
ಮನುಷ್ಯ ತನ್ನ ಜೀವನದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾನೆ ಹಾಗು ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾನೆ. ಸ್ವಲ್ಪ ಸಮಯ ಸಿಕ್ಕರೆ ತನ್ನ ಮನಸ್ಸನ್ನು ವಿಶ್ರಾಂತಿಗೆ ತಳ್ಳಲು ಪ್ರಯತ್ನಿಸುತ್ತಾನೆ. ಇನ್ನು ರಜೆ ಸಿಕ್ಕರೆ ಸಾಕು. ತನ್ನ ಕುಟುಂಬದ ಜೊತೆ ಸೇರಿ ಎಲ್ಲಾದರೂ ಹೊರಗಡೆ ಹೋಗಬೇಕೆಂದುಕೊಳ್ಳುತ್ತಾನೆ. ಅದರಲ್ಲೂ ನೀರಿನ ಜಾಗಗಳೆಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ ?
ಈಗ ನಾವು ಹೇಳ ಹೊರಟಿರುವುದು ಹೈದರಾಬಾದ್ ಸುತ್ತಮುತ್ತಲಿನ ಸುಂದರವಾದ ಸರೋವರಗಳ ಬಗ್ಗೆ. ಏಕೆಂದರೆ ನಾವು ವೀಕೆಂಡ್ ಬಂತೆಂದರೆ ಮನಸ್ಸಿನ ಪ್ರಶಾಂತತೆಗೆ ಹತ್ತಿರವಿರುವ ಸರೋವರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಇಲ್ಲಿ ತಿಳಿಸಿರುವ ಹೈದರಾಬಾದ್ ನ ನಯನಮನೋಹರವಾದ ಕಡಲತೀರಗಳ ಬಗೆಗಿನ ಮಾಹಿತಿ ನಿಮಗೆ ಉಪಯೋಗವಾಗಬಹುದು.ಮತ್ತು ನಿಮ್ಮ ಮನೆಯವರ ಜೊತೆ ಅಥವಾ ನಿಮ್ಮ ಗೆಳೆಯರ ಜೊತೆ ಪ್ರವಾಸ ಕೈಗೊಳ್ಳಲು ಸಹಾಯಕವಾಗುತ್ತದೆ.

ವೊಡರೆವು ಬೀಚ್
ಹೈದರಾಬಾದ್ ನ ಎಲ್ಲ ಬೀಚ್ ಗೆ ಹೋಲಿಸಿದರೆ ವೊಡರೆವು ಬೀಚ್ ಒಂದು ಸುಂದರ ಕಡಲತೀರವಾಗಿದೆ. ಇದು ಚಿರಾಲ ಪ್ರದೇಶಕ್ಕೆ ಹತ್ತಿರವಾಗಿದೆ. ಮನಸ್ಸಿಗೆ ವಿಶ್ರಾಂತಿ ಮತ್ತು ನವ ಉಲ್ಲಾಸ ಕೊಡುತ್ತದೆ. ಏಕೆಂದರೆ ಅಲ್ಲಿನ ಪರಿಸರವೇ ಹಾಗಿದೆ. ಸುತ್ತಮುತ್ತ ಇರುವ ತೆಂಗಿನ ಮರಗಳು, ಚಿನ್ನದ ಬಣ್ಣದ ಮರಳಿನ ಹಾಸಿಗೆ, ಪಕ್ಕದಲ್ಲೇ ಕೇಳಿಬರುವ ಕಿವಿಗೆ ಇಂಪು ಕೊಡುವ ಸಮುದ್ರದ ಅಲೆಗಳ ಗಾಯನ ಮತ್ತು ನರ್ತನ, ಒಳ್ಳೆಯ ಗಾಳಿ, ಬೀಚಿನ ಎದುರುಗಡೆಯೇ ಇರುವ ಲೈಟ್ ಹೌಸ್ ಇನ್ನೂ ಅನೇಕ ವಿಧದ ಮನಸ್ಸಿಗೆ ಖುಷಿ ಕೊಡುವ ವಾತಾವರಣವಿದೆ. ಅದರಲ್ಲೂ ಲೈಟ್ ಹೌಸ್ ನ ಮೇಲೆ ಕುಳಿತು ಸಮುದ್ರದ ಸೌಂದರ್ಯ ಸವಿಯುತ್ತಿದ್ದರೆ ಅದರ ಮಜವೇ ಬೇರೆ.
