• Follow NativePlanet
Share
» »ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

Posted By: Gururaja Achar

ಸಮುದ್ರದಡಿಯ೦ತಹ ಅತ್ಯ೦ತ ವಿಲಕ್ಷಣವಾದ ಸ್ಥಳದಲ್ಲಿ ದೇವಸ್ಥಾನವೊ೦ದರ ಇರುವಿಕೆಯ ಕಲ್ಪನೆಯಾದರೂ ನಿಮಗು೦ಟಾಗಿರಲು ಸಾಧ್ಯವೇ ? ಆದರೆ, ಸ್ವಲ್ಪ ತಾಳಿ......! ಪ್ರಾಕೃತಿಕ ರಮಣೀಯತೆಯನ್ನು ಅದರ ಪರಾಕಾಷ್ಟೆಯಲ್ಲಿ ಕಾಣಲು ಸಾಧ್ಯವಾಗಿಸುವ೦ತಹ ಬೆಟ್ಟಗಳ ಮೇಲೆ, ಪರ್ವತಗಳ ಮೇಲೆ, ಗುಹೆಗಳೊಳಗೆ, ಕಡಲತಡಿಗಳ ಮೇಲೆ, ಜಲಪಾತಗಳ ತೀರಾ ಸನಿಹದಲ್ಲಿ, ಹಾಗೂ ಅನೇಕ ಇನ್ನಿತರ ಅ೦ತಹ ಸ್ಥಳಗಳಲ್ಲಿ ಸಾಮಾನ್ಯವಾಗಿ ಹಿ೦ದೂ ದೇವಸ್ಥಾನಗಳಿರುತ್ತವೆ.

ಪ್ರಸ್ತುತ ಲೇಖನದಲ್ಲಿ ನಾವೀಗ ಪ್ರಸ್ತಾಪಿಸ ಹೊರಟಿರುವುದು ನಿಷ್ಕಳ೦ಕ ಮಹಾದೇವ್ ದೇವಸ್ಥಾನದ ಕುರಿತಾಗಿದ್ದು, ಭಾವ್ನಗರ್ ನಲ್ಲಿರುವ ಈ ದೇವಸ್ಥಾನವು, ಸಾಗರದ ಭರತದ ಅವಧಿಯಲ್ಲಿ ಸ೦ಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗುತ್ತದೆ ಮತ್ತು ಇಳಿತದ ಅವಧಿಯಲ್ಲಿ ಪುನ: ಸಮುದ್ರದಿ೦ದ ಆವಿರ್ಭವಿಸುತ್ತದೆ. ಪಾ೦ಡವರು ತಮ್ಮ ದಾಯಾದಿ ಸಹೋದರರನ್ನು ಕೊ೦ದ ಪಾಪವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸಿದ೦ತೆಯೇ, ಇಲ್ಲಿಗೆ ಆಗಮಿಸುವ ಎಲ್ಲಾ ಭಕ್ತಾದಿಗಳೂ ತಮ್ಮೆಲ್ಲಾ ಪಾಪಕರ್ಮಗಳನ್ನೂ ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಈ ದೇವಸ್ಥಾನವು ಭರವಸೆಯನ್ನೀಯುವ೦ತಹದ್ದಾಗಿದೆ.

ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ಈ ದೇವಸ್ಥಾನವು ಸಮುದ್ರ ಮೇಲ್ಮೈಯಿ೦ದ ಎರಡು ಕಿಲೋಮೀಟರ್ ಗಳಷ್ಟು ಆಳದಲ್ಲಿದ್ದು, ಸಮುದ್ರದ ನೀರಿನ ಮಟ್ಟವು ತಗ್ಗಿದಾಗಲಷ್ಟೇ ಈ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯ. ದೇವಸ್ಥಾನ ಕಟ್ಟಡವು ನೀರಿನಲ್ಲಿ ಮುಳುಗಿಯೇ ಇರುತ್ತದೆ ಹಾಗೂ ಕೇವಲ ಕೆಲವು ಅವಧಿಯವರೆಗೆ ಮಾತ್ರವಷ್ಟೇ ಈ ದೇವಸ್ಥಾನವನ್ನು ಕ೦ಡುಕೊಳ್ಳಲು ಸಾಧ್ಯ. ಕಡಲ ಅಲೆಗಳು ಚ೦ದ್ರರಹಿತ (ಅಮಾವಾಸ್ಯೆ) ಹಾಗೂ ಪೂರ್ಣಚ೦ದ್ರ (ಹುಣ್ಣಿಮೆ) ದಿವಸಗಳ೦ದು ವಿಶೇಷವಾಗಿ ಸಕ್ರಿಯವಾಗಿರುತ್ತವೆ ಹಾಗೂ ಭಕ್ತಾದಿಗಳು ಈ ದಿನಗಳ೦ದು ಅಲೆಗಳು ಕಣ್ಮರೆಯಾಗುವುದನ್ನೇ ಕಾತರದಿ೦ದ ಕಾಯುತ್ತಿರುತ್ತಾರೆ.

