» »ಅಂಕು-ಡೊಂಕಿನ ರಸ್ತೆ ಮಾರ್ಗಗಳು

ಅಂಕು-ಡೊಂಕಿನ ರಸ್ತೆ ಮಾರ್ಗಗಳು

Posted By: Divya

ಅರಣ್ಯ ಪ್ರದೇಶ, ಗಿರಿಗಳ ತುದಿ ಹಾಗೂ ಕಣಿವೆಗಳ ಇಳಿಜಾರು ಎನ್ನುವ ಭೇದವಿಲ್ಲದೆ ಸಾಗುವ ರಸ್ತೆ ಮಾರ್ಗಗಳು ರೋಚಕ ಅನುಭವ ನೀಡುತ್ತವೆ. ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ಜಲಧಾರೆಗಳು, ಇನ್ನೇನು ಕಂದಕಕ್ಕೆ ಬಿದ್ದುಬಿಡುತ್ತೇವೆ ಎನ್ನುವ ತಿರುವುಗಳು ಇವುಗಳೊಟ್ಟಿಗೆ ಕೈ ಜೋಡಿಸುತ್ತವೆ. ಇಂತಹ ಅಮೋಘ ಸೌಂದರ್ಯ ಹೊಂದಿರುವ ರಸ್ತೆಮಾರ್ಗದಲ್ಲಿ ನಮ್ಮವರೊಡನೆ ಪ್ರಯಾಣ ಮಾಡಿದರೆ ಮರೆಯಲಾಗದ ನೆನಪು ನಮ್ಮ ಜೋಳಿಗೆಗೆ.

ನಿಜ, ಸಹ್ಯಾದ್ರಿ ಶಿಖರಗಳು, ಪೂರ್ವಘಟ್ಟ ಪ್ರದೇಶಗಳು ಹಾಗೂ ಹಿಮಾಲಯ ಗಿರಿ ಶ್ರೇಣಿಗಳಿಂದ ಕೂಡಿರುವ ನಮ್ಮ ಭಾರತ ಅದ್ಭುತ ಪ್ರಕೃತಿ ಸಿರಿಯನ್ನು ಒಳಗೊಂಡಿದೆ. ಇವುಗಳ ಮಧ್ಯೆ ಹಾದು ಹೋಗುವ ರಸ್ತೆ ಮಾರ್ಗಗಳು ಸಹ ಅಷ್ಟೇ ಪ್ರಸಿದ್ಧಿ ಪಡೆದಿವೆ. ಭಾರತದ ಉದ್ದ-ಅಗಲಕ್ಕೂ ಹರಡಿಕೊಂಡಿರುವ ಘಟ್ಟ ಪ್ರದೇಶದ ರಸ್ತೆ ಮಾರ್ಗಗಳ ಫೋಟೋ ಪ್ರವಾಸ ಗೈಯೋಣ.

ವಯನಾಡ್ ಪಾಸ್

ವಯನಾಡ್ ಪಾಸ್

ಕೋಳಿಕೋಡ್ ನಿಂದ ವಯನಾಡ್‍ಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 212ರ ಮಾರ್ಗ ಭಯಂಕರವಾಗಿದ್ದರೂ ಒಂದು ಬಗೆಯ ಸುಂದರ ಅನುಭವ ನೀಡುತ್ತದೆ. ಸಾಹಸ ಪ್ರಿಯರಿಗೆ ಹೆಚ್ಚು ಖುಷಿಯನ್ನು ನೀಡಬಲ್ಲದು. 12 ಕಿ.ಮೀ. ದೂರದ ಘಟ್ಟ ಪ್ರದೇಶದ ಈ ರಸ್ತೆಮಾರ್ಗದಲ್ಲಿ ಸುಮಾರು 45 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಸುತ್ತಲ ಹಸಿರು ಸೊಬಗು ಸುಂದರ ಅನುಭವ ನೀಡುವುದು.
PC: wikimedia.org

