» »ಶಕ್ತಿ ಇದ್ದರೆ ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಶಕ್ತಿ ಇದ್ದರೆ ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

By: Divya Pandit

ಹಬ್ಬ, ವಾರದ ರಜೆ ಒಟ್ಟೊಟ್ಟಿಗೆ ಬಂದಾಗ ಎಲ್ಲಾದರೂ ಸ್ವಲ್ಪ ದೂರದ ಊರಿಗೆ ಹೋಗಬೇಕು, ಜೀವನದ ಜಂಜಾಟವನ್ನೆಲ್ಲಾ ಮರೆತು ಹಾಯಾಗಿ ಇರಬೇಕು ಎನ್ನುವ ಮನಸ್ಸಿದ್ದರೆ ಯಾಣದ ಚಾರಣಮಾಡಿ. ದಟ್ಟವಾದ ಕಾಡು, ಶುದ್ಧವಾದ ಗಾಳಿ, ಹಕ್ಕಿಗಳ ಚಿಲಿಪಿಲಿ, ಅಲ್ಲಲ್ಲಿ ಹರಿಯುತ್ತಿರುವ ನೀರಿನ ನಾದ ಎಲ್ಲವೂ ಸುಂದರ ನಯನ ಮನೋಹರ.

'ಯಾಣ' ಯಾನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಒಂದು ಪುಟ್ಟಹಳ್ಳಿ ಯಾಣ. ಇಲ್ಲಿ ಕಾಣುವ ಎರಡು ಎತ್ತರವಾದ ಬಂಡೆಗಳೇ ಹಳ್ಳಿಯ ವಿಶೇಷತೆ. ಒಂದು ಬಂಡೆಯನ್ನು ಮೋಹಿನಿ ಶಿಖರ ಹಾಗೂ ಇನ್ನೊಂದು ಬಂಡೆಯನ್ನು ಭೈರವೇಶ್ವರ ಶಿಖರ ಎಂದು ಕರೆಯುತ್ತಾರೆ. ಈ ಭೈರವೇಶ್ವರ ಶಿಖರದಲ್ಲಿ ಒಂದು ಸಣ್ಣ ಗುಹೆಯಿದೆ. ಇಲ್ಲಿ ಶಿವಲಿಂಗ ಹಾಗೂ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಗುಹೆಯ ಗೋಡೆಗಳು ಸುಣ್ಣದ ಕಲ್ಲಿನ ಅಂಶವನ್ನು ಒಳಗೊಂಡಿದೆ ಎನ್ನುತ್ತಾರೆ.

ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಚಿತ್ರಕೃಪೆ: Dgbhat99

ಇದರ ವಿಶೇಷ

ಈ ಶಿಖರ ಏಕ ಶಿಲೆಯಿಂದಲೇ ರಚಿತಾಗಿದೆ. ಜೊತೆಗೆ ಪ್ರತಿ ವರ್ಷವೂ ಸ್ವಲ್ಪ ಸ್ವಲ್ಪ ಬೆಳೆಯುತ್ತಾ ಹೋಗುತ್ತದೆ ಎನ್ನುವ ಪ್ರತೀತಿ ಇದೆ. ಶಿವರಾತ್ರಿಯ ವೇಳೆ ಇಲ್ಲಿ ಭಕ್ತರ ಹರಿವು ಅಪಾರ. ಅಲ್ಲೇ ಸ್ವಲ್ಪ ಕೆಳಗೆ ಇಳಿದರೆ ಗಣಪತಿ ದೇವಸ್ಥಾನವೂ ಇದೆ. ಅಲ್ಲಿಂದ ಇನ್ನೂ ಕೆಳಗೆ ಹೋದರೆ ಚಿಕ್ಕ ಹೊಳೆಯಿರುವುದು ಕಾಣಬಹುದು. ಬಹಳ ಎತ್ತರದಲ್ಲಿ ಇರುವ ಈ ಶಿಖರ ಪ್ರವಾಸಿಗರಿಗೆ ಆಶ್ಚರ್ಯ ಹಾಗೂ ಕುತೂಹಲವನ್ನು ಕೆರಳಿಸುತ್ತದೆ. ಟ್ರೆಕ್ಕಿಂಗ್ ಮಾಡುವವರಿಗೆ ಇದೊಂದು ಸ್ವರ್ಗ ತಾಣ.

ಹಿನ್ನೆಲೆ

ಭಸ್ಮಾಸುರನನ್ನು ಶಿವಪರಮಾತ್ಮ ಇಲ್ಲಿಯೇ ಭಸ್ಮಮಾಡಿರುವ ಜಾಗ ಎನ್ನುವ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಹಾಗಾಗಿಯೇ ಇಲ್ಲಿಯ ಮಣ್ಣು ಭಸ್ಮದಂತೆ ನುಣುಪಾಗಿವೆ ಎಂದು ಹೇಳುತ್ತಾರೆ.

ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಚಿತ್ರಕೃಪೆ: Vinodtiwari2608

ಎಚ್ಚರಿಕೆ

ಇಲ್ಲಿ ಬಹಳ ದಟ್ಟವಾದ ಅರಣ್ಯ ಸಂಪತ್ತಿರುವುದರಿಂದ ಸ್ವಲ್ಪ ಜಾಗರೂಕತೆಯಲ್ಲಿ ಇರಬೇಕು. ನುಣುಪಾದ ಮಣ್ಣು ಇಲ್ಲಿರುವುದರಿಂದ ನಡೆಯುವಾಗ ಕಾಲು ಜಾರುವ ಸಾಧ್ಯತೆ ಹೆಚ್ಚು. ಅಲ್ಲದೆ ಉಂಬುಳ ಹಾಗೂ ಜೇನು ನೊಣಗಳು ಹೆಚ್ಚಾಗಿವೆ. ಉಂಬುಳ ಕಡಿದರೆ ಮೊದಲು ನಮಗೆ ತಿಳಿಯುವುದಿಲ್ಲ. ಅದು ರಕ್ತಹೀರಿ ಉದುರಿ ಬೀಳುತ್ತದೆ. ನಂತರ ನಮಗೆ ರಕ್ತ ಸೋರುವುದು ಹಾಗೂ ತುರಿಕೆಯ ಅನುಭವ ಆಗುತ್ತದೆ. ಜೇನು ನೊಣಗಳಿಗೆ ಕಲ್ಲೆಸೆಯಬೇಡಿ.

ಯಾವಾಗ ಹೋಗಬೇಕು

ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಅಕ್ಟೋಬರ್‌ನಿಂದ ಫೆಬ್ರವರಿ ತಿಂಗಳಲ್ಲಿ ಹೋಗುವುದು ಸೂಕ್ತ. ಇಲ್ಲಿ ಹತ್ತಿರ ಎಲ್ಲೂ ವಸತಿ ಸೌಲಭ್ಯ ವಿರದ ಕಾರಣ ಯಾಣಕ್ಕೆ ಹತ್ತಿರ ಇರುವ ಶಿರಸಿ ಪೇಟೆಗೆ ಹೋಗಬಹುದು. ಅಲ್ಲಿ ಉತ್ತಮ ಗುಣಮಟ್ಟದ ಊಟ, ವಸತಿ ವ್ಯವಸ್ಥೆ ಇರುವ ಹೋಟೆಲ್‍ಗಳಿವೆ.

ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಚಿತ್ರಕೃಪೆ: Vinodtiwari2608

ಹತ್ತಿರ ಏನೇನಿದೆ

ಶಿರಸಿ ಮಾರಿಕಾಂಬ ದೇಗುಲ, ಉಂಚಳ್ಳಿ ಜಲಪಾತ, ಮಾಗೋಡು ಜಲಪಾತ, ಗೋಕರ್ಣ, ಮುರುಡೇಶ್ವರ, ಇಕ್ಕೇರಿಗೆ ಸಮೀಪವಿದೆ.

ಹೋಗುವ ದಾರಿ

ಬೆಂಗಳೂರಿನಿಂದ ಯಾಣ ಸುಮಾರು 460 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಶಿರಸಿಗೆ ಬಸ್‍ನಲ್ಲಿ ಹೋಗಿ ತಂಗಿದರೆ, ಅಲ್ಲಿಂದ 40 ಕಿ.ಮೀ ದೂರದಲ್ಲಿರುವ ಯಾಣಕ್ಕೆ ಅನುಕೂಲಕ್ಕೆ ತಕ್ಕ ಖಾಸಗಿ ವಾಹನದ ವ್ಯವಸ್ಥೆ ಮಾಡಿಕೊಳ್ಳಬಹುದು.

ಮರೆಯದಿರಿ

* ಸ್ವಲ್ಪ ದೂರದಲ್ಲಿಯೇ ವಾಹನ ನಿಲುಗಡೆ ಮಾಡಿ ನಡೆದು ಸಾಗಬೇಕು.
* ಹತ್ತಿರದಲ್ಲಿ ಅಂಗಡಿ ವ್ಯವಸ್ಥೆ ಇಲ್ಲದಿರುವುದಕ್ಕೆ ನಿಮಗೆ ಬೇಕಾದ ಹಣ್ಣು ನೀರು, ತಿಂಡಿಯನ್ನು ಕೊಂಡೊಯ್ಯಿರಿ.
* ಕ್ಯಾಮೆರಾ ನಿಮ್ಮ ಬಳಿ ಇರಲಿ. ಸುಂದರ ದೃಶ್ಯಗಳು ನಿಮ್ಮ ನೆನಪಿಗೆ ಸಿಗುತ್ತದೆ.
* ಗಿಡ ಮರಗಳಿಗೆ ಹಾನಿ ಮಾಡುವಂತಿಲ್ಲ.

Please Wait while comments are loading...