Search
  • Follow NativePlanet
Share
» »ಕುಕನೂರಿನ ಮೂಕವೇದನೆ ತಿಳಿಯಬಲ್ಲಿರಾ?

ಕುಕನೂರಿನ ಮೂಕವೇದನೆ ತಿಳಿಯಬಲ್ಲಿರಾ?

By Vijay

ಕರ್ನಾಟಕವು ಶ್ರೀಮಂತ ಇತಿಹಾಸ ಹೊಂದಿರುವ ಅದ್ಭುತ ನಾಡು. ಈ ನಾಡಿನ ಪ್ರತಿಯೊಂದು ಸ್ಥಳಗಳು ಇತಿಹಾಸದ ಕಥೆಗಳನ್ನು ಹೇಳುತ್ತವೆ. ಒಂದೊಂದು ಪ್ರದೇಶಗಳು ತಮ್ಮನ್ನಾಳಿದ ವಿವಿಧ ಸಾಮ್ರಾಜ್ಯಗಳ ಪರಿಚಯ ಮಾಡಿಸುತ್ತವೆ. ಒಂದೊಂದು ಪ್ರಾಚೀನ ದೇವಾಲಯಗಳು ತಮ್ಮ ಆಕರ್ಷಕ ಕೆತ್ತನೆಗಳನ್ನು ಅನಾವರಣಗೊಳಿಸುತ್ತವೆ.

ಐತಿಹಾಸಿಕವಾಗಿ ಪ್ರವಾಸ ಮಾಡಿದಾಗ ನಮಗೆ ಗುರುತರವಾದ ಅದೆಷ್ಟೊ ತಾಣಗಳು ಕಂಡುಬರುತ್ತವೆ. ಮೊದಲಿನಿಂದಲೂ ತಮ್ಮ ಅಗಾಧತೆಯಿಂದ, ವಿಶಾಲತೆಯಿಂದ ಗಮನಸೆಳೆವ ಸಾಕಷ್ಟು ರಚನೆಗಳು ಇತಿಹಾಸಪ್ರೀಯರ ಗಮಸೆಳೆದು ಇಂದು ಅದ್ಭುತ ಪ್ರವಾಸಿ ತಾಣಗಳಾಗಿ ಜನಪ್ರೀಯವಾಗಿದೆ.

ಸಾಮಾನ್ಯವಾಗಿ ಕುಟುಂಬದೊಡನೆ ಪ್ರವಾಸ ಮಾಡಬಯಸುವವರು ಇಂತಹ ಪ್ರಾಚೀನ ದೇವಾಲಯಗಳ ತಾಣಕ್ಕೆ ಭೇಟಿ ನೀಡಿದಾಗ ಹೆಚ್ಚು ಜನಪ್ರೀಯವಾದ ಸ್ಥಳಗಳನ್ನೆ ಆರಿಸಿಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತೆ, ಕರ್ನಾಟಕದ ಅದೆಷ್ಟೊ ಕುಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ನಮ್ಮ ನಾಡಿನ ಹಿರಿಮೆ ಸಾರುವ ಪ್ರಾಚೀನ ದೇಗುಲಗಳಿದ್ದು ಇಂದು ಸಾಕಷ್ಟು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು?

ಭೋಗಾಪುರೇಶ ಹಣುಮಂತನ ಮಹಿಮೆ ಅಪಾರ!

ಈ ಪ್ರಾಚೀನ ರಚನೆಗಳು ಇತರೆ ಪ್ರಸಿದ್ಧ ರಚನೆಗಳಂತೆ ಹೆಸರುವಾಸಿಯಾಗಿಲ್ಲ, ಜನಜನಿತವಾಗಿಲ್ಲ. ಆದರೆ ಇವು ತಮ್ಮದೆ ಆದ ಶ್ರೀಮಂತ ಇತಿಹಾಸ, ವಾಸ್ತುಶೈಲಿ ಹಾಗೂ ಶಿಲ್ಪಕಲೆಗಳನ್ನು ಹೊಂದಿದ್ದು ಕಥೆಗಳನ್ನು ಹೇಳುತ್ತವೆ. ಆದರೆ ಇವುಗಳತ್ತ ಬಹುತೇಕ ಪ್ರವಾಸಿಗರು ಕಣ್ಣು ಹಾಯಿಸುತ್ತಿಲ್ಲ ಅಷ್ಟೆ. ಈ ಆಕರ್ಷಣೆಗಳು ಇಂದು ಒಂದು ರೀತಿಯಲ್ಲಿ ಮೂಕವಾಗಿ ನಿಂತು ವೇದನೆ ಅನುಭವಿಸುತ್ತಿವೆ ಎಂತಲೆ ಹೇಳಬಹುದು.

