Search
  • Follow NativePlanet
Share
» »ಬೇಲಮ್ ಗುಹೆಗಳು : ಪ್ರಕೃತಿಯ ವಿಸ್ಮಯ

ಬೇಲಮ್ ಗುಹೆಗಳು : ಪ್ರಕೃತಿಯ ವಿಸ್ಮಯ

By Vijay

ನಮ್ಮೆಲರಿಗು ಗೊತ್ತಿರುವ ಹಾಗೆ ಗುಹೆಗಳಲ್ಲಿ ಸುತಾಡುತ್ತ ಅನ್ವೇಷಿಸುವುದೆಂದರೆ ಒಂದು ರೀತಿಯ ಅಚ್ಚರಿಯ ಹಾಗು ಅಷ್ಟೆ ಕುತೂಹಲಕಾರಿಯಾದ ಸಂಗತಿ. ಅದರಲ್ಲೂ ಭಾರತ ದೇಶವು ತನ್ನಲ್ಲಿ ಹಲವಾರು ಆಸಕ್ತಿಕರ ಹಾಗು ಐತಿಹಾಸಿಕ ಮಹತ್ವವುಳ್ಳ ಗುಹೆಗಳು ನೆಲೆಸಿರುವ ತಾಣವಾಗಿದೆ. ಪುರಾತನ ಕಾಲದಲ್ಲಿ..ವಿಶೇಷವಾಗಿ ಮನೆ ಮಠಗಳಿರದ ಸಮಯದಲ್ಲಿ ಮನುಷ್ಯನು ಗುಹೆಗಳಲ್ಲೆ ವಾಸಿಸುತ್ತಿದ್ದನು ಎಂಬುದು ನಮಗೆ ಇತಿಹಾಸದ ಪುಸ್ತಕಗಳಿಂದ ತಿಳಿದು ಬರುವ ವಿಷಯ. ಪ್ರಸ್ತುತ ನಾವು ಕಾಣುವ ಗುಹೆಗಳಲ್ಲಿ ಕೆಲವು ಮಾನವನಿಂದ ಕೃತಕವಾಗಿ ನಿರ್ಮಿತವಾಗಿದ್ದರೆ ಹಲವು ಪ್ರಕೃತಿ ಸಹಜ ಕ್ರಿಯೆಗಳಿಂದ ಸ್ವಾಭಾವಿಕವಾಗಿ ರಚಿಸಲ್ಪಟ್ಟಿದ್ದಾಗಿವೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. 3,229 ಮೀ.ಗಳಷ್ಟು ಉದ್ದವಿರುವ ಈ ಪ್ರಕೃತಿ ಸಹಜ ನಿರ್ಮಿತ ಗುಹೆಯು ಆಂಧ್ರದ ಕೊಲಿಮಿಗುಂದ್ಲಾ ತಲೂಕಿನಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಐತಿಹಾಸಿಕವಾಗಿಯೂ ಮಹತ್ವವನ್ನು ಪಡೆದಿರುವ ಈ ಗುಹೆಯ ಕುರಿತು ಸ್ಥಳೀಯರಿಗೆ ಗೊತ್ತಿದ್ದರೂ ಪುಸ್ತಕದಲ್ಲಿ ಮೊದಲು ದಾಖಲಿಸಿದ್ದು ಬ್ರಿಟೀಷ್ ಸಮೀಕ್ಷಕ (ಸರ್ವೇಯರ್) ರಾಬರ್ಟ್ ಬ್ರೂಸ್ ಫೂಟ್ ಅದೂ 1884 ರಲ್ಲಿ. ತದನಂತರ ಒಂದು ಶತಮಾನಗಳಷ್ಟು ನೆನೆಗುದಿಗೆ ಬಿದ್ದ ಈ ಗುಹೆಯ ಕುರಿತು 1982-84 ರಲ್ಲಿ ಜರ್ಮನಿ ದೇಶದ ಗುಹಾ ವಿಜ್ಞಾನಿಯಾದ ಡೆನಿಯಲ್ ಗೆಬ್ಯೋರ್ ಹಾಗು ಆತನ ತಂಡವು ವಿಸ್ತೃತವಾದ ಅನ್ವೇಷಣೆಯನ್ನು ನಡೆಸಿದರು.

