Search
  • Follow NativePlanet
Share
» »ಕೇರಳದ ಸುಂದರ ಜಲಾಶಯ ಹಾಗು ಆಣೆಕಟ್ಟುಗಳು

ಕೇರಳದ ಸುಂದರ ಜಲಾಶಯ ಹಾಗು ಆಣೆಕಟ್ಟುಗಳು

By Vijay

ಭಾರತದ ದಕ್ಷಿಣ ಭಾಗದಲ್ಲಿರುವ ಕೇರಳ ರಾಜ್ಯವು ಒಂದು ಅಮೋಘವಾದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಅದು ಕೂಡ ಕೇವಲ ಭಾರತೀಯರಿಗೆ ಮಾತ್ರವಲ್ಲ..ವಿದೇಶಿಯರಿಗೂ ಕೂಡ. ಹಸಿರು ಹಸಿರಾದ ಪರಿಸರ, ಚಹಾ ತೋಟಗಳ ಜೊತೆಗೆ ಸಾಂಬಾರ ಪದಾರ್ಥಗಳ ಸುವಾಸನೆಯು ಪಸರಿರುವ ವಾತಾವರಣ, ಮನಕ್ಕೆ ಮುದ ನೀಡುವ ಅಲ್ಲಲ್ಲಿ ಕಂಡುಬರುವ ಕೆರೆ ತೊರೆಗಳು, ತಾಜಾತನದ ಅನುಭವವನ್ನು ಒದಗಿಸುವ ಗಿಡ ಮರಗಳು, ಒತ್ತಡದ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವ ಹಿನ್ನೀರಿನಲ್ಲಿನ ದೋಣಿಮನೆಗಳ ಸವಾರಿ...ಇವೆಲ್ಲ ಗುರುತುಗಳನ್ನು ಒಟ್ಟಾರೆಯಾಗಿ ಮನದಲ್ಲಿ ಸೇರಿಸಿಕೊಂಡು ಕೇರಳ ರಾಜ್ಯದ ಚಿತ್ರಣವನ್ನು ನಮ್ಮ ಅಕ್ಷಿಪಟಲದಲ್ಲಿ ಮೂಡಿಸಿಕೊಳ್ಳಬಹುದು.

"ದೇವರ ಸ್ವಂತ ನಾಡು" ಎಂಬ ಶೀರ್ಷಿಕೆ ಹೊಂದಿರುವ ಈ ರಾಜ್ಯವು ಉತ್ತರದಲ್ಲಿ ಕರ್ನಾಟಕ ಹಾಗು ಪೂರ್ವದಲ್ಲಿ ತಮಿಳುನಾಡು ರಾಜ್ಯಗಳಿಂದ ಸುತ್ತುವರೆದಿದೆ. ಭೌತಿಕವಾಗಿ ಈ ಎರಡೂ ರಾಜ್ಯಗಳಿಗಿಂತ ಚಿಕ್ಕದಾಗಿರುವ ಕೇರಳವು ಒಂದು ಪ್ರಕೃತಿ ಸೌಂದರ್ಯಗಳ ಆದರ್ಶ ಪ್ರವಾಸಿ ತಾಣವಾಗಿ ದೊಡ್ಡ ತಾಣಗಳ ಪೈಕಿ ಒಂದಾಗಿ ನಿಲ್ಲುತ್ತದೆ. ಇಲ್ಲಿ ಹರಿದಿರುವ ಅನೇಕ ನದಿ ಕೆರೆಗಳು ಪ್ರಕೃತಿಯೊಂದಿಗೆ ಬೆರೆತು ನೋಡುಗರ ಮನದೊತ್ತಡವನ್ನು ಕ್ಷಣದಲ್ಲೆ ನಿವಾರಿಸಿ, ಆನಂದ, ಉಲ್ಲಾಸ ಹಾಗು ರೋಮಾಂಚನಗಳನ್ನುಂಟು ಮಾಡುವಂತಹ ಶಕ್ತಿಯನ್ನು ಪಡೆದಿವೆ. ಇಂತಹ ಅದ್ಭುತಗಳು ಸದಾ ಕಣ್ಣಲ್ಲೆ ನೆಲೆಸಿರುವಂತೆ ಮಾಡುತ್ತವೆ ಇಲ್ಲಿನ ಜಲಾಶಯಗಳು ಅಥವಾ ಆಣೆಕಟ್ಟುಗಳು. ಈ ಲೇಖನದ ಮೂಲಕ ಕೇರಳದ ಕೆಲವು ಜಲಾಶಯಗಳ ಪರಿಚಯ ಮಾಡಿ ಕೊಳ್ಳೊಣ. ಏನಂತಿರಿ?

