Search
  • Follow NativePlanet
Share
» »ಭಾರತದಲ್ಲಿ ಕಂಡುಬರುವ ಅದ್ಭುತವಾದ ಸೇತುವೆಗಳು

ಭಾರತದಲ್ಲಿ ಕಂಡುಬರುವ ಅದ್ಭುತವಾದ ಸೇತುವೆಗಳು

By Vijay

ಸಾಮಾನ್ಯವಾಗಿ ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಡೆದುಕೊಂಡೊ ಅಥವಾ ವಾಹನದ ಮೂಲಕವೊ ತಲುಪಬೇಕಾದರೆ ರಸ್ತೆ ಎಂಬ ಮಾಧ್ಯಮವು ತುಂಬಾ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. ಆದರೆ ಎಲ್ಲೆಂದರಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ಅಸಾಧ್ಯವಾದುದು. ಉದಾಹರಣೆಗೆ ಎರಡು ಸ್ಥಳಗಳ ಮಧ್ಯೆ ನದಿ ಅಥವಾ ಕೆರೆಯಿದ್ದರೆ ಅಲ್ಲಿ ರಸ್ತೆಯನ್ನು ನಿರ್ಮಿಸಲಾಗುವುದಿಲ್ಲ ಬದಲಿಗೆ ಹರಿಯುವ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿ ಪರಿಹಾರವನ್ನು ಕಂಡುಕೊಳ್ಳಬಹುದು. ಬಹುಶಃ ಸೇತುವೆ ಎಂಬುದು ಪುರಾಣಗಳ ಕಾಲದಿಂದಲೂ ಇತ್ತೊ ಏನೋ...ರಾಮಯಣದಲ್ಲೂ ಕೂಡ ರಾಮನು ರಾವಣನನ್ನು ವಧಿಸಲು ಲಂಕೆಗೆ ತೆರಳುವಾಗ ಕಪಿ ಪಡೆಯು ಸೇತುವನ್ನು ನಿರ್ಮಾಣ ಮಾಡಿತ್ತೆಂದು ತಿಳಿದುಬರುತ್ತದೆ.

ಸೇತುವೆಗಳ ನಿರ್ಮಾಣ ತಾಂತ್ರಿಕವಾಗಿ ಕ್ಲಿಷ್ಟಕರವಾಗಿದ್ದು ಹೆಚ್ಚು ಹಣ ವ್ಯಯಿಸಬೇಕಾದ ಕಾರ್ಯವಾಗಿದೆ. ಆದರೆ ಭವಿಷ್ಯದ ವಾಣಿಜ್ಯಿಕ ದೃಷ್ಟಿಯಿಂದ ನೋಡಿದಾಗ ಸೇತುವೆಗಳ ನಿರ್ಮಾಣ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ತಾಂತ್ರಿಕತೆ, ವಾಣಿಜ್ಯ ಲಾಭ ಅದೇನೆ ಇರಲಿ...ಆದರೆ ನಿರ್ಮಾಣವಾದ ಸೇತುವೆಗಳನ್ನು ನೀರಿನ ಮೇಲೆ ಗಂಭೀರವಾಗಿ ಎದೆ ಉಬ್ಬಿಸಿ ಸೆಟೆದು ನಿಂತಿರುವ ಭಂಗಿಯನ್ನು ನೋಡಿದಾಗ ಮೈಯೆಲ್ಲಾ ಜುಮ್ ಎಂದು ರೋಮಾಂಚನವಾಗದೆ ಇರಲಾರದು. ಅದರಲ್ಲೂ ಸೇತುವೆಗಳ ಮೇಲೆ ರೈಲು ಚಲಿಸುತ್ತಿರುವುದನ್ನು ನೋಡಿದಾಗ ಆಗುವ ಆನಂದ ಅಷ್ಟಿಷ್ಟಲ್ಲ. ನಮಗೆ ಗೊತ್ತಿಲ್ಲದ ಹಾಗೆಯೆ ನಾವು ಒಂದು ರೀತಿಯ ಹೆಮ್ಮೆಯಿಂದ ಬೀಗುತ್ತೆವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗಾದರೆ ಬನ್ನಿ...ಭಾರತದಲ್ಲಿ ಕಂಡುಬರುವೆ ಕೆಲವು ಅದ್ಭುತ ಸೇತುವೆಗಳ ಕುರಿತು ಈ ಲೇಖನದ ಮೂಲಕ ತಿಳಿಯೋಣ ಹಾಗು ಎಂದಾದರು ಒಮ್ಮೆ ಇಲ್ಲಿನ ಕೆಲ ಸೇತುವೆಗಳಿಗಾದರೂ ಭೇಟಿ ನೀಡಲು ಪ್ರಯತ್ನಿಸೋಣ.