ಹೈದರಾಬಾದ್ ನಿಂದ ವೊಡರೆವು ಬೀಚ್ ಇರುವ ದೂರ :305 ಕಿ.ಮೀ. ಈಜುವುದು , ಫಿಶಿಂಗ್ ಮಾಡುವುದು , ಕುಟುಂಬದ ಒಟ್ಟಿಗೆ ಬೋಟಿಂಗ್ ಹೋಗಬಹುದು,ಲೈಟ್ ಹೌಸ್ ನ ಮೇಲೆ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ಸೂರ್ಯಲಂಕ ಬೀಚ್
ಸೂರ್ಯಲಂಕ ಬೀಚ್ ಹೈದರಾಬಾದ್ ನಲ್ಲಿನ ಸದಾ ಜನನಿಬಿಡ ಬೀಚ್ ಎಂದು ಪ್ರಸಿದ್ದಿ ಪಡೆದಿದೆ. ಹೈದರಾಬಾದ್ ನಿಂದ ಕೇವಲ 300 ಕಿ.ಮೀ. ದೂರವಿರುವ ಈ ಬೀಚ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅತ್ಯಂತ ಅಗಲವಾದ ಕಡಲ ಕಿನಾರೆ ಅಲ್ಲೇ ನಿಂತು ಬಂಗಾಳ ಕೊಲ್ಲಿಯನ್ನು ನೋಡುವ ಅವಕಾಶದಿಂದ ಇದನ್ನು ಬಪಟ್ಲಾ ಬೀಚ್ ಎಂದೂ ಕರೆಯುತ್ತಾರೆ. ಅಷ್ಟೇ ಅಲ್ಲದೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬರುವ ಪ್ರವಾಸಿಗರಿಗಂತೂ ಒಂದು ಒಳ್ಳೆಯ ಅನುಭವವೇ ಆಗುತ್ತದೆ . ಏನೆಂದರೆ ಆ ಸಮಯದಲ್ಲಿ ಇಲ್ಲಿ ಡಾಲ್ಫಿನ್ ಗಳು ಹೆಚ್ಚಾಗಿ ಕಂಡುಬರುತ್ತವೆ .ಇದರಿಂದ ಬೀಚ್ ಗೆ ಬರುವವರ ಖುಷಿ ಇಮ್ಮಡಿಗೊಳ್ಳುತ್ತದೆ.ವಾರದ ರಜೆ ಶನಿವಾರ ಭಾನುವಾರ ಬಂತೆಂದರೆ ಇಲ್ಲಿ ಎಲ್ಲಕಡೆಯಿಂದಲೂ ಜನರು ಬಂದು ವಿಸ್ಮಯವಾದ ಸೂರ್ಯೋದಯದ ಅದ್ಬುತ ಕ್ಷಣಗಳನ್ನು ಸವಿದು ಅಲ್ಲೇ ಇದ್ದು ಸನ್ ಬಾತ್ ಮಾಡಿ ತಮ್ಮ ವಿಶ್ರಾಂತಿ ಸಮಯವನ್ನು ಬಹಳ ಆನಂದದಿಂದ ಕಳೆಯುತ್ತಾರೆ.
ಹೈದರಾಬಾದ್ ನಿಂದ ಸೂರ್ಯಲಂಕ ಬೀಚ್ ಇರುವ ದೂರ :319 ಕಿ.ಮೀ. ಈಜುವುದು ,ಡಾಲ್ಫಿನ್ ಗಳನ್ನು ಕಾಣುವುದು ಇಲ್ಲಿನ ವಿಶೇಷ.

