Search
  • Follow NativePlanet
Share
» »ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!

ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!

By Vijay

ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ಶಿವ ಸ್ವರುಪಿಯಾಗಿ ಶಿವಲಿಂಗವನ್ನು ಆರಾಧಿಸುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೆ. ಈ ರೀತಿಯಾಗಿ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು ಸಾಮಾನ್ಯವಾಗಿ ಕಪ್ಪು ಶಿಲೆಯಲ್ಲಿ ನಿರ್ಮಿತ ಶಿವಲಿಂಗವಾಗಿರುತ್ತದೆ. ಆದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ಶಿವಲಿಂಗವು ಹಾಲಿನಷ್ಟೆ ಬಿಳುಪನ್ನು ಹೊಂದಿದೆ.

ಇದು ಸಾಮಾನ್ಯವಾದ ಶಿವನ ದೇವಾಲಯವಲ್ಲ. ಸಾಕಷ್ಟು ಮಹಿಮೆಯುಳ್ಳ, ಅದ್ಭುತವಾದ ಐತಿಹ್ಯವುಳ್ಳ ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವ ಶಿವನ ದೇವಾಲಯ ಇದಾಗಿದೆ. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಸೃಷ್ಟಿಪಾಲಕನಾದ ಶ್ರೀಮನ್ನಾರಾಯಣ ಅಂದರೆ ಸ್ವತಃ ವಿಷ್ಣು ತನ್ನ ಕೈಯಾರೆ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದಂತಹ ವಿಶೇಷ ದೇವಾಲಯ.

ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!

ಚಿತ್ರಕೃಪೆ: Ramireddy.y

ಈ ದೇವಾಲಯವು ಪೌರಾಣಿಕವಾಗಿ ನಡೆದ ಸಮುದ್ರ ಮಂಥನ ಅಂದರೆ ಕ್ಷೀರಸಾಗರದ ಮಂಥನದ ಪ್ರಸಂಗದೊಂದಿಗೆ ನಂಟನ್ನು ಹೊಂದಿದೆ. ಪೌರಾಣಿಕ ಘಟನೆ ಸಮುದ್ರ ಮಂಥನ ನಡೆಯುವಾಗ ಹಲವಾರು ಅಂಶಗಳು ಅದರಿಂದ ಹುಟ್ಟಿ ಬಂದವು. ಅವುಗಳಲ್ಲು ಸಮುದ್ರ ತಳದಿಂದ ಹೊರಬಂದ ಅಮೃತ ಲಿಂಗವೂ ಸಹ ಒಂದು. ಬಲು ಅಪಾರವಾದ ಶಕ್ತಿಯುಳ್ಳ ಲಿಂಗ ಇದಾಗಿತ್ತು.

ತಾರಕಾಸುರ ಎಂಬ ರಾಕ್ಷಸನು ಈ ಅಮೃತಲಿಂಗವನ್ನು ನೋಡಿ ಅದನ್ನು ತಾನೆ ವಶಪಡಿಸಿಕೊಂಡನು. ಹೀಗೆ ವಶಪಡಿಸಿಕೊಂಡ ಅಮೃತಲಿಂಗವನ್ನು ತಾರಕಾಸುರನು ತನ್ನ ಕೊರಳಿನಲ್ಲಿ ಕಟ್ಟಿಕೊಂಡು ಅತ್ಯಂತ ಬಲಶಾಲಿಯಾಗಿ ಬಿಟ್ಟ. ಎಲ್ಲ ದೇವ ದೇವತೆಯರನ್ನು ಸುಲಭವಾಗಿ ಸೋಲಿಸತೊಡಗಿದ.

ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!

ಚಿತ್ರಕೃಪೆ: PV Bhaskar

ಹೀಗೆ ಮುಂದುವರಿದಲ್ಲಿ ಲೋಕಕ್ಕೆ ಅಪಾಯವಾಗುವುದೆಂದು ದೇವತೆಗಳ ದಂಡನಾಯಕನಾದ ಕುಮಾರಸ್ವಾಮಿಯು ತನ್ನ ಶಕ್ತಿಯುತ ಅಸ್ತ್ರಗಳಿಂದ ತಾರಕಾಸುರನನ್ನು ತುಂಡರಿಸಿದ. ಆದರೆ ಆತನ ಕೊರಳಿನಲ್ಲಿ ಅಮೃತಲಿಂಗವಿದ್ದ ಕಾರಣ ಆತ ಮತ್ತೆ ಮತ್ತೆ ಬದುಕುತ್ತಿದ್ದ. ಇದರಿಂದ ಕುಮಾರಸ್ವಾಮಿಗೆ ಗೊಂದಲ ಉಂಟಾಗಿ ಶ್ರೀಹರಿಯ ಮೊರೆ ಹೊಕ್ಕ.

ಅದಕ್ಕೆ ವಿಷ್ಣು ತಾರಕಾಸುರ ಬಳಿ ಇರುವ ಅಮೃತಲಿಂಗವು ಈ ರೀತಿಯಾಗಿ ಅವನ ಮರುಹುಟ್ಟುವಿಕೆಗೆ ಕಾರಣವಾಗಿದ್ದು ಆತನನ್ನು ವಧಿಸಬೇಕೆಂದಿದ್ದಲ್ಲಿ ಆ ಅಮೃತಲಿಂಗವನ್ನೆ ತುಂಡರಿಸಬೇಕೆಂದು ಸಲಹೆ ನೀಡಿದ. ಆದಾಗ್ಯೂ ಹೀಗೆ ತುಂಡರಿಸಿದ ಅಮೃತಲಿಂಗದ ಭಾಗಗಳು ಮತ್ತೆ ಒಂದಾಗುತ್ತವೆಯಾದ್ದರಿಂದ ಹಾಗಾಗುವುದಕ್ಕೆ ಮುಂಚೆಯೆ ಅವುಗಳು ಬಿದ್ದ ಸ್ಥಳಗಳಲ್ಲೆ ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ಹೇಳಿದ.

ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!

ಚಿತ್ರಕೃಪೆ: PV Bhaskar

ಅದರಂತೆ ಕುಮಾರಸ್ವಾಮಿಯು ತನ್ನ ಬಳಿಯಿದ್ದ ಅಗ್ನಿ ಶಸ್ತ್ರದಿಂದ ಆ ಅಮೃತಲಿಂಗವನ್ನು ಐದು ಭಾಗಗಳಾಗಿ ತುಂಡರಿಸಿದ. ಆ ಐದು ಭಾಗಗಳನ್ನು ಪ್ರತ್ಯೆಕವಾಗಿ ಇಂದ್ರ, ಸೂರ್ಯ, ಚಂದ್ರ, ಕುಮಾರಸ್ವಾಮಿ ಹಾಗೂ ವಿಷ್ಣು ಪ್ರತಿಷ್ಠಾಪಿಸಿ ಆರಾಧಿಸಿದರು. ತದನಂತರ ಆ ಭಾಗಗಳು ಮತ್ತೆ ಒಂದಾಗದೆ ಅಲ್ಲಿಯೆ ಸ್ಥಿರವಾಗಿ ನೆಲೆಸಲ್ಪಟ್ಟವು. ಇವೆ ಇಂದು ಪಂಚರಾಮ ಕ್ಷೇತ್ರಗಳು ಎಂದು ಪ್ರಸಿದ್ಧಿ ಪಡೆದಿವೆ.

ಪಂಚರಾಮ ಕ್ಷೇತ್ರಗಳ ಪೈಕಿ ಪ್ರಸ್ತುತ ದೇವಾಲಯವಾದ ಕ್ಷೀರ ರಾಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿರುವ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದವರು ವಿಷ್ಣು. ಹಾಗಾಗಿ ಈ ಕ್ಷೇತ್ರವು ವಿಶೇಷ ಸ್ಥಾನಮಾನಗಳನ್ನು ಹೊಂದಿದೆ. ಇದರ ಪಾವಿತ್ರ್ಯತೆ ಎಷ್ಟಿದೆ ಎಂದರೆ ಈ ಕ್ಷೇತ್ರದಲ್ಲಿ ಒಂದು ದಿನವನ್ನು ಶಿವನನ್ನು ಧ್ಯಾನಿಸುತ್ತ ಕಳೆದರೆ ಅದು ಕಾಶಿಯಲ್ಲಿ ಒಂದು ವರ್ಷ ಕಾಲ ಕಳೆದಂತೆ ಎಂದು ಹೇಳಲಾಗುತ್ತದೆ.

ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!

ಚಿತ್ರಕೃಪೆ: PV Bhaskar

ಇನ್ನೊಂದು ದಂತಕಥೆಯ ಪ್ರಕಾರ, ರಾಮನು ರಾವಣನನ್ನು ಸಂಹರಿಸಿದ ಕಾರಣದಿಂದಾಗಿ ಬ್ರಾಹ್ಮಣ ಹತ್ಯಾ ದೋಷಕ್ಕೆ ಪಾತ್ರನಾಗುತ್ತಾನೆ. ಅದರಿಂದ ರಾಮನನ್ನು ಮುಕ್ತಗೊಳಿಸಲು ಅಗಸ್ತ್ಯ ಮಹರ್ಷಿಗಳು ಐದು ವಿವಿಧ ಪವಿತ್ರ ನದಿ ನೀರಿನ ತಟಗಳಲ್ಲಿ ಶಿವಲಿಂಗಗಳನ್ನು ನಿರ್ಮಿಸಿ ಪ್ರತಿಷ್ಠಾಪಿಸಲು ಸೂಚಿಸುತ್ತಾರೆ. ಆ ಕಾರಣದಿಂದಾಗಿಯೆ ಅವು ಪಂಚರಾಮ ಕ್ಷೇತ್ರಗಳು ಎಂದು ಪ್ರಸಿದ್ಧಿ ಪಡೆದಿವೆ.

ಪಾವಿತ್ರ್ಯತೆ ಹೊಂದಿರುವ ಪಂಚರಾಮ ಕ್ಷೇತ್ರಗಳು

ಆಂಧ್ರಪ್ರದೇಶ ರಾಜ್ಯದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಎಂಬ ಪಟ್ಟಣದಲ್ಲಿ ಈ ಕ್ಷೀರ ರಾಮಲಿಂಗೇಶ್ವರಸ್ವಾಮಿಯ ದೇವಾಲಯವಿದೆ. ಪಾಲಕೊಲ್ಲು ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ಹೈದರಾಬಾದ್, ವೈಜಾಗ್, ವಿಜಯವಾಡಾ, ರಾಜಮಂಡ್ರಿ ಮುಂತಾದ ಸ್ಥಳಗಳಿಂದ ಪಾಲಕೊಲ್ಲುವಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ದೇವಾಲಯವು ಬೆಳಿಗ್ಗೆ 5.30 ರಿಂದ 11.30 ರವರೆಗೂ ಸಂಜೆ 4 ರಿಂದ 8.30 ರವರೆಗೂ ತೆರೆದಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more