ಕೇರಳ ರಾಜ್ಯವು ನೆರೆ ಹೊರೆಯ ರಾಜ್ಯಗಳಿಂದ ಸುಗಮವಾದ ರೈಲು, ರಸ್ತೆ ಹಾಗು ವಿಮಾನಗಳ ಸಂಪರ್ಕವನ್ನು ಹೊಂದಿದ್ದು, ಭಾರತದ ಯಾವುದೇ ಭಾಗದಿಂದ ಸುಲಭವಾಗಿ ಈ ರಾಜ್ಯಕ್ಕೆ ತಲುಪಬಹುದಾಗಿದೆ.

ಪಳಾಸ್ಸಿ ಆಣೆಕಟ್ಟು:

ಪಳಾಸ್ಸಿ ಆಣೆಕಟ್ಟು:

ಕೇರಳದ ಕನ್ನೂರ್ ಜಿಲ್ಲೆಯಲ್ಲಿ ಈ ಜಲಾಶಯದ ನಿರ್ಮಾಣವಾಗಿದೆ. ಕುಯಿಲೂರ್ ಬಳಿಯಿರುವ ವಳಾಪಟ್ಟನಂ ನದಿಗೆ ಇದನ್ನು ನಿರ್ಮಿಸಲಾಗಿದೆ. ಕಣ್ಣೂರ್ ಜಿಲ್ಲೆಯ ಬಹುತೇಕ ಕೃಷಿ ಭೂಮಿಗಳಿಗೆ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಆಣೆಕಟ್ಟು ಲೋಕಾರ್ಪಣೆಯಾಗಿದ್ದು 1979 ರ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಂದ. ಕೇರಳದ ಪ್ರಖ್ಯಾತ ಅರಸ ಪಳಾಸ್ಸಿ ರಾಜಾ ಜನ್ಮಿಸಿದ ಸ್ಥಳದಿಂದ ಈ ಜಲಾಶಯವು ಕೇವಲ 11 ಕಿ.ಮೀ ದೂರವಿರುವುದರಿಂದ ಇದಕ್ಕೆ ಪಳಾಸ್ಸಿ ಎಂಬ ಹೆಸರನ್ನಿಡಲಾಗಿದೆ. ಈ ಜಲಾಶಯದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವು ಆಕರ್ಷಕವಾಗಿದೆ.

ಬಾಣಾಸುರ ಸಾಗರ ಆಣೆಕಟ್ಟು:

ಬಾಣಾಸುರ ಸಾಗರ ಆಣೆಕಟ್ಟು:

ಬಾಣಾಸುರ ಸಾಗರ ಜಲಾಶಯವು ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ ಸುಮಾರು 21 ಕಿ.ಮೀ ದೂರದಲ್ಲಿ ನೆಲೆಸಿದೆ. ಕಬಿನಿ ನದಿಯ ಉಪನದಿಯಾದ ಕರಮನತೊಡು ನದಿಗೆ ಇದನ್ನು ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನೆಲೆಸಿರುವ ಈ ಜಲಾಶಯವು ಹಲವು ದ್ವೀಪಗಳನ್ನು ನಿರ್ಮಿಸಿದ್ದು ಸುತ್ತಲಿನ ಬಾಣಾಸುರ ಪರ್ವತ ಶ್ರೇಣಿಗಳ ಮನಮೋಹಕವಾದ ನೋಟವನ್ನು ಒದಗಿಸುತ್ತದೆ. ಕಕ್ಕಾಯಂ ಜಲ ವಿದ್ಯುತ್ ಯೋಜನೆ, ಕೃಷಿ ಬಳಕೆ ಹಾಗು ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸುವ ಉದ್ದೇಶದಿಂದ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಆಣೆಕಟ್ಟಿನಿಂದ ಸೆರೆಹಿಡಿಯಲಾದ ಬೆಳಗಿನ ಸುಂದರ ದೃಶ್ಯ.

