Search
  • Follow NativePlanet
Share
» »ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ವಿಸ್ಮಯಕರ ಅನಂತಪುರ ಸರೋವರ ದೇವಾಲಯ

By Vijay

ಇದೊಂದು ವಿಸ್ಮಯಕರ ದೇವಾಲಯವೆ ಸರಿ. ಇಲ್ಲಿನ ವಿಶೇಷತೆಯೂ ಸಹ ವಿಶೇಷವೆ. ನಮಗೆಲ್ಲ ಗೊತ್ತಿರುವ ಇಂದು ಭಾರತದ ಅತಿ ಶ್ರೀಮಂತ ದೇವಸ್ಥಾನವಾದ ಕೇರಳದ ತಿರುವನಂತಪುರಂ ನಲ್ಲಿರುವ ಅನಂತ ಪದ್ಮನಾಭಸ್ವಾಮಿಯ ಮೂಲ ಸ್ಥಾನ ಈ ದೇವಾಲವೆಂದೆ ಹೇಳಲಾಗುತ್ತದೆ. ಅಲ್ಲದೆ ಸರೋವರದಲ್ಲೆ ನಿರ್ಮಿತವಾಗಿರುವ ಕೇರಳದ ಏಕೈಕ ದೇವಾಲಯ ಇದಾಗಿದೆ.

ನಿಮಗಿಷ್ಟವಾಗಬಹುದಾದ : ಮನದಲ್ಲಿ ಸದಾ ನೆಲೆಯೂರುವ ತಿರುವನಂತಪುರ

ಇದನ್ನು ಅನಂತಪುರ ಸರೋವರ ದೇವಾಲಯ ಎಂದು ಕರೆಯಲಾಗುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. ಕಾಸರಗೋಡಿನಿಂದ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಇನ್ನೂ ಕಾಸರಗೋಡು ರೈಲು ನಿಲ್ದಾಣ ಹೊಂದಿದ್ದು ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ಚಿತ್ರಕೃಪೆ: keralatourism.org

ಪದ್ಮನಾಭನ ದೇವಾಲಯ ಹೊಂದಿರುವ ಈ ಸರೋವರವು ಸುಮಾರು ಎರಡು ಎಕರೆಗಳಷ್ಟು ವಿಸ್ತಾರವಾಗಿ ಹರಡಿದೆ. ದೇವಾಲಯಕ್ಕೆ ಭೇಟಿ ನೀಡಲು ಸೇತುವೆ ರೀತಿಯ ರಚನೆ ನಿರ್ಮಿಸಲಾಗಿದ್ದು ಅದರ ಮೂಲಕ ಸಾಗಿ ದೇಗುಲ ತಲುಪಬಹುದು. ಹೀಗೆ ಹೊರಡುವಾಗ ಜನರು ಬಲಗಡೆಗೆ ಗುಹಾ ರಚನೆಯೊಂದಿರುವುದನ್ನು ಕಾಣಬಹುದು.

ದಂತಕಥೆಯ ಪ್ರಕಾರ, ಈ ದೇವಾಲಯದ ಮುಖ್ಯ ದೈವ ಪದ್ಮನಾಭನು ಆ ಗುಹೆಯ ಮೂಲಕವೆ ಸಾಗುತ್ತ ತಿರುವನಂತಪುರಂಗೆ ತೆರಳಿ ಅನಂತ ಪದ್ಮನಾಭನಾದನೆಂಬ ಪ್ರತೀತಿಯಿದೆ. ಅಂತೆಯೆ ಅನಂತ ಎಂಬ ಶಬ್ದವು ಈ ಎರಡು ಸ್ಥಳಗಳಿಗೆ ಬಂದಿದೆ ಎಂದು ಹೇಳಲಾಗುತ್ತದೆ.

ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ಚಿತ್ರಕೃಪೆ: Vinayaraj

ಈ ದೇವಾಲಯದ ಕುರಿತು ಹಿನ್ನಿಲೆ ಅಸ್ಪಷ್ಟವಾಗಿದೆಯಾದರೂ ಒಂದು ದಂತಕಥೆಯು ಇದಕ್ಕೆ ಥಳುಕು ಹಾಕಿಕೊಂಡಿದೆ. ಹಿಂದೆ ಕರ್ನಾಟಕದ ತುಳು ಪ್ರದೇಶದಲ್ಲಿ ವಿಲ್ವಮಂಗಲನೆಂಬ ಮಹಾನ್ ಋಷಿಯಿದ್ದ. ನಾರಾಯಣನ ಕುರಿತು ನಿಷ್ಠೆಯಿಂದ ತಪಸ್ಸು ಮಾಡುತ್ತಿದ್ದ. ಇದರಿಂದ ಪ್ರಸನ್ನನಾದ ನಾರಾಯಣ ಒಬ್ಬ ಮುಗ್ಧ ಮಗುವಿನ ರೂಪಧರಿಸಿ ಋಷಿಯ ಮುಂದೆ ಹೋದ. ಆ ಬಾಲಕನ ಮುಖ ದಿವ್ಯ ತೇಜಸ್ಸಿನಿಂದ ಕೂಡಿತ್ತು.

ಬಾಲಕನನ್ನು ಕಂಡು ಪ್ರಸನ್ನನಾದ ಋಷಿ ಆತನು ಯಾರೆಂದು ವಿಚಾರಿಸಿದ. ಬಾಲಕ ತನಗ್ಯಾರು ಇಲ್ಲಿವೆಂದು ಹೇಳಿದಾಗ ಋಷಿಯು ಬಾಲಕನು ತನ್ನ ಜೊತೆಯಲ್ಲೆ ವಾಸಿಸಬಹುದೆಂದು ಕೇಳಿದ. ಅದಕ್ಕೆ ಬಾಲಕನು ತನಗೆ ಯಾವಾಗ ಅವಮಾನವಾಗುತ್ತೊ ಅಂದೆ ಈ ಸ್ಥಳ ತೊರೆಯುವುದಾಗಿ ಷರತ್ತು ವಿಧಿಸಿ ಋಷಿಯ ಸೇವೆ ಮಾಡುತ್ತ ವಾಸಿಸತೊಡಗಿದ.

ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ಮೊಸಳೆಯಿರುವ ಸ್ಥಳ, ಚಿತ್ರಕೃಪೆ: Vinayaraj

ಬಾಲಕನಾಗಿದ್ದರಿಂದ ಚೆಷ್ಟೆಗಳನ್ನು ಮಾಡುವುದು ಸಾಮಾನ್ಯವಾಗಿತ್ತು ಹಾಗೂ ದಿನಗಳೆದಂತೆ ಚೆಷ್ಟೆಗಳಿಂದ ಬೇಸತ್ತ ಋಷಿ ಬಾಲಕನಿಗೆ ಕಠಿಣವಾಗಿ ಬೈದ. ಇದರಿಂದ ಮನನೊಂದ ಬಾಲಕ ಗುಹೆಯೊಂದರ ಬಳಿ ಅದೃಶ್ಯನಾಗಿ ಋಷಿಯು ತನ್ನ ನೋಡಬೇಕೆಂದರೆ ಸರ್ಪದೇವತೆ ಅನಂತನ ಕಾಡಾದ ಅನಂತನಕಟ್ಟೆಗೆ ಬರಬೇಕೆಂದು ಘೋಷಿಸಿ ಹೋದ.

ತರುವಾಯ, ಋಷಿಗೆ ಆ ಬಾಲಕ ನಾರಾಯಣನೆಂದು ಗೊತ್ತಾಗಿ ಆ ಗುಹೆಯ ಮೂಲಕ ಬಾಲಕನನ್ನು ಅರಸುತ್ತ ಸಾಗಿ ಸಮುದ್ರದೆಡೆ ಬಂದ ಮತ್ತೆ ಅಲ್ಲಿಂದ ದಕ್ಷಿಣಾಭಿಮುಖವಾಗಿ ಸಾಗುತ್ತ ಈ ಸ್ಥಳದ ಬಳಿ ಬಂದ ಹಾಗೂ ಆ ಬಾಲಕನನ್ನು ಕಂಡ. ಕೂಡಲೆ ಬಾಲಕ ಗಿಡವೊಂದರಲ್ಲಿ ಪ್ರವೇಶಿಸಿ ಆ ಗಿಡ ಮಲಗಿದ ಭಂಗಿಯಲ್ಲಿ ಶೇಷನಾಗನ ಮೇಲಿರುವ ನಾರಯಣನ ರೂಪ ಪಡೆಯಿತಂತೆ.

ವಿಸ್ಮಯಕರ ಅನಂತಪುರ ಸರೋವರ ದೇವಾಲಯ

ಕೆರೆಯಲ್ಲಿರುವ ಬಾಬಿಯಾ ಮೊಸಳೆ, ಚಿತ್ರಕೃಪೆ: Vinayaraj

ಈ ದೇವಾಲಯವು ಇನ್ನೊಂದು ಸುಂದರ ಹಾಗೂ ವಿಸ್ಮಯಕರ ಕಥೆಯನ್ನು ಹೊಂದಿದೆ. ಅದೆ ಬಾಬಿಯಾ ಕಥೆ. ಬಾಬಿಯಾ ಈ ದೇವಾಲಯದ ಕೆರೆಯಲ್ಲಿರುವ ಏಕೈಕ ಶಾಖಾಹಾರಿ ಮೊಸಳೆಯಂತೆ. ಇದು ಭಕ್ತಾದಿಗಳು ನೀಡುವ ವಿಶೇಷ ರೀತಿಯ ಶಾಖಾಹಾರಿ ಖಾದ್ಯವನ್ನು ಅರ್ಚಕರು ಮಧ್ಯಾಹ್ನದ ಸಮಯದಲ್ಲಿ ನೀಡಿದಾಗ ಮಾತ್ರ ತಿನ್ನುತ್ತದಂತೆ. ಇಲ್ಲಿಯವರೆಗೂ ಕೆರೆಯ ಯಾವ ಜಿವಿಗಳನ್ನು ಹಾಗು ಮನುಷ್ಯರಿಗೆ ಯಾವ ತೊಂದರೆ ಕೊಟ್ಟಿಲ್ಲವಂತೆ.

ನಿಮಗಿಷ್ಟವಾಗಬಹುದಾದ : ಭಾರತದಲ್ಲಿರುವ ಖ್ಯಾತ ಸರ್ಪದೋಷ ಪರಿಹಾರ ಕ್ಷೇತ್ರಗಳು

ಇದನ್ನು ದೇವಾಲಯದ ಕಾವಲುಗಾರ ಎಂದು ಹೇಳಲಾಗುತ್ತದೆ. ಹಿಂದೊಮ್ಮೆ ಬ್ರಿಟೀಷ್ ಸಿಪಾಯಿಯೊಬ್ಬ ಇಲ್ಲಿನ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದ. ತದನಂತರ ಅವನು ಹಾವು ಕಡಿತದಿಂದ ಅಸು ನೀಗಿದ. ಇದಾದ ಮೇಲೆ ಆ ಕೆರೆಯಲ್ಲಿ ಮತ್ತೊಂದು ಮೊಸಳೆ ಬಂದು ಸೇರಿತು. ಇಂದಿಗೂ ಇಲ್ಲಿ ಒಂದೆ ಮೊಸಳೆಯಿದೆಯಂತೆ. ಅದು ತೀರಿ ಹೋದರೆ ಮತ್ತೊಂದು ಮೊಸಳೆ ತಾನಾಗಿಯೆ ಬಂದು ಕೆರೆ ಸೇರುತ್ತದಂತೆ. ನಿಮಗೆ ಅದೃಷ್ಟವಿದ್ದಲ್ಲಿ ಈ ಮೊಸಳೆಯನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X