Search
  • Follow NativePlanet
Share
» »ಗಟ್ಟಿ ಗುಂಡಿಗೆಯವರಿಗೂ ಸವಾಲೊಡ್ಡುವ ಚಾರಣಗಳು

ಗಟ್ಟಿ ಗುಂಡಿಗೆಯವರಿಗೂ ಸವಾಲೊಡ್ಡುವ ಚಾರಣಗಳು

By Vijay

ಚಾರಣ ಅಥವಾ ಟ್ರೆಕ್ಕಿಂಗ್, ಹದಿಹರೆಯದವರ ಪಾಲಿಗಂತೂ ಮೈಮನ ರೋಮಾಂಚನಗೊಳಿಸುವಂತಹ ಒಂದು ಸಾಹಸಭರಿತ ಚಟುವಟಿಕೆಯಾಗಿದೆ. ಹೇಗೆ ಬೇಕೆಂದರಲ್ಲಿ, ಬೇಕಾದ ಹಾಗೆ ಸಾಗುವುದು ಚಾರಣವಲ್ಲ. ಚಾರಣಕ್ಕೆ ತನ್ನದೆ ಆದ ಶಿಸ್ತು ಕ್ರಮಗಳಿವೆ. ಇವುಗಳನ್ನು ಅನುಸರಿಸಿ ಟ್ರೆಕ್ ಮಾಡಿದಾಗ ಮಾತ್ರ ಅದರ ಅತ್ಯುನ್ನತ ಆನಂದವನ್ನು ಪಡೆಯಬಹುದು. ಚಾರಣ ಮಾರ್ಗದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಗಮನಹರಿಸುವುದು ಕೂಡ ಒಂದು ಮಹತ್ತರವಾದ ಭಾಗವಾಗಿದೆ. ಭಾರತ ದೇಶದಲ್ಲಿ ಸರಳವಾದ ಚಾರಣ ಮಾರ್ಗಗಳಿಂದ ಹಿಡಿದು ಅತಿ ಕ್ಲಿಷ್ಟಕರವಾದಂತಹ ಚಾರಣ ಮಾರ್ಗಗಳೂ ಇವೆ.

ಪ್ರಸ್ತುತ, ಈ ಲೇಖನವು ರಮಣೀಯ ರಾಜ್ಯ ಮಹಾರಾಷ್ಟ್ರದ ಪುಣೆ ಹಾಗು ಮುಂಬೈ ಪ್ರದೇಶಗಳ ಸನಿಹದಲ್ಲಿರುವ ಕೆಲವು ವಿಸ್ಮಯಭರಿತ ಚಾರಣ ಸ್ಥಳಗಳ ಕುರಿತು ಪರಿಚಯ ಮಾಡಿಸುತ್ತದೆ. ಈ ಚಾರಣ ಮಾರ್ಗಗಳು ನಿಜವಾಗಿಯೂ ಗಟ್ಟಿ ಗುಂಡಿಗೆ ಇರುವವರನ್ನೂ ಕೂಡ ಒಂದು ಕ್ಷಣ ತಬ್ಬಿಬ್ಬರನ್ನಾಗಿಸುತ್ತದಾದರೂ ಜೀವನದಲ್ಲಿ ಎಂದೂ ಮರೆಯಲಾಗದ ಒಂದು ಅಲೌಕಿಕ ಅನುಭವವನ್ನೂ ಸಹ ಕರುಣಿಸುತ್ತದೆ. ಇನ್ನೇಕೆ ತಡ? ನೀವು ಚಾರಣಪ್ರಿಯ ಪ್ರವಾಸಿಗರಾಗಿದ್ದಲ್ಲಿ ಒಂದೊಮ್ಮೆ ಈ ಸ್ಥಳಗಳಿಗೆ ಭೇಟಿ ನೀಡಿ, ಉತ್ಕೃಷ್ಟಮಯವಾದ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ರಾಜಮಾಚಿ:

ರಾಜಮಾಚಿ:

ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳ ಒಡಲಿನಲ್ಲಿರುವ ಒಂದು ಪುಟ್ಟ ಹಳ್ಳಿಯೆ ರಾಜಮಾಚಿ. ರಾಜಮಾಚಿ ಕೋಟೆಯು ಚಾರಣ ಯೋಗ್ಯವಾದ ಶ್ರೀವರ್ಧನ ಹಾಗು ಮನರಂಜನ ಎಂಬ ಅವಳಿ ಕೋಟೆಗಳನ್ನು ಹೊಂದಿದೆ. ಇದು ಖಂಡಾಲಾ ಹಾಗು ಲೋಣಾವಲಾ ಬಳಿಯಿರುವ ಒಂದು ಪ್ರಸಿದ್ಧ ಪ್ರವಾಸಿ ಚಾರಣ ಕೋಟೆಯಾಗಿದೆ. ಈ ಹಳ್ಳಿಯು ಲೋಣಾವಲಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು ಚಾರಣದ ಮೂಲಕ ತಲುಪಬಹುದಾಗಿದೆ. ಇಲ್ಲಿರುವ ಬೆಟ್ಟದ ತುದಿಯ ಕೋಟೆಯ ಮೇಲೆ ತಲುಪಿದಾಗ ಸುತ್ತಲ ಪರಿಸರದ ವಿಹಂಗಮ ನೋಟವನ್ನು ಕಾಣಬಹುದು.

ಚಿತ್ರಕೃಪೆ: Kandoi.sid

ಸಿಂಹಗಡ್:

ಸಿಂಹಗಡ್:

ಪುಣೆ ನಗರದ ನೈರುತ್ಯ ದಿಕ್ಕಿಗೆ ಸುಮಾರು 30 ಕಿ.ಮೀ ದೂರದಲ್ಲಿದೆ ಈ ಸುಂದರವಾದ ಒಂದು ದಿನದ ಚಾರಣ ಸ್ಥಳ. ಇಲ್ಲಿನ ಬೆಟ್ಟದ ತುದಿಯಲ್ಲಿರುವ ಕೋಟೆಯು ಮರಾಠಿ ಯೋಧರ ಶೂರತನದ ಕಥೆಯನ್ನು ಹೇಳುತ್ತದೆ. ಅಗಾಧವಾದ ಬೆಟ್ಟದ ಸುತ್ತಲಿನ ಹಸಿರಿನ ನಡುವೆ ಪ್ರಕೃತಿಯ ಆನಂದವನ್ನು ಸವಿಯುತ್ತ ಬೆಟ್ಟದ ತುದಿಯ ಕೋಟೆಯವರೆಗೂ ತಲುಪುವುದೆ ಒಂದು ರೋಮಾಂಚನವಾದ ಅನುಭವ. ಸಹ್ಯಾದ್ರಿ ಪರ್ವತ ಶ್ರೇಣಿಯ ಭುಲೇಶ್ವರ ಪರ್ವತಗಳಲ್ಲಿ ನೆಲೆಸಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 1312 ಮೀ ಎತ್ತರದಲ್ಲಿದೆ. ಬೆಟ್ಟದ ಬುಡದಿಂದ ತುದಿಯವರೆಗೆ ಚಿಕ್ಕದಾದ ದಾರಿಯಿದ್ದು ಸಾಹಸಮಯ ಅನುಭೂತಿಯನ್ನು ಕರುಣಿಸುತ್ತದೆ. ಪುಣೆಯ ಶನಿವಾರವಾಡಾ ಹಾಗು ಸ್ವರಗೇಟ್ ಗಳಿಂದ ಸಿಂಹಗಡ್ ಗೆ ತೆರಳಲು ಸ್ಥಳೀಯ ಆಡಳಿತದ ವತಿಯಿಂದ ಪ್ರತಿ ಘಂಟೆಗೆ ಒಂದು ಬಸ್ ಲಭ್ಯವಿದೆ.

