ಸದ್ಯ ರಾಜ್ಯದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದೆ. ಕೆಲವು ಪ್ರದೇಶಗಳಿಗೆ ಹವಮಾನ ಇಲಾಖೆ ರೆಡ್, ಯೆಲ್ಲೊ ಅಲರ್ಟ್ ಘೋಷಿಸಿದೆ. ಹಾಗಾಗಿ ಮಳೆಗಾಲದಲ್ಲಿ ಪ್ರವಾಸ ಹಮ್ಮಿಕೊಳ್ಳುವ ಮುನ್ನ ಇವನ್ನೆಲ್ಲಾ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಅಂದಹಾಗೆ ಮೂಲಗಳ ಪ್ರಕಾರ ಬೆಂಗಳೂರು ಸುತ್ತಮುತ್ತ ತಾಪಮಾನ ಕಡಿಮೆಯಾಗಿದೆ. ಹಾಗಾಗಿ ರಾಜಧಾನಿ ಸುತ್ತಮುತ್ತ ಟ್ರಿಪ್ ಕೈಗೊಳ್ಳಲು ವೀಕೆಂಡ್ ಪ್ಲಾನ್ ಮಾಡುತ್ತಿದ್ದರೆ ಈ ಲೇಖನವನ್ನೊಮ್ಮೆ ಓದಿ...
ಬೆಂಗಳೂರಿನ ಸುತ್ತಮುತ್ತ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಈ ಸ್ಥಳಗಳಿಗೆ ತಲುಪಲು ಅಥವಾ ಭೇಟಿ ನೀಡಲು ನಿಮಗೆ ಹೆಚ್ಚು ಕಷ್ಟವಾಗುವುದಿಲ್ಲ. ಬೆಂಗಳೂರಿನಿಂದ ಬಹಳ ಸುಲಭವಾಗಿ ತಲುಪಬಹುದು. ಅಷ್ಟೇ ಏಕೆ, ಇಲ್ಲಿ ನೀವು ಒಂದು ಅಥವಾ ಎರಡು ದಿನಗಳ ಕಾಲ ಮೋಜು ಸಹ ಮಾಡಬಹುದು. ಗಿರಿಧಾಮಗಳು, ಕಡಲತೀರಗಳು, ಜಲಪಾತಗಳು ಮತ್ತು ನೈಸರ್ಗಿಕ ಟ್ರೆಕ್ಕಿಂಗ್ ಮಾರ್ಗಗಳು...ಹೀಗೆ ಬೆಂಗಳೂರಿನ ಸುತ್ತಲೂ ಭೇಟಿ ನೀಡಲು ಹಲವಾರು ಅದ್ಭುತ ಪ್ರವಾಸಿ ತಾಣಗಳಿದ್ದು, ನಿಮ್ಮ ಆಯ್ಕೆಗೆ ಅನುಗುಣವಾಗಿ ಆಯ್ಕೆಮಾಡಿ.
ಸಾವನದುರ್ಗ ಬೆಟ್ಟ
ಬೆಂಗಳೂರಿಗೆ ಸಮೀಪದಲ್ಲಿರುವ ಸಾವನದುರ್ಗದ ಬೆಟ್ಟವು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ಅತ್ಯುತ್ತಮ ಸ್ಥಳವಾಗಿದೆ. ಶಾಖದಿಂದ ಪಾರಾಗಲು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಸಾವನದುರ್ಗ ಬೆಟ್ಟ ಉತ್ತಮ ಸ್ಥಳ. ನಗರದ ಗದ್ದಲದಿಂದ ದೂರವಿರುವ ಬೆಟ್ಟದ ತಂಪಾದ ವಾತಾವರಣದಲ್ಲಿ ನೀವು ಖಂಡಿತವಾಗಿಯೂ ಸಂತೋಷದಿಂದ ಕಾಲ ಕಳೆಯುತ್ತೀರಿ. ವಿಶೇಷವಾಗಿ ಬೆಟ್ಟದ ತುದಿಯಿಂದ ಸುತ್ತಮುತ್ತಲಿನ ಜಾಗ ಅದ್ಭುತವಾಗಿ ಗೋಚರಿಸುತ್ತದೆ. ಹಾಗೆಯೇ ಬೆಟ್ಟದ ಸಣ್ಣ ಇಳಿಜಾರು ಚಾರಣಕ್ಕೆ ಉತ್ತಮ ಆಯ್ಕೆಯಾಗಿದೆ.
