Search
  • Follow NativePlanet
Share
» »ಬೆಳಗಾವಿ ಜಿಲ್ಲೆಯಲ್ಲೊಂದು ಅಮೋಘ ಪ್ರವಾಸ

ಬೆಳಗಾವಿ ಜಿಲ್ಲೆಯಲ್ಲೊಂದು ಅಮೋಘ ಪ್ರವಾಸ

ಕುಂದಾ ನಗರಿ ಬೆಳಗಾವಿಯು ಕರ್ನಾಟಕದ ವಾಯವ್ಯ ಭಾಗದ ಗಡಿಯಲ್ಲಿ ನೆಲೆಸಿರುವ ಸುಂದರ ಹಸಿರುಮಯ ಪ್ರದೇಶ. ಮಲೆನಾಡಿನ ಛಾಯೆಯಲ್ಲಿ ಬರುವ ಈ ತಾಣವು ಇತರೆ ಬಯಲು ಸೀಮೆ ಪ್ರದೇಶಗಳಂತಿರದೆ ಸದಾ ತಂಪಾಗಿದ್ದು ಹಿತಕರ ಎನ್ನಬಹುದಾದ ವಾತಾವರಣವನ್ನು ಹೊಂದಿದೆ. ರಾಜ್ಯದ ಎರಡನೇಯ ರಾಜಧಾನಿ ಎಂಬ ಬಿರುದನ್ನು ಪಡೆದಿರುವ ಈ ಜಿಲ್ಲೆಯು ಶರ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಮಾಹಾರಾಷ್ಟ್ರ ಹಾಗು ಗೋವಾ ರಾಜ್ಯಗಳಿಗೆ ಅತಿ ಹತ್ತಿರದಲ್ಲಿರುವುದರಿಂದ ಹಲವು ಬಗೆಯ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯ ಸುತ್ತಮುತ್ತಲು ನೋಡಬಹುದಾಗಿದೆ.

ಬೆಂಗಳೂರಿನಿಂದ ಪುಣೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ಚಲಿಸುತ್ತ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಹಾಗು ಧಾರವಾಡದಿಂದ ಬೆಳಗಾವಿಯನ್ನು ಒಟ್ಟು 505 ಕಿ.ಮೀ ಕ್ರಮಿಸಿ ಸುಲಭವಾಗಿ ತಲುಪಬಹುದು. 1924 ನೇಯ ಡಿಸೆಂಬರ್ ನಲ್ಲಿ ಜರುಗಿದ 39 ನೇಯ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧಿವೇಶನ ನಡೆದದ್ದು ಈ ಬೆಳಗಾವಿ ನಗರದಲ್ಲೆ ಅದು ಕೂಡ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ. ಸಮುದ್ರ ಮಟ್ಟದಿಂದ 2500 ಅಡಿ ಅಥವಾ 762 ಮೀ. ಎತ್ತರದಲ್ಲಿ ನೆಲೆಸಿರುವ ಈ ನಗರದ ಸುತ್ತ ಮುತ್ತ ಹಲವಾರು ಗಮ್ಯ ಪ್ರವಾಸಿ ತಾಣಗಳು ನೆಲೆಸಿವೆ.

ನೀವು ಬೆಳಗಾವಿಗೆಂದು ಪ್ರವಾಸಕ್ಕೆ ಹೋದಾಗ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ.

ಗೋಕಾಕ:

ಗೋಕಾಕ:

ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಇಲ್ಲಿಗೆ ತೆರಳಿದಾಗ ಇಲ್ಲಿನ ಮತ್ತೊಂದು ಜನಪ್ರಿಯ ಸಿಹಿ ಖಾದ್ಯವಾದ 'ಗೋಕಾಕ್ ಕರದಂಟ್' ಅನ್ನು ತಿನ್ನಲು ಮರೇಯಬೇಡಿ. ಬೆಳಗಾವಿ ಬಸ್ ಹಾಗು ರೈಲು ನಿಲ್ದಾಣಗಳಿಂದ ಗೋಕಾಕಿಗೆ ತೆರಳಲು ಬಸ್ ಹಾಗು ರೈಲುಗಳು ಲಭ್ಯವಿರುತ್ತದೆ.