ಬಾಂದ್ರಾ-ವರ್ಲಿ ಸೀ ಲಿಂಕ್:

ಬಾಂದ್ರಾ-ವರ್ಲಿ ಸೀ ಲಿಂಕ್:

ಮಹಾರಾಷ್ಟ್ರದ ಮುಂಬೈನಲ್ಲಿರುವ ಈ ಸೇತುವೆಯನ್ನು ಅಧಿಕೃತವಾಗಿ ರಾಜೀವ್ ಗಾಂಧಿ ಸೀ ಲಿಂಕ್ ಎಂದು ಕರೆಯುತ್ತಾರೆ. ಮುಂಬೈನ ಪಶ್ಚಿಮ ಭಾಗದ ಬಾಂದ್ರಾ ಪ್ರದೇಶವನ್ನು ದಕ್ಷಿಣ ಮುಂಬೈನ ವರ್ಲಿ ಪ್ರದೇಶಕ್ಕೆ ಸಂಪರ್ಕಿಸುವ ಕೊಂಡಿಯಾಗಿದೆ ಸಮುದ್ರ ಸೇತುವೆ. 1600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯು ಒಟ್ಟಾರೆ 5.6 ಕಿ.ಮೀ ಉದ್ದವನ್ನು ಹೊಂದಿದೆ. ಸಮುದ್ರದಲ್ಲಿ ಅಭಯವಾಗಿ ನೆಲೆಯುರಿ ನಿಂತಿರುವ ಈ ಸೇತುವೆಯು ರಾತ್ರಿಯ ಹೊತ್ತು ಪ್ರಕಾಶಮಾನವಾಗಿ ಗೋಚರಿಸುತ್ತ ನೋಡುಗರ ಮನದಲ್ಲಿ ಅಂದ ಚೆಂದಗಳ ಅನುಭೂತಿಯನ್ನು ಉಂಟುಮಾಡುತ್ತದೆ.

ಮಹಾತ್ಮಾ ಗಾಂಧಿ ಸೇತು:

ಮಹಾತ್ಮಾ ಗಾಂಧಿ ಸೇತು:

ತಾಳಿ...ಇದು ಸೇತುವೆಯ ಪಾಕ್ಷಿಕ ನೋಟ. ನಿರ್ಮಾಣ ಹೊಂದುತ್ತಿರುವಾಗ ದೇಶದಲ್ಲೆ ಅತಿ ಉದ್ದದ ಸೇತುವೆ ಎಂಬ ಕೀರ್ತಿಗೆ ಇದು ಭಾಜನವಾಗಿತ್ತು. 1982 ಮೇ ತಿಂಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರಿಂದ ಉದ್ಘಾಟಿಸಲ್ಪಟ್ಟಿದ್ದ ಈ ಸೇತುವೆ ಇರುವುದು ಬಿಹಾರ್ ರಾಜ್ಯದಲ್ಲಿ. ಪವನ್ ಸೇತು ಎಂದೂ ಕರೆಯಲ್ಪಡುವ 5,575 ಮೀಟರ್ ಉದ್ದದ ಈ ಸೇತುವೆಯು ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು ಪಾಟ್ನಾದ ದಕ್ಷಿಣ ಭಾಗವನ್ನು ಹಾಜೀಪುರದ ಉತ್ತರ ಭಾಗಕ್ಕೆ ಇದು ಸಂಪರ್ಕಿಸುತ್ತದೆ.

ವಿಕ್ರಮಶಿಲಾ ಸೇತು:

ವಿಕ್ರಮಶಿಲಾ ಸೇತು:

ಬಿಹಾರದ ಭಾಗಲ್ಪುರ್ ಬಳಿಯಲ್ಲಿರುವ ಈ ಸೇತುವೆಯು ಭಾರತದ ಮೂರನೇಯ ಅತಿ ಉದ್ದದ ಸೇತುವೆಯಾಗಿದೆ. ಗಂಗಾನದಿಯ ವಿರುದ್ಧ ದಿಕ್ಕಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 80 ಹಾಗು 31 ಗಳನ್ನು ಇದು ಸುಗಮವಾಗಿ ಸಂಪರ್ಕಗೊಳಿಸುವ ಇದರ ಉದ್ದವು 4.7 ಕಿ.ಮೀ ಆಗಿದೆ.