ಕರಪುಳಾ ಆಣೆಕಟ್ಟು:

ಕರಪುಳಾ ಆಣೆಕಟ್ಟು:

ಭಾರತದಲ್ಲಿ ಕಂಡುಬರುವ ದೊಡ್ಡದಾದ ಅರ್ಥ್ ಡ್ಯಾಮ್ ಗಳ ಪೈಕಿ ಒಂದಾಗಿರುವ ಈ ಆಣೆಕಟ್ಟು ಇರುವುದು ವಯನಾಡಿನಲ್ಲಿ. ವಯನಾಡಿನ ಸುಂದರ ಹಸಿರುಮಯ ಪ್ರದೇಶದಲ್ಲಿ ಹರಿದಿರುವ ಕರಪುಳಾ ನದಿ (ಕಬಿನಿಯ ಉಪನದಿ)ಗೆ ಇದನ್ನು ನಿರ್ಮಿಸಲಾಗಿದೆ. ಕಲ್ಪೆಟ್ಟಾದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಈ ಸುಂದರ ತಾಣವನ್ನು ಮೈಸೂರು, ಊಟಿ ಹಾಗು ಕೊಳಿಕೋಡ್ ಗಳಿಂದ ಸುಲಭವಾಗಿ ತಲುಪಬಹುದು.

ಪೊತುಂಡಿ ಆಣೆಕಟ್ಟು:

ಪೊತುಂಡಿ ಆಣೆಕಟ್ಟು:

ಕೇರಳದ ಪಾಲಾಕಾಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕಾಂಕ್ರೀಟ್ ಅನ್ನು ಬಳಸದೆ ಕಟ್ಟಲಾಗಿರುವ ಏಷಿಯಾದ ಎರಡನೆಯ ಆಣೆಕಟ್ಟು ಇದಾಗಿದೆ. ಈ ಜಲಾಶಯವು ನೆಮ್ಮರದಿಂದ ಕೇವಲ 8 ಕಿ.ಮೀ ದೂರವಿದ್ದು ಪಾಲಕ್ಕಾಡ್ ಪಟ್ಟಣದಿಂದ ಸುಮಾರು 42 ಕಿ.ಮೀ ದೂರದಲ್ಲಿದೆ.

ವಳಾನಿ ಡ್ಯಾಮ್:

ವಳಾನಿ ಡ್ಯಾಮ್:

ಆವೆ ಮಣ್ಣಿನಿಂದ (ಕ್ಲೇ) ನಿರ್ಮಿಸಲಾದ ಈ ಆಣೆಕಟ್ಟನ್ನು ತ್ರಿಶ್ಶೂರ್ ಜಿಲ್ಲೆಯ ವಡಕ್ಕಂಚೆರ್‍ರಿಯಲ್ಲಿರುವ ವಡಕ್ಕಂಚೆರ್‍ರಿ ನದಿಗೆ ನಿರ್ಮಿಸಲಾಗಿದೆ. ಕುಡಿಯುವ ನೀರು ಹಾಗು ಕೃಷಿ ಬಳಕೆಗಾಗಿ ಇದನ್ನು ಉಪಯೋಗಿಸಲಾಗುತ್ತದೆ. ನಾಲ್ಕು ಎಕರೆ ವಿಶಾಲವಾಗಿರುವ ಸುಂದರ ಉದ್ಯಾನವನ್ನು ಈ ಆಣೆಕಟ್ಟು ಒಳಗೊಂಡಿದೆ.

