Search
  • Follow NativePlanet
Share
» »ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!  

ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!  

ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!

ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಪ್ರಸಾದವಾಗಿ ಹಣ್ಣುಗಳು, ಪಂಚಕಜ್ಜಾಯ, ಲಡ್ಡು, ಬೂಂದಿ, ಖೀರು, ಮೋದಕ, ಹಲ್ವಾ, ಪುಳಿಯೊಗರೆ, ಮೊಸರನ್ನವನ್ನು ಕೊಡುವುದನ್ನು ನಾವೆಲ್ಲಾ ನೋಡಿದ್ದೇವೆ, ಸೇವಿಸಿದ್ದೇವೆ. ಆದರೆ ಕೆಲವು ದೇವಾಲಯಗಳಿವೆ. ಅಲ್ಲಿ ಮಾಂಸ ಮತ್ತು ಮದ್ಯವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇಲ್ಲಿ ಮಾಂಸಹಾರವನ್ನು ದೇವರಿಗೆ ಅರ್ಪಿಸಲಾಗುತ್ತದೆ. ನಂತರ ಭಕ್ತರಿಗೆ ವಿತರಿಸಲಾಗುತ್ತದೆ.

ಹೌದು ಇದನ್ನು ಕೇಳಿದ ನಿಮಗೆ ಆಶ್ಚರ್ಯವೆನಿಸಿದರೂ, ಅಲ್ಲಿ ಮಾಂಸಾಹಾರವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಅಂದಹಾಗೆ ಮಾಂಸಾಹಾರ ವಿತರಿಸುವ ಈ ದೇವಾಲಯಗಳ ಹೆಸರುಗಳನ್ನು ಹೆಚ್ಚಿನ ಜನರು ಕೇಳಿಲ್ಲ. ಹಾಗಾಗಿ ಇಲ್ಲಿ ನಾವು ಅಂತಹ ಕೆಲವು ದೇವಾಲಯಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇಲ್ಲಿ ಭಕ್ತರಿಗೆ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತದೆ.

ವಿಮಲಾ ದೇವಾಲಯ

ವಿಮಲಾ ದೇವಾಲಯ

ಒರಿಸ್ಸಾದಲ್ಲಿರುವ ಜಗನ್ನಾಥ ದೇವಾಲಯದ ಪ್ರಧಾನ ದೇವತೆಯಾದ ಬಿಮಲಾ ದೇವಿಗೆ ದೇವಾಲಯದ ಆವರಣದೊಳಗೆ ಮೀನು ಮತ್ತು ಪ್ರಾಣಿಗಳ ಬಲಿ ಕೊಡಲಾಗುತ್ತದೆ. ದುರ್ಗಾ ಪೂಜೆಯ ಸಮಯದಲ್ಲಿ, ಪವಿತ್ರ ಮಾರ್ಕಂಡ ದೇವಾಲಯದ ಕೊಳದಿಂದ ಮೀನನ್ನು ಹಿಡಿದು ತಂದು ಬೇಯಿಸಲಾಗುತ್ತದೆ. ಆ ನಂತರ ದೇವಿಗೆ ಅರ್ಪಿಸಲಾಗುತ್ತದೆ. ಇದನ್ನು 'ಬಿಮಲ ಪರುಸ' ಎಂದು ಕರೆಯಲಾಗುತ್ತದೆ (ವಿಮಲ ದೇವಿಯನ್ನು ಬಿಮಲ ಎಂದು ಉಚ್ಚರಿಸಲಾಗುತ್ತದೆ). ಹಬ್ಬದ ಸಮಯದಲ್ಲಿ ದೇವಿಯನ್ನು ಸಮಾಧಾನಪಡಿಸಲು ಮಾಂಸವು ಅಗತ್ಯವೆಂದು ಪರಿಗಣಿಸಲಾಗುತ್ತದೆ. ಜಗನ್ನಾಥನ ಮುಖ್ಯ ಗರ್ಭಗುಡಿಯ ಬಾಗಿಲುಗಳನ್ನು ಮುಂಜಾನೆ ತೆರೆಯುವ ಮೊದಲು ಈ ಆಚರಣೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಕೆಲವರಿಗೆ ಮಾತ್ರ ಬಿಮಲ ಪರುಸವನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಕಾಮಾಕ್ಯ ದೇವಿ ದೇವಾಲಯ

