Search
  • Follow NativePlanet
Share
» »ಅದ್ಭುತ ಸ್ಥಳದಲ್ಲಿರುವ ಈ ದೇವಾಲಯದ ಒಳಗೆ ಹೋಗಲು ಜನರು ಹೆದರುವುದೇಕೆ?

ಅದ್ಭುತ ಸ್ಥಳದಲ್ಲಿರುವ ಈ ದೇವಾಲಯದ ಒಳಗೆ ಹೋಗಲು ಜನರು ಹೆದರುವುದೇಕೆ?

ಕೆಲವು ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಸಂಜೆ ಯಮದೇವನನ್ನು ಪೂಜಿಸಲಾಗುತ್ತದೆ. ಈ ದಿನ ಯಮ ದೇವನಿಗೆ ದೀಪವನ್ನು ಹಚ್ಚಲಾಗುತ್ತದೆ. ಏಕೆಂದರೆ ಈ ದಿನದಂದು ದೀಪವನ್ನು ಬೆಳಗಿಸುವುದರಿಂದ ವ್ಯಕ್ತಿ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಆದರೆ ಭೂಮಿಗೆ ಬಂದವನು ಒಂದಲ್ಲ ಒಂದು ದಿನ ಸಾಯಲೇಬೇಕು ಎಂಬುದಂತೂ ಸತ್ಯ. ಆದರೆ ಆತ್ಮವನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸುವ ಮೊದಲು, ಅವನನ್ನು ಭೂಮಿಯ ಮೇಲಿರುವ ಈ ದೇವಾಲಯಕ್ಕೆ ಕರೆದೊಯ್ಯಲಾಗುತ್ತದೆ ಎಂದು ಹೇಳಲಾಗುತ್ತದೆ.

ಆ ನಂತರ ಅವನ ಪಾಪಗಳು ಮತ್ತು ಪುಣ್ಯಗಳನ್ನು ಲೆಕ್ಕ ಮಾಡಿ, ನಂತರ ಯಮರಾಜನು ಆ ಆತ್ಮವನ್ನು ತನ್ನೊಂದಿಗೆ ಕರೆದೊಯ್ಯುತ್ತಾನಂತೆ. ಹಾಗಾದರೆ ಭೂಮಿಯ ಮೇಲೆ ಇರುವ ಆ ದೇವಾಲಯ ಯಾವುದು ಎಂದು ನೀವು ಆಶ್ಚರ್ಯ ಪಡುತ್ತಿರಬೇಕು ಅಲ್ಲವೇ, ಅಂದಹಾಗೆ ಇಲ್ಲಿ ಯಮರಾಜನು ಸತ್ತ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಾನೆ ಎಂದೂ ಸಹ ಹೇಳಲಾಗುವುದರಿಂದ ನಾವು ಇಂದು ಆ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

ದೇವಾಲಯಕ್ಕೆ ಹೋಗಲು ಹೆದರುವ ಜನರು

ದೇವಾಲಯಕ್ಕೆ ಹೋಗಲು ಹೆದರುವ ಜನರು

ಭಾರತದಲ್ಲಿ ಸಾಕಷ್ಟು ದೇವಾಲಯಗಳು ಇರುವುದರಿಂದ ನಮ್ಮ ದೇಶವನ್ನು ‘ದೇವಾಲಯಗಳ ದೇಶ' ಎಂದು ಕರೆಯಲಾಗುತ್ತದೆ. ದೇವಸ್ಥಾನವನ್ನು ನೆಮ್ಮದಿ ನೀಡುವ ತಾಣ ಎಂದೂ ಹೇಳಲಾಗುತ್ತದೆ. ನೀವು ಕೂಡ ಇಲ್ಲಿಯವರೆಗೆ ಅನೇಕ ದೇವಾಲಯಗಳಿಗೆ ಹೋಗಿರಬಹುದು. ಆದರೆ ಇಂದು ನಾವು ನಿಮಗೆ ಒಂದು ವಿಶಿಷ್ಟವಾದ ದೇವಾಲಯದ ಬಗ್ಗೆ ಹೇಳಲಿದ್ದೇವೆ.

