Search
  • Follow NativePlanet
Share
» »ವಿಜಯಪುರ ಮತ್ತು ಗೋಲ ಗುಮ್ಮಟದ ಸುತ್ತ ಒಂದು ಸುತ್ತು

ವಿಜಯಪುರ ಮತ್ತು ಗೋಲ ಗುಮ್ಮಟದ ಸುತ್ತ ಒಂದು ಸುತ್ತು

By Vijay

ಆಗ್ರಾದ ತಾಜ್ ಮಹಲ್, ದೆಹಲಿಯ ಕೆಂಪು ಕೋಟೆ, ಮುಂಬೈನ ಸಮುದ್ರ ಸೇತುವೆ ಎಂದರೆ ಯಾರಿಗೆ ತಾನೆ ಗೊತ್ತಾಗುವುದಿಲ್ಲ ಹೇಳಿ. ಬಹುಶಃ ಇಂತಹ ಅದ್ಭುತ ರಚನೆಗಳಿಂದಲೊ, ಸ್ಮಾರಕಗಳಿಂದಲೊ ಆ ಸ್ಥಳಗಳಿಗೆ ಸ್ವಲ್ಪ ಹೆಚ್ಚಿನ ತೂಕ ಬಂದಿರುತ್ತದೆ. ಅಂದರೆ ಯಾವ ಪ್ರವಾಸಿಗನೆ ಆಗಲಿ ಆಯಾ ನಿಗದಿತ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರಸಿದ್ದವಾದೊಂದು ಆಕರ್ಷಣೆಗೆ ತೆರಳದೆ ಇರಲಾರ.

ಇದರಂತೆ ಕರ್ನಾಟಕದ ಉತ್ತರ ಭಾಗದಲ್ಲಿರುವ ವಿಜಯಪುರ (ಹಿಂದೆ ವಿಜಾಪುರ/ಬಿಜಾಪುರ ಎಂದು ಕರೆಯಲಾಗುತ್ತಿತ್ತು) ಅಷ್ಟೊಂದು ಅಭಿವೃದ್ಧಿ ಕಾಣದಿದ್ದರೂ ಸಾಕಷ್ಟು ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾರಣ ಈ ನಗರದಲ್ಲಿರುವ ಒಂದು ಅದ್ಭುತ ಹಾಗೂ ಅದ್ವಿತೀಯವಾದ ಪ್ರವಾಸಿ ಆಕರ್ಷಣೆ. ಅದೆ ಗೋಲ ಗುಮ್ಮಟ ಅಥವ ಗುಂಬಜ.

ವಿಶೇಷ ಲೇಖನ : ಬೆರಗುಗೊಳಿಸುವ ಗ್ವಾಲಿಯರ್ ಹಿಂದೂ ಕೋಟೆ

ಗುಮ್ಮಟ, ಗುಂಬಜ ಅಥವಾ ಬುರುಜವು ಒಂದು ಅರ್ಧ ಗೋಲಾಕಾರದ ಆಕೃತಿಯಾಗಿದೆ. ಮುಸ್ಲಿಂ ವಾಸ್ತುಶೈಲಿಯಲ್ಲಿ ಈ ರೀತಿಯ ಅರ್ಧ ಗೋಲಾಕಾರದ ಗುಮ್ಮಟಗಳನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಅದೆ ರೀತಿಯಾಗಿ ಈ ಸ್ಮಾರಕವು ಮುಸ್ಲಿಂ ದೊರೆಯೊಬ್ಬಾತನಿಂದ ನಿರ್ಮಿಸಲಾದ ಅಪೂರ್ವ ಕಲಾಕೃತಿಯಾಗಿದೆ. ಇನ್ನೂ ಈ ಸ್ಮಾರಕವು ವಿಶಿಷ್ಟವಾಗಿದ್ದು ಅಪರೂಪದ ಗುಣಲಕ್ಷಣಗಳನ್ನು ಹೊಂದಿದೆ.