ಪೀಚಿ ಆಣೆಕಟ್ಟು:

ಪೀಚಿ ಆಣೆಕಟ್ಟು:

ಕೇರಳದ ತ್ರಿಶ್ಶೂರ್ ನಗರದಿಂದ ಸುಮಾರು 22 ಕಿ.ಮೀಗಳ ದೂರದಲ್ಲಿ ಈ ಪೀಚಿ ಆಣೆಕಟ್ಟನ್ನು ಕಾಣಬಹುದು. ಮನಾಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಆಣೆಕಟ್ಟನ್ನು ತ್ರಿಶ್ಶೂರ್ ನಗರದ ನೀರಿನ ಬವಣೆ ನೀಗಿಸಲು ಹಾಗು ಕೃಷಿ ಬಳಕೆಗಾಗಿ ನಿರ್ಮಿಸಲಾಗಿದೆ.

ಪೀಚಿ ಆಣೆಕಟ್ಟು:

ಪೀಚಿ ಆಣೆಕಟ್ಟು:

3,200 ಎಕರೆಯಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಈ ಆಣೆಕಟ್ಟು ಸುಂದರವಾದ ಸಸ್ಯ ತೋಟವನ್ನೂ ಸಹ ಒಳಗೊಂಡಿದೆ.

ಚಿಮ್ಮಿನಿ ಆಣೆಕಟ್ಟು:

ಚಿಮ್ಮಿನಿ ಆಣೆಕಟ್ಟು:

ತ್ರಿಶ್ಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನ ಇಚ್ಚಿಪಾರಾದಲ್ಲಿ ಈ ಆಣೆಕಟ್ಟನ್ನು ಕಾಣಬಹುದು. 1996 ರಲ್ಲಿ ಪೂರ್ಣಗೊಂಡ ಈ ಆಣೆಕಟ್ಟನ್ನು ಕರುವಾಣ್ಣೂರ್ ನದಿಯ ಉಪನದಿಯಾದ ಚಿಮ್ಮಿನಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಶೋಲಯಾರ್ ಆಣೆಕಟ್ಟು:

ಶೋಲಯಾರ್ ಆಣೆಕಟ್ಟು:

ತ್ರಿಶ್ಶೂರ್ ಜಿಲ್ಲೆಯ ಚಾಲಕ್ಕುಡಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಈ ಕಾಂಕ್ರೀಟ್ ಆಣೆಕಟ್ಟನ್ನು. ಈ ಆಣೆಕಟ್ಟಿಗೆ ಎರಡು ಜಲಾಶಯಗಳಿದ್ದು ಅವುಗಳನ್ನು ಮೇಲ್ಭಾಗದ ಶೋಲಯಾರ್ ಹಾಗು ಕೆಳಭಾಗದ ಶೋಲಯಾರ್ ಗಳಾಗಿ ವಿಂಗಡಿಸಲಾಗಿದೆ.

ಸಿರುವಾನಿ ಆಣೆಕಟ್ಟು:

ಸಿರುವಾನಿ ಆಣೆಕಟ್ಟು:

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಈ ಆಣೆಕಟ್ಟು ಪಾಲಕ್ಕಾಡ್ ಪಟ್ಟಣದಿಂದ ಸುಮಾರು 46 ಕಿ.ಮೀ ಗಳ ಅಂತರದಲ್ಲಿದೆ. ಈ ಆಣೆಕಟ್ಟು ತಾಣವು ರಕ್ಷಿತ ಅರಣ್ಯಗಳಿಂದ ಸುತ್ತುವರೆಯಲ್ಪಟ್ಟಿದ್ದು ವಿಹಂಗಮವಾದ ನಿಸರ್ಗ ಸೌಂದರ್ಯದಿಂದ ದಾರ್ಶನಿಗರ ಮನಗೆಲ್ಲುತ್ತದೆ. ಪ್ರಕೃತಿ ಸಹಜ ಸುಂದರ ಜಲಪಾತವನ್ನು ಹೊಂದಿರುವ ಮುತಿಕುಲಂ ಪರ್ವತ ಶ್ರೇಣಿಯನ್ನು ಈ ಆಣೆಕಟ್ಟಿನ ಪೂರ್ವ ಭಾಗದಲ್ಲಿ ಕಾಣಬಹುದಾಗಿದೆ. ಭೌತಿಕವಾಗಿ ಈ ಆಣೆಕಟ್ಟು ಕೇರಳದಲ್ಲಿದ್ದರೂ ತಮಿಳುನಾಡಿನ ಕೋಯಮತ್ತೂರಿಗೆ ನೀರನ್ನು ಒದಗಿಸುವ ದೃಷ್ಟಿಯಿಂದ ತಮಿಳುನಾಡು ಸರ್ಕಾರದಿಂದ ಭರಿಸಲಾದ ಹಣದ ಮೂಲಕ ಕೇರಳದ ಲೋಕೋಪಯೋಗಿ ಇಲಾಖೆಯು ಇದನ್ನು ನಿರ್ಮಿಸಿದೆ.

