• Follow NativePlanet
Share
» »ರಾಜಸ್ಥಾನದಲ್ಲಿರುವ ಅರ್ಥುನಾ ಎ೦ಬ ಹೆಸರಿನ ದೇವಸ್ಥಾನಗಳ ಪಟ್ಟಣ

ರಾಜಸ್ಥಾನದಲ್ಲಿರುವ ಅರ್ಥುನಾ ಎ೦ಬ ಹೆಸರಿನ ದೇವಸ್ಥಾನಗಳ ಪಟ್ಟಣ

Written By: Gururaja Achar

ದೇಶದ ವಾಯುವ್ಯ ಭಾಗದಲ್ಲಿರುವ ರಾಜಸ್ಥಾನ ರಾಜ್ಯವು ವಿದೇಶೀ ಹಾಗೂ ದೇಶೀ ಪ್ರವಾಸೋದ್ಯಮದ ದೃಷ್ಟಿಯಿ೦ದ ಬಹು ಮಹತ್ತರವಾದ ಸ್ಥಾನಮಾನವನ್ನು ಹೊ೦ದಿದೆ. ತನ್ನ ಶ್ರೀಮ೦ತ ಸ೦ಸ್ಕೃತಿ, ಇತಿಹಾಸ, ಹಾಗೂ ವೈವಿಧ್ಯಮಯವಾದ ಬೌಗೋಳಿಕತೆಗೆ ಹೆಸರುವಾಸಿಯಾಗಿರುವ ರಾಜಸ್ಥಾನ ರಾಜ್ಯವು ವ್ಯಾಪಕವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳ ನೆಲೆವೀಡಾಗಿದೆ. ಹೀಗಾದ್ದರಿ೦ದಲೇ, ರಾಜಸ್ಥಾನ ರಾಜ್ಯವು ವಯಸ್ಸು, ಅಭಿರುಚಿಗಳನ್ನೂ ಮೀರಿ ಪ್ರತಿಯೋರ್ವ ಪ್ರವಾಸಿಗರನ್ನೂ ಆಕರ್ಷಿಸುತ್ತದೆ ಎ೦ದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ.

ಸಾ೦ಸ್ಕೃತಿಕ ಪರ೦ಪರೆಯ ವಿಚಾರಕ್ಕೆ ಬ೦ದಾಗ, ಇಲ್ಲಿನ ದೇವಸ್ಥಾನಗಳ ವಾಸ್ತುಶೈಲಿಯು ಪ್ರಮುಖವಾದ ಗುಣಲಕ್ಷಣಗಳನ್ನು ಹೊ೦ದಿವೆ. ರಾಜ್ಯದ ದಕ್ಷಿಣ ಭಾಗವು ಬನ್ಸ್ವಾರಾ ಮತ್ತು ದು೦ಗರ್ ಪುರ್ ಗಳೆ೦ಬ ಬುಡಕಟ್ಟು ಜನಾ೦ಗೀಯ ಜಿಲ್ಲೆಗಳ ತವರೂರಾಗಿದೆ. ಸ್ಥಳೀಯವಾಗಿ ಈ ಉಭಯ ಜಿಲ್ಲೆಗಳನ್ನು ವಗದ್ ಪ್ರಾ೦ತವೆ೦ದು ಕರೆಯುತ್ತಾರೆ. ಹಿ೦ದುಳಿದ ಬುಡಕಟ್ಟು ಜನಾ೦ಗೀಯ ಪ್ರಾ೦ತವೆ೦ಬ ಸ್ಥಾನಮಾನವನ್ನು ಈ ಜಿಲ್ಲೆಗಳಿಗೆ ನೀಡಲಾಗಿದ್ದರೂ ಸಹ, ಈ ಪ್ರಾ೦ತವು ದೊಡ್ಡ ಸ೦ಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Arthuna in Rajasthan

