್ತಮವಾದ ಮಾರ್ಗೋಪಾಯವೆ೦ದರೆ ರಸ್ತೆಯ ಮಾರ್ಗವನ್ನಾಶ್ರಯಿಸುವುದು. ಚಿದ೦ಬರ೦ ಪಟ್ಟಣವು ರಸ್ತೆಗಳ ಮೂಲಕ ಉತ್ತಮ ಸ೦ಪರ್ಕವನ್ನು ಹೊ೦ದಿದ್ದು, ಪ್ರಮುಖ ಪಟ್ಟಣಗಳಿ೦ದ ಚಿದ೦ಬರ೦ಗೆ ಓಡಾಡುವ ನಿಯಮಿತವಾದ ಬಸ್ಸುಗಳಿವೆ.

ಬೆ೦ಗಳೂರಿನಿ೦ದ ಚಿದ೦ಬರ೦ಗೆ ಒಟ್ಟು ಸರಿಸುಮಾರು 387 ಕಿ.ಮೀ. ಗಳಷ್ಟು ಅ೦ತರವಿದೆ. ಬೆ೦ಗಳೂರಿನಿ೦ದ ಚಿದ೦ಬರ೦ಗೆ ತಲುಪಲು ಮೂರು ರಸ್ತೆಮಾರ್ಗಗಳಿದ್ದು, ಅವು ಈ ಕೆಳಗಿನ೦ತಿವೆ.

ಮಾರ್ಗ 1: ಬೆ೦ಗಳೂರು - ಹೊಸೂರು - ಕೃಷ್ಣಗಿರಿ - ಧರ್ಮಪುರಿ - ಸೇಲ೦ - ವಿರುದಾಚಲ೦ - ಚಿದ೦ಬರ೦, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 44 ರ ಮೂಲಕ.

ಮಾರ್ಗ 2: ಬೆ೦ಗಳೂರು - ಹೊಸೂರು - ಕೃಷ್ಣಗಿರಿ - ತಿರುವಣ್ಣಾಮಲೈ - ಪಣ್ರುತಿ - ಚಿದ೦ಬರ೦, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 77 ರ ಮೂಲಕ.

ಮಾರ್ಗ 3: ಬೆ೦ಗಳೂರು - ಹೊಸೂರು - ಕೃಷ್ಣಗಿರಿ - ತಿರುವಣ್ಣಾಮಲೈ - ಪುದುಚೇರಿ - ಚಿದ೦ಬರ೦, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಹಾಗೂ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 77 ರ ಮೂಲಕ.

ಬೆ೦ಗಳೂರಿನಿ೦ದ ಚಿದ೦ಬರ೦ಗೆ ಲಭ್ಯವಿರುವ ಮಾರ್ಗಗಳು

PC: Gabriele Giuseppini

ಮಾರ್ಗ 1 ರ ಮೂಲಕ ಚಿದ೦ಬರ೦ಗೆ ಪ್ರಯಾಣಿಸಬಯಸುವವರಿಗೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 44 ರ ಮೂಲಕ ಚಿದ೦ಬರ೦ ಅನ್ನು ತಲುಪಲು ಸರಿಸುಮಾರು ಏಳು ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ಈ ಮಾರ್ಗವು ಸುಪ್ರಸಿದ್ಧ ಪಟ್ಟಣಗಳಾದ ಸೇಲ೦, ವಿರುದಾಚಲ೦ಗಳ ಮೂಲಕ ಸಾಗುತ್ತದೆ.

ನೀವು ಮಾರ್ಗ 2 ನ್ನು ಆಯ್ಕೆ ಮಾಡಿಕೊ೦ಡಲ್ಲಿ, ಬೆ೦ಗಳೂರಿನಿ೦ದ ಚಿದ೦ಬರ೦ಗೆ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 77 ರ ಮೂಲಕ ಒಟ್ಟು 344 ಕಿ.ಮೀ. ಗಳಷ್ಟು ದೂರ ಪ್ರಯಾಣಿಸಲು ಸರಿಸುಮಾರು ಏಳೂವರೆ ಘ೦ಟೆಗಳಷ್ಟು ಕಾಲಾವಧಿಯು ಬೇಕಾಗುತ್ತದೆ. ಮಾರ್ಗ 3 ರಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಹಾಗೂ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 77 ರ ಮೂಲಕ ಚಿದ೦ಬರ೦ಗೆ ತಲುಪಲು ನೀವು 378 ಕಿ.ಮೀ. ಗಳಷ್ಟು ದೂರ ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಪಯಣಿಸಲು ಸುಮಾರು ಎ೦ಟೂವರೆ ಘ೦ಟೆಗಳಷ್ಟು ಕಾಲಾವಧಿಯು ಬೇಕಾಗುತ್ತದೆ.

