Search
  • Follow NativePlanet
Share
» »ಗಮನ ಸೆಳೆವ ಬೆಂಗಳೂರಿನ ಆಕರ್ಷಣೆಗಳು

ಗಮನ ಸೆಳೆವ ಬೆಂಗಳೂರಿನ ಆಕರ್ಷಣೆಗಳು

By Vijay

ಕೇವಲ ಭಾರತ ದೇಶವನ್ನು ಬಿಟ್ಟು ಬಿಡಿ, ಇಡಿ ವಿಶ್ವದಲ್ಲೆ ಬಹುತೇಕ ಜನರು ಬೆಂಗಳೂರಿನ ಹೆಸರು ಕೇಳದೆ ಇರಲಿಕ್ಕಿಲ್ಲ. ಕಳೆದೆರಡ ದಶಕಗಳಲ್ಲಿ ಬೆಂಗಳೂರು ದೇಶದಲ್ಲೆ ಅತಿ ವೇಗವಾಗಿ ಬೆಳೆದು ಹೆಸರು ಮಾಡಿದ ಮಹಾನಗರವಾಗಿದೆ. ಇಲ್ಲಿನ ಮಾಹಿತಿ ತಂತ್ರಜ್ಞಾನ ವಲಯ ಹಾಗು ಇತರೆ ಕೈಗಾರಿಕೆಗಳು ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯಾವ ಭೇದ ಭಾವ ವಿಲ್ಲದೆ ಕೆಲಸ ದೊರಕಿಸಿಕೊಟ್ಟಿದೆಯಲ್ಲದೆ ಅವರ ಆನಂದಮಯ ಭವಿಷ್ಯಕ್ಕೂ ಕಾರಣವಾಗಿದೆ. ಅನೇಕ ಹೊಸತನಗಳನ್ನು ಮೈಗೂಡಿಸಿಕೊಂಡಿರುವ ಬೆಂಗಳೂರು ನಗರವು ಕರ್ನಾಟಕದ ರಾಜಧಾನಿಯಾಗಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ.

ಅತಿ ಹೆಮ್ಮೆಯಿಂದ ಹೇಳಬೇಕಾದ ಮತ್ತೊಂದು ವಿಷಯವೆಂದರೆ ಈ ಐಟಿ ಸಿಟಿಯಲ್ಲಿ ಅತ್ಯಧಿಕವಾಗಿ ಇಂಗ್ಲೀಷ್ ಭಾಷೆಯು ಬಳಸಲ್ಪಟ್ಟರೂ ಆಡಳಿತ ಭಾಷೆಯು ಕನ್ನಡವಾಗಿದೆ. ಆದರೆ ಇಲ್ಲಿನ ಹಲವು ಕನ್ನಡಿಗರೆ ಆಂಗ್ಲೀಕರಣದ ಪ್ರಭಾವಕ್ಕೊಳಗಾಗಿ ಹೆಚ್ಚು ಕಡಿಮೆ ಕನ್ನಡವನ್ನು ಮರೆತಿರುವುದು ದುರದೃಷ್ಟಕರ. ಇನ್ನು ಮುಂದಾದರೂ ನಮ್ಮವರು ಕಸ್ತೂರಿ ಕನ್ನಡದ ಸುವಾಸನೆಯನ್ನು ಅರಿತು ಬೆಂಗಳೂರು ನಗರವನ್ನು ನಿಜ ಅರ್ಥದಲ್ಲಿ "ನಮ್ಮ ಬೆಂಗಳೂರು" ಅನ್ನಾಗಿ ಮಾಡಬೇಕು. ಈ ವಿಷಯ ಇರಲಿ..ಮುಖ್ಯವಾಗಿ ಬೆಂಗಳೂರು ನಗರವು ತನ್ನಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಿಂದಾಗಿಯೂ ಪ್ರಖ್ಯಾತಿ ಪಡೆದಿದೆ. ಕರ್ನಾಟಕದ ಯಾವ ಮೂಲೆಯಿಂದಾದರೂ ಜನರು ಇಲ್ಲಿ ಬರಲಿ, ಇಲ್ಲಿನ ವಿಧಾನ ಸೌಧ, ಕಬ್ಬನ್ ಪಾರ್ಕ್, ಲಾಲ್ ಬಾಗ್ ನಂತಹ ಸ್ಥಳಗಳಿಗೆ ಭೇಟಿ ನೀಡದ ಹೊರತು ಮತ್ತೆ ತಮ್ಮೂರಿಗೆ ಮರಳಲಾರರು.

