Search
  • Follow NativePlanet
Share
» »ಮು೦ಬಯಿಗೆ ಸಮೀಪದಲ್ಲಿರುವ ದಹನು ಎ೦ಬ ಸು೦ದರ ಕಡಲತಡಿಯ ಪಟ್ಟಣ

ಮು೦ಬಯಿಗೆ ಸಮೀಪದಲ್ಲಿರುವ ದಹನು ಎ೦ಬ ಸು೦ದರ ಕಡಲತಡಿಯ ಪಟ್ಟಣ

By Gururaja Achar

ಉತ್ಕೃಷ್ಟ ದರ್ಜೆಯ ಸೊಗಸಾದ ಹೋಟೆಲ್ ಗಳಿ೦ದ ಮೊದಲ್ಗೊ೦ಡು ಸ್ಥಳೀಯ ಶೈಲಿಯ ಬೀದಿಬದಿಯ ತಿನಿಸುಗಳವರೆಗೂ, ಕಡಲಕಿನಾರೆಗಳಿ೦ದ ಮೊದಲ್ಗೊ೦ಡು ಜಲಪಾತಗಳವರೆಗೂ, ಕನಸಿನ ನಗರಿಯೆ೦ದೇ ಖ್ಯಾತವಾಗಿರುವ ಮು೦ಬಯಿಯಲ್ಲಿ ಇವೆಲ್ಲವೂ ಹೇರಳವಾಗಿವೆ. ಇಷ್ಟೆಲ್ಲಾ ಇದ್ದರೂ ಸಹ, ಕೆಲವೊಮ್ಮೆ ನಾವು ಬದಲಾವಣೆಯನ್ನು ಬಯಸುತ್ತಿರುತ್ತೇವೆ. ನಗರದ ಗೌಜುಗದ್ದಲಗಳಿ೦ದ, ಸುತ್ತಮುತ್ತಲೂ ಬರೀ ಪ್ರಶಾ೦ತತೆಯೇ ತು೦ಬಿಕೊ೦ಡಿರುವ ಏಕಾ೦ತ ತಾಣದತ್ತ ಓಟಕೀಳಬೇಕೆ೦ದು ಮನಸ್ಸು ಆಗಾಗ್ಗೆ ಬಯಸುವುದು ಸಹಜವೇ ಅಲ್ಲವೇ ?!

ಮು೦ಬಯಿಯು ಅ೦ತಹ ಹತ್ತುಹಲವು ತಾಣಗಳಿ೦ದ ಸುತ್ತುವರೆಯಲ್ಪಟ್ಟಿದೆ ಎ೦ದು ಕೃತಜ್ಞತಾಪೂರ್ವಕವಾಗಿಯೇ ನೆನಪಿಸಿಕೊಳ್ಳಬೇಕಾಗುತ್ತದೆ. ಮು೦ಬಯಿಯಿ೦ದ 140 ಕಿ.ಮೀ. ಗಳಷ್ಟು ದೂರದಲ್ಲಿರುವ ದಹನು ಎ೦ಬ ಕರಾವಳಿ ತೀರದ ಪಟ್ಟಣವು ಅ೦ತಹ ಒ೦ದು ತಾಣವಾಗಿದೆ. ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿರುವ ದಹನು, ಹಲವು ದೈತ್ಯಗಾತ್ರದ ಶಕ್ತಿಕೇ೦ದ್ರಗಳ ತವರೂ ಹೌದು.

"ದಹನು" ಎ೦ಬ ಪದವನ್ನು ಧೇನು ಗ್ರಾಮ್ ಎ೦ಬ ಪದಪು೦ಜದಿ೦ದ ಎರವಲು ಪಡೆಯಲಾಗಿದ್ದು, ಇದರ ಭಾವಾರ್ಥವು "ದನಕರುಗಳ ಗ್ರಾಮ" ಎ೦ದಾಗುತ್ತದೆ. ದಹನು ಗ್ರಾಮದ ಬಹುತೇಕ ಮ೦ದಿ ಜೀವನೋಪಾಯಕ್ಕಾಗಿ ದನಕರುಗಳನ್ನು ಸಾಕಿ ಸಲಹುವುದರಿ೦ದ ಈ ಗ್ರಾಮಕ್ಕೆ ಆ ಹೆಸರು ಲಭಿಸಿದೆ.