ಅಂದರೆ ಈ ಆಕರ್ಷಣೆಗಳ ಕುರಿತು ಯಾರಿಗೂ ಗೊತ್ತಿಲ್ಲವೆಂದೇನಿಲ್ಲ. ಆದರೆ ಬಹಳಷ್ಟು ಕಡಿಮೆ ಪ್ರಮಾಣದ ಜನರಿಗೆ ಇವುಗಳ ಉಪಸ್ಥಿತಿಯ ಕುರಿತು ಮಾಹಿತಿಯಿದ್ದು ಅಲ್ಪ ಸಂಖ್ಯೆಯಲ್ಲಿ ಮಾತ್ರವೆ ಪ್ರವಾಸಿಗರು ಇವುಗಳಿಗೆ ಭೇಟಿ ನೀಡುತ್ತಾರೆ. ಈ ಲೇಖನವನ್ನು, ಸಕಲ ಕನ್ನಡಿಗರಿಗೆ ಇಂತಹ ಸ್ಥಳಗಳ ಕುರಿತು ಪರಿಚಯವಾಗಲಿ ಹಾಗೂ ಪ್ರವಾಸೋದ್ಯಮಕ್ಕೆ ಅವೂ ಸಹ ತಮ್ಮ ಕಾಣಿಕೆ ನೀಡಲಿ ಎಂಬ ಸದುದ್ದೇಶದಿಂದ ಬರೆಯಲಾಗಿದೆ.

ಕೊಪ್ಪಳ ಜಿಲ್ಲೆ

ಕೊಪ್ಪಳ ಜಿಲ್ಲೆ

ಕುಕನೂರು, ಇದು ಒಂದು ಹಳ್ಳಿ. ಉತ್ತರ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಬರುತ್ತದೆ. ಇದು ಒಂದು ಹಳ್ಳಿಯಾಗಿದ್ದರೂ ಸಹ ಐತಿಹಾಸಿಕತೆಯಿಂದ ಸಾಕಷ್ಟು ಶ್ರೀಮಂತವಾಗಿದೆ. ಇಲ್ಲಿ ರಾಷ್ಟ್ರಕೂಟರ ಹಾಗೂ ಚಾಲುಕ್ಯರ ಉಪಸ್ಥಿತಿಯಿದ್ದುದರ ಹಲವಾರು ಉದಾಹರಣೆಗಳು ಕಂಡುಬರುತ್ತವೆ.

ಚಿತ್ರಕೃಪೆ: Dineshkannambadi

ಐತಿಹಾಸಿಕ ಶ್ರೀಮಂತಿಕೆ

ಐತಿಹಾಸಿಕ ಶ್ರೀಮಂತಿಕೆ

ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರಿಂದ ರಚಿತವಾದ ದೇವಾಲಯ ರಚನೆಗಳು ಇಲ್ಲಿ ಕಂಡುಬರುತ್ತವೆ. ಅಲ್ಲದೆ ದ್ರಾವಿಡ ವಾಸ್ತುಶೈಲಿಯ ಈ ರಚನೆಗಳು ರಾಷ್ಟ್ರಕೂಟರ ವಿಶಿಷ್ಟ ವಿನ್ಯಾಸ ಪ್ರಭಾವಗಳನ್ನು ಇತಿಹಾಸಕಾರರಿಗೆ ಪರಿಚಯಿಸುತ್ತವೆ. ಇಲ್ಲಿ ಕಂಡುಬರುವ ಪ್ರಮುಖ ಆಕರ್ಷಣೆ ಎಂದರೆ ನವಲಿಂಗ ದೇವಾಲಯ.