ಪ್ರಸ್ತುತ ಲೇಖನದ ಮೂಲಕ ಈ ರಚನೆಯ ವಿಶಿಷ್ಟತೆಗಳ ಕುರಿತು ಮತ್ತು ವಿಜಯಪುರಕ್ಕೆ ಭೇಟಿ ನೀಡಿದಾಗ ಏನೆಲ್ಲ ಮಾಡಬಹುದು, ನೋಡಬಹುದು ಎಂಬುದರ ಕುರಿತೂ ಸಹ ತಿಳಿಯಿರಿ.

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗೋಲ ಗುಮ್ಮಟ ಅರ್ಧ ಗೋಲಾಕಾರದ ಬೃಹತ್ ರಚನೆಯಾಗಿದ್ದು ಆದಿಲ್ ಶಾಹಿ ಸುಲ್ತಾನನ ಸಮಾಧಿ ಸ್ಮಾರಕವಾಗಿದೆ. ಆದಿಲ್ ಶಾಹಿ ಹಿಂದೆ ವಿಜಯಪುರವನ್ನು ಆಳುತ್ತಿದ್ದ ಶಾಹಿ ಸಾಮ್ರಾಜ್ಯದ ಏಳನೆಯ ದೊರೆಯಾಗಿದ್ದ. ಈ ಸರಳ ಹಾಗೂ ಅಷ್ಟೆ ಪರಿಣಾಮಕಾರಿಯಾದ ರಚನೆಯು 1656 ರಲ್ಲಿ ದಾಬೂಲ್ ಪ್ರದೇಶದ ಯಾಕೂಬ್ ಎಂಬ ವಾಸ್ತುಶಿಲ್ಪಿಯಿಂದ ಸಂಪೂರ್ಣವಾಯಿತು.

ಚಿತ್ರಕೃಪೆ: Meesanjay

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಆದಿಲ್ ಶಾಹಿ ರಾಜ್ಯಾಭಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೆ ಮುಂದೆ ತನ್ನ ಹಾಗೂ ಕುಟುಂಬದವರ ಸಾವಿನ ನಂತರ ಸಮಾಧಿಗಳನ್ನು ಅದ್ದೂರಿಯಾಗಿ ನಿರ್ಮಿಸುವ ಉದ್ದೇಶದಿಂದ ಈ ಬೃಹತ್ ಸ್ಮಾರಕದ ನಿರ್ಮಾಣ ಕಾರ್ಯ ಆರಂಭಿಸಿದ. ಇದಕ್ಕಾಗಿಯೆಂದೆ ದಾಬೂಲ್ ನಿಂದ ಉನ್ನತ ಮಟ್ಟದ ವಾಸ್ತುಶಿಲ್ಪಿಯನ್ನು ಕರೆಸಿ ನಿರ್ಮಾಣದ ಜವಾಬ್ದಾರಿ ಕೊಟ್ಟ.

ಚಿತ್ರಕೃಪೆ: Florian Recklebe

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಮೂಲತಃ ಈ ಬೃಹತ್ ಸ್ಮಾರಕದ ಅಡಿಪಾಯವು ಕಲ್ಲುಹಾಸಿನ ಮೇಲಿದ್ದು, ಇದು ಕೆಳಮನೆಯೊಂದನ್ನು ಹೊಂದಿದೆ. ಯಾವುದೆ ಖಂಬಗಳ ಆಧಾರವಿಲ್ಲದೆ ಅತ್ಯಧಿಕ ಖಾಲಿ ಜಾಗವನ್ನು ಹೊಂದಿರುವ ಜಗತ್ತಿನ ರಚನೆಗಳ ಪೈಕಿ ಇದೂ ಸಹ ಒಂದಾಗಿದೆ.