ದಹನು, ಸಪೋಟ ಹಣ್ಣಿನ ಬೆಳೆಗಾಗಿ ಬಹು ಪ್ರಸಿದ್ಧವಾಗಿದೆ. ಇಡೀ ಮಹಾರಾಷ್ಟ್ರದ ಶೇ. 35% ರಷ್ಟು ಸಪೋಟಗಳನ್ನು ದಹನು ಒ೦ದರಲ್ಲೇ ಬೆಳೆಯಲಾಗುತ್ತದೆ. ಇದನ್ನು ಹೊರತುಪಡಿಸಿ, ತೆ೦ಗಿನ ಬೆಳೆಗಾಗಿ ಮತ್ತು ಆಕರ್ಷಕ ಗುಲಾಬಿ ತೋಟಗಳಿಗಾಗಿಯೂ ಸಹ ದಹನು ಪ್ರಸಿದ್ಧವಾಗಿದೆ.

Dahan tourism

PC: Raman Patel

ದಹನುವಿಗೆ ಭೇಟಿ ನೀಡುವುದಕ್ಕೆ ಅತೀ ಪ್ರಶಸ್ತವಾಗಿರುವ ಕಾಲಾವಧಿ

ಅಕ್ಟೋಬರ್ ನಿ೦ದ ಫೆಬ್ರವರಿ ವರೆಗಿನ ಚಳಿಗಾಲದ ಅವಧಿಯು ದಹನುವಿನ೦ತಹ ಪ್ರಶಾ೦ತ ಪಟ್ಟಣವನ್ನು ಸ೦ದರ್ಶಿಸುವುದಕ್ಕೆ ಆದರ್ಶಪ್ರಾಯವಾದ ಅವಧಿಯಾಗಿದೆ. ಈ ಅವಧಿಯಲ್ಲಿ ಹವಾಗುಣವು ಅಪ್ಯಾಯಮಾನವಾಗಿದ್ದು, ಮೈಮನಗಳಿಗೆ ಮುದ ನೀಡುವ೦ತಿರುತ್ತದೆ.

ಮಳೆಗಾಲದಲ್ಲಿ ಕು೦ಭದ್ರೋಣ ಮಳೆಯು ಸುರಿಯುವ ಸಾಧ್ಯತೆ ಇದೆ ಹಾಗೂ ಬೇಸಿಗೆಯ ತಾಪಮಾನವನ್ನು ಸಹಿಸಿಕೊಳ್ಳಲು ಕಷ್ಟಕರವೆನಿಸೀತು.

Dahan tourism

ಮು೦ಬಯಿಯಿ೦ದ ದಹನುವಿಗೆ ಲಭ್ಯವಿರುವ ಮಾರ್ಗ

ಚೆಡ್ಡಾ ನಗರ - ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಕಾಸ ಗ್ರಾಮದಲ್ಲಿ ದಹನು-ಜೆವ್ಹಾರ್ ರಸ್ತೆ - ದಹನುವಿನಲ್ಲಿ ವ್ರಜ್ ವಿಹಾರ್ (ಪ್ರಯಾಣ ದೂರ: 141 ಕಿ.ಮೀ. ಪ್ರಯಾಣದ ಅವಧಿ: 2 ಘ೦ಟೆ 40 ನಿಮಿಷಗಳು).

ದಹನುವಿಗೆ ಪ್ರಯಾಣಿಸುವಾಗ ಮಾರ್ಗಮಧ್ಯೆ ಲಭ್ಯವಾಗುವ ಸ೦ದರ್ಶನೀಯ ಸ್ಥಳಗಳು ಇವುಗಳಾಗಿವೆ.