ಮೆಜೆಸ್ಟಿಕ್:

ಮೆಜೆಸ್ಟಿಕ್:

ಮೆಜೆಸ್ಟಿಕ್ ಬೆಂಗಳೂರು ನಗರದ ಹೃದಯ ಬಡಿತ ಎಂದರೆ ತಪ್ಪಾಗಲಾರದು. ಅತ್ಯಂತ ಜನಸಂದಣಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಎಲ್ಲ ರೀತಿಯ ವಸ್ತುಗಳು ಅತಿ ಕಡಿಮೆ ದರದಿಂದ ಹಿಡಿದು ದುಬಾರಿ ಮೊತ್ತದವರೆಗೂ
ಲಭಿಸುತ್ತವೆ. ಕೇಂದ್ರ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣಗಳು ಈ ಪ್ರದೇಶದಲ್ಲೆ ಇರುವುದರಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿರುತ್ತಾರೆ. ರಸ್ತೆ ಬದಿಯ ಪುಟ್ಟ ಚಹಾ ಅಂಗಡಿಯಿಂದ ಹಿಡಿದು ಪಂಚತಾರಾ ಸೌಲಭ್ಯವುಳ್ಳ ಹೋಟೆಲ್‍ಗಳು ಇಲ್ಲಿವೆ. ಬೆಂಗಳೂರಿನ ಸಂಸ್ಕೃತಿಯನ್ನು ಅತಿ ಹತ್ತಿರದಿಂದ ನೋಡ ಬಯಸಲು ಇಷ್ಟವಿದ್ದಲ್ಲಿ ಈ ಪ್ರದೇಶದಲ್ಲಿ ಒಮ್ಮೆ ಸುತ್ತಾಡಿದರೆ ಸಾಕು.

ಚಿತ್ರಕೃಪೆ: Amol.Gaitonde

ವಿಧಾನ ಸೌಧ:

ವಿಧಾನ ಸೌಧ:

ಅದ್ಭುತ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಈ ಭವ್ಯ ಕಟ್ಟಡವು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದೆ. 1952 ರಲ್ಲಿ ಪ್ರಾರಂಭವಾದ ಈ ಕ್ಜಟ್ಟಡದ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳಲು ನಾಲ್ಕು ವರ್ಷಗಳು ಬೇಕಾದವು. ರಾಜ್ಯದ ವಿಧಾನಸಭೆಯಾಗಿ ಕಾರ್ಯನಿರ್ವಹಿಸುವ ಈ ಕಟ್ಟಡಕ್ಕೆ ನಿತ್ಯ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮೆಜೆಸ್ಟಿಕ್ ಸ್ಥಳೀಯ ಬಸ್ಸು ನಿಲ್ದಾಣದಿಂದ ವಿಧಾನಸೌಧಕ್ಕೆ ಹಲವಾರು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Nikkul

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ವಿಧಾನ ಸೌಧದ ಪಕ್ಕದಲ್ಲೆ ಇರುವ ಕಬ್ಬನ್ ಉದ್ಯಾನ ನಗರದ ಹೃದಯ ಭಾಗದಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 300 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ಉದ್ಯಾನವು ಹಲವು ಗಿಡ ಮರಗಳಿಂದ ಸಂಪದ್ಭರಿತವಾಗಿದೆ. ವಾರಾಂತ್ಯದ ರಜೆಗಳಲ್ಲಿ ಪಿಕ್ನಿಕ್ ತಾಣವಾಗಿ ಬಳಸಲು ಈ ಉದ್ಯಾನ ಯೋಗ್ಯವಾಗಿದೆ. ಅಲ್ಲದೆ ಈ ಉದ್ಯಾನದಲ್ಲಿ ಹಲವು ಬ್ರಿಟೀಷ್ ಕಾಲದ ಅನನ್ಯ ಕಟ್ಟಡಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Augustus Binu