ಈ ದೇವಾಲಯವು ಹಿಮಾಚಲ ಪ್ರದೇಶದ ಭರ್ಮೂರ್ ಜಿಲ್ಲೆಯಲ್ಲಿದೆ. ಆದರೆ ಈ ದೇವಸ್ಥಾನಕ್ಕೆ ಮಾತ್ರ ಜನರು ಹತ್ತಿರ ಹೋಗುವುದಕ್ಕೂ ಹೆದರುತ್ತಾರೆ. ಏಕೆಂದರೆ ಈ ದೇವಾಲಯದಲ್ಲಿ 'ಸಾವಿನ ದೇವರು' ಎಂದು ಕರೆಯಲ್ಪಡುವ ಯಮರಾಜನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಜನರು ಇಲ್ಲಿಗೆ ಬರಲು ಭಯಪಡುತ್ತಾರೆ.

ಈ ದೇವಾಲಯ ಎಲ್ಲಿದೆ?

ಈ ದೇವಾಲಯ ಎಲ್ಲಿದೆ?

ಈ ದೇವಾಲಯವು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೂರ್‌ನಲ್ಲಿದೆ. ಇಲ್ಲಿ ಈ ದೇವಾಲಯದ ಬಗ್ಗೆ ಅನೇಕ ರೀತಿಯ ನಂಬಿಕೆಗಳಿವೆ ಎಂದು ಹೇಳಲಾಗುತ್ತದೆ. ಹಾಗೆ ನೋಡಿದರೆ ಈ ದೇವಾಲಯಕ್ಕೆ ಯಾರೂ ಹೋಗುವುದಿಲ್ಲ ಎಂದು ಹೇಳಲಾಗುತ್ತದೆ. ಅನೇಕ ಜನರು ಈ ದೇವಾಲಯದಿಂದ ದೂರವಿರುವುದು ಸರಿ ಎಂದು ಪರಿಗಣಿಸಿದ್ದಾರೆ.

ಇದು ಇಡೀ ಜಗತ್ತಿನಲ್ಲಿ ಯಮರಾಜನ ಏಕೈಕ ದೇವಾಲಯವಾಗಿದ್ದು, ದೇವಾಲಯವು ಯಮನಿಗೆ ಸಮರ್ಪಿತವಾಗಿದೆ. ಇದು ದೆಹಲಿಯಿಂದ ಸುಮಾರು 500 ಕಿಲೋಮೀಟರ್ ದೂರದಲ್ಲಿದೆ, ನೀವು ಈ ದೇವಾಲಯದ ಹೊರಗೆ ನೋಡಿದರೆ ಅದು ಸಣ್ಣ ಮನೆಯಂತೆ ಕಾಣುತ್ತದೆ. ಈ ದೇವಾಲಯದೊಳಗಿನ ಖಾಲಿ ಕೋಣೆಯನ್ನು ಚಿತ್ರಗುಪ್ತನ ಕೋಣೆ ಎಂದು ಕರೆಯಲಾಗುತ್ತದೆ.