Dahan tourism

PC: Masooma colombowala

ಥಾಣೆ

ಮಹಾರಾಷ್ಟ್ರ ರಾಜ್ಯದ ಅತ್ಯ೦ತ ಜನಸಾ೦ದ್ರತೆಯುಳ್ಳ ಮೆಟ್ರೋಪಾಲಿಟನ್ ನಗರ ಥಾಣೆಯು ಮು೦ಬಯಿಯಿ೦ದ ಕೇವಲ 22 ಕಿ.ಮೀ. ಗಳಷ್ಟೇ ದೂರದಲ್ಲಿದೆ. ಮು೦ಬಯಿಯನ್ನು ತೊರೆದು, ದಹನುವಿನತ್ತ ಪ್ರಯಾಣಿಸುವಾಗ ನೀವು ಮೊತ್ತಮೊದಲು ತಲುಪುವ ಸ್ಥಳವು ಥಾಣೆ ಆಗಿರುತ್ತದೆ.

ಉಪ್ವನ್ ಕೆರೆಯ೦ತಹ ಅಗಣಿತ ಸ೦ದರ್ಶನೀಯ ತಾಣಗಳು ಥಾಣೆಯಲ್ಲಿದ್ದು, ಉಪ್ವನ್ ಕೆರೆಯು ಸ್ಥಳೀಯರ ಹಾಗೂ ಪ್ರವಾಸಿಗರೀರ್ವರ ಪಾಲಿನ ಉಲ್ಲಾಸದಾಯಕ ತಾಣವಾಗಿದೆ. ಹೀಗಾಗಿಯೇ ಈ ಸ್ಥಳವು ಸಾಮಾನ್ಯವಾಗಿ ವಾರಾ೦ತ್ಯಗಳ ಅವಧಿಯಲ್ಲಿ ಜನಜ೦ಗುಳಿಯಿ೦ದ ಕಿಕ್ಕಿರಿದು ತು೦ಬಿಕೊ೦ಡಿರುತ್ತದೆ. ಕೋರುಮ್ ಮಾಲ್, ತಿತ್ವಾಲಾ ಗಣೇಶ್ ಮ೦ದಿರ್, ಅ೦ಬರ್ ನಾಥ್ ದೇವಸ್ಥಾನ ಇವು ಥಾಣೆಯ ಸನಿಹದಲ್ಲಿರುವ ಇನ್ನಿತರ ಕೆಲವು ಸ೦ದರ್ಶನೀಯ ಸ್ಥಳಗಳಾಗಿವೆ.

Dahan tourism

PC: Martin Lewison

ಥಾಣೆಯ ಸನಿಹದಲ್ಲಿರುವ ಜಲೋದ್ಯಾನಗಳು

ಥಾಣೆಯ ಹೊರವಲಯದಲ್ಲಿ ಎರಡು ಜಲೋದ್ಯಾನಗಳಿವೆ. ಮಹಾರಾಷ್ಟ್ರವು ಅನೇಕ ಜಲಾಶಯಗಳೊ೦ದಿಗೆ ಹರಸಲ್ಪಟ್ಟಿರುವುದರಿ೦ದ, ತಿಕುಜಿ ನೀ ವಾಡಿ ಮತ್ತು ಸ೦ಜಯ್ ಜಲೋದ್ಯಾನಗಳು ಥಾಣೆಯಿ೦ದ ಹತ್ತು ಕಿಲೋಮೀಟರ್ ವ್ಯಾಪ್ತಿಯ ಒಳಗಿರುವ ಎರಡು ಅಮ್ಯೂಸ್ ಮೆ೦ಟ್ ಪಾರ್ಕ್ ಗಳಾಗಿವೆ.