ವೆಂಬನಾಡ್ ರೈಲು ಸೇತುವೆ:

ವೆಂಬನಾಡ್ ರೈಲು ಸೇತುವೆ:

ಕೇರಳದಲ್ಲಿರುವ ವೆಂಬನಾಡ್ ರೈಲು ಸೇತುವೆಯು ಕೊಚ್ಚಿಯಲ್ಲಿರುವ ಎಡಪಲ್ಲಿ ಹಾಗು ವಲ್ಲಾರ್ಪದಮ್ ಗಳನ್ನು ಒಂದಕ್ಕೊಂದು ಬೆಸೆಯುವ ರೈಲು ಸೇತುವೆಯಾಗಿದೆ. ರೈಲಿಗೆ ಮೀಸಲಾದ ಭಾರತದ ಅತಿ ಉದ್ದನೇಯ ರೈಲು ಸೇತುವೆ ಇದಾಗಿದೆ.

ಕೋಲಿಯಾ ಭೊಮೊರಾ ಸೇತುವೆ:

ಕೋಲಿಯಾ ಭೊಮೊರಾ ಸೇತುವೆ:

ಆಸ್ಸಾಂನ ತೇಜಪುರ್ ನಲ್ಲಿರುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಈ ರಸ್ತೆ ಸೇತುವೆಯನ್ನು ನಿರ್ಮಿಸಲಾಗಿದೆ. 3015 ಮೀ ಉದ್ದವಿರುವ ಈ ಸೇತುವೆಯು ಬ್ರಹ್ಮಪುತ್ರ ನದಿಯ ಉತ್ತರ ತಟದ ಸೋನಿತಪುರ್ ಅನ್ನು ದಕ್ಷಿಣ ತಟದ ನಗಾಂವ್ ಜಿಲ್ಲೆಗೆ ಸಂಪರ್ಕಿಸುತ್ತದೆ.

ಗೋದಾವರಿ ಸೇತುವೆ:

ಗೋದಾವರಿ ಸೇತುವೆ:

ಆಂಧ್ರ ಪ್ರದೇಶದಲ್ಲಿರುವ ಈ ಸೇತುವೆಯನ್ನು ಕೊವ್ವುರ್ - ರಾಜಮಂಡ್ರಿ ಸೇತುವೆ ಎಂದೂ ಕರೆಯಲಾಗುತ್ತದೆ. ರಾಜಮಂಡ್ರಿಯ ಗೋದಾವರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯು ಏಷಿಯಾದಲ್ಲೆ ಎರಡನೇಯ ಅತಿ ಉದ್ದದ ವಾಹನ ಹಾಗು ರೈಲು ಚಲಿಸುವ ವ್ಯವಸ್ಥೆಯಿರುವ ಸೇತುವೆ ಎಂಬ ಬಿರುದನ್ನು ಪಡೆದಿದೆ. ಇದರ ಒಟ್ಟಾರೆ ಉದ್ದ ಸುಮಾರು 2.7 ಕಿ.ಮೀ.

ಹಳೆಯ ಗೋದಾವರಿ ಸೇತುವೆ:

ಹಳೆಯ ಗೋದಾವರಿ ಸೇತುವೆ:

ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿರುವ ಈ ಹ್ಯಾವ್‍ಲಾಕ್ ಸೇತುವೆಯು ಇಂದು ಸ್ಥಗಿತಗೊಳಿಸಲಾದ ಸೇತುವೆಯಾದರೂ ಈ ಪ್ರದೇಶದ ಹೆಗ್ಗುರುತಾಗಿ ಇಂದಿಗೂ ಚಲಾವಣೆಯಲ್ಲಿದೆ. 1900 ರಲ್ಲಿ ಪ್ರಾರಂಭಿಸಲಾದ ಈ ಸೇತುವೆಯನ್ನು ಅಂದಿನ ಮದ್ರಾಸ್ (ಚೆನ್ನೈ) ಅನ್ನು ಕೊಲ್ಕತ್ತಾದ ಹೌರಾಗೆ ಸಂಪರ್ಕ ಕಲ್ಪಿಸಲು ಉಪ್ಯೋಗಿಸಲಾಗುತ್ತಿತ್ತು.