ಫ್ರೀಡಮ್ ಪಾರ್ಕ್:

ಫ್ರೀಡಮ್ ಪಾರ್ಕ್:

ಬೆಂಗಳೂರು ನಗರ ಕೇಂದ್ರ ಭಾಗದಲ್ಲಿ ಸ್ಥಿತವಿರುವ ಈ ಸ್ವಾತಂತ್ರ್ಯ ಉದ್ಯಾನವು ಒಂದೊಮ್ಮೆ ಕೇಂದ್ರ ಕಾರಾಗೃಹವಾಗಿತ್ತು. ನವಂಬರ್ 2008 ರಲ್ಲಿ ಸಾರ್ವಜನಿಕರಿಗೆ ಮುಕ್ತವಾದ ಈ ಉದ್ಯಾನದ ಒಂದು ಭಾಗವನ್ನು ಪ್ರತಿಭಟನೆಗಳನ್ನು ಆಯೋಜಿಸಲು ಅಥವಾ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗಾಂಧಿ ನಗರದ ಆನಂದರಾವ್ ವೃತ್ತದಿಂದ ಕೆ.ಆರ್ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಶೇಷಾದ್ರಿ ರಸ್ತೆಯ ಮೇಲೆ ಬಲಭಾಗದಲ್ಲಿ ಈ ಉದ್ಯಾನವನ್ನು ಕಾಣಬಹುದು.

ಚಿತ್ರಕೃಪೆ: Diham

ಲಾಲ್ ಬಾಗ್:

ಲಾಲ್ ಬಾಗ್:

ಹಿಂದಿಯಲ್ಲಿ ಲಾಲ್ ಬಾಗ್ ಎಂದರೆ ಕೆಂಪು ಉದ್ಯಾನ ಎಂದರ್ಥ. ಇದು ಬೆಂಗಳೂರಿಗರ ನೆಚ್ಚಿನ ಬೊಟಾನಿಕಲ್ ಉದ್ಯಾನವಾಗಿದೆ. ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿರುವ ಈ ಸಸ್ಯ ಕಾಶಿಯಲ್ಲಿ ವಿವಿಧ ಬಗೆಯ ಸಸ್ಯಗಳು, ಗಿಡ ಮರಗಳು ಹಾಗು ಕೃತಕ ಕೆರೆಯನ್ನು ನೋಡಬಹುದಾಗಿದೆ. ಪುಷ್ಪ ಉತ್ಸವ, ಆರ್ಕಿಡ್ ಉತ್ಸವ ಮುಂತಾದ ವಿವಿಧ ಉತ್ಸವಗಳನ್ನು ವಾರ್ಷಿಕವಾಗಿ ಈ ಸಸ್ಯ ತೋಟದಲ್ಲಿ ಆಯೋಜಿಸಲಾಗುತ್ತಿರುತ್ತದೆ. ನಿಗದಿತ ಸಮಯದಲ್ಲಿ ತೆರೆದಿರುವ ಈ ಉದ್ಯಾನಕ್ಕೆ ವಿಹಾರಾರ್ಥವಾಗಿಯೂ ಸಾಕಷ್ಟು ಜನ ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನ ರಭಸಮಯ ಜೀವನದಲ್ಲಿ ಕೊಂಚ ಹೊತ್ತು ವಿರಾಮ ಪಡೆಯಲು ಇದು ಪ್ರಶಸ್ತವಾದ ಸ್ಥಳವಾಗಿದೆ.