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಇಂದು ಪ್ರವಾಸಿಗರು ಈ ಸ್ಮಾರಕದ ಒಳ ಹೋದಾಗ ನಡೆಯುವ ನೆಲವೆ ಕೆಳಮನೆಯ ಛಾವಣಿಯಾಗಿದೆ. ನೆಲದ ಮೇಲೆ ಅಲ್ಲಲ್ಲಿ ಕಿಟಕಿಗಳ ಆಕಾರದ ರಚನೆಗಳನ್ನು ಕಾಣಬಹುದಾಗಿದೆ. ಸ್ಮಾರಕದ ಒಳಭಾಗವು ಚೌಕಾಕಾರವಾಗಿದ್ದು ಆದಿಲ್ ಶಾಹಿ ಹಾಗೂ ಆತನ ಕುಟುಂಬದವರ ಸಮಾಧಿಗಳನ್ನು ಮಧ್ಯದಲ್ಲಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Marjolein Katsma

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಅಲ್ಲದೆ ಚೌಕಾಕಾರದ ದೊಡ್ಡ ಪ್ರಾಂಗಣದ ನಾಲ್ಕೂ ಗೋಡೆಗಳಲ್ಲಿ ಮೂರು ಮೂರು ಸಂಖ್ಯೆಯಲ್ಲಿ ಆರ್ಚುಗಳಿವೆ. ಮಧ್ಯದ ಆರ್ಚು ದೊಡ್ಡದಾಗಿದ್ದು ಎರಡೂ ಬದಿಯ ಆರ್ಚುಗಳು ಚಿಕ್ಕದಾಗಿವೆ. ಮಧ್ಯದ ಆರ್ಚಿನಲ್ಲಿ ದ್ವಾರಗಳನ್ನು ರಚಿಸಲಾಗಿದ್ದು ಉತ್ತರದ ಮಧ್ಯದ ಆರ್ಚಿನಲ್ಲಿ ಮಾತ್ರ ದ್ವಾರವಿಲ್ಲ.

ಚಿತ್ರಕೃಪೆ: Naane.naanu

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗೋಲ ಗುಮ್ಮಟದ ಗೋಲವು ಆಂತರಿಕವಾಗಿ 37.92 ಮೀ. ಗಳಷ್ಟು ವ್ಯಾಸವನ್ನು ಹೊಂದಿದ್ದು 44 ಮೀ. ಗಳಷ್ಟು ಬಾಹ್ಯ ವ್ಯಾಸವನ್ನು ಹೊಂದಿದೆ. ಇನ್ನೂ ಗೋಲದ ದಪ್ಪವು ಕೆಳಗೆ 3.05 ಮೀ. ಗಳಷ್ಟಿದ್ದು ಮೇಲೆ 2.74 ಮೀ. ಗಳಷ್ಟಿದೆ. ಇದರಿಂದಲೆ ನೀವು ಊಹಿಸಬಹುದು ಯಾವ ರೀತಿಯಲ್ಲಿ ಈ ಗುಮ್ಮಟವು ವಿಶಾಲವಾಗಿದೆ ಎಂದು. ಈ ರೀತಿಯ ಬೃಹತ್ ಗುಮ್ಮಟಗಳು ಜಗತ್ತಿನಲ್ಲಿಯೆ ಅತಿ ಕಡಿಮೆ ಸಂಖ್ಯೆಯಲ್ಲಿದ್ದು ಅವುಗಳ ಪೈಕಿ ಗೋಲ ಗುಮ್ಮಟವೂ ಸಹ ಒಂದಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೆ.

ಚಿತ್ರಕೃಪೆ: Sharath17

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಈ ಚೌಕಾಕಾರದ ಸ್ಮಾರಕದ ನಾಲ್ಕು ಮೂಲೆಗಳಲ್ಲಿ ಅಷ್ಟಭುಜಾಕೃತಿಯ ಎತ್ತರವಾದ ಮೀನಾರು(ಗೋಪುರ)ಗಳಿವೆ. ಈ ಗೋಪುರಗಳಲ್ಲಿ ಮೆಟ್ಟಿಲುಗಳಿದ್ದು, ಇದರ ಮೂಲಕ ಸ್ಮಾರಕದ ನೆಲದಿಂದ 33 ಮೀ.ಗಳಷ್ಟು ಎತ್ತರದಲ್ಲಿರುವ "ವ್ಹಿಸ್ಪರಿಂಗ್ ಗ್ಯಾಲರಿ" ಗೆ ಭೇಟಿ ನೀಡಬಹುದು. ಮೆಟ್ಟಿಲುಗಳು ಎತ್ತರವಾಗಿದ್ದು ಮಕ್ಕಳು ಅಥವಾ ಹಿರಿಯರಿಗೆ ಏರಲು ಕಷ್ಟವಾಗಬಹುದು.