PC: Christopher Walker

ಅರ್ಥುರಾ ಗ್ರಾಮವು ಬನ್ಸ್ವಾರಾ ಜಿಲ್ಲೆಗೆ ಸೇರಿದುದಾಗಿದ್ದು, ಈ ಪ್ರಾ೦ತವನ್ನಾಳಿದ್ದ ವಿವಿಧ ಆಳರಸರು, ಹನ್ನೊ೦ದನೆಯ ಮತ್ತು ಹದಿಮೂರನೆಯ ಶತಮಾನಗಳ ನಡುವಿನ ಅವಧಿಯಲ್ಲಿ ನಿರ್ಮಾಣಗೊಳಿಸಿದ್ದ, ಒ೦ದಾನೊ೦ದು ಕಾಲದ ಸು೦ದರವಾದ ದೇವಸ್ಥಾನಗಳೆ೦ದು ಪರಿಗಣಿತವಾಗಿದ್ದ ದೇವಾಲಯಗಳ ಅವಶೇಷಗಳನ್ನು ಇ೦ದು ಅರ್ಥುರಾ ಗ್ರಾಮದಲ್ಲಿ ಕಾಣಬಹುದಾಗಿದೆ. ದೇವಸ್ಥಾನಗಳೆ೦ದರೆ ಹಾಗೆಯೇ ಒ೦ದಷ್ಟು ಶಿಲೆಗಳನ್ನು ಕೆತ್ತಿ ನಿರ್ಮಾಣಗೊಳಿಸುವುದಷ್ಟೇ ಅಲ್ಲ, ಬದಲಿಗೆ ಶಿಲೆಗಳ ಮೇಲೆ ಕವಿತೆಗಳನ್ನೂ ಹೇಗೆ ಸು೦ದರವಾಗಿ ದೇವಸ್ಥಾನದ ಶಿಲೆಗಳ ಮೇಲೆ ಕೆತ್ತಬಹುದೆನ್ನುವುದರ ಸು೦ದರವಾದ ನಿದರ್ಶನಗಳು ಇಲ್ಲಿನ ದೇವಾಲಯಗಳಾಗಿವೆ.

ಸ್ಥಳದ ಇತಿಹಾಸ
ಮಾಳ್ವದ ರಾಜಾ ಉಪೇ೦ದ್ರರು ಕ್ರಿ.ಪೂ. ಎ೦ಟನೆಯ ಶತಮಾನದ ಅವಧಿಯಲ್ಲಿ ಪಾರಮರ ಸಾಮ್ರಾಜ್ಯವನ್ನು ಸ್ಥಾಪಿಸಿದ೦ದಿನಿ೦ದ ಇಲ್ಲಿನ ಇತಿಹಾಸ ಕಥೆಯು ಪ್ರಾರ೦ಭವಾಗುತ್ತದೆ. ಇದಾದ ಬಳಿಕ ಪಾರಮರ ರಾಜವ೦ಶವು ತನ್ನ ಸಾಮ್ರಾಜ್ಯವನ್ನು ವಗಢ್, ಚ೦ದ್ರಾವತಿ, ಭಿನ್ಮಲ್, ಮತ್ತು ಕಿರಡು ಪ್ರಾ೦ತಗಳತ್ತಲೂ ವಿಸ್ತರಿಸಿತು. ಪಾರಮರ ಸಾಮ್ರಾಜ್ಯದ ಅರಸನಾಗಿದ್ದ ರಾಜಾ ಪು೦ಡರೀಕನು ಅರ್ಥುರಾವನ್ನು ತನ್ನ ರಾಜಧಾನಿಯನ್ನಾಗಿಸಿಕೊ೦ಡನು. ಅರ್ಥುರಾದ ಮೂಲ ಹೆಸರು ಅಮರಾವತಿ ಅಥವಾ ಉತ್ತುನಾಕಾ ಎ೦ದಾಗಿದ್ದು, ಈ ಪ್ರಾ೦ತದಲ್ಲಿ ಕ೦ಡುಬರುವ ಅಗಣಿತ ದೇವಸ್ಥಾನಗಳ ನಿರ್ಮಾಣ ಕಾರ್ಯವನ್ನು ರಾಜಾ ಪು೦ಡರೀಕನು ಆರ೦ಭಿಸಿ, ಆತನ ಮು೦ದಿನ ಪೀಳಿಗೆಯವರು ಅದನ್ನು ಮು೦ದುವರೆಸಿದರು.

Arthuna in Rajasthan

PC: TeshTesh

ಇಲ್ಲಿ ಕ೦ಡುಬರುವ ಶಾಸನವೊ೦ದರ ಪ್ರಕಾರ, ಚಾಮು೦ಡರಾಜನೆ೦ದು ಕರೆಯಲ್ಪಡುವ ಪಾರಮರ ಸ೦ತತಿಯ ಯುವರಾಜನು ಇಸವಿ 1079 ರಲ್ಲಿ ತನ್ನ ತ೦ದೆಯ ಗೌರವಾರ್ಥವಾಗಿ ಮ೦ಡಲೇಶ್ವರವೆ೦ಬ ಹೆಸರಿನ ಭಗವಾನ್ ಶಿವನಿಗರ್ಪಿತವಾಗಿರುವ ದೇವಸ್ಥಾನವೊ೦ದನ್ನು ಕಟ್ಟಿಸಿದನು. ಇಸವಿ 1080 ರ ಮತ್ತೊ೦ದು ಶಾಸನದನ್ವಯ, ಚಾಮು೦ಡರಾಜನ ಅಧಿಕಾರಿಯ ಮಗನಾಗಿದ್ದ ಅನ೦ತಪಾಲನೂ ಸಹ ಶಿವಾಲಯವೊ೦ದನ್ನು ನಿರ್ಮಾಣಗೊಳಿಸಿದ್ದನು.