ಗೋದಾವರಿ ಆರ್ಚ್ ಸೇತುವೆ:

ಗೋದಾವರಿ ಆರ್ಚ್ ಸೇತುವೆ:

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಗೋದಾವರಿ ನದಿಗೆ ಕಟ್ಟಲಾಗಿರುವ ಮತ್ತೊಂದು ಸೇತುವೆ ಇದಾಗಿದೆ. ಭಾರತೀಯ ರೈಲ್ವೆ ನಿಗಮದಿಂದ ನಿರ್ಮಿಸಲಾದ ಇದು ಉದ್ದನೆಯ ಕಾಂಕ್ರೀಟ್ ಅರ್ರ್ಚ್ ಹೊಂದಿರುವ ಸೇತುವೆಯಾಗಿದೆ. ಬಹುಶಃ ಜಗತ್ತಿನಲ್ಲೆ ಇಷ್ಟು ಉದ್ದನೆಯ ಕಾಂಕ್ರೀಟ್ ಆರ್ಚ್ ಗಳನ್ನು ಬಳಸಲಾಗಿರುವ ಸೇತುವೆ ಇದೊಂದೆ ಎಂದು ಹೇಳಲಾಗುತ್ತದೆ.

ಪಂಬನ್ ಸೇತುವೆ:

ಪಂಬನ್ ಸೇತುವೆ:

ತಮಿಳುನಾಡಿನ ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂ ಅನ್ನು ಭಾರತದ ಮುಖ್ಯ ಭೂಮಿಗೆ ಸಂಪರ್ಕಗೊಳಿಸುವ ಸಮುದ್ರದಲ್ಲಿ ಕಟ್ಟಲಾದ ಸೇತುವೆ ಇದಾಗಿದೆ. ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್ ನಂತರ ದೇಶದ ಎರಡನೇಯ ಅತಿ ಉದ್ದದ ಸಮುದ್ರ ಸೇತುವೆ ಇದಾಗಿದೆ. ಇದರ ಒಟ್ಟಾರೆ ಉದ್ದವು 2.3 ಕಿ.ಮೀ. ಹೆಚ್ಚು ಕಡಿಮೆ ಸಂಪೂರ್ಣ ಸೇತುವೆಯು ಕಾಂಕ್ರೀಟ್ ಖಂಬಗಳ ಆಶ್ರಯದ ಮೇಲಿದ್ದು ಮಧ್ಯದ ಭಾಗದಲ್ಲಿ ಉಕ್ಕಿನ ಬ್ಯಾಸ್ಕೂಲ್ ಗಳನ್ನು ಹೊಂದಿದೆ. ಚಲಿಸುವ ಹಡುಗುಗಳಿಗೆ ದಾರಿ ಕೊಡಲು ಇದನ್ನು ನಿರ್ಮಿಸಲಾಗಿದ್ದು ಅವುಗಳು ಬಂದಾಗ ಈ ಉಕ್ಕಿನ ಬ್ಯಾಸ್ಕೂಲ್ ಗಳು ಮೇಲ್ಮುಖವಾಗಿ ತೆರೆದು ದಾರಿ ಮಾಡಿಕೊಡುತ್ತವೆ.

ನಾರಾಯಣ ಸೇತು:

ನಾರಾಯಣ ಸೇತು:

ಅಸ್ಸಾಮಿನ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮೂರನೇಯ ಸೇತುವೆ ಇದಾಗಿದೆ. ಇದು ಎರಡು ಸ್ತರಗಳುಳ್ಳ ಸೇತುವೆಯಾಗಿದ್ದು ಕೇಳಗಿನ ಸ್ತರದಲ್ಲಿ ರೈಲಿಗೆ ಮೀಸಲಾಗಿದ್ದರೆ ಮೇಲಿನ ಸ್ತರವನ್ನು ವಾಹನಗಳಿಗಾಗಿ ಬಳಸಲಾಗುತ್ತದೆ. ಇದರ ಒಟ್ಟಾರೆ ಉದ್ದವು 2.284 ಕಿ.ಮೀ ಗಳಾಗಿದ್ದು, ಬೊಂಗೈಗಾಂವ್ ಜಿಲ್ಲೆಯ ಜೋಗಿಘೊಪಾ ಪಟ್ಟಣವನ್ನು ಗೋವಾಲ್ಪಾರಾ ಜಿಲ್ಲೆಯ ಪಂಚರತ್ನಾ ಪಟ್ಟಣದೊಂದಿಗೆ ಬೆಸೆಯುವ ಸಂಪರ್ಕ ಕೊಂಡಿ ಈ ಸೇತುವೆಯಾಗಿದೆ.