ಚಿತ್ರಕೃಪೆ: SasmitV

ಲೋಹಗಡ್:

ಲೋಹಗಡ್:

ಮಹಾರಾಷ್ಟ್ರದ ಲೋಣಾವಲಾ ಪ್ರದೇಶದಲ್ಲಿ ನೆಲೆಸಿರುವ ಲೋಹಗಡ್ ಒಂದು ಸುಪ್ರಸಿದ್ಧವಾದ ಚಾರಣ ಸ್ಥಳವಾಗಿದೆ. ಪುಣೆ ನಗರದ ಹತ್ತಿರದಲ್ಲಿರುವ ಹಲವು ಚಾರಣ ಸ್ಥಳಗಳ ಪೈಕಿ ಇದೂ ಕೂಡ ಒಂದು. ಇಲ್ಲಿರುವ ಲೋಹಗಡ್ ಹಾಗು ವಿಸಾಪುರ್ ಅವಳಿ ಕೋಟೆಗಳು ಮಳೆಗಾಲದ ನೆಚ್ಚಿನ ಚಾರಣ ಸ್ಥಳಗಳಾಗಿವೆ.

ಚಿತ್ರಕೃಪೆ: vivek Joshi

ರಾಜಗಡ್:

ರಾಜಗಡ್:

ರಾಜಗಡ್ ಕೋಟೆಯು ಮಹಾರಾಷ್ಟ್ರದಲ್ಲಿ ಕಂಡುಬರುವ ಎಲ್ಲ ಕೋಟೆಗಳ ನಡುವೆ ರಾಜನಂತೆಯೆ ಇದ್ದು ಚಾರಣದ ಅತಿ ಉತ್ತಮ ಸ್ಥಳವಾಗಿದೆ. ಪುಣೆ ನಗರದಿಂದ 65 ಕಿ.ಮೀ ದೂರದಲ್ಲಿರುವ ಈ ಕೋಟೆಯು ಸಾಹಸಮಯ ಚಾರಣ ಪಥವನ್ನು ಹೊಂದಿದ್ದು ಹದಿಹರೆಯ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಚಿತ್ರಕೃಪೆ: rohit gowaikar

ಕೋರಿಗಡ್:

ಕೋರಿಗಡ್:

ಕೋರಿಗಡ್ ಕೋಟೆಯು ಲೋಣಾವಲಾದಲ್ಲಿ ಕಂಡುಬರುವ ತಿಕೋನಾ, ಲೋಹಗಡ್, ವಿಸಾಪುರ್ ಕೋಟೆಗಳ ಪೈಕಿ ಮಹತ್ತರವಾದ ಕೋಟೆಯಾಗಿದೆ. ಮತ್ತೊಂದು ವಿಷಯವೆಂದರೆ ಈ ಕೋಟೆಯು ಜನಪ್ರಿಯ ರಾತ್ರಿ ಚಾರಣದ ಸ್ಥಳವಾಗಿದೆ.

ಚಿತ್ರಕೃಪೆ: Amogh Sarpotdar

ಪ್ರಬಾಲಗಡ್:

ಪ್ರಬಾಲಗಡ್:

ಪ್ರಬಾಲಗಡ್ - ಕಲವಂತಿನ್ ದುರ್ಗವು, ಮಹಾರಾಷ್ಟ್ರದ ಮಾಥೇರಾನ್, ಪನವೇಲ್ ಮಧ್ಯದಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಸಮುದ್ರ ಮಟ್ಟದಿಂದ ಸುಮಾರು 2300 ಅಡಿಗಳಷ್ಟು ಎತ್ತರದಲ್ಲಿದೆ. ಇದೊಂದು ಅತ್ಯುತ್ತಮ ಚಾರಣ ಸ್ಥಳವಾಗಿರುವುದು ಅಲ್ಲದೆ ಭಾರತದ ಸುಂದರ ನಿರ್ಜನ ಪ್ರದೇಶಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Rohit Gowaikar

ಜಂಗ್ಲಿ ಜೈಗಡ್:

ಜಂಗ್ಲಿ ಜೈಗಡ್:

ಮಹಾರಾಷ್ಟ್ರದ ರತ್ನಾಗಿರಿಜಿಲ್ಲೆಯ ಕುಂಭಾರ್ಲಿ ಘಾಟ್ ಪ್ರದೇಶದಲ್ಲಿ ಈ ಚಾರಣ ಸ್ಥಳವು ಸ್ಥಿತವಿದೆ. ಇದರ ಸುತ್ತಲೂ ಅನೇಕ ವನ್ಯ ಪ್ರಾಣಿಗಳನ್ನು ಕಾಣಬಹುದಾಗಿದೆ. ಅತಿ ಕುತೂಹಲಕಾರಿಯಾದ ಕಾಡಿನ ಚಾರಣ ಮಾರ್ಗ ಇದಾಗಿದೆ.

ಚಿತ್ರಕೃಪೆ: Nilesh2 str

ಹರಿಶ್ಚಂದ್ರಗಡ್:

ಹರಿಶ್ಚಂದ್ರಗಡ್:

ಮಹಾರಾಷ್ಟ್ರದ ಅಹಮದ್ ನಗರ ಪ್ರದೇಶದಲ್ಲಿ ಈ ಭವ್ಯ ಸ್ಥಳವನ್ನು ಕಾಣಬಹುದು. ಈ ಸುಪ್ರಸಿದ್ಧ ಸ್ಥಳದಲ್ಲಿ ಅನೇಕ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಹರಿಶ್ಚಂದ್ರ ಗುಹೆಗಳು, ಹರಿಶ್ಚಂದ್ರೇಶ್ವರ ದೇವಾಲಯ, ತಾರಾಮತಿ ಶಿಖರ, ಮಾಲ್ಶೇಜ್ ಘಾಟ್ ಹಾಗು ಕೇದಾರೇಶ್ವರ ಗುಹಾ ದೇವಾಲಯ ಇಲ್ಲಿ ಕಂಡುಬರುವ ಕೆಲವು ಪ್ರಮುಖ ಸ್ಥಳಗಳು. ಈ ಸ್ಥಳದ ಕುರಿತು ಹೆಚ್ಚು ಮಾಹಿತಿ ಪಡೆಯಿರಿ.

ಚಿತ್ರಕೃಪೆ: rohit gowaikar

ತೋರ್ಣಾ:

ತೋರ್ಣಾ:

ತೋರ್ಣಾ ಕೋಟೆ ಅಥವಾ ಪ್ರಚಂಡಗಡ್, ಪುಣೆಗೆ ಹತ್ತಿರದಲ್ಲಿರುವ ಒಂದು ಬೃಹತ್ ಕೋಟೆಯಾಗಿದೆ. ಪುಣೆ ಜಿಲ್ಲೆಯಲ್ಲಿರುವ ಅತಿ ದೊಡ್ಡದಾದ ಕೋಟೆ ಇದಾಗಿದೆ ಅಲ್ಲದೆ ನೆಚ್ಚಿನ ಪ್ರವಾಸಿ ಸ್ಥಳವಾಗಿಯೂ ಇದು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Amogh Sarpotdar

ರತನಗಡ್:

ರತನಗಡ್:

ರತನ್ ವಾಡಿಯಲ್ಲಿ ಕಂಡು ಬರುವ ಜನಪ್ರಿಯ ಚಾರಣ ಸ್ಥಳಗಳ ಪೈಕಿ ಒಂದಾಗಿದೆ ರತನಗಡ್ ಕೋಟೆ. ಇದನ್ನು ರತ್ನ ಕೋಟೆ ಅಥವಾ ಜೆವೆಲ್ ಫೋರ್ಟ್ ಎಂತಲೂ ಸಹ ಕರೆಯಲಾಗುತ್ತದೆ. ಇಲ್ಲಿ ನೋಡಬಹುದಾದ ಕೆಲವು ಇತರೆ ಸುಂದರ ಆಕರ್ಷಣೆಗಳೆಂದರೆ ಅಮೃತೇಶ್ವರ ದೇವಾಲಯ, ಅರ್ಥರ್ ಜಲಾಶಯ ಹಾಗು ಭಂಡಾರಧಾರಾ.