ಹಳಸಿ:

ಹಳಸಿ:

ಹಲ್ಶಿ ಎಂದೂ ಕರೆಯಲ್ಪಡುವ ಈ ಪುಟ್ಟ ಪಟ್ಟಣವು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿದೆ. ಖಾನಾಪುರ ರೈಲು ನಿಲ್ದಾಣದ ಆಗ್ನೇಯ ಭಾಗಕ್ಕೆ ಸುಮಾರು 16 ಕಿ.ಮೀ ದೂರದಲ್ಲಿರುವ ಈ ಪಟ್ಟಣವು ಒಂದೊಮ್ಮೆ ಕದಂಬರ ರಾಜಧಾನಿಯಾಗಿ ಮೆರೆದಿದ್ದು, ತನ್ನಲ್ಲಿರುವ ಅದ್ಭುತ ವಾಸ್ತು ಶಿಲ್ಪದ ಭೂವರಾಹ ಲಕ್ಷ್ಮಿ ನರಸಿಂಹ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.

ಈ ದೇವಾಲಯದಲ್ಲಿ ಒಂದಕ್ಕೊಂದು ಎದುರಾಭಿಮುಖವಾಗಿರುವ ಎರಡು ಗರ್ಭಗುಡಿಗಳಿವೆ. ಬಲಬದಿಯ ಗರ್ಭ ದೇಗುಲದಲ್ಲಿ 4 ಅಡಿ ಎತ್ತರದ ಕುಳಿತಿರುವ ವಿಷ್ಣುವಿನ ವಿಗ್ರಹವಿದ್ದು, ಅದರ ಹಿಂದೆಯೆ ಲಕ್ಷ್ಮಿ ಹಾಗು ಸೂರ್ಯನಾರಾಯಣನ ವಿಗ್ರಹಗಳಿವೆ. ಇನ್ನು ಎಡಬದಿಯ ಗರ್ಭ ಗುಡಿಯಲ್ಲಿ ಭೂದೇವಿ (ಪೃಥ್ವಿ) ಯನ್ನು ಬಾಯಿಯಲ್ಲಿ ಹಿಡಿದಿರುವ 5 ಅಡಿ ಎತ್ತರದ ವರಾಹ ಸ್ವಾಮಿಯ ವಿಗ್ರಹವಿದೆ. ಇಲ್ಲಿನ ಅರ್ಚಕರ ಪ್ರಕಾರ, 2 ಅಡಿ ಎತ್ತರದ ನರಸಿಂಹನ ಸ್ವಯಂಭು ವಿಗ್ರಹವೊಂದು ಮುಖ್ಯ ವಿಷ್ಣುವಿನ ವಿಗ್ರಹದ ಪಕ್ಕದಲ್ಲಿದೆ.

ಸುತ್ತಮುತ್ತಲು ಅದ್ಭುತವಾದ ಹಸಿರುಮಯ ಪರಿಸರವನ್ನು ಹೊಂದಿರುವ ಈ ತಾಣಕ್ಕೆ ಬೆಳಗಾವಿ ನಗರದಿಂದ ಖಾನಾಪುರ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

ಹೂಲಿ:

ಹೂಲಿ:

ಬೆಳಗಾವಿಯ ಪೂರ್ವಕ್ಕೆ 96 ಕಿ.ಮೀ ದೂರದಲ್ಲಿರುವ ಹೂಲಿ ಗ್ರಾಮವು ಮತ್ತೊಂದು ಪ್ರಖ್ಯಾತ ಶ್ರೀಕ್ಷೇತ್ರವಾದ ಸವದತ್ತಿಯಿಂದ ಕೇವಲ 9 ಕಿ.ಮೀಗಳ ಅಂತರದಲ್ಲಿದೆ. ಬೆಳಗಾವಿಯ ಪುರಾತನ ಹಳ್ಳಿಗಳಲ್ಲಿ ಒಂದಾಗಿರುವ ಹೂಲಿ ಹಳ್ಳಿಯು ತನ್ನಲ್ಲಿರುವ ಪಂಚಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ.

ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವನ್ನು ನೋಡುವುದೇ ಒಂದು ಚೆಂದದ ಅನುಭವ. ಕಲ್ಲಿನಿಂದಲೆ ಮಾಡಲ್ಪಟ್ಟಿರುವುದರಿಂದ ಬಿಸಿಲಿನಲ್ಲೂ ತಂಪಾದ ನೆರಳಿನ ಅನುಭವ ಇದು ಕೊಡುತ್ತದೆ. ಈ ತಂಪಿನಲ್ಲಿ ಸಮಯ ಕಳೆಯಲೆಂದು ಜನ ಇಲ್ಲಿ ಬರುವುದುಂಟು. ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವ ಈ ದೇವಾಲಯವನ್ನು ರಕ್ಷಿತ ಸ್ಮಾರಕಗಳಲ್ಲಿ ಪರಿಗಣಿಸಲಾಗಿದೆ.

