» »ದೀರ್ಘಕಾಲದ ರಜೆಯಲ್ಲಿ ದೂರದ ಪ್ರಯಾಣ

ದೀರ್ಘಕಾಲದ ರಜೆಯಲ್ಲಿ ದೂರದ ಪ್ರಯಾಣ

By: Divya

ನಲವತ್ತು ವಸಂತಗಳ ನಿರಂತರ ಹೋರಾಟದ ನಂತರ ಭಾರತದ 29ನೇ ರಾಜ್ಯ ಎನಿಸಿಕೊಂಡಿದ್ದು ತೆಲಂಗಾಣ. ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ರಾಜ್ಯ ಸುಂದರ ಇತಿಹಾಸವನ್ನು ಹೊಂದಿದೆ. ಗೋದಾವರಿ ಹಾಗೂ ಕೃಷ್ಣಾ ನದಿ ಈ ಭಾಗದಲ್ಲಿಯೇ ಹರಿಯುತ್ತದೆಯಾದರೂ, ಬಹು ಭಾಗ ಒಣ ಪ್ರದೇಶದಿಂದ ಕೂಡಿದೆ. ಆದರೂ ಅನೇಕ ವಿಚಾರಗಳಲ್ಲಿ ತೆಲಂಗಾಣ ಅಭಿವೃದ್ಧಿಯನ್ನು ಕಂಡಿದೆ.

ತೆಲಂಗಾಣ ಒಂದು ಹೊಸ ರಾಜ್ಯವೇ ಆಗಿರಬಹುದು. ಇಲ್ಲಿರುವ ಅನೇಕ ಐತಿಹಾಸಿಕ ಸ್ಥಳಗಳು, ಪುಣ್ಯ ಕ್ಷೇತ್ರಗಳು, ಜಲಧಾರೆಗಳು, ನದಿ ತೀರಗಳು ಹಾಗೂ ಹಸಿರು ಸಿರಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಬೇಸಿಗೆ ರಜೆಯಲ್ಲಿ ದೀರ್ಘಕಾಲದ ಪ್ರವಾಸವನ್ನು ಈ ಕಡೆ ಕೈಗೊಂಡರೆ ಉತ್ತಮ ಅನುಭವ ನಿಮ್ಮ ಸ್ವತ್ತಾಗುವುದು.

ತೆಲಂಗಾಣ ಪ್ರದೇಶದ ಬಗ್ಗೆ ಓದಲು ಆಸಕ್ತಿಯೇ?

ಪ್ರವಾಸ ತಾಣಗಳನ್ನು ಒಳಗೊಂಡಿರುವ ಇಲ್ಲಿ ವಸತಿ ವ್ಯವಸ್ಥೆಗೂ ಅನುಕೂಲಕರವಾದ ಹೋಟೆಲ್ ಹಾಗೂ ರೆಸಾರ್ಟ್‍ಗಳು ದೊರೆಯುತ್ತವೆ. ಬೆಂಗಳೂರಿನಿಂದ 709 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 9 ರಿಂದ 10 ತಾಸುಗಳ ಪ್ರಯಾಣ ಕೈಗೊಳ್ಳಬೇಕು.

ಕೊಲಾನುಪಾಕ ಜೈನ ದೇಗುಲ

ಕೊಲಾನುಪಾಕ ಜೈನ ದೇಗುಲ

ನಲ್ಗೊಂಡದಲ್ಲಿರುವ ಈ ಜೈನ ದೇಗುಲ 2000 ವರ್ಷಗಳಷ್ಟು ಹಳೆಯ ದೇಗುಲ. ದಕ್ಷಿಣ ಭಾರತದಲ್ಲಿರುವ ಶ್ವೇತಾಂಬರರ ದೇಗುಲದಲ್ಲಿ ಇದು ಒಂದು. ಇಲ್ಲಿ ಜೈನ ತೀರ್ಥಂಕರರ ಮೂರ್ತಿಗಳನ್ನು ಇಡಲಾಗಿದೆ. ಅಮೃತ ಶಿಲೆಯಲ್ಲಿ ನಿರ್ಮಿಸಲಾದ ಈ ದೇಗುಲ ಸುಂದರವಾದ ವಾಸ್ತು ಶಿಲ್ಪವನ್ನು ಒಳಗೊಂಡಿದೆ. ಇಲ್ಲಿಯೇ ಹತ್ತಿರದಲ್ಲಿ ಒಂದು ಶಿವಾಲಯ ಇರುವುದನ್ನು ಕಾಣಬಹುದು.
PC: wikipedia.org

