Search
  • Follow NativePlanet
Share
» »ತಿರುವಂಚಿಕುಲಂ ಶಿವ ದೇವಾಲಯ

ತಿರುವಂಚಿಕುಲಂ ಶಿವ ದೇವಾಲಯ

ಕೇರಳದ ತ್ರಿಶ್ಶೂರ್ ಜಿಲ್ಲೆಯ ಕೊಡಂಗಲ್ಲೂರು ಬಳಿ ಇರುವ ತಿರುವಂಚಿಕುಲಂ ಎಂಬಲ್ಲಿರುವ ಮಹಾದೇವ ದೇವಾಲಯವು ಕೇರಳದಲ್ಲಿರುವ ಏಕೈಕ ಪಾಡಲ್ ಪೆಟ್ರ ಸ್ಥಳಂವಾಗಿ ಗಮನಸೆಳೆಯುತ್ತದೆ

By Vijay

ಪಾಡಲ್ ಪೆಟ್ರ ಸ್ಥಳಂ ಎಂಬ ಪದವನ್ನು ಎಂದಾದರೂ ಕೇಳಿದ್ದೀರಾ? ಇದು ದಿವ್ಯ ದೇಸಂ ಹಾಗೆಯೆ. ದಿವ್ಯ ದೇಸಂ ಎಂಬುದು ನಾರಾಯಣನ ಅಥವಾ ವಿಷ್ಣು ದೇವರು ಜಾಗೃತವಾಗಿ ನೆಲೆಸಿರುವ 108 ಪವಿತ್ರ ಕ್ಷೇತ್ರಗಳ ಪಟ್ಟಿಯಾಗಿದೆ. ಇದನ್ನು ಪಟ್ಟಿ ಮಾಡಿದವರು ತಮಿಳಿನ ಪುರಾತನ ಆಳ್ವ ಸಂತರು.

ಅದೇ ರೀತಿಯಾಗಿ ಶೈವ ನಯನಾರರೂ ಸಹ ಪುರಾತನ ತಮಿಳಿನ ಶಿವನ ಆರಾಧಕರು ಹಾಗೂ ಶಿವನಿಗೆ ಮುಡಿಪಾದ 275 ವಿವಿಧ ಪವಿತ್ರ ಸನ್ನಿಧಿಗಳನ್ನು ಪಟ್ಟಿ ಮಾಡಿದವರು. ಹೀಗೆ ಇವರು ಪಟ್ಟಿ ಮಾಡಿದ ಆ 275 ಶಿವ ಕ್ಷೇತ್ರಗಳನ್ನೆ ಪಾಡಲ್ ಪೆಟ್ರ ಸ್ಥಳಂ ಎಂದು ಕರೆಯುತ್ತಾರೆ. ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ದೇವಾಲಯವು ಪಾಡಲ್ ಪೆಟ್ರ ಸ್ಥಳಗಳಲ್ಲೊಂದಾಗಿರುವುದು ವಿಶೇಷ.

ತಿರುವಂಚಿಕುಲಂ ಶಿವ ದೇವಾಲಯ

ಚಿತ್ರಕೃಪೆ: Aruna

ಅಷ್ಟೆ ಅಲ್ಲ, ಈ ಶಿವ ದೇವಾಲಯವಿರುವುದು ಕೇರಳ ರಾಜ್ಯದಲ್ಲಿ. ಅಂದರೆ ಪಾಡಲ್ ಪೆಟ್ರ ಸ್ಥಳಗಳ ಪೈಕಿ ಕೇರಳ ರಾಜ್ಯದಲ್ಲಿರುವ ಏಕೈಕ ದೇವಾಲಯ ಇದಾಗಿದೆ. ಹಾಗಾಗಿ ಇದೊಂದು ವಿಶೇಷವಾದ ಶಿವನ ಪ್ರಭಾವವಿರುವ ದೇವಾಲಯವಾಗಿ ಗುರುತಿಸಿಕೊಂಡಿದೆ. ಚೇರರು ಆಳುತ್ತಿದ್ದ ಸಂದರ್ಭದಲ್ಲಿ ಅಂದರೆ ಸರಿ ಸುಮಾರು ಎಂಟನೇಯ ಶತಮಾನದಲ್ಲಿ ನಿರ್ಮಾಣವಾದ ದೇವಾಲಯ ಇದೆಂದು ಅಂದಾಜಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಕಂಡುಬರುವ ಅತಿ ಪುರಾತನ ಶಿವ ದೇವಾಲಯಗಳಲ್ಲಿ ಇದನ್ನೂ ಸಹ ಒಂದಾಗಿ ಪರಿಗಣಿಸಲಾಗಿದೆ. ಸಾಕಷ್ಟು ವಿಶೇಷತೆಯುಳ್ಳ ಈ ದೇವಾಲಯವು ಪ್ರತಿ ದಿನ ಬೆಳಿಗ್ಗೆ 4 ಘಂಟೆಯಿಂದ ಮಧ್ಯಾಹ್ನ12 ಘಂಟೆಯವರೆಗೂ, ಸಂಜೆ 4 ಘಂಟೆಯಿಂದ ರಾತ್ರಿ 8.30 ಘಂಟೆಯವರೆಗೂ ತೆರೆದಿರುತ್ತದೆ. ಉತ್ಸವದ ಸಂದರ್ಭದಲ್ಲಿ ಪೂರ್ತಿ ದಿನ ತೆಗೆದಿರುತ್ತದೆ.