ಮಹಾಬಲೇಶ್ವರ ಮತ್ತು ಪಂಚಗಣಿ ಘಾಟಿ ರಸ್ತೆ

ಮಹಾಬಲೇಶ್ವರ ಮತ್ತು ಪಂಚಗಣಿ ಘಾಟಿ ರಸ್ತೆ

ಮಹಾಬಲೇಶ್ವರ ದಿಂದ ಪಂಚಗಣಿಗೆ ಸಾಗುವ ರಸ್ತೆ ಮಾರ್ಗ ಸಹ್ಯಾದ್ರಿ ಗಿರಿಗಳ ನಡುವೆ ಹಾದು ಹೋಗುತ್ತದೆ. ಆಳವಾದ ಕಂದಕಗಳು, ಸುತ್ತಲು ದಟ್ಟ ಅರಣ್ಯಗಳ ಸಾಲುಗಳಿಂದ ಕೂಡಿದೆ. ಇಲ್ಲಿ ಸಾಗುತ್ತಿದ್ದರೆ ತಂಪಾತ ಗಾಳಿ ಮುಖಕ್ಕೆ ಮುತ್ತಿಡುತ್ತವೆ. ಈ ಸೊಬಗು ಸುಮಾರು 40 ಕಿ.ಮೀ. ವರೆಗೂ ಹಬ್ಬಿದೆ.

ಮಂಗಳೂರು-ಹಾಸನ ಘಾಟಿ ರಸ್ತೆ

ಮಂಗಳೂರು-ಹಾಸನ ಘಾಟಿ ರಸ್ತೆ

ಈ ಮಾರ್ಗದ ರಸ್ತೆಗೆ ಶಿರಾಡಿ ಘಾಟ್ ಎಂದು ಕರೆಯುತ್ತಾರೆ. ಈ ರಸ್ತೆಯ ಆರಂಭದ ಗಡಿ ಭಾಗದಲ್ಲಿ ಸಣ್ಣ ಸಣ್ಣ ದೇಗುಲಗಳಿರುವುದನ್ನು ಕಾಣಬಹುದು. ರಾಷ್ಟ್ರೀಯ ಹೆದ್ದಾರಿ-48 ಮಾರ್ಗದಲ್ಲಿ ಚಾರಣ ಮಾಡಲು ಅವಕಾಶವಿದೆ. ಇಲ್ಲಿ ಸಿಗುವ ವೆಂಕಟಗಿರಿ, ಎಡಕುಮೇರಿ, ಅರೆಬೆಟ್ಟ ಹಾಗೂ ಮುಗಿಲ್‍ಗಿರಿಗಳಲ್ಲಿ ಚಾರಣ ಮಾಡಬಹುದು.

ಕೋಳಿಕೋಡ್-ವಯನಾಡ್ ಪಾಸ್-ಸುಲ್ತಾನ್ ಬಥೆರಿ-ಮೈಸೂರು

ಕೋಳಿಕೋಡ್-ವಯನಾಡ್ ಪಾಸ್-ಸುಲ್ತಾನ್ ಬಥೆರಿ-ಮೈಸೂರು

ಈ ರಸ್ತೆ ಮಾರ್ಗವು ರಾಷ್ಟ್ರೀಯ ಹೆದ್ದಾರಿ-766ಅನ್ನು ಒಳಗೊಂಡಿದೆ. ಭಾರತದ ಪಶ್ಚಿಮ ಘಟ್ಟದ ಸಾಲುಗಳಲ್ಲಿ ಇರುವ ಈ ರಸ್ತೆ ಮಾರ್ಗ ಅನೇಕ ಘಟ್ಟಗಳ ತಿರುವನ್ನು ಹೊಂದಿದೆ. ಈ ಮಾರ್ಗದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಇನ್ನಿತರ ವನ್ಯಧಾಮಗಳು ಸಿಗುತ್ತವೆ. ರಾತ್ರಿ 9ಗಂಟೆಯ ನಂತರ ಈ ಮಾರ್ಗದಲ್ಲಿ ಓಡಾಡುವಂತಿಲ್ಲ.
PC: wikimedia.org

ಮುಂಬೈ-ಪುಣೆ ಎಕ್ಸ್‍ಪ್ರೆಸ್

ಮುಂಬೈ-ಪುಣೆ ಎಕ್ಸ್‍ಪ್ರೆಸ್

ಈ ರಸ್ತೆ ಮಾರ್ಗವು ಭಾರತದ ಅತಿ ಹೆಚ್ಚು ವಾಹನ ದಟ್ಟಣೆಯನ್ನು ಹೊಂದಿರುವ ಮಾರ್ಗ ಎನ್ನಲಾಗುತ್ತದೆ. ಈ ಮಾರ್ಗದಲ್ಲಿರುವ ಖಂಡಾಲಾ ಘಾಟ್ ಸಿಗುತ್ತದೆ. ಈ ಮಾರ್ಗ ಭಾರತದ ಅತ್ಯಂತ ಸುಂದರ ರಸ್ತೆ ಮಾರ್ಗ ಎಂದು ಗುರುತಿಸಲಾಗಿದೆ. ಅದರಲ್ಲಿ ಮಳೆಗಾಲದಲ್ಲಿ ವಿಶೇಷ ಸೌಂದರ್ಯದಿಂದ ಕೂಡಿರುತ್ತದೆ.
PC: wikimedia.org