ಮಚಿಲಿಪಟ್ನಾಂ ಬೀಚ್
ಮಚಿಲಿಪಟ್ನಾಂ ಬೀಚ್ ಹೈದೆರಾಬಾದ್ ನ ಇನ್ನೊಂದು ಸುಂದರವಾದ ಕಡಲ ತೀರವಾಗಿದೆ.ತನ್ನ ಸುತ್ತಲೂ ಎತ್ತ ಕಣ್ಣು ಹಾಯಿಸಿದರೂ ತೆಂಗಿನ ತೋಟಗಳನ್ನೇ ಹೊಂದಿರುವ ಈ ಕಡಲು ತನ್ನ ಸೌಂದರ್ಯ ದಿಂದ ನೋಡುಗರ ಕಣ್ಮನಗಳನ್ನು ತಣಿಸುತ್ತದೆ. ಕೃಷ್ಣ ಡೆಲ್ಟಾ ದ ಹತ್ತಿರವೇ ಇರುವ ಈ ಬೀಚ್ ಸಮುದ್ರವೀಕ್ಷಣೆಗೆಂದೇ ಪ್ರವಾಸಿಗರಿಗಾಗಿ ನಿರ್ಮಿತವಾದ ವೀಕ್ಷಣಾ ಸ್ಥಳಗಳನ್ನು ಹೊಂದಿದೆ. ಇದರಿಂದ ಪ್ರವಾಸಿಗರನ್ನು ಮತ್ತು ಸ್ಥಳೀಯರನ್ನು ತನ್ನತ್ತ ಹೆಚ್ಚು ಆಕರ್ಷಣೆ ಮಾಡುವಲ್ಲಿ ಸಫಲತೆಯನ್ನು ಕಂಡಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಬಿರು ಬೇಸಿಗೆಯಲ್ಲಿ ದೇಹಕ್ಕೆ ಒಂದು ತಂಪಾದ ಅನುಭವ ಬೇಕೆಂದರೆ ಒಮ್ಮೆ ಮಚಿಲಿಪಟ್ನಾಂ ಬೀಚ್‌ಗೆ ಭೇಟಿ ಕೊಡಿ.
ಹೈದರಾಬಾದ್ ನಿಂದ ಮಚಿಲಿಪಟ್ನಾಂ ಬೀಚ್ ಇರುವ ದೂರ :340 ಕಿ.ಮೀ. ಕುಟುಂಬದ ಜೊತೆಗೆ ಬೋಟಿಂಗ್ ನಲ್ಲಿ ಪ್ರಕೃತಿ ಸೌಂದರ್ಯವನ್ನು ಚೆನ್ನಾಗಿ ಸವಿಯಬಹುದು.

ಮಂಗಿನಪುಡಿ ಬೀಚ್
ಮಂಗಿನಪುಡಿ ಬೀಚ್ ಮಚಿಲಿಪಾಟ್ನಮ್ ನ ಹತ್ತಿರವೇ ಇದೆ. ನಗರದ ದಿನನಿತ್ಯದ ರಗಳೆಗಳಲ್ಲಿ ತೊಳಲಾಡುತ್ತಿರುವ ಜನರಿಗೆ ಅವರ ಮನಸ್ಸಿನ ದ್ವಂದ್ವಗಳನ್ನು ನಿವಾರಿಸುವ ಸ್ವರ್ಗ ಎಂದರೆ ತಪ್ಪಾಗಲಾರದು. ಬ್ರಿಟೀಷರ ಕಾಲದಲ್ಲಿ ಅವರ ವ್ಯಾಪಾರಕ್ಕಾಗಿ ಇದನ್ನು ಬಂದರು ಪ್ರದೇಶವನ್ನಾಗಿ ಪರಿವರ್ತಿಸಿದ್ದರು. ಕಪ್ಪು ಮರಳು ಮತ್ತು ಆಳವೇ ಇಲ್ಲದ ಈ ಸರೋವರ ಈಜುಗಾರರಿಗಂತೂ ಒಂದು ಹೊಚ್ಚ ಹೊಸ ಅನುಭವ ಉಂಟುಮಾಡುತ್ತದೆ. ಇಲ್ಲಿ ಸಮುದ್ರಾಹಾರಕ್ಕಾಗಿ ಶೋಧ ನಡೆಸುವವರೂ ಉಂಟು. ಇದರ ಜೊತೆಗೆ ಹತ್ತಿರದಲ್ಲೇ ದತ್ತಾಶ್ರಮ ಮತ್ತು ಪಾಂಡುರಂಗ ಸ್ವಾಮಿ ದೇವಸ್ಥಾನವಿರುವುದರಿಂದ ಮಂಗಿನಪುಡಿ ಸರೋವರಕ್ಕೆ ಇನ್ನಷ್ಟು ಮೆರಗು ಬಂದು ಒಳ್ಳೆಯ ಪ್ರಸಿದ್ದಿ ಪಡೆದಿದೆ .
