Search
  • Follow NativePlanet
Share
» »ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

By Vijay

ಅಧ್ಯಾತ್ಮಿಕ ಉನ್ನತಿ ಹಾಗೂ ಕಟ್ಟು ನಿಟ್ಟಾದ ಪುರಾತನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಅತಿ ಹತ್ತಿರದಿಂದ ನೋಡಬಯಸುವವರಿಗೆ ಈ ದೇವಾಲಯವು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಇದು ಮೂಲತಃ ರಾಜರಿಗೆ ರಾಜನಾದ ಸರ್ವಶಕ್ತನಾದ, ವಿಷ್ಣು ಹಾಗೂ ಶಿವನ ಗುಣಲಕ್ಷಣಗಳನ್ನು ಪ್ರತಿನಿಧಿಸುವ ರಾಜರಾಜೇಶ್ವರನಿಗೆ ಮುಡಿಪಾದ ದೇವಸ್ಥಾನವಾಗಿದೆ.

ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು!

ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಶ್ರೀಮಂತವಾದ ಇತಿಹಾಸವಿದ್ದು ಇದು ನೆಲೆಸಿರುವ ಸ್ಥಳವು ಅತ್ಯಂತ ಧನಾತ್ಮಕ ಪ್ರಭಾವತೆಯಿಂದ ಕೂಡಿರುವ ಸ್ಥಳವಾಗಿದೆ ಎಂದು ಹೇಳಲಾಗುತ್ತದೆ. ಆ ಒಂದು ಕಾರಣದಿಂದಾಗಿಯೆ ಇಲ್ಲಿ ದೇವಪ್ರಶ್ನೆಯನ್ನು ಹಾಕಲಾಗುತ್ತದೆ. ಅಲ್ಲದೆ ಸತಿ ದೇವಿಯ ತಲೆ ಬಿದ್ದ ಶಕ್ತಿಪೀಠ ಇದಾಗಿದೆ ಎಂದೂ ಸಹ ಕೆಲವ ವಿದ್ವಾಂಸರ ಪ್ರಕಾರ ನಂಬಲಾಗಿದೆ.

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ಸಾಂದರ್ಭಿಕ, ಚಿತ್ರಕೃಪೆ: Sripat Srikhanda

ಕೆಲವು ದೇವಾಲಯಗಳಲ್ಲಿ ಏನಾದರೂ ಸಮಸ್ಯೆಗಳು ಎದುರಾಯಿತೆಂದರೆ ಆ ಸಮಸ್ಯೆಯ ಮೂಲವನ್ನು ಹುಡುಕಲು ವಿಧಿವತ್ತಾದ ಆಚರಣೆಯೊಂದಿದೆ. ಅದನ್ನೆ ದೇವಪ್ರಶ್ನೆ ಎಂದು ಕರೆಯಲಾಗುತ್ತದೆ. ಇದನ್ನು ನಿರ್ದಿಷ್ಟ ವ್ಯಕ್ತಿಗಳು ವಿಧಿವತ್ತಾಗಿ ಆಚರಿಸುತ್ತಾರೆ ಹಾಗೂ ಸಮಸ್ಯೆಯ ಮೂಲವನ್ನು ತಿಳಿಯುತ್ತಾರೆ. ಇದು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಒಂದು ಪದ್ಧತಿಯಾಗಿದೆ.

ಈ ದೇವಾಲಯದಲ್ಲಿರುವ ಮಂಟಪವೊಂದು ಅಂತಹ ದೇವಪ್ರಶ್ನೆ ವಿಧಾನವನ್ನು ಆಚರಿಸಲು ಅತ್ಯಂತ ಪ್ರಶಸ್ತವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ದೇವಾಲಯದ ವಿಧಿ ವಿಧಾನಗಳೂ ಸಹ ಒಂದು ರೀತಿಯಲ್ಲಿ ವಿಚಿತ್ರವಾಗಿವೆ. ದಿನದ ಸಮಯದಲ್ಲಿ ಮುಖ್ಯ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಅದೆ ಸಾಯಂಕಾಲದ ನಂತರ ಶಿವನು ಪಾರ್ವತಿ ಸಮೇತನಾಗಿ ಪ್ರಸನ್ನ ಭಾವದಲ್ಲಿದ್ದಾಗ ಮಹಿಳೆಯರು ಪ್ರವೇಶಿಸಬಹುದು.