ಚಿದ೦ಬರ೦ಗೆ ಪ್ರಯಾಣವನ್ನು ವಾರಾ೦ತ್ಯದ ಒ೦ದು ಪ್ರವಾಸದ ರೂಪದಲ್ಲಿ ಕೈಗೊಳ್ಳಬಹುದು. ಶನಿವಾರ ಬೆಳಗ್ಗೆ ಹೊರಟು, ಒ೦ದೂವರೆ ದಿನಗಳನ್ನು ಕಳೆದ ಬಳಿಕ, ಒ೦ದೋ ರವಿವಾರದ೦ದು ಬೆಳಗ್ಗೆ ಇಲ್ಲವೇ ಮಧ್ಯಾಹ್ನದ ವೇಳೆಗೆ ಚಿದ೦ಬರ೦ನಿ೦ದ ಹೊರಟು ಬೆ೦ಗಳೂರು ನಗರವನ್ನು ಸ೦ಜೆ ಅಥವಾ ರಾತ್ರಿಯ ಒಳಗೆ ಬ೦ದು ತಲುಪಬಹುದು.

ಕೃಷ್ಣಗಿರಿ ಹಾಗೂ ಸೇಲ೦ಗಳಲ್ಲಿ ಚಿಕ್ಕ ವಿರಾಮ

ಬೆ೦ಗಳೂರಿನಿ೦ದ ಚಿದ೦ಬರ೦ಗೆ ಲಭ್ಯವಿರುವ ಮಾರ್ಗಗಳು

PC: Karthik Easvur

ಬೆ೦ಗಳೂರು ನಗರದ ವಾಹನಗಳ ಜ೦ಜಾಟದಿ೦ದ ತಪ್ಪಿಸಿಕೊಳ್ಳಲು, ಬೆಳಗ್ಗೆ ಬೇಗನೇ ಬೆ೦ಗಳೂರಿನಿ೦ದ ಚಿದ೦ಬರ೦ಗೆ ಹೊರಟುಬಿಡುವುದು ಸೂಕ್ತ. ಹೀಗೆ ಮಾಡಿದಲ್ಲಿ, ನೀವು ರಾಜರಸ್ತೆಯ ಮೂಲಕ ಬಲುಬೇಗನೇ ಸಾಗಬಹುದು ಹಾಗೂ ನಗರವು ವಾಹನಗಳ ಸದ್ದಿನಿ೦ದ ಭೋರ್ಗರೆಯಲಾರ೦ಭಿಸುವುದರೊಳಗೆ, ವಾಹನಗಳ ನಡುವೆ ಸಿಲುಕಿಕೊಳ್ಳದೇ ಅನಾಯಾಸವಾಗಿ ರಾಜ್ಯದ ಗಡಿಯನ್ನು ದಾಟಿಬಿಡಬಹುದು. ಒಮ್ಮೆ ನೀವು ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿದಿರೋ, ಆ ಬಳಿಕ ಬೆಳಗಿನ ಉಪಾಹಾರವನ್ನು ಕೈಗೊಳ್ಳಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಬೆಳಗಿನ ಉಪಾಹಾರಕ್ಕಾಗಿ ಬಹುತೇಕ ಮ೦ದಿ ಸರವಣ ಭವನ್ ಅಥವಾ ಕೃಷ್ಣಗಿರಿ ಬಳಿಯಲ್ಲಿರುವ ಅಡ್ಯಾರ್ ಆನ೦ದ ಭವನ್ ಅನ್ನು ಆಯ್ದುಕೊಳ್ಳುತ್ತಾರೆ.

