Search
  • Follow NativePlanet
Share
» »ಗಿರಿಗಳ ರಾಣಿಯ ನೋಡಿ... ಮನ ತಣಿಯುವುದು...

ಗಿರಿಗಳ ರಾಣಿಯ ನೋಡಿ... ಮನ ತಣಿಯುವುದು...

ಮಧುರೈನಿಂದ ಸುಮಾರು 120 ಕಿ.ಮೀ. ವ್ಯಾಪ್ತಿಯಲ್ಲಿ ಕಂಗೊಳಿಸುವ ತಾಣ ಕೊಡೈಕೆನಲ್. ಸದಾ ಕಾಲ ಮಂಜಿನ ಹೊಗೆಯಿಂದಲೇ ಕೂಡಿರುವ ಈ ತಾಣಕ್ಕೆ ಗಿರಿಗಳ ರಾಣಿ ಎಂದು ಕರೆಯುತ್ತಾರೆ.

By Divya

ಮಧುರೈನಿಂದ ಸುಮಾರು 120 ಕಿ.ಮೀ. ವ್ಯಾಪ್ತಿಯಲ್ಲಿ ಕಂಗೊಳಿಸುವ ತಾಣ ಕೊಡೈಕೆನಲ್. ಸದಾ ಕಾಲ ಮಂಜಿನ ಹೊಗೆಯಿಂದಲೇ ಕೂಡಿರುವ ಈ ತಾಣಕ್ಕೆ ಗಿರಿಗಳ ರಾಣಿ ಎಂದು ಕರೆಯುತ್ತಾರೆ. ದಟ್ಟವಾದ ಹಸಿರು ಸಿರಿ, ಅಲ್ಲಲ್ಲಿ ಧುಮುಕುವ ಜಲಪಾತಗಳು, ವಿಭಿನ್ನ ಬಗೆಯ ವಿಶೇಷ ಸಸ್ಯ ರಾಶಿ, ಉದ್ಯಾನಗಳು, ಪವಿತ್ರ ಕ್ಷೇತ್ರಗಳು ಹಾಗೂ ಐತಿಹಾಸಿಕ ತಾಣಗಳು ಇಲ್ಲಿವೆ.

ಇಲ್ಲಿಯ ಸ್ಥಳೀಯರು ಪ್ರವಾಸಿಗರನ್ನು ಸ್ವಾಗತಿಸಿ, ಆದರಾತಿಥ್ಯ ಮಾಡುವುದನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡಿದ್ದಾರೆ. ಕೊಡೈ ಎಂದರೆ "ಅರಣ್ಯದ ಕೊನೆ'' , "ಅರಣ್ಯದ ಲತೆಗಳು' ಎಂಬ ಅರ್ಥಗಳನ್ನು ನೀಡುತ್ತದೆ. ಹೊಸ ಜೋಡಿಗಳಿಗೆ ಮಧುಚಂದ್ರದ ತಾಣ ಎನ್ನುವ ಪ್ರಸಿದ್ಧಿ ಪಡೆದ ಈ ಸ್ಥಳಕ್ಕೆ ಸ್ನೇಹಿತರೊಡನೆ ಹಾಗೂ ಕುಟುಂಬದವರೊಡನೆಯೂ ಬರಬಹುದು.

ಬೆಂಗಳೂರಿನಿಂದ 464.3 ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೆ 7-8 ತಾಸುಗಳ ಪ್ರಯಾಣ ಮಾಡಬೇಕು. ಪ್ರಸಿದ್ಧ ಪ್ರವಾಸ ತಾಣವಾದ್ದರಿಂದ ಯಾತ್ರಿಕರಿಗೆ ಬೇಕಾದಂತಹ ರೆಸಾರ್ಟ್, ಹೋಟೆಲ್ ಹಾಗೂ ಸ್ಟೇ ಹೋಮ್‍ಗಳು ಇವೆ. ಬಾಡಿಗೆ ವಾಹನಗಳ ವ್ಯವಸ್ಥೆಗೂ ಯಾವುದೇ ಅಡಚಣೆ ಉಂಟಾಗದು. ಒಮ್ಮೆ ನೋಡಬೇಕಾದಂತಹ ಸ್ಥಳಗಳ ಹೆಸರನ್ನು ಹೇಳಿದರೆ ಸಾಕು. ಚಾಲಕರೇ ಕರೆದುಕೊಂಡು ಹೋಗುತ್ತಾರೆ. ಇಲ್ಲಿಗೆ ಬಂದಾಗ ಮರೆಯದೆ ನೋಡಬೇಕಾದ ಪ್ರಮುಖ ಸ್ಥಳಗಳ ಕಿರುನೋಟ ಇಲ್ಲಿದೆ.