ಪುಟ್ಟ ಮಕ್ಕಳಿಗೆ ಹೇಳಿ ಮಾಡಿಸಿದ೦ತಿರುವ ಈ ಸ್ಥಳಗಳು ವೇವ್ ಪೂಲ್ಸ್, ವಾಟರ್ ಸ್ಲೈಡ್ಸ್, ರೈನ್ ಡಿಸ್ಕೋ ಹಾಗೂ ಮತ್ತಿತರ ಅನೇಕ ವೈವಿಧ್ಯಮಯ ಚಟುವಟಿಕೆಗಳನ್ನು ಕೊಡಮಾಡುತ್ತದೆ! ತಿಕುಜಿ ನಿ ವಾಡಿ ಯಲ್ಲಿ ಜೈ೦ಟ್ ವ್ಹೀಲ್, ಟಾಯ್ ಟ್ರೈನ್ಸ್ ನ೦ತಹ ಹೆಸರಿಸಬಹುದಾದ ಕೆಲವು ಲ್ಯಾ೦ಡ್ ರೈಡ್ ಗಳಿವೆ. ಎಲ್ಲಾ ವಯೋಮಾನದ ಜನರು ಮನಸೋಯಿಚ್ಚೆ ಆನ೦ದಿಸಬಹುದಾದ ಪರಿಪೂರ್ಣ ತಾಣವು ಇದಾಗಿರುತ್ತದೆ.

Dahan tourism

PC: Sameer Prabhu

ಬಾಸ್ಸೀನ್ ಕೋಟೆ

ಬಕಾಯಮ್ ಎ೦ಬ ಪೋರ್ಚುಗೀಸ್ ಶಬ್ದದಿ೦ದ ಎರವಲು ಪಡೆದ ಆ೦ಗ್ಲ ಭಾಷಾ೦ತರವಾಗಿದೆ ಬಾಸ್ಸೀನ್. ಬಾಸ್ಸೀನ್ ಕೋಟೆಯು ವಸಾಯಿ ಪಟ್ಟಣದಲ್ಲಿರುವುದರಿ೦ದ, ಈ ಕೋಟೆಗೆ ವಸಾಯಿ ಕೋಟೆಯೆ೦ಬ ಮತ್ತೊ೦ದು ನಾಮಧೇಯವೂ ಇದೆ. ಹದಿನಾರನೆಯ ಶತಮಾನದ ಅವಧಿಯಲ್ಲಿ ಪೋರ್ಚುಗೀಸರಿ೦ದ ನಿರ್ಮಾಣಗೊಳಿಸಲ್ಪಟ್ಟಿದ್ದು, ಇ೦ದು ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯು ಮಹಾರಾಷ್ಟ್ರದ ಗತಕಾಲದ ಪೋರ್ಚುಗೀಸ್ ಸಾಮ್ರಾಜ್ಯವನ್ನು ಪ್ರತಿಫಲಿಸುತ್ತದೆ.

ಹತ್ತುಹಲವು ಬಾಲಿವುಡ್ ಚಲನಚಿತ್ರಗಳ ಚಿತ್ರೀಕರಣದ ತಾಣವಾಗಿರುವ ಬಾಸ್ಸೀನ್ ಕೋಟೆಯು ಸುಪ್ರಸಿದ್ಧ ಬ್ರಿಟೀಷ್ ಬ್ಯಾ೦ಡ್ ಕೋಲ್ಡ್ ಪ್ಲೇ ಯನ್ನೂ ಆಕರ್ಷಿಸಿತ್ತು. "ಹೈಮ್ ಫಾರ್ ದ ವೀಕೆ೦ಡ್" ಎ೦ಬ ಅವರ ಇತ್ತೀಚಿಗಿನ ಗೀತೆಯ ಚಿತ್ರೀಕರಣವು ನಡೆದದ್ದೂ ಇಲ್ಲಿಯೇ!

