India
Search
  • Follow NativePlanet
Share
» »200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

By Vijay

ಇದೊಂದು ನೈಸರ್ಗಿಕವಾಗಿ ರೂಪಗೊಂಡಿರುವ ಗುಹೆ. ಸುಮಾರು ಇನ್ನೂರು ಮೀಟರುಗಳಷ್ಟು ಉದ್ದವಿದೆ. ಮೊದ ಮೊದಲಿಗೆ ಗುಹೆಯ ಪ್ರವೇಶ ಸ್ಥಳವು ಸಾಕಷ್ಟು ಜನರು ಹಿಡಿಯುವಂತೆ ಅನುಕೂಲಕರವಾಗಿದ್ದರೂ ಮುನ್ನಡೆದಂತೆ ಗುಹೆಯ ಅಗಲವು ಕಡಿಮೆಯಾಗುತ್ತಾ ಹೋಗುತ್ತದೆ.

ಒಂದು ಸಂದರ್ಭದಲ್ಲಂತೂ ಕೇವಲ ಒಂದು ಮೀ ಗಳಷ್ಟು ಮಾತ್ರವೆ ಅಗಲವಾಗಿರುತ್ತದೆ. ಈ ಸಮಯದಲ್ಲಿ ತೆವಳುತ್ತ ಸಾಗುವುದೊಂದೆ ಮಾರ್ಗ. ಇಷ್ಟು ಕಷ್ಟಪಟ್ಟು ಸಾಗಿದರೆ ನಿಮಗೆ ದರ್ಶನವಾಗುವುದೆ ಸ್ವಯಂಭೂ ಶಿವಲಿಂಗ. ಈ ಶಿವಲಿಂಗವು ಸಾಕಷ್ಟು ಶಕ್ತಿಶಾಲಿಯಾಗಿರುವುದೆಂದು ನಂಬಲಾಗಿದ್ದು ಇದರ ದರ್ಶನಕ್ಕೆಂದೆ ಸಾವಿರಾರು ಯಾತ್ರಾರ್ಥಿಗಳು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ.

200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

ಶಿವಖೋರಿ ಗುಹಾದ್ವಾರ, ಚಿತ್ರಕೃಪೆ: Sahuajeet

ಅಷ್ಟೆ ಅಲ್ಲ, ಈ ಗುಹೆಯೊಳಗೆ ಸಾಗುವಾಗ ಪಾರ್ವತಿ, ಗಣೇಶನಿಗೆ ಸಂಬಂಧಿಸಿದಂತೆ ಹಲವು ವಸ್ತುಗಳು, ಪ್ರಾಕೃತಿಕವಾಗಿಯೆ ಮೂಡಲಾದ ಕೆತ್ತನೆಗಳು ಕಾಣಸಿಗುತ್ತವಂತೆ! ಶಿವಲಿಂಗದ ಮೇಲೆ ನೈಸರ್ಗಿಕವಾಗಿಯೆ ಹನಿ ಹನಿ ನೀರಿನ ಅಭಿಶೇಕ ಮತ್ತೊಂದು ಸುಂದರ ಅನುಭವ ನೀಡುತ್ತದೆ.

ಕಲಿಯುಗದಲ್ಲಿ ಕಷ್ಟ ನಿವಾರಿಸುವ ಶಕ್ತಿಶಾಲಿ ದೇವಿ, ವೈಷ್ಣೊ ದೇವಿ

ಈ ನೈಸರ್ಗಿಕ ಗುಹೆಯನ್ನು ಶಿವಖೋರಿ ಅಥವಾ ಶಿವ ಖೋರಿ ಎಂದು ಕರೆಯುತ್ತಾರೆ. ಈ ಗುಹಾ ತಾಣವಿರುವುದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯ ರಾನ್ಸೂ ಎಂಬ ಗ್ರಾಮದ ಬಳಿ. ರಿಯಾಸಿ ಜಿಲ್ಲೆಯಲ್ಲೆ ಇರುವ ಭಾರತದ ಮತ್ತೊಂದು ಪ್ರಸಿದ್ಧ ಯಾತ್ರಾಕೇಂದ್ರವಾದ ವೈಷ್ಣೊ ದೇವಿಯಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಗುಹೆಯಿದೆ.

200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

ಸ್ವಯಂಭು ಶಿವಲಿಂಗ, ಚಿತ್ರಕೃಪೆ: Sahuajeet

ಸಾಮಾನ್ಯವಾಗಿ ವೈಷ್ಣೊ ದೇವಿಯ ದರ್ಶನಕ್ಕೆಂದು ದೂರದೂರುಗಳಿಂದ ಬರುವವರು ಇಲ್ಲಿಗೂ ಸಹ ಭೇಟಿ ನೀಡುತ್ತಾರೆ. ರಾನ್ಸೂ ಗ್ರಾಮದವರೆಗೆ ವಾಹನಗಳು ದೊರೆಯುತ್ತವಾದರೂ ನಂತರದಿಂದ ಮೂರು ಕಿ.ಮೀ ಗಳಷ್ಟು ಚಾರಣ ಮಾಡುತ್ತಲೆ ಈ ಗುಹೆಯನ್ನು ತಲುಪಬೇಕಾಗುತ್ತದೆ. ಶಿವಖೋರಿ ದೇಗುಲ ಮಂಡಳಿಯಿಂದ ಇತ್ತೀಚೆಗೆ ನಡೆಯಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗವನ್ನೂ ಸಹ ನಿರ್ಮಿಸಲಾಗಿದೆ.

ಗುಹೆಗೆ ಸಂಬಂಧಿಸಿದಂತೆ ಹಲವು ಹಿನ್ನಿಲೆಗಳಿವೆ. ಒಂದು ಮುಖ್ಯ ದಂತಕಥೆಯ ಪ್ರಕಾರ, ಒಮ್ಮೆ ಭಸ್ಮಾಸುರನೆಂಬ ಅಸುರನು ಶಿವನ ಕುರಿತು ಅತಿ ಕಠಿಣ ತಪ್ಪಸ್ಸನ್ನಾಚರಿಸಿ ಶಿವನನ್ನು ಪ್ರಸನ್ನಗೊಳಿಸಿ ವರದಾನ ಪಡೆದ. ಆ ವರದಾನದಂತೆ ಆತ ಯಾರ ತಲೆಯ ಮೇಲೆ ತನ್ನ ಕೈಯನ್ನಿಡುತ್ತಾನೊ ಅವರು ಅಲ್ಲೆ ಸುಟ್ಟು ಭಸ್ಮವಾಗುವುದು. ಇದರಿಂದ ಸಂತಸಗೊಂಡ ರಕ್ಕಸ ಶಿವನ ತಲೆಯ ಮೇಲೆಯೇ ಕೈಯನ್ನಿಡಲು ಬರುತ್ತಾನೆ.

200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: The San Diego Museum of Art Collection

ಇದರಿಂದ ವಿಚಲಿತನಾದ ಶಿವನು, ತಪ್ಪಿಸಿಕೊಂಡು ಗುಹೆಯೊಂದರ ಒಳಗೆ ಅವಿತುಕೊಳ್ಳುತ್ತಾನೆ. ಹೀಗೆ ಶಿವನು ಪ್ರವೇಶಿಸಿದ ಆ ಗುಹೆಯೆ ಇಂದಿನ ಶಿವಖೋರಿ ಎನ್ನಲಾಗಿದೆ. ನಂತರ ವಿಷ್ಣು ಮೋಹಿನಿಯ ಅವತಾರ ತಾಳಿ ರಕ್ಕಸನೊಡನೆ ನರ್ತಿಸುತ್ತ ರಕ್ಕಸ ತನ್ನ ಕೈಗಳನ್ನು ತಾನೆ ತನ್ನ ತಲೆಯ ಮೇಲೆ ಇಟ್ಟುಕೊಳ್ಳುವಂತೆ ಮಾಡಿ ಆತನನ್ನು ಸಂಹರಿಸುತ್ತಾಳೆ.

ಭಕ್ತರ ಭಕ್ತಿಯನ್ನು ಪರೀಕ್ಷಿಸುವ ಅಮರನಾಥ ಗುಹೆ

ಸ್ಥಳ ಪುರಾಣದ ಪ್ರಕಾರ, ಈ ಗುಹೆಯೊಳಗೆ ಸಾಗುವಾಗ ಒಂದು ಸಂದರ್ಭದಲ್ಲಿ ಈ ಗುಹೆಯ ಮಾರ್ಗವು ಎರಡು ಮಾರ್ಗಗಳಾಗಿ ವಿಭಜಿಸಿದ್ದು ಒಂದು ಮಾರ್ಗವು ನೇರವಾಗಿ ಅಮರನಾಥಕ್ಕೆ ಸಂಪರ್ಕ ಕಲ್ಪಿಸುತ್ತದೆ ಎನ್ನಲಾಗಿದೆ. ಸ್ಥಳೀಯವಾಗಿ ಹೇಳುವಂತೆ ಹಿಂದೆ ಕೆಲವರು ಈ ಮಾರ್ಗದಲ್ಲಿ ಒಳಗೆ ತೆರಳಿದ್ದರೂ ಎಂದಿಗೂ ಹಿಂತಿರುಗಿಲ್ಲವಂತೆ. ಹಾಗಾಗಿ ಆ ಮಾರ್ಗವನ್ನು ಇಂದು ಮುಚ್ಚಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X