ಕಾಮಾಕ್ಯ ದೇವಿ ದೇವಾಲಯ

ಕಾಮಾಕ್ಯ ದೇವಾಲಯವು ಅಸ್ಸಾಂನಲ್ಲಿರುವ ಗುವಾಹಟಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ ಮತ್ತು ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಕಾಮಾಕ್ಯ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಗೆ ಕಾಣಿಕೆಯಾಗಿ ಭಕ್ತರು ಮೇಕೆ ತರುತ್ತಾರೆ. ಕಾಮಾಕ್ಯ ದೇವಸ್ಥಾನದಲ್ಲಿ ಎರಡು ರೀತಿಯ ಪ್ರಸಾದ (ಭೋಗ್) ನೀಡಲಾಗುತ್ತದೆ. ಒಂದು ಸಸ್ಯಾಹಾರಿ, ಇನ್ನೊಂದು ಮಾಂಸಾಹಾರಿ. ಮಾಂಸಾಹಾರ ಪ್ರಸಾದವಾಗಿ ಮೀನು ಮತ್ತು ಮೇಕೆ ಮಾಂಸ ಕೊಡಲಾಗುತ್ತದೆ. ವಿಶೇಷವೆಂದರೆ ಇಲ್ಲಿ ತಯಾರಿಸುವ ಆಹಾರಕ್ಕೆ ಈರುಳ್ಳಿ ಅಥವಾ ಬೆಳ್ಳುಳ್ಳಿ ಬಳಸುವುದಿಲ್ಲ. ಮಧ್ಯಾಹ್ನ 1 ಗಂಟೆಗೆ ಕಾಮಾಕ್ಯ ಮಾತೆಗೆ ಮಾಂಸಾಹಾರಿ ಆಹಾರವನ್ನು ನೀಡಲಾಗುತ್ತದೆ. ಈ ಕಾರಣದಿಂದ ದೇವಸ್ಥಾನವು 1:00 ರಿಂದ 3:00 ರವರೆಗೆ ಮುಚ್ಚಿರುತ್ತದೆ.

ಮುನಿಯಾಂಡಿ ಸ್ವಾಮಿ ದೇವಸ್ಥಾನ

ಮುನಿಯಾಂಡಿ ಸ್ವಾಮಿ ದೇವಸ್ಥಾನ

ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂ ತಾಲೂಕಿನ ವಡಕ್ಕಂಪಟ್ಟಿ ಎಂಬ ಸಣ್ಣ ಗ್ರಾಮವಿದೆ. ಈ ಹಳ್ಳಿಯಲ್ಲಿ ವರ್ಷಕ್ಕೊಮ್ಮೆ ಆಚರಿಸಲಾಗುವ ಉತ್ಸವದಲ್ಲಿ ಬಿರಿಯಾನಿ ಔತಣವನ್ನು ಆಯೋಜಿಸಲಾಗುತ್ತದೆ. ಆಗ 2000 ಕೆಜಿ ಬಿರಿಯಾನಿಯನ್ನು ಬೇಯಿಸಿ ಪ್ರಸಾದವಾಗಿ ನೀಡಲಾಗುತ್ತದೆ. ಇದು 83 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಮುನಿಯಾಂಡಿ ದೇವರಿಗೆ ಬಿರಿಯಾನಿ ಅಚ್ಚುಮೆಚ್ಚಿನ ಆಹಾರ ಎಂದು ಸ್ಥಳೀಯರು ಹೇಳುತ್ತಾರೆ. ಉಪಹಾರಕ್ಕಾಗಿ ಬಿರಿಯಾನಿ ತಿನ್ನುವುದು ಉತ್ಸವದ ವಿಶಿಷ್ಟ ಲಕ್ಷಣವಾಗಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಬಡಿಸಲಾಗುತ್ತದೆ. ಎಲ್ಲಾ ವಯೋಮಾನದ ಜನರು ಊಟಕ್ಕೆ ಕುಳಿತುಕೊಳ್ಳುತ್ತಾರೆ ಅಥವಾ ಪ್ರಸಾದಕ್ಕಾಗಿ ಸಾಲುಗಟ್ಟಿ ನಿಲ್ಲುವುದನ್ನು ನೀವು ನೋಡಬಹುದು. ಇಲ್ಲಿ ರಾತ್ರಿಯಿಡೀ 2,000 ಕಿಲೋಗ್ರಾಂಗಳಷ್ಟು ಅಕ್ಕಿ ಮತ್ತು ಮಟನ್ ಅನ್ನು ಬೃಹತ್ ಕಡಾಯಿಗಳಲ್ಲಿ ಬೇಯಿಸುತ್ತಾರೆ.