ಚಿತ್ರಕೃಪೆ: Vilkokriznar

ಬೆಂಗಳೂರು ಅರಮನೆ:

ಬೆಂಗಳೂರು ಅರಮನೆ:

ಪ್ರಸ್ತುತ ಸೆಂಟ್ರಲ್ ಕಾಲೇಜ್ ಅಥವಾ ಹಿಂದಿನ ಸೆಂಟ್ರಲ್ ಹೈಸ್ಕೂಲಿನ ಪ್ರಥಮ ಪ್ರಾಚಾರ್ಯರಾಗಿದ್ದ ರೆವ್. ಗಾರೆಟ್ ಅವರಿಂದ ಈ ಕಟ್ಟಡ ನಿರ್ಮಾಣವಾಗಿದೆ. 1862 ರಲ್ಲೆ ಇದರ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಿದ್ದು ಪೂರ್ಣಗೊಂಡಿದ್ದು 1944 ರಲ್ಲಿ. 1884 ರಲ್ಲಿ ಅಂದಿನ ಮೈಸೂರು ಮಹಾರಾಜರು ಈ ಅರಮನೆಯನ್ನು ಕೊಂಡುಕೊಂಡರು. ಹಲವಾರು ಸಾಂಸ್ಕೃತಿಕ, ಮನರಂಜನೆಯ ಕಾರ್ಯಕ್ರಮಗಳನ್ನು ಇದರ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತಿರುತ್ತದೆ.

ಚಿತ್ರಕೃಪೆ: SMit224

ಫೋರಮ್:

ಫೋರಮ್:

ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯಲ್ಲಿದೆ ಈ ಪ್ರಖ್ಯಾತ ಶಾಪಿಂಗ್ ಮಾಲ್. ವಾರಾಂತ್ಯದ ರಜಾ ದಿನಗಳಲ್ಲಿ ಜನರಿಂದ ಕಿಕ್ಕಿರಿದು ತುಂಬಿರುತ್ತದೆ ಈ ವಾಣಿಜ್ಯ ಸಂಕೀರ್ಣ. 12 ಪ್ರತ್ಯೇಕ ಪರದೆಗಳುಳ್ಳ ಪಿ.ವಿ.ಆರ್ ಚಿತ್ರಮಂದಿರ ಈ ಮಾಲ್ ನ ಪ್ರಮುಖ ಆಕರ್ಷಣೆ. ಅಲ್ಲದೆ ಹಲವು ಇತರೆ ಬ್ರ್ಯಾಂಡೆಡ್ ವಸ್ತುಗಳನ್ನು ಖರಿದಿಸಲೂ ಸಹ ಇಲ್ಲಿ ಮಳಿಗೆಗಳಿವೆ. ವಿವಿಧ ಬಗೆಯ ಪಾನೀಯಗಳು, ಕುರುಕಲು ತಿಂಡಿ ತಿನಿಸುಗಳೂ ಸಹ ಇಲ್ಲಿ ಲಭ್ಯವಿದೆ.

ಚಿತ್ರಕೃಪೆ: Augustus Binu

ಬಸವನಗುಡಿ:

ಬಸವನಗುಡಿ:

ಬೆಂಗಳೂರಿನ ಬುಲ್ ಟೆಂಪಲ್ ಅಥವಾ ಬಸವನಗುಡಿಯು ಧಾರ್ಮಿಕ ಆಕರ್ಷಣೆಯಾಗಿದೆ. ಪುಟ್ಟ ಗುಡ್ಡದ ಮೇಲಿರುವ ದೊಡ್ಡ ಬಸವನ ದೇವಸ್ಥಾನ, ದೊಡ್ಡ ಗಣಪತಿಯ ಏಕಶಿಲಾ ವಿಗ್ರಹ, ಬ್ಯೂಗಲ್ ರಾಕ್ ಉದ್ಯಾನ ಇಲ್ಲಿರುವ ಮನಸೂರೆಗೊಳ್ಳುವ ಪ್ರಮುಖ ಆಕರ್ಷಣೆಗಳು. ವಿಶೇಷವಾಗಿ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗುವ ಕಡಲೆಕಾಯಿ ಪರಿಶೆಗೆ ಈ ಪ್ರದೇಶವು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Sarvagnya