ರಾಮಗಿರಿ ಕೋಟೆ

ರಾಮಗಿರಿ ಕೋಟೆ

ಕೋಟೆ ತೆಲಂಗಾಣದ ಪೆಡ್ಡಪಳ್ಳಿ ಜಿಲ್ಲೆಯಲ್ಲಿದೆ. 12ನೇ ಶತಮಾನದಲ್ಲಿ ನಿರ್ಮಾಣವಾದ ಈ ಕೋಟೆನ್ನು ಕೇವಲ ಮಣ್ಣು ಮತ್ತು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಇದನ್ನು ಕಾಕತೀಯರು ನಿರ್ಮಿಸಿದ್ದರು ಎನ್ನಲಾಗುತ್ತದೆ. ಗುಡ್ಡದ ತುದಿಯಲ್ಲಿರುವ ಈ ಕೋಟೆಯ ಸುತ್ತ ಆಯುರ್ವೇದ ಗಿಡಮೂಲಿಕೆಯಿಂದ ಆವೃತಗೊಂಡಿದೆ.
PC: wikipedia.org

ಗೌತಮೇಶ್ವರ ದೇಗುಲ

ಗೌತಮೇಶ್ವರ ದೇಗುಲ

ಗೋದಾವರಿ ನದಿಯ ದಡದಲ್ಲಿರುವ ಈ ದೇಗುಲ ಬಹಳ ಪುರಾತನ ಕಾಲದ್ದು. ಶಿವನನ್ನು ಆರಾಧಿಸುವ ಈ ದೇಗುಲ ಹಿಂದಿನಕಾಲದಲ್ಲಿ ವೇದಾಧ್ಯಯನದ ಕೇಂದ್ರವಾಗಿತ್ತು ಎನ್ನಲಾಗುತ್ತದೆ.

ಮಲ್ಲೆಲಾ ತೀರ್ಥ

ಮಲ್ಲೆಲಾ ತೀರ್ಥ

ಮಹಬೂಬ್ ನಗರದಲ್ಲಿರುವವ ನಲ್ಲಮಲ್ಲ ಕಾಡಿನಲ್ಲಿ ಮಲ್ಲೆಲಾ ತೀರ್ಥ ಜಲಪಾತವಿದೆ. ಕೃಷ್ಣ ನದಿ ನೀರಿನಿಂದ ಹುಟ್ಟುವ ಈ ಜಲಧಾರೆ 150 ಅಡಿ ಎತ್ತರದಿಂದ ಧುಮುಕುತ್ತದೆ. ಸ್ನೇಹಿತರೊಡನೆ, ಕುಟುಂಬದವರೊಡನೆ ಬರಲು ಒಂದು ಸೂಕ್ತ ಸ್ಥಳ. ಈ ಜಲಧಾರೆಯಲ್ಲಿ ಪ್ರವಾಸಿಗರು ಸ್ನಾನ ಮಾಡಬಹುದು. ಸುತ್ತ ಹಸಿರು ಕಾಡುಗಳಿಂದ ಕೂಡಿದ್ದು, ಶಾಂತವಾದ ವಾತಾವರಣವನ್ನು ಗಮನಿಸಬಹುದು.
PC: wikipedia.org