ಹೈದರಾಬಾದ್ ನಿಂದ ಮಂಗಿನಪುಡಿ ಬೀಚ್ ಇರುವ ದೂರ :350 ಕಿ.ಮೀ. ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಈ ಸಮುದ್ರದ ತೀರದಲ್ಲಿ ನಡೆಯುವ ಪ್ರಸಿದ್ದವಾದ ಕೃಷ್ಣ ಉತ್ಸವವನ್ನು ಇಲ್ಲಿ ಬಂದು ನೋಡಿಯೇ ಕಣ್ತುಂಬಿಕೊಳ್ಳಬೇಕು.ಅಷ್ಟು ಚೆನ್ನಾಗಿರುತ್ತದೆ.

ಯಾನಮ್ ಬೀಚ್
ಸುಪ್ರಸಿದ್ದ ಗೋದಾವರಿ ಮತ್ತು ಕೋರಿಂಗ ನದಿಗಳ ಹತ್ತಿರವಿರುವ ಸ್ಥಳವೇ ಈ ಯಾಣ ಬೀಚ್.ಇದನ್ನು ರಾಜೀವ್ ಗಾಂಧಿ ಬೀಚ್ ಎಂದೂ ಕರೆಯುತ್ತಾರೆ. ಕಡಿಮೆ ಜನಜಂಗುಳಿ ಹೊಂದಿರುವ , ಯಾವಾಗಲೂ ಹೊಳಪಿನ ನೀಲಿ ಬಣ್ಣದ ನೀರು ಹೊಂದಿರುವ ಮತ್ತು ನೋಡುಗರನ್ನೇ ಬೆರಗುಗೊಳಿಸುವಂಥಹ ಸೌಂದರ್ಯ ಈ ಸರೋವರದ ವೈಶಿಷ್ಟ್ಯಗಳು.ಸಮುದ್ರದ ಮುಂಭಾಗವಂತೂ ನೋಡಲು ಬಹಳ ಚೆನ್ನಾಗಿದೆ. ಅಲ್ಲಲ್ಲಿ ಕುಟುಂಬದ ಜೊತೆ ಕುಳಿತು ಹರಟೆ ಹೊಡೆಯಲು ಆಸನಗಳ ವ್ಯವಸ್ಥೆ ಕೂಡ ಇದೆ.ಇದರ ಜೊತೆಯಲ್ಲಿ ಜೀಸಸ್ ಕ್ರೈಸ್ಟ್ , ನಮ್ಮ ಭಾರತ ಮಾತೆ ಮತ್ತು ಶಿವನ ಪ್ರತಿಮೆಗಳು ತಲೆಯೆತ್ತಿವೆ . ಅದರಲ್ಲೂ ಎರಡು ಆನೆಗಳು ಶಿವಲಿಂಗದ ಮೇಲೆ ನೀರು ಸುರಿಯುವಂತೆ ಮಾಡಿರುವ ಪ್ರತಿಮೆಯಂತೂ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ.ಒಟ್ಟಿನಲ್ಲಿ ನಿಮ್ಮ ಇಡೀ ಕುಟುಂಬಕ್ಕೆ ರಜೆಯಲ್ಲಿ ಮನಸ್ಸಿಗೆ ಒಳ್ಳೆಯ ಮುದ ಕೊಡುವ ಜಾಗ ಇದಾಗಿದೆ.
ಹೈದರಾಬಾದ್ ನಿಂದ ಯಾನಮ್ ಬೀಚ್ ಇರುವ ದೂರ :403 ಕಿ.ಮೀ. ಬೋಟಿಂಗ್ ಮತ್ತು ಕುಟುಂಬದ ಒಟ್ಟುಗೂಡಿ ಖುಷಿಯಿಂದ ಅಡ್ಡಾಡುವುದು.