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ಚಿತ್ರಕೃಪೆ: Santhoshveliyannoor

ಮತ್ತೊಂದು ವಿಶೇಷವೆಂದರೆ ಇಲ್ಲಿ ಶಿವನನ್ನು ಹಾಗೆಯೆ ನೇರವಾಗಿ ನೋಡಲು ಸಾಧ್ಯವಿಲ್ಲ. ಶಿವನ ದರ್ಶನವನ್ನು ಕ್ರಮಬದ್ಧವಾಗಿಯೆ ಮಾಡಬೇಕು. ವಿಶಾಲವಾದ ದೇವಾಲಯದ ಆವರಣದಲ್ಲಿ ಇತರೆ ಕೆಲವು ಪ್ರಮುಖ ಸನ್ನಿಧಿಗಳಿದ್ದು ಎಲ್ಲವನ್ನು ಕ್ರಮಬದ್ಧವಾಗಿ ಒಂದಾದ ಮೇಲೊಂದರಂತೆ ಭೇಟಿ ನೀಡಿ ಕೊನೆಗೆ ರಾಜರಾಜೇಶ್ವರನ ರೂಪದಲ್ಲಿರುವ ಶಿವನನ್ನು ದರ್ಶಿಸಬೇಕು.

ದೇವಾಲಯ ಅತ್ಯಂತ ಪುರಾತನವಾಗಿದ್ದು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾರದ ಮಹಾಮುನಿಗಳು ಪರಶುರಾಮರಿಗೆ ಹೇಳಿದ ಕಥೆ ಹೀಗೆ ಸಾಗುತ್ತದೆ. ಹಿಂದೊಮ್ಮೆ ಮೂರು ಶಿವನ ಮಹಾಭಕ್ತರಾದ ರಾಜರಿಗೆ ಪಾರ್ವತಿ ದೇವಿಯು ವಿವಿಧ ಕಾಲಮಾನದಲ್ಲಿ ಶಿವಲಿಂಗಗಳನ್ನು ನೀಡಿದ್ದಳು. ಹೀಗೆ ಶಿವಲಿಂಗವನ್ನು ಕೊಡುವುದಕ್ಕಿಂತ ಮುಂಚೆ ಯಾವ ಸ್ಥಳದಲ್ಲಿ ಸಾವು ಸಂಭವಿಸಿಲ್ಲವೊ, ಮೃತ ದೇಹ ಬಿದ್ದಿಲ್ಲವೊ ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಅಬೇಕೆಂದು ಶರತ್ತು ಹಾಕಿದ್ದಳು.

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ಚಿತ್ರಕೃಪೆ: Vaikoovery

ತ್ರೇತಾ ಯುಗದಲ್ಲಿ ಶಿವ ಭಕ್ತ ಹಾಗೂ ರಾಜನಾಗಿದ್ದ ಮಾಂಡಾತನಿಗೆ ಮೊದಲ ಬಾರಿ ಪಾರ್ವತಿಯಿಂದ ಶಿವಲಿಂಗ ಸಿಕ್ಕಿ ಅದನ್ನು ಪ್ರತಿಷ್ಠಾಪಿಸಲು ಸ್ಥಳವನ್ನು ಅತಿ ಕಷ್ಟಪಟ್ಟು ಹುಡುಕಿ ಪ್ರಸ್ತುತ ದೇವಾಲಯದಲ್ಲಿರುವ ಶಿವಲಿಂಗದ ಜಾಗದಲ್ಲಿ ಪ್ರತಿಷ್ಠಾಪಿಸಿದ. ಹೀಗೆ ಕಾಲ ಕಳೆಯುತ್ತ ಆ ರಾಜನು ಮೃತಪಟ್ಟಾಗ ಆ ಶಿವಲಿಂಗವು ಆ ಸ್ಥಳದಿಂದ ಕೆಳಹೋಗಿ ಅದೃಶ್ಯವಾಯಿತು.

ಮುಂದೆ ದ್ವಾಪರಯುಗದಲ್ಲಿ ಮುಚುಕುಂದಂ ಎಂಬ ರಾಜನಿಗೆ ಪಾರ್ವತಿಯಿಂದ ಇನ್ನೊಂದು ಶಿವಲಿಂಗ ಪ್ರಾಪ್ತವಾಗಿ ಆತನೂ ಸಹ ಸಾವು ಸಂಭವಿಸಿರದ ಅಂತಹ ಒಂದು ಸ್ಥಳವನ್ನು ಶೋಧಿಸುತ್ತ ಇದೆ ಸ್ಥಳವನ್ನು ಹುಡುಕಿ ಮೊದಲು ಶಿವಲಿಂಗ ಅದೃಶ್ಯವಾಗಿದ್ದ ಸ್ಥಳದಲ್ಲಿಯೆ ಅದನ್ನು ಪ್ರತಿಷ್ಠಾಪಿಸಿದ. ಹೀಗೆ ಆ ಸ್ಥಳದ ಪ್ರಭಾವವು ದುಪ್ಪಟ್ಟಾಯಿತು. ಮುಂದೆ ಮತ್ತೆ ಶಿವಲಿಂಗ ಅದೃಶ್ಯವಾಯಿತು.