ಕೊಡೈಕೆನಲ್ ಕೆರೆ

ಕೊಡೈಕೆನಲ್ ಕೆರೆ

ಇದು ಕೊಡೈಕೆನಲ್‍ನ ಹೃದಯ ಭಾಗದಲ್ಲಿದೆ. ನಕ್ಷತ್ರಾಕೃತಿಯಲ್ಲಿ ಇರುವ ಈ ಕೆರೆ 60 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಪ್ರವಾಸಿಗರು ದೋಣಿ ವಿಹಾರ, ಕುದುರೆ ಸವಾರಿ, ಸೈಕ್ಲಿಂಗ್ ಮತ್ತು ಆಂಗ್ಲಿಂಗ್ (ಗಾಳದಲ್ಲಿ ಮೀನು ಹಿಡಿಯುವುದು) ಮಾಡಬಹುದು. 1863 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕೆರೆ ಪ್ರವಾಸಿಗರಿಗೊಂದು ಆಕರ್ಷಕ ತಾಣ. ಮೇ ತಿಂಗಳಲ್ಲಿ ವಾರ್ಷಿಕ ಉತ್ಸವ ಬಹಳ ಅದ್ದೂರಿಯಿಂದ ನಡೆಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ.
PC: wikipedia.org

ಗ್ರೀನ್ ವ್ಯಾಲಿ ವ್ಯೂ

ಗ್ರೀನ್ ವ್ಯಾಲಿ ವ್ಯೂ

ಇದನ್ನು ಸುಸೈಡ್ ಪಾಯಿಂಟ್ ಎಂತಲೂ ಕರೆಯುತ್ತಾರೆ. ನಗರದಿಂದ 3 ಕಿ.ಮೀ. ದೂರದಲ್ಲಿರುವ ಈ ತಾಣ ದಟ್ಟವಾದ ಹಸಿರು ಗಿಡಮರಗಳು ಹಾಗೂ ಹಿಮದ ಹೊಗೆಯಿಂದ ಕೂಡಿರುತ್ತದೆ. ಇಲ್ಲಿ ಒಮ್ಮೆ ನಡೆದು ಸಾಗಿದರೆ ಸ್ವರ್ಗದ ಅನುಭವ ಆಗುವುದು. ಬಹಳ ಆಳವಾದ ಕಣಿವೆಗಳಿಂದ ಕೂಡಿರುವುದರಿಂದ ಸುಂದರವಾದ ಪ್ರಕೃತಿ ಸಿರಿಯನ್ನು ಸೆರೆ ಹಿಡಿಯಬಹುದು. ಇಲ್ಲಿ ಅನೇಕ ಆತ್ಮಹತ್ಯೆ ಪ್ರಕರಣಗಳು ನಡೆದಿರುವುದರಿಂದ ಸುಸೈಡ್ ಪಾಯಿಂಟ್ ಎಂದು ಕರೆಯುತ್ತಾರೆ ಎನ್ನಲಾಗುತ್ತದೆ.
PC: wikimedia.org

ಪಿಲ್ಲರ್ ರಾಕ್ಸ್

ಪಿಲ್ಲರ್ ರಾಕ್ಸ್

ಪ್ರಸಿದ್ಧ ತಾಣ ಎನ್ನುವ ಹಿರಿಮೆಯನ್ನು ಹೊಂದಿರುವ ಈ ತಾಣ ಕೊಡೈಕೆನಲ್ ಕೆರೆಯಿಂದ 8 ಕಿ.ಮೀ. ಹಾಗೂ ನಗರ ಪ್ರದೇಶದಿಂದ 3 ಕಿ.ಮೀ. ದೂರದಲ್ಲಿದೆ. 400 ಅಡಿ ಎತ್ತರದಲ್ಲಿರುವ ಈ ತಾಣದಲ್ಲಿ ಒಂದು ಪುಟ್ಟ ಉದ್ಯಾನವೂ ಇದೆ. ಇಲ್ಲಿರುವ ಎರಡು ಮಹಾನ್ ಬಂಡೆಯ ಮಧ್ಯದಲ್ಲಿರುವ ಅಂತರವನ್ನು ಡೆವಿಲ್ಸ್ ಕಿಚನ್ ಎಂದು ಕರೆಯುತ್ತಾರೆ. ಇಲ್ಲಿಯ ಸುತ್ತಲ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಸುಂದರ ಅನುಭವ.
PC: wikipedia.org