ಮಳೆಗಾಲದಲ್ಲಿ ಸಾವನದುರ್ಗ ಬೆಟ್ಟ ನೋಡಲು ಚೆನ್ನ. ಏಕೆಂದರೆ ಈ ಸಮಯದಲ್ಲಿ, ಸಮೀಪದಲ್ಲಿ ಹರಿಯುವ ನದಿ ಮತ್ತು ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವು ಕಣ್ಮನ ಸೆಳೆಯುತ್ತದೆ. ಅಲ್ಲದೇ ಇದು ನೀರಿನ ಚಟುವಟಿಕೆಗಳಿಗೆ ಸೂಕ್ತ ತಾಣವಾಗಿದ್ದು, ಇಲ್ಲಿಗೆ ತೆರಳಿದಾಗ ಟ್ರೆಕ್ಕಿಂಗ್, ಜಲಕ್ರೀಡೆ, ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.

ತಲುಪುವುದು ಹೇಗೆ?
ಬೆಂಗಳೂರಿಗರು ಸಾವನದುರ್ಗಕ್ಕೆ ಮೈಸೂರು ರಸ್ತೆಯ ಮೂಲಕ ತಲುಪಬಹುದು.
ಶಿವಸಮುದ್ರ ಜಲಪಾತ
ಜಲಪಾತಗಳ ನೈಜ ಸೌಂದರ್ಯ ನೋಡಬೇಕೆನ್ನುವವರು ಮಳೆಗಾಲದಲ್ಲಿ ಮಾತ್ರ ನೋಡಬಹುದು. ಬೆಂಗಳೂರಿನ ಸಮೀಪವಿರುವ ಶಿವಸಮುದ್ರ ಜಲಪಾತ ಅತ್ಯುತ್ತಮ ಜಲಪಾತಗಳಲ್ಲಿ ಒಂದು. ಕಾವೇರಿ ನದಿಯ ಮೇಲಿರುವ ಈ ಜಲಪಾತದ ಸೌಂದರ್ಯವು ಮಳೆಗಾಲದಲ್ಲಿ ಹೆಚ್ಚಾಗುತ್ತದೆ. 200 ಅಡಿ ಎತ್ತರದಿಂದ ಬೀಳುವ ಜಲಪಾತದ ನೀರು ಕಿವಿಗಡಚಿಕ್ಕುವ ಶಬ್ದ ಮಾಡುತ್ತದೆ. ಆದರೆ, ಮಳೆಗಾಲದಲ್ಲಿ ನೀರಿನ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿಲ್ಲ. ಬಹುತೇಕರು ಮಳೆಗಾಲದಲ್ಲಿ ಶಿವನಸಮುದ್ರ ಜಲಪಾತ ನೋಡಲು ಇಷ್ಟಪಡುವುದಕ್ಕೆ ಕಾರಣ, ಇದರ ನಿಜವಾದ ಸೌಂದರ್ಯವು ಮಳೆಗಾಲದಲ್ಲಿ ಗೋಚರಿಸುತ್ತದೆ.
ತಲುಪುವುದು ಹೇಗೆ?
ಶಿವಸಮುದ್ರ ಜಲಪಾತವನ್ನು ಹೊಸೂರು ರಸ್ತೆಯಿಂದಾದರೆ 2.5 ಗಂಟೆಗಳಲ್ಲಿ ತಲುಪಬಹುದು. ಇದು ಬೆಂಗಳೂರಿನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ.