ವಾಳಯಾರ್ ಆಣೆಕಟ್ಟು:

ವಾಳಯಾರ್ ಆಣೆಕಟ್ಟು:

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ವಾಳಯಾರ್ ನದಿಯು ಕಲ್ಪತಿಪುಳಾ ನದಿಯ ಉಪನದಿಯಾಗಿದೆ. ಈ ಪ್ರದೇಶದ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಆಣೆಕಟ್ಟು 1964 ರಲ್ಲಿ ಲೋಕಾರ್ಪಣೆಗೊಂಡಿತು.

ವಾಳಯಾರ್ ಆಣೆಕಟ್ಟು:

ವಾಳಯಾರ್ ಆಣೆಕಟ್ಟು:

ವಿಶಾಲವಾದ ಜಲಾಶಯವನ್ನು ಹೊಂದಿರುವ ಈ ಆಣೆಕಟ್ಟಿನ ನೀರನ್ನು ಸ್ಥಳೀಯ ಜನರು ಕೃಷಿ ಉದ್ದೇಶಕ್ಕಾಗಿ ಬಳಸುತ್ತಾರೆ. ಸುತ್ತಲು ಗಿಡಮರಗಳಿಂದ ಕಂಗೊಳಿಸುವ ಈ ತಾಣವು ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವವನ್ನು ನೀಡಬಲ್ಲದು.

ಮಲಂಪುಳಾ ಆಣೆಕಟ್ಟು:

ಮಲಂಪುಳಾ ಆಣೆಕಟ್ಟು:

ಕೇರಳದಲ್ಲೆ ಅತಿ ದೊಡ್ಡದಾದ ಆಣೆಕಟ್ಟು ಇದಾಗಿದೆ. ಪಾಲಕ್ಕಾಡ್ ಬಳಿಯ ಸುಂದರ ಪಶ್ಚಿಮ ಘಟ್ಟಗಳ ಮನೋಹರ ನೋಟವನ್ನು ಹಿನ್ನಿಲೆಯಾಗಿ ಹೊಂದಿರುವ ಈ ಆಣೆಕಟ್ಟು ಮೇಸನ್ರಿ ಹಾಗು ಅರ್ಥ್ ಡ್ಯಾಮ್ ಗಳೆರಡನ್ನೂ ಹೊಂದಿದೆ.

ಮಲಂಪುಳಾ ಆಣೆಕಟ್ಟು:

ಮಲಂಪುಳಾ ಆಣೆಕಟ್ಟು:

ಮೇಸನ್ರಿ ಡ್ಯಾಮ್ ನ ಉದ್ದ 1,849 ಮೀ. ಗಳಾಗಿದ್ದು, ಅರ್ಥ್ ಡ್ಯಾಮ್ ನ ಉದ್ದ 220 ಮೀ. ಆಗಿದೆ. ಮಲಂಪುಳಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಆಣೆಕಟ್ಟಿನ ಎತ್ತರ 6,066 ಅಡಿಗಳಾಗಿದ್ದು, ಪ್ರವಾಸಿ ದೃಷ್ಟಿಯಿಂದ ಸುಂದರವಾದ ಉದ್ಯಾನವನ್ನೂ ಸಹ ಇಲ್ಲಿ ಕಾಣಬಹುದು.