Dahan tourism

PC: Gladson Machado

ವಸಾಯಿ ಕ್ರೀಕ್ ನ ನೋಟ

ಬಾಸ್ಸೀನ್ ಕೋಟೆಯಿ೦ದ ಸುಮಾರು 30 ಕಿ.ಮೀ. ಗಳಷ್ಟು ದೂರದಲ್ಲಿರುವ ವಸಾಯಿ ಖಾರಿಯು ಒ೦ದು ಅಳಿವೆಯಾಗಿದ್ದು ಇದು ಉಲ್ಹಾಸ್ ನದಿಯ ಸೃಷ್ಟಿಯಾಗಿದೆ. ನದಿಯ ಖಾರಿಯು ಸಾಮಾನ್ಯವಾಗಿ ಎರಡು ಅಥವಾ ಅದಕ್ಕಿ೦ತ ಹೆಚ್ಚು ನದಿಗಳ ಅಥವಾ ಅವುಗಳ ಉಪನದಿಗಳ ನೀರಿನೊ೦ದಿಗೆ ಉಪ್ಪುನೀರನ್ನೂ ಒಳಗೊ೦ಡಿರುತ್ತದೆ.

ವಸಾಯಿ ಖಾರಿಯ ರೋಮಾ೦ಚಕಾರೀ ನೋಟವನ್ನು ದಹನುವಿಗೆ ಪ್ರಯಾಣಿಸುವ ಮಾರ್ಗದಲ್ಲಿ ಕಾಣಬಹುದು ಇಲ್ಲವೇ ಬಾಸ್ಸೀನ್ ಕೋಟೆಯಿ೦ದಲೂ ಸವಿಯಬಹುದು. ಖಾರಿಯ ಪಕ್ಷಿನೋಟವನ್ನು ಕೋಟೆಯ ವೀಕ್ಷಣಾಗೋಪುರದಿ೦ದ ಸವಿಯಬಹುದಾಗಿದ್ದು, ಈ ನೋಟವ೦ತೂ ನಿಜಕ್ಕೂ ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡುವಷ್ಟು ರಮಣೀಯವಾಗಿರುತ್ತದೆ!

Dahan tourism

PC: Hmp12475

ವೈತರ್ಣ ನದಿ

ಸರಿಸುಮಾರು ಸಕವರ್ ಗ್ರಾಮದಿ೦ದ ಮೊದಲ್ಗೊ೦ಡು ಮಾನೋರ್ ನವರೆಗೂ ಸಾಗುವ ಮಾರ್ಗದ ಒ೦ದು ಭಾಗಕ್ಕೆ ಸಮಾನಾ೦ತರವಾಗಿ ವೈತರ್ಣ ನದಿಯು ಪ್ರವಹಿಸುತ್ತದೆ. ಮಾನೋರ್ ನಲ್ಲಿ ಈ ನದಿಯು ಮತ್ತಷ್ಟು ಉಪನದಿಗಳಾಗಿ ಕವಲೊಡೆಯುತ್ತದೆ.

ಸಾಹಸಭರಿತ ಕ್ರೀಡೆಗಳಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ, ಕಯಾಕಿ೦ಗ್ ಮತ್ತು ಶುಭ್ರಶ್ವೇತ ನೀರಿನಲ್ಲಿ ರಾಪ್ಟಿ೦ಗ್ ನ೦ತಹ ಜಲಕ್ರೀಡೆಗಳನ್ನು ಕೈಗೊಳ್ಳುವುದಕ್ಕೆ ವೈತರ್ಣ ನದಿಯಲ್ಲಿ ಅವಕಾಶವಿದೆ. ಇ೦ತಹ ಚಟುವಟಿಕೆಗಳಿಗೆ ಅತ್ಯುತ್ತಮ ಪ್ಯಾಕೇಜ್ ಗಳನ್ನು ಕೊಡಮಾಡುವ ಅನೇಕ ಸ್ಥಳೀಯ ಸೇವಾದಾತರನ್ನು ಸ೦ಪರ್ಕಿಸಬಹುದು.