ಕಾಕಿನಾಡ ಬೀಚ್
ನಿಮ್ಮ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ , ನಿಮ್ಮ ಸುತ್ತ ಮುತ್ತ ಒಳ್ಳೆಯ ಪ್ರಶಾಂತತೆಯ ವಾತಾವರಣ ಮತ್ತು ನಿಮ್ಮನ್ನು ಬೆರಗುಗೊಳಿಸುವಂತಹ ಪರಿಸರ ಬೇಕೆಂದು ನೀವು ಇಷ್ಟಪಡುತ್ತಿದ್ದರೆ , ಕಾಕಿನಾಡ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ.ಅದ್ಭುತವಾದ ಮತ್ತು ಸ್ಥಳೀಯ ಸಮುದ್ರಾಹಾರದ ಭಕ್ಷ್ಯ ಭೋಜನ ಮತ್ತು ಸೂರ್ಯಾಸ್ತದ ಅದ್ಬುತ ಕ್ಷಣಗಳನ್ನು ಸವಿಯುವ ಸದಾವಕಾಶ ಇಲ್ಲಿ ನಿಮಗೆ ದೊರಕುವುದರಿಂದಲೇ ಇದು ಹೆದರಾಬಾದ್ ನ ಪ್ರಸಿದ್ಧ ಬೀಚು ಗಳ ಪಟ್ಟಿಗೆ ಸೇರಿದೆ. ಇದರ ಪಕ್ಕದಲ್ಲೇ ಇರುವ ಕೊರಿಂಗ ವನ್ಯಜೀವಿ ಧಾಮ, ಹೋಪ್ ದ್ವೀಪ, ಮತ್ತು ಗೋದಾವರಿ ಡೆಲ್ಟಾ ದ್ವೀಪಗಳು ಪ್ರವಾಸಿಗರಿಗೆ ಸಾಗರದ ಅಲೆಗಳ ಸದ್ದಿನ ಹಿತದ ಜೊತೆಗೆ ವನ್ಯಜೀವಿಗಳ ದರ್ಶನವನ್ನೂ ಒದಗಿಸುತ್ತದೆ.
ಹೈದರಾಬಾದ್ ನಿಂದ ಯಾನಮ್ ಬೀಚ್ ಇರುವ ದೂರ :486 ಕಿ.ಮೀ. ಸಮುದ್ರದ ತೀರದ ಸಮುದ್ರಾಹಾರದ ರಸದೌತಣ ಮತ್ತು ವಿಶಾಲವಾದ ಪ್ರದೇಶದಲ್ಲಿ ಕುಟುಂಬದ ಜೊತೆಗೂಡಿ ವಾಲಿಬಾಲ್ ಆಡಬಹುದು.

ಉಪ್ಪಾಡ ಬೀಚ್
ಉಪ್ಪಾಡ ಬೀಚ್ ನ ಬಗ್ಗೆ ಹೇಳಬೇಕೆಂದರೆ ಪಳಪಳನೆ ಹೊಳೆಯುವ ಬಿಳಿ ಬಣ್ಣದ ಮರಳಿನ ತೀರಗಳು,ಸದಾ ತಿಳಿಯಾದ ಸಮುದ್ರದ ನೀರು ಮತ್ತು ವಿಶಾಲವಾದ ಕಡಲ ಕಿನಾರೆ ಈ ಬೀಚಿನ ವಿಶೇಷ.ಸಮುದ್ರ ತೀರಕ್ಕೆ ಇಳಿಜಾರಿನಂತಿರುವ ಈ ಪ್ರದೇಶ ನೋಡುಗರ ಮನಸ್ಸಿಗೆ ಉಲ್ಲಾಸ ತುಂಬುತ್ತದೆ . ಇಲ್ಲಿ ಬರುವವರಿಗೆ ಈಜುವುದು , ಜಾಗಿಂಗ್ ಮಾಡುವುದು , ಕ್ರಿಕೆಟ್ ಮತ್ತು ಫುಟ್ಬಾಲ್ ನಂತಹ ಕ್ರೀಡೆಗಳಲ್ಲಿ ತೊಡಗುವುದಕ್ಕೆ ಈ ಬೀಚ್ ಬಹಳ ಸಹಕಾರಿಯಾಗಿದೆ. ಎಲ್ಲಾ ಮಾಡಿ ಸುಸ್ತಾಗಿರುವವರಿಗೆ ರುಚಿಯಾದ ಸ್ನಾಕ್ಸ್ ಕೂಡ ಲಭ್ಯವಿದೆ . ಒಟ್ಟಿನಲ್ಲಿ ಹೇಳಬೇಕೆಂದರೆ ಹೈದರಾಬಾದ್ ನಲ್ಲಿ ಇದೊಂದು ಆಫ್ಬೀಟ್ ಕಡಲ ಕಿನಾರೆ ಎಂದರೆ ತಪ್ಪಾಗಲಾರದು.