ಚಿತ್ರಕೃಪೆ: Elroy Serrao

ಶಿವನೇರಿ:

ಶಿವನೇರಿ:

ಪುಣೆಯಿಂದ 110 ಕಿ.ಮೀ ದೂರದಲ್ಲಿರುವ ಶಿವನೇರಿ ಕೋಟೆಯು ಚಾರಣ ಮಾಡುತ್ತ ವಾರಾಂತ್ಯದ ರಜೆಯನ್ನು ಕಳೆಯಲು ಒಂದು ಆದರ್ಶಪ್ರಾಯವಾದ ಸ್ಥಳವಾಗಿದೆ. ಶಿವನೇರಿ ಕೋಟೆಯು ಚಿಕ್ಕದಾಗಿದ್ದರೂ ಸಹ ಸ್ವಲ್ಪ ಕಷ್ಟವೆಂದೆ ಹೇಳಬಹುದಾದ ಚಾರಣ ಪಥವನ್ನು ಒಳಗೊಂಡಿದೆ.

ಚಿತ್ರಕೃಪೆ: Milind.dumbare

ತಿಕೋನಾ:

ತಿಕೋನಾ:

ತಿಕೋನಾ ಕೋಟೆಯನ್ನು ವಿತಂಡಗಡ್ ಎಂದೂ ಸಹ ಕರೆಯಲಾಗುತ್ತದೆ. ಲೋಣಾವಲಾ ಗಿರಿಧಾಮದ ಬಳಿಯಿರುವ ಕಮ್ಶೇಟ್ ಅಥವಾ ಮಾವಲ್ ಪ್ರದೇಶದಲ್ಲಿ ಈ ಬೆಟ್ಟ ಕೋಟೆಯನ್ನು ಕಾಣಬಹುದು. ತಿಕೋನಾ ಕೋಟೆ ಹಾಗು ಭೆಡ್ಸೆ ಗುಹೆಗಳು ನೆಚ್ಚಿನ ಚಾರಣ ಸ್ಥಳಗಳಾಗಿವೆ.

ಚಿತ್ರಕೃಪೆ: Hrishikesh Burkule

ಕಲಸುಬಾಯಿ ಶೃಂಗ:

ಕಲಸುಬಾಯಿ ಶೃಂಗ:

ಮಹಾರಾಷ್ಟ್ರದ ಇಗತ್ಪುರಿ ತಾಲೂಕಿನಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯ ಅತಿ ಉನ್ನತ ಗಿರಿ ಶಿಖರವೆ ಕಲಸುಬಾಯಿ ಶಿಖರವೆಂದು ಕರೆಯಲಾಗುತ್ತದೆ. ಈ ಹೂ ಗಳ ಕಣಿವೆ ಪ್ರದೇಶವು ಚಾರಣಪ್ರಿಯರ ನೆಚ್ಚಿನ ಸ್ಥಳವಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವು ಅನನ್ಯವಾಗಿದೆ.

ಚಿತ್ರಕೃಪೆ: Mvkulkarni23

ರಾಯಗಡ್:

ರಾಯಗಡ್:

ರಾಯಗಡ್ ಕೋಟೆಯು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕೊಂಕಣ ಪ್ರದೇಶದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ನೆಲೆಸಿದೆ. ಪುಣೆ ಹಾಗು ಮುಂಬೈ ಶಹರವಾಸಿಗಳಿಗೆ ವಾರಾಂತ್ಯದ ರಜೆ ಕಳೆಯಲು ಇದೊಂದು ಆದರ್ಶಮಯವಾದ ಸ್ಥಳವಾಗಿದೆ.

ಚಿತ್ರಕೃಪೆ: Paapu07

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X