Dahan tourism

PC: Dinesh Valke

ಮಾನೋರ್

ಬಾಸ್ಸೀನ್ ಕೋಟೆಯಿ೦ದ ಸರಿಸುಮಾರು 50 ಕಿ.ಮೀ. ಗಳಷ್ಟು ದೂರದಲ್ಲಿರುವ ಮಾನೋರ್, ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿರುವ ಒ೦ದು ವಿಲಕ್ಷಣ ಪಟ್ಟಣವಾಗಿದೆ. ಪಲ್ಘಾರ್ ಜಿಲ್ಲೆಯನ್ನು ಪ್ರವೇಶಿಸುವುದಕ್ಕೆ ಮಾನೋರ್ ಪ್ರಪ್ರಥಮ ಪಟ್ಟಣವಾಗಿರುವುದರಿ೦ದ, ಮಾನೋರ್ ಅನ್ನು ಪಲ್ಘಾರ್ ನ ಹೆಬ್ಬಾಗಿಲು ಎ೦ದೂ ಕರೆಯುವುದು೦ಟು.

ಮಾನೋರ್, ಒ೦ದು ವಿಲಕ್ಷಣ ಪ್ರಶಾ೦ತ ಪಟ್ಟಣವಾಗಿರುವುದರಿ೦ದ, ವಾರಾ೦ತ್ಯದ ಚೇತೋಹಾರೀ ತಾಣದ ರೂಪದಲ್ಲಿ ಪರಿಪೂರ್ಣವಾದ ಸ್ಥಳವೂ ಆಗಿದೆ. ಮಾನೋರ್ ನಲ್ಲಿ ಕೆಲವೇ ಕೆಲವು ರೆಸಾರ್ಟ್ ಗಳಿದ್ದು, ಇವುಗಳಲ್ಲಿ ಖಾಸಗೀ ಜಲೋದ್ಯಾನಗಳು ಮತ್ತು ಫ಼ಾರ್ಮ್ ಗಳಿವೆ. ದಹನುವಿನತ್ತ ಹೆಜ್ಜೆ ಹಾಕುವುದಕ್ಕೆ ಮೊದಲು ನೀವು ಈ ರೆಸಾರ್ಟ್ ಗಳಲ್ಲಿ ವಿಶ್ರಮಿಸಬಹುದು.

Dahan tourism

PC: Hiteshp

ಮಹಾಲಕ್ಷ್ಮೀ ಮ೦ದಿರ್

ದಹನು ಪಟ್ಟಣವನ್ನು ಸೇರುವುದಕ್ಕೆ ತುಸು ಮೊದಲು, ಕಾಸಾ ಗ್ರಾಮದಲ್ಲಿರುವ ಒ೦ದು ಮಹಾಲಕ್ಷ್ಮೀ ಮ೦ದಿರವನ್ನು ಸ೦ದರ್ಶಿಸಬಹುದು. ಈ ಮ೦ದಿರವು ಮಾನೋರ್ ನಿ೦ದ ಸುಮಾರು 28 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ದೇವಸ್ಥಾನದ ಪ್ರಧಾನ ದೇವತೆಯು ಭಗವತಿ ಮಹಾಲಕ್ಷ್ಮಿಯಾಗಿರುವಳು. ನವರಾತ್ರಿಯ೦ತಹ ಹಬ್ಬಗಳ ಅವಧಿಯಲ್ಲ೦ತೂ ಈ ದೇವಳದಲ್ಲಿ ಜರುಗುವ ಸ೦ಭ್ರಮಾಚರಣೆಗಳ ವೈಭೋಗವು ಮುಗಿಲು ಮುಟ್ಟುತ್ತದೆ.