ಯಮರಾಜನ ದರ್ಬಾರು ನಡೆಯುವ ಸ್ಥಳ

ಯಮರಾಜನ ದರ್ಬಾರು ನಡೆಯುವ ಸ್ಥಳ

ಈ ದೇವಾಲಯದ ಒಳಗೆ ಖಾಲಿ ಕೋಣೆ ಇದೆಯಂತೆ. ಇದು ಚಿತ್ರಗುಪ್ತನ ಕೋಣೆ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಸತ್ತಾಗ, ಯಮನ ದೂತರು ಅವನ ಆತ್ಮವನ್ನು ತರಲು ಹೋಗುತ್ತಾರೆ ಎಂದು ಹೇಳಲಾಗುತ್ತದೆ. ನಂತರ ಆತ್ಮವನ್ನು ಚಿತ್ರಗುಪ್ತನ ಬಳಿಗೆ ತರಲಾಗುತ್ತದೆ. ಇಲ್ಲಿ ಅವನು ಆತ್ಮದ ಕ್ರಿಯೆಗಳ ಖಾತೆಯನ್ನು ಬರೆಯುತ್ತಾನೆ. ಈ ಕ್ರಿಯೆಯ ನಂತರ ಆತ್ಮವನ್ನು ಚಿತ್ರಗುಪ್ತನ ಕೋಣೆಯ ಎದುರಿನ ಕೋಣೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಯಮರಾಜನ ದರ್ಬಾರು ನಡೆಯುತ್ತದೆ. ದರ್ಬಾರು ಸ್ಥಳದಲ್ಲಿ ಕ್ರಿಯೆಯು ನಡೆದು, ಆ ನಂತರ ಮತ್ತೊಮ್ಮೆ ವ್ಯಕ್ತಿಯ ಆತ್ಮವನ್ನು ಸ್ವರ್ಗಕ್ಕೆ ಅಥವಾ ನರಕಕ್ಕೆ ಕಳುಹಿಸುವುದಾ ಎಂದು ನಿರ್ಧರಿಸಲಾಗುತ್ತದೆ.

ದೇವಾಲಯಕ್ಕೆ ನಾಲ್ಕು ದ್ವಾರಗಳಿವೆ

ದೇವಾಲಯಕ್ಕೆ ನಾಲ್ಕು ದ್ವಾರಗಳಿವೆ

ಒಬ್ಬ ವ್ಯಕ್ತಿಯು ಸತ್ತಾಗ, ಆ ವ್ಯಕ್ತಿಯ ಆತ್ಮವು ಮೊದಲು ಈ ದೇವಾಲಯಕ್ಕೆ ಬರುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಅಲ್ಲಿ ಅವನು ಯಮರಾಜನ ಆಸ್ಥಾನದಲ್ಲಿ ಹಾಜರಾಗುತ್ತಾನೆ. ಆ ನಂತರ ಯಮ ದೂತನು ಆ ಆತ್ಮವನ್ನು ನರಕ ಅಥವಾ ಸ್ವರ್ಗಕ್ಕೆ ಕರೆದೊಯ್ಯುತ್ತಾನೆ. ಈ ದೇವಾಲಯದ ಒಳಗೆ ಯಾರೂ ಹೋಗುವುದಿಲ್ಲ. ಜನರು ದೇವಾಲಯದ ಹೊರಗಿನಿಂದ ಮಾತ್ರ ಪ್ರಾರ್ಥಿಸುತ್ತಾರೆ.

ಈ ದೇವಾಲಯವು ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣದಿಂದ ಮಾಡಲ್ಪಟ್ಟ ನಾಲ್ಕು ದ್ವಾರಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಯಮರಾಜ ನಿರ್ಧಾರ ತೆಗೆದುಕೊಂಡ ನಂತರ, ಯಮದೂತರು ಕಾರ್ಯಗಳ ಪ್ರಕಾರ ಆತ್ಮವನ್ನು ಸ್ವರ್ಗ ಅಥವಾ ನರಕಕ್ಕೆ ಕೊಂಡೊಯ್ಯುತ್ತಾರೆ. ಗರುಡ ಪುರಾಣದಲ್ಲಿಯೂ ಯಮರಾಜನ ಆಸ್ಥಾನದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದ್ವಾರಗಳಿವೆ ಎಂದು ಹೇಳಲಾಗಿದೆ.

ಭರ್ಮೂರ್‌ನಲ್ಲಿ ಏನೆಲ್ಲಾ ನೋಡಬಹುದು?

ಭರ್ಮೂರ್‌ನಲ್ಲಿ ಏನೆಲ್ಲಾ ನೋಡಬಹುದು?