ಸವದತ್ತಿ:

ಸವದತ್ತಿ:

ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದ್ದು, ಬೆಳಗಾವಿಯ ಪೂರ್ವ ದಿಕ್ಕಿಗೆ (ಹೆಚ್ಚು ಕಡಿಮೆ ಆಗ್ನೇಯ) ಸುಮಾರು 78 ಕಿ.ಮೀ ಗಳ ದೂರದಲ್ಲಿ ನೆಲೆಸಿದೆ. ಸುಗಂದವರ್ತಿ, ಸೌಗಂದಿಪುರ ಎಂದೂ ಕರೆಯಲ್ಪಡಿತ್ತಿದ್ದ ಇದು ರಟ್ಟ ವಂಶದ (875 -1230) ರಾಜಧಾನಿಯಾಗಿತ್ತು. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ/ ಎಲ್ಲಮನ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲಮಗುಡ್ಡ ಎಂದೂ ಕರೆಯಲ್ಪಡುವ ಈ ತಾಣಕ್ಕೆ ತೆರಳಲು ಬೆಳಗಾವಿಯಿಂದ ನಿರಂತರವಾಗಿ ಬಸ್ ಸೌಲಭ್ಯವಿದೆ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಸವದತ್ತಿ:

ಸವದತ್ತಿ:

18 ನೇಯ ಶತಮಾನದಲ್ಲಿ ಶಿರಸಂಗಿ ದೇಸಾಯಿ ವಂಶದಿಂದ ನಿರ್ಮಿಸಲಾದ ಸವದತ್ತಿ ಕೋಟೆಯು ಸವದತ್ತಿಯ ಮತ್ತೊಂದು ಆಕರ್ಷಣೆ. 8 ಕೊತ್ತಲಗಳಿರುವ ಈ ಕೋಟೆಯಲ್ಲಿ ಆಕರ್ಷಕವಾಗಿ ಕೆತ್ತಲಾದ ಕಾಡಸಿದ್ಧೇಶ್ವರನ ದೇವಾಲಯವಿದೆ.

ಕಿತ್ತೂರು:

ಕಿತ್ತೂರು:

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ಧಾರವಾಡದಿಂದ ಬೆಳಗಾವಿಗೆ ತೆರಳುವಾಗ ಸಿಗುವ ಕಿತ್ತೂರು ಪಟ್ಟಣವು ಅದನ್ನಾಳಿದ ವೀರ ನಾರಿ ಚೆನ್ನಮ್ಮನಿಂದಾಗಿ ಪ್ರಖ್ಯಾತವಾಗಿದೆ. 23/10/2012 ರಂದು ರಾಜ್ಯದ 177ನೇ ತಾಲೂಕಾಗಿ ಹೊರಹೊಮ್ಮಿದ ಕಿತ್ತೂರು ಪಟ್ಟಣವು ಒಂದು ಐತಿಹಾಸಿಕ ಮಹತ್ವವುಳ್ಳ ಪಟ್ಟಣವಾಗಿದೆ. ಮತ್ತೊಬ್ಬ ಕ್ರಾಂತಿಕಾರಿ ಯೋಧ ರಾಯಣ್ಣನ ಊರಾದ ಸಂಗೊಳ್ಳಿಯು ಕಿತ್ತೂರಿನ ಈಶಾನ್ಯ ದಿಕ್ಕಿಗೆ ಕೇವಲ 17 ಕಿ.ಮೀ ದೂರದಲ್ಲಿ ನೆಲೆಸಿದ್ದು ಸುಲಭವಾಗಿ ತಲುಪಬಹುದಾಗಿದೆ.

ನವೀಲುತೀರ್ಥ:

ನವೀಲುತೀರ್ಥ:

ಬೆಳಗಾವಿಯ ಪೂರ್ವ ದಿಕ್ಕಿಗೆ ಸುಮಾರು 84 ಕಿ.ಮೀಗಳ ಅಂತರದಲ್ಲಿ ನೆಲೆಗೊಂಡಿರುವ ನವೀಲುತೀರ್ಥ ಒಂದು ಸುಪ್ರಸಿದ್ಧ ಪಿಕ್ನಿಕ್ ತಾಣ. ಸವದತ್ತಿಗೆ ಅತಿ ಹತ್ತಿರದಲ್ಲಿರುವ ಈ ತಾಣವನ್ನು ಬೆಳಗಾವಿಯಿಂದ ಸವದತ್ತಿಗೆ ತೆರಳಿ ಸುಲಭವಾಗಿ ಅಲ್ಲಿಂದ ತಲುಪಬಹುದು.