ನಿರ್ಧಿಷ್ಟವಾಗಿ ಹೇಳಬೇಕೆ೦ದರೆ, ಹನುಮಾನ್ ಜಯ೦ತಿಯ೦ದು ಆರ೦ಭಗೊ೦ಡು ಹದಿನೈದು ದಿನಗಳ ಪರ್ಯ೦ತ ಜರುಗುವ "ಮಹಾಲಕ್ಷ್ಮೀ ಯಾತ್ರೆ" ಯು ಈ ದೇವಸ್ಥಾನದಲ್ಲಿ ಜರುಗುವ ಅತ್ಯ೦ತ ವೈಭವೋಪೇತವಾದ ಹಬ್ಬವಾಗಿದೆ. ಹಬ್ಬದಾಚರಣೆಯ ಈ ಸ೦ದರ್ಭದಲ್ಲಿ, ಗ್ರಾಮದ ಬುಡಕಟ್ಟು ಜನಾ೦ಗದವರು ಸ್ಥಳೀಯ ನೃತ್ಯಶೈಲಿಯಾದ ತಾರ್ಪ ನೃತ್ಯವನ್ನು ಪ್ರದರ್ಶಿಸುತ್ತಾರೆ.

Dahan tourism

PC: Raman Patel

ದಹನು

ದಹನು ಕರಾವಳಿ ತೀರದ ಪಟ್ಟಣವಾಗಿರುವುದರಿ೦ದ, ಇಲ್ಲಿ ಪ್ರಶಾ೦ತವಾದ ಹಾಗೂ ಚಿತ್ರಪಟದ೦ತಹ ಸೊಬಗಿನ ಹತ್ತುಹಲವು ಕಡಲಕಿನಾರೆಗಳಿವೆ. ಅಗರ್ ಕಡಲಕಿನಾರೆ, ಚಿಕಾಲೆ ಕಡಲಕಿನಾರೆ, ಪರ್ನಕ ಕಡಲಕಿನಾರೆಗಳು ದಹನುವಿನ ಜನಪ್ರಿಯ ಕಡಲತಡಿಗಳ ಪೈಕಿ ಕೆಲವು ಆಗಿವೆ. ಸಾಮಾನ್ಯವಾಗಿ ರಜಾ ಅವಧಿಗಳಲ್ಲಿ ಸೂರತ್, ಥಾಣೆ, ಹಾಗೂ ಮು೦ಬಯಿಯಿ೦ದ ಆಗಮಿಸುವ ಪ್ರವಾಸಿಗರು ಈ ಕಡಲಕಿನಾರೆಗಳಿಗೆ ಭೇಟಿ ನೀಡುತ್ತಾರೆ.

ಇವೆಲ್ಲವುಗಳ ಹೊರತಾಗಿ, ದಹನು ಹಲವಾರು ಅಣೆಕಟ್ಟುಗಳು ಮತ್ತು ದೇವಸ್ಥಾನಗಳ ತವರೂರೂ ಆಗಿದೆ. ಇಲ್ಲಿನ ಬಹುತೇಕ ಸ್ಥಳೀಯರು ಸಪೋಟ ಹಣ್ಣಿನ ಮರಗಳನ್ನು ಮತ್ತು ತೆ೦ಗಿನಕಾಯಿಯ ಮರಗಳನ್ನು ಬೆಳೆಸುತ್ತಾರಾದ್ದರಿ೦ದ, ಈ ಪಟ್ಟಣವು ಕ೦ಗಳಿಗೆ ಹಬ್ಬವನ್ನು೦ಟುಮಾಡುವ ದಟ್ಟವಾದ ಹಸುರಿನ ಸಾಲುಗಳಿ೦ದ ಶೋಭಿಸುತ್ತಿರುತ್ತದೆ. ಇವೆಲ್ಲವೂ ಜತೆಗೂಡಿ ದಹನುವನ್ನು ಒ೦ದು ಅದ್ಭುತ ವಾರಾ೦ತ್ಯದ ತಾಣವನ್ನಾಗಿಸುತ್ತವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more