ರಾಗಿ ಗುಡ್ಡ:

ರಾಗಿ ಗುಡ್ಡ:

ರಾಗಿಗುಡ್ಡ ಪ್ರಖ್ಯಾತವಾಗಿರುವುದು, ಗುಡ್ಡದ ಮೇಲೆ ನೆಲೆಸಿರುವ ಆಂಜನೇಯಸ್ವಾಮಿ ದೇವಸ್ಥಾನದಿಂದಾಗಿ. ಈ ದೇವಸ್ಥಾನದ ಆವರಣದಲ್ಲಿ ಇತರೆ ದೇವ, ದೇವತೆಯರಿಗೆ ಮೀಸಲಾದ ದೇಗುಲಗಳನ್ನೂ ಕಾಣಬಹುದು. ಬೆಂಗಳೂರಿನ ಜಯನಗರ 9 ಬ್ಲಾಕಿನಲ್ಲಿ ನೆಲೆಸಿರುವ ಈ ದೇವಸ್ಥಾನಕ್ಕೆ ಅನೇಕ ಜನರು ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: dharmasagar.com

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ:

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ:

ಬೆಂಗಳೂರಿನ ಸುಪ್ರಸಿದ್ಧ ಕೆ.ಆರ್ ಮಾರುಕಟ್ಟೆ ಬಳಿಯಿರುವ ಕಲಾಸಿಪಾಳ್ಯಂ ಬಸ್ಸು ನಿಲ್ದಾಣದ ಹತ್ತಿರದಲ್ಲಿದೆ ಟಿಪ್ಪು ಸುಲ್ತಾನನ ಈ ಬೇಸಿಗೆ ಅರಮನೆ. ಇದರ ಬದಿಯಲ್ಲೆ ಕೋಟೆ ಶ್ರೀ ವೆಂಕಟರಮಣನ ದೇವಸ್ಥಾನವಿದ್ದು, ಬೆಂಗಳೂರು ಕೋಟೆಯೂ ಸಹ ಇದರ ಬಳಿಯಲ್ಲಿದೆ.

ಚಿತ್ರಕೃಪೆ: Pamri

ಗವಿ ಗಂಗಾಧರೇಶ್ವರ ದೇವಸ್ಥಾನ:

ಗವಿ ಗಂಗಾಧರೇಶ್ವರ ದೇವಸ್ಥಾನ:

ಇದೊಂದು ಪ್ರಸಿದ್ಧ ಪುರಾತನ ಗುಹಾಂತರ ದೇವಾಲಯವಾಗಿದ್ದು ನಗರದ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒಂದಾಗಿದೆ. ಭಾರತೀಯ ಬಂಡೆ ಕೆತ್ತನೆ ವಾಸ್ತು ಶಿಲ್ಪ ಶೈಲಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿರುತ್ತದೆ. ಮುಖ್ಯವಾಗಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಇಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಪ್ರಥಮ ರಶ್ಮಿಯು ಬಿಳುವುದರಿಂದ ಧಾರ್ಮಿಕವಾಗಿ ಅತ್ಯಂತ ಮಹತ್ವ ಪಡೆದ ದೇವಾಲಯ ಇದಾಗಿದೆ. ಈ ಸಂದರ್ಭದಲ್ಲಿ ಆ ನೋಟವನ್ನು ಕಣ್ಣಾರೆ ದರುಶಿಸಲು ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Pavithrah

ವಂಡರ್ ಲಾ:

ವಂಡರ್ ಲಾ:

ಬೆಂಗಳೂರಿನಲ್ಲಿದ್ದಾಗ ಹಾಗೆ ಮಜದಿಂದ ಕಾಲ ಕಳೆಯಬೇಕೆಂದು ಅನಿಸಿದ್ದಲ್ಲಿ ಭೇಟಿ ನೀಡಿ ಮನರಂಜನಾ ಉದ್ಯಾನ ಅಥವಾ ಅಮ್ಯೂಸ್‍ಮೆಂಟ್ ಪಾರ್ಕ್ ವಂಡರ್ ಲಾ ಗೆ. ವಿವಿಧ ಆಸಕ್ತಿಭರಿತ ಮನರಂಜನಾ ಚಟುವಟಿಕೆಗಳನ್ನು ಇಲ್ಲಿ ಅಸ್ವಾದಿಸಬಹುದಾಗಿದೆ. ಮಕ್ಕಳಿರಲಿ, ಹಿರಿಯರಿರಲಿ ಎಲ್ಲರಿಗೂ ಮೆಚ್ಚುಗೆಯಾಗುವ ಉದ್ಯಾನ ಇದಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ, ಬೆಂಗಳೂರಿನಿಂದ ಸುಮಾರು 25 ಕಿ.ಮೀ ದೂರದ ಬಿಡದಿ ಎಂಬಲ್ಲಿದೆ ಈ ಪ್ರಸಿದ್ಧ ಪಾರ್ಕ್.

ಚಿತ್ರಕೃಪೆ: Natesh Ramasamy

ಬನ್ನೇರುಘಟ್ಟ:

ಬನ್ನೇರುಘಟ್ಟ:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತೊಂದು ಆಸಕ್ತಿಭರಿತ, ಕುಟುಂಬ ಸಮೇತ ಪಿಕ್ನಿಕ್ ಗೆಂದು ತೆರಳಬಹುದಾದ ಪ್ರಸಿದ್ಧ ಉದ್ಯಾನ. ಇಲ್ಲಿರುವ ಹಲವು ಪ್ರಾಣಿಗಳನ್ನು ಅವುಗಳ ಸಹಜ ಸ್ಥಿತಿಯಲ್ಲೆ ನೋಡುವುದೆ ಒಂದು ಚೆಂದದ ಅನುಭವ ನೀಡುತ್ತದೆ. ವಿಶಾಲವಾಗಿ ಹರಡಿರುವ ಈ ಉದ್ಯಾನವನ್ನು ಸಂಪೂರ್ಣವಾಗಿ ಸವಿಯಲು ಅರ್ಧ ದಿನ ಬೇಕು. ಇನ್ನೂ ತುಸು ವಿಶ್ರಾಂತಿ ಬೇಕೆಂದಿದ್ದಲ್ಲಿ ಅಲ್ಲಲ್ಲಿ ತಂಪು ಪಾನೀಯ ಮಳಿಗೆಗಳು, ಕುರುಕಲು ತಿಂಡಿಗಳು ಲಭ್ಯವಿರುತ್ತದೆ.

ಚಿತ್ರಕೃಪೆ: Amol.Gaitonde

ಇಸ್ಕಾನ್ ದೇವಸ್ಥಾನ:

ಇಸ್ಕಾನ್ ದೇವಸ್ಥಾನ:

ಬೆಂಗಳೂರು ಉತ್ತರದ ರಾಜಾಜಿ ನಗರ ಪ್ರದೇಶದಲ್ಲಿರುವ ಕೃಷ್ಣ ಹಾಗು ರಾಧೆಯರ ಈ ದೇವಸ್ಥಾನವು ಒಂದು ಪ್ರಸಿದ್ಧ ದೇವಾಲಯವಾಗಿದೆ. ಜಗತ್ತಿನ ದೊಡ್ಡ ಇಸ್ಕಾನ್ ದೇವಸ್ಥಾನಗಳ ಪೈಕಿ ಇದೂ ಒಂದಾಗಿದೆ. ವೇದ ಸಂಸ್ಕೃತಿ ಹಾಗು ಆಧ್ಯಾತಿಕ ಜೀವನವನ್ನು ಪಸರಿಸುವ ಉದ್ದೇಶದಿಂದ ಈ ದೇವಾಲಯವನ್ನು 1997 ರಲ್ಲಿ ಉದ್ಘಾಟಿಸಲಾಯಿತು. ಪ್ರತಿನಿತ್ಯ ಹಲವಾರು ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Svpdasa