ದಕ್ಷಿಣೇಶ್ವರ ಕಾಳಿ ದೇವಸ್ಥಾನ

ದಕ್ಷಿಣೇಶ್ವರ ಕಾಳಿ ದೇವಸ್ಥಾನ

ಪಶ್ಚಿಮ ಬಂಗಾಳದ ದಕ್ಷಿಣೇಶ್ವರ ಕಾಳಿ ದೇವಾಲಯದಲ್ಲಿಯೂ ಸಹ ಮೀನನ್ನು ಮೊದಲು ಕಾಳಿ ದೇವಿಗೆ ಅರ್ಪಿಸಲಾಗುತ್ತದೆ. ನಂತರ ಎಲ್ಲಾ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಮಾತೆ ಕಾಳಿಗೆ ಮಾಂಸಾಹಾರವನ್ನು ಅರ್ಪಿಸುವುದು ಒಂದು ಆಚರಣೆ ಎಂದು ಇಲ್ಲಿ ಪರಿಗಣಿಸಲಾಗಿದೆ. ದಕ್ಷಿಣೇಶ್ವರ ದೇವಸ್ಥಾನದಲ್ಲಿ ದೇವಿಗೆ ಪ್ರತಿದಿನ ಭೋಗ್ ರೂಪದಲ್ಲಿ ಮೀನನ್ನು ಅರ್ಪಿಸಲಾಗುತ್ತದೆ. ಆದರೆ, ಇಲ್ಲಿ ಯಾವುದೇ ಪ್ರಾಣಿಗಳನ್ನು ಬಲಿ ಕೊಡುವುದಿಲ್ಲ. ಹೂಗ್ಲಿ ನದಿಯ ದಡದಲ್ಲಿ ನೆಲೆಗೊಂಡಿರುವ ದಕ್ಷಿಣೇಶ್ವರ ಕಾಳಿ ದೇವಸ್ಥಾನವು ಕೋಲ್ಕತ್ತಾದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ಅತ್ಯಂತ ಜನಪ್ರಿಯ ಪೂಜಾ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ರಾಣಿ ರಾಶ್ಮೋನಿ ಅವರು 1855 ರಲ್ಲಿ ಸ್ಥಾಪಿಸಿದರು. ಇವರು ಕಾಳಿ ದೇವಿಯ ಕಟ್ಟಾ ಭಕ್ತೆ. ದಕ್ಷಿಣೇಶ್ವರ ಕಾಳಿ ದೇವಾಲಯ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ದಕ್ಷಿಣೇಶ್ವರ ಕಾಳಿ ದೇವಸ್ಥಾನ ಎಷ್ಟು ಸುಂದರವಾಗಿದೆಯೆಂದರೆ ಈ ದೇವಾಲಯಕ್ಕೆ ಭೇಟಿ ನೀಡದೆ ಕೋಲ್ಕತ್ತಾ ಪ್ರವಾಸವು ಅಪೂರ್ಣ ಎಂದು ಹೇಳಲಾಗುತ್ತದೆ.

ಕಾಳಿಘಾಟ್ ಕಾಳಿ ದೇವಾಲಯ

ಕಾಳಿಘಾಟ್ ಕಾಳಿ ದೇವಾಲಯ

ಕೋಲ್ಕತ್ತಾದಲ್ಲಿರುವ ಕಾಳಿಘಾಟ್ ಕಾಳಿ ದೇವಾಲಯವು ಕೆಲವು ವಿಭಿನ್ನ ನಂಬಿಕೆಗಳನ್ನು ಹೊಂದಿದೆ. ದೇವಿಗೆ ಇಲ್ಲಿ ಸಸ್ಯಾಹಾರಿ ಪ್ರಸಾದ ನೀಡಲಾಗುತ್ತದೆ. ಆದರೆ ಇಲ್ಲಿ ಪ್ರಾಣಿಬಲಿ ಸಹ ನಡೆಯುತ್ತದೆ. ಭಕ್ತರೂ ಮೇಕೆ, ಕೋಳಿಯನ್ನು ಸಹ ಇಲ್ಲಿಗೆ ತರುತ್ತಾರೆ. ನಂತರ ಮಾಂಸವನ್ನು ಬೇಯಿಸಿ, ಭಕ್ತರಿಗೆ ಪ್ರಸಾದವಾಗಿ ಬಡಿಸಲಾಗುತ್ತದೆ. ದೇಶದ 51 ಶಕ್ತಿಪೀಠಗಳಲ್ಲಿ ಈ ದೇವಾಲಯವು ಒಂದು ಎಂದು ಹೇಳಲಾಗುತ್ತದೆ. ಶಿವನ ತಾಂಡವ ನೃತ್ಯದ ಸಮಯದಲ್ಲಿ ಸತಿಯ ಬಲ ಪಾದದ ಬೆರಳುಗಳು ಬಿದ್ದ ಸ್ಥಳ ಇದಾಗಿದೆ. 200 ವರ್ಷಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಪ್ರತಿದಿನ ಪ್ರಾಣಿಬಲಿಯೂ ನಡೆಯುತ್ತದೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ. ಕೋಲ್ಕತ್ತಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿರುವ ಕಾಳಿಘಾಟ್ ಕಾಳಿ ದೇವಸ್ಥಾನವು ವಾರದ ಎಲ್ಲಾ ದಿನಗಳು ತೆರೆದಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X