» »ಬರೇ ಎರಡು ದಿನದಲ್ಲಿ ಏನೆಲ್ಲಾ ನೋಡ್ಬಹುದು?

ಬರೇ ಎರಡು ದಿನದಲ್ಲಿ ಏನೆಲ್ಲಾ ನೋಡ್ಬಹುದು?

By: Divya

ವಾರದ ರಜೆ, ಜುಮ್ ಅಂತ ಕಾರಲ್ಲಿ ಲಾಗ್ ಡ್ರೈವ್, ಕಿಟಕಿಯಲ್ಲಿ ಇಣುಕಿದರೆ ಹಸಿರು ಸಿರಿ, ಬೀಸುವ ಆ ತಂಪಾದ ಗಾಳಿಯಲ್ಲಿ ಸಿಹಿ ನೆನಪನ್ನು ಸವಿಯುತ್ತಾ ಹೋದರೆ  ಪ್ರವಾಸದ ಮಜವೇ ಬೇರೆ. ಇಂತಹ ಅನುಭವದೊಂದಿಗೆ ಹೋಗಬಹುದಾದ ಸ್ಥಳವೆಂದರೆ ಆಗುಂಬೆ. ಅದ್ವಿತೀಯ ಪ್ರಕೃತಿ ಸೌಂದರ್ಯ ಹೊಂದಿರುವ ಆಗುಂಬೆ ಸಹ್ಯಾದ್ರಿಯ ಸಾಲಲ್ಲಿ ಬರುತ್ತದೆ.

ಅತಿ ಹೆಚ್ಚುಕಾಲ ಮಳೆಯಲ್ಲಿ ತೊಯ್ಯುವ ಈ ಪ್ರದೇಶದಲ್ಲಿ ಗಿರಿಧಾಮಗಳ ಸಾಲು, ನೀರಿನ ತೊರೆ, ಜಲಪಾತದ ಸಿರಿ ಎಲ್ಲವನ್ನು ಕಾಣಬಹುದು. ಹಾಗಾಗಿಯೇ ನಾವು ಹಿಂದಿನ ವಾರದ ರಜೆಯಲ್ಲಿ ಇಲ್ಲಿಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದೆವು.
ರಸ್ತೆ ಮಾರ್ಗದಲ್ಲೇ ಕೆಲವು ಪ್ರದೇಶಗಳನ್ನು ನೋಡುತ್ತಾ ಪ್ರವಾಸ ಬೆಳೆಸಿದರೆ ಹೆಚ್ಚು ಜಾಗವನ್ನು ನೋಡಬಹುದು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಅಂದುಕೊಂಡಂತೆಯೇ ಸುಂದರ ಅನುಭವ ನಮ್ಮದಾಗಿತ್ತು. ಅದಕ್ಕಾಗಿಯೇ ರಸ್ತೆ ಮಾರ್ಗದ ಪ್ರವಾಸದ ಪರಿಚಯವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.

A Winter Trip From Bangalore To Agumbe

                                          PC: wikimedia.org 

ಬೆಂಗಳೂರಿನಿಂದ 375 ಕಿ.ಮೀ. ದೂರದಲ್ಲಿರುವ ಈ ಪ್ರದೇಶಕ್ಕೆ ಹೋಗುವುದು ಸುಲಭ.
ಬೆಂಗಳೂರು-ತುಮಕೂರು-ಶಿವಮೊಗ್ಗ-ತೀರ್ಥಹಳ್ಳಿ-ಕುಪ್ಪಳ್ಳಿ-ಕುಂದಾದ್ರಿ-ಆಗುಂಬೆ (ಅಲ್ಲಿಯೇ ರಾತ್ರಿ ಬೀಡು ಬಿಡುವುದು)
ಮರುದಿನ ಆಗುಂಬೆ-ಶೃಂಗೇರಿ-ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ಹಾಸನ-ಬೆಂಗಳೂರು