ಹೆಸರುಘಟ್ಟ ಕೆರೆ:

ಹೆಸರುಘಟ್ಟ ಕೆರೆ:

ಬೆಂಗಳೂರಿನ ವಾಯವ್ಯ ದಿಕ್ಕಿಗೆ ಸುಮಾರು 18 ಕಿ.ಮೀ ದೂರದಲ್ಲಿದೆ ಈ ಕೃತಕ ಕೆರೆ. ಇದೊಂದು ಉತ್ತಮ ಪಿಕ್ನಿಕ್ ತಾಣವಾಗಿದೆ. ನಗರದ ಗೌಜು ಗದ್ದಲಗಳಿಂದ ದೂರವಿರುವ ಈ ತಾಣವು ಮನಸ್ಸಿಗೆ ಆಹ್ಲಾದಕರ ಭಾವನೆಯನ್ನುಂಟು ಮಾಡುತ್ತದೆ.

ಚಿತ್ರಕೃಪೆ: Nikkul

ದೊಡ್ಡ ಆಲದ ಮರ:

ದೊಡ್ಡ ಆಲದ ಮರ:

ಸುಮಾರು 400 ವರ್ಷಕ್ಕೂ ಅಧಿಕವಾಗಿ ಹಳೆಯದಾದ ದೊಡ್ಡ ಆಲದ ಮರವು ಬೆಂಗಳೂರು ನಗರ ಹೊರವಲಯದ ಮತ್ತೊಂದು ಪ್ರಮುಖ ಆಕರ್ಷಣೆ. ಈ ಕೇವಲ ಒಂದು ಮರವು ಮೂರು ಎಕರೆಯಷ್ಟು ವಿಶಾಲವಾಗಿ ವ್ಯಾಪಿಸಿದೆ. ಸುಮಾರು ಸಾವಿರಕ್ಕೂ ಅಧಿಕ ಜೋತು ಬಿದ್ದ ಬೇರುಗಳನ್ನು ಇದಕ್ಕೆ ಕಾಣಬಹುದು. ಇದರ ಆವರಣದಲ್ಲಿ ಪುಟ್ಟ ದೇವಸ್ಥಾನವೊಂದೂ ಸಹ ಇದೆ. 2000 ರಲ್ಲಿ ಈ ಮರದ ಮುಖ್ಯ ಬೇರು ರೋಗದಿಂದ ನಾಶ ಹೊಂದಿದ್ದು ಪ್ರಸ್ತುತ ಈ ಮರವು ಒಂದೆ ಎನ್ನಿಸಲಾರದೆ ಹಲವು ಮರಗಳಿರುವಂತೆ ಭಾಸವಾಗುತ್ತದೆ.

ಚಿತ್ರಕೃಪೆ: Kiran Gopi

ಚೌಡಯ್ಯ ಮೆಮೋರಿಯಲ್ ಹಾಲ್:

ಚೌಡಯ್ಯ ಮೆಮೋರಿಯಲ್ ಹಾಲ್:

ಚೌಡಯ್ಯ ಸ್ಮಾರಕ ಸಭಾಂಗಣವು ಬೆಂಗಳೂರಿನ ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಪ್ರದೇಶದಲ್ಲಿರುವ ಈ ಸಭಾಂಗಣದಲ್ಲಿ ವಿವಿಧ ಸಂಗೀತ ಕಾರ್ಯಕ್ರಮಗಳು, ನಾಟಕ ಪ್ರದರ್ಶನಗಳು ಜರುಗುತ್ತಿರುತ್ತವೆ.