ಎರಡನೇಯ ಮಹಾನದಿ ಸೇತುವೆ:

ಎರಡನೇಯ ಮಹಾನದಿ ಸೇತುವೆ:

ಒಡಿಶಾದ ಕಟಕ್ ನಲ್ಲಿರುವ ಮಹಾನದಿಗೆ ಅಡ್ಡಲಾಗಿ ಈ 2.1 ಕಿ.ಮೀ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. ಒಟ್ಟು 120 ಕೋಟಿ ರೂಪಾಯಿ ವೆಚ್ಚದ ಈ ಸೇತುವೆಯು ಕಾರ್ಯಾರಂಭಿಸಿದ್ದು 2008 ರಲ್ಲಿ. ಮಹಾನದಿಯು ಸಿಸ್ಮಿಕ್ ಜೋನ್ 3 ರಲ್ಲಿರುವುದರಿಂದ ಭೂಕಂಪನಗಳು ಉಂಟಾದಾಗ ಅದನ್ನು ತಡೆದುಕೊಳ್ಳುವ ಸಾಮರ್ಥ್ಯದ ವಿನ್ಯಾಸದಿಂದ ಇದನ್ನು ನಿರ್ಮಿಸಲಾಗಿದೆ.

ಶರಾವತಿ ರೈಲು ಸೇತುವೆ:

ಶರಾವತಿ ರೈಲು ಸೇತುವೆ:

ಕರ್ನಾಟಕದ ಹೊನ್ನಾವರದ ದಕ್ಷಿಣಕ್ಕೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ರೈಲು ಸೇತುವೆಯು ಕೊಂಕಣ ರೈಲಿಗಾಗಿ ಮೀಸಲಾಗಿದೆ. 2,060 ಮೀ. ಉದ್ದವಿರುವ ಈ ಸೇತುವೆ ಕರ್ನಾಟಕದ ಅತಿ ಉದ್ದನೆಯ ರೈಲು ಸೇತುವೆಯಾಗಿದೆ.

ವಾಶಿ ಸೇತುವೆ:

ವಾಶಿ ಸೇತುವೆ:

ಠಾಣೆ ಕ್ರೀಕ್ ಎಂದೂ ಕರೆಯಲ್ಪಡುವ ಈ ಸೇತುವೆಯು ಮುಂಬೈ ದ್ವೀಪ ಮಹಾನಗರಿಯನ್ನು ಭಾರತದ ಮುಖ್ಯ ಭೂಮಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಠಾಣೆ ಕ್ರೀಕ್ ಒಂದು ಅರೇಬಿಯನ್ ಸಮುದ್ರದ ಒಳ ಹರಿವು ಆಗಿದ್ದು ಮುಂಬೈ ಅನ್ನು ದ್ವೀಪವನ್ನಾಗಿ ಮಾಡಿದೆ. ಇದಕ್ಕೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಮುಂಬೈನ ಮನ್ಖುರ್ದ್ ಅನ್ನು ನವಿ ಮುಂಬೈನ ವಾಶಿಗೆ ಸಂಪರ್ಕ ಕಲ್ಪಿಸುತ್ತದೆ ಈ ಸೇತುವೆ.

ಹೊಸ ಯಮುನಾ ಸೇತುವೆ:

ಹೊಸ ಯಮುನಾ ಸೇತುವೆ:

ಇದು ಭಾರತದ ಅತಿ ಉದ್ದನೆಯ ತೂಗು ತಂತಿಗಳ ಸೇತುವೆಯಾಗಿದೆ. ಭಾರತದ ಅಲಹಾಬಾದ್ ನಗರದಲ್ಲಿರುವ ಈ ಸೇತುವೆಯನ್ನು 2004 ರಲ್ಲಿ ನಿರ್ಮಿಸಲಾಯಿತು. ಹಳೆಯ ನೈನಿ ಸೇತುವೆ ಮೇಲೆ ಆಗುತ್ತಿದ್ದ ಅಪಾರವಾದ ಟ್ರಾಫಿಕ್ ದಟ್ಟನೆಯನ್ನು ಮಿತವ್ಯಯಗೊಳಿಸುವ ಉದ್ದೇಶದಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯು ಅಲಹಾಬಾದ್ ನಗರವನ್ನು ನೈನಿಯೊಂದಿಗೆ ಸಂಪರ್ಕಿಸುತ್ತದೆ.