ಇಡುಕ್ಕಿ ಆರ್ಚ್ ಡ್ಯಾಮ್:

ಇಡುಕ್ಕಿ ಆರ್ಚ್ ಡ್ಯಾಮ್:

ಇಡುಕ್ಕಿ ಜಿಲ್ಲೆಯ ಚಿರುತೋಣಿ ಎಂಬಲ್ಲಿ ನೆಲೆಸಿದೆ ಏಷಿಯಾದ ಮೂರನೆಯ ಅತಿ ಎತ್ತರದ ಈ ಆರ್ಚ್ ಡ್ಯಾಮ್. ಕುರುವಾನ್ಮಲ ಹಾಗು ಕುರಾತಿಮಲ ಎಂಬ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಲಾಗಿರುವ ಈ ಡ್ಯಾಮ್ ಸುಮಾರು 554 ಅಡಿಗಳಷ್ಟು ಎತ್ತರವಾಗಿದೆ.

ಇಡಮಲಯಾರ್ ಆಣೆಕಟ್ಟು:

ಇಡಮಲಯಾರ್ ಆಣೆಕಟ್ಟು:

ಕೇರಳದ ಭೂತತ್ತಾನ್‍ಕಟ್ ಬಳಿಯಿರುವ ಎನ್ನಕಲ್ ನಲ್ಲಿ ನಿರ್ಮಿಸಲಾಗಿದೆ ಈ ಸುಂದರ ಇಡಮಲಯಾರ್ ಗ್ರ್ಯಾವಿಟಿ ಡ್ಯಾಮನ್ನು. ಪೆರಿಯಾರ್ ನದಿಯ ಉಪನದಿಯಾಗಿರುವ ಇಡಮಲಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಆಣೆಕಟ್ಟಿನ ಒಟ್ಟಾರೆ ಉದ್ದ 373 ಮೀ. ಗಳಾಗಿದೆ. ದಟ್ಟ ಹಸಿರಿನ ಕಾನನದಲ್ಲಿ ನೆಲೆಸಿರುವ ಈ ಆಣೆಕಟ್ಟಿನ ನಿರ್ಮಾಣ 1985 ರಲ್ಲಿ ಪೂರ್ಣಗೊಂಡಿದೆ.

ತೆನ್ಮಲ ಆಣೆಕಟ್ಟು:

ತೆನ್ಮಲ ಆಣೆಕಟ್ಟು:

ಕೇರಳದ ಎರಡನೆಯ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ ಈ ಆಣೆಕಟ್ಟು. ರಾಜ್ಯದಲ್ಲೆ ಅತಿ ಉದ್ದವಾದ ಜಲಾಶಯವನ್ನು ಈ ಆಣೆಕಟ್ಟು ಹೊಂದಿದೆ. ಇದರ ನೀರನ್ನು ಜಲ ವಿದ್ಯುತ್ ಉತ್ಪಾದನೆಗೂ ಬಳಸಲಾಗುತ್ತದೆ. ಪ್ರಸ್ತುತ ತೆನ್ಮಲದ ಪ್ರಮುಖ ಆಕರ್ಷಣೆಯಾಗಿರುವ ಈ ತಾಣವು ಪರಿಸರ ಪ್ರವಾಸೋದ್ಯಮದಡಿಯಲ್ಲಿ ಬರುತ್ತದೆ.

ನೆಯ್ಯಾರ್ ಡ್ಯಾಮ್:

ನೆಯ್ಯಾರ್ ಡ್ಯಾಮ್:

ತಿರುವನಂತಪುರಂ ಜಿಲ್ಲೆಯಲ್ಲಿ ಹರಿದಿರುವ ನೆಯ್ಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಇದೊಂದು ಗ್ರ್ಯಾವಿಟಿ ಡ್ಯಾಮ್ ಆಗಿದೆ. ತಿರುವನಂತಪುರಂ ಪಟ್ಟಣದಿಂದ ಕೇವಲ 30 ಕಿ.ಮೀ ದೂರದಲ್ಲಿ, ಪಶ್ಚಿಮ ಘಟ್ಟಗಳ ಹಾಸಿನಲ್ಲಿ ನೆಲೆಸಿರುವ ಈ ತಾಣವು 1958 ರಿಂದಲೇ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X