ಚಿತ್ರಕೃಪೆ: HPNadig

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ವ್ಹಿಸ್ಪರಿಂಗ್ ಗ್ಯಾಲರಿಯು ಛಾವಣಿಯ ಗೋಲದಂತೆ ಗೋಲಾಕಾರವಾಗಿದೆ. ಇಲ್ಲಿಂದ ನೆಲವನ್ನು ನೋಡುವುದರ ಮೂಲಕ ನಾವು ಎಷ್ಟು ಎತ್ತರದಲ್ಲಿದ್ದೇವೆ ಎಂಬುದರ ಅನುಭವ ಪಡೆಯಬಹುದು.

ಚಿತ್ರಕೃಪೆ: Florian Recklebe

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಇನ್ನೂ ವ್ಹಿಸ್ಪರಿಂಗ್ ಗ್ಯಾಲರಿಯು ಶಬ್ದ ಅಥವಾ ಧ್ವನಿ ವಿಜ್ಞಾನಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ. ಈ ಗ್ಯಾಲರಿಯಲ್ಲಿ ನಿಂತು ಒಮ್ಮೆ ಚಪ್ಪಾಳೆ ಹೊಡೆದರೆ ಕನಿಷ್ಠಪಕ್ಷ ಆ ಚಪ್ಪಾಳೆಯ ಧ್ವನಿಯು ಏಳು ಬಾರಿಯಾದರೂ ಪ್ರತಿಧ್ವನಿಸುತ್ತದೆ.

ಚಿತ್ರಕೃಪೆ: Santoshsmalagi

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗ್ಯಾಲರಿಯ ಒಂದು ಬದಿಯ ಗೋಡೆಗೆ ಮುಖ ಮಾಡಿ ಪಿಸು ಪಿಸು ಮಾತಾಡಿದರೆ ಅಥವಾ ಕೈಗಡಿಯಾರವನ್ನು ಗೋಡೆಗೆ ತಾಕಿಸಿದರೆ, ಆ ಗೋಡೆಯ ವಿರುದ್ದ ದಿಕ್ಕಿನಲ್ಲಿರುವ ಗೋಡೆಯಲ್ಲಿ ಕಿವಿಯನ್ನು ಗೋಡೆಗೆ ಭದ್ರವಾಗಿ ಲಗತ್ತಿಸಿ ಆ ಪಿಸು ಪಿಸು ಮಾತುಗಳನ್ನು ಅಥವಾ ಗಡಿಯಾರದ ಟಿಕ್ ಟಿಕ್ ಶಬ್ದವನ್ನು ಕೇಳಬಹುದಾಗಿದೆ! ಇದೆ ಅಲ್ಲವೆ ಅಚ್ಚರಿಯೆಂದರೆ.

ಚಿತ್ರಕೃಪೆ: HPNadig

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ವಿಶಾಲವಾದ ಹೊರಾಂಗಣ ಹಾಗು ಸುಂದರವಾದ ಉದ್ಯಾನವನ್ನು ಹೊಂದಿರುವ ಈ ಗುಮ್ಮಟವನ್ನು ಬಿಜಾಪುರಿನ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣಗಳಿಂದ ರಿಕ್ಷಾ ಹಾಗು ಟಾಂಗಾ(ಕುದುರೆ ಗಾಡಿ)ಗಳ ಮೂಲಕ ಸುಲಭವಾಗಿ ತಲುಪಬಹುದು. ಶುಕ್ರವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಘಂಟೆಯವರೆಗೆ ತೆರೆದಿರುವ ಈ ಸ್ಮಾರಕಕ್ಕೆ ಪ್ರವೇಶಿಸಲು ಪ್ರತಿ ತಲೆಗೆ ರೂ. 2 ಶುಲ್ಕವನ್ನು ಕೊಡಬೇಕಾಗುತ್ತದೆ (15 ವರ್ಷ ಮೇಲ್ಪಟ್ಟವರಿಗೆ ಮಾತ್ರ).