ಪಾಕ್ಹಾಲ್ ಕೆರೆ

ಪಾಕ್ಹಾಲ್ ಕೆರೆ

ವಾರಂಗಲ್ ಜಿಲ್ಲೆಯಲ್ಲಿರುವ ಈ ಕೆರೆ ಮಾನವ ನಿರ್ಮಿತ ಕೆರೆ ಎಂದು ಹೇಳಲಾಗುತ್ತದೆ. ಕಾಕತೀಯ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಈ ಕೆರೆ ಕಾಡುಗಳ ಮಧ್ಯಭಾಗದಲ್ಲಿದೆ. ಇದರ ಹತ್ತಿರವೇ ಪಾಕ್ಹಾಲ್ ವನ್ಯಜೀವಿ ದಾಮವಿದೆ. ಇದರಲ್ಲಿ ಹುಲಿ, ಚಿರತೆ, ನರಿ, ಜಿಂಕೆ, ತೋಳ, ಕಾಡು ನಾಯಿ ಸೇರಿದಂತೆ ಅನೇಕ ಪ್ರಾಣಿಗಳನ್ನು ಕಾಣಬಹುದು. ಈ ಕೆರೆಯ ದಡದಲ್ಲಿ ಬೆಳದಿಂಗಳ ರಾತ್ರಿಯ ಶಿಬಿರವನ್ನು ಕೈಗೊಂಡರೆ ಮರೆಯಲಾಗದ ಅನುಭವವನ್ನು ಹೊಂದಬಹುದು.
PC: wikipedia.org

ಧುಳಿಕಟ್ಟ ಬೌದ್ಧ ಸ್ತೂಪ

ಧುಳಿಕಟ್ಟ ಬೌದ್ಧ ಸ್ತೂಪ

ಧುಳಿಕಟ್ಟ ಎಂದರೆ ಮಣ್ಣಿನ ಕೋಟೆ ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿರುವ ಬೃಹತ್ ಬೌದ್ಧ ಸ್ತೂಪವು ಎರಡನೇ ಶತಮಾನದ ಇತಿಹಾಸವನ್ನು ಹೊಂದಿದೆ. ಇದರ ಸುತ್ತಲೂ ಹುಲ್ಲುಗಳಿಂದ ಆವೃತಗೊಂಡಿದ್ದು, ಆ ಕಾಲದ ಶ್ರೀಮಂತ ಇತಿಹಾಸವನ್ನು ಸಾರುತ್ತದೆ.
PC: telanganatourism.gov.in

ಕುಂತಲ ಜಲಪಾತ

ಕುಂತಲ ಜಲಪಾತ

ಕುಂತಲ ಎನ್ನುವ ಊರಿನಲ್ಲಿರುವ ಈ ಜಲಪಾತ ಕದಂ ನದಿಯಿಂದ ಹುಟ್ಟುತ್ತದೆ. ಇದು ತೆಲಂಗಣದಲ್ಲಿಯೇ ಅತಿ ಎತ್ತರದಿಂದ ಧುಮುಕುವ ಜಲಪಾತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಕುಂತಲಾಳ ಪ್ರೇಮ ಕಥೆಯು ಈ ತಾಣದಲ್ಲೇ ಹುಟ್ಟಿಕೊಂಡಿದ್ದು, ಶಕುಂತಲಾ ಈ ಜಲಧಾರೆಯಲ್ಲೇ ಸ್ನಾನ ಮಾಡುತ್ತಿದ್ದಳು ಎಂಬುದು ಇಲ್ಲಿಯ ಸ್ಥಳೀಯರ ಅನಿಸಿಕೆ. ಇಲ್ಲಿಯ ಹಸಿರು ಸಿರಿಯ ಸೌಂದರ್ಯ ಮನಸ್ಸಿಗೆ ಮುದ ನೀಡಬಲ್ಲದು.
PC: wikipedia.org