ತಿರುವಂಚಿಕುಲಂ ಶಿವ ದೇವಾಲಯ

ಚಿತ್ರಕೃಪೆ: Challiyan

ಇಲ್ಲಿ ನಿತ್ಯವು ಶಿವನಿಗೆ ನಾಲ್ಕು ಬಾರಿ ವಿವಿಧ ರೀತಿಯಲ್ಲಿ ಪೂಜೆಗೈಯಲಾಗುತ್ತದೆ ಹಾಗೂ ವರ್ಷದಲ್ಲಿ ಮೂರು ಉತ್ಸವಗಳನ್ನು ಸಡಗರದಿಂದ ಆಚರಿಸಲಾಗುತ್ತದೆ. ತಮಿಳು ಮಾಸ ವೈಕಾಸಿಯಲ್ಲಿ (ಮೇ-ಜೂನ್) ವೈಕಾಸಿ ಪೌರ್ಣಮಿ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತದೆ ಹಾಗೂ ಈ ಆಚರಣೆಯೆ ದೇವಾಲಯ ಬಲು ಮಹತ್ವಪೂರ್ಣ ಉತ್ಸವವಾಗಿದೆ.

ಶೈವ ಸಂತರಾದ ಸುಂದರ ಮೂರ್ತಿ ನಯನಾರ್ ಈ ದೇವಾಲಯದಿಂದಲೆ ಶಿವನ ಅನುಗ್ರಹ ಪಡೆದು ಆತ ಕಳುಹಿಸಿದ್ದ ಬೀಳಿ ಆನೆಯ ಮೇಲೆ ಕುಳಿತು ಕೈಲಾಸಕ್ಕೆ ಹೋದರು ಎಂಬ ಪ್ರತೀತಿಯಿದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಶಿವನು ಕೇವಲ ಒಬ್ಬನಿರದೆ ತನ್ನ ಇಡೀ ಕುಟುಂಬ ಸಮೇತವಾಗಿ ಇಲ್ಲಿ ನೆಲೆಸಿರುವನೆಂದು ಸ್ಥಳ ಪುರಾಣ ಹೇಳುತ್ತದೆ.

ತಿರುವಂಚಿಕುಲಂ ಶಿವ ದೇವಾಲಯ

ಚಿತ್ರಕೃಪೆ: Ssriram mt

ಹಾಗಾಗಿ ಶಿವನ ಸಂಪೂರ್ಣ ಪರಿವಾರವನ್ನು ಒಂದೆ ಕಡೆ ದರ್ಶಿಸುವ ಅನನ್ಯ ಅವಕಾಶವನ್ನು ಈ ದೇವಾಲಯ ನೀಡುತ್ತದೆ. ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಈ ಪ್ರದೇಶದಲ್ಲಿ ಮೊದಲಿನಿಂದಲೂ ವಾಸವಿರುವ ಸಾಕಷ್ಟು ತಮಿಳಿಗರು ಈ ಶೈವ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಕೊಡುಂಗಲ್ಲೂರು ಭದ್ರಕಾಳಿ ದೇವಾಲಯ!

ಇದು ತಿರುವಂಚಿಕುಲಂ ಶಿವ ದೇವಾಲಯ ಎಂದೆ ಪ್ರಖ್ಯಾತಿಗಳಿಸಿದೆ. ಅಲ್ಲದೆ ಮಹಾದೇವ ದೇವಾಲಯ, ತಿರುವಂಜೈ ಕಲಂ ದೇವಾಲಯ ಎಂಬ ಹೆಸರುಗಳಿಂದಲೂ ಸಹ ಇದನ್ನು ಕರೆಯುತ್ತಾರೆ. ತ್ರಿಶ್ಶೂರ್ ಜಿಲ್ಲೆಯ ಕೊಡುಂಗಲ್ಲೂರಿನ ತಿರುವಂಚಿಕುಲಂ ಎಂಬಲ್ಲಿ ಈ ದೇವಾಲಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X