ಬೆರಿಜಮ್ ಲೇಕ್

ಬೆರಿಜಮ್ ಲೇಕ್

ಅರಣ್ಯದ ಒಳಭಾಗದಲ್ಲಿ ನೆಲೆಸಿರುವ ಈ ಕೆರೆ ನಗರ ಪ್ರದೇಶದಿಂದ 12 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಪ್ರವೇಶಕ್ಕೆ 100 ರೂ. ಟಿಕೆಟ್ ಪಡೆದು ಅನುಮತಿ ಮಡೆಯಬೇಕು. ಬೆಳಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಅವಕಾಶವಿರುತ್ತದೆ. ಸುಂದರ ಪಕ್ಷಿಗಳು ಹಾಗೂ ಪ್ರಾಣಿಗಳ ವೀಕ್ಷಣೆಗಷ್ಟೇ ಇಲ್ಲಿ ಅವಕಾಶ. ಆಹಾರ ಉತ್ಪನ್ನಗಳು ಹಾಗೂ ನೀರು ಇನ್ನಿತರ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
PC: wikipedia.org

ಕೋಕರ್ಸ್ ವಾಕ್

ಕೋಕರ್ಸ್ ವಾಕ್

ಇದನ್ನು 1872ರಲ್ಲಿ ಲೆಫ್ಟಿನೆಂಟ್ ಕೋಕರ್ ಎಂಬುವರು ನಿರ್ಮಿಸಿದರು. ಆದ್ದರಿಂದಲೇ ಇದನ್ನು ಕೋಕರ್ಸ್ ವಾಕ್ ಎಂದು ಕರೆಯುತ್ತಾರೆ. ಕೊಡೈಕೆನಲ್ ಕೆರೆಯಿಂದ ಒಂದು ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಟೆಲಿಸ್ಕೋಪ್ ನಿಂದ ಗಿರಿಧಾಮ ಹಾಗೂ ನಗರಗಳನ್ನು ನೋಡಬಹುದು. ಪರಿಸರದ ಮಡಿಲಲ್ಲಿ ಕಾಲ ಕಳೆಯ ಬಯಸುವವರಿಗೆ ಇದೊಂದು ಸೂಕ್ತ ತಾಣ.
PC: wikimedia.org

ಬ್ರೈಯಂಟ್ ಪಾರ್ಕ್

ಬ್ರೈಯಂಟ್ ಪಾರ್ಕ್

ಕೊಡೈಕೆನಲ್‍ನಲ್ಲಿರುವ ಪ್ರಸಿದ್ಧ ಜೈವಿಕ ಉದ್ಯಾನ ಇದು ಎನ್ನುವ ಹೆಸರನ್ನು ಪಡೆದುಕೊಂಡಿದೆ. 1908ರಲ್ಲಿ ವಿನ್ಯಾಸಗೊಂಡ ಈ ಉದ್ಯಾನ ನಗರ ಪ್ರದೇಶದಿಂದ 1 ಕಿ.ಮೀ. ದೂರದಲ್ಲಿದೆ. ವಿವಿಧ ಸಸ್ಯಗಳು, ವಿನೂತನ ಪೊದೆಗಳು ಹಾಗೂ ಮರಗಳನ್ನು ನೋಡಬಹುದು. ಇಲ್ಲಿರುವ ಒಂದು ಬೋಧಿ ವೃಕ್ಷದಿಂದ ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ಇಲ್ಲಿರುವ ಗ್ಲಾಸ್ ಹೌಸ್ ಪ್ರಮುಖ ಆಕರ್ಷಣೆ.
PC: wikimedia.org