ಸರೈಘಾಟ್ ಸೇತುವೆ:

ಸರೈಘಾಟ್ ಸೇತುವೆ:

ಸರೈಘಾಟ್ ಸೇತುವೆ ಗುವಾಹಟಿಯ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೊದಲ ರೈಲು ಹಾಗು ರಸ್ತೆ ಎರಡನ್ನೂ ಹೊಂದಿರುವ ಸೇತುವೆಯಾಗಿದೆ. 1962 ರ ಏಪ್ರಿಲ್ ನಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂರವರಿಂದ ಇದನ್ನು ಲೋಕಾರ್ಪಣೆ ಮಾಡಲಾಯಿತು. 3,015 ಮೀ. ಉದ್ದವಿರುವ ಈ ಸೇತುವೆಯು ಈಶಾನ್ಯ ಭಾರತವನ್ನು ಭಾರತದ ಉಳಿದ ಭಾಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಕಾಶಂ ಬ್ಯಾರೇಜ್:

ಪ್ರಕಾಶಂ ಬ್ಯಾರೇಜ್:

1223.5 ಮೀ. ಉದ್ದವಿರುವ ಈ ಸೇತುವೆ ಕಮ್ ಬ್ಯಾರೇಜ್ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಆಂಧ್ರಪ್ರದೇಶದ ಕೃಷ್ಣಾ ಹಾಗು ಗುಂಟೂರು ಜಿಲ್ಲೆಗಳನ್ನು ಜೋಡಿಸುತ್ತದೆ. ಈ ಬ್ಯಾರೇಜ್ ಕೆರೆಯ ಮೇಲೆ ನಿರ್ಮಿಸಲಾದ ರಸ್ತೆ ಸೇತುವೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಮಾಲ್ವಿಯಾ ಸೇತುವೆ:

ಮಾಲ್ವಿಯಾ ಸೇತುವೆ:

ಮೊದಲಿಗೆ ಡಫರಿನ್ ಸೇತುವೆ ಎಂದು ಕರೆಯಲ್ಪಡುತ್ತಿದ್ದ ಈ ಸೇತುವೆಯು ವಾರಣಾಸಿಯ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಎರಡು ಸ್ತರಗಳುಳ್ಳ ಸೇತುವೆಯಾಗಿದೆ. ಕೆಳ ಸ್ತರವು ರೈಲಿನ ಹಳಿಯನ್ನು ಹೊಂದಿದ್ದರೆ ಮೇಲಿನ ಸ್ತರವು ವಾಹನಗಳಿಗೆ ಮೀಸಲಾಗಿದೆ.

ಐರೋಲಿ ಸೇತುವೆ:

ಐರೋಲಿ ಸೇತುವೆ:

ಮುಂಬೈ ಮಹಾನಗರಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಮುಂಬೈಯನ್ನು ನವಿ ಮುಂಬೈನೊಂದಿಗೆ ಸಂಪರ್ಕಗೊಳಿಸುವ ಉದ್ದೇಶದಿಂದ ಈ 1.03 ಕಿ.ಮೀ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ.

ಹಳೆಯ ನೈನಿ ಸೇತುವೆ:

ಹಳೆಯ ನೈನಿ ಸೇತುವೆ:

ಅಲಹಾಬಾದ್ ನಲ್ಲಿರುವ ಈ ಸೇತುವೆಯು ಭಾರತದ ಉದ್ದ ಹಾಗು ಹಳೆಯ ಸೇತುವೆಗಳಲ್ಲೊಂದಾಗಿದೆ. ನೈನಿ ಹಾಗು ಅಲಹಾಬಾದ್ ಗಳನ್ನು ಸಂಪರ್ಕಿಸುವ ಈ ಸೇತುವೆಯು ಅಲಹಾಬಾದ್ ನ ದಕ್ಷಿಣಕ್ಕೆ ಯಮುನಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಚಮ್ರಾವಟ್ಟೊಂ ನಿಯಂತ್ರಕ ಅಲಿಯಾಸ್ ಸೇತುವೆ:

ಚಮ್ರಾವಟ್ಟೊಂ ನಿಯಂತ್ರಕ ಅಲಿಯಾಸ್ ಸೇತುವೆ:

ಈ ನಿಯಂತ್ರಕ (ರೆಗ್ಯುಲೇಟರ್) ಕಮ್ ಸೇತುವೆಯನ್ನು ಚಮ್ರಾವಟ್ಟೊಂ ಬಳಿಯ ಭರತಪುಳಾ ಅರ್ಥಾತ್ ನೀಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 978 ಮೀ. ಉದ್ದವಿದ್ದು 10.5 ಮೀ. ಅಗಲವಿರುವ ಈ ಸೇತುವೆಯು ಬಹುಶಃ ಕೇರಳದಲ್ಲೆ ಈ ರೀತಿಯ ದೊಡ್ಡದಾದ ಸೇತುವೆ ಇದಾಗಿದೆಯೆಂದು ಹೇಳಲಾಗುತ್ತದೆ. ಪೊನ್ನನಿ ಹಾಗು ತಿರುರ್ ಗಳನ್ನು ಇದು ಜೋಡಿಸುತ್ತದೆ.

ವಿವೇಕಾನಂದ ಸೇತುವೆ:

ವಿವೇಕಾನಂದ ಸೇತುವೆ:

ಪಶ್ಚಿಮ ಬಂಗಾಳದ ಹೂಗ್ಲಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ವಿಲ್ಲಿಂಗ್ಡನ್ ಹಾಗು ಬ್ಯಾಲಿ ಸೇತುವೆ ಎಂತಲೂ ಕರೆಯಲ್ಪಡುವೆ ಈ ಸೇತುವೆಯು ಹೌರಾ ನಗರವನ್ನು ಕೊಲ್ಕತ್ತಾದೊಂದಿಗೆ ಜೋಡಿಸುತ್ತದೆ. 1932 ರ ಡಿಸೆಂಬರ್ ನಲ್ಲಿ ಪೂರ್ಣಗೊಂಡ ಈ ಸೇತುವೆಯು 880 ಮೀ. ಉದ್ದವಾಗಿದೆ.

ಹೌರಾ ಸೇತುವೆ:

ಹೌರಾ ಸೇತುವೆ:

ಪಶ್ಚಿಮ ಬಂಗಾಳದ ಹೆಗ್ಗುರುತಾದ ಹೌರಾ ಸೇತುವೆಯನ್ನು ಹೂಗ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಜಗತ್ತಿನಲ್ಲೆ ಅತಿ ಹೆಚ್ಚು ಜನದಟ್ಟನೆಯಿಂದ ಕೂಡಿದ ಕ್ಯಾಂಟಿಲೀವರ್ ಸೇತುವೆ ಇದಾಗಿದೆ. ಏನಿಲ್ಲವೆಂದರೂ ಪ್ರತಿದಿನ ಸುಮಾರು 100.000 ವಾಹನಗಳು ಹಾಗು 150,000 ಪಾದಚಾರಿಗಳ ಸಂಚಾರವಿರುತ್ತದೆ ಈ ಸೇತುವೆಯ ಮೇಲೆ. ಜಗತ್ತಿನ ಈ ರೀತಿಯ ಆರನೇಯ ಅತಿ ಉದ್ದದ ಸೇತುವೆಯೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ನಿವೇದಿತಾ ಸೇತುವೆ:

ನಿವೇದಿತಾ ಸೇತುವೆ:

ಪಶ್ಚಿಮ ಬಂಗಾಳದ ಹೂಗ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮತ್ತೊಂದು ಸೇತುವೆ ಇದಾಗಿದೆ. ವಿವೇಕಾನಂದ ಸೇತುವೆಗೆ ಸಮಾನಾಂತರವಾಗಿ ಸ್ವಲ್ಪ ದೂರದಲ್ಲಿ ಇದನ್ನು ನಿರ್ಮಿಸಲಾಗಿದೆ. 1932 ರಲ್ಲಿ ಉದ್ಘಾಟನೆಗೊಂಡ ಈ ಸೇತುವೆಯು ಸಿಸ್ಟರ್ ನಿವೇದಿತಾರ ಗೌರವಾರ್ಥವಾಗಿ ತನ್ನ ಹೆಸರನ್ನು ಪಡೆದುಕೊಂಡಿದೆ. ಬೆಲ್ಘೋರಿಯಾ ಎಕ್ಸ್ ಪ್ರೆಸ್ ವೇ ಈ ಸೇತುವೆಯ ಮೂಲಕ ಹಾದು ಹೋಗುತ್ತದೆ. ಪ್ರತಿನಿತ್ಯ 48,000 ವಾಹನಗಳ ಸಾಮರ್ಥ್ಯಕ್ಕನುಗುಣವಾಗಿ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.

ವಿದ್ಯಾಸಾಗರ ಸೇತುವೆ:

ವಿದ್ಯಾಸಾಗರ ಸೇತುವೆ:

ಎರಡನೆಯ ಹೂಗ್ಲಿ ಸೇತುವೆ ಅಥವಾ ವಿದ್ಯಾಸಾಗರ ಸೇತುವೆಯನ್ನು 10 ಅಕ್ಟೋಬರ್ 1992 ರಂದು ಕಾರ್ಯಾರಂಭ ಮಾಡಲಾಯಿತು. ಹೂಗ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಇದು ಒಂದು ಟಾಲ್(ಸೇವಾ ಶುಲ್ಕ) ಸೇತುವೆಯಾಗಿದ್ದು ಕೊಲ್ಕತ್ತಾ ನಗರವನ್ನು ಹೌರಾದೊಂದಿಗೆ ಬೆಸೆಯುತ್ತದೆ. ಪ್ರತಿನಿತ್ಯ 30,000 ವಾಹನಗಳ ಸಂಚಾರ ಈ ಸೇತುವೆಯ ಮೇಲಿರುತ್ತದೆ.

ಲವ್ ಕುಶ್ ಬ್ಯಾರೇಜ್:

ಲವ್ ಕುಶ್ ಬ್ಯಾರೇಜ್:

ಗ್ಯಾಂಜಸ್ ಬ್ಯಾರೇಜ್ ಎಂತಲೂ ಕರೆಯಲ್ಪಡುವ ಈ ಬ್ಯಾರೇಜ್ ಅನ್ನು ಗಂಗಾ ನದಿಗೆ ಅಡ್ಡಲಾಗಿ ಕಾನ್ಪೂರಿನ ಅಜಾದ್ ನಗರ್-ನವಾಬ್‍ಗಂಜ್ ನಲ್ಲಿ ನಿರ್ಮಿಸಲಾಗಿದೆ. 1995 ರಲ್ಲಿ ಇದರ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಿ ಮೇ 2000 ದಂದು ಉದ್ಘಾಟನೆಗೊಂಡಿತು. 621 ಮೀ. ಉದ್ದವಿರುವ ಈ ಸೇತುವೆಯು ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 91 ಕ್ಕೆ ಬೈಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ.

ಕಾಳಿ ನದಿ ಸೇತುವೆ:

ಕಾಳಿ ನದಿ ಸೇತುವೆ:

ಕರ್ನಾಟಕದ ಕಾರವಾರ ಪಟ್ಟಣದಲ್ಲಿ ಹರಿಯುವ ಕಾಳಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಕಾಳಿ ನದಿಯು ಅರೇಬಿಯನ್ ಸಮುದ್ರದಲ್ಲಿ ಸಮಾಗಗೊಳ್ಳುವ ತಾಣದ ಬಳಿಯಲ್ಲಿದೆ. ಗೋವಾ ಹಾಗು ಕರ್ನಾಟಕಕ್ಕೆ ಇದೊಂದು ಸಂಪರ್ಕ ಸೇತುವೆಯಾಗಿದೆ.

ನೇತ್ರಾವತಿ ನದಿ ಸೇತುವೆ:

ನೇತ್ರಾವತಿ ನದಿ ಸೇತುವೆ:

ಕೊಂಕಣ ರೈಲು ಮಾರ್ಗದಲ್ಲಿ ಬರುವ ಉದ್ದನೆಯ ರೈಲು ಸೇತುವೆಗಳಲ್ಲಿ ಇದೂ ಕೂಡ ಒಂದಾಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯನ್ನು ಮಂಗಳೂರಿಗೆ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X