ಚಿತ್ರಕೃಪೆ: Dineshkannambadi

ದೇಗುಲಗಳ ಸಮೂಹ

ದೇಗುಲಗಳ ಸಮೂಹ

ರಾಷ್ಟ್ರಕೂಟ ದೊರೆಯಾದ ಅಮೋಘವರ್ಷ ಅಥವಾ ಅವನ ಮಗನಾದ ಎರಡನೆಯ ಕೃಷ್ಣನ ಆಳ್ವಿಕೆಯಲ್ಲಿ ಅಂದರೆ ಸುಮಾರು ಒಂಭತ್ತನೆಯ ಶತಮಾನದಲ್ಲಿ ನಿರ್ಮಾಣಗೊಂಡ ನವಲಿಂಗ ದೇವಾಲಯವು ಮೂಲತಃ ಹಲವು ದೇಗುಲಗಳ ಒಂದು ಸಮೂಹವಾಗಿದೆ.

ಚಿತ್ರಕೃಪೆ: Shiva321

ಪ್ರತಿಯೊಂದರಲ್ಲೂ ಶಿವಲಿಂಗ

ಪ್ರತಿಯೊಂದರಲ್ಲೂ ಶಿವಲಿಂಗ

ಈ ಸಮೂಹದಲ್ಲಿ ಒಟ್ಟು ಒಂಭತ್ತು ದೇಗುಲಗಳ ರಚನೆಗಳಿದ್ದು ಪ್ರತಿ ದೇಗುಲಗಳಲ್ಲಿ ಶಿವಲಿಂಗವಿರುವುದು ವಿಶೇಷವಾಗಿದೆ. ಹಾಗಾಗಿ ಇದನ್ನು ಒಟ್ಟಾರೆಯಾಗಿ ನವಲಿಂಗ ದೇವಾಲಯ ಎಂದು ಕರೆಯಲಾಗುತ್ತದೆ. ಇದೊಂದು ಪ್ರವಾಸಿ ಆಕರ್ಷಣೆಯಾಗಿದ್ದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಬಲು ಕಡಿಮೆ.

ಚಿತ್ರಕೃಪೆ: Shiva321

ಕೆತ್ತನೆಯ ಕೆಲಸ ಅದ್ಭುತ

ಕೆತ್ತನೆಯ ಕೆಲಸ ಅದ್ಭುತ

ಇವುಗಳು ನಿರ್ಮಿಸಲಾದ ವಿನ್ಯಾಸದ ಕುರಿತು ಅಷ್ಟೊಂದೇನೂ ವಿಶೇಷತೆಯಿಲ್ಲ. ಯಾವುದೆ ವಿಶೇಷ ಕ್ರಮಾಂಕದಲ್ಲಿರದೆ ಎಲ್ಲ ದೇಗುಲಗಳನ್ನು ಅನುಕೂಲವಿರುವ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳನ್ನು ಅಷ್ಟೊಂದು ಗುಣಮಟ್ಟವಲ್ಲದ ಮರಳುಗಲ್ಲುಗಳಿಂದ ನಿರ್ಮಿಸಲಾಗಿದ್ದರೂ ಇದರ ಮೇಲಿನ ಕೆತ್ತನೆ ಹಾಗೂ ಪೂರ್ಣಗೊಳಿಸಲಾದ ವಿವರಗಳು ಸಾಕಷ್ಟು ಶ್ರೀಮಂತವಾಗಿವೆ.

ಗಜಲಕ್ಷಿ ಹಾಗೂ ವಿಷ್ಣು

ಗಜಲಕ್ಷಿ ಹಾಗೂ ವಿಷ್ಣು

ಪ್ರತಿ ದೇಗುಲಗಳು ದಕ್ಷಿಣ ಭಾರತೀಯ ಶೈಲಿಯ ಶಿಖರಗಳನ್ನು ಒಳಗೊಂಡಿದ್ದು ಗರ್ಭಗುಡಿಯಲ್ಲಿ ಶಿವಲಿಂಗಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ಮೇಲ್ಭಾಗದಲ್ಲಿ ಗಜಲಕ್ಷ್ಮಿ ಹಾಗೂ ವಿಷ್ಣು ದೇವರ ಕೆತ್ತನೆಗಳಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Shiva321