ನವೀಲುತೀರ್ಥ:

ನವೀಲುತೀರ್ಥ:

1932 ರಲ್ಲಿ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಜಿಯವರು ಈ ತಾಣದಲ್ಲಿ ಧ್ಯಾನಿಸಿದ್ದರು ಎಂದು ಹೇಳಲಾಗಿದೆ. ಆಧ್ಯಾತ್ಮಿಕ ಹಾಗು ಯೋಗ ಸಾಧನೆಯಲ್ಲಿ ಅತಿ ಪ್ರಾವೀಣ್ಯತೆಯನ್ನು ಪಡೆದ್ದಿದ್ದ ಇವರು ದೇವಿಯ ಕೃಪೆಯಿಂದಾಗಿ ತಮ್ಮ 18 ನೇಯ ವಯಸ್ಸಿನಲ್ಲಿಯೆ ಕುಂಡಲಿನಿಯನ್ನು ಜಾಗೃತಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ನವೀಲುತೀರ್ಥ:

ನವೀಲುತೀರ್ಥ:

ಮಲಪ್ರಭಾ ನದಿ ತಟದಲ್ಲಿ ನೆಲೆಸಿರುವ ನವೀಲುತೀರ್ಥದಲ್ಲಿ ವಾಸಿಸುತ್ತ ಯೋಗಾಭ್ಯಾಸದಲ್ಲಿ ನಿರತರಾಗಿರುತ್ತಿದ್ದ ಇವರು ಇಲ್ಲಿಯೆ ಯೋಗದ ಕಡೆಯ ಹಂತ ಸಿದ್ಧಿಯನ್ನು ಪಡೆದಿದ್ದರು ಎನ್ನಲಾಗಿದೆ.

ಸೋಗಲ್:

ಸೋಗಲ್:

ಬೆಳಗಾವಿ ಜಿಲ್ಲೆಯ ನವೀಲುತೀರ್ಥದಿಂದ ಕೇವಲ 24 ಕಿ.ಮೀ ಪ್ರಯಾಣಿಸಿದಾಗ ಸಿಗುವ ಮತ್ತೊಂದು ಪ್ರವಾಸಿ ತಾಣವೆ ಸೋಗಲ್. ತನ್ನಲ್ಲಿರುವ ಜಲಪಾತದಿಂದಾಗಿ ಪ್ರಸಿದ್ಧವಾಗಿರುವ ಈ ತಾಣ ದಂತಕಥೆಯ ಪ್ರಕಾರ, ಶಿವಪಾರವತಿಯರು ವಿವಾಹವಾಗಿದ್ದರೆನ್ನಲಾದ ಕಲ್ಯಾಣ ಮಂಟಪವನ್ನು ಹೊಂದಿದೆ.

ಅಂಬೋಲಿ ಘಾಟ್ :

ಅಂಬೋಲಿ ಘಾಟ್ :

ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯಲ್ಲಿರುವ ಈ ಪ್ರಸಿದ್ಧ ಘಟ್ಟ ಪ್ರದೇಶವು ಬೆಳಗಾವಿಯ ವಾಯವ್ಯ ದಿಕ್ಕಿನಲ್ಲಿ ಸುಮಾರು 68 ಕಿ.ಮೀ ಗಳ ದೂರದಲ್ಲಿ ನೆಲೆಸಿದ್ದು ಸಾವಂತವಾಡಿ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದು.

ಅಂಬೋಲಿ ಘಾಟ್ :

ಅಂಬೋಲಿ ಘಾಟ್ :

ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಬರುವ ಈ ಪ್ರದೇಶವು ಒಂದು ಪ್ರಕೃತಿಸಹಜ ಸುಂದರ ತಾಣವಾಗಿದೆ. ಒಂದು ಬದಿ ಆಳವಾದ ಕಣಿವೆ ಇನ್ನೊಂದು ಬದಿ ಎತ್ತರಕ್ಕೆ ಚಾಚಿರುವ ಬೆಟ್ಟ ಅಲ್ಲಲ್ಲಿ ಕವಲೊಡೆದ ಪುಟ್ಟ ಪುಟ್ಟ ಜಲಪಾತಗಳು, ಮಳೆಗಾಲದಲ್ಲಿ ಇಲ್ಲಿನ ಸಹಜ ಹಾಗು ಮನಮೋಹಕ ಆಕರ್ಷಣೆಗಳು.

Read more about: belgaum ಬೆಳಗಾವಿ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more