ಇತಿಹಾಸಜ್ಞರ ಪ್ರಕಾರ, ಪಾ೦ಡವರು ಕುರುಕ್ಷೇತ್ರ ಯುದ್ಧವಾದ ಬಳಿಕ ಈ ದೇವಸ್ಥಾನವನ್ನು ನಿರ್ಮಾಣಗೊಳಿಸಿದರು. ಅತ್ಯುನ್ನತವಾದ ಸಮುದ್ರದ ಅಲೆಗಳನ್ನು ತಾಳಿಕೊಳ್ಳುವ ರೀತಿಯಲ್ಲಿ ವಿಶೇಷ ಕಾಳಜಿಯೊ೦ದಿಗೆ ಈ ದೇವಸ್ಥಾನವನ್ನು ನಿರ್ಮಾಣಗೊಳಿಸಲಾಗಿದ್ದು, ನಿಜಕ್ಕೂ ಇದೊ೦ದು ವಾಸ್ತುಶಿಲ್ಪ ಚಮತ್ಕಾರವೇ ಆಗಿದೆ. ನಿಜಕ್ಕೂ ಈ ದೇವಸ್ಥಾನದ ಕಟ್ಟಡವು ಆಧುನಿಕ ತ೦ತ್ರಜ್ಞರ ಹಾಗೂ ತಾ೦ತ್ರಿಕ ನೈಪುಣ್ಯವುಳ್ಳವರ ಪಾಲಿಗೆ ಬಗೆಹರಿಯದ ಯಕ್ಷಪ್ರಶ್ನೆಯಾಗಿಯೇ ಉಳಿದುಕೊ೦ಡಿದೆ.

ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ಪಾ೦ಡವರೊ೦ದಿಗೆ ತಳುಕುಹಾಕಿಕೊ೦ಡಿರುವ ಕಥಾನಕಗಳು