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಮಲ್ಲೇಶ್ವರಂನ 18 ನೆಯ ಕ್ರಾಸಿನಲ್ಲಿದೆ ಈ ಭವ್ಯ ಕೃತಕ ಕೆರೆ. ಈ ಕೆರೆಯು 37.1 ಎಕರೆಯಷ್ಟು ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿದೆ. ಒಂದು ಬದಿಯಲ್ಲಿ ಪಾದಚಾರಿ ಮಾರ್ಗವಿದ್ದು ಸುತ್ತಲೂ ಹೂವಿನ ಸಸ್ಯಗಳು ಹಾಗು ಗಿಡ ಮರಗಳಿಂದ ಕಂಗೊಳಿಸುತ್ತದೆ. ಮಕ್ಕಳಿಗೆಂದು ಪುಟ್ಟ ಆಟೋಪಕರಣಗಳ ಮೈದಾನವೂ ಇದೆ. ಸಂಜೆಯ ಸಮಯವನ್ನು ಆನಂದಮಯವಾಗಿ ಕಳೆಯಬಹುದಿಲ್ಲಿ.

ಚಿತ್ರಕೃಪೆ: Ramakrishna Reddy

ಕಂಠೀರವ ಒಳಾಂಗಣ ಕ್ರೀಡಾಂಗಣ:

ಕಂಠೀರವ ಒಳಾಂಗಣ ಕ್ರೀಡಾಂಗಣ:

ಕ್ರೀಡೋತ್ಸಾಹಿಗಳು ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ಒಂದು ಪ್ರಮುಖ ಒಳಾಂಗಣ ಕ್ರೀಡಾಂಗಣ ಇದಾಗಿದೆ. ಒಂದೊಮ್ಮೆ ಈ ಸ್ಥಳದಲ್ಲಿ ಸಂಪಂಗಿ ಕೆರೆಯಿತ್ತು. ಇಂದು ಇದು ಕ್ರೀಡಾ ಸಂಕೀರ್ಣವಾಗಿ ಮಾರ್ಪಟ್ಟಿದೆ. ಸುಮಾರು 4000 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ಈ ಕ್ರೀಡಾಂಗಣಕ್ಕೆ ಒಟ್ಟು 8 ಪ್ರವೇಶ ದ್ವಾರಗಳಿದ್ದು ಅವುಗಳಲ್ಲಿ ಐದು ಸಾರ್ವಜನಿಕರಿಗೆ, ಒಂದು ವಿವಿಐಪಿಗಳಿಗೆ, ಒಂದು ಕ್ರೀಡಾಪಟುಗಳಿಗೆ ಹಾಗು ಒಂದನ್ನು ಕ್ರೀಡಾಂಗಣದ ಅಧಿಕಾರಿಗಳಿಗೆ ಮೀಸಲಿಡಲಾಗಿದೆ.

ಚಿತ್ರಕೃಪೆ: Sanyambahga

ಹಾಲ್ ಏರೋಸ್ಪೇಸ್ ಮ್ಯೂಸಿಯಂ:

ಹಾಲ್ ಏರೋಸ್ಪೇಸ್ ಮ್ಯೂಸಿಯಂ:

ಈ ವೈಮಾನಿಕ (ಏರೋಸ್ಪೇಸ್) ಸಂಗ್ರಹಾಲಯವು ಭಾರತದ ಪ್ರಥಮ ಈ ರೀತಿಯ ಸಂಗ್ರಹಾಲಯವಾಗಿದ್ದು ಬೆಂಗಳೂರಿನ ಹೆಚ್.ಎ.ಎಲ್ ಆವರಣದಲ್ಲಿ ಸ್ಥಿತವಿದೆ. 2001 ರಲ್ಲಿ ಸ್ಥಾಪನೆಯಾದ ಈ ಮ್ಯೂಸಿಯಂ, ಭಾರತದ ವೈಮಾನಿಕ ಉದ್ಯಮವು ಕಳೆದ ಆರು ದಶಕಗಳಲ್ಲಿ ಬೆಳೆದು ಬಂದ ರೀತಿಯನ್ನು ಸಮರ್ಥವಾಗಿ ಪ್ರದರ್ಶಿಸುತ್ತದೆ.

ಚಿತ್ರಕೃಪೆ: Arunram

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+