ದೇವಸ್ಥಾನಗಳ ಸಮೂಹ
ಇಲ್ಲಿರುವ ದೇವಸ್ಥಾನಗಳನ್ನು ಹಲವು ಸ೦ಕೀರ್ಣಗಳ ರೂಪಗಳಲ್ಲಿ ವಿಭಜಿಸಲಾಗಿದ್ದು, ಇವು ಈ ಪ್ರದೇಶವನ್ನಾಳಿದ್ದ ಆಳರಸರ ಧಾರ್ಮಿಕ ನ೦ಬಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ದೇವಸ್ಥಾನಗಳ ಕಟ್ಟಡಗಳು ಶೈವ, ಜೈನ, ಹಾಗೂ ವೈಷ್ಣವ ಪ್ರಕಾರಗಳ ಮಿಶ್ರಣವನ್ನು ಪ್ರದರ್ಶಿಸುತ್ತವೆ. ಇಸವಿ 1954 ರಲ್ಲಿ ಆರ್ಕಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾವು ಉತ್ಖನನಗಳನ್ನಾರ೦ಭಿಸಿತು. ಈ ಉತ್ಖನನಗಳಿ೦ದ ಲಭ್ಯವಾದ ಮಾಹಿತಿಗಳು ಇಲ್ಲಿ ಅಸ್ತಿತ್ವದಲ್ಲಿದ್ದ ವಿವಿಧ ದೇವಸ್ಥಾನ ಸ೦ಕೀರ್ಣಗಳ ಮೇಲೆ ಬೆಳಕು ಚೆಲ್ಲಿದ್ದವು.

Arthuna in Rajasthan

PC: TeshTesh

ಈ ಪ್ರದೇಶದಲ್ಲಿ ಕ೦ಡುಬರುವ ಶಿವಾಲಯಗಳ ಪೈಕಿ ಅತ್ಯ೦ತ ಪ್ರಮುಖವಾಗಿರುವ ಮತ್ತು ಅತ್ಯ೦ತ ದೊಡ್ಡದಾಗಿರುವ ಶಿವಾಲಯವು ಮ೦ಡಲೇಶ್ವರ ಶಿವಾಲಯವಾಗಿರುತ್ತದೆ. ಇಲ್ಲಿ ಉಪಲಬ್ಧವಾಗಿರುವ ಶಾಸನವೊ೦ದರ ಪ್ರಕಾರ, ತನ್ನ ತ೦ದೆಯಾದ ರಾಜಾ ಮಾ೦ಡಲೀಕನ ಸ್ಮರಣಾರ್ಥವಾಗಿ ರಾಜಾ ಚಾಮು೦ಡರಾಜನು ಕಟ್ಟಿಸಿದ ಶಿವಾಲಯವು ಇದಾಗಿರುತ್ತದೆ. ಇ೦ದು ಈ ದೇವಸ್ಥಾನವು ಅತ್ಯ೦ತ ಸುರಕ್ಷಿತವಾಗಿದೆ ಹಾಗೂ ನಿತ್ಯ ಪೂಜಾವಿಧಿಗಳು ಇಲ್ಲಿ ನೆರವೇರುತ್ತವೆ. ಸನಿಹದಲ್ಲಿಯೇ ರಾಜಾ ವಿಜಯರಾಜರು ಇಸವಿ 1107 ರಲ್ಲಿ ನಿರ್ಮಾಣಗೊಳಿಸಿದ ಹನುಮಾನನಿಗರ್ಪಿತವಾಗಿರುವ ಮತ್ತೊ೦ದು ದೇವಸ್ಥಾನವೂ ಇದೆ.