ತರುವಾಯ 1988 ರಲ್ಲಿ ಆಂಧ್ರ ಸರ್ಕಾರವು ಈ ಗುಹೆಯನ್ನು ರಕ್ಷಿತ ಪ್ರದೇಶವನ್ನಾಗಿ ಘೋಷಿಸಿ ಪ್ರವಾಸೋದ್ಯಮ ಇಲಾಖೆಯು ಇದರ ಸಂಪೂರ್ಣ ಅಭಿವೃದ್ಧಿ ಕಾರ್ಯದ ಹೊಣೆ ಹೊತ್ತಿತು. ಅಂತಿಮವಾಗಿ ಫೆಬ್ರುವರಿ 2002 ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಪ್ರಸ್ತುತ, ಈ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಗುಹೆಯು 3.5 ಕಿ.ಮೀ ವರೆಗೆ ಅನ್ವೇಷಿಸಲ್ಪಟ್ಟಿದ್ದು, ಜನರಿಗೆ 1.5 ಕಿ.ಮೀ ದೂರದವರೆಗೆ ಪ್ರವೇಶಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಸಂಗತಿಯೆಂದರೆ ಸಂಸ್ಕೃತ ಪದವಾದ "ಬಿಲಂ" (ಗುದ್ದ/ರಂಧ್ರ) ನಿಂದ ಇದಕ್ಕೆ ಬೇಲಮ್ ಎಂಬ ಹೆಸರು ಬಂದಿದೆ.

ಬೆಂಗಳೂರಿನಿಂದ 320 ಕಿ.ಮೀ ದೂರದಲ್ಲಿರುವ ಈ ಸ್ಥಳವನ್ನು ಅನಂತಪುರ ಮಾರ್ಗವಾಗಿ ಚಲಿಸಿ ಸುಲಭವಾಗಿ ತಲುಪಬಹುದಾಗಿದೆ. ಈ ವಿಸ್ಮಯಕರ ಗುಹೆಯನ್ನು ಹಲವು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು ಒಂದೊಂದಾಗಿ ಅವುಗಳ ಕುರಿತು ಈ ಸ್ಲೈಡುಗಳ ಮೂಲಕ ಓದಿರಿ.

ಪಿಲಿದ್ವಾರಂ:

ಪಿಲಿದ್ವಾರಂ:

ಬೆಕ್ಕಿನ ದ್ವಾರ ಎಂಬ ಅರ್ಥ ಕೊಡುವ ಇದು ಒಂದು ಆರ್ಚ್ ಆಕಾರದಲ್ಲಿ ಸ್ವಾಭಾವಿಕವಾಗಿ ರೂಪಗೊಂಡ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಯಾಗಿದೆ.

ಕೋಟಿ ಲಿಂಗಾಲು ಚೇಂಬರ್:

ಕೋಟಿ ಲಿಂಗಾಲು ಚೇಂಬರ್:

ಇಲ್ಲಿ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಲಿಂಗದ ಆಕಾರದಲ್ಲಿ ರೂಪಗೊಂಡಿರುವುದನ್ನು ಗಮನಿಸಬಹುದು. ಬಹು ಸಂಖ್ಯೆಯಲ್ಲಿ ಈ ತರಹದ ಲಿಂಗ ರಚನೆಗಳು ಇಲ್ಲಿ ಕಂಡುಬರುವುದರಿಂದ ಇದನ್ನು ಕೋಟಿ ಲಿಂಗಾಲು ಚೇಂಬರ್ ಎಂದು ಕರೆಯಲಾಗುತ್ತದೆ.

ಪಾತಾಳಗಂಗಾ:

ಪಾತಾಳಗಂಗಾ:

ಇದೊಂದು ಪುಟ್ಟ ನೀರಿನ ತೊರೆಯಾಗಿದ್ದು ಆಗ್ನೇಯ ದಿಕ್ಕಿನಿಂದ ವಾಯವ್ಯ ದಿಕ್ಕಿಗೆ ಹರಿಯುತ್ತ ಗುಹಾ ಭೂಮಿಯೊಳಗೆ ಅದೃಶ್ಯವಾಗುತ್ತದೆ. ಗುಹೆಯಿಂದ ಎರಡು ಕಿ.ಮೀ ದೂರದಲ್ಲಿರುವ ಒಂದು ಬಾವಿಯೊಳಗೆ ಈ ನೀರು ಸೇರುತ್ತದೆ ಎಂದು ಹೇಳಲಾಗಿದೆ.

ಸಪ್ತಸ್ವರ ಗುಹಾ ಅಥವಾ ಮ್ಯೂಸಿಕಲ್ ಚೇಂಬರ್:

ಸಪ್ತಸ್ವರ ಗುಹಾ ಅಥವಾ ಮ್ಯೂಸಿಕಲ್ ಚೇಂಬರ್:

ಇಲ್ಲಿರುವ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಕಟ್ಟಿಗೆ ಅಥವಾ ಇತರೆ ವಸ್ತುಗಳಿಂದ ಮೀಟಿದಾಗ ಸಂಗೀತ ಸ್ವರಗಳನ್ನು ಹೊರಹೊಮ್ಮಿಸುತ್ತವೆ. 2006 ರಲ್ಲಿ ಈ ಸಂಗೀತ ಕೋಣೆಯನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು.