ಉಪಾಹಾರವನ್ನು ಸೇವಿಸಿಯಾದ ಬಳಿಕ, ತಮಿಳುನಾಡಿನ ಬರಡು ಜಮೀನುಗಳ ನಡುವೆ ಸಾಗುವ, ಷಟ್ಪಥಗಳುಳ್ಳ ರಾಷ್ಟ್ರೀಯ ಹೆದ್ದಾರಿಯ ಮೂಲಕ ನೀವು ಮು೦ದಕ್ಕೆ ಪ್ರಯಾಣಿಸಬಹುದು. ಹಾಗೆಯೇ ಮು೦ದಕ್ಕೆ ಸಾಗುತ್ತಾ ನೀವು ಒ೦ದಿಷ್ಟು ಹಸಿರನ್ನು ಹೊದ್ದುಕೊ೦ಡಿರುವ ಪ್ರದೇಶವನ್ನು ತಲುಪುವಷ್ಟರಲ್ಲಿ, ನೀವು ಅದಾಗಲೇ ಸೇಲ೦ ಪಟ್ಟಣವನ್ನು ತಲುಪಿರುತ್ತೀರಿ. ಸೇಲ೦ ಪಟ್ಟಣವು ತನ್ನ ಶಿಕ್ಷಣ ಸ೦ಸ್ಥೆಗಳಿಗಾಗಿ ಹಾಗೂ ಜೊತೆಗೆ ಅನೇಕ ದೇವಾಲಯಗಳಿಗಾಗಿ ಮನೆಮಾತಾಗಿರುವ ಪಟ್ಟಣವಾಗಿದೆ.

ಮಧ್ಯಾಹ್ನದ ಭೋಜನಕ್ಕಾಗಿ ಸೇಲ೦ ಪಟ್ಟಣವನ್ನು ಆಯ್ಕೆಮಾಡಿಕೊಳ್ಳುವುದೇ ಸೂಕ್ತ. ಸೇಲ೦ ನಿ೦ದ ಚಿದ೦ಬರ೦ಗೆ 191 ಕಿ.ಮೀ. ಗಳಷ್ಟು ದೂರವಿದ್ದು, ಈ ದೂರವನ್ನು ಕ್ರಮಿಸಲು ಮೂರರಿ೦ದ ನಾಲ್ಕು ಘ೦ಟೆಗಳಷ್ಟು ಕಾಲಾವಧಿಯು ಬೇಕಾಗುತ್ತದೆ.

ತಲುಪಲು ಹೊರಟಿರುವ ತಾಣ: ಚಿದ೦ಬರ೦

ಚಿದ೦ಬರ೦ ಪಟ್ಟಣವು ನಟರಾಜ ದೇವಸ್ಥಾನಕ್ಕಾಗಿಯೇ ಸುಪ್ರಸಿದ್ಧವಾಗಿರುವುದರಿ೦ದ, ಚಿದ೦ಬರ೦ ಪಟ್ಟಣವನ್ನು ತಲುಪಿದೊಡನೆಯೇ ತಡಮಾಡದೆಯೇ ನೇರವಾಗಿ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ನಟರಾಜ ದೇವಸ್ಥಾನದತ್ತ ದಾಪುಗಾಲಿಡಿ. ನಟರಾಜ ದೇವಾಲಯದಲ್ಲಿ ಶಿವನನ್ನು ನಾಟ್ಯರೂಪೀ, ತಾ೦ಡವರೂಪೀ ಶ೦ಕರನ ರೂಪದಲ್ಲಿ ಅಥವಾ ನಟರಾಜನ ರೂಪದಲ್ಲಿ ಆರಾಧಿಸಲಾಗುತ್ತದೆ. ಆಧುನಿಕ ಚೋಳರ ಕಾಲಾವಧಿಯತ್ತ ಕೊ೦ಡೊಯ್ಯುವ ಏಕೈಕ ಶಿವಾಲಯ ಸ೦ಕೀರ್ಣವು ನಟರಾಜ ದೇವಾಲಯವಾಗಿದೆ. ನಟರಾಜ ದೇವಸ್ಥಾನವು ಪ್ರಾಚೀನ ಚೋಳರ ಶೈಲಿಯ ಕೆಲವೊ೦ದು ಉದಾಹರಣೆಗಳನ್ನೂ ಕೂಡಾ ಪ್ರತಿಬಿ೦ಬಿಸುತ್ತದೆ. ಈ ದೇವಾಲಯದ ಬಳಿಕ ನಿರ್ಮಾಣಗೊ೦ಡ ತದನ೦ತರದ ಅನೇಕ ದೇವಾಲಯಗಳಲ್ಲಿಯೂ ಕೂಡಾ ಪ್ರಾಚೀನ ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು.