ಹಾರ್ಸ್ಲಿ ಹಿಲ್ಸ್
ಚಿತ್ತೂರಿನ ಮೋಡಗಳ ನಡುವೆ ಇರುವ ಹಾರ್ಸ್ಲಿ ಹಿಲ್ಸ್ ನೋಡುವುದಕ್ಕೆ ಒಂದು ಕಾಲ್ಪನಿಕ ಕಥೆಯಂತೆ ತೋರುತ್ತದೆ. 4000 ಅಡಿ ಎತ್ತರದಲ್ಲಿರುವ ಈ ಗ್ರಾಮವು ಮಳೆಗಾಲದಲ್ಲಿ ನೋಡಲು ಬೆಸ್ಟ್. ಬೆಂಗಳೂರಿನಿಂದ ವೀಕೆಂಡ್ ಟ್ರಿಪ್ ಪ್ಲಾನ್ ಮಾಡುತ್ತಿರುವವರಿಗೆ ಪರಿಪೂರ್ಣ ತಾಣವಾಗಿದೆ. ಇದು ಸಾಮಾನ್ಯವಾಗಿ ಆಂಧ್ರದ ಊಟಿ ಎಂದು ಕರೆಯಲ್ಪಡುತ್ತದೆ. ಇದರ ತಾಪಮಾನವು ಮಳೆಗಾಲದಲ್ಲಿ ಇಲ್ಲಿ 25-30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಮಳೆಗಾಲದಲ್ಲಿ ಪ್ರವಾಸಿಗರು ಹಾರ್ಸ್ಲಿ ಹಿಲ್ಸ್ ನೋಡುವುದಕ್ಕೆ ಕಾರಣ ಇಲ್ಲಿ ಭಾರೀ ಮಳೆಯಿಂದಾಗಿ, ಈ ಪ್ರದೇಶದಲ್ಲಿ ಸಣ್ಣ ಸಣ್ಣ ಜಲಪಾತಗಳು ಹೊರಹೊಮ್ಮುತ್ತವೆ. ನೀವು ವರ್ಷವಿಡೀ ಯಾವ ಕಾಲದಲ್ಲಿಯಾದರೂ ಇಲ್ಲಿಗೆ ಹೋಗಬಹುದು. ಆದರೆ ಮಳೆಗಾಲವು ಅತ್ಯುತ್ತಮ ಸಮಯವಾಗಿದೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ 144 ಕಿಮೀ ದೂರವಿದ್ದು, ಚಿತ್ತೂರಿಗೆ ಸಮೀಪದಲ್ಲಿದೆ.

ಕೆಟ್ಟಿ ಕಣಿವೆ
ಮಳೆಗಾಲದ ಸಮಯದಲ್ಲಿ, ಕೆಟ್ಟಿ ಕಣಿವೆ ಸಂಪೂರ್ಣವಾಗಿ ಹಸಿರುಮಯವಾಗಿರುತ್ತದೆ. ಎಲ್ಲಿ ನೋಡಿದರೂ ಹಸಿರು. ಕೆಟ್ಟಿ ಕಣಿವೆ ಊಟಿಯಲ್ಲಿದೆ. ಇದು ಕೊಯಮತ್ತೂರಿನಿಂದ ಮೈಸೂರು ಪ್ರಸ್ಥಭೂಮಿಯವರೆಗೆ ವಿಸ್ತರಿಸಿರುವ ವಿಶ್ವದ ಅತಿದೊಡ್ಡ ಕಣಿವೆಯಾಗಿದೆ. ಇಲ್ಲಿನ ಜಲಪಾತಗಳ ನೋಟ ಮಳೆಗಾಲದಲ್ಲಿ ನೋಡಲು ಅದ್ಭುತವಾಗಿರುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕೆಟ್ಟಿ ಕಣಿವೆಯನ್ನು ನೋಡಲು ಇಷ್ಟಪಡುವುದಕ್ಕೆ ಕಾರಣ ಇತರ ತಿಂಗಳುಗಳಲ್ಲಿ ಕಾಣದ ಸಂಪೂರ್ಣ ಕಣಿವೆಯ ದೃಶ್ಯ ಆಗ ಬದಲಾಗುತ್ತದೆ.
ತಲುಪುವುದು ಹೇಗೆ?
ಇದು ಬೆಂಗಳೂರಿನಿಂದ 280 ಕಿಮೀ ದೂರದಲ್ಲಿದೆ. ನೀಲಗಿರಿ ಎಕ್ಸ್‌ಪ್ರೆಸ್‌ನಿಂದಲೂ ಸಂಪರ್ಕ ಹೊಂದಿದೆ. ಕೂನೂರು ಮತ್ತು ಊಟಿ ನಿಲ್ದಾಣಗಳ ನಡುವೆಯೂ ಇದೆ. ಅಲ್ಲಿಂದ ಟ್ಯಾಕ್ಸಿಗಳು ಮತ್ತು ಆಟೋಗಳಂತಹ ಸ್ಥಳೀಯ ಸಾರಿಗೆ ಲಭ್ಯವಿದೆ.


Click it and Unblock the Notifications


