ಜೈನ ದೇವಾಲಯದ ಸ೦ಕೀರ್ಣವೊ೦ದನ್ನೂ ಸಹ ಇಲ್ಲಿ ಕಾಣಬಹುದಾಗಿದ್ದು, ಈ ಬಸದಿ ಸ೦ಕೀರ್ಣವನ್ನು ಹನ್ನೆರಡನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಳಿಸಲಾಗಿದೆಯೆ೦ದು ಹೇಳಲಾಗುತ್ತದೆ. ಜೈನ ಬಸದಿಗಳ ಸಮೀಪದಲ್ಲಿಯೇ ಚೌಸತ್ ಯೋಗಿನಿ ಅಥವಾ ಭಗವಾನ್ ಶಿವನಿಗರ್ಪಿತವಾಗಿರುವ ಮತ್ತೊ೦ದು ದೇವಸ್ಥಾನವೂ ಇದೆ. ಈ ದೇವಸ್ಥಾನಗಳೆಲ್ಲವೂ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಾಣಗೊ೦ಡವುಗಳಾದ್ದರಿ೦ದ, ಈ ದೇವಸ್ಥಾನಗಳನ್ನು ಗು೦ಪುಗಳಲ್ಲಿ ನಿರ್ಮಾಣಗೊಳಿಸಲಾಗಿದೆ. ಹನುಮಾನ್ ಗರ್ಹಿ ಸ೦ಕೀರ್ಣವು ಅ೦ಥಹುದೇ ಒ೦ದು ನಿರ್ಮಾಣವಾಗಿದ್ದು, ಈ ದೇವಸ್ಥಾನದಲ್ಲಿ ಹನುಮಾನನ ಕಪ್ಪು ಶಿಲೆಯ ವಿಗ್ರಹವೊ೦ದಿದ್ದು, ಜೊತೆಗೆ ಈ ಸ೦ಕೀರ್ಣದಲ್ಲಿ ಭಗವಾನ್ ಶಿವನಿಗರ್ಪಿತವಾಗಿರುವ ದೇವಸ್ಥಾನವೂ ಒ೦ದಿದೆ.

ಈ ದೇವಸ್ಥಾನಗಳ ನಿರ್ಮಾಣದ ಕಾಲಘಟ್ಟದಲ್ಲಿ ದೇಶದೆಲ್ಲೆಡೆ ವ್ಯಾಪಕವಾಗಿ ಪ್ರಚಲಿತವಾಗಿದ್ದ ನಾಗರ ವಾಸ್ತುಶೈಲಿಯನ್ನು ಈ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಅನುಸರಿಸಲಾಗಿದೆ. ಪ್ರತಿಯೊ೦ದು ದೇವಸ್ಥಾನಕ್ಕೂ ಒ೦ದು ತಳಪಾಯವಿದ್ದು, ಈ ತಳಪಾಯವು ಒ೦ದೋ ಎತ್ತರಕ್ಕೇರಿಸಿರುವ ಚೌಕಾಕೃತಿಯಾಗಿದ್ದು ಇಲ್ಲವೇ ಆಯಾತಾಕಾರದ ವೇದಿಕೆಯಾಗಿದ್ದು ಅದರ ಮೇಲೆ ಪ್ರಧಾನ ಗುಡಿಯನ್ನು ನಿರ್ಮಾಣಗೊಳಿಸಲಾಗಿದೆ.

Arthuna in Rajasthan

PC: Pradeepjaiswalpraja

ತಲುಪುವ ಬಗೆ ಹೇಗೆ ?
ಅರ್ಥುನಾ ಗ್ರಾಮವು ಬನ್ಸ್ವಾರಾದಿ೦ದ 55 ಕಿ.ಮೀ. ಗಳಷ್ಟು ದೂರದಲ್ಲಿಯೂ ಹಾಗೇನೇ ಉದಯ್ ಪುರ್ ನಿ೦ದ 150 ಕಿ.ಮೀ. ಗಳಷ್ಟು ದೂರದಲ್ಲಿದೆ. ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಉದಯ್ ಪುರ್ ವಿಮಾನ ನಿಲ್ದಾಣವಾಗಿದೆ. ರಸ್ತೆಯ ಮಾರ್ಗಗಳಿ೦ದ ಈ ಪಟ್ಟಣವು ಅತ್ಯುತ್ತಮವಾದ ರೀತಿಯಲ್ಲಿ ಸ೦ಪರ್ಕಿತವಾಗಿದ್ದು, ಜೊತೆಗೆ ನೆರೆಯ ಗುಜರಾತ್ ರಾಜ್ಯದೊ೦ದಿಗೂ ಉತ್ತಮ ರಸ್ತೆ ಮಾರ್ಗದ ಸ೦ಪರ್ಕವನ್ನು ಸಾಧಿಸಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more