ಬಿಯರ್ ಶೋಲಾ ಜಲಪಾತ

ಬಿಯರ್ ಶೋಲಾ ಜಲಪಾತ

ನಗರ ಪ್ರದೇಶದಿಂದ 1 ಕಿ.ಮೀ. ಹಾಗೂ ಕೊಡೈಕೆನಲ್ ಕೆರೆಯಿಂದ 2 ಕಿ.ಮೀ. ದೂರದಲ್ಲಿದೆ. ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿದೆ. ಇಲ್ಲಿ ಮೊದಲು ಕರಡಿಗಳು ನೀರು ಕುಡಿಯಲು ಬರುತ್ತಿದ್ದವು. ಹಾಗಾಗಿಯೇ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಸುಂದರವಾಗಿ ಧುಮುಕುವ ಈ ಜಲಧಾರೆ ನಯನ ಮನೋಹರವಾಗಿರುತ್ತವೆ.
PC: wikimedia.org

ಕುರುಂಜಿ ಆಂಡವರ್ ದೇವಾಲಯ

ಕುರುಂಜಿ ಆಂಡವರ್ ದೇವಾಲಯ

ನಗರ ಪ್ರದೇಶದಿಂದ 2 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ ಸುಬ್ರಹ್ಮಣ್ಯ ಸ್ವಾಮಿಗೆ ಮೀಸಲು. ಇಲ್ಲಿ 12 ವರ್ಷಕ್ಕೊಮ್ಮೆ ಅರಳುವ ಕುರುಂಜಿ ಪುಷ್ಪವು ಇಲ್ಲಿ ಅರಳುತ್ತದೆ. ಪವಿತ್ರವಾದ ವಾಸ್ತು ಶಿಲ್ಪವನ್ನು ಒಳಗೊಂಡಿರುವ ಈ ದೇಗುಲಕ್ಕೆ ಭೇಟಿ ನೀಡಿದರೆ ಭಕ್ತರ ಸಂಕಷ್ಟ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.
PC: wikimedia.org

ಸೈಲೆಂಟ್ ವ್ಯಾಲಿ ವ್ಯೂ

ಸೈಲೆಂಟ್ ವ್ಯಾಲಿ ವ್ಯೂ

ನಗರ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿರುವ ಈ ತಾಣ ಪಿಲ್ಲರ್ ರಾಕ್ ಗಾರ್ಡನ್‍ಗೆ ಬಹಳ ಹತ್ತಿರದಲ್ಲಿದೆ. ಅದ್ಭುತ ನೋಟಗಳನ್ನು ಸೆರೆ ಹಿಡಿಯಬಹುದಾದ ಈ ತಾಣಕ್ಕೆ ಮುಂಜಾನೆಯ ಸಮಯ ಹಾಗೂ ಸಾಯಂಕಾಲದ ವೇಳೆ ಭೇಟಿ ನೀಡಬೇಕು. ಸೂರ್ಯಾಸ್ತ ಹಾಗೂ ಸೂರ್ಯೋದಯದ ಸೌಂದರ್ಯವು ಮನಸೂರೆಗೊಳಿಸುತ್ತವೆ.
PC: wikimedia.org

ಡಾಲ್ಫಿನ್ಸ್ ನೋಸ್

ಡಾಲ್ಫಿನ್ಸ್ ನೋಸ್

ಸುಮಾರು 6600 ಅಡಿ ಎತ್ತರದಲ್ಲಿರುವ ಈ ತಾಣ ನಗರದ ಮುಖ್ಯ ಭಾಗದಿಂದ 8 ಕಿ.ಮೀ. ದೂರದಲ್ಲಿದೆ. ಸುಂದರ ಚಾರಣ ಅನುಭವ ನೀಡುವ ಈ ತಾಣ ದಟ್ಟವಾದ ಮಂಜಿನ ಹೊಗೆಯಿಂದ ಕೂಡಿರುತ್ತದೆ. ಇಲ್ಲಿಗೆ ನಡೆದು ಬರುವುದೇ ಒಂದು ಖುಷಿ.
PC: wikipedia.org