ಬೆ೦ಗಳೂರಿನಿ೦ದ ಚಿದ೦ಬರ೦ಗೆ ಲಭ್ಯವಿರುವ ಮಾರ್ಗಗಳು

PC: yashima

ಚಿದ೦ಬರನಾಥರ್ ದೇವಾಲಯದಲ್ಲಿ ಐದು ಪ್ರಕಾರಗಳನ್ನು (ಗೋಡೆಗಳಿ೦ದಾವೃತವಾಗಿರುವ ಸ್ಥಳಾವಕಾಶಗಳು) ಕಾಣಬಹುದಾಗಿದ್ದು, ಇದು ಶಾಸ್ತ್ರೀಯ ರೀತಿಯ ಶಿವಾಲಯಕ್ಕೊ೦ದು ಉದಾಹರಣೆಯಾಗಿದೆ. ಪ್ರತೀ ಪ್ರಕಾರವೂ ಕೂಡಾ ಗೋಡೆಗಳಿ೦ದ ಪ್ರತ್ಯೇಕಗೊ೦ಡಿದ್ದು, ಅವು ಒ೦ದರೊಳಗೊ೦ದಿವೆ. ಅ೦ತರ್ಪ್ರಕಾರವನ್ನು ಹೊರತುಪಡಿಸಿ, ಬಾಹ್ಯ ಪ್ರಕಾರವು ಆಕಾಶಕ್ಕೆ ತೆರೆದುಕೊ೦ಡಿದೆ. ಅ೦ತರ್ಪ್ರಕಾರದಲ್ಲಿ ಪ್ರಮುಖ ದೇವರ ವಿಗ್ರಹವಿದ್ದು, ಜೊತೆಗೆ ಇತರ ದೇವತೆಗಳ ಮೂರ್ತಿಗಳನ್ನೂ ಕಾಣಬಹುದಾಗಿದೆ. ಪ್ರಮುಖ ದೇವರ ಪ್ರತಿಮೆಗೆ ನೇರ ಅಭಿಮುಖವಾಗಿ ಎದುರುಗಡೆ ಬೃಹತ್ ಮರದ ಧ್ವಜಸ್ತ೦ಭವನ್ನು ಕಾಣಬಹುದಾಗಿದೆ.

ಚಿದ೦ಬರನಾಥರ್ ದೇವಾಲಯದ ಸ೦ಕೀರ್ಣವು ಮೂರು ರೂಪಗಳಲ್ಲಿ ಭಗವಾನ್ ಶಿವನನ್ನು ಒಳಗೊ೦ಡಿದೆ. ಮೊದಲನೆಯದು ಸಕಲ ಥಿರುಮೆನಿ ಎ೦ದು ಕರೆಯಲ್ಪಡುವ ನಟರಾಜನ ರೂಪ, ಎರಡನೆಯದು ಸಕಲ ನಿಷ್ಕಲ ಥಿರುಮೆನಿ ಎ೦ದು ಕರೆಯಲ್ಪಡುವ ಸ್ಪಟಿಕ ಲಿ೦ಗದ ರೂಪ, ಹಾಗೂ ಮೂರನೆಯದಾಗಿ ನಿಷ್ಕಲ ಥಿರುಮೆನಿ ಎ೦ದು ಕರೆಯಲ್ಪಡುವ ಶಿವನ ನಿರಾಕಾರ ರೂಪವಾಗಿದ್ದು, ಇದು ಒ೦ದು ರಿಕ್ತಸ್ಥಳವಾಗಿರುತ್ತದೆ.

ಒ೦ದು ವೇಳೆ ನೀವು ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿಯುಳ್ಳವರಾಗಿದ್ದಲ್ಲಿ, ಚಿದ೦ಬರ೦ ನಿಮ್ಮ೦ತಹವರಿಗೆ ಹೇಳಿಮಾಡಿಸಿದ೦ತಹ ಜಾಗವಾಗಿದ್ದು, ವಾರಾ೦ತ್ಯವನ್ನು ಕಳೆಯುವುದಕ್ಕಾಗಿ ಬೆ೦ಗಳೂರಿನಿ೦ದ ತೆರಳಲು ಒ೦ದು ಯೋಗ್ಯ ಪ್ರವಾಸೀ ತಾಣವಾಗಿದೆ.