ಹೊನ್ನಾವರ-ಜೋಗ-ಸಾಗರ

ಹೊನ್ನಾವರ-ಜೋಗ-ಸಾಗರ

ಹೊನ್ನಾವರ ಮತ್ತು ಜೋಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇರಿಕೊಳ್ಳುತ್ತವೆ. ಹೊನ್ನಾವರದಿಂದ 25 ಕಿ.ಮೀ. ದೂರದವರೆಗೆ ಘಾಟಿ ರಸ್ತೆ ಮಾರ್ಗ ವಿದೆ. ಹೊನ್ನಾವರದಿಂದ ಮುರುಡೇಶ್ವರಕ್ಕೆ ಹೋಗುವ ದಾರಿಯಲ್ಲಿ ಸುಮಾರು 2 ಕಿ.ಮೀ. ವರೆಗೆ ಒಂದು ರಸ್ತೆ ಮಾರ್ಗದ ಸೇತುವೆಯಿದೆ. ಮಳೆಗಾಲದಲ್ಲಿ ಈ ಮಾರ್ಗದ ಸೊಬಗು ಮನೋಹರವಾಗಿರುತ್ತದೆ.
PC : Brunda Nagaraj

ತಿರುಪತಿ-ತಿರುಮಲ

ತಿರುಪತಿ-ತಿರುಮಲ

ತಿರುಪತಿ -ತಿರುಮಲ ಘಾಟಿ ರಸ್ತೆಯು ಆಂಧ್ರಪ್ರದೇಶದ ಶೇಷಾಚಲಂ ಗಿರಿಧಾಮಗಳನ ನಡುವೆ ಹಾದುಹೋಗುತ್ತದೆ. ಇದನ್ನು ಎಮ್ ವಿಶ್ವೇಶ್ವರಯ್ಯನವರು ವಿನ್ಯಾಸಗೊಳಿಸಿರುವ ರಸ್ತೆ ಮಾರ್ಗ ಎನ್ನಲಾಗುತ್ತದೆ.
PC: wikipedia.org

ಕಡಪ ಘಾಟ್

ಕಡಪ ಘಾಟ್

ನಲ್ಲಮಲ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಈ ರಸ್ತೆ ಮಾರ್ಗ ಸುಂದರವಾದ ಅಪಾಯಕಾರಿ ಘಾಟಿ ರಸ್ತೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ನಡೆಯುತ್ತಿರುತ್ತವೆ.
PC: wikipedia.org

ವಿಶಾಖಪಟ್ಟಣ-ಅರಕು ಕಣಿವೆ

ವಿಶಾಖಪಟ್ಟಣ-ಅರಕು ಕಣಿವೆ

ಆಂಧ್ರಪ್ರದೇಶದ ವೈಜಾಗ್‍ನಲ್ಲಿರುವ ಪ್ರಸಿದ್ಧ ಗಿರಿಧಾಮ ಅರಕು ಕಣಿವೆ. ಇಲ್ಲಿ ಹಾದು ಹೋಗುವ ರಸ್ತೆ ಮಾರ್ಗವು ವೈಜಾಗ್‍ನಿಂದ 136 ಕಿ.ಮೀ. ನಂತರ ಘಾಟಿ ರಸ್ತೆ ಆರಂಭವಾಗುತ್ತದೆ. ಅರಕು ಕಣಿವೆಯಲ್ಲಿರುವ ಬೊರ್ರ ಗುಹೆಯನ್ನು ನೋಡಲೇ ಬೇಕು. ಇಲ್ಲಿ ಬುಡಕಟ್ಟು ಜನಾಂಗಕ್ಕೆ ಸಂಬಂಧಿüಸಿದ ವಸ್ತುಸಂಗ್ರಹಾಲಯವನ್ನು ನೋಡಬಹುದು. ರಸ್ತೆಯ ಉದ್ದಕ್ಕೂ ಸುಂದರ ಕಣಿವೆಗಳ ದೃಶ್ಯವನ್ನು ಸೆರೆ ಹಿಡಿಯಬಹುದು.
PC: wikipedia.org