ಧ್ಯಾನ ಮಂದಿರ:

ಧ್ಯಾನ ಮಂದಿರ:

ಗುಹೆಯ ಆರಂಭದ ಹಂತದಲ್ಲೆ ಈ ಭಾಗವನ್ನು ಕಾಣಬಹುದಾಗಿದೆ. ಈ ಕೋಣೆಯಲ್ಲಿನ ರಚನೆಯು ಗಾದೆ ಹಾಗು ದಿಂಬಿನ ಆಕಾರದಲ್ಲಿ ರೂಪಗೊಂಡಿದ್ದು ನೋಡಲು ಆಕರ್ಷಕವಾಗಿ ಗೋಚರಿಸುತ್ತದೆ.

ಸಾವಿರ ಹೆಡೆಗಳು/ಥೌಸಂಡ್ ಹುಡ್:

ಸಾವಿರ ಹೆಡೆಗಳು/ಥೌಸಂಡ್ ಹುಡ್:

ಗುಹೆಯ ಈ ಭಾಗವು ಅದ್ಭುತವಾದ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳನ್ನು ಹೊಂದಿದೆ. ಇವುಗಳು ನಾಗರ ಹಾವಿನ ಹೆಡೆಗಳಂತೆ ಗೋಚರಿಸುವುದರಿಂದ ಇದನ್ನು ಥೌಸಂಡ್ ಹುಡ್ ಗಳೆಂದು ಕರೆಯಲಾಗುತ್ತದೆ.

ಬನಿಯನ್ ಅಥವಾ ಆಲದ ಮರ ಕೋಣೆ:

ಬನಿಯನ್ ಅಥವಾ ಆಲದ ಮರ ಕೋಣೆ:

ಗುಹೆಯ ಈ ಭಾಗದಲ್ಲಿ ಒಂದು ಖಂಬವನ್ನು ನೋಡಬಹುದಾಗಿದ್ದು ಅದರ ಮೇಲಿನ ಛಾವಣಿಯಿಂದ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಮರದ ರೆಂಬೆಗಳಂತೆ ಎಲ್ಲೆಡೆ ಹರಡಿವೆ. ಅಣತೆ ದೂರದಿಂದ ಇದನ್ನು ನೋಡಿದಾಗ ಆಲದ ಮರದ ಹಾಗೆ ಗೋಚರಿಸುವುದರಿಂದ ಇದನ್ನು ಬನಿಯನ್ ಟ್ರಿ ಕೋಣೆ ಎಂದು ಕರೆಯಲಾಗುತ್ತದೆ.

ಮಂಡಪಂ/ಮಂಟಪ:

ಮಂಡಪಂ/ಮಂಟಪ:

ಇದು ಗುಹೆಯ ವಿಶಾಲವಾದ ಭಾಗವಾಗಿದ್ದು ಸುತ್ತಲು ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಖಂಬಗಳ ರೂಪದಲ್ಲಿ ಕಾಣುವುದರಿಂದ ಮಂಟಪದ ಹಾಗೆ ಇದು ಗೋಚರಿಸುತ್ತದೆ.

ಪ್ರವೇಶ:

ಪ್ರವೇಶ:

ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಬರುವ ಈ ಗುಹೆಯೊಳಗೆ ಪ್ರವೇಶಿಸಲು ಭಾರತೀಯರಿಗೆ 50 ಹಾಗು ವಿದೇಶಿಯರಿಗೆ 300 ರೂಪಾಯಿಗಳನ್ನು(ಪ್ರತಿ ತಲೆಗೆ) ಶುಲ್ಕವನ್ನು ನಿಗದಿಪಡಿಸಲಾಗಿದೆ. ಗುಹೆಯೊಳಗೆ ಪ್ರವೇಶಿಸಲು ಲೋಹದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ಇರುವಿಕೆ:

ಇರುವಿಕೆ:

ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯು ಪುನ್ನಮಿ ಎಂಬ 32 ಹಾಸಿಗೆಗಳುಳ್ಳ ಹೋಟೆಲ್, ಉಪಹಾರಗೃಹ ಹಾಗು ಒಂದು ಅಂಗಡಿಯನ್ನು ಈ ಗುಹೆಯ ಬಳಿ ನಿರ್ವಹಿಸುತ್ತಿದೆ. ತಂಗಲು ಪ್ರತಿಯೊಬ್ಬರಿಗೆ 40 ರೂಪಾಯಿಗಳ ಶುಲ್ಕ ನಿಗದಿಪಡಿಸಲಾಗಿದೆ. ಬೇಕಾದಲ್ಲಿ ಇದಾಕೆ ಹತ್ತಿರದಲ್ಲಿರುವ ತಡಿಪತ್ರಿ(30 ಕಿ.ಮೀ) ಹಾಗು ಬಂಗನ್‍ಪಲ್ಲಿ( 20) ಗಳಲ್ಲಿರುವ ಹೋಟೆಲ್ ಗಳಲ್ಲೂ ತಂಗಬಹುದು.

Read more about: caves ಗುಹೆಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X