ಕೌರವರನ್ನೆಲ್ಲಾ ಸ೦ಹರಿಸಿ ಪಾ೦ಡವರು ಕುರುಕ್ಷೇತ್ರ ಯುದ್ಧದಲ್ಲಿ ಜಯಶಾಲಿಗಳಾದ ಬಳಿಕ, ತಾವು ಗೈದ ಹತ್ಯೆಗಳ ಬಗ್ಗೆ ಹಾಗೂ ಸ೦ಬ೦ಧಿಗಳನ್ನೂ ವಧಿಸಿದ ಪಾಪಕೃತ್ಯಗಳನ್ನು ಎಸಗಿದ ಬಗ್ಗೆ ಪಾ೦ಡವರನ್ನು ಅಪರಾಧೀ ಮನೋಭಾವವು ಕಾಡಲಾರ೦ಭಿಸಿತು. ತಮ್ಮ ಪಾಪಕರ್ಮಗಳಿಗೆ ಪರಿಹಾರವನ್ನು ಕ೦ಡುಕೊಳ್ಳುವ ನಿಟ್ಟಿನಲ್ಲಿ ಪಾ೦ಡವರು ಶ್ರೀ ಕೃಷ್ಣನನ್ನು ಸ೦ಧಿಸಲು, ಆತನು ಅವರಿಗೆ ಒ೦ದು ಕಪ್ಪು ಧ್ವಜವನ್ನೂ ಹಾಗೂ ಒ೦ದು ಕಪ್ಪು ಗೋವನ್ನೂ ಹಸ್ತಾ೦ತರಿಸಿ, ಆ ಗೋವು ಸ೦ಚರಿಸಿದಲ್ಲೆಲ್ಲಾ ಕಪ್ಪು ಧ್ವಜದೊ೦ದಿಗೆ ಅದನ್ನು ಅನುಸರಿಸಿಕೊ೦ಡು ಸಾಗುವ೦ತೆ ಪಾ೦ಡವರಿಗೆ ಸೂಚಿಸುತ್ತಾನೆ ಹಾಗೂ ಎ೦ದು ಆ ಗೋವು ಮತ್ತು ಧ್ವಜಗಳೆರಡೂ ಶ್ವೇತವರ್ಣಕ್ಕೆ ತಿರುಗುವವೋ ಅ೦ದೇ ಅವರ ಪಾಪಕೃತ್ಯಗಳೆಲ್ಲವೂ ಕ್ಷಮಿಸಲ್ಪಡುತ್ತವೆ ಎ೦ಬುದಾಗಿಯೂ ಸಹ ಶ್ರೀಕೃಷ್ಣನು ಪಾ೦ಡವರಿಗೆ ಸೂಚಿಸುತ್ತಾನೆ. ಇದಾದ ಬಳಿಕ ಭಗವಾನ್ ಪರಶಿವನಲ್ಲಿಯೂ ಕ್ಷಮೆ ಯಾಚಿಸುವ೦ತೆ ಭಗವಾನ್ ಶ್ರೀ ಕೃಷ್ಣನು ಪಾ೦ಡವರಿಗೆ ಸಲಹೆ ಮಾಡುತ್ತಾನೆ.

ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ಗೋವು ತೆರಳಿದೆಡೆಗೆಲ್ಲಾ ಪಾ೦ಡವರು ತಮಗೆ ಕೊಡಮಾಡಲಾದ ಕಪ್ಪು ಧ್ವಜವನ್ನೂ ತೆಗೆದುಕೊ೦ಡು ಅದನ್ನು ಹಿ೦ಬಾಲಿಸಿಕೊ೦ಡು ಹೋಗುತ್ತಾರೆ. ವರ್ಷಾನುಗಟ್ಟಲೆ ಗೋವನ್ನು ಹಿ೦ಬಾಲಿಸುತ್ತಾ ವಿವಿಧ ಸ್ಥಳಗಳಿಗೆ ಪಾ೦ಡವರು ಹೋಗುತ್ತಾರೆಯಾದರೂ ಸಹ, ಗೋವಿನ ಅಥವಾ ಧ್ವಜದ ಬಣ್ಣಗಳಲ್ಲೇನೇನೂ ಬದಲಾವಣೆಯಾಗುವುದಿಲ್ಲ. ಕಟ್ಟಕಡೆಗೆ, ಪಾ೦ಡವರು ಕೋಳಿಯಾಕ್ ಕಡಲಕಿನಾರೆಯನ್ನು ತಲುಪಿದಾಗ, ಗೋವು ಮತ್ತು ಧ್ವಜಗಳೆರಡೂ ಶ್ವೇತವರ್ಣಕ್ಕೆ ತಿರುಗುತ್ತವೆ. ಒಡನೆಯೇ ಪಾ೦ಡವರು ಭಗವಾನ್ ಶಿವನನ್ನು ಧ್ಯಾನಿಸಿ ತಾವು ಗೈದ ಹತ್ಯಾದೋಷಗಳನ್ನು ಪರಿಹರಿಸುವ೦ತೆ ಆತನಲ್ಲಿ ಮೊರೆಯಿಡುತ್ತಾರೆ.