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ಚಿತ್ರಕೃಪೆ: Ajith U

ಅದೆ ದ್ವಾಪರಯುಗದಲ್ಲಿ ಶತಸೋಮನೆಂಬ ರಾಜನಿಗೆ ಮೂರನೇಯ ಶಿವಲಿಂಗ ದೊರೆತು ಆತನೂ ಸಹ ಇದೆ ಸ್ಥಳದಲ್ಲಿ ಅದನ್ನು ಪ್ರತಿಷ್ಠಾಪಿಸಲು ನೋಡಿದಾಗ ಶಿವಲಿಂಗವು ಕೆಳ ಹೋಗುತ್ತಿರುವುದನ್ನು ಕಂಡು ಚಿಂತೆಗಿಡಾಗಿ ಅಗಸ್ತ್ಯ ಮಹಾಮುನಿಗಳನ್ನು ನೆನೆದ. ತಕ್ಷಣ ಪ್ರತ್ಯಕ್ಷರಾದ ಅಗಸ್ತ್ಯರು ಸ್ಥ್ತಿಯನ್ನು ಗ್ರಹಿಸಿ ತುಪ್ಪದ ದೀಪ ಹಚ್ಚಿ ಹನ್ನೆರಡು ಬಾರಿ ಆ ಶಿವಲಿಂಗಕ್ಕೆ ಶರಣಾಗತಿಯ ನಮಸ್ಕಾರವನ್ನು ಮಾಡಿದರು. ಇನ್ನೇನು ಹದಿಮೂರನೇಯ ಬಾರಿ ನಮಸ್ಕಾರ ಮಾಡುವಷ್ಟರಲ್ಲಿ ಆ ಶಿವಲಿಂಗವು ಕೆಳಗೆ ಕುಸಿಯುವುದು ನಿಂತು ಅಲ್ಲಿಯೆ ಭದ್ರವಾಯಿತು. ಹೀಗಾಗಿ ಹನ್ನೆರಡುವರೆ ನಮಸ್ಕಾರ ವಿಶೇಷವೆನೆಸಿತು.

ಇಲ್ಲಿ ಎಲ್ಲ ಶಿವನ ದೇವಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ ಬಿಲ್ವಪತ್ರೆಗಳನ್ನು ಶಿವಲಿಂಗಕ್ಕೆ ಅರ್ಪಿಸುವುದಿಲ್ಲ ಬದಲಾಗಿ ತುಳಸಿ ದಳಗಳನ್ನು ಅರ್ಪಿಸಲಾಗುತ್ತದೆ. ಸೋಮವಾರ ಶಿವನ ವಾರವಾಗಿದ್ದರೆ ಇಲ್ಲಿ ಬುಧವಾರ ಶಿವನಿಗೆ ಮುಡಿಪಾದ ವಿಶೇಷ ವಾರವಾಗಿದೆ. ರುದ್ರಾಭಿಷೇಕ ಎಲ್ಲೆಡೆ ಸಾಮಾನ್ಯವಾಗಿದ್ದರೆ ಇಲ್ಲಿ ರುದ್ರಾಭಿಷೇಕವಿಲ್ಲ. ಹೀಗೆ ಕೆಲವು ಅನನ್ಯವಾದ ಆಚರಣೆಗಳು ಇಲ್ಲಿ ಕಂಡುಬರುತ್ತವೆ.

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ದೇವಾಲಯ ಕಲ್ಯಾಣಿ, ಚಿತ್ರಕೃಪೆ: Pradeep717

ಇನ್ನೊಂದು ವಿಶೇಷವೆಂದರೆ ಈ ದೇವಾಲಯವು ಕೇರಳಿಗರ ಮಧ್ಯೆ ಅಷ್ಟೊಂದು ಹೆಸರುವಾಸಿಯಾಗಿಲ್ಲವಾದರೂ ಪಕ್ಕದ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಅದರಲ್ಲೂ ವಿಶೇಷವಾಗಿ ಪ್ರಭಾವಿ ರಾಜಕೀಯ ಮುಖಂಡರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪರಶುರಾಮರು ಸ್ಥಾಪಿಸಿದ ಪ್ರಭಾವಿ ಶಿವಾಲಯಗಳು!

ಅಷ್ಟಕ್ಕೂ ಈ ದೇವಾಲಯವಿರುವುದು ಎಲ್ಲಿ ಎಂದರೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಲಿಪರಂಬಾ ತಾಲೂಕು ಕೇಂದ್ರದಲ್ಲಿ. ತಲಿಪರಂಬವು ಕೇರಳದ ಕಣ್ಣೂರಿನಿಂದ 22 ಕಿ.ಮೀ ಹಾಗೂ ಕಾಸರಗೋಡಿನಿಂದ 77 ಕಿ.ಮೀ ಗಲಷ್ಟು ದೂರವಿದ್ದು ತೆರಳಲು ಎರಡೂ ನಗರಗಳಿಂದ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಇನ್ನೂ ಕಣ್ಣೂರ ಅಥವಾ ಕಾಸರಗೋಡನ್ನು ಕರ್ನಾಟಕದ ಮಂಗಳೂರು, ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more