ಹೈದರಾಬಾದ್ ನಿಂದ ಉಪ್ಪಾಡ ಬೀಚ್ ಇರುವ ದೂರ :497 ಕಿ.ಮೀ. ಇಲ್ಲಿನ ಮೀನುಗಾರರ ಜೊತೆ ಸೇರಿ ನೀವೂ ಸಮುದ್ರದ ಆಳದ ಫಿಶಿಂಗ್ ನಲ್ಲಿ ಪಾಲ್ಗೊಳ್ಳಬಹುದು. ಈ ಹಳ್ಳಿಯ ಇನ್ನೊಂದು ವಿಶೇಷವೆಂದರೆ ಇಲ್ಲಿ ಬಟ್ಟೆ ನೇಯುವ ಕೆಲಸ ಯಾವಾಗಲೂ ನಡೆಯುತ್ತದೆ.

ಭೀಮುನಿಪಟ್ನಮ್ ಬೀಚ್
ಇದು ಹೈದರಾಬಾದ್ ನ ಹತ್ತಿರವಿದೆ ಮತ್ತು ಗೋಸ್ಥಾನಿ ನದಿಯ ಸಂಗಮದಿಂದ ಕೂಡಿದೆ. ಸದಾ ಝೇಂಕರಿಸುವ ಸಮುದ್ರದ ಅಲೆಗಳ ನಾದ ,ಆಳವಿಲ್ಲದ ನೀರು . ನಿಮ್ಮ ಸಂಗಾತಿಯ ಜೊತೆ ಬೆಳಗಿನ ವಿಹಾರಕ್ಕೆ ಇಲ್ಲಿಗೆ ಬಂದರೆ ಸಾಕು , ಮನೆಗೆ ಹೋಗಲಿಕ್ಕೆ ಮನಸ್ಸೇ ಬರುವುದಿಲ್ಲ . ಅಂತಹ ರೋಮ್ಯಾಂಟಿಕ್ ಆದ ಸ್ಥಳ ಇದು . ಆಳವಿಲ್ಲದಿರುವ ಕಾರಣ ಅಲ್ಲಲ್ಲಿ ನೀರಿನಲ್ಲಿ ಚೆಂಡಿನಾಟ ಆಡುವವರನ್ನು ಮತ್ತು ಈಜುವವರನ್ನು ನೋಡಲು ಬಳಿಯೇ ಇರುವ ಲೈಟ್ ಹೌಸ್ ಏರಿದರೆ ಸಾಕು, ಸಮುದ್ರದ ವಿಸ್ಮಯ ನಿಮ್ಮನ್ನು ಬೆರಗುಗೊಳಿಸುತ್ತದೆ.
ಹೈದರಾಬಾದ್ ನಿಂದ ಭೀಮುನಿಪಟ್ನಮ್ ಬೀಚ್ ಇರುವ ದೂರ :628 ಕಿ.ಮೀ. ವಾಟರ್-ಸ್ಕೀಯಿಂಗ್, ಸ್ನಾರ್ಕಲಿಂಗ್, ಸ್ಕೂಬಾ ಡೈವಿಂಗ್.

ಯಾರಾಡಾ ಬೀಚ್
ಒಂದು ಕಡೆ ಡಾಲ್ಫಿನ್ ಬೆಟ್ಟ ಮತ್ತೊಂದು ಕಡೆ ನೀಲಿ ಬಣ್ಣದ ವಜ್ರ ವೈಡೂರ್ಯದಂತೆ ಕಂಗೊಳಿಸುವ ಸಮುದ್ರದ ನೀರು ಜೊತೆಗೆ ಅಂಟಿಕೊಂಡಿರುವ ಸುವರ್ಣವರ್ಣದ ಮರಳಿನ ಕಡಲ ಕಿನಾರೆ ವಾಕಿಂಗ್ ಮತ್ತು ವೀಕೆಂಡ್ ಪಿಕ್ನಿಕ್ ಗೆ ಶ್ರೇಷ್ಠವಾದ ಸ್ಥಳ. ಇಲ್ಲಿನ ಕಡಲ ಕಿನಾರೆ ಸಮುದ್ರಕ್ಕೆ ಇಳಿಜಾರಿನಿಂದ ಕೂಡಿರುವುದರಿಂದ ಈ ಸರೋವರ ಈಜುಗಾರಿಕೆಗೆ ತರವಲ್ಲ . ಸುತ್ತಮುತ್ತ ಪ್ರಾಚೀನತೆಯನ್ನು ಹೊಂದಿರುವ ಈ ಸ್ಥಳ ಕಡಿಮೆ ಜನರಿಂದ ಕೂಡಿರುತ್ತದೆ ಮತ್ತು ಒಂಟಿಯಾಗಿ ಬರುವವರಿಗೆ ಹಾಗು ಹನಿಮೂನ್ ಗೆ ಬರುವವರಿಗೆ ತುಂಬಾ ಪ್ರಶಸ್ತವಾಗಿದೆ.