A Winter Trip From Bangalore To Agumbe

                                           PC: google.map 

ಮೊದಲ ದಿನ
ಬೆಂಗಳೂರಿನಿಂದ ಬೆಳಗ್ಗೆ ಬೇಗನೆ ಹೊರಟು ಆಗುಂಬೆಗೆ ಹೋಗಬೇಕು, ಅದರಲ್ಲಿ ಅನೇಕ ಕಡೆ ಸ್ಟಾಪ್ ತೆಗೆದುಕೊಳ್ಳುತ್ತಾ ಲಾಂಗ್ ಡ್ರೈವ್ ಖುಷಿಯನ್ನು ಪಡೆಯಬೇಕೆಂಬುದನ್ನು ಮುಂಚೆಯೇನಿರ್ಧರಿಸಿದ್ದೆವು. ಅದರಂತೆ ಬೆಂಗಳೂರಿನಿಂದ ಹೊರಟು ತುಮಕೂರಿನಲ್ಲಿ ಬೆಳಗ್ಗೆಯ ತಿಂಡಿ ಮುಗಿಸಿದೆವು. ನಂತರ ಮುಂದಿನ ನಿಲ್ದಾಣ ಎಲ್ಲಿ ಎನ್ನುವುದನ್ನು ಮೊದಲೇ ನಿರ್ಧರಿಸಿದ ಹಾಗೆಯೇ ಗಾಜನೂರು ಅಣೆಕಟ್ಟಿಗೆ ಹೊರಟೆವು. ಹೋಗುವ ರಸ್ತೆ ಮಾರ್ಗ ಬಹಳ ಚೆನ್ನಾಗಿಯೇ ಇತ್ತು. ಎಲ್ಲೂ ವಾಹನ ದಟ್ಟಣೆಯ ಸಮಸ್ಯೆ ಆಗದೆ ನಮ್ಮ ಆಲೋಚನೆಯಂತೆ ಅಣೆಕಟ್ಟಿಗೆ ತಲುಪಿದೆವು. ಅಲ್ಲಿಯ ವಿಶೇಷತೆ ಹಾಗೂ ಸೌಂದರ್ಯವನ್ನು ವೀಕ್ಷಿಸಿದ ಮೇಲೆ, ನಮ್ಮ ಗುರಿ ಸಕ್ರೆಬೈಲು ಆಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಿಗುವ ಈ ಸಕ್ರೆಬೈಲಿಗೆ ಹೋಗುವುದಕ್ಕೂ ಏನು ತೊಂದರೆ ಆಗಲಿಲ್ಲ. ಹೆಚ್ಚು ಆನೆಗಳನ್ನು ನೋಡಲು ಸಿಗಲಿಲ್ಲ ಅಷ್ಟೆ.

A Winter Trip From Bangalore To Agumbe

                                          PC: wikimedia.org

ಸ್ವಲ್ಪ ಬೇಸರ ಎನಿಸಿದರೂ ಅಷ್ಟಾಗಿ ಚಿಂತಿಸದೆ ತೀರ್ಥಹಳ್ಳಿ ದಾರಿ ಹಿಡಿದೆವು. ಈ ಮಾರ್ಗದಲ್ಲಿ ಸಿಕ್ಕ ಪ್ರಕೃತಿ ಸೌಂದರ್ಯ ಮಾತ್ರ ಅದ್ಭುತವಾಗಿತ್ತು. ತುಂಗಾ ನದಿಯು ಹಾವಿನಂತೆ ತೆವಳುತ್ತಾ ಕಲ್ಲುಬಂಡೆ ಹಾಗೂ ಮರಗಳನ್ನು ಸುತ್ತಿ ಸಾಗುವುದನ್ನು ದಾರಿಯುದ್ದಕ್ಕೂ ನೋಡಿದೆವು. ಹೀಗೆ ಖುಷಿ ಖುಷಿಯಾಗಿ ಬರುತ್ತಿರುವಾಗ ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಗೆ ಬಂದಿದ್ದೇ ತಿಳಿಯಲಿಲ್ಲ. ಹಾಗೆ ಮುಂದೆ ಸ್ವಲ್ಪ ತರಲೆ ಹಾಗೂ ತಮಾಷೆ ಮಾಡುತ್ತಾ ಕುಂದಾದ್ರಿಗೆ ಬಂದು ಇಳಿದೆವು. ಈ ಗಿರಿಧಾಮದಲ್ಲಿ ಇರುವ ಜೈನ ದೇಗುಲದ ಸೊಬಗು ಅದ್ಭುತ. ಈ ಬೆಟ್ಟದ ಪ್ರಕೃತಿ ಸೌಂದರ್ಯದ ಜೊತೆಗೆ ದೇಗುಲದ ಹಿರಿಮೆಯೂ ಶ್ರೇಷ್ಠವಾದದ್ದು.