ಭೊಂಗಿರ್ ಕೋಟೆ

ಭೊಂಗಿರ್ ಕೋಟೆ

ಯಾದಗಿರಿ ಭುವನಗಿರಿ ಜಿಲ್ಲೆಯ ಭೊಂಗಿರ್ ಊರಿನಲ್ಲಿ ಈ ಕೋಟೆಯಿದೆ. ಬೃಹತ್ ಆಕಾರದ ಬಂಡೆಯಮೇಲಿರುವ ಈ ಕೋಡೆ 10ನೇ ಶತಮಾನದ ಇತಿಹಾಸವನ್ನು ಒಳಗೊಂಡಿದೆ. ಚಾಲುಕ್ಯರ ಕಾಲದ ಆರನೇ ತ್ರಿಭುವನ ಮಲ್ಲ ವಿಕ್ರಮಾದಿತ್ಯನು ಈ ಕೋಟೆಯನ್ನು ನಿರ್ಮಿಸಿದ್ದ. ಆನಂತರ ಈ ಪ್ರದೇಶವನ್ನು ತ್ರಿಭುವನಗಿರಿ ಎಂದು ಕರೆಯಲಾಯಿತು. ಸಮುದ್ರ ಮಟ್ಟದಿಂದ 609.6 ಅಡಿ ಎತ್ತರದಲ್ಲಿ ಇರುವ ಈ ಕೋಟೆ ಅಂಡಾಕಾರದಲ್ಲಿದೆ. ಎರಡು ದ್ವಾರವನ್ನು ಹೊಂದಿರುವ ಈ ಕೋಟೆಗೆ ಬೃಹತ್ ಕಲ್ಲುಗಳಿಂದ ರಕ್ಷಣೆ ಪಡೆದಿದೆ.
PC: wikipedia.org

ಪೋಚರಂ ಅಭಯಾರಣ್ಯ ಮತ್ತು ಅಣೆಕಟ್ಟು

ಪೋಚರಂ ಅಭಯಾರಣ್ಯ ಮತ್ತು ಅಣೆಕಟ್ಟು

ತೆಲಂಗಣದಿಂದ 115 ಕಿ.ಮೀ. ದೂರದಲ್ಲಿರುವ ಈ ತಾಣ ನಿಜಾಮರ ಕಾಲದಲ್ಲಿ ಬೇಟೆಯಾಡುವ ಸ್ಥಳವಾಗಿತ್ತು. 20ನೇ ಶತಮಾನದಲ್ಲಿ ಅಭಯಾರಣ್ಯವೆಂದು ಘೋಷಿಸಿ, ಪೋಚರಂ ಎಂದು ಹೆಸರಿಸಲಾಯಿತು. 130 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಈ ತಾಣ ಮೇದಕ್ ಊರಿಗೆ ಹತ್ತಿರವಾಗಿದೆ. ಇಲ್ಲಿ ಹಲವು ಬಗೆಯ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಬಹುದು.
PC: wikipedia.org

ಡಿಚ್‍ಪಲ್ಲಿ ರಾಮಾಲಯ

ಡಿಚ್‍ಪಲ್ಲಿ ರಾಮಾಲಯ

ನಿಜಾಮಾಬಾದ್‍ಅಲ್ಲಿ ಇರುವ ಈ ದೇವಾಲಯ 14ನೇ ಶತಮಾನದ ಇತಿಹಾಸವನ್ನು ಒಳಗೊಂಡಿದೆ. ರಾಮನನ್ನು ಆರಾಧಿಸುವ ಈ ಕ್ಷೇತ್ರ ಕಾಕತೀಯ ರಾಜರ ಕೊಡುಗೆ ಎನ್ನಲಾಗುತ್ತದೆ. ಈ ದೇವಾಲಯವನ್ನು ಬಿಳಿ ಮತ್ತು ಕಪ್ಪು ಬಣ್ಣದ ಬಸಾಲ್ಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಇದರ ಮೇಲೆ ದೇವತೆಗಳು ಹಾಗೂ ಪ್ರಾಣಿಗಳ ಚಿತ್ರವನ್ನು ಕೆತ್ತಲಾಗಿದೆ. ಈ ದೇಗುಲಕ್ಕೆ 105 ಮೆಟ್ಟಿಲುಗಳನ್ನು ಏರಿ ಬರಬೇಕು.
PC: wikipedia.org

Please Wait while comments are loading...