ಚಿತ್ರಕೃಪೆ: Sanyambahga

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಬಸಂತ ವನ: ಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಬಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ.

ಚಿತ್ರಕೃಪೆ: Sissssou2

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಬಸಂತ ಸ್ಮಾರಕ/ಬಸವನ ಬಾಗೇವಾಡಿ: 12 ನೇಯ ಶತಮಾನದಲ್ಲಿದ್ದ ಕ್ರಾಂತಿಕಾರಿ ಸಮಾಜ ಸುಧಾರಕ ಹಾಗು ಸಂತ ಬಸವಣ್ಣನವರು ಜನಿಸಿದ್ದು ಬಿಜಾಪುರ ಜಿಲ್ಲೆಯ ಪುಟ್ಟ ಹಳ್ಳಿಯಾದ ಬಾಗೇವಾಡಿಯಲ್ಲಿ. ಆದ್ದರಿಂದ ಇದು ಬಸವನ ಬಾಗೇವಾಡಿ ಎಂದೆ ಹೆಸರು ಪಡೆದಿದೆ. ಅಲ್ಲದೆ ಇದನ್ನು ಇಂಗಳೇಶ್ವರ ಬಾಗೇವಾಡಿ ಎಂದೂ ಕೂಡ ಕರೆಯಲಾಗುತ್ತದೆ. ಲಿಂಗಾಯತ ಸಮುದಾಯದವರ ದೈವವಾಗಿರುವ ಬಸವಣ್ಣನವರ ಈ ಕ್ಷೇತ್ರವು ಒಂದು ಧಾರ್ಮಿಕ ಪ್ರವಾಸಿ ಕ್ಷೇತ್ರವಾಗಿದ್ದು, ಬಿಜಾಪುರ ಪಟ್ಟಣದ ಆಗ್ನೇಯ ದಿಕ್ಕಿಗೆ ಸುಮಾರು 43 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇಲ್ಲಿಗೆ ತೆರಳಲು ಬಿಜಾಪುರ ಬಸ್ ನಿಲ್ದಾಣದಿಂದ ಬಸ್ ಲಭ್ಯವಿರುತ್ತದೆ.

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಜಾಮಾ/ಜುಮ್ಮಾ ಮಸೀದಿ: ನಗರದಲ್ಲಿರುವ ಈ ಭವ್ಯ ಮಸೀದಿಯು ಭಾರತದಲ್ಲಿರುವ ಉತ್ತಮ ಮಸೀದಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. 1,16,300 ಚ.ಮೀ ಗಳಷ್ಟು ವಿಸ್ತಾರವಾದ ಆವರಣ ಹೊಂದಿರುವ ಈ ಮಸೀದಿಯನ್ನು ಒಂದನೇಯ ಅಲಿ ಆದಿಲ್ ಶಾಹ್ (1557 - 80) ನಿರ್ಮಿಸಿದ್ದಾನೆ. 2250 ಜನ ಒಟ್ಟಾಗಿ ಕುಳಿತು ಪ್ರಾರ್ಥಿಸುವ ಜಾಗವನ್ನು ಹೊಂದಿರುವ ಈ ಮಸೀದಿಯ ಲತಾಮಂಟಪದಲ್ಲಿ ಸುವರ್ಣ ಅಕ್ಷರಗಳಲ್ಲಿ ಖುರಾನ್ ಬರೆದ್ದಿದ್ದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Anurodhraghuwanshi

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಮಲಿಕ್ - ಎ - ಮೈದಾನ್: ಭೂಪ್ರದೇಶದ ಒಡೆಯ ಎಂಬ ಅಕ್ಷರಶಃ ಅರ್ಥ ಕೊಡುವ ಇದು ಒಂದು ಬೃಹತ್ತಾದ ಸಿಡಿ ಮದ್ದಿನ ತೋಪು. 4 ಮೀ ಉದ್ದ, 1.5 ಮೀ ವ್ಯಾಸ ಹೊಂದಿರುವ ಈ ತೋಪು 55 ಟನ್ ಗಳಷ್ತು ತೂಗುತ್ತದೆ. 400 ಎತ್ತುಗಳು, 10 ಆನೆಗಳು ಹಾಗು ಹಲವು ಯೋಧರು ಪಾಲ್ಗೊಂಡಿದ್ದ ಯುದ್ಧದಲ್ಲಿ ಜಯಗಳಿಸಿದ ನಂತರ 17 ನೇಯ ಶತಮಾನದಲ್ಲಿ ಅಹ್ಮದ್ ನಗರದಿಂದ ಇದನ್ನು ಇಲ್ಲಿಗೆ ಮರು ತರಲಾಯಿತು.