ಹಿಮಾಚಲ ಪ್ರದೇಶ ರಾಜ್ಯದ ಜನಪ್ರಿಯ ಸ್ಥಳ ಭರ್ಮೂರ್‌ ಯಮರಾಜನ ದೇವಾಲಯಕ್ಕೆ ಮಾತ್ರವಲ್ಲದೆ, ಹಚ್ಚ ಹಸಿರು ಮತ್ತು ಹಿಮದಿಂದ ಆವೃತವಾದ ಶಿಖರಗಳನ್ನು ಹೊಂದಿರುವುದಕ್ಕೂ ಖ್ಯಾತಿ ಪಡೆದಿದೆ. ಹಿಂದೆ ಬ್ರಹ್ಮಪುರ ಎಂದು ಕರೆಯಲ್ಪಡುತ್ತಿದ್ದ ಇದು ಚಂಬಾದಿಂದ 64 ಕಿ.ಮೀ ದೂರದಲ್ಲಿದೆ. ತನ್ನ ಸೌಂದರ್ಯದ ಹೊರತಾಗಿ, ಗ್ರಾಮವು ಹಲವಾರು ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಕೆಲವು 10 ನೇ ಶತಮಾನದಷ್ಟು ಹಿಂದಿನವು ಎಂದು ನಂಬಲಾಗಿದೆ. ಚೌರಾಸಿ ದೇವಾಲಯವು ಅತ್ಯಂತ ಜನಪ್ರಿಯವಾಗಿದೆ.

ಇಲ್ಲಿ ಕಂಡುಬರುವ ಇತರ ದೇವಾಲಯಗಳಲ್ಲಿ ಭಗವತಿ ಮಾತಾ ದೇವಾಲಯ, ಶಿವಶಕ್ತಿ ದೇವಿ ದೇವಾಲಯ, ಬನ್ನಿ ಮಾತಾ ದೇವಾಲಯ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ವಾತವರಣವು ಶಾಂತಿಯುತವಾಗಿ ಇರುತ್ತದೆ. ಶಿವನು ಇಲ್ಲಿಗೆ ಹತ್ತಿರದ ಕೈಲಾಸ ಪರ್ವತದಲ್ಲಿ ನೆಲೆಸಿದ್ದಾನೆ ಎಂದು ನಂಬಿರುವುದರಿಂದ ಇದನ್ನು ಕೆಲವೊಮ್ಮೆ "ಶಿವನ ನಾಡು" ಎಂದೂ ಕರೆಯುತ್ತಾರೆ. ಹಚ್ಚ ಹಸಿರಿನ ಹುಲ್ಲುಗಾವಲುಗಳಿಂದ ಹರಡಿರುವ ಭರ್ಮೂರ್‌ ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ. ಇದು ಸುಂದರವಾದ ಜಲಪಾತಗಳಿಗೂ ನೆಲೆಯಾಗಿದ್ದು, ಇಲ್ಲಿ ನೀವು ಸ್ನಾನ ಕೂಡ ಮಾಡಬಹುದು.

ತಲುಪುವುದು ಹೇಗೆ?

ಭರ್ಮೂರ್‌ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕಾಂಗ್ರಾ ವಿಮಾನ ನಿಲ್ದಾಣ. ಇದು 180 ಕಿಮೀ ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣಗಳೆಂದರೆ ಪಠಾಣ್‌ಕೋಟ್ ರೈಲು ನಿಲ್ದಾಣ ಮತ್ತು ಚಕ್ಕಿ ಬ್ಯಾಂಕ್ ರೈಲು ನಿಲ್ದಾಣ, ಇವೆರಡೂ ಭರ್ಮೂರ್‌ನಿಂದ ತಲಾ 180 ಕಿಮೀ ದೂರದಲ್ಲಿವೆ. ಅಷ್ಟೇ ಅಲ್ಲ, ನಗರವು ನೆರೆಯ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದು, ಸಾರ್ವಜನಿಕ ಬಸ್ಸುಗಳು ಇಲ್ಲಿ ಓಡಾಡುತ್ತವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+