ಈ ಸುಂದರ ತಾಣದಲ್ಲಿ ಸೂರ್ಯಾಸ್ತದ ದೃಶ್ಯವನ್ನು ಸೆರೆ ಹಿಡಿದು ಆಗುಂಬೆಗೆ ಪ್ರಯಾಣ ಬೆಳೆಸಿದೆವು. ಉತ್ತಮವಾದ ರಸ್ತೆಮಾರ್ಗದಿಂದಾಗಿ ಆರಾಮವಾಗಿಯೇ ಆಗುಂಬೆ ಎನ್ನುವ ಸ್ವರ್ಗ ತಾಣಕ್ಕೆ ಬಂದು ಇಳಿದೆವು. ಮೊದಲೇ ಬುಕ್ ಮಾಡಿಕೊಂಡ ರೂಮ್ ಒಂದರಲ್ಲಿ ತಂಗಿದೆವು. ಮುಂಜಾವಿನ ಚಳಿಯಲ್ಲಿ ಆಗುಂಬೆಯ ಸಿರಿಯನ್ನು ಸವಿಯಬೇಕೆಂಬುದೇ ನಮ್ಮೆಲ್ಲರ ನಿರ್ಧಾರವಾಗಿತ್ತು.

A Winter Trip From Bangalore To Agumbe

                                           PC: wikimedia.org 

ಎರಡನೇ ದಿನ
ಆಗುಂಬೆಯ ಮುಂಜಾನೆಯ ವಾತಾವರಣ ಮಂಜಿನ ಹೊಗೆಯಿಂದಲೇ ಆವೃತಗೊಂಡಿತ್ತು. ಈ ಚಳಿಯಲ್ಲಿಯೇ ಆಗುಂಬೆಯ ಸಣ್ಣ ಚಾರಣ ಮುಗಿಸಿ, ಮಳೆಕಾಡು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದೆವು. ಇಲ್ಲಿ ಅನೇಕ ವಿಚಾರವನ್ನು ಕಲೆಹಾಕಿಕೊಂಡು, ನಿಧಾನಕ್ಕೆ ಶೃಂಗೇರಿಯೆಡೆಗೆ ಪ್ರಯಾಣ ಪ್ರಾರಂಭವಾಯಿತು. ಬರುವ ದಾರಿ ಮಾತ್ರ ಬಹಳ ಅದ್ಭುತ. ಕೈಯಲ್ಲಿ ಕ್ಯಾಮೆರಾ ಇದ್ದರೆ ಅದರ ಮಜವೇ ಬೇರೆ. ಬೇಕಾದಷ್ಟು ಚಿತ್ರಗಳನ್ನು ತೆಗೆದುಕೊಳ್ಳುತ್ತಾ ಬರಬಹುದು.

A Winter Trip From Bangalore To Agumbe

                                            PC: wikimedia.org

ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು, ಚಿಕ್ಕಮಗಳೂರು ರಸ್ತೆ ಮಾರ್ಗದಲ್ಲಿ ಬರುವಾಗ ಕೊಂಚ ಭಯ ಹಾಗೂ ಬೇಸರವುಂಟಾಯಿತು. ಅತಿಯಾದ ರಸ್ತೆ ತಿರುವು, ಘಟ್ಟ ಪ್ರದೇಶಹೊಂದಿದ್ದುದರಿಂದ ಮುಳ್ಳಯ್ಯನಗಿರಿಗೆ ಬಂದಿದ್ದು ಮಧ್ಯಾಹ್ನ 3 ಗಂಟೆ. ಕರ್ನಾಟಕದ ಅತಿ ಎತ್ತರವಾದ ಈ ಬೆಟ್ಟ 1925 ಮೀ. ಎತ್ತರದಲ್ಲಿದೆ. ಆದರೆ ಈ ಪ್ರದೇಶ  ಪ್ರವಾಸಿಗರಿಗೊಂದು ಸ್ವರ್ಗ ಎಂದು ಹೇಳಬಹುದು. ಗಿರಿಯ ಸಿರಿಯನ್ನು ನೋಡಿಕೊಂಡು ಹಾಸನ ಮಾರ್ಗದಿಂದ ಬೆಂಗಳೂರಿಗೆ ಹಿಂದಿರುಗಿದೆವು.

Read more about: shivamogga, agumbe
Please Wait while comments are loading...