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಇಬ್ರಾಹಿಮ್ ರೋಜಾ: ನಗರದಲ್ಲಿರುವ ಈ ಸ್ಮಾರಕವನ್ನು ಎರಡನೇಯ ಇಬ್ರಾಹಿಮ್ ಆದಿಲ್ ಶಾಹ್ ನಿರ್ಮಿಸಿದ್ದಾನೆ. ಆಕರ್ಷಕವಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ಸ್ಮಾರಕದಲ್ಲಿ ಆಯತಾಕಾರದ ಪ್ರಾರ್ಥನಾ ಮಂದಿರವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Sanyam Bahga

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಉಪ್ಪಲಿ ಬುರುಜ: ಬಿಜಾಪುರ ನಗರದಲ್ಲಿರುವ ಈ ರಚನೆಯು ಒಂದು ಎತ್ತರವಾದ ಗೋಪುರವಾಗಿದೆ. 1584 ರಲ್ಲಿ ಹೈದರ್ ಖಾನ್ ನಿಂದ ನಿರ್ಮಿತವಾದ ಇದು 80 ಅಡಿಗಳಷ್ಟು ಎತ್ತರವಿದ್ದು ಮೆಟ್ಟಿಲುಗಳನ್ನು ಹೊಂದಿದೆ.

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಬಾರಾಕಮಾನ: ಇದೊಂದು ಸಂಪೂರ್ಣಗೊಳ್ಳದ ಎರಡನೇಯ ಅಲಿ ಆದಿಲ್ ಶಾಹನ ಭವ್ಯ ಸಮಾಧಿ. ಅಲಿ ಆದಿಲ್ ಶಾಹನು ಹೋಲಿಸಲಸಾಧ್ಯವಾದಂತಹ ಭವ್ಯ ರಚನೆಯನ್ನು ನಿರ್ಮಿಸಲು ಆಶಿಸಿದ್ದನು. ಯೋಜನೆಯ ಪ್ರಕಾರ, 12 (ಹಿಂದಿಯಲ್ಲಿ ಬಾರಾ ಎಂದರೆ 12) ಕಮಾನುಗಳನ್ನು ಉದ್ದವಾಗಿಯೂ ಅಗಲವಾಗಿಯೂ ನಿರ್ಮಿಸಬೇಕಾಗಿತ್ತು. ಆದರೆ ಇದರ ನಿರ್ಮಾಣ ಕಾರ್ಯವು ಏತಕ್ಕೆ ಸಂಪೂರ್ಣಗೊಳ್ಳಲಿಲ್ಲ ಎಂಬುದು ತಿಳಿದು ಬಂದಿಲ್ಲ.

ಚಿತ್ರಕೃಪೆ: fraboof

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ತಾಜ ಬಾವಡಿ: ಬಿಜಾಪುರಿನ ದೊರೆ ಎರಡನೇಯ ಇಬ್ರಾಹಿಮ್ ನ ಮೊದಲನೇಯ ಪತ್ನಿಯಾದ ತಾಜ್ ಸುಲ್ತಾನಾಳ ಗೌರವಾರ್ಥ ಈ ಕೊಳವನ್ನು ನಿರ್ಮಿಸಲಾಯಿತು. ಅಷ್ಟ ಭುಜಗಳುಳ್ಳ ಎರಡು ರಚನೆಗಳನ್ನು ಇಲ್ಲಿ ನೋಡಬಹುದಾಗಿದ್ದು ಇದರ ಪೂರ್ವ ಹಾಗು ಪಶ್ಚಿಮಕ್ಕೆ ವಿಶಾಲವಾದ ವಿರಾಮ ಕೊಠಡಿಗಳಿವೆ.