ರಾಷ್ಟ್ರಕೂಟರು

ರಾಷ್ಟ್ರಕೂಟರು

ಒಂಭತ್ತನೇಯ ಶತಮಾನದ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಬರೆಯಲಾದ ಎಂದು ತಿಳಿದು ಬಂದಿರುವ ಕನ್ನಡ ಶಾಸನವಿದ್ದು ನವಲಿಂಗ ದೇವಾಲಯದಲ್ಲಿ ಅದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Dineshkannambadi

ಶಕ್ತಶಾಲಿ ದೇಗುಲ

ಶಕ್ತಶಾಲಿ ದೇಗುಲ

ಕುಕನೂರಿನ ಮಧ್ಯದಲ್ಲಿ ಬಲು ಶ್ರೀಮಂತವಾದ ಇತಿಹಾಸ ಹಾಗೂ ಬೆಲೆ ಹೊಂದಿರುವ ಮಹಾಮಾಯಾ ದೇವಾಲಯವಿದೆ. ಇದರ ವಿಶೇಷತೆ ಎಂದರೆ ಇಲ್ಲಿನ ಗರ್ಭಗುಡಿಯಲ್ಲಿ ಮೂರು ಮುಖ್ಯ ವಿಗ್ರಹಗಳಿದ್ದು ಎಲ್ಲವೂ ದಕ್ಷಿನಾಭಿಮುಖವಾಗಿವೆ. ಇದು ಅಪರೂಪ. ಲಕ್ಷ್ಮಿ ಹಾಗೂ ಪಾರ್ವತಿಯ ಎರಡು ಸ್ತ್ರೀ ವಿಗ್ರಹಗಳಿದ್ದರೆ ಇವರಿಬ್ಬರ ಜೊತೆಗಾರನಾಗಿ ಹರಿಹರನ ವಿಗ್ರಹವಿದೆ. ಮಹಾಭಾರತದಲ್ಲೂ ಸಹ ಈ ದೇವಾಲಯದ ಕುರಿತು ಉಲ್ಲೇಖವಿದೆ ಎಂದು ಹೇಳಲಾಗಿದೆ. ಹಾಗಾಗಿ ನವಲಿಂಗದ ನಂತರ ಇಲ್ಲಿ ನೋಡಬಹುದಾದ ಮತ್ತೊಂದು ಪ್ರಮುಖ ಧಾರ್ಮಿಕ ತಾಣ ಇದಾಗಿದೆ.

ಚಿತ್ರಕೃಪೆ: Shivakumar Patil

ದೇವಾಲಯಗಳು

ದೇವಾಲಯಗಳು

ಶಿವನಿಗೆ ಮುಡಿಪಾದ ಕಲ್ಲೇಶ್ವರ ಹಾಗೂ ಮಲ್ಲಿಕಾರ್ಜುನ ದೇವಾಲಯಗಳೂ ಸಹ ಕುಕನೂರಿನಲ್ಲಿ ಕಂಡುಬರುತ್ತವೆ. ಅದರಲ್ಲೂ ವಿಶೇಷವಾಗಿ ಇವು ಚಾಲುಕ್ಯರ ವಾಸ್ತುಶೈಲಿಯನ್ನು ಅನಾವರಣಗೊಳಿಸುವ ಅದ್ಭುತ ದೇವಾಲಯಗಳಾಗಿ ಗಮನ ಸೆಳೆಯುತ್ತವೆ.

ಚಿತ್ರಕೃಪೆ: Dineshkannambadi

ತಲುಪುವ ಬಗೆ

ತಲುಪುವ ಬಗೆ

ಕುಕನೂರು ಕೊಪ್ಪಳದಿಂದ 40 ಕಿ.ಮೀ, ಗದಗಿಂದ 52 ಕಿ.ಮೀ ಹಾಗೂ ಯಲಬುರ್ಗಾದಿಂದ 15 ಕಿ.ಮೀ ಹಾಗೂ ಬನ್ನಿಕೊಪ್ಪ ರೈಲು ನಿಲ್ದಾಣದಿಂದ 16 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Dinesh Kannambadi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more