ಹೈದರಾಬಾದ್ ನಿಂದ ಯಾರಾಡಾ ಬೀಚ್ ಇರುವ ದೂರ :634 ಕಿ.ಮೀ. ಜನರಿಗೆ ಇಲ್ಲಿಂದ ಸಿಗುವ ಮನೋರಂಜನೆ : ಸೂರ್ಯನ ಎಳೆ ಬಿಸಿಲಿಗೆ ಮೈಒಡ್ಡುವುದು , ಲೈಟ್ ಹೌಸ್ ಮೇಲೇರಿ ಎಳೆನೀರು ಕುಡಿಯುತ್ತಾ ಮುಸುಕಿನ ಜೋಳ ತಿನ್ನುತ್ತಾ ಸರೋವರದ ಸೌಂದರ್ಯವನ್ನು ಸವಿಯಬಹುದು.

ಋಷಿಕೊಂಡ ಬೀಚ್
ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ಮತ್ತು ಹೈದರಾಬಾದ್ ನ ಮತ್ತೊಂದು ಪ್ರಸಿದ್ಧ ಸರೋವರವೇ ಈ ಋಷಿಕೊಂಡ ಬೀಚ್.ಹೆಸರೇ ಹೇಳುವಂತೆ ಇದು ಋಷಿಗಳ ನಾಡು ಎಂಬಂತೆ ಹಸಿರು ಪರಿಸರದಿಂದ ಸಮೃದ್ಧವಾಗಿ ಬೆಳೆದು ಸುಂದರವಾದ ಬೆಟ್ಟಗುಡ್ಡಗಳನ್ನು ದೊಡ್ಡದೊಡ್ಡ ಬಂಡೆಗಳನ್ನೂ ಹೊಂದಿರುವ ಈ ಪ್ರದೇಶ ಸದಾ ಆಹ್ಲಾದಕರ ವಾತಾವರಣವನ್ನು ಹೊಂದಿ ಮನಸ್ಸಿಗೆ ಬಹಳವೇ ನೆಮ್ಮದಿ ಕೊಡುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ವಾಟರ್ ಸ್ಪೋರ್ಟ್ಸ್ . ಇಡೀ ವರ್ಷ ಪ್ರವಾಸಿಗರನ್ನು ಇಲ್ಲಿಗೆ ಆಕರ್ಷಿಸಿ ತನ್ನ ಮೆರಗನ್ನು ತಾನೇ ಹೆಚ್ಚಿಸಿಕೊಂಡಿದೆ.ಇನ್ನೇಕೆ ತಡ ? ನಿಮ್ಮ ಲಗೇಜ್ ಸಮೇತ ಸನ್ ಗ್ಲಾಸ್ ತೆಗೆದುಕೊಂಡು ಸಮುದ್ರದ ದಡಕ್ಕೆ ದೌಡಾಯಿಸಿ. ನಿಮಗೆ ಮತ್ತು ನಿಮ್ಮ ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ ಎಂಬ ಆಶಯ ನಮ್ಮದು.
ಹೈದರಾಬಾದ್ ನಿಂದ ಋಷಿಕೊಂಡ ಬೀಚ್ ಇರುವ ದೂರ :648 ಕಿ.ಮೀ. ಸರ್ಫಿಂಗ್, ಸ್ಕೀಯಿಂಗ್ ಮತ್ತು ಬೀಚ್ ವಾಲಿಬಾಲ್.