ಚಿತ್ರಕೃಪೆ: Akshatha

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಸಂಗೀತ ಮಹಲ್: ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ ತೊರವಿ ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ. ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ಬಿಜಾಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ.

ಚಿತ್ರಕೃಪೆ: Aanand

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಅಸರ್ ಮಹಲ್: ಮೊಹಮ್ಮದ್ ಆದಿಲ್ ಶಾಹ್ ನಿಂದ 1646 ರಲ್ಲಿ ನಿರ್ಮಿಸಲಾದ ಅಸರ್ ಮಹಲ್ ನ್ಯಾಯ ಬಗೆಹರಿಸುವ ಆಲಯವಾಗಿತ್ತು. ಇಲ್ಲಿ ಮೂರು ಹೊಂಡಗಳನ್ನು ಕಾಣಬಹುದು. ಮಧ್ಯದಲ್ಲಿರುವ ಹೊಂಡವು 15 ಅಡಿಗಳಷ್ಟು ಆಳವನ್ನು ಹೊಂದಿದ್ದು ಉಳಿದೆರಡ ಹೊಂಡಗಳಿಗಿಂತ ದೊಡ್ಡದಾಗಿದೆ. ಇಲ್ಲಿ ಪ್ರಾಫೆಟ್ ಮೊಹಮ್ಮದರ ಎರಡು ಎಳೆ ಕೂದಲನ್ನು ಇರಿಸಲಾಗಿದೆ ಎಂದು ಹೇಳಲಾಗಿದೆ. ಮುಂದಿನ ಸ್ಲೈಡುಗಳಲ್ಲಿ ಗೋಲ ಗುಮ್ಮಟದ ತರಹೇವಾರಿ ಚಿತ್ರಗಳು ನಿಮ್ಮನ್ನು ಬೆರಗುಗೊಳಿಸದೆ ಇರಲಾರದು.

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಸ್ಮಾರಕದ ಛಾವಣಿಗಳ ಮೇಲೆ ಮೂಡಿ ಬಂದ ಸುಂದರ ವಿನ್ಯಾಸದ ರಚನೆಗಳು. ಇಂದಿನ ಹಾಗೆ ಅತ್ಯಾಧುನಿಕ ಯಾವ ಸಲಕರಣೆಗಳಿಲ್ಲದೆಯೂ ಕರಾರುವಕ್ಕಾಗಿ ಈ ರೀತಿಯ ವಿನ್ಯಾಸ ಮಾಡಿರುವುದು ಅಂದಿನ ಶಿಲ್ಪಿಗಳ ನಿಪುಣತೆಯನ್ನು ತೋರಿಸುತ್ತದೆ.

ಚಿತ್ರಕೃಪೆ: HPNadig

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗೋಲ ಗುಮ್ಮಟದ ಗೋಡೆಗಳ ಮೇಲೆ ಕಂಡುಬರುವ ಮನಸೆಳೆವ ಅದ್ಭುತ ಕಲಾಕೃತಿಗಳು.

ಚಿತ್ರಕೃಪೆ: Santoshsmalagi

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗೋಲ ಗುಮ್ಮಟದ ಒಳ ಪ್ರವೇಶಿಸಲು ಬೃಹತ್ ಕಮಾನಿನ ಆಕೃತಿಯ ಗೋಡೆಯಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟ ದ್ವಾರ.

ಚಿತ್ರಕೃಪೆ: Akshatha

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಅತ್ಯಂತ ಸಂಕೀರ್ಣವಾದ ಹಾಗೂ ಅಷ್ಟೆ ಸೊಗಸಾಗಿ ನೆಲ ಹಾಸಿಗೆಯ ಮೇಲೆ ಕೆತ್ತಲಾದ ಅದ್ಭುತ ಕಲಾಕೃತಿಗಳು ಎಂಥವರನ್ನು ಬೆರಗುಗೊಳಿಸದೆ ಇರಲಾರದು.

ಚಿತ್ರಕೃಪೆ: Trollpande

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ನಕ್ಕರ್ ಖಾನಾ ಎಂಬುದೊಂದು ಅರಮನೆಯ ಎದುರಿಗೆ ನಿರ್ಮಿಸಲಾಗುವ ಮನರಂಜನಾ ಚಟುವಟಿಕೆಗಳು ನಡೆಯುವ ಸ್ಥಳವಾಗಿದೆ. ಮುಘಲ್ ಸಾಮ್ರಾಜ್ಯದಲ್ಲೂ ಈ ರೀತಿಯಾಗಿ ನಕ್ಕರ್ ಖಾನಾಗಳಿರುವುದನ್ನು ಗಮನಿಸಬಹುದಾಗಿದೆ. ಅದರಂತೆ ಗೋಲಗುಮ್ಮಟದ ಮುಂದೆಯೂ ಒಂದು ನಕ್ಕರ ಖಾನಾದ ರಚನೆಯಿದೆ. ನಕ್ಕರ್ ಖಾನಾದ ಚಿತ್ರ.

ಚಿತ್ರಕೃಪೆ: Alende devasia

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗೋಲ ಗುಮ್ಮಟಕ್ಕೆ ಶಾಲಾ ಮಕ್ಕಳು ಹಾಗೂ ಇತರೆ ಪ್ರವಾಸಿಗರು ಭೇಟಿ ನೀಡುತ್ತಿರುವ ಒಂದು ಸಂದರ್ಭ. ಇನ್ನೊಂದು ವಿಷಯವೆಂದರೆ ವಿಜಯಪುರದಲ್ಲಿ ಗೋಲಗುಮ್ಮಟವಿರುವ ಸ್ಥಳವು ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು ಇಲ್ಲಿ ವಿವಿಧ ತಾರಾ ಮೌಲ್ಯದಿಂದ ಹಿಡಿದು ಮಧ್ಯಮವಲಯದಲ್ಲಿ ತನಕ ವಿವಿಧ ಹೋಟೆಲುಗಳಿವೆ. ಹೀಗಾಗಿ ವಿಜಯಪುರದಲ್ಲಿ ತಂಗುವ ಕುರಿತು ಯೋಚನೆ ಮಾಡಬೇಕಾಗಿಲ್ಲ.

ಚಿತ್ರಕೃಪೆ: Ankur2002

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಸ್ವಚ್ಛವಾದ ಹಸಿರಿನಲ್ಲಿ ಶುಭ್ರವಾಗಿ ಗೋಚರಿಸುತ್ತಿರುವ ಗೋಲಗುಮ್ಮಟದ ಒಂದು ಸುಂದರ ನೋಟ.

ಚಿತ್ರಕೃಪೆ: Amith

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

ಗೋಲ ಗುಮ್ಮಟ ನೆಲೆಸಿರುವ ಪ್ರಾಂಗಣದ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಮಸೀದಿ.

ಚಿತ್ರಕೃಪೆ: Trupti

ವಿಜಯಪುರ ಹಾಗೂ ಗೋಲಗುಮ್ಮಟ:

ವಿಜಯಪುರ ಹಾಗೂ ಗೋಲಗುಮ್ಮಟ:

300 ಕ್ಕೂ ಅಧಿಕ ವರ್ಷಗಳಿಂದ ಭೂಮಿಯ ಮೇಲೆ ಸದೃಢವಾಗಿ ನಿಂತು ಇಂದಿನ ಇಂಜಿನಿಯರುಗಳಿಗೆ ಸವಾಲೆಸೆಯುತ್ತಿರುವ, ವಿಶ್ವದ ಮುಖದಲ್ಲಿ ಅಧಿಕವಾಗಿ ಜನಪ್ರೀಯತೆ ಪಡೆಯಬೇಕಾಗಿದ್ದ ಆದರೂ ಎಲೆಮರೆಯ ಕಾಯಿಯಂತೆ ಕರ್ನಾಟಕದಲ್ಲೆ ಪ್ರಶಾಂತವಾಗಿ ನೆಲೆಸಿರುವ ಈ ಅದ್ಭುತ ರಚನೆ ಜೀವನದಲ್ಲಿ ಒಂದೊಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Ajithpsalim

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more