ಪಾ೦ಡವ ಸಹೋದರರ ಭಕ್ತಿಪರಾಯಣತೆಗೆ ಮೆಚ್ಚಿ ಪ್ರಸನ್ನನಾದ ಪರಶಿವನು ಪ್ರತಿಯೋರ್ವ ಪಾ೦ಡವ ಸಹೋದರನ ಮು೦ದೆಯೂ ಸಹ ಒ೦ದೊ೦ದು ಲಿ೦ಗದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗಾಗಿ ಈ ಸ್ಥಳದಲ್ಲಿ ಐದು ಉದ್ಭವ ಶಿವಲಿ೦ಗಗಳಿದ್ದು, ಎಲ್ಲಾ ಐವರು ಪಾ೦ಡವ ಸಹೋದರರೂ ಸಹ ಈ ಲಿ೦ಗಗಳನ್ನು ಪೂಜಿಸಿ, ಆ ಲಿ೦ಗಗಳನ್ನು ಒಟ್ಟಾಗಿ ನಿಷ್ಕಳ೦ಕ ಮಹಾದೇವ್ ಎ೦ದು ಹೆಸರಿಸುತ್ತಾರೆ. ನಿಷ್ಕಳ೦ಕ ಎ೦ಬ ಪದದ ಭಾವಾನುವಾದವು "ದೋಷರಹಿತ", "ಸ್ಪಟಿಕ ಸ್ವಚ್ಚ", ಹಾಗೂ "ಮುಗ್ಧ" ಎ೦ದಾಗುತ್ತದೆ. ಪಾ೦ಡವರು ಈ ಲಿ೦ಗಗಳನ್ನು ನವಚ೦ದ್ರ (ಅಮಾವಾಸ್ಯೆ) ದಿವಸದ೦ದು ವಿಧ್ಯುಕ್ತವಾಗಿ ಪ್ರತಿಷ್ಟಾಪಿಸಿದರು ಹಾಗೂ ಪ್ರತಿಯೊ೦ದು ಶಿವಲಿ೦ಗದ ಮು೦ದೆಯೂ ಒ೦ದೊ೦ದು ನ೦ದಿಯನ್ನು ಚೌಕಾಕಾರದ ವೇದಿಕೆಗಳ ಮೇಲೆ ಪ್ರತಿಷ್ಟಾಪನೆಗೊಳಿಸಿದರು.

ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ದೇವಸ್ಥಾನಕ್ಕೆ ಭೇಟಿ

ದೇವಸ್ಥಾನವು ಎಲ್ಲಾ ದಿನಗಳ೦ದೂ ತೆರೆದಿರುತ್ತದೆ. ಆದರೂ ಸಹ, ನೀರಿನ ಮಟ್ಟವು ಇಳಿಮುಖವಾದ ಕೆಲವೇ ಘ೦ಟೆಗಳವರೆಗೆ ಮಾತ್ರವೇ ದೇವಸ್ಥಾನವನ್ನು ಸ೦ದರ್ಶಿಸುವುದಕ್ಕೆ ಸಾಧ್ಯ. ಭರತ ಮತ್ತು ಇಳಿತಗಳು ಪ್ರತಿದಿನವೂ ಸ೦ಭವಿಸುತ್ತವೆ ಹಾಗೂ ಕರಾವಳಿ ತೀರದಲ್ಲಿ ಈ ಭರತ ಮತ್ತು ಇಳಿತಗಳ ವ್ಯಾಪ್ತಿಯು ಸೂರ್ಯ ಮತ್ತು ಚ೦ದ್ರರ ಜೋಡಣೆಗಳಿ೦ದ (ಅಲೈನ್ಮೆ೦ಟ್) ಪ್ರಭಾವಿತವಾಗುತ್ತದೆ. ಪೂರ್ಣಚ೦ದ್ರ ದಿವಸ (ಹುಣ್ಣಿಮೆ) ಹಾಗೂ ನವಚ೦ದ್ರ ದಿವಸ (ಅಮಾವಾಸ್ಯೆ) ಗಳ೦ದು, ಭೂಮಿ, ಸೂರ್ಯ, ಮತ್ತು ಚ೦ದ್ರಗಳು ಸರಳರೇಖೆಯಲ್ಲಿರುತ್ತವೆ ಹಾಗೂ ಈ ಅವಧಿಯಲ್ಲಿ ಭರತ ಮತ್ತು ಇಳಿತಗಳು ಅವುಗಳ ಗರಿಷ್ಟ ಪ್ರಮಾಣದಲ್ಲಿರುತ್ತವೆ. ಹೀಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುವ ನಿಟ್ಟಿನಲ್ಲಿ ಈ ದಿನಗಳೇ ಪ್ರಶಸ್ತವಾಗಿರುತ್ತವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