ಸಿಲ್ವರ್ ಕ್ಯಾಸ್ಕೇಡ್ ಜಲಪಾತ

ಸಿಲ್ವರ್ ಕ್ಯಾಸ್ಕೇಡ್ ಜಲಪಾತ

ಪ್ರಮುಖ ಆಕರ್ಷಣಾ ತಾಣವಾದ ಈ ಜಲಧಾರೆ 180 ಅಡಿಯಿಂದ ಧುಮುಕುತ್ತದೆ. ನಗರ ಪ್ರದೇಶದಿಂದ 8 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ಈಜಬಹುದು.
PC: wikimedia.org

ತಲೈಯರ್ ಜಲಪಾತ

ತಲೈಯರ್ ಜಲಪಾತ

975 ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆ ಪಳನಿ ಗಿರಿಗಳ ಸಾಲಲ್ಲಿದೆ. ಮಂಜಿನ ಹೊಗೆ ಕಡಿಮೆ ಇರುವ ಸಂದರ್ಭದಲ್ಲಿ ಕೊಡೈಕೆನಲ್‍ನ ಬಟಲುಗುಂಡು ಘಾಟಿ ರಸ್ತೆಮಾರ್ಗದಲ್ಲಿ ನಿಂತು ನೋಡಬಹುದು.
PC: wikipedia.org

ಚಾರಣ ತಾಣ

ಚಾರಣ ತಾಣ

ಗಿರಿಗಳ ಸಾಲಿನಿಂದಲೇ ಕೂಡಿಕೊಂಡಿರುವ ಕೊಡೈಕೆನಲ್‍ನಲಲ್ಲಿ ಅನೇಕ ಕಡೆಯಲ್ಲಿ ಚಾರಣದ ಅನುಭವ ಪಡೆಯಬಹುದು. ಶುದ್ಧವಾದ ವಾತಾವರಣ ಹೊಂದಿರುವ ಈ ತಾಣದಲ್ಲಿ ಎಷ್ಟು ನಡೆದರೂ ಆಯಾಸದ ಅನುಭವ ಆಗದು.
PC: wikipedia.org

ಸೂರ್ಯನ ವೀಕ್ಷಣಾಲಯ

ಸೂರ್ಯನ ವೀಕ್ಷಣಾಲಯ

ನಗರ ಪ್ರದೇಶದಿಂದ 6 ಕಿ.ಮೀ. ದೂರದಲ್ಲಿದೆ. 1901ರಲ್ಲಿ ಆರಂಭವಾದ ಈ ವೀಕ್ಷಣಾಲಯದಲ್ಲಿ ರಾತ್ರಿ ವೇಳೆ ಆಕಾಶದ ಲೋಕವನ್ನು ವೀಕ್ಷಿಸಬಹುದು. ವಾರದ ಎಲ್ಲಾ ದಿನವೂ ತೆರೆದಿರುತ್ತದೆ. ಪ್ರವಾಸಿಗರು ಈ ಅಪರೂಪದ ತಾಣಕ್ಕೆ ಭೇಟಿ ನೀಡಿ ಸುಂದರ ಅನುಭವವನ್ನು ಪಡೆಯಬಹುದು.
PC: wikipedia.org

ಗುಣಾ ಗುಹೆಗಳು

ಗುಣಾ ಗುಹೆಗಳು

ತಮಿಳು ಚಲನಚಿತ್ರ ಗುಣಾ ದಿಂದ ಈ ಗುಹೆ ಪ್ರಸಿದ್ಧಿ ಪಡೆದಿದೆ. ಮೊದಲು ಇದನ್ನು ಡೆವಿಲ್ಸ್ ಕಿಚನ್ ಎಂದು ಕರೆಯುತ್ತಿದ್ದರು. ಬೃಹದಾಕಾರದ ಬಂಡೆಗಳ ನಡುವೆ ಇರುವ ಈ ಗುಹೆ ಕಿರಿದಾದ ಒಂದು ಕಂದಕವನ್ನು ಹೊಂದಿತ್ತು. ಇದರಲ್ಲಿ ಅನೇಕ ಯುವಕರು ಸಾವನ್ನಪ್ಪಿದ್ದಾರೆ. ಹಾಗಾಗಿ ಈ ಕಂದಕವನ್ನು ಈಗ ಮುಚ್ಚಲಾಗಿದೆ. ಗಹೆಯನ್ನು ದೂರದಿಂದ ನೋಡಬಹುದು.
PC: wikimedia.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X