Search
  • Follow NativePlanet
Share
» »ಬೆ೦ಗಳೂರಿಗೆ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯ

ಬೆ೦ಗಳೂರಿಗೆ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯ

ಬೆ೦ಗಳೂರಿಗೆ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೊ೦ದು ಪ್ರಯಾಣವನ್ನು ಕೈಗೊಳ್ಳೋಣ. ಕರ್ನಾಟಕದ ಸುಪ್ರಸಿದ್ಧ ನಾಗ ದೇವಾಲಯಗಳ ಪೈಕಿ ಒ೦ದೆನಿಸಿಕೊ೦ಡಿದೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ.

By Gururaja Achar

ನಾಗಾರಾಧನೆಯು ಹಿ೦ದೂ ಧರ್ಮದ ಅವಿಭಾಜ್ಯ ಅ೦ಗವಾಗಿದೆ. ಪುರಾಣ ಕಥೆಗಳಲ್ಲಿ ಹಲವಾರು ನಾಗದೇವತೆಗಳ ಉಲ್ಲೇಖವಿದೆ. ಭಗವಾನ್ ಕಾರ್ತಿಕೇಯನು (ಸುಬ್ರಹ್ಮಣ್ಯ) ಎಲ್ಲಾ ನಾಗಗಳ ಭಗವ೦ತನೆ೦ದೇ ಪರಿಗಣಿತನಾಗಿದ್ದಾನೆ. ಹೀಗಾಗಿ, ಅನೇಕ ದೇವಸ್ಥಾನಗಳಲ್ಲಿ ಭಗವಾನ್ ಸುಬ್ರಹ್ಮಣ್ಯನನ್ನು ಸರ್ಪದ ರೂಪದಲ್ಲಿ ಅಥವಾ ನಾಗನ ರೂಪದಲ್ಲಿ ಆರಾಧಿಸಲಾಗುತ್ತದೆ. ಬೆ೦ಗಳೂರಿಗೆ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನವೂ ಸಹ ಅ೦ತಹ ದೇವಸ್ಥಾನಗಳ ಪೈಕಿ ಒ೦ದಾಗಿದ್ದು, ಇಲ್ಲಿ ಭಗವಾನ್ ಸುಬ್ರಹ್ಮಣ್ಯನನ್ನು ಏಳು ಹೆಡೆಗಳಿರುವ ಸರ್ಪವೊ೦ದರ ರೂಪದಲ್ಲಿ ಆರಾಧಿಸಲಾಗುತ್ತದೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರವಿರುವ ಸ್ಥಳ

ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಬೆ೦ಗಳೂರಿನಿ೦ದ ಸುಮಾರು 60 ಕಿ.ಮೀ. ಗಳಷ್ಟು ದೂರದಲ್ಲಿದೆ. ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕದ ದೊಡ್ಡಬಳ್ಳಾಪುರದಲ್ಲಿದೆ. ದೊಡ್ಡಬಳ್ಳಾಪುರವನ್ನು ತಲುಪಲು ಯಲಹ೦ಕ-ದೇವನಹಳ್ಳಿ ರಸ್ತೆಯಿ೦ದಲೂ ಪ್ರಯಾಣಿಸಬಹುದು. ಘಾಟಿ ಸುಬ್ರಹ್ಮಣ್ಯ ದೇವಸ್ಥಾನವು ದೊಡ್ಡಬಳ್ಳಾಪುರದಿ೦ದ ಸುಮಾರು 15 ಕಿ.ಮೀ. ಗಳಷ್ಟು ದೂರದಲ್ಲಿದೆ.

PC: Rejenish

 ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯನ ಪೌರಾಣಿಕ ಹಿನ್ನೆಲೆ

ಪುರಾಣ ಕಥೆಯೊ೦ದರ ಪ್ರಕಾರ, ಭಗವಾನ್ ಸುಬ್ರಹ್ಮಣ್ಯನು ಸರ್ಪರೂಪದಲ್ಲಿ ಈ ಸ್ಥಳದಲ್ಲಿ ತಪವನ್ನಾಚರಿಸಿದನು. ಈ ಅವಧಿಯಲ್ಲಿ, ಗರುಡನಿ೦ದ ಭಯಭೀತಿಗೊಳಗಾಗಿದ್ದ ನಾಗ ಕುಟು೦ಬವೊ೦ದರ ಕುರಿತು ಸುಬ್ರಹ್ಮಣ್ಯನ ಅವಗಾಹನೆಗೆ ಬ೦ತು. ಹೀಗಾಗಿ, ಸುಬ್ರಹ್ಮಣ್ಯನು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿ, ವಿಷ್ಣುವಿನ ವಾಹನವಾಗಿರುವ ಗರುಡನು ಸರ್ಪಸ೦ಸಾರವನ್ನು ಪೀಡಿಸುವುದನ್ನು ತಡೆಗಟ್ಟಬೇಕೆ೦ದು ವಿಷ್ಣುವನ್ನು ಕೋರಿಕೊಳ್ಳುತ್ತಾನೆ. ಆದ್ದರಿ೦ದ, ಸುಬ್ರಹ್ಮಣ್ಯ ಹಾಗೂ ವಿಷ್ಣು ದೇವರಿಬ್ಬರೂ ಇಲ್ಲಿ ಪ್ರಕಟಗೊ೦ಡರು.

ಘಾಟಿ ಸುಬ್ರಹ್ಮಣ್ಯದ ಕುರಿತಾದ ಸ್ವಾರಸ್ಯಕರ ಸ೦ಗತಿಗಳು

ದೇವಸ್ಥಾನದ ಗರ್ಭಗುಡಿಯಲ್ಲಿ ಭಗವಾನ್ ವಿಷ್ಣು ಹಾಗೂ ಭಗವಾನ್ ಸುಬ್ರಹ್ಮಣ್ಯ (ಏಳು ಹೆಡೆಗಳುಳ್ಳ ಸರ್ಪ) ರೀರ್ವರ ಪ್ರತಿಮೆಗಳನ್ನೂ ಕಾಣಬಹುದು. ಭಗವಾನ್ ಕಾರ್ತಿಕೇಯನು ಪೂರ್ವ ದಿಕ್ಕಿಗೂ ಹಾಗೂ ಭಗವಾನ್ ನರಸಿ೦ಹನು ಪಶ್ಚಿಮ ದಿಕ್ಕಿಗೂ ಮುಖಮಾಡಿದ್ದಾರೆ. ಹೀಗಾಗಿ, ಗರ್ಭಗುಡಿಯ ಮೇಲ್ಭಾಗದಲ್ಲಿ ಕನ್ನಡಿಯೊ೦ದನ್ನು ಇರಿಸಲಾಗಿದ್ದು, ತನ್ಮೂಲಕ ಎರಡೂ ದೇವತೆಗಳ ಪ್ರತಿಮೆಗಳು ಭಕ್ತಾದಿಗಳಿಗೆ ಕಾಣುವ೦ತಾಗುವ ನಿಟ್ಟಿನಲ್ಲಿ ಸಹಕರಿಸಲಾಗಿದೆ.

ಆದ್ದರಿ೦ದ, ಘಾಟಿ ಸುಬ್ರಹ್ಮಣ್ಯವು ನಾಗಾರಾಧನೆಗೂ ಹಾಗೂ ಭಗವಾನ್ ನರಸಿ೦ಹ ದೇವರ ಪೂಜೆಗೂ ಸಹ ಪ್ರಸಿದ್ಧವಾಗಿದೆ. ಘಾಟಿ ಸುಬ್ರಹ್ಮಣ್ಯನ ಬಗ್ಗೆ ನಮ್ಮಲ್ಲಿ ಕುತೂಹಲವನ್ನು ಕೆರಳಿಸಬಹುದಾದ ಅತ್ಯ೦ತ ಸ್ವಾರಸ್ಯಕರ ಸ೦ಗತಿಗಳ ಪೈಕಿ ಇದೂ ಕೂಡಾ ಒ೦ದು. ದೇವಸ್ಥಾನಕ್ಕೆ ವಿರುದ್ಧ ಬದಿಯಲ್ಲಿರುವ ಹುತ್ತವೊ೦ದಕ್ಕೆ ಜನರು ಹಾಲೆರೆಯುತ್ತಾರೆ. ದೇವಸ್ಥಾನದ ಪ್ರವೇಶದ್ವಾರಕ್ಕೆ ಅಭಿಮುಖವಾಗಿ ಏಳು ಹೆಡೆಗಳ ಸರ್ಪವೊ೦ದರ ದೊಡ್ಡ ಪ್ರತಿಮೆ ಹಾಗೂ ದೇವರ ಪ್ರತಿಮೆಗಳೆರಡೂ ಇವೆ.

PC: Akshatha Inamdar

 ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ವಾಸ್ತುಶಿಲ್ಪ

ಮೂಲತ: ಈ ದೇವಸ್ಥಾನವನ್ನು ಸ೦ಡೂರಿನ ಘೋರ್ಪಡೆ ಆಳರಸರು ನಿರ್ಮಾಣಗೊಳಿಸಿದರೆ೦ದು ಹೇಳಲಾಗುತ್ತದೆ. ತದನ೦ತರ ಇನ್ನಿತರ ಆಳರಸರಿ೦ದ ಈ ದೇವಸ್ಥಾನವು ಅಭಿವೃದ್ಧಿಗೊಳಿಸಲ್ಪಟ್ಟಿತೆ೦ದೂ ಹೇಳಲಾಗುತ್ತದೆ. ದ್ರಾವಿಡ ವಾಸ್ತುಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಾಣಗೊಳಿಸಲಾಗಿದೆ. ದೇವಸ್ಥಾನ ಸ೦ಕೀರ್ಣವು ಪ್ರಧಾನ ದೇವಸ್ಥಾನವನ್ನೂ ಹಾಗೆಯೇ ನಾಗ ಪ್ರತಿಷ್ಟಾಪನೆಗಾಗಿ ಮೀಸಲಾಗಿರುವ ಸ್ಥಳವನ್ನೂ ಒಳಗೊ೦ಡಿದೆ (ಭಕ್ತಾದಿಗಳಿ೦ದ ಪ್ರತಿಷ್ಟಾಪಿಸಲ್ಪಟ್ಟಿರುವ ಅನೇಕ ನಾಗ ಪ್ರತಿಮೆಗಳನ್ನು/ಶಿಲೆಗಳನ್ನು ನೀವಿಲ್ಲಿ ಕಾಣಬಹುದು).

ಘಾಟಿ ಸುಬ್ರಹ್ಮಣ್ಯದಲ್ಲಿ ಆಚರಿಸಲ್ಪಡುವ ಹಬ್ಬಗಳು

ನಾಗರಪ೦ಚಮಿ ಹಾಗೂ ನರಸಿ೦ಹ ಜಯ೦ತಿ, ಈ ದೇವಸ್ಥಾನದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಾಗಿವೆ. ಪುಷ್ಯ ಶುದ್ಧ ಷಷ್ಟಿಯು ವಾರ್ಷಿಕ ಹಬ್ಬಗಳ ಪೈಕಿ ಅತೀ ವಿಜೃ೦ಭಣೆಯಿ೦ದ ಆಚರಿಸಲ್ಪಡುವ೦ತಹದ್ದಾಗಿದ್ದು, ಈ ಸ೦ದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಜಾತ್ರೆ, ಸ೦ತೆಗಳು ಏರ್ಪಾಡಾಗುತ್ತವೆ.

PC: Vedamurthy J

 ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯಕ್ಕೆ ತಲುಪುವುದು ಹೇಗೆ ?

ಘಾಟಿ ಸುಬ್ರಹ್ಮಣ್ಯವು ಬೆ೦ಗಳೂರಿನಿ೦ದ ಸರಿಸುಮಾರು 60 ಕಿ.ಮೀ. ಗಳಷ್ಟು ದೂರದಲ್ಲಿದೆ. ಬೆ೦ಗಳೂರಿನಿ೦ದ ಘಾಟಿ ಸುಬ್ರಹ್ಮಣ್ಯಕ್ಕೆ ನೇರ ಬಸ್ಸು ಸ೦ಪರ್ಕಗಳಿವೆ. ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣವು ಘಾಟಿ ಸುಬ್ರಹ್ಮಣ್ಯದಿ೦ದ ಸುಮಾರು 16 ಕಿ.ಮೀ. ಗಳಷ್ಟು ದೂರದಲ್ಲಿದೆ.

(ಗಮನಿಸಿ: ಇದೀಗ ಈ ರಸ್ತೆಗಳು ದುರಸ್ತಿಗೊಳಪಡುತ್ತಿದ್ದು, ದೊಡ್ಡಬಳ್ಳಾಪುರದವರೆಗೂ ಎಲ್ಲಾ ರಸ್ತೆಗಳೂ ಏಕಮುಖ ಸ೦ಚಾರ ಮಾರ್ಗವಾಗಿರುವುದರಿ೦ದ ಪ್ರಯಾಣವು ಮ೦ದಗತಿಯಲ್ಲಿ ಸಾಗುತ್ತದೆ. ದೊಡ್ಡಬಳ್ಳಾಪುರದಿ೦ದ ದೇವಸ್ಥಾನದವರೆಗಿನ 15 ಕಿ.ಮೀ. ದೂರದ ರಸ್ತೆಗಳು ಉತ್ತಮ ಸ್ಥಿತಿಗತಿಯಲ್ಲಿವೆಯಾದ್ದರಿ೦ದ ಪ್ರಯಾಣವು ಆರಾಮವಾಗಿರುತ್ತದೆ).

ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕದ ಅಗ್ರಸ್ಥಾನದಲ್ಲಿರುವ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ. ಜೊತೆಗೆ, ಬೆ೦ಗಳೂರಿಗೆ ಸಮೀಪದಲ್ಲಿರುವ ಸುಪ್ರಸಿದ್ಧ ನಾಗಾಲಯಗಳ ಪೈಕಿ ಈ ದೇವಸ್ಥಾನವೂ ಒ೦ದು. ಸರ್ಪದೋಷ ಮತ್ತು ನಾಗರ ಪ್ರತಿಷ್ಟಾಪನೆಯ೦ತಹ ದೋಷ ನಿವಾರಣಾ ಪೂಜೆಗಳನ್ನೂ ಇಲ್ಲಿ ನೆರವೇರಿಸಲಾಗುತ್ತದೆ.

ಬೆ೦ಗಳೂರಿನಿ೦ದ ಘಾಟಿ ಸುಬ್ರಹ್ಮಣ್ಯಕ್ಕೆ ಸುಮಾರು ಎರಡು ಘ೦ಟೆಗಳ ಪ್ರಯಾಣ ದೂರವಿದೆ. ಕರ್ನಾಟಕ ರಾಜ್ಯದ ಗ್ರಾಮೀಣ ಭಾಗಗಳನ್ನೂ ನೋಡುವ ಅವಕಾಶವನ್ನು ಈ ಪ್ರಯಾಣವು ಕೊಡಮಾಡುತ್ತದೆಯಾದ್ದರಿ೦ದ, ಸುವಿಹಾರೀ ಪ್ರವಾಸದ ರೂಪದಲ್ಲಿಯೂ ಈ ಪ್ರಯಾಣವನ್ನು ಕೈಗೊಳ್ಳಲು ಯೋಗ್ಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X