ಗ್ಯಾಂಗ್ಟಾಕ್- ನಾಥುಲ ಪಾಸ್ ಚಾಂಗು ಕೆರೆ

ಗ್ಯಾಂಗ್ಟಾಕ್- ನಾಥುಲ ಪಾಸ್ ಚಾಂಗು ಕೆರೆ

ಈ ಮಾರ್ಗದ ರಸ್ತೆಗಳು ಅಷ್ಟು ಉತ್ತಮ ಸ್ಥಿತಿಯಲ್ಲಿಲ್ಲ. ಇಲ್ಲಿ ಬೀಸುವ ಹಿಮ ಗಾಳಿ ಹಾಗೂ ರಸ್ತೆಯ ಗಡಿ ಭಾಗದಲ್ಲಿ ಉಂಟಾಗುವ ಭೂ ಕುಸಿತದಿಂದ ರಸ್ತೆಗಳ ಸ್ಥಿತಿ ಹದಗೆಟ್ಟುತ್ತಲೇ ಇರುತ್ತದೆ. ಇಲ್ಲಿ ಹಿಮದ ಗಾಳಿ ಹಾಗೂ ಮಳೆಯಿಂದ ಆಮ್ಲಜನಕದ ಕೊರತೆ ಇರುತ್ತದೆ. ಈ ಮಾರ್ಗದಲ್ಲಿ ಸಂಚರಿಸುವಾಗ ಸ್ವಲ್ಪ ಜಾಗರೂಕತೆಯಲ್ಲಿ ಇರಬೇಕು. ಗ್ಯಾಂಗ್ಟಾಕ್‍ನಿಂದ 40 ಕಿ.ಮೀ. ದೂರದಲ್ಲಿರುವ ಚಾಂಗು ಕೆರೆ ರಮ್ಯವಾದ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ.
PC: wikimedia.org

ಚೆನ್ನೈ-ಮುನ್ನಾರ್

ಚೆನ್ನೈ-ಮುನ್ನಾರ್

ಚೆನ್ನೈನಿಂದ ಮುನ್ನಾರ್‍ಗೆ ಹೋಗುವ ರಸ್ತೆ ಮಾರ್ಗದಲ್ಲಿ ಬೋದಿ ಮೆಟ್ಟುವಿನಿಂದ ಘಾಟ್ ಆರಂಭವಾಗುತ್ತದೆ. ನಂತರ ಅದರ ಮುಕ್ತಾಯ ಮುನ್ನಾರ್‍ನಲ್ಲೆ. ಬಹಳ ಕಿರಿದಾದ ಈ ರಸ್ತೆ ಮಾರ್ಗ ಅಪಾಯಕಾರಿಯೂ ಹೌದು. ಈ ಮಾರ್ಗದಲ್ಲಿ ಮುಧಿರಪುಳ, ನಳ್ಳತಣ್ಣಿ ಮತ್ತು ಕುಂಡಲಿ ಎನ್ನುವ ಪ್ರವಾಸ ತಾಣಗಳು ಸಿಗುತ್ತವೆ.
PC: wikimedia.org

ಬೆಂಗಳೂರು-ಊಟಿ

ಬೆಂಗಳೂರು-ಊಟಿ

ಬೆಂಗಳೂರಿನಿಂದ ಊಟಿಗೆ ಹೋಗಲು ಎರಡು ಘಾಟ್ ರಸ್ತೆ ಮಾರ್ಗಗಳಿವೆ. ಈ ಎರಡು ರಸ್ತೆ ಮಾರ್ಗವೂ ಸುಂದರ ಪರಿಸರಗಳಿಂದ ಕೂಡಿಕೊಂಡಿವೆ. ಬೆಂಗಳೂರು-ಮೈಸೂರು-ನಂಜನಗೂಡು-ಗುಂಡ್ಲುಪೇಟೆ-ಬಂಡೀಪುರ-ಮಧುಮಲೈ-ಮಸಿನಗುಡಿ-ಕಲ್ಹಟ್ಟಿ-ಊಟಿ. ಈ ಮಾರ್ಗದಲ್ಲಿ ಮಸಿನಗುಡಿಯಿಂದ ಊಟಿಯ ವರೆಗೂ ಬಹಳ ಇಳಿಜಾರಿನ ರಸ್ತೆಮಾರ್ಗ. ಇನ್ನೊಂದು ಮಾರ್ಗವೆಂದರೆ ಬಂಡೀಪುರ-ಗುಡಲೂರ್-ನಡುವಟ್ಟಂ-ಪಿಕಾರ-ಊಟಿ. ಈ ಮಾರ್ಗ ಅಷ್ಟಾಗಿ ಘಾಟಿ ಪ್ರದೇಶ ಬರದು. ಆದರೆ 40 ಕಿ.ಮೀ. ನಷ್ಟು ಹೆಚ್ಚು ಪ್ರಯಾಣ ಬೆಳೆಸಬೇಕು.
PC: wikimedia.org

ಬೆಂಗಳೂರು-ಕೊಡೈಕೆನಾಲ್

ಬೆಂಗಳೂರು-ಕೊಡೈಕೆನಾಲ್

ತಮಿಳುನಾಡಿನಲ್ಲಿರುವ ರಮಣೀಯ ಗಿರಿಧಾಮದ ತಾಣ ಕೊಡೈಕೆನಾಲ್. ಇದನ್ನು ಬೆಟ್ಟಗಳ ರಾಣಿ ಎಂದು ಕರೆಯುತ್ತಾರೆ. ಬೆಂಗಳೂರಿನಿಂದ ಕೊಡೈಕೆನಾಲ್ ಮಾರ್ಗದಲ್ಲಿ ದಿಂಡಿಗಲ್ ನಂತರ ಘಾಟಿ ರಸ್ತೆ ಆರಂಭವಾಗುತ್ತದೆ. ಈ ಮಾರ್ಗದಲ್ಲಿ ಮನೋಹರವಾದ ಜಲಪಾತಗಳು, ವೀಕ್ಷಣಾ ತಾಣ ಹಗೂ ಚಾರಣ ಧಾಮಗಳು ಸಿಗುತ್ತವೆ.
PC: wikimedia.org

ನೇರಲ್-ಮಥೆರಾನ್

ನೇರಲ್-ಮಥೆರಾನ್

ಈ ಮಾರ್ಗವು ಘಾಟ್ ರಸ್ತೆ ಮಾರ್ಗವಾದರೂ ದಟ್ಟವಾದ ಹಚ್ಚ ಹಸುರಿನ ಅರಣ್ಯ ಪ್ರದೇಶದಿಂದ ಆವೃತಗೊಂಡಿದೆ. ಸಹ್ಯಾದ್ರಿ ಗಿರಿಯಲ್ಲಿ ಬರುವ ಈ ಮಾರ್ಗ ಅಮೋಘ ಅನುಭವ ನೀಡುವುದು.ಈ ಮಾರ್ಗದ ರಸ್ತೆ ಬಹಳ ಕಿರಿದಾದ ಇಳಿಜಾರು ಪ್ರದೇಶವನ್ನು ಒಳಗೊಂಡಿದೆ. ಮಥೆರಾನ್‍ಗೆ ತಲುಪಬೇಕಾದರೆ ವಾಹನವನ್ನು ನಿಲ್ಲಿಸಿದ ನಂತರ ಸುಮಾರು 40 ನಿಮಿಷಗಳ ಕಾಲ ನಡೆದು ಸಾಗಬೇಕು.
PC : udhaykumarPR

ಚಿಕ್ಕಮಗಳೂರು-ಮಂಗಳೂರು

ಚಿಕ್ಕಮಗಳೂರು-ಮಂಗಳೂರು

ಈ ಮಾರ್ಗದ ರಸ್ತೆಗೆ ಚಾರ್ಮಾಡಿ ಘಾಟ್ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿರುವ ಘಾಟಿ ರಸ್ತೆ ಮಾರ್ಗಕ್ಕೆ ಹೋಲಿಸಿದರೆ ಇದು ಅತ್ಯಂತ ಇಳಿಜಾರು ಹಾಗೂ ಘಟ್ಟವನ್ನು ಹೊಂದಿರುವ ರಸ್ತೆಮಾರ್ಗ. ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಹೋಗುವುದು ಕೊಂಚ ಅಪಾಯಕಾರಿ ಎಂದು ಹೇಳಬಹುದು. ಕಿರಿದಾದ ರಸ್ತೆಯನ್ನು ಹೊಂದಿರುವ ಈ ಮಾರ್ಗದಲ್ಲಿ ಜೇನುಕಲ್ಲುಗುಡ್ಡ, ಕೊಡೆಕಲ್ಲುಗುಡ್ಡ, ಬಾಳೆಕಲ್ಲು ಗುಡ್ಡ ಹಾಗೂ ಸುಂದರ ಜಲಧಾರೆಗಳು ಸಿಗುತ್ತವೆ.
